Tag: lockdwon

  • 10 ದಿನ ಧಾರವಾಡ ಜಿಲ್ಲೆ ಲಾಕ್‍ಡೌನ್: ಜಗದೀಶ್ ಶೆಟ್ಟರ್

    10 ದಿನ ಧಾರವಾಡ ಜಿಲ್ಲೆ ಲಾಕ್‍ಡೌನ್: ಜಗದೀಶ್ ಶೆಟ್ಟರ್

    ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯನ್ನು 10 ದಿನಗಳ ಕಾಲ ಲಾಕ್‍ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.

    ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಬಗ್ಗೆ ಮಾತನಾಡಿದ ಸಚಿವರು, ಜುಲೈ 15ರ ಬೆಳಗ್ಗೆ 10 ಗಂಟೆಯಿಂದ ಜುಲೈ 24ರ ರಾತ್ರಿ 8ವರೆಗೆ ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡುವುದಾಗಿ ತಿಳಿಸಿದರು.

    11 ಜಿಲ್ಲೆಗಳ ಬಗ್ಗೆ ಚರ್ಚೆ ನಡೆದಿದೆ. ಧಾರವಾಡ ಜಿಲ್ಲೆಯ ಪರಿಸ್ಥಿತಿ ಏನಿದೆ ಎಂದು ಸಿಎಂ ಬಳಿ ಹೇಳಿದ್ದೇವೆ. ಪ್ರತಿ ದಿನ ಕೊರೊನಾ ಪ್ರಕರಣಗಳ ಪತ್ತೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಮರಣ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಬೇರೆ ಜಿಲ್ಲೆಯವರು ಕೂಡ ಇದ್ದಾರೆ. ಬೇರೆ ಜಿಲ್ಲೆಯಲ್ಲಿಯ ರೋಗಿಗಳು ಕಿಮ್ಸ್ ಗೆ ಬರುತ್ತಿದ್ದಾರೆ ಎಂದು ಸಿಎಂ ಮುಂದೆ ಹೇಳಿದ್ದೇವೆ ಎಂದು ಹೇಳಿದರು.

    ಜನರಲ್ಲಿ ನಿರ್ಲಕ್ಷ್ಯ ಭಾವನೆ ಬಂದಿದೆ. ಅದಕ್ಕೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇದ್ದೇವೆ ಎಂದ ಅವರು, ಮದುವೆಗೆ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಜನರು ಹಾಗೂ ಸಂಘ ಸಂಸ್ಥೆಗಳೂ ಸೇರಿ ಹಲವರು ಸ್ವಲ್ಪ ಮಟ್ಟಿಗೆ ಲಾಕ್ ಡೌನ್ ಮಾಡಿ ಎಂದು ಹೇಳಿದ್ದಾರೆ. ಅದಕ್ಕೆ ಸಿಎಂ ಮುಂದೆ ಈ ಪ್ರಸ್ತಾಪ ಇಟ್ಟಿದ್ದೇವೆ. ಅನುಮತಿ ಕೂಡ ಕೇಳಿದೆವು. ಈ ವೇಳೆ ಸಿಎಂ, ಜಿಲ್ಲಾಡಳಿತದ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರು. ಹೀಗಾಗಿ ಲಾಕ್‍ಡೌನ ನಿರ್ಧಾರ ಕೈಗೊಂಡಿರುವುದಾಗಿ ಶೆಟ್ಟರ್ ಹೇಳಿದರು.

    ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಲಿದ್ದಾರೆ ಎಂದ ಅವರು, ಜನರು ಸಹಕಾರ ಕೊಡಬೇಕು, ಅದಕ್ಕಾಗಿ ನಾವು ವಿನಂತಿ ಮಾಡ್ತೆನೆ. ಲಾಕ್‍ಡೌನ್ ಯಶಸ್ವಿಯಾಗಬೇಕು ಎಂದು ಹೇಳಿದರು.

  • ‘ಮನೆಯೇ’ ಮಂತ್ರಾಲಯದಿಂದ ಪ್ರಭಾವಿತರಾದ ಯುವ ಉದ್ಯಮಿ- ಬಡವರ ಸಂಕಷ್ಟಕ್ಕೆ ಸಹಾಯಹಸ್ತ

    ‘ಮನೆಯೇ’ ಮಂತ್ರಾಲಯದಿಂದ ಪ್ರಭಾವಿತರಾದ ಯುವ ಉದ್ಯಮಿ- ಬಡವರ ಸಂಕಷ್ಟಕ್ಕೆ ಸಹಾಯಹಸ್ತ

    – ಅಮ್ಮನ ನೆನಪಿಗಾಗಿ ಕ್ಯಾಂಟೀನ್ ಆರಂಭ

    ಯಾದಗಿರಿ: ಹಣ ಇದ್ದವರು ಬಡವರ ಕಷ್ಟಕ್ಕೆ ಮರುಗುವುದಿಲ್ಲ ಎಂಬ ಮಾತಿದೆ. ಆದರೆ ಈ ಮಾತನ್ನು ಯಾದಗಿರಿ ಜಿಲ್ಲೆಯ ಶಹಪುರದ ಯುವ ಉದ್ಯಮಿ ಗುರು ಮಣಿಮಠ ಹುಸಿಯಾಗಿಸಿದ್ದಾರೆ.

    ಶಹಪುರ ಪಟ್ಟಣದಲ್ಲಿ ಯಾರಿಗಾದರೂ ಕಷ್ಟ ಎಂದು ಬಂದಾಗ ಅವರಿಗೆ ಗುರು ಸಹಾಯ ಹಸ್ತ ಚಾಚುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಪಬ್ಲಿಕ್ ಟಿವಿಯ ಮನವಿಗೆ ಗುರು ಮಣಿಕಂಠ ಸ್ಪಂದಿಸಿದ ರೀತಿ ಇದೀಗ ಎಲ್ಲರೂ ಮೆಚ್ಚುವಂತದ್ದಾಗಿದೆ.

    ಸದ್ಯ ಯಾದಗಿರಿಯಲ್ಲಿ ಲಾಕ್ ಡೌನ್ ಸಂಪೂರ್ಣ ಸಡಿಲಿಕೆಯಾಗಿದೆ. ಹೀಗಿದ್ದರೂ ಕೆಲ ಕುಟುಂಬಗಳು ಇನ್ನೂ ಸಂಕಷ್ಟದಿಂದ ಹೊರ ಬಂದಿಲ್ಲ. ಒಂದು ಹೊತ್ತು ಊಟಕ್ಕೂ ದಿನಸಿಗಳಿಲ್ಲದೆ ಪರದಾಡುತ್ತಿವೆ. ಇಂತಹ ಕುಟುಂಬಗಳು ಪಬ್ಲಿಕ್ ಟಿವಿಗೆ ನೆರವು ಕೋರಿ ದೂರವಾಣಿಗಳ ಮೂಲಕ ಮನವಿ ಮಾಡಿದ್ದವು. ಈ ವಿಷಯ ತಿಳಿದ ಗುರು, ಸಂಕಷ್ಟದಲ್ಲಿರುವ ಕುಟುಂಬಗಳ ಬಳಿಗೆ ತೆರಳಿ ಆ ಕುಟುಂಬಗಳ ನೆರವಿಗೆ ನಿಂತಿದ್ದಾರೆ. 15 ದಿನಕ್ಕೆ ಆಗುವಷ್ಟು ದಿನಸಿಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮದಿಂದ ಪ್ರಭಾವಿತರಾಗಿರುವ ಗುರು ಮಣಿಕಂಠ, ಕೊರೊನಾ ವಿರುದ್ಧ ತಮ್ಮದೇ ರೀತಿಯ ಹೋರಾಟ ನಡೆಸಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ರೈತರು ಬೆಳೆದ ತರಕಾರಿ, ಹಣ್ಣು-ಹಂಪಲು ಖರೀದಿಸಿ ಅದನ್ನು ಉಚಿತವಾಗಿ ಬಡವರಿಗೆ ಹಂಚುತ್ತಿದ್ದಾರೆ.

    ಮುಂಜಾಗ್ರತಾ ಹಿತದೃಷ್ಟಿಯಿಂದ ಶಹಪುರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ಯಾನಿಟೈಸರ್ ಸ್ಪ್ರೇ ಟೆನಲ್ ಹಾಕಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರ ತಾಯಿಯ ನೆನಪಿಗಾಗಿ ಅಮ್ಮ ಕ್ಯಾಂಟೀನ್ ಆರಂಭಿಸಿದ ಇವರು, ಬರೀ ಹತ್ತು ರೂಪಾಯಿಯಲ್ಲಿ ಬಡವರ ಮತ್ತು ಶ್ರಮಿಕರ ಹೊಟ್ಟೆ ತುಂಬಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗಾಗಿ ಪಬ್ಲಿಕ್ ಟಿವಿ ಜೊತೆ ಸದಾ ಕೈ ಜೋಡಿಸುವ ಗುರು ಮಣಿಕಂಠರಿಗೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

  • ಲಾಕ್‍ಡೌನ್ ನಡುವೆಯೇ ಕಳ್ಳತನ- ಸರ ಕದ್ದು ಸಿಕ್ಕಾಕ್ಕೊಂಡ ಖದೀಮರು

    ಲಾಕ್‍ಡೌನ್ ನಡುವೆಯೇ ಕಳ್ಳತನ- ಸರ ಕದ್ದು ಸಿಕ್ಕಾಕ್ಕೊಂಡ ಖದೀಮರು

    ಮೈಸೂರು: ಇಡೀ ದೇಶವೇ ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಎದುರಿಸುತ್ತಿದೆ. ಈ ಮಧ್ಯೆ ಮೈಸೂರಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ.

    ಹೌದು. ಗುರುವಾರ ರಾತ್ರಿ ಖದೀಮರು ಸರಗಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಮೂವರು ಯುವಕರನ್ನು ಬಂಧಿಸಲಾಗಿದೆ.

    ಮಹದೇಶ್ವರ ಬಡಾವಣೆಯಲ್ಲಿ ಮಹಿಳೆಯಿಂದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ನಂತರ ರಿಂಗ್‍ರಸ್ತೆ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಬಳಿಯೂ ಸರಗಳ್ಳತನ ಮಾಡಿ ಪಲ್ಸರ್ ಬೈಕಿನಲ್ಲಿ ಕಳ್ಳರು ಪರಾರಿಯಾಗುತ್ತಿದ್ದರು.

    ಈ ವೇಳೆ ಮೈಸೂರಿನ ವಿಜಯನಗರ ಪೊಲೀಸರ ಕಾರ್ಯಚರಣೆ ನಡೆಸಿ ಮೂವರನ್ನು ಬೆನ್ನತ್ತಿ ಹಿಡಿದಿದ್ದಾರೆ. ಬಂಧಿತರಿಂದ ಒಂದು ಬೈಕ್, ಚಾಕು, ಖಾರದಪುಡಿ ಹಾಗೂ ಕಳ್ಳತನ ಮಾಡಿದ್ದ ಮೂರು ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.