Tag: Lockdown Rules

  • ಕಾಲೇಜು, ಸಿನಿಮಾ ಹಾಲ್ ಓಪನ್- ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ

    ಕಾಲೇಜು, ಸಿನಿಮಾ ಹಾಲ್ ಓಪನ್- ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ

    – ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದಕ್ಕೂ ಅನುಮತಿ

    ಬೆಂಗಳೂರು: ಕೊರೊನಾ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾರದಿಂದ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಕಾಲೇಜು ಹಾಗೂ ಸಿನಿಮಾ ಹಾಲ್‍ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ ಕಾವೇರಿ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಲಾಕ್‍ಡೌನ್ ಸಡಿಲಿಕೆ ಕುರಿತು ಚರ್ಚೆ ನಡೆಸಿದ್ದು, ಬಳಿಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಲಾಕ್‍ಡೌನ್ ಸಡಿಲಿಕೆ ಮಾಡಿ ಆದೇಶಿಸಿದ್ದಾರೆ. ಕೊರೊನಾ ನಿಯಮವನ್ನು ಪಾಲಿಸಿಕೊಂಡು ಜುಲೈ 26ರಿಂದ ಕಾಲೇಜು ಆರಂಭಿಸಲು ಸರ್ಕಾರ ಸೂಚನೆ ನೀಡಿದೆ. ಆದರೆ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕನಿಷ್ಠ 1 ಡೋಸ್ ಆದರೂ ಕೊರೊನಾ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.

    ತರಬೇತಿ ಕೇಂದ್ರಗಳನ್ನು ತೆರೆಯಲು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕನಿಷ್ಟ ಒಂದು ಡೋಸ್ ಕೊರೊನಾ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ.

    ಮೂರು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರ ಮಂದಿರಗಳ ಆರಂಭಕ್ಕೆ ಸಹ ಸರ್ಕಾರ ಅನುಮತಿ ನೀಡಿದೆ. ಆದರೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಹಾಗೂ ಕೊರೊನಾ ನಿಯಮಗಳನ್ನು ಪಾಲಿಸಿ ನಾಳೆಯಿಂದ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ನೈಟ್ ಕರ್ಫ್ಯೂ ಅವಧಿಯನ್ನು ರಾತ್ರಿ 10 ರಿಂದ ಬೆಳಗ್ಗೆ 5ರ ವರಗೆ ನಿಗದಿ ಮಾಡಲಾಗಿದೆ.

    ಸಿಎಂ ಜೊತೆ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಸಚಿವ ಆರ್.ಅಶೋಕ್, ಮದುವೆಗೆ 100 ಜನರ ಮಿತಿ, ಅಂತ್ಯ ಸಂಸ್ಕಾರಕ್ಕೆ 20 ಜನರ ಮಿತಿ ಮುಂದುವರಿಸಿದ್ದೇವೆ. ಸಿನಿಮಾ ಥಿಯೇಟರ್ ಗಳಿಗೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಅನುಮತಿ ನೀಡಿದ್ದೇವೆ. ನೈಟ್ ಕರ್ಫ್ಯೂ ಅವಧಿ ಕಡಿಮೆ ಮಾಡಿದ್ದೇವೆ. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳಿಗೆ ಅನುಮತಿ ಕೊಟ್ಟಿದ್ದೇವೆ. ದೇವಸ್ಥಾನಗಳಿಗಿದ್ದ ನಿರ್ಬಂಧ ತೆರವು ಮಾಡಲಾಗಿದೆ. ದೇವಸ್ಥಾನಗಳಲ್ಲಿ ಇದುವರೆಗೆ ದರ್ಶನಕ್ಕೆ ಮಾತ್ರ ಅವಕಾಶ ಇತ್ತು. ಈಗ ಪೂಜಾ ಕೈಂಕರ್ಯ, ಪ್ರಸಾದ ವಿತರಣೆಗೂ ಅವಕಾಶ ನೀಡಲಾಗಿದೆ. ಅರ್ಚನೆ, ಹರಕೆ, ತೀರ್ಥ, ಪ್ರಸಾದ ಸೇರಿದಂತೆ ಹಲವು ಪೂಜಾ ಕಾರ್ಯಗಳಿಗೆ ಅನುಮತಿ ನೀಡಲಾಗಿದೆ. ಸಭೆಯಲ್ಲಿ ಸ್ವಿಮ್ಮಿಂಗ್ ಪೂಲ್ ಗಳ ಬಗ್ಗೆ ಚರ್ಚೆ ನಡೆದಿಲ್ಲ, ಜನರಿಗೆ ಕಷ್ಟವಾಗದಂತೆ ಸಡಿಲಿಕೆ ಕೊಟ್ಟಿದ್ದೇವೆ. ಮೂರನೇ ಅಲೆಗೆ ಬೇಕಾದ ತಯಾರಿ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.

    ಜುಲೈ 26ಕ್ಕೆ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತದೆ. ಸರ್ಕಾರದ ಸಾಧನೆಗಳ ಬಗ್ಗೆ ಇಲಾಖಾವಾರು ಮಾಹಿತಿ ಬಿಡುಗಡೆ ಮಾಡಲಾಗುತ್ತದೆ. ಜುಲೈ 26ರಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ, ಸಂಜೆ ಶಾಸಕರಿಗೆ ಔತಣ ಕೂಟ ಇದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ಡಿಸಿಎಂ ಅಶ್ವತ್ಥ ನಾರಾಯಣ, ಸಿಎಸ್ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆಗಮನ, ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸಚಿವ ಅರವಿಂದ್ ಲಿಂಬಾವಳಿ ಸಭೆಯಲ್ಲಿ ಭಾಗಿಯಾಗಿದ್ದರು.

  • ದಕ್ಷಿಣ ಕನ್ನಡ ಲಾಕ್‍ಡೌನ್ – ಮೇ 15ರ ನಂತರ ಕಾರ್ಯಕ್ರಮಗಳಿಗೂ ಇಲ್ಲ ಅವಕಾಶ

    ದಕ್ಷಿಣ ಕನ್ನಡ ಲಾಕ್‍ಡೌನ್ – ಮೇ 15ರ ನಂತರ ಕಾರ್ಯಕ್ರಮಗಳಿಗೂ ಇಲ್ಲ ಅವಕಾಶ

    – ವೀಕೆಂಡ್ ಸಂಪೂರ್ಣ ಲಾಕ್‍ಡೌನ್

    ಮಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ನಿಯಮಗಳನ್ನ ಜಾರಿಗೆ ತರಲಾಗಿದೆ. ನಾಳೆಯಿಂದ ಬೆಳಗ್ಗೆ 6 ರಿಂದ ಬೆಳಗ್ಗೆ 9ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

    ಮೆಡಿಕಲ್ ನೆಪದಲ್ಲಿ ಹೊರ ಬಂದ್ರೆ ವಾಹನಗಳನ್ನ ಸೀಜ್ ಮಾಡಲಾಗುವುದು. ತಮ್ಮ ಸಮೀಪದ ಮೆಡಿಕಲ್ ಗಳಲ್ಲಿ ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನ ಖರೀದಿಸಿ ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಜನರ ಅನಗತ್ಯವಾಗಿ ಹೊರ ಬರುವಂತಿಲ್ಲ. ಶುಕ್ರವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಲಿವೆ ಎಂದು ಜಿಲ್ಲಾಡಳಿತ ಹೇಳಿದೆ.

    ಮೇ 15 ಬಳಿಕ ಯಾವ ಕಾರ್ಯಕ್ರಮಗಳಿಗೂ ಅವಕಾಶ ನೀಡಲ್ಲ. ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಸೇರಿದಂತೆ ಯಾವ ಕಾರ್ಯಕ್ರಮ ಮಾಡುವಂತಿಲ್ಲ. ಮೇ 15 ರ ಮೇಲೆ ಅನುಮತಿ ನೀಡಿರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು. ಕಾರ್ಯಕ್ರಮ ಇದ್ದವರ ಮನವೊಲಿಸಿ ಅದನ್ನು ಮುಂದಕ್ಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನೂ ವೀಕೆಂಡ್ ನಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಸಮಯ ನೀಡಿಲ್ಲ. ಮುಂಚಿನ ದಿನವೇ ಖರೀದಿಸಬೇಕು.

  • ಕೊರೊನಾ ದೊಡ್ಡ ರೋಗವೇ ಅಲ್ಲ: ಸಚಿವ ರಮೇಶ್ ಜಾರಕಿಹೊಳಿ

    ಕೊರೊನಾ ದೊಡ್ಡ ರೋಗವೇ ಅಲ್ಲ: ಸಚಿವ ರಮೇಶ್ ಜಾರಕಿಹೊಳಿ

    – ಸಾಮಾಜಿಕ ಅಂತರ ಕಾಪಾಡಿ ಎಂದು, ತಾವೇ ನೂಕುನುಗ್ಗಲಿನಲ್ಲಿ ಭಾಗಿ
    – ಜನಜಂಗುಳಿ ಮಧ್ಯೆ ಮಾಸ್ಕ್ ಧರಿಸದೆ ಸನ್ಮಾನ ಮಾಡಿಸಿಕೊಂಡ ರಮೇಶ್ ಜಾರಕಿಹೊಳಿ

    ರಾಯಚೂರು: ಕೊರೊನಾ ದೊಡ್ಡ ರೋಗವೇ ಅಲ್ಲ, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿದರೆ ಮಾತ್ರ ಕಡಿಮೆ ಆಗುತ್ತದೆ ಎಂದು ಹೇಳುತ್ತಲೇ, ಸ್ವತಃ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೂಕುನುಗ್ಗಲಿನಲ್ಲಿ ಭರ್ಜರಿ ಸನ್ಮಾನ ಮಾಡಿಸಿಕೊಂಡಿದ್ದಾರೆ.

    ರಾಯಚೂರಿನ ಮಸ್ಕಿಯ ಬುದ್ದಿನ್ನಿಯಲ್ಲಿ ನಡೆದ ನಂದವಾಡಗಿ ಏತನೀರಾವರಿ ಯೋಜನೆಯ ಹನಿ ನೀರಾವರಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಅವರ ಬೆಂಬಲಿಗರು ಸಚಿವರಿಗೆ ಸನ್ಮಾನ ಮಾಡಿದ್ದಾರೆ. ಈ ಮೂಲಕ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ನಡೆದುಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಸಚಿವ ಜಾರಕಿಹೊಳಿ, ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ, ಎಷ್ಟೇ ಲಾಕ್‍ಡೌನ್ ಮಾಡಿದರೂ, ಜನರು ಸಹಕಾರ ನೀಡಿದಾಗ ಮಾತ್ರ ಕೊರೊನಾ ತಡೆಯಲು ಸಾಧ್ಯ. ಜನರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಪಾಡಬೇಕು. ಪ್ರಧಾನಿಯವರ ಮಾರ್ಗದರ್ಶನ ಹಾಗೂ ಯಡಿಯೂರಪ್ಪನವರ ಸೂಚನೆ ಪಾಲನೆ ಮಾಡಿದರೆ, ಅಲ್ಲದೆ ವೈದ್ಯರ ಸಲಹೆಗಳನ್ನು ಜನ ಪಾಲಿಸಿದರೆ ಕೊರೊನಾ ದೊಡ್ಡ ರೋಗ ಅಲ್ವೇ ಅಲ್ಲ ಎಂದು ಹೇಳಿದರು.

    ಕೊರೊನಾದಿಂದ ಒಬ್ಬ ಸತ್ತರು ಸಾವೇ, ಸಾವಿರ ಸತ್ತರು ಸಾವೇ, ಸಾವು ಕಡಿಮೆ ಆಗಬೇಕು ಎಂಬುವುದು ಎಲ್ಲರ ಭಾವನೆ. ಯೂರೋಪ್ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಜನರು ಗಟ್ಟಿಯಿದ್ದಾರೆ. ಕೊರೊನಾ ತಡೆಗೆ ದೇವರು ಸಹಕಾರ ನೀಡುತ್ತಾನೆ, ಎಲ್ಲವೂ ಸರಿ ಆಗುತ್ತೆ ಎಂದರು. ಆದರೆ ಇಷ್ಟೆಲ್ಲಾ ಹೇಳಿದ ಸಚಿವ ರಮೇಶ್ ಜಾರಕಿಹೊಳಿ ಕಾರ್ಯಮದಲ್ಲಿ ತಾವೇ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಜನ ಖಂಡಿಸಿದ್ದಾರೆ.

    ಕಾಮಗಾರಿ ಕುರಿತು ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಆಗಿರುವ ಎಲ್ಲ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಲು ಯತ್ನಿಸುತ್ತೇವೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಮುಗಿಸಲು ಪ್ರಯತ್ನ ಮಾಡಲಾಗುವುದು. ನಾರಾಯಣಪುರ ಬಲದಂಡೆ ದುರಸ್ಥಿ ಕಾಮಗಾರಿಯಲ್ಲಿ ಕಳಪೆ ಆಗಿರುವುದನ್ನು ಸಹಿಸುವುದಿಲ್ಲ. ಆರೋಪದ ಕುರಿತು ಸಮಗ್ರ ತನಿಖೆ ಮಾಡಿಸಲಾಗುವುದು. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ನೀರಾವರಿ ಬಗ್ಗೆಯೂ ಸಮಗ್ರ ತನಿಖೆ ಮಾಡಿಸಲಾಗುವುದು ಎಂದರು.

    ರಾಯಚೂರು, ಕೊಪ್ಪಳ, ಯಾದಗಿರಿಯಲ್ಲಿ ಹಲವು ನೀರಾವರಿ ಯೋಜನೆ ಜಾರಿ ಮಾಡಲಾಗುವುದು. ಪ್ರತಾಪ್ ಗೌಡರನ್ನು ಗೆಲ್ಲಿಸಿದರೆ ನಾನು 5ಂ ಕಾಲುವೆ ಮಾಡಿಕೊಡುತ್ತೇನೆ. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೂ ಪರಿಹಾರ ಮಾಡಲಾಗುವುದು. ಪ್ರತಾಪ್ ಗೌಡ ಗೆದ್ದರೆ ಸಚಿವರೂ ಆಗ್ತಾರೆ. ರಾಯಚೂರು ಉಸ್ತುವಾರಿ ಆಗ್ತಾರೆ. ಬಿಜೆಪಿ ಸರ್ಕಾರ ಬರುವುದಕ್ಕೆ ಪ್ರತಾಪ್ ಗೌಡ ಪಾಟೀಲ್‍ರ ಪಾತ್ರ ಮಹತ್ವದ್ದಾಗಿದೆ. ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಮಾಡಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

  • ಪತ್ನಿ ಸ್ನೇಹಿ ನಿಯಮಗಳೇ ಲಾಕ್‍ಡೌನ್ ರೂಲ್ಸ್: ಯಶ್

    ಪತ್ನಿ ಸ್ನೇಹಿ ನಿಯಮಗಳೇ ಲಾಕ್‍ಡೌನ್ ರೂಲ್ಸ್: ಯಶ್

    ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಲಾಕ್‍ಡೌನ್ ಹೊಸ ನಿಯಮಗಳನ್ನು ಘೋಷಿಸಿದ್ದು, ಈ ಕುರಿತು ನಟ ಯಶ್ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಈ ಕುರಿತು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಯಶ್, ಕರ್ನಾಟಕ ಸರ್ಕಾರ ಲಾಕ್‍ಡೌನ್ ಹೊಸ ನಿಯಮಗಳನ್ನು ಘೋಷಿಸಿದೆ. ಯಾಕೆ ಎಂದು ತಿಳಿದಿಲ್ಲ, ಇದನ್ನೇ ಇಟ್ಟುಕೊಂಡು ನನ್ನ ಹೆಂಡತಿ ನಿಯಮಗಳನ್ನು ರೂಪಿಸುತ್ತಾಳೆ. ಪ್ರತಿ ದಿನ ರಾತ್ರಿ 8ಕ್ಕೆ ಮನೆಗೆ ಬರಬೇಕು, ಭಾನುವಾರ ಸಂಪೂರ್ಣ ಲಾಕ್‍ಡೌನ್ ಎಂದು ಹೇಳುತ್ತಾಳೆ ಎಂದು ಪೋಸ್ಟ್ ಮಾಡುವ ಮೂಲಕ ಎಚ್ಚರಿಸಿದ್ದಾರೆ.

    ಏನೇ ಆಗಲಿ ಈ ಪತ್ನಿ ಸ್ನೇಹಿ ನಿಯಮಗಳು ಸ್ವಾಸ್ಥ್ಯ ಹಾಗೂ ಸುರಕ್ಷತೆ ಕಾಪಾಡುವಲ್ಲಿ ಸಹಾಯವಾಗಲಿವೆ. ಟೇಕ್ ಕೇರ್ ಗಾಯ್ಸ್ ಎಂದು ಬರೆದಿದ್ದು, ಪತ್ನಿ ರಾಧಿಕಾ ಪಂಡಿತ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಲಾಕ್‍ಡೌನ್ ನಿಯಮಗಳ ಕುರಿತು ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

    https://www.facebook.com/TheOfficialYash/photos/a.1580803388813733/2965686613658730

    ರಾಜ್ಯ ಸರ್ಕಾರ ಲಾಕ್‍ಡೌನ್ ನಿಯಮಗಳ ಬದಲಾವಣೆ ಕುರಿತು ಇಂದು ಅಧಿಕೃತ ಆದೇಶ ಹೊರಡಿಸಿದೆ. ಇದರ ಪ್ರಕಾರ, ಜುಲೈ 5 ರಿಂದ ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲಾಗುವುದು. ಅಲ್ಲದೆ ಸರ್ಕಾರಿ ನೌಕರರಿಗೆ 2020 ಜುಲೈ 10 ರಿಂದ ಆಗಸ್ಟ್ 8ರವರಗೆ ಪ್ರತಿ ಶನಿವಾರ ರಜೆ ಸಿಗಲಿದೆ. ರಾಜ್ಯಾದ್ಯಂತ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಚಲನೆಯನ್ನು ನಿಷೇಧಿಸಿದೆ.

  • ಸರ್ಕಾರಿ ಆದೇಶ ಲೆಕ್ಕಿಸದೆ ಶಾಲೆ ತೆರೆದ ಖಾಸಗಿ ಸಂಸ್ಥೆಗಳು

    ಸರ್ಕಾರಿ ಆದೇಶ ಲೆಕ್ಕಿಸದೆ ಶಾಲೆ ತೆರೆದ ಖಾಸಗಿ ಸಂಸ್ಥೆಗಳು

    – ಪೋಷಕರು ಒಪ್ಪದಿದ್ರೂ ಮಕ್ಕಳನ್ನು ಶಾಲೆಗೆ ಕರೆಸಿಕೊಂಡ ಶಿಕ್ಷಕರು
    – ಶಾಸಕರ ಒಡೆತನದ ಶಾಲೆಯೂ ಓಪನ್
    – ಮಾಸ್ಕ್ ಧರಿಸದೆ ಶಿಕ್ಷಕರಿಂದ ಪಾಠ

    ಮಂಡ್ಯ: ಜಿಲ್ಲೆಯಲ್ಲಿ ಸರ್ಕಾರಿ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದ್ದು, ಬಹುತೇಕ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಈ ಮೂಲಕ ಪರೀಕ್ಷೆ ಹೆಸರಿನಲ್ಲಿ ತರಗತಿ ಆರಂಭಿಸಿ ಮಕ್ಕಳ ಜೀವದ ಜೊತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಚೆಲ್ಲಾಟವಾಡುತ್ತಿವೆ.

    ಜೂ.25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಒಡೆತನದ ವಿವೇಕ ವಿದ್ಯಾಸಂಸ್ಥೆಯನ್ನೂ ತೆರೆಯಲಾಗಿದ್ದು, ಮಕ್ಕಳನ್ನು ಕೂಡಿ ಹಾಕಿಕೊಂಡು ಪಾಠ ಮಾಡಲಾಗುತ್ತಿದೆ. ಅಲ್ಲದೆ ರೋಟರಿ ಎಜುಕೇಶನ್ ಸೊಸೈಟಿ, ಆದರ್ಶ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಬಹುತೇಕ ಶಾಲೆಗಳನ್ನು ತೆರೆಯಲಾಗಿದೆ. ಸಾಮಾಜೀಕ ಅಂತರ ಕಾಯ್ದುಕೊಂಡು ಪಾಠ ಮಾಡಲಾಗುತ್ತಿದೆ. ಆದರೆ ಶಿಕ್ಷಕರು ಮಾತ್ರ ಮಾಸ್ಕ್ ಧರಿಸದೆ ಬೋಧಿಸುತ್ತಿದ್ದಾರೆ.

     

    ಕಳೆದ ಒಂದು ವಾರದಿಂದ ಶಾಲೆಗಳು ಆರಂಭವಾಗಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ತರಗತಿಗಳು ನಡೆಯುತ್ತಿವೆ. ಶಾಲೆ ತೆರೆಯಲು ಅನುಮತಿ ಇಲ್ಲದಿದ್ದರೂ ಸರ್ಕಾರದ ನಿಯಮ ಗಾಳಿಗೆ ತೂರಿ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಪ್ಪದಿದ್ದರೂ, ಒತ್ತಾಯಪೂರ್ವಕವಾಗಿ ಶಿಕ್ಷಕರು ಮಕ್ಕಳನ್ನು ಶಾಲೆಗೆ ಕರೆಸಿಕೊಂಡಿದ್ದಾರೆ. ಕೊರೊನಾ ಭಯದ ನಡುವೆಯೇ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.

  • ಜಾತ್ರೆಯಂತಾದ ಪಿ.ಟಿ.ಪರಮೇಶ್ವರ್ ನಾಯ್ಕ್ ಮಗನ ಮದ್ವೆ- ಸಾಮಾಜಿಕ ಅಂತರ ಮರೆತು ಸಚಿವ ಶ್ರೀರಾಮುಲು ಭಾಗಿ

    ಜಾತ್ರೆಯಂತಾದ ಪಿ.ಟಿ.ಪರಮೇಶ್ವರ್ ನಾಯ್ಕ್ ಮಗನ ಮದ್ವೆ- ಸಾಮಾಜಿಕ ಅಂತರ ಮರೆತು ಸಚಿವ ಶ್ರೀರಾಮುಲು ಭಾಗಿ

    – ಸಿದ್ದರಾಮಯ್ಯ, ಪರಮೇಶ್ವರ್ ಸಹ ಭಾಗಿ

    ಬಳ್ಳಾರಿ: ಕೊರೊನಾ ಅಟ್ಟಹಾಸದ ನಡುವೆಯೂ ರಾಜಕಾರಣಿಗಳು ಅದ್ಧೂರಿ ವಿವಾಹ ಮಾಡುತ್ತಿದ್ದು, ಇದರಿಂದಾಗಿ ರಾಜಕಾರಣಿಗಳಿಗೊಂದು ನಿಯಮ, ಜನಸಾಮಾನ್ಯರಿಗೊಂದು ನಿಯಮವೇ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ವಿಶೇಷವೆಂದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಹ ವಿವಾಹದಲ್ಲಿ ಭಾಗಿಯಾಗಿದ್ದಾರೆ.

    ಜಿಲ್ಲೆಯ ಲಕ್ಷ್ಮೀಪುರದಲ್ಲಿ ನಡೆಯುತ್ತಿರುವ ಮಾಜಿ ಸಚಿವ, ಹಾಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ಮದುವೆಗೆ ಗಣ್ಯರ ದಂಡೇ ಆಗಮಿಸಿದ್ದು, ಅದ್ಧೂರಿಯಾಗಿ ಜಾತ್ರೆಯಂತೆ ವಿವಾಹ ಮಾಡಿದ್ದಾರೆ. ನೂನಾರು ಜನ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಸಚಿವ ಶ್ರೀರಾಮುಲು ಅವರು ಸ್ಟೇಜ್ ಮೇಲೆ ಹೋಗಿ ಕೈ ಕುಲುಕಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೆ ನೂರಾರು ಜನ ಸೇರಿದ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ.

    ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೆಲಿಕಾಪ್ಟರ್ ನಲ್ಲಿ ಮದುವೆಗೆ ಆಗಮಿಸಿದ್ದು, ಇದೇ ವೇಳೆ ಹೆಲಿಕಾಪ್ಟರ್ ನೋಡಲು ಜನ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಜನ ಜಾತ್ರೆಯಂತೆ ಸೇರಿದ್ದಾರೆ. ಕಾಂಗ್ರೆಸ್ ಮುಖಂಡರು ಸಹ ಸಾಮಾಜಿಕ ಅಂತರವಿಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೊರೊನೊಗೆ ಡೋಂಟ್ ಕೇರ್ ಎಂದು ಮದುವೆ ಕಾರ್ಯಕ್ರಮದಲ್ಲಿ ಜನಸ್ತೋಮವೇ ಸೇರಿದೆ.

    ನೂರಾರು ಜನ ಸೇರಿದ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಸಚಿವ ಶ್ರೀ ರಾಮುಲು, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ಕೊರೊನಾ ನಡುವೆ ಭರ್ಜರಿ ಬಂಡಿ ಓಟ- ಲಾಕ್‍ಡೌನ್ ನಿಯಮ ಉಲ್ಲಂಘನೆ

    ಕೊರೊನಾ ನಡುವೆ ಭರ್ಜರಿ ಬಂಡಿ ಓಟ- ಲಾಕ್‍ಡೌನ್ ನಿಯಮ ಉಲ್ಲಂಘನೆ

    – ಕಿಕ್ಕಿರಿದು ಸೇರಿದ ಸಾವಿರಾರು ಜನ

    ಹಾವೇರಿ: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಸಹ 22 ಕೊರೊನಾ ಪ್ರಕರಣಗಳಿವೆ. ಇಷ್ಟಿದ್ದರೂ ಜಾತ್ರೆ ಮಾಡಿ ಎತ್ತಿನ ಬಂಡಿಯ ಓಟ ಆಯೋಜಿಸಿದ ಘಟನೆ ನಡೆದಿದೆ.

    ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊರೊನಾ ಭೀತಿಯ ನಡುವೆಯೂ ಭರ್ಜರಿಯಾಗಿ ಬಂಡಿ ಓಟ ನಡೆಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಬ್ರಹ್ಮಲಿಂಗೇಶ್ವರ ಜಾತ್ರೆ ಆಚರಿಸಿದ್ದು, ಎತ್ತಿನ ಬಂಡಿ ಓಟವನ್ನು ಸಹ ಆಯೋಜಿಸಿದ್ದಾರೆ. ಪ್ರತಿ ವರ್ಷ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ಬಂಡಿ ಓಡಿಸುವ ಸ್ವರ್ದೆ ನಡೆಯುತ್ತಿತ್ತು. ಈ ಬಾರಿ ಕೊರೊನಾ ಹಿನ್ನೆಲೆ ಒಂದೇ ದಿನ ಆಯೋಜಿಸಿದ್ದಾರೆ. ಆದರೂ ಈ ಓಟ ನೋಡಲು ಸಾವಿರಾರು ಜನ ಸೇರಿದ್ದು, ಕೊರೊನಾ ಭೀತಿ ನಡುವೆ ಜಾತ್ರೆ ಮಾಡಿದ್ದಾರೆ.

    ಕಿಕ್ಕಿರಿದು ಸೇರಿದ್ದ ಜನರ ಸಮ್ಮುಖದಲ್ಲಿ ವೀರಗಾರರು ಭರ್ಜರಿಯಾಗಿ ಬಂಡಿ ಓಡಿಸಿದ್ದಾರೆ. ಜಾತ್ರೆ ಮಾಡಲು ಗ್ರಾಮಸ್ಥರು ತಹಶೀಲ್ದಾರ್ ಶಂಕರ್ ಬಳಿ ಮನವಿ ಸಲ್ಲಿಸಿದರು. ಅದರೆ ಜಾತ್ರೆ ರದ್ದುಪಡಿಸುವಂತೆ ಕೋರಿ ಹಾವೇರಿ ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದಾವುದನ್ನೂ ಲೆಕ್ಕಿಸಿದೆ ಗ್ರಾಮಸ್ಥರು ಭರ್ಜರಿ ಬಂಡಿ ಓಡಿಸುವ ಹಬ್ಬ ಅಚರಣೆ ಮಾಡಿದ್ದಾರೆ.

  • ಜೂನ್ 15ರಿಂದ ಇಸ್ಕಾನ್ ಓಪನ್- ಜನದಟ್ಟಣೆ ಹಿನ್ನೆಲೆ ತಡ

    ಜೂನ್ 15ರಿಂದ ಇಸ್ಕಾನ್ ಓಪನ್- ಜನದಟ್ಟಣೆ ಹಿನ್ನೆಲೆ ತಡ

    – ಸಿದ್ಧತೆ ಮಾಡಿಕೊಳ್ಳಲು ಸಮಯಾವಕಾಶ ಕೋರಿದ ಆಡಳಿತ ಮಂಡಳಿ

    ಬೆಂಗಳೂರು: ಜೂನ್ 8ರಿಂದ ಎಲ್ಲ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಈಗಾಗಲೇ ಹಲವು ಪ್ರತಿಷ್ಠಿತ ದೇವಸ್ಥಾನಗಳ ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿವೆ. ಆದರೆ ಇಸ್ಕಾನ್ ಜೂನ್ 15ರ ವರೆಗೆ ಸಮಯಾವಕಾಶ ಕೋರಿದೆ.

    ಸಿಲಿಕಾನ್ ಸಿಟಿಯ ಇಸ್ಕಾನ್ ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆ ಆಡಳಿತ ಮಂಡಳಿ ದೇವಸ್ಥಾನ ತೆರೆಯಲು ಸಮಯಾವಕಾಶ ನೀಡುವಂತೆ ಮನವಿ ಮಾಡಿದೆ. ಹೀಗಾಗಿ ಇಸ್ಕಾನ್ ಬಾಗಿಲು ತೆರೆಯುವುದು ಕೆಲ ದಿನಗಳ ಕಾಲ ತಡವಾಗಲಿದೆ. ದೇವಸ್ಥಾನದ ಬಾಗಿಲು ತೆರೆಯಲು ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ಆದರೆ ಭಕ್ತರ ಆಗಮನಕ್ಕುಣವಾಗಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹೀಗಾಗಿ ತಡವಾದರೂ ಪರವಾಗಿಲ್ಲ ಸೂಕ್ತ ಭದ್ರತೆ, ವ್ಯವಸ್ಥೆ ಮಾಡಿಕೊಂಡೇ ಬಾಗಿಲು ತೆರೆಯಲು ನಿರ್ಧರಿಸಿದೆ.

    ಇಸ್ಕಾನ್‍ಗೆ ಪ್ರತಿದಿನ 12 ಸಾವಿರ ಭಕ್ತರು ಭೇಟಿ ನೀಡುತ್ತಾರೆ. ಇಷ್ಟೊಂದು ಜನರಿಗೆ ಸಾಮಾಜಿಕ ಅಂತರ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ದೇವಾಲಯದ ಸಿದ್ಧತೆಗಾಗಿ ಸ್ವಲ್ಪ ಹೆಚ್ಚಿನ ಸಮಯ ಬೇಕು ಎಂದು ಇಸ್ಕಾನ್‍ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

    ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ ಪ್ರಸಿದ್ಧ ದೇವಾಲಯಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಹುತೇಕ ಎಲ್ಲ ದೇವಾಲಯಗಳು ಸರ್ಕಾರದ ನಿಯಮದಂತೆ ಸೋಮವಾರದಿಂದ ಬಾಗಿಲು ತೆರೆಯಲಿವೆ. ಸರ್ಕಾರದ ಮಾರ್ಗಸೂಚಿಯಂತೆ ದೇವರ ದರ್ಶನ ಪಡೆಯಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

  • ನೂರಾರು ಜನರ ಮಧ್ಯೆ ಮೆರವಣಿಗೆ, ಸೇಬಿನ ಹಾರ – ನಿಯಮ ಉಲ್ಲಂಘಿಸಿದ ಶ್ರೀರಾಮುಲು

    ನೂರಾರು ಜನರ ಮಧ್ಯೆ ಮೆರವಣಿಗೆ, ಸೇಬಿನ ಹಾರ – ನಿಯಮ ಉಲ್ಲಂಘಿಸಿದ ಶ್ರೀರಾಮುಲು

    – ಸಾಮಾಜಿಕ ಅಂತರ ಎಲ್ಲಿ?
    – ಮಾಸ್ಕ್ ಧರಿಸದೇ ಭಾಗಿ

    ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಅವಾಂತರವನ್ನೇ ಸೃಷ್ಟಿಸಿದೆ. ರಾಜ್ಯದಲ್ಲಿ ದಿನಕ್ಕೆ ನೂರಾರು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ನಡುವೆ ಜನರಿಗೆ ಮಾದರಿಯಾಗಬೇಕಾದ ಆರೋಗ್ಯ ಸಚಿವ ಶ್ರೀರಾಮುಲು ಕೋವಿಡ್ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀರಾಮುಲು ಸೇಬಿನ ಹಾರ ಹಾಕಿಸಿಕೊಂಡಿದ್ದಾರೆ.

    ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ವೇದಾವತಿ ನದಿಗೆ ಬಾಗೀನ ಅರ್ಪಣೆಗೆ ಆಗಮಿಸಿದ್ದ ಶ್ರೀರಾಮುಲು, ಎತ್ತಿನ ಗಾಡಿ ಏರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದ್ದಾರೆ.

    ಸಚಿವರಿಗೆ ಸಂಸದ ಎ.ನಾರಾಯಣಸ್ವಾಮಿ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಹ ಸಾಥ್ ನೀಡಿದ್ದು, ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ವೇಳೆ ನೂರಾರು ಜನರ ಮಧ್ಯೆ ಸಚಿವರಿಗೆ ಕಾರ್ಯಕರ್ತರು ಕ್ರೇನ್ ಮೂಲಕ ಸೇಬಿನ ಹಾರ, ಜೆಸಿಬಿ ಮೂಲಕ ಹೂವು ಹಾಕಿದ್ದಾರೆ. ಸ್ವತಃ ಸಚಿವರು ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದು, ಮಾತ್ರವಲ್ಲದೆ ಸಚಿವರ ಸಮ್ಮುಖದಲ್ಲೇ ನೂರಾರು ಜನ ಕಾನೂನನ್ನು ಮರೆತಿದ್ದಾರೆ.

    ಶಾಸಕ ರಘುಮೂರ್ತಿ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಶಾಸಕನಾದ ನನಗೆ ಈ ಕುರಿತು ಮಾಹಿತಿ ನೀಡಿಲ್ಲ. ಶಿಷ್ಟಾಚಾರ ಪಾಲಿಸಲು ಇಂದು ಬೆಳಗ್ಗೆ ಅಧಿಕಾರಿಗಳು ನನ್ನನ್ನು ಕರೆದಿದ್ದಾರೆ. ಸಚಿವರು ಬಿಡಿ, ಜನ ಈ ಕುರಿತು ಅರಿತುಕೊಳ್ಳಬೇಕಿತ್ತು. ಚಿತ್ರದುರ್ಗ ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಗತಿ ಏನು? ಚಳ್ಳಕೇರೆಯಲ್ಲಿಯೇ ಪ್ರಕರಣಗಳು ಪತ್ತೆಯಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸದೆ ಹಾಸ್ಟೆಲ್‍ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ

    ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ

    – ಮಾಜಿ ಸ್ಪೀಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರ ಆಕ್ರೋಶ

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೂರಾರು ಜನರನ್ನು ಸೇರಿಸಿ ಕರೆಯಲ್ಲಿ ಪೂಜೆ ಮಾಡುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಾಟ್ಟ ಗ್ರಾಮದ ಕೆರೆಗೆ ಕೆ.ಸಿ.ವ್ಯಾಲಿ ನೀರು ಹರಿದ ಹಿನ್ನೆಲೆ ತಮ್ಮದೆ ಮುಖಂಡರು, ಸ್ಥಳೀಯರನ್ನು ಸೇರಿಸಿಕೊಂಡು ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಪೂಜೆ ವೇಳೆ ನೂರಾರು ಜನರ ಜಮಾವಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಜಿ ಸ್ಪೀಕರ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯಾನಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಡವರ ಮದುವೆಗೆ 10 ಜನರಿಗೆ ಮಾತ್ರ ಅವಕಾಶ ನೀಡುವ ಸರ್ಕಾರ, ಜನಪ್ರತಿನಿಧಿಗಳಿಗೆ ಈ ರೀತಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕೆರೆ ಪೂಜೆಗೆ ನೂರಾರು ಜನರನ್ನು ಸೇರಿಸಿಕೊಂಡ ರಮೇಶ್ ಕುಮಾರ್ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನೂ ವಿಶೇಷವೆಂದರೆ ಇದನ್ನು ರಮೇಶ್ ಕುಮಾರ್ ಬೆಂಬಲಿಗರು ಫೇಸ್‍ಬುಕ್ ನಲ್ಲಿ ಲೈವ್ ಮಾಡಿದ್ದಾರೆ.