Tag: lock

  • ಒಳಗಿನಿಂದ ಲಾಕಾಗಿದ್ದ ಕಾರಿನಲ್ಲಿ ಮಕ್ಕಳಿಬ್ಬರ ಶವ ಪತ್ತೆ

    ಒಳಗಿನಿಂದ ಲಾಕಾಗಿದ್ದ ಕಾರಿನಲ್ಲಿ ಮಕ್ಕಳಿಬ್ಬರ ಶವ ಪತ್ತೆ

    ಹೈದರಾಬಾದ್: ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ಮೃತದೇಹ ಪಾರ್ಕ್ ಮಾಡಿದ್ದ ಕಾರಿನಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ನಿಜಾಮಾಬಾದ್‍ದಲ್ಲಿ ನಡೆದಿದೆ.

    ಮುಜಾಹಿದ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದುದ್ದೀನ್ (5) ಮತ್ತು ಮೊಹಮ್ಮದ್ ರಿಯಾಜ್ (10) ಮೃತ ಮಕ್ಕಳು. ಇವರಿಬ್ಬರು ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಮಕ್ಕಳ ಪೋಷಕರು ಎಲ್ಲ ಕಡೆ ಹುಡುಕಾಡಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು.

    ನಂತರ ಮನೆಯ ಸುತ್ತಮುತ್ತಲು ಪೋಷಕರು ಹುಡುಕಲು ಶುರು ಮಾಡಿದ್ದರು. ಅವರ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ನಿಲ್ಲಿಸಿದ್ದ ಹ್ಯುಂಡೈ ವರ್ನಾ ಕಾರಿನಲ್ಲಿ ಮಕ್ಕಳ ಶವಗಳನ್ನು ಪತ್ತೆಯಾಗಿವೆ. ಕಾರಿನ ಮಾಲೀಕ ಡೋರ್ ಓಪನ್ ಮಾಡಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ತಕ್ಷಣ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಮಕ್ಕಳು ಸ್ವಂತ ಅಕ್ಕ-ತಂಗಿಯ ಮಕ್ಕಳಾಗಿದ್ದು, ಮಕ್ಕಳನ್ನು ಕಳೆದುಕೊಂಡ ತಾಯಿಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ಪೋಷಕರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಎಸಿಪಿ ಶ್ರೀನಿವಾಸ್ ಕುಮಾರ್ ತಿಳಿಸಿದ್ದಾರೆ.

    ಕಾರಿನ ಮಾಲೀಕರು ಕಾರನ್ನು ಲಾಕ್ ಮಾಡದೇ ನಿಲ್ಲಿಸಿದ್ದಾರೆ. ಈ ವೇಳೆ ಮಕ್ಕಳು ಆಟವಾಡಲು ಕಾರಿನೊಳಗೆ ಹೋಗಿದ್ದಾರೆ. ಆಗ ಆಕಸ್ಮಿಕವಾಗಿ ಕಾರಿನ ಬಾಗಿಲು ಲಾಕ್ ಆಗಿದೆ. ಈ ವೇಳೆ ಮಕ್ಕಳಿಗೆ ಹೊರಗೆ ಬರಲು ಸಾಧ್ಯವಾಗದೇ ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಪೂಜಾರಿಗಳ ಜಗಳದಿಂದ ವಿಜಯಪುರದ ಪ್ರಸಿದ್ಧ ದೇವಸ್ಥಾನಕ್ಕೆ ಬೀಗ

    ಪೂಜಾರಿಗಳ ಜಗಳದಿಂದ ವಿಜಯಪುರದ ಪ್ರಸಿದ್ಧ ದೇವಸ್ಥಾನಕ್ಕೆ ಬೀಗ

    ವಿಜಯಪುರ: ಪೂಜಾರಿಗಳ ಜಗಳದಿಂದ ದೇವಸ್ಥಾನಕ್ಕೆ ಬೀಗ ಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ನಗರದ ಸುಪ್ರಸಿದ್ಧ ಆದಿಲ್ ಶಾಹಿ ಕಾಲದ ಪವಾಡ ಬಸವೇಶ್ವರ ದೇವಸ್ಥಾನದ ಪೂಜೆ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದು, ಗರ್ಭಗುಡಿಗೆ ಬೀಗ ಹಾಕಲಾಗಿದೆ.

    ಚಿನ್ನಿ ಕಾಲಿಮಠ ಮತ್ತು ನಂದಿಕೋಲಮಠ ಕುಟುಂಬಗಳು ಇಲ್ಲಿ 30 ವರ್ಷಗಳಿಂದ ಪೂಜೆ ಮಾಡುತ್ತಲೇ ಬಂದಿವೆ. ಚಿನ್ನಿಕಾಲಿಮಠ 11 ತಿಂಗಳು ಮತ್ತು ನಂದಿಕೋಲಮಠ 1 ತಿಂಗಳು ಪೂಜೆ ಮಾಡುವುದಾಗಿ ತೀರ್ಮಾನವಾಗಿತ್ತು. ಆದರೆ ಇದಕ್ಕೆ ಒಪ್ಪದ ನಂದಿಕೋಲಮಠ ಮತ್ತು ಚಿನ್ನಿಕಾಲಿಮಠ ಕುಟುಂಬಸ್ಥರು ಆಗಾಗ ಬಡಿದಾಡುತ್ತಿದ್ದರು. ಮತ್ತೆ ಭಾನುವಾರ ಬೆಳಿಗ್ಗೆ ಪೂಜೆ ಮಾಡಲು ಎರಡು ಕುಟುಂಬಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಗರ್ಭಗುಡಿಗೆ ಎರಡು ಕುಟುಂಬದವರು ಪ್ರತ್ಯೇಕ ಬೀಗ ಜಡಿದಿದ್ದಾರೆ. ಇದರಿಂದ ದೇವರ ದರ್ಶನಕ್ಕಾಗಿ ಬಂದ ನೂರಾರು ಭಕ್ತರು ದೇವರ ದರ್ಶನ ಪಡೆಯದೆ ವಾಪಸ್ ಹೋಗಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಗಲಾಟೆಗೆ ಬೇಸತ್ತ ಮಠದ ಕಮಿಟಿ ಮತ್ತು ಭಕ್ತರು ಆಕ್ರೋಶಗೊಂಡು ಇವರಿಬ್ಬರ ಮೇಲೂ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಅಧಿಕಾರಿಗಳನ್ನ ಕಚೇರಿಯೊಳಗೆ ಕೂಡಿಟ್ಟ ರೈತರು!

    ಅಧಿಕಾರಿಗಳನ್ನ ಕಚೇರಿಯೊಳಗೆ ಕೂಡಿಟ್ಟ ರೈತರು!

    ಮೈಸೂರು: ಲೋಕಸಭಾ ಚುನಾವಣೆಯ ಕರ್ತವ್ಯದ ನೆಪ ಹೇಳುತ್ತಾ ನಾಲೆಗಳಿಗೆ ನೀರು ಹರಿಸುವುದನ್ನು ಮರೆತ ಅಧಿಕಾರ ವರ್ಗಕ್ಕೆ ರೈತರು ಬಿಸಿ ಮುಟ್ಟಿಸಿದ್ದಾರೆ.

    ಮೈಸೂರಿನ ಟಿ. ನರಸೀಪುರದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ರೈತರು ಅಧಿಕಾರಿಗಳನ್ನು ಕೂಡಿ ಹಾಕಿ ಕಚೇರಿಗೆ ಬೀಗ ಹಾಕಿದ್ದಾರೆ. ರೈತರು ಅನೇಕ ದಿನಗಳಿಂದ ನಾಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಚುನಾವಣೆಯ ಕೆಲಸ ಇದೆ ಎಂದು ನೆಪ ಹೇಳುತ್ತಾ ನೀರು ಹರಿಸುವುದನ್ನೇ ಮರೆತಿದ್ದಾರೆ.

    ನಾಲೆಯ ನೀರನ್ನೇ ನಂಬಿಕೊಂಡು ನೂರಾರು ರೈತರು ಜೀವನ ಸಾಗಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಅವರು ಅಧಿಕಾರಿಗಳನ್ನು ಕಚೇರಿಯೊಳಗೆ ಕೂಡಿ ಹಾಕಿದ್ದು, ಕೂಡಲೆ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು.

    ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರು ಬಿಡುವ ದಿನಾಂಕ ತಿಳಿಸುವವರೆಗೂ ಕಚೇರಿಯ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಅಧಿಕಾರಿಗಳು ಬಂದು ಸಮಾಧಾನ ಮಾಡಿ ಕಚೇರಿಯ ಬೀಗ ತೆಗೆಸಿದ್ದಾರೆ.

  • ತಮಿಳು ನಟ ವಿಶಾಲ್ ಬಂಧನ

    ತಮಿಳು ನಟ ವಿಶಾಲ್ ಬಂಧನ

    ಚೆನ್ನೈ: ತಮಿಳು ಚಿತ್ರ ನಿರ್ಮಾಪಕರ ಸಂಘದ (ಟಿಎಫ್‍ಪಿಸಿ) ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಕ್ಕೆ ನಟ, ನಿರ್ಮಾಪಕ ವಿಶಾಲ್ ಅವರನ್ನು ಗುರುವಾರ ಚೆನ್ನೈನ ಟಿ. ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಡಿಸೆಂಬರ್ 19 ರಂದು ಕೆಲ ನಿರ್ಮಾಪಕರು ವಿಶಾಲ್ ಅವರ ವಿರುದ್ಧ ಪ್ರತಿಭಟನೆ ಮಾಡಿ ಚೆನ್ನೈನ ಟಿ. ನಗರ ಹಾಗೂ ಅಣ್ಣ ಸಲೈನಲ್ಲಿರುವ ತಮಿಳು ನಿರ್ಮಾಪಕರ ಸಂಘದ ಕಚೇರಿಗೆ ಬೀಗ ಹಾಕಿದ್ದರು. ವಿಶಾಲ್ ಅವರು 2015ರಲ್ಲಿ ನಡೆದ ಟಿಎಫ್‍ಪಿಸಿ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಅಧ್ಯಕ್ಷರಾದ ಮೇಲೆ ಮರೆತಿದ್ದಾರೆ ಎಂದು ಆರೋಪಿಸಿ ಕೆಲ ನಿರ್ಮಾಪಕರು ಅವರ ವಿರುದ್ಧ ಪ್ರತಿಭಟನೆ ಮಾಡಿದ್ದರು.

    ಇಂದು ವಿಶಾಲ್ ಹಾಗೂ ಇತರೆ ಸದಸ್ಯರು ಟಿಎಫ್‍ಪಿಸಿ ಕಚೇರಿಗೆ ಬಂದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಟಿಎಫ್‍ಪಿಸಿಗೆ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಕಚೇರಿಗೆ ಬೀಗ ಹಾಕಿದ್ದಾರೆ ಅದಕ್ಕೆ ನೀವು ಸಾಥ್ ಕೊಟ್ಟಿದ್ದೀರಿ. ಒಂದು ವೇಳೆ ಕಚೇರಿಯಲ್ಲಿ ಮುಖ್ಯವಾದ ಕೆಲಸವಿದ್ದರೆ ಸದಸ್ಯರು ಹೋಗೋದು ಹೇಗೆ? ಕಚೇರಿ ಕೆಲಸ ನಿಲ್ಲಿಸಿದರೆ ನಷ್ಟ ಯಾರಿಗೆ ಎಂದು ಪೊಲೀಸರನ್ನು ವಿಶಾಲ್ ಪ್ರಶ್ನಿಸಿದ್ದಾರೆ. ಹಾಗೆಯೆ ಕೆಲ ಕಾಲ ಪೊಲೀಸ್ ಸಿಬ್ಬಂದಿ ಹಾಗೂ ವಿಶಾಲ್ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ವಿಶಾಲ್ ಹಾಗೂ ಅವರ ಸಹಚರರು ಕಚೇರಿ ಬೀಗ ಒಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶಾಲ್ ಅವರನ್ನು ಬಂಧಿಸಿದ್ದಾರೆ.

    ಈ ಘಟನೆ ಕುರಿತು ನಟ ವಿಶಾಲ್ ಪ್ರತಿಕ್ರಿಯಿಸಿ, ನಾನು ಪೊಲೀಸರಿಗೆ ಹಾಗೂ ಅವರ ಕೆಲಸಕ್ಕೆ ಗೌರವ ನೀಡುತ್ತೇನೆ. ಆದರೆ ಕೆಲವು ದಾಖಲೆಗಳು ಹಾಗೂ ಲೆಕ್ಕದ ಪುಸ್ತಕಗಳನ್ನು ಇಡಲು ಕಚೇರಿ ಬೀಗ ಒಡೆಯಲು ಯತ್ನಿಸಿದೆ ಅಷ್ಟೇ ಎಂದು ಹೇಳಿದ್ದಾರೆ.

    ಟಿಎಫ್‍ಪಿಸಿಗೆ ಸಂಬಂಧವಿಲ್ಲದ ಜನರು ಕಚೇರಿಯ ಬೀಗ ಹಾಕಿಸಿದ್ದಾರೆ. ಆದರೆ ಪೊಲೀಸರು ಯಾವ ತಪ್ಪು ಮಾಡದಿದ್ದರೂ ನನ್ನನ್ನು ಹಾಗೂ ನನ್ನ ಜೊತೆಗಾರರನ್ನು ಬಂಧಿಸಿದ್ದಾರೆ. ಇದನ್ನು ನಂಬಲಾಗುತ್ತಿಲ್ಲ. ನಾವು ಈ ಪ್ರಕರಣದ ವಿರುದ್ಧ ಹೋರಾಡುತ್ತೇವೆ. ಇಳೆಯರಾಜ ಅವರ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿ ಕಷ್ಟದಲ್ಲಿರುವ ನಿರ್ಮಾಪಕರಿಗೆ ಸಹಾಯ ಮಾಡುತ್ತೇವೆ ಎಂದು ನಟ ವಿಶಾಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಸದ್ಯ ವಿಶಾಲ್, ಮಂಸೂರ್ ಅಲಿ ಖಾನ್ ಹಾಗೂ ಟಿಎಫ್‍ಪಿಸಿಯ ಇತರೆ ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ!

    ಪ್ರವಾಸಿಗರ ಆಕರ್ಷಣೆಯ ಕೇಂದ್ರ, ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ!

    ಮೈಸೂರು: ಜಿಲ್ಲೆಗೆ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ ಬಿದ್ದಿದೆ. ಅರಮನೆ ದುರಸ್ತಿಯಲ್ಲಿದೆ ಎಂದು ಅರಮನೆಯ ಮುಖ್ಯ ದ್ವಾರಕ್ಕೆ ಫಲಕ ಹಾಕಲಾಗಿದೆ.

    ಎರಡು ತಿಂಗಳ ಕಾಲ ಜಗನ್ಮೋಹನ ಅರಮನೆ ನೋಡಿ ಆನಂದಿಸುವ ಭಾಗ್ಯ ಪ್ರವಾಸಿಗರಿಗೆ ಇಲ್ಲವಾಗಿದೆ. ಅದರಲ್ಲೂ ದಸರಾ ವೇಳೆ ಮೈಸೂರಿಗೆ ಬರುವ ಪ್ರವಾಸಿಗರಿಗೆ ಅರಮನೆ ನೋಡುವ ಭಾಗ್ಯ ಸಿಗುವುದಿಲ್ಲ. ಆರ್ಟ್ ಗ್ಯಾಲರಿಯ ಮೇಲ್ಛಾವಣಿಯ ಒಂದು ಭಾಗ ಕುಸಿದ ಕಾರಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಜಗನ್ಮೋಹನ ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.

    ಅಂಬಾ ವಿಲಾಸ ಅರಮನೆ ಬೆಂಕಿಗೆ ಆಹುತಿಯಾದಾಗ ಇದೇ ಅರಮನೆಯಲ್ಲಿ ರಾಜ ಮನೆತನದವರು ವಾಸ ಮಾಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪಟ್ಟಾಭಿಷೇಕ ಮಹೋತ್ಸವ ಇದೇ ಅರಮನೆಯಲ್ಲಿ ನಡೆದಿತ್ತು. 1861 ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ನಿರ್ಮಾಣಗೊಂಡ ಅರಮನೆಯಲ್ಲಿ ಅಂದಿನಿಂದಲೂ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಭಾಗದಲ್ಲಿ ವೇದಿಕೆ ಸಭಾಂಗಣ ಮತ್ತೊಂದು ಭಾಗದಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದ ಅರಮನೆಗೆ ಈಗ ಬೀಗ ಬಿದ್ದಿದೆ.

    ರಾಜ ಮನೆತನದ ಆಡಳಿತಾವಧಿಯನ್ನು ನೆನಪಿಸುವಂತಹ ಸನ್ನಿವೇಶಗಳು ಜಗನ್ಮೋಹನ ಅರಮನೆಯ ಪ್ರಮುಖ ಆಕರ್ಷಣೆಯಾಗಿತ್ತು. ಶಸ್ತ್ರಾಸ್ತ್ರಗಳು, ತೈಲ ವರ್ಣದ ಚಿತ್ರಗಳು, ಪರಂಪರೆಯನ್ನ ಬಿಂಬಿಸುವ ವಸ್ತುಗಳು, ರಾಜಮಹಾರಾಜರ ಚಿತ್ರಗಳು ಆರ್ಟ್ ಗ್ಯಾಲರಿಯ ವಿಶೇಷವಾಗಿತ್ತು. ಮೈಸೂರಿಗೆ ಬರುವ ಪ್ರವಾಸಿಗರು ಜಗನ್ಮೋಹನ ಅರಮನೆ ವೀಕ್ಷಿಸದೆ ವಾಪಸ್ ಹೋಗುತ್ತಿರಲಿಲ್ಲ. ಇಂತಹ ಪ್ರವಾಸಿ ಕೇಂದ್ರಕ್ಕೆ ದಸರಾ ವೇಳೆ ಬೀಗ ಬಿದ್ದಿರುವುದು ವಿಪರ್ಯಾಸವಾಗಿದೆ.

    ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಇಲ್ಲಿನ ವ್ಯಾಪಾರಸ್ಥರ ಹೊಟ್ಟೆಗೂ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಹೀಗಾಗಿ ಜಗನ್ಮೋಹನ ಅರಮನೆ ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಿ ದಸರಾ ವೇಳೆಗೆ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ

    ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ

    ಮೈಸೂರು: ಜಿಲ್ಲೆಯ ಟಿ.ನರಸೀಪುರದ ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಗ್ರಾಮಸ್ಥರೇ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪುರಾತತ್ವ ಇಲಾಖೆಯ ವಿರುದ್ಧ ಅನಿರ್ಧಿಷ್ಟ ಪ್ರತಿಭಟನೆ ಆರಂಭಿಸಿದ್ದು, ದೇಗುಲದ ಮುಂಭಾಗವೇ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ಬಂದ ಹಣವನ್ನ ಬಿಡುಗಡೆ ಮಾಡಿಲ್ಲ. ಮನೆ ನಿರ್ಮಾಣಕ್ಕೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

    ದೇಗುಲದ ಸುತ್ತಲಿನ ಯಾವುದೇ ದಿಕ್ಕಿನಲ್ಲಿ 100ಮೀ. ವ್ಯಾಪ್ತಿಯಲ್ಲಿ ಯಾರೂ ಮನೆ ಕಟ್ಟುವಂತಿಲ್ಲ ಎಂದು 2010ರಲ್ಲಿ ಕೇಂದ್ರ ಸರ್ಕಾರ ಆದೇಶಿಸಿ. ಆದರೆ 100 ಮೀ. ವ್ಯಾಪ್ತಿಯ ಹೊರತುಪಡಿಸಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇದಕ್ಕೆ ವಿವಿಧ ಯೋಜನೆಯಡಿ ಬಂದ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

    ಸೋಮನಾಥೇಶ್ವರ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ. ಇಂದು ಸಹ ಅನೇಕ ವಿದೇಶಿಗರ ಆಗಮನವಾಗಿದೆ. ಆದರೆ ಗೇಟ್‍ಗೆ ಬೀಗ ಹಾಕಿರುವುದನ್ನ ಕಂಡು ವಾಪಾಸ್ ಹೋಗುತ್ತಿದ್ದಾರೆ.

  • ಅಡ್ಮಿಷನ್ ಬಳಿಕ ಬೀಗ ಹಾಕಿದ ಶಾಲೆ: ವಿದ್ಯಾರ್ಥಿಗಳ ಪರದಾಟ!

    ಅಡ್ಮಿಷನ್ ಬಳಿಕ ಬೀಗ ಹಾಕಿದ ಶಾಲೆ: ವಿದ್ಯಾರ್ಥಿಗಳ ಪರದಾಟ!

    ಬೀದರ್: ನಗರದ ಮಹಾದೇವ್ ಕಾಲೋನಿಯಲ್ಲಿ ಖಾಸಗಿ ಶಾಲೆಯೊಂದು ಅಡ್ಮಿಷನ್ ಮಾಡಿಕೊಂಡ ಬಳಿಕ ಬೀಗ ಹಾಕಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ.

    ಶಿಕ್ಷಣ ಹಕ್ಕು ಕಾಯ್ದೆಯಡಿ ಅನುದಾನವಿಲ್ಲದ ಖಾಸಗಿ ಶಾಲೆಯಲ್ಲಿ ಸೇರಿರೋ ಮಕ್ಕಳ ಸ್ಥಿತಿ ಡೋಲಾಯಮಾನವಾಗಿದೆ. ನಗರದ ಮಹಾದೇವ್ ಕಾಲೋನಿಯಲ್ಲಿನ ಶೆಡ್ ನಲ್ಲಿ ನಡೆಸುತ್ತಿದ್ದ ಭಾರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಬೀಗ ಬಿದ್ದಿದೆ. ಶಾಲೆಗೆ ಅನುದಾನವಿಲ್ಲದ ಕಾರಣ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚಿದ್ದಾರೆ.

    ಶೈಕ್ಷಣಿಕ ವರ್ಷದಲ್ಲಿ ಆರ್ ಟಿಇ ವತಿಯಿಂದ 10 ಹಾಗೂ ಇತರೆ 60 ವಿದ್ಯಾರ್ಥಿಗಳು ಭಾರತಿ ಶಾಲೆಗೆ ದಾಖಲಾಗಿದ್ದರು. ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಅಡ್ಮಿಷನ್ ನಂತರ ಅನುದಾನ ಸಿಕ್ಕಿಲ್ಲವೆಂದು ಶಾಲೆಗೆ ಏಕಾಏಕಿ ಬೀಗ ಹಾಕಿದೆ.

    ಶಾಲೆಗೆ ದಿಢೀರನೇ ಬೀಗ ಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಂಗಾಲಾಗಿದ್ದಾರೆ. ಇದರಿಂದಾಗಿ ಮಕ್ಕಳ ಟಿಸಿ ಹಾಗೂ ಮಾಕ್ಸ್ ಕಾರ್ಡ್ ಸಿಗದೇ ಬೇರೆ ಶಾಲೆಗೆ ಅಡ್ಮಿಷನ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನೀರಿನ ದರೋಡೆ ತಪ್ಪಿಸಲು ಗ್ರಾಮಸ್ಥರಿಂದ ಡ್ರಮ್‍ಗಳಿಗೆ ಬೀಗ!

    ನೀರಿನ ದರೋಡೆ ತಪ್ಪಿಸಲು ಗ್ರಾಮಸ್ಥರಿಂದ ಡ್ರಮ್‍ಗಳಿಗೆ ಬೀಗ!

    ಜೈಪುರ: ಭಾರತದ ಹಲವು ರಾಜ್ಯಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದ್ದು, ರಾಜಸ್ಥಾನದ ಹಲವು ಗ್ರಾಮಗಳಲ್ಲಿ ಸಂಗ್ರಹಿಸಿರುವ ನೀರಿನ ದರೋಡೆ ತಪ್ಪಿಸಲು ಅಲ್ಲಿನ ಗ್ರಾಮಸ್ಥರು ಡ್ರಮ್ ಗಳಿಗೆ ಬೀಗ ಹಾಕಿ ರಕ್ಷಣೆ ಮಾಡುತ್ತಿದ್ದಾರೆ.

    ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಬಿಸಿಲಿನ ತಾಪಮಾನ 45 ಡಿಗ್ರಿ ದಾಟಿದ್ದು, ನೀರಿನ ಕೊರತೆ ಅಧಿಕವಾಗಿದೆ. ಈ ವೇಳೆ ತಮ್ಮ ಮನೆ ಅಂಗಳದಲ್ಲಿ ಸಂಗ್ರಹಿಸಿರುವ ನೀರನ್ನು ರಕ್ಷಿಸಿಕೊಳ್ಳುವುದು ಮತ್ತೊಂದು ಸಮಸ್ಯೆಯಾಗಿದ್ದು, ಅದಕ್ಕಾಗಿ ಹಲವು ಗ್ರಾಮಗಳಲ್ಲಿ ಡ್ರಮ್ ಗಳಿಗೆ ಬೀಗ ಹಾಕಿರುವ ದೃಶ್ಯಗಳು ಕಾಣಸಿಗುತ್ತದೆ.

    ಸ್ಥಳೀಯ ಪರಸರಾಂಪುರ ಗ್ರಾಮಕ್ಕೆ ವಾರಕ್ಕೆ ಒಮ್ಮೆ ಮಾತ್ರ ನೀರನ್ನು ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಸಂಸ್ಥೆ ಪೂರೈಸುತ್ತಿದ್ದು, ಈ ನೀರನ್ನು ಸಹ ದರೋಡೆಕೋರರು ಲೂಟಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಿದೆ. ಅದ್ದರಿಂದ ಮನೆ ಹೊರಾಂಗಣದಲ್ಲಿರುವ ಡ್ರಮ್ ಗಳಿಗೆ ಬೀಗ ಹಾಕಿ ನೀರನ್ನು ರಕ್ಷಣೆ ಮಾಡುತ್ತಿರುವುದಾಗಿ ಸ್ಥಳೀಯ ಮಾಧ್ಯಮವೊಂದಕ್ಕೆ ಗ್ರಾಮಸ್ಥರು ತಿಳಿಸಿದ್ದಾರೆ.

    ಯಾವ ಸಮಯದಲ್ಲಿ ಬಂದು ಕಳ್ಳತನ ಮಾಡುತ್ತಾರೆ ಎಂನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಲವು ವೇಳೆ ರಾತ್ರಿ ಸಮಯದಲ್ಲಿ ದರೋಡೆಕೋರರು ಬಂದು ನೀರನ್ನು ಲೂಟಿ ಮಾಡಿದ್ದಾರೆ. ಇದರಿಂದ ಕುಡಿಯಲು ನೀರಲ್ಲದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಕಳ್ಳತನವಾಗದೇ ಇರಲು ಈ ಮಾರ್ಗ ಕಂಡುಕೊಂಡಿರುವುದಾಗಿ ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದಾರೆ.

    ಸ್ಥಳೀಯ ಪಂಚಾಯಿತಿ ನೀರಿನ ಮಿತ ಬಳಕೆಗೆ ಸಲಹೆ ನೀಡಿದೆ. ಹಲವರು ನೀರಿಗಾಗಿ ಹೋರಾಟ ಮಾಡುತ್ತಾರೆ. ಮೂರು ದಿನಕ್ಕೆ ಒಮ್ಮೆಯಾದರೂ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮದ ಮಹಿಳೆ ತಿಳಿಸಿದ್ದಾಗಿ ವರದಿಯಾಗಿದೆ. ಇನ್ನು ಮಧ್ಯಪ್ರದೇಶ, ಉತ್ತರಾಖಂಡ, ಛತ್ತೀಸ್‍ಗಢ ರಾಜ್ಯಗಳ ಹಲವು ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇರುವುದಾಗಿ ವರದಿಯಾಗಿದೆ.

  • 4 ಗಂಟೆಗೂ ಅಧಿಕ ಕಾರೊಳಗೆ ಬಾಲಕ- ಶಾಲಾಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಕಂದಮ್ಮ ಬಲಿ

    4 ಗಂಟೆಗೂ ಅಧಿಕ ಕಾರೊಳಗೆ ಬಾಲಕ- ಶಾಲಾಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಕಂದಮ್ಮ ಬಲಿ

    ಭೋಪಾಲ್: ಶಾಲಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿನ ಹೋಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ನೈತಿಕ್ ಗೌರ್ ಎಂದು ಗುರುತಿಸಲಾಗಿದೆ. ಈತ ಹೋಶಂಗಾಬಾದ್ ನಲ್ಲಿರೋ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದನು. ಈ ಘಟನೆ ಮಾರ್ಚ್ 19ರಂದು ನಡೆದಿದ್ದು, ಬಾಲಕ ಭಾನುವಾರ ಮೃತಪಟ್ಟಿದ್ದಾನೆ.

    ಏನಿದು ಘಟನೆ?: ಶಾಲೆಯ ಅಧಿಕಾರಿಗಳು ಬಾಲಕನನ್ನು ಕಾರೊಳಗೆ ಲಾಕ್ ಮಾಡಿ ಹೋಗಿದ್ದಾರೆ. ಹೀಗಾಗಿ ಬರೋಬ್ಬರಿ 4 ಗಂಟೆಗೂ ಅಧಿಕ ಕಾಲ ಕಾರೊಳಗಿದ್ದರಿಂದ ಬಾಲಕನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ.

    ಶಾಲೆಯ ಅಧಿಕಾರಿಗಳು ನೈತಿಕ್ ನನ್ನು 4 ಗಂಟೆಗೂ ಅಧಿಕ ಕಾರೊಳಗೆ ಕೂಡಿ ಹಾಕಿದ್ದರಿಂದ ಆತ ಉಸಿರಾಟದ ತೊಂದರೆ ಅನುಭವಿಸಿದ್ದಾನೆ. ಅಲ್ಲದೇ ಘಟನೆಯಿಂದ ಆತ ಶಾಕ್ ಗೊಳಗಾಗಿದ್ದಾನೆ ಅಂತ ವೈದ್ಯರು ತಿಳಿಸಿದ್ದರು. ಶಾಲೆಯ ಅಧಿಕಾರಿಗಳು ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಅಂತ ನೈತಿಕ್ ಪೋಷಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣವನ್ನು ಸಿಬಿಐ ತನಿಖೆ ಮಾಡುವಂತೆ ಬಾಲಕನ ಪೋಷಕರು ಒತ್ತಾಯಿಸಿದ್ದಾರೆ.

    ಕಾರಿನಿಂದಿಳಿಯಲು ನಿರಾಕರಣೆ: ಶಾಲೆಯ ನಿರ್ದೇಶಕ ಹಾಗೂ ಕೆಲ ಶಿಕ್ಷಕರ ಜೊತೆ ನೈತಿಕ್ ನನ್ನು ಕಾರಿನಲ್ಲಿ ಶಾಲೆಗೆ ಕಳುಹಿಸಿಕೊಡಲಾಗಿತ್ತು. ಶಾಲೆಗೆ ತಲುಪಿದ ಬಳಿಕ ನೈತಿಕ್ ಕಾರಿನಿಂದ ಇಳಿಯಲು ನಿರಾಕರಿಸಿದ್ದಾನೆ. ಹೀಗಾಗಿ ಶಾಲಾ ನಿರ್ದೇಶಕರು ಆತನನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿ ಹೋಗಿದ್ದಾರೆ. ನಂತರ ಶಿಕ್ಷಕಿಯೊಬ್ಬರಲ್ಲಿ ಬಾಲಕನನ್ನು ಕಾರಿನಿಂದಿಳಿಸಿ ಕರೆತರುವಂತೆ ಹೇಳಿದ್ದಾರೆ. ಆದ್ರೆ ಶಿಕ್ಷಕಿ ಇದನ್ನು ಮರೆತಿದ್ದು, ಹೀಗಾಗಿ ಬಾಲಕ ಬರೋಬ್ಬರಿ 4 ಗಂಟೆಗೂ ಅಧಿಕ ಕಾರಿನೊಳಗಡೆಯೇ ಇದ್ದನು. ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗದೇ ತೊಂದರೆ ಅನುಭವಿಸಿದ್ದ ಎಂದು ಅಂತ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಘಟನೆ ಸಂಬಂಧ ಹೋಶಂಗಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.