Tag: Lockdown Guideline

  • ಬೈಕಿನಲ್ಲಿ ಒಬ್ಬರೇ ಹೋಗಿ, ಕಾರಿನಲ್ಲಿ ಇಬ್ಬರಿಗೆ ಮಾತ್ರ ಅನುಮತಿ

    ಬೈಕಿನಲ್ಲಿ ಒಬ್ಬರೇ ಹೋಗಿ, ಕಾರಿನಲ್ಲಿ ಇಬ್ಬರಿಗೆ ಮಾತ್ರ ಅನುಮತಿ

    ನವದೆಹಲಿ: ಇಂದಿನಿಂದ ಆರಂಭಗೊಂಡಿರುವ ಲಾಕ್‍ಡೌನ್2 ಅವಧಿಯಲ್ಲಿ ಬೈಕ್/ಸ್ಕೂಟರ್ ನಲ್ಲಿ ಇಬ್ಬರು, ಕಾರಿನಲ್ಲಿ ನಾಲ್ಕು ಮಂದಿ ತೆರಳುವಂತಿಲ್ಲ.

    ಲಾಕ್‍ಡೌನ್ ವಿಧಿಸಿದ್ದರೂ ಸಾರ್ವಜನಿಕರು ವಾಹನಗಳನ್ನು ರಸ್ತೆಗೆ ಇಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಈ ನಿಯಮದ ಪ್ರಕಾರ ಬೈಕಿನಲ್ಲಿ ಒಬ್ಬರೇ ತೆರಳಬೇಕು. ಕಾರಿನಲ್ಲಿ ಇಬ್ಬರಿಗೆ ಹೋಗಲು ಮಾತ್ರ ಅನುಮತಿ ನೀಡಲಾಗಿದೆ. ಅದರೆ ಡ್ರೈವರ್ ಸೀಟ್ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಹಿಂಬದಿಯ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.

    ರಸ್ತೆಗೆ ವಾಹನ ತರದೇ ಮನೆಯಲ್ಲೇ ಇರಿ ಎಂದು ಹೇಳುತ್ತಿದ್ದರೂ ಜನ ವಾಹನಗಳನ್ನು ರಸ್ತೆಗೆ ಇಳಿಸುವುದು ಕಡಿಮೆಯಾಗಿಲ್ಲ. ಹೀಗಾಗಿ ಈಗ ಕೇಂದ್ರ ಸರ್ಕಾರ ಕಠಿಣ ನಿಯಮ ತರುವ ಮೂಲಕ ನಿಯಂತ್ರಣಕ್ಕೆ ಮುಂದಾಗಿದೆ.

    ಲಾಕ್‍ಡೌನ್2 ಘೋಷಣೆಯಾದ ಬಳಿಕ ಕೇಂದ್ರ ಗೃಹ ಇಲಾಖೆ ಮೇ 3ರ ವರೆಗಿನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹಾಟ್ ಸ್ಪಾಟ್‍ಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ. ಕೆಲಸದ ಸ್ಥಳದಲ್ಲಿ 6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದೆ.

    ಈ ಮಾರ್ಗಸೂಚಿಯಲ್ಲಿ ವಿನಾಯಿತಿ ಪಡೆದ ಕ್ಷೇತ್ರಗಳಲ್ಲಿ ಅನುಮತಿ ನೀಡಬೇಕೋ ಬೇಡವೋ ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದರೆ ಏ.20ರ ನಂತರ ಕೆಲ ಕ್ಷೇತ್ರಗಳು ತೆರೆಯಲಿದೆ.

    ಸಾರ್ವಜನಿಕ ಸ್ಥಳದಲ್ಲಿ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ವಿಧಿಸಲಾಗುತ್ತದೆ. ರಸ್ತೆ ಬದಿಯ ಡಾಬಾ ಮತ್ತು ಟ್ರಕ್ ರಿಪೇರಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗದರ್ಶಿ ಸೂತ್ರದ ಪ್ರಕಾರ ಸಾರ್ವಜನಿಕ ಸ್ಥಳ, ಉದ್ಯೋಗ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಮದ್ಯ, ಗುಟ್ಕಾ, ತಂಬಾಕು ಮಾರಾಟಕ್ಕೆ ನಿಷೇಧ. ಮೊದಲ ಬಾರಿಗೆ ಲಾಕ್‍ಡೌನ್ ಘೋಷಣೆಯಾದ ಬಳಿಕ ಯಾವುಕ್ಕೆ ವಿನಾಯಿತಿಗಳನ್ನು ನೀಡಲಾಗಿತ್ತೋ ಅವುಗಳಿಗೆ ವಿನಾಯಿತಿ ಮುಂದುವರಿಸಲಾಗಿದೆ.

    ಯಾವುದಕ್ಕೆ ವಿನಾಯಿತಿ?
    – ಡಿಜಿಟಲ್ ಆರ್ಥಿಕತೆ ಸಹಕಾರ ನೀಡುವ ಐಟಿ ಮತ್ತು ಐಟಿ ಸೇವೆಗಳಿಗೆ ಅನುಮತಿ. ಉತ್ಪಾದನಾ ವಲಯ, ವಿಶೇಷ ಅರ್ಥಿಕ ವಲಯ, ಕೈಗಾರಿಕಾ ಎಸ್ಟೇಟ್, ತೈಲ, ಕಲ್ಲಿದ್ದಲು ಉತ್ಪಾದನೆಗೆ ಅನುಮತಿ.
    – ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೆ ಅನುಮತಿ. ಗ್ರಾಮೀಣ ಭಾಗಲ್ಲಿರುವ ಕೈಗಾರಿಕೆಗಳಿಗೆ ಅನುಮತಿ. ಆದರೆ ಉದ್ಯೋಗಿಗಳ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.


    – ಅಂತರ್ ರಾಜ್ಯಗಳ ನಡುವೆ ಸಂಚರಿಸುವ ಎಲ್ಲ ಗೂಡ್ಸ್ ವಾಹನಗಳಿಗೆ ಅನುಮತಿ. ಮೆಡಿಕಲ್ ಸಾಧನ, ಫಾರ್ಮಾ ಕಂಪನಿಗಳಿಗೆ ಅನುಮತಿ. ಗ್ರಾಮೀಣ ಜನರಿಗೆ ಉದ್ಯೋಗ ನೀಡಲು ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ, ನೀರಾವರಿ ಯೋಜನೆ, ಕೈಗಾರಿಕಾ ಯೋಜನೆ, ನರೇಗಾ ಯೋಜನೆ ಅಡಿ ಉದ್ಯೋಗಕ್ಕೆ ಅನುಮತಿ. ವಲಸೆಯನ್ನು ತಡೆಗಟ್ಟಲು ಇದಕ್ಕೆಲ್ಲ ಅನುಮತಿ ನೀಡಲಾಗಿದೆ.

    – ಕಂಪನಿ/ ಕೈಗಾರಿಕೆಗಳಲ್ಲಿ ದೊಡ್ಡ ಸಂಖ್ಯೆಯ ಸಭೆಯನ್ನು ನಿಷೇಧಿಸಲಾಗಿದೆ. ಎಲ್ಲ ಉದ್ಯೋಗಿಗಳ ಉಷ್ಣಾಂಶ ಪರೀಕ್ಷಿಸುವ ಸ್ಕ್ರೀನಿಂಗ್ ಮಾಡಬೇಕು. 65 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಮತ್ತು 5 ವರ್ಷದ ಒಳಗಿನ ಮಕ್ಕಳು ಇರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಪ್ರೋತ್ಸಾಹಿಸಬೇಕು ಎಂದು ಸೂಚಿಸಲಾಗಿದೆ.