Tag: Lockdown 5.0

  • ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ

    ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ

    ನವದೆಹಲಿ: ಕೇಂದ್ರ ಸರ್ಕಾರ ಲಾಕ್‍ಡೌನ್ 5.0ನ ಮಾರ್ಗಸೂಚಿ ಪ್ರಕಟಿಸಿದ್ದು, ಅಂತರ್ ರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದೆ.

    ಜೂನ್ 1ರಿಂದ ಯಾವುದೇ ಪಾಸ್ ಇಲ್ಲದೇ ಪ್ರಯಾಣಿಕರು ಸಂಚರಿಸಬಹುದಾಗಿದೆ. ಈಗಾಗಲೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಶ್ರಮಿಕ್ ಮತ್ತು ವಿಶೇಷ ರೈಲುಗಳು ಸಂಚರಿಸುತ್ತಿವೆ. ಹೊರ ರಾಜ್ಯಗಳಿಂದ ಬರುತ್ತಿರುವ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಇದನ್ನೂ ಓದಿ: ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರದಿಂದ 10 ನಿರ್ದೇಶನಗಳು

    ಕರ್ನಾಟಕದಲ್ಲಿ ಹೊರ ರಾಜ್ಯಗಳಿಂದ ಬಂದವರಲ್ಲಿಯೇ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದೆ. ಇಂದು ಸಹ 141 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ಮೂರು ಸಾವಿರದ ಗಡಿಯ ಸಮೀಪದಲ್ಲಿದೆ. ಜನರು ಪಾಸ್ ಪಡೆದು ಬರುತ್ತಿರೋದರಿಂದ ಎಲ್ಲರ ಮಾಹಿತಿ ಸಿಗುತ್ತಿತ್ತು. ಪಾಸ್ ಇಲ್ಲದೇ ಜನರ ಸಂಚರಿಸಬಹುದು ಎಂದು ಕೇಂದ್ರ ತನ್ನ ಮಾರ್ಗಸೂಚಿಯಲ್ಲಿ ಸೂಚಿಸಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಜೂ.30ರವರೆಗೆ ಲಾಕ್‍ಡೌನ್ ವಿಸ್ತರಣೆ- ಜೂನ್ 8ರಿಂದ ಮಾಲ್, ದೇವಸ್ಥಾನ ಓಪನ್

    ಕೇಂದ್ರ ಅಂತರ್ ರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರಗಳಿಗೆ ಸಂಚಾರಕ್ಕೆ ನಿರ್ಬಂಧ ವಿಧಿಸಿಕೊಳ್ಳುವ ಅಧಿಕಾರವನ್ನು ನೀಡಿದೆ. ನಿರ್ಬಂಧಕ್ಕೂ ಮುನ್ನ ಆಯಾ ರಾಜ್ಯಗಳಿಗೆ ಮಾಹಿತಿ ನೀಡಬೇಕು.

  • ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    – ರಾಜ್ಯ ಸರ್ಕಾರಗಳಿಗೆ  ವರದಿ ಸಲ್ಲಿಸಲು ಸೂಚನೆ
    – ಪೋಷಕರು, ಶಿಕ್ಷಣ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ವರದಿ ತಯಾರಿ

    ನವದೆಹಲಿ: ಕೇಂದ್ರ ಸರ್ಕಾರ ಲಾಕ್‍ಡೌನ್ 5.0 ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ ನಂತರ ಶಾಲಾ ಕಾಲೇಜುಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪಿಸಿದೆ.

    ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳನ್ನು ತೆರೆಯುವುದು ಸವಾಲಿನ ಸಂಗತಿಯಾಗಿದ್ದು, ಈ ಕುರಿತು ಜುಲೈ ಬಳಿಕ ನಿರ್ಧಾರ ಕೈಗೊಳ್ಳಳಾಗುವುದು ಎಂದು ತಿಳಿಸಿದೆ. ಶಾಲೆ, ಕಾಲೇಜು, ಶಿಕ್ಷಣ, ತರಬೇತಿ, ಕೋಚಿಂಗ್ ಸೆಂಟರ್‍ ಗಳನ್ನು ತೆರೆಯುವ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

    ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಹ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ನೀಡುವ ಪ್ರತಿಕ್ರಿಯೆ, ಸಲಹೆಯನ್ನು ಪಡೆಯಬೇಕು. ಇದರ ಆಧಾರದ ಮೇಲೆ ಶಾಲೆಗಳನ್ನು ತೆರೆಯುವುದರ ಬಗ್ಗೆ ಜುಲೈನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

    ರಾಜ್ಯಗಳು ಸಲ್ಲಿಸುವ ವರದಿ ಆಧಾರದ ಮೇಲೆ ಕೇಂದ್ರ ಸಚಿವರು, ಸಂಬಂಧಪಟ್ಟ ಇಲಾಖೆಗಳು ಹಾಗೂ ಸ್ಟೇಕ್‍ಹೋಲ್ಡರ್ಸ್ ಗಳೊಂದಿಗೆ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೊರೊನಾ ವೈರಸ್ ಹರಡುವ ಕುರಿತು ಚರ್ಚಿಸಲಾಗುವುದು. ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(ಎಸ್‍ಒಪಿ) ಸಿದ್ಧಪಡಿಸಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

  • ಲಾಕ್‍ಡೌನ್ 5.0- ಪ್ರಮುಖ 13 ನಗರಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮ?

    ಲಾಕ್‍ಡೌನ್ 5.0- ಪ್ರಮುಖ 13 ನಗರಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮ?

    – ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯುವ ಸಾಧ್ಯತೆ

    ನವದೆಹಲಿ: ಕೊರೊನಾ 4ನೇ ಹಂತದ ಲಾಕ್‍ಡೌನ್ ಭಾನುವಾರ ಮುಕ್ತಾಯವಾಗಲಿದ್ದು, ಜೂನ್ 1ರಿಂದ 5ನೇ ಹಂತದ ಲಾಕ್‍ಡೌನ್ ಜಾರಿಗೆ ಬರಲಿದೆ. ಜೂನ್ 15ರವರೆಗೂ 5ನೇ ಹಂತದ ಲಾಕ್‍ಡೌನ್ ವಿಸ್ತರಣೆಯಾಗಬಹುದು. ಆದರೆ ಇದು ಕೇವಲ 13 ಮಹಾ ನಗರಗಳಿಗಳಿಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ. ಉಳಿದೆಡೆ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂಧೂರ್, ಜೈಪುರ, ಜೋಧ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರುನಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಈ ನಗರಗಳಲ್ಲಿ ಮಾತ್ರ ಲಾಕ್‍ಡೌನ್ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

    ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ದೂರವಾಣಿ ಮಾತುಕತೆ ವೇಳೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ಕೊಡುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ ಲಭಿಸಿದೆ.

    ಇದರ ಜೊತೆಗೆ ಕಫ್ರ್ಯೂ ಸಮಯ ಕೂಡ ವಿಸ್ತರಣೆಯಾಗುವ ಸಾಧ್ಯತೆ ಇದೆ. ರಾತ್ರಿ 7 ಗಂಟೆಯಿಂದ ಶುರುವಾಗಲಿರುವ ಕಫ್ರ್ಯೂವನ್ನು ಎರಡು ಗಂಟೆಗಳ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೂ ಕಫ್ರ್ಯೂ ವಿಧಿಸುವ ಚಿಂತನೆ ನಡೆದಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಲಿದೆ.

    ರಾಜ್ಯ ಸರ್ಕಾರಗಳಿಗೆ ಕೇಂದ್ರದ ಎಚ್ಚರಿಕೆ:
    ದೇಶದ 145 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈ ಜಿಲ್ಲೆಗಳ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಎಚ್ಚರಿಕೆ ವಹಿಸದಿದ್ದರೇ ಅಪಾಯ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಕಳೆದು ಮೂರು ವಾರಗಳಿಂದ 145 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ. ವಲಸೆ ಕಾರ್ಮಿಕರ ಸಂಚಾರದಿಂದ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡಬಹುದು. ಹೀಗಾಗಿ ಸೂಕ್ತ ತಪಾಸಣೆ ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಲಾಗಿದೆ.

    ಬಿಹಾರ್, ಉತ್ತರ ಪ್ರದೇಶದ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರದಲ್ಲಿ ಕಳೆದ ಮೂರು ವಾರದಿಂದ ಸೋಂಕು ಹೆಚ್ಚಾಗಿದೆ. ಕರ್ನಾಟಕದ ಯಾದಗಿರಿ, ಮಂಡ್ಯ, ಕಲಬುರಗಿ ಕೇಂದ್ರದ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎನ್ನಲಾಗಿದ್ದು ಜಿಲ್ಲೆಗಳ ಪಟ್ಟಿ ಅಧಿಕೃತವಾಗಿ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಬೇಕಿದೆ.