Tag: locker

  • ಚಿನ್ನದ ಅಂಗಡಿಗೆ ಕನ್ನ – 250 ಗ್ರಾಂ ಚಿನ್ನ, 1.8 ಲಕ್ಷ ರೂ. ಹಣದೊಂದಿಗೆ ಪರಾರಿ

    ಚಿನ್ನದ ಅಂಗಡಿಗೆ ಕನ್ನ – 250 ಗ್ರಾಂ ಚಿನ್ನ, 1.8 ಲಕ್ಷ ರೂ. ಹಣದೊಂದಿಗೆ ಪರಾರಿ

    ಬೆಂಗಳೂರು: ಚಿನ್ನದ ಅಂಗಡಿಗೆ (Gold) ಕನ್ನ ಹಾಕಿದ ಕಳ್ಳರು ಲಾಕರ್‌ನಲ್ಲಿದ್ದ 250 ಗ್ರಾಂ ಚಿನ್ನ, 1.8 ಲಕ್ಷ ರೂ. ನಗದು (Cash) ದೋಚಿ ಪರಾರಿಯಾದ ಘಟನೆ ನೆಟ್ಟಕಲ್ಲಪ್ಪ ಸರ್ಕಲ್‌ ಬಳಿ ನಡೆದಿದೆ.

    ಬಸವನಗುಡಿ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಬೆನಕ ಗೋಲ್ಡ್‌ನ (Benaka Gold) ಮೂರು ಕಬ್ಬಿಣದ ಗೇಟ್ ಬೀಗ ಮುರಿದು ಕೃತ್ಯ ಮಾಡಲಾಗಿದೆ.  ಇದನ್ನೂ ಓದಿ: ಬೆಂಗಳೂರಿಗೆ ಫೆಬ್ರವರಿಯಲ್ಲೇ ಸಮಸ್ಯೆ – ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸಮಯ ನಿಗದಿ

    ಬುಧವಾರ ಎಂದಿನಂತೆ ವ್ಯವಹಾರ ಮಾಡಿದ್ದ ಕಂಪನಿಯ ಸಿಬ್ಬಂದಿ ಗ್ರಾಹಕರಿಂದ ಚಿನ್ನಭರಣ ಖರೀದಿ ಮಾಡಿತ್ತು. ಮಧ್ಯರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು ಚಿನ್ನ, ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಿ ಸಿಸಿ ಕ್ಯಾಮೆರಾದ ಡಿವಿಆರ್‌ ಅನ್ನು ಪುಡಿ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್‌ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR

    ಕಳೆದ ಬುಧವಾರ ರಾತ್ರಿ ರಾಮಮೂರ್ತಿ ನಗರದಲ್ಲಿದ್ದ ಬೇನಕ ಗೋಲ್ಡ್‌ಗೆ ಕನ್ನ ಹಾಕಿದ್ದರು. ಈಗ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 10 ಅಡಿ ಕಾಂಪೌಂಡ್ ಹಾರಿ ಕದ್ದ ಲಾಕರ್ ಬಿಚ್ಚಲಾಗದೆ ಎಸೆದು ಹೋದ ಖದೀಮರು

    10 ಅಡಿ ಕಾಂಪೌಂಡ್ ಹಾರಿ ಕದ್ದ ಲಾಕರ್ ಬಿಚ್ಚಲಾಗದೆ ಎಸೆದು ಹೋದ ಖದೀಮರು

    ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಕಳ್ಳತನ ಮಾಡಲು ಹೋಗಿದ್ದ ಖದೀಮರ ಗ್ಯಾಂಗ್ 60 ಕೆ.ಜಿ ಲಾಕರ್ ನೊಂದಿಗೆ ಎಸ್ಕೇಪ್ ಆಗಿ ಕೈಚಳಕ ತೋರಿಸಲಾಗದೆ ಬಳಿಕ ಎಸೆದು ಹೋಗಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಜುಲೈ 17 ರಂದು ಖದೀಮರ ಗ್ಯಾಂಗ್ ತಡರಾತ್ರಿ ಅಮೆಜಾನ್ ಪಿಕ್ ಪಾಯಿಂಟ್ ಗೆ ಕಳ್ಳತನ ಮಾಡಲು ನುಗ್ಗಿದೆ. ಅಮೆಜಾನ್ ಪಿಕ್ ಪಾಯಿಂಟ್ ಗೋಡನ್ ನಲ್ಲಿದ್ದ ಲಾಕರ್ ಒಡೆದು ಕಳ್ಳತನಕ್ಕೆ ಯತ್ನಿಸಿದೆ. ಲಾಕರ್ ಒಡೆಯುವುದಕ್ಕೆ ಆಗದೇ ಬರೋಬ್ಬರಿ 60ಕೆ.ಜಿ ಲಾಕರ್ ನೊಂದಿಗೆ ಪರಾರಿಯಾಗಿದೆ. ಘಟನೆ ಸಂಬಂಧ ಸಂಪಿಗೆ ಹಳ್ಳಿ ಪೊಲೀಸರು ಡಾಗ್ ಸ್ಕ್ವಾಡ್ ಜೊತೆಗೆ ತಪಾಸಣೆಗೆ ಹೋಗಿದ್ದಾರೆ. ಡಾಗ್ ಸ್ಕ್ವಾಡ್ ನಿಂದ ಕದ್ದ ಲಾಕರ್ ಅಮೆಜಾನ್ ಪಿಕ್ ಪಾಯಿಂಟ್ ನಿಂದ 500 ಮೀಟರ್ ದೂರದ ಪೊದೆಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ದಿನಾಂಕ ಬಹಿರಂಗಪಡಿಸಿದ ಸುದೀಪ್

    ಕಳ್ಳತನ ಮಾಡಿಕೊಂಡು ಹೋಗಿದ್ದ ಲಾಕರ್ ಬಿಚ್ಚಲಾಗದೆ ಬಿಸಾಡಿ ಹೋಗಿದ್ದಾರೆ. ಪೊಲೀಸರು ಲಾಕರ್ ತಗೆಸಿ ನೋಡಿದಾಗ ಲಾಕರ್ ನಲ್ಲಿದ್ದ 4 ಲಕ್ಷ 80 ಸಾವಿರ ನಗದು ದಾಖಲೆಗಳು ಪತ್ತೆ ಆಗಿದೆ. ಕಳ್ಳರು ಸಿಸಿಟಿವಿ, ಡಿವಿಆರ್ ಎಲ್ಲವನ್ನು ನಾಶ ಮಾಡಿ ಹೋಗಿದ್ದಾರೆ. ಸೆಕ್ಯೂರಿಟಿಗಳು ಇದ್ದರು ಕೂಡ ಇಂತಹ ಕೃತ್ಯ ನಡೆದಿರುವುದು ಪೊಲೀಸರಿಗೆ ಅನುಮಾನ ಹುಟ್ಟಿಸಿದೆ. ಘಟನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆ ಹಳ್ಳಿ ಪೊಲೀಸರು ಘಟನೆ ನಡೆದ ಸ್ಥಳದ ಡಿವಿಆರ್ ಸಿಸಿಟಿವಿ ಪಡೆದು ತನಿಖೆ ಆರಂಭಿಸಿದ್ದಾರೆ.

  • ಬೌರಿಂಗ್ ಕ್ಲಬ್ ಸದಸ್ಯತ್ವಕ್ಕೆ ಉದ್ಯಮಿ ಅವಿನಾಶ್ ಅಮರ್ ಲಾಲ್‍ ರಾಜೀನಾಮೆ

    ಬೌರಿಂಗ್ ಕ್ಲಬ್ ಸದಸ್ಯತ್ವಕ್ಕೆ ಉದ್ಯಮಿ ಅವಿನಾಶ್ ಅಮರ್ ಲಾಲ್‍ ರಾಜೀನಾಮೆ

    ಬೆಂಗಳೂರು: ನಗರದ ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣ ಕುರಿತು ತನಿಖೆ ಚುರುಕುಗೊಂಡ ಬೆನ್ನಲ್ಲೆ, ಕ್ಲಬ್ ಸದಸ್ಯತ್ವಕ್ಕೆ ಉದ್ಯಮಿ ಅವಿನಾಶ್ ಅಮರ್ ಲಾಲ್‍ ರಾಜೀನಾಮೆ ನೀಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಿಂಗ್ ಕ್ಲಬ್ ಆಡಳಿತ ಮಂಡಳಿ ಅವೀನಾಶ್‍ಗೆ ಶೋಕಾಸ್ ನೋಟಿಸ್ ನೀಡಿದ್ದು, ಇದಕ್ಕೆ ಸಭೆಯಲ್ಲಿ ಉತ್ತರ ನೀಡುವಂತೆ ತಾಕೀತು ಮಾಡಿತ್ತು. ಆದರೆ ಸಭೆಗೂ ಮುನ್ನವೇ ಮಂಗಳವಾರ ಮಧ್ಯಾಹ್ನ ಕ್ಲಬ್‍ಗೆ ಬಂದ ಅವಿನಾಶ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಮರಳಿದ್ದಾರೆ.

    ಅವೀನಾಶ್ ವರ್ತನೆಯಿಂದ ಆಡಳಿತ ಮಂಡಳಿಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಕ್ಲಬ್ ಮೂಲಗಳು ತಿಳಿಸಿವೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ 15 ದಿನಗಳ ಹಿಂದೆ ಅವಿನಾಶ್ ಅಮರ್ ಲಾಲ್‍ಗೆ ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಒಂದು ವೇಳೆ ಲಾಕರ್ ನಲ್ಲಿರುವ ವಸ್ತು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ನೋಟಿಸ್ ಕಳುಹಿಸಿದ್ದರು. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ನೋಟಿಸ್ ನಲ್ಲಿ ತಿಳಿಸಿತ್ತು. ಆದರೆ ಉದ್ಯಮಿ ನೋಟಿಸ್ ಬಗ್ಗೆ ತಲೆ ತಲೆಕೆಡಿಸಿಕೊಂಡಿಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಹೊಡೆದಿದೆ. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿತ್ತು.

    ರಾಜಸ್ಥಾನ ಮೂಲದ ಅವಿನಾಶ್ ಅಮರ್ ಲಾಲ್‍ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಬೆಂಗಳೂರಲ್ಲಿ 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಉದ್ಯಮಿ ಅವಿನಾಶ್ ಅಮರ್ ಲಾಲ್, ನಗರದ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದರು. ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಅವರು ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. 2 ಲಾಕರ್ ಓಪನ್ ಮಾಡಿದ್ದು, ಅದರಲ್ಲಿ 2 ಬ್ಯಾಗ್ ಪತ್ತೆಯಾಗಿತ್ತು. ಈ 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100 ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

  • ಮನೆಯ ಮುಖ್ಯದ್ವಾರದಲ್ಲೇ ಸೇಫ್ಟಿ ಸೆನ್ಸರ್ ಲಾಕರ್ – ಒಳಗಡೆ ಸಿಕ್ತು ಬರೋಬ್ಬರಿ 20 ಲಕ್ಷ ರೂ.

    ಮನೆಯ ಮುಖ್ಯದ್ವಾರದಲ್ಲೇ ಸೇಫ್ಟಿ ಸೆನ್ಸರ್ ಲಾಕರ್ – ಒಳಗಡೆ ಸಿಕ್ತು ಬರೋಬ್ಬರಿ 20 ಲಕ್ಷ ರೂ.

    ಬೆಂಗಳೂರು: ಸಾಮಾನ್ಯವಾಗಿ ಮನೆಯ ಬೆಲೆ ಬಾಳುವ ವಸ್ತುಗಳನ್ನು ಕಾಪಾಡಿಕೊಳ್ಳಲು ಮನೆಯ ಮಲಗುವ ಕೊಠಡಿ, ಅಲ್ಮೆರಾಗಳಲ್ಲಿ ಸೇಫ್ಟಿ ಲಾಕರ್ ಮಾಡಿಸಲಾಗುತ್ತದೆ. ತೀರಾ ಇತ್ತೀಚೆಗೆ ಉದ್ಯಮಿಯೊಬ್ಬರು ತನ್ನ ಮನೆಯ ಬಾತ್‍ರೂಮ್‍ನಲ್ಲಿ ಸೇಫ್ಟಿ ಲಾಕರ್ ಮಾಡಿಸಿ ಸುದ್ದಿಯಾಗಿದ್ದರು. ಆದರೆ ಇಲ್ಲೊಬ್ಬ ಮನೆಯ ಬಾಗಿಲಿನ ವಾಸ್ಕಲ್‍ನಲ್ಲೇ ಸೀಕ್ರೆಟ್ ಲಾಕರ್ ಮಾಡಿಸಿದ್ದಾನೆ.

    ಹೌದು, ಐಟಿ ಅಧಿಕಾರಿಗಳು ಉದ್ಯಮಿ ಚಳ್ಳಕೆರೆಯ ವೀರೇಂದ್ರ ಮನೆ ಮೇಲೆ ದಾಳಿ ಮಾಡಿದಾಗ ಬಾತ್ ರೂಮ್‍ನಲ್ಲಿ ಸೀಕ್ರೆಟ್ ಲಾಕರ್ ಅಳವಡಿಸಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ನಗರದ ಯಲಹಂಕದ ರೇಣುಕಾ ಪ್ರಸಾದ್ ಎಂಬಾತ ತನ್ನ ಮನೆಯ ಬಾಗಿಲಿನಲ್ಲೇ ಸೀಕ್ರೆಟ್ ಲಾಕರ್ ಮಾಡಿಸಿಕೊಂಡಿದ್ದಾನೆ.

    ರೇಣುಕಾ ಪ್ರಸಾದ್ ಮನೆಯ ಬಾಗಿಲನ್ನು ದೊಡ್ಡ ಮರದ ದಿಮ್ಮಿಯಿಂದ ಮಾಡಿಸಲಾಗಿದ್ದು, ಇದರಲ್ಲಿ ಲಾಕರ್ ಇದೆ ಎನ್ನುವುದು ಯಾರಿಗೂ ಕೂಡ ಗೊತ್ತಾಗುವುದಿಲ್ಲ. ವಿಶೇಷ ಎಂದರೆ ಈ ಸೀಕ್ರೆಟ್ ಲಾಕರ್ ಗೆ ಸೆನ್ಸರ್ ಸಹ ಮಾಡಿಸಲಾಗಿದ್ದು, ಲಾಕರ್ ಓಪನ್ ಆಗ ಬೇಕು ಎಂದರೆ ರೇಣುಕಾ ಪ್ರಸಾದ್‍ನ ಕಿರುಬೆರಳು ಸ್ಕಾನ್ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ ಲಾಕರ್ ಓಪನ್ ಮಾಡಲು ಸಾಧ್ಯವೇ ಇಲ್ಲ.

    ಸೀಕ್ರೆಟ್ ಲಾಕರ್ ಬಹಿರಂಗವಾಗಿದ್ದು ಹೇಗೆ?: ಜನವರಿ 11 ರಂದು ಯಲಹಂಕದ ಕೋಟ್ಯಾಧಿಪತಿ ಮಲ್ಲಿಕಾರ್ಜುನ್ ಎಂಬವರನ್ನು ಅಪಹರಣ ಮಾಡಿ 80 ಲಕ್ಷ ಹಣ ಪಡೆದು ಅವರನ್ನು ಬಿಡುಗಡೆ ಮಾಡಿದ್ದರು. ಆದರೆ ಹಣವನ್ನು ಪಡೆದ ಆರೋಪಿಗಳು ತಲಾ 20 ಲಕ್ಷದಂತೆ ಹಣ ಹಂಚಿಕೊಂಡು ಸುಮ್ಮನಾಗಿದ್ದಾರೆ.

    ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ಆರೋಪಿಗಳಿಗಾಗಿ ಬೆನ್ನತ್ತಿದ ಪೊಲೀಸರಿಗೆ ರೇಣುಕಾ ಪ್ರಸಾದ್, ಆರ್ಶಿಯಾ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಪ್ರಕರಣದ ಪೂರ್ಣ ಮಾಹಿತಿ ಪಡೆದ ಪೊಲೀಸರು ಅಪಹರಣ ಮಾಡಿ ಮಲ್ಲಿಕಾರ್ಜುನ್ ಅವರಿಂದ ಪಡೆದ ಹಣವನ್ನು ವಶ ಪಡಿಸಲು ಮುಂದಾಗುತ್ತಾರೆ.

    ಈ ವೇಳೆ ಅಪಹರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿ ರೇಣುಕಾ ಪ್ರಸಾದ್ ಮನೆಗೆ ಪೊಲೀಸರು ಹಣ ವಶಪಡಿಸಿಕೊಳ್ಳಲು ತೆರಳಿದ್ದಾರೆ. ಆದರೆ ಮನೆಯ ಎಲ್ಲಾ ಕಡೆ ಹುಡುಕಿದರೂ ಬಚ್ಚಿಟ್ಟಿದ ಹಣ ಪೊಲೀಸರಿಗೆ ಸಿಕ್ಕಿರಲಿಲ್ಲ. ತದನಂತರ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಸೀಕ್ರೆಟ್ ಲಾಕರ್ ನ ಸತ್ಯಾಂಶ ಬೆಳಕಿಗೆ ಬಂದಿದೆ. ಆರೋಪಿ ತನ್ನ ಕಿರುಬೆರಳಿನಿಂದ ಸೀಕ್ರೆಟ್ ಲಾಕರ್ ಓಪನ್ ಮಾಡಿದ್ದು, ಅದರಲ್ಲಿ 20 ಲಕ್ಷ ಹಣ, ಚಿನ್ನಾಭರಣ ಮತ್ತು ಒಂದು ಪರವಾನಗಿ ಹೊಂದಿರುವ ಗನ್ ಪತ್ತೆಯಾಗಿದೆ.

  • ಬ್ಯಾಂಕಿಗೆ 25 ಅಡಿ ಉದ್ದದ ಸುರಂಗ ಕೊರೆದು 30 ಲಾಕರ್‍ಗಳನ್ನ ಲೂಟಿ ಹೊಡೆದ ಖದೀಮರು!

    ಬ್ಯಾಂಕಿಗೆ 25 ಅಡಿ ಉದ್ದದ ಸುರಂಗ ಕೊರೆದು 30 ಲಾಕರ್‍ಗಳನ್ನ ಲೂಟಿ ಹೊಡೆದ ಖದೀಮರು!

     

    ಮುಂಬೈ: ಸಿನಿಮೀಯ ರೀತಿಯಲ್ಲಿ ಖದೀಮರು 25 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್‍ಗೆ ಕನ್ನ ಹಾಕಿ, 40 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನ ಲೂಟಿ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ನವೀ ಮುಂಬೈ ಬಳಿ ಜುಯಿನಗರ್‍ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಶನಿವಾರ ಮತ್ತು ಭಾನುವಾರದ ನಡುವೆ ಈ ದರೋಡೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈ ದರೋಡೆಗೆ ಕಳ್ಳರು ಸುಮಾರು 5 ತಿಂಗಳಿನಿಂದ ಪ್ಲ್ಯಾನ್ ಮಾಡಿರಬಹುದು ಎಂದು ಶಂಕಿಸಲಾಗಿದೆ.

    ಬ್ಯಾಂಕ್ ಸಿಬ್ಬಂದಿ ಸೋಮವಾರದಂದು ಕೆಲಸಕ್ಕೆ ಬಂದ ನಂತರ, ಲಾಕರ್ ರೂಮಿಗೆ ಹೋದಾಗ ಕೆಲವು ಲಾಕರ್‍ಗಳು ಓಪನ್ ಆಗಿದ್ದನ್ನು ನೋಡಿದ್ದಾರೆ. ಆಗ ದರೋಡೆ ನಡೆದಿರೋದು ಬೆಳಕಿಗೆ ಬಂದಿದೆ.

    ಆರೋಪಿಗಳು ಬ್ಯಾಂಕ್ ಪಕ್ಕದಲ್ಲೇ ಇದ್ದ ಅಂಗಡಿಯೊಂದನ್ನ ಮೇನಲ್ಲಿ ಬಾಡಿಗೆಗೆ ಪಡೆದಿದ್ದರು. ಅಂದಿನಿಂದ ಸುರಂಗ ಕೊರೆಯಲು ಶುರು ಮಾಡಿದ್ದರು. ಬ್ಯಾಂಕ್ ಆಫ್ ಬರೋಡಾದ ಲಾಕರ್ ರೂಮ್ ತಲುಪಲು ಸುಮಾರು 25 ಅಡಿ ಉದ್ದದ ಸುರಂಗ ಕೊರೆದಿದ್ದಾರೆ. ಅಲ್ಲಿದ್ದ 225 ಲಾಕರ್‍ಗಳಲ್ಲಿ 30 ಲಾಕರ್‍ಗಳನ್ನ ತೆರೆದಿದ್ದು, 40 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಸೋಮವಾರದಂದು ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಮರಳಿದಾಗ ದರೋಡೆ ನಡೆದಿರೋದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಸದ್ಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದೇವೆ. ದರೋಡೆಯಾಗಿರುವ ವಸ್ತುಗಳ ನಿರ್ದಿಷ್ಟ ಮೌಲ್ಯ ಇನ್ನಷ್ಟೇ ತಿಳಿದುಬರಬೇಕು. ಕಳುವಾಗಿರುವ ವಸ್ತುಗಳ ಬೆಲೆ ಸುಮಾರು 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಘಟನೆ ಕುರಿತು ಸನ್ಪಾದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ನವೀ ಮುಂಬೈ ಪೊಲೀಸ್ ಆಯುಕ್ತರಾದ ಹೇಮಂತ್ ನಗ್ರಾಲೆ ಹೇಳಿದ್ದಾರೆ.