Tag: Loco

  • ಪ್ರಯಾಣಿಕನ ಜೀವ ಉಳಿಸಲು ರೈಲನ್ನು ಅರ್ಧ ಕಿ.ಮೀ ರಿವರ್ಸ್ ಓಡಿಸಿದ ಚಾಲಕ

    ಪ್ರಯಾಣಿಕನ ಜೀವ ಉಳಿಸಲು ರೈಲನ್ನು ಅರ್ಧ ಕಿ.ಮೀ ರಿವರ್ಸ್ ಓಡಿಸಿದ ಚಾಲಕ

    – ಕೇಂದ್ರ ಸಚಿವರಿಂದ ಮೆಚ್ಚುಗೆ
    – ವಿಡಿಯೋ ನೋಡಿ

    ಮುಂಬೈ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕನ ಜೀವ ಉಳಿಸಲು ಲೋಕೋ ಪೈಲಟ್ ಸುಮಾರು ಅರ್ಧ ಕಿಲೋಮೀಟರ್ ದೂರ ರೈಲನ್ನು ಹಿಂದಕ್ಕೆ ಓಡಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಪ್ರಯಾಣಿಕ ಮಹಾರಾಷ್ಟ್ರದ ಭೂಸಾವಲ್‍ನ ಪಚೋರಾ ಮತ್ತು ಮಹೇಜಿ ನಿಲ್ದಾಣಗಳ ನಡುವಿನ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಆದರೆ ಪ್ರಯಾಣಿಕ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಸಿಬ್ಬಂದಿ ಲೋಕೋ ಪೈಲಟ್‍ಗೆ ಈ ಬಗ್ಗೆ ಮಾಹಿತಿ ತಿಳಿಸಿದರು.

    ಮಾಹಿತಿ ತಿಳಿದ ಲೋಕೋ ಪೈಲಟ್ ಪ್ರಯಾಣಿಕನನ್ನು ಪತ್ತೆ ಮಾಡಲು ಸುಮಾರು 500 ಮೀಟರ್‌ಗಿಂತ ಹೆಚ್ಚು ದೂರ ರೈಲನ್ನು ಹಿಂದಕ್ಕೆ ಓಡಿಸಿದ್ದಾನೆ. ಸ್ವಲ್ಪ ದೂರದಲ್ಲಿ ಪ್ರಯಾಣಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ಹೇಳಿದರು.

    ಲೋಕೋ ಪೈಲಟ್‍ನ ಮಾನವೀಯತೆಗೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಲೋಕೋ ಪೈಲಟ್ ಸಮಯ ಪ್ರಜ್ಞೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    “ಇಂದು ಪಚೋರಾ-ಮಹೇಜಿ ರೈಲ್ವೆ ನಿಲ್ದಾಣಗಳ ನಡುವೆ ರೈಲಿನಿಂದ ಬಿದ್ದು ಪ್ರಯಾಣಿಕ ಗಾಯಗೊಂಡಿದ್ದನು. ಆತನಿಗಾಗಿ ಲೋಕೋ ಪೈಲಟ್ ಸುಮಾರು 500 ಕಿಲೋಮೀಟರ್ ಹಿಂದಕ್ಕೆ ರೈಲು ಚಲಾಯಿಸಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅಲ್ಲದೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ನೌಕರರು ತಮ್ಮ ಕರ್ತವ್ಯ ನಿಭಾಯಿಸುವುದಕ್ಕೆ ಒಂದು ವಿಶಿಷ್ಟ ಉದಾಹರಣೆ” ಎಂದು ಟ್ವೀಟ್ ಮಾಡಿದ್ದಾರೆ.