Tag: lockup death

  • ತಮಿಳುನಾಡಿನಲ್ಲಿ ಲಾಕಪ್ ಡೆತ್ – ಪೊಲೀಸರ ಮೇಲಿಲ್ಲ ಎಫ್‍ಐಆರ್

    ತಮಿಳುನಾಡಿನಲ್ಲಿ ಲಾಕಪ್ ಡೆತ್ – ಪೊಲೀಸರ ಮೇಲಿಲ್ಲ ಎಫ್‍ಐಆರ್

    – ಠಾಣೆಯೊಳಗೆ ಅಪ್ಪ-ಮಗನನ್ನು ಸಾಯೊವರೆಗೂ ಹಿಂಸಿಸಿದ್ರು

    ಚೆನ್ನೈ: ತಮಿಳುನಾಡಿನಲ್ಲಿ ಠಾಣೆಯೊಳಗೆ ಅಪ್ಪ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಅವರನ್ನು ಹಿಂಸಿಸಿ ಸಾಯುವಂತೆ ಮಾಡಿದ ಪೊಲೀಸರ ವಿರುದ್ಧ ಇನ್ನೂ ಎಫ್‍ಐಆರ್ ದಾಖಲಾಗದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬಹಳ ಆಕ್ರೋಶ ವ್ಯಕ್ತವಾಗಿದೆ.

    ಕೇವಲ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಜಯರಾಜ್ (59) ಮತ್ತು ಅವರ ಪುತ್ರ ಜೆ ಬೆನಿಕ್ಸ್ (31) ಅವರನ್ನು ಠಾಣೆಗೆ ಕರೆದುಕೊಂಡು ಬಂದ ತಮಿಳುನಾಡಿನ ಸಾಥಕುಲಂ ಪೊಲೀಸರು, ಅವರನ್ನು ಲಾಕ್‍ಪ್‍ಗೆ ಹಾಕಿ ಹಲ್ಲೆ ಮಾಡಿದ್ದರಿಂದಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಜೂನ್ 22ರಂದು ಮೊಬೈಲ್ ಅಂಗಡಿಯನ್ನು ನೀಡಿರುವ ಅವಧಿಗೂ ಹೆಚ್ಚು ಕಾಲ ತೆರೆದಿದ್ದಾರೆ ಎಂದು, ಜಯರಾಜ್ ಮತ್ತು ಜೆ ಬೆನಿಕ್ಸ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ವೇಳೆ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಮ್ಯಾಜಿಸ್ಟ್ರೇಟ್ ಬಿ ಸರವಣ ಅವರನ್ನು ವಿಚಾರಣೆ ಮಾಡುವಂತೆ ಅದೇಶ ಮಾಡಿದ್ದರು. ಈ ವೇಳೆ ಅವರನ್ನು ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಅಪ್ಪ-ಮಗನ ಮೇಲೆ ಹಲ್ಲೆ ಮಾಡಿದ್ದರು.

    ಪೊಲೀಸರ ಏಟನ್ನು ತಡೆಯಲಾಗದ ಬೆನಿಕ್ಸ್ ಅಲ್ಲೇ ಕುಸಿದು ಬಿದ್ದಿದ್ದ, ಆತನನ್ನು ಜೂನ್ 22ರ ಸಂಜೆ ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಂದೇ ರಾತ್ರಿ ಆತ ಮೃತಪಟ್ಟಿದ್ದ. ಇದಾದ ನಂತರ ಅವರ ತಂದೆ ಜಯರಾಜ್ ಕೂಡ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಜೂನ್ 23ರ ಬೆಳಗ್ಗೆ ಅದೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಅವರು ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    ಈ ವಿಚಾರ ಹೊರಗೆ ಬರುತ್ತಿದ್ದಂತೆ ದೇಶದಲ್ಲೆಡೆ ಪೊಲೀಸರ ಕ್ರೂರ ಕೆಲಸದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆಗ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಪೊಲೀಸ್ ಇಲಾಖೆ ಅವರೇ ಬೇಕೆಂದೆ ಪೊಲೀಸ್ ಠಾಣೆಯಲ್ಲಿ ಬಿದ್ದು ಗಾಯಮಾಡಿಕೊಂಡರು. ಇದರಲ್ಲಿ ನಮ್ಮದು ಏನೂ ತಪ್ಪಿಲ್ಲ ಎಂದು ಹೇಳಿತ್ತು. ಜೊತೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಆದರೆ ಅವರ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು ಎಂದು ಜನರ ಆಗ್ರಹಿಸಿದ್ದರು.

    ಈಗ ಬೆನಿಕ್ಸ್ ಮತ್ತು ಜಯರಾಜ್ ಅವರ ಮರಣೋತ್ತರ ವರದಿ ಬಂದಿದ್ದು, ಅವರನ್ನು ಹಿಂಸಿಸಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಆದರೆ ಇನ್ನೂ ಪೊಲೀಸ್ ಅಧಿಕಾರಿಗಳ ಮೇಲೆ ಎಫ್‍ಐಆರ್ ದಾಖಲಾಗದೆ ಇರುವುದು ವಿಪರ್ಯಾಸ. ಇದರೆಲ್ಲದ ನಡುವೆ ಮೃತ ಕುಟುಂಬ ನಮಗೆ ನ್ಯಾಯ ಸಿಗುವವರೆಗೂ ನಾವು ಮೃತದೇಹಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ಹೇಳಿದೆ. ನಮಗೆ ನ್ಯಾಯ ಕೊಡಿಸುವುದಾಗಿ ನ್ಯಾಯಾಧೀಶರು ಮಾತು ಕೊಟ್ಟರೇ ಮೃತದೇಹವನ್ನು ಪಡೆಯುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

    ಡಿಎಂಕೆ ಪಕ್ಷದ ಸಂಸದ ಕನಿಮೋಜಿ ಅವರು ಈ ವಿಚಾರವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (ಎನ್‍.ಎಚ್‍.ಆರ್.ಸಿ) ಪತ್ರ ಬರೆದಿದ್ದು ಇದರಲ್ಲಿ, ಪೊಲೀಸ್ ಅಧಿಕಾರಿಗಳು ಬೆನ್ನಿಕ್ಸ್ ಅವರ ಗುದದ್ವಾರಕ್ಕೆ ಲಾಠಿ ಹಾಕಿದ್ದಾರೆ. ಈ ವೇಳೆ ರಕ್ತಸ್ರಾವ ಉಂಟಾಗಿ ಅವರು ಸಾವನ್ನಪ್ಪಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳು ಜಯರಾಜ್ ಅವರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಪೊಲೀಸರು ಶೂಳಿಂದ ಜಯರಾಜ್ ಅವರ ಎದೆಗೆ ಮೇಲೆ ಅನೇಕ ಬಾರಿ ಒದ್ದಿರುವ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

  • ಲಾಕಪ್ ಡೆತ್: ಕೇಸ್ ಯಶಸ್ವಿಯಾಗಿ ಮುಚ್ಚಿಹಾಕಿದ್ರಾ ಶಿವಮೊಗ್ಗ ಪೊಲೀಸರು?

    ಲಾಕಪ್ ಡೆತ್: ಕೇಸ್ ಯಶಸ್ವಿಯಾಗಿ ಮುಚ್ಚಿಹಾಕಿದ್ರಾ ಶಿವಮೊಗ್ಗ ಪೊಲೀಸರು?

    ಶಿವಮೊಗ್ಗ: ಪೊಲೀಸ್ ವಶದಲ್ಲಿ ವ್ಯಕ್ತಿಯ ಸಾವಿನ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಕರಣದಲ್ಲಿ ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ಅವರೇ ಮುಖ್ಯಪಾತ್ರವಹಿಸಿರುವುದು ಆತಂಕಕಾರಿಯಾಗಿದೆ.

    ಓಸಿ-ಮಟ್ಕಾ ದಂಧೆ ಮಾಡುತ್ತಿದ್ದಾರೆ ಎಂದು ಹೊಳೆಹೊನ್ನೂರು ಠಾಣೆ ಪೊಲೀಸರು ನಿನ್ನೆ ಆಗರದಹಳ್ಳಿಯ ಬಾಲೇಶ್ ಎಂಬವರನ್ನು ಕರೆದುಕೊಂಡು ಬಂದಿದ್ದರು. ಹೊಳೆಹೊನ್ನೂರಿನಿಂದ ಶಿವಮೊಗ್ಗ ಡಿಆರ್ ಮೈದಾನದಲ್ಲಿರುವ ಪೊಲೀಸ್ ಸಭಾ ಭವನಕ್ಕೆ ಕರೆದುಕೊಂಡು ಬಂದಿದ್ದರು. ಇಲ್ಲಿರುವ ಸಭಾ ಭವನದಲ್ಲಿ ಎಸ್‍ಪಿ ಡಾ.ಅಶ್ವಿನಿ ಅವರ ಸಮ್ಮುಖದಲ್ಲೇ ಬಾಲೇಶ್ ಹಾಗೂ ಇನ್ನಿತರರನ್ನು ಒಟ್ಟಿಗೆ ಸೇರಿಸಿ ಹಿಗ್ಗಾಮುಗ್ಗ ಥಳಿಸಿದ್ದರು. ಈ ಸಂದರ್ಭದಲ್ಲಿ ಬಾಲೇಶ್ ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ತಕ್ಷಣವೇ ಪೊಲೀಸ್ ಜೀಪಿನಲ್ಲೇ ಬಾಲೇಶ್ ಶವನ್ನು ಮೆಗಾನ್ ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಮೃತನ ಕುಟುಂಬಸ್ಥರಿಗೆ ಕರೆ ಮಾಡಿ ಆಸ್ಪತ್ರೆಗೆ ಬರಲು ಸೂಚಿಸಿದ್ದರು. ರಾತ್ರಿ ಪೊಲೀಸರ ದೌರ್ಜನ್ಯದಿಂದಲೇ ಬಾಲೇಶ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

    ತಡ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಅವರ ಸಂಬಂಧಿಗಳ ಮನವೊಲಿಸಿ, ಇದು ಹೃದಯಾಘಾತದಿಂದ ಆದ ಸಾವು ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಬಾಲೇಶ್ ಕುಟುಂಬದವರಿಗೆ ಅಪಾರ ಪ್ರಮಾಣದ ಹಣ ನೀಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ಈ ಬಗ್ಗೆ ಮೊದಲು ಮಾಹಿತಿ ನೀಡಲು ನಿರಾಕರಿಸಿದ ಎಸ್‍ಪಿ ಅಶ್ವಿನಿ, ನಂತರ ಪೂರ್ವ ವಲಯ ಐಜಿ ಅವರಿಗೆ ದೂರು ಹೋದ ನಂತರ ಮಾಧ್ಯಮಗಳ ಮುಂದೆ ಬಂದರು. ಆದರೆ, ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ಚುಟುಕಾಗಿ ಸುದ್ದಿಗೋಷ್ಠಿ ಮುಗಿಸಿದ್ದಾರೆ.

    ಉತ್ತರ ಸಿಗದ ಪ್ರಶ್ನೆಗಳು
    1) ಬಾಲೇಶ್ ಶವವನ್ನು ಪೊಲೀಸ್ ಜೀಪಿನಲ್ಲೇ ಮೆಗಾನ್ ಆಸ್ಪತ್ರೆಗೆ ತಂದಿದ್ದು ಹೇಗೆ?
    2) ಕೈಮರ ಗ್ರಾಮದ ಬಳಿ ಹೃದಯಾಘಾತದಿಂದ ಕುಸಿದಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ, ಅಲ್ಲಿಂದ ಇಲ್ಲಿಗೆ ಪೊಲೀಸ್ ಜೀಪಿನಲ್ಲಿ ತಂದಿದ್ದು ಹೇಗೆ?
    3) ಬಾಲೇಶ್ ಅವರ ಜೊತೆಯಲ್ಲಿ ಕರೆತಂದಿದ್ದ ಇನ್ನೂ ಐವರು ಯಾರು? ಅವರು ಎಲ್ಲಿದ್ದಾರೆ?
    4) ಈ ವಿಷಯವಾಗಿ ವಿಚಾರಣೆ ನಡೆಸುವುದಾಗಿ ಎಸ್ಪಿ ಹೇಳಿದ್ದಾರೆ. ಎಸ್ಪಿ ಸಮ್ಮುಖದಲ್ಲೇ ನಡೆದಿರುವ ಘಟನೆಗೆ ವಿಚಾರಣೆಯನ್ನು ಯಾವ ಹಂತದ ಅಧಿಕಾರಿ ನಡೆಸುತ್ತಾರೆ?

  • ಪೊಲೀಸರ ವಶದಲ್ಲಿದ್ದ ವ್ಯಕ್ತಿ ಲಾಕಪ್ ಡೆತ್

    ಪೊಲೀಸರ ವಶದಲ್ಲಿದ್ದ ವ್ಯಕ್ತಿ ಲಾಕಪ್ ಡೆತ್

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

    ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪಿನ ಬಾಲೇಶ್ ಪೊಲೀಸರ ವಶದಲ್ಲಿ ಮೃತಪಟ್ಟ ವ್ಯಕ್ತಿ. ಪೊಲೀಸರು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಇದರಿಂದಾಗಿಯೇ ಬಾಲೇಶ್ ಮೃತಪಟ್ಟಿದ್ದಾನೆ ಎಂದು ಅವರ ಸಂಬಂಧಿಗಳು ದೂರಿದ್ದಾರೆ. ಆದರೆ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಲು ಜಿಲ್ಲಾರಕ್ಷಣಾಧಿಕಾರಿ ಡಾ.ಅಶ್ವಿನಿ ನಿರಾಕರಿಸಿದ್ದಾರೆ.

    ಗುರುವಾರ ಮಧ್ಯಾಹ್ನ ಹೊಳೆಹೊನ್ನೂರು ಠಾಣೆ ಪೊಲೀಸರು ಶಿವಮೊಗ್ಗ ಎಸ್‍ಪಿ ಕಚೇರಿಗೆ ಬಾಲೇಶ್‍ನನ್ನು ಕರೆತಂದಿದ್ದರು. ರಾತ್ರಿ ಸುಮಾರು 9.30ಕ್ಕೆ ಮನೆಯವರಿಗೆ ಕರೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ಬರಲು ಹೇಳಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಬಂದಾಗ ಬಾಲೇಶ್ ಮೃತಪಟ್ಟಿರುವುದನ್ನು ನೋಡಿ ಕುಟುಂಬಸ್ಥರಿಗೆ ಶಾಕ್ ಆಗಿದೆ. ಬಾಲೇಶ್ ಸಾವಿಗೆ ಪೊಲೀಸರೇ ಕಾರಣ ಅಂತ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೂಜಾಡುತ್ತಾರೆ ಎಂದು ಬಾಲೇಶ್ ಅವರನ್ನು ಹೊಳೆಹೊನ್ನೂರು ಪೊಲೀಸರು ಕರೆದೊಯ್ದಿದ್ದರು. ಮೊದಲು ಹೊಳೆಹೊನ್ನೂರು ಠಾಣೆಗೆ ನಂತರ ಶಿವಮೊಗ್ಗ ಡಿಆರ್ ಗ್ರೌಂಡ್‍ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಅಶ್ವಿನಿ ಅವರ ಸಮ್ಮುಖದಲ್ಲೇ ಬಾಲೇಶ್ ಸೇರಿದಂತೆ ಇನ್ನಿತರರಿಗೆ ಲಾಠಿ ಏಟು ನೀಡಲಾಗಿದೆ. ಈ ವೇಳೆ ಬಾಲೇಶ್ ಕುಸಿದು ಬಿದ್ದಿದ್ದನು ಎಂದು ಬಾಲೇಶ್ ಆಪ್ತರು ಮಾಹಿತಿ ನೀಡಿದ್ದಾರೆ.

    ಪೊಲೀಸರು ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ ಪೊಲೀಸರು ಅಲ್ಲಿ ಯಾವುದೇ ಸಹಿ ಮಾಡದೆ ಹೋಗಿದ್ದಾರೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಪ್ರಕರಣವನ್ನು ತಿರುಚಲು ಯತ್ನಿಸಿದ್ದಾರೆ. ಬಾಲೇಶ್ ಕುಟುಂದವರು ಬರುತ್ತಿದ್ದಂತೆ ಆಸ್ಪತ್ರೆಯಿಂದ ಜಾಗ ಖಾಲಿ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಪೊಲೀಸರ ನಡೆ ಸಂಶಯಾಸ್ಪದವಾಗಿದೆ. ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಮೃತನ ಸಂಬಂಧಿ ಅನಿಲ್ ಆರೋಪಿಸಿದ್ದಾರೆ.

  • ಮಂಡ್ಯ ಠಾಣೆಯಲ್ಲೇ ಆರೋಪಿ ನೇಣಿಗೆ ಶರಣು- ಲಾಕಪ್ ಡೆತ್ ಶಂಕೆ!

    ಮಂಡ್ಯ ಠಾಣೆಯಲ್ಲೇ ಆರೋಪಿ ನೇಣಿಗೆ ಶರಣು- ಲಾಕಪ್ ಡೆತ್ ಶಂಕೆ!

    ಮಂಡ್ಯ: ಬೈಕ್ ಕಳ್ಳತನ ಆರೋಪದ ಮೇಲೆ ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತನ ಕುಟುಂಬದವರು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.

    ಮೂರ್ತಿ (40) ಪೊಲೀಸ್ ಠಾಣೆಯಲ್ಲೆ ಮೃತಪಟ್ಟ ಆರೋಪಿ. ಇವನು ಮೂಲತಃ ಜಿಲ್ಲೆಯ ಮದ್ದೂರು ತಾಲೂಕಿನ ಬೆಳ್ತೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಸೋಮವಾರ ಬೈಕ್ ಕಳ್ಳತನ ಆರೋಪದ ಮೇಲೆ ಜಿಲ್ಲೆಯ ಪಶ್ಚಿಮ ಠಾಣೆಯ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದರು. ಆದರೆ ಇಂದು ಬೆಳಗ್ಗೆ ಠಾಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೂರ್ತಿಯ ಮೃತದೇಹ ಪತ್ತೆಯಾಗಿದೆ.

    ಘಟನೆ ಸಂಬಂಧ ಪಶ್ಚಿಮ ಠಾಣೆಯ ಪೊಲೀಸರು ಮಾತನಾಡಿ, ಬೈಕ್ ಕಳ್ಳತನ ಆರೋಪದಡಿ ಸೋಮವಾರ ಮೂರ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಆರೋಪಿ ಮೂರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಮೂರ್ತಿ ಮೇಲೆ ಪೊಲೀಸರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಜ್ಯೋತಿರವರು ಪೊಲೀಸ್ ಠಾಣೆಗೆ ಬಂದು ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಮೃತದೇಹವನ್ನು ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡಯ್ಯಲಾಯಿತು.

    ಲಾಕಪ್ ಡೆತ್ ಎಂದು ತಿಳಿಯುತ್ತಿದ್ದಂತೆ ಶವಾಗಾರದ ಬಳಿ ಜಮಾಯಿಸಿದ ಕುಟುಂಬಸ್ಥರು ಹಾಗೂ ನೂರಾರು ಮಂದಿ ದಲಿತ ಸಂಘಟನೆಗಳ ಮುಖಂಡರು ಮಂಡ್ಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಕುಟುಂಬಕ್ಕೆ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಮಂಡ್ಯ ಎಸ್ಪಿ ರಾಧಿಕಾರವರು, ಪಶ್ಚಿಮ ಪೊಲೀಸ್ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೇ ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ನೀಡುವ ಕುರಿತು ಹೇಳಿಕೆ ನೀಡಿದ್ದಾರೆ.

    https://www.youtube.com/watch?v=wChQSTtpjt4

  • ಆಕ್ರೋಶದ ಬೆಂಕಿಗೆ ಲಕ್ಷ್ಮೇಶ್ವರ ಠಾಣೆ ಧಗಧಗ – 25 ದುಷ್ಕರ್ಮಿಗಳ ಬಂಧನ

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಲಾಕಪ್ ಡೆತ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಠಾಣೆಗೆ ಬೆಂಕಿಹಚ್ಚಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ 25 ಮಂದಿ ದುಷ್ಕರ್ಮಿಗಳನ್ನ ಗದಗ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

    ಈ ಗಲಾಟೆಯಲ್ಲಿ ಅಕ್ರಮ ಮರಳು ದಂಧೆಕೊರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 25 ಜನ ದುಷ್ಕರ್ಮಿಗಳನ್ನು ವಿಚಾರಣೆಗಾಗಿ ಕರೆತರಲಾಗಿದ್ದು, ವೀಡಿಯೋ ದೃಶ್ಯಗಳನ್ನ ನೋಡಿ ಇನ್ನುಳಿದ ಆರೋಪಿಗಳ ಬಂಧಿಸುವ ಕಾರ್ಯ ಇಂದು ನಡೆಯಲಿದೆ. ಈ ಮಧ್ಯೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ನಿಷೇಧಾಜ್ಞೆ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಿಗಿ ಬಂದುಬಸ್ತ್ ಕಲ್ಪಿಸಲಾಗಿದೆ. ಎಸ್‍ಪಿ, ಡಿಎಸ್‍ಪಿ, ಸಿಪಿಐ, ಪಿಎಸ್‍ಐ, ಕೆ.ಎಸ್.ಆರ್.ಪಿ ಹಾಗೂ ಡಿಆರ್ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ.

    ಪಟ್ಟಣ್ಣದಲ್ಲಿ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಪ್ರಾರಂಭವಾಗಿವೆ. ಸ್ಥಳಕ್ಕೆ ಎಡಿಜಿಪಿ ರಾಘವೇಂದ್ರ ಔರಾಧಕರ್ ಭೇಟಿ ನೀಡಿ ಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

    ಏನಿದು ಪ್ರಕರಣ?: ಅಕ್ರಮ ಮರಳುದಂಧೆ ಆರೋಪದ ಮೇಲೆ ಶಿವಾನಂದ ಗಾಣಿಗೇರ ಪೊಲೀಸರ ವಶದಲ್ಲಿದ್ದರು. ತೀವ್ರ ವಿಚಾರಣೆಯಲ್ಲಿದ್ದ ಶಿವಾನಂದ ಠಾಣೆಯಲ್ಲೇ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಶಿವಾನಂದ ಸಂಬಧಿಕರು ಪೊಲಿಸರು ಲಾಕಪ್ ಡೆತ್ ಮಾಡಿರುವುದಾಗಿ ಆರೋಪಿಸಿ ಭಾನುವಾರದಂದು ಠಾಣೆಗೆ ಬೆಂಕಿ ಹಚ್ಚಿದ್ದರು.