Tag: lock down

  • ಲಾಕ್‍ಡೌನ್ ನಿರ್ಧಾರದಿಂದ ಕೊರೊನಾ ನಿಯಂತ್ರಣವಾಗುತ್ತಾ? ಗ್ರಾಫ್ ಏನು ಹೇಳುತ್ತೆ?

    ಲಾಕ್‍ಡೌನ್ ನಿರ್ಧಾರದಿಂದ ಕೊರೊನಾ ನಿಯಂತ್ರಣವಾಗುತ್ತಾ? ಗ್ರಾಫ್ ಏನು ಹೇಳುತ್ತೆ?

    ಬೆಂಗಳೂರು: 21 ದಿನಗಳ ಲಾಕ್‍ಡೌನ್ ನಿಂದ ಕೊರೊನಾ ನಿಯಂತ್ರಿಸಬಹುದೇ? ಕೊರೊನಾ ನಿಯಂತ್ರಣವಾಗದೇ ಇದ್ದರೆ ಮತ್ತೆ ಲಾಕ್‍ಡೌನ್ ಇರುತ್ತಾ ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಣ್ಣ ಶುಭ ಸುದ್ದಿ ಸಿಕ್ಕಿದೆ. ಎರಡು ದಿನಗಳಿಂದ ಕೊರೊನಾ ಪ್ರಕರಣಗಳು ಕಡಿಮೆಯಾಗಿದೆ.

    ಸಾಧಾರಣವಾಗಿ ಕೊರೊನಾ ಕಂಡು ಬಂದ ಮೊದಲ ಎರಡು ವಾರದಲ್ಲಿ ಹರಡುವ ತೀವ್ರತೆ ಕಡಿಮೆ ಇರುತ್ತದೆ. ಮೂರು, ನಾಲ್ಕು ವಾರದಲ್ಲಿ ಸಂಖ್ಯೆ ದುಪ್ಪಟ್ಟು ಆಗುತ್ತದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಹೋಗುತ್ತದೆ.

    ಶುಭ ಸುದ್ದಿ ಏನೆಂದರೆ ಶನಿವಾರ, ಭಾನುವಾರ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆ ದಾಖಲಾಗಿದೆ. ಶುಕ್ರವಾರ 151 ಪ್ರಕರಣ ದಾಖಲಾಗಿತ್ತು. ಶುಕ್ರವಾರ ಒಂದೇ ಬಾರಿಗೆ 151 ಪ್ರಕರಣ ಬೆಳಕಿಗೆ ಬಂದಿದ್ದನ್ನು ಗಮನಿಸಿದಾಗ ಶನಿವಾರ, ಭಾನುವಾರ ಏರಿಕೆ ಆಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಶನಿವಾರ, ಭಾನುವಾರ ಕಡಿಮೆ ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಮೂರು, ನಾಲ್ಕು ವಾರಗಳಲ್ಲಿ ಪ್ರಕರಣಗಳು ಏರಿಕೆ ಆಗುತ್ತಲೇ ಹೋಗುತ್ತಿತ್ತು. ಆದರೆ ಭಾರತದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗಿಲ್ಲ. ಹೀಗಾಗಿ ಇಲ್ಲಿ ಕೋವಿದ್19ಇಂಡಿಯಾ ವೆಬ್‍ಸೈಟ್ ನೀಡಿರುವ ಮಾಹಿತಿಯನ್ನು ನೀಡಲಾಗಿದೆ.

    ಯಾವ ದಿನ ಎಷ್ಟು ಪ್ರಕರಣ ಬಂದಿದೆ?
    ಮಾ.22 – 403(+69)
    ಮಾ.23 – 505(+102)
    ಮಾ.24 – 571(+66)
    ಮಾ.25 – 657(+86)
    ಮಾ.26 – 735(+78)
    ಮಾ.27 – 886(+151)
    ಮಾ.28 – 1029(+143)
    ಮಾ.29 – 1139(+110)

    ಕೊರೊನಾ ಸಾವಿನ ಪ್ರಕರಣಗಳು ಗಣನೆಗೆ ತೆಗೆದುಕೊಂಡಾಗ ಆತಂಕ ಎದುರಾಗುತ್ತದೆ. ಸೋಮವಾರ ಮಧ್ಯಾಹ್ನದವರೆಗೆ ಒಟ್ಟು ದೇಶದಲ್ಲಿ ಒಟ್ಟು 1192 ಮಂದಿಗೆ ಕೊರೊನಾ ಬಂದಿದ್ದು, 29 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 102 ಮಂದಿ ಗುಣಮುಖರಾಗಿದ್ದು, 1061 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರೂಕಿಂಗ್ ಇಂಡಿಯಾದ ಪ್ರಕಾರ ಒಂದು ವೇಳೆ ಲಾಕ್‍ಡೌನ್ ಘೋಷಣೆ ಮಾಡದೇ ಇದ್ದಲ್ಲಿ ಮಾರ್ಚ್ 2095 ಪ್ರಕರಣಗಳು ದಾಖಲಾಗಬೇಕಿತ್ತು.

    ಎರಡು ದಿನ ಪ್ರಕರಣ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ನಾವು ಅಪಾಯದಿಂದ ಪಾರಾಗಿದ್ದೇವೆ ಎಂದರ್ಥವಲ್ಲ. ಸೋಂಕು ತಗಲಿದ 10, 11 ದಿನದ ಬಳಿಕ ಕೊರೊನಾದ ಲಕ್ಷಣಗಳು ಕಾಣಿಸಲು ಆರಂಭಿಸುತ್ತದೆ. ಹೀಗಾಗಿ ಈ ವಾರ ಮತ್ತು ಮುಂದಿನ ವಾರ ಭಾರತದ ಪಾಲಿಗೆ ನಿರ್ಣಾಯಕವಾಗಿದೆ.

    ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಭಾರತ ಮಾರ್ಚ್ 22 ರಿಂದ ರದ್ದು ಮಾಡಿತ್ತು. ಹೀಗಾಗಿ ಮಾರ್ಚ್ ಮೂರು ಮತ್ತು ನಾಲ್ಕನೇಯ ವಾರದಲ್ಲಿ ಹಲವು ಮಂದಿ ವಿದೇಶದಿಂದ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ಮಂದಿಗೆ ಕೊರೊನಾ ಬರುವ ಸಾಧ್ಯತೆಯಿದೆ. ಆದರೆ ಅವರು ಈಗಾಗಲೇ ಕ್ವಾರಂಟೈನಲ್ಲಿದ್ದು, ಕ್ವಾರಂಟೈನ್ ನಿಯಮಗಳನ್ನ ಸರಿಯಾಗಿ ಪಾಲಿಸಿದ್ದರೆ ಕೊರೊನಾ ಹರಡುವ ಸಾಧ್ಯತೆ ಕಡಿಮೆಯಿದೆ.

    ಲಾಕ್‍ಡೌನ್ ನಿರ್ಧಾರ ಪ್ರಕಟವಾಗುವ ಮೊದಲೇ ಭಾರತ ಸರ್ಕಾರ ಹಲವು ದೇಶಗಳ ಮೇಲೆ ನಿರ್ಬಂಧ ಹೇರಿತ್ತು. ಅಷ್ಟೇ ಅಲ್ಲದೇ ವಿದೇಶದಿಂದ ಬಂದವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕೆಂದು ಸೂಚಿಸಿತ್ತು. ಇದಾದ ಬಳಿಕ ರಾಜ್ಯ ಸರ್ಕಾರಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಸಾರಿಗೆ ಸಂಚಾರಕ್ಕೆ ನಿಷೇಧ ಹೇರಿತ್ತು. ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿತ್ತು. ಇದಾದ ಬಳಿಕ ಜನತಾ ಕರ್ಫ್ಯೂ ಹೇರಿ ಬಳಿಕ ನರೇಂದ್ರ ಮೋದಿಯವರು 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದರು. ಈ ಎಲ್ಲ ಕ್ರಮಗಳಿಂದಾಗಿ ಕೊರೊನಾ ಹರಡುವ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

  • ಮನೆಯಲ್ಲೇ ಇದ್ದು ಹೀರೋಗಳಾಗಿ: ಹರ್ಷಿಕಾ, ಭುವನ್ ಮನವಿ

    ಮನೆಯಲ್ಲೇ ಇದ್ದು ಹೀರೋಗಳಾಗಿ: ಹರ್ಷಿಕಾ, ಭುವನ್ ಮನವಿ

    ಮಡಿಕೇರಿ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಮಾಡಲಾಗಿದೆ. ಆದರೂ ಕೆಲವರು ಮನೆಯಿಂದ ಹೊರಬರುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ವಿರಾಜಪೇಟೆ ತಾಲೂಕಿನ ಕೊಮ್ಮೆತೂಡು ಗ್ರಾಮದಲ್ಲಿರುವ ಹರ್ಷಿಕಾ ಪೂಣಚ್ಚ ಅವರ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಮನೆಯಲ್ಲೇ ಇದ್ದು ಹೀರೋಗಳಾಗಿ ಎಂದು ಹೇಳಿದ್ದಾರೆ.

    ಮನವಿಯೇನು?:
    ದಯವಿಟ್ಟು ಕೊಡಗಿನ ಜನತೆ ಯಾರೂ ಮನೆಯಿಂದ ಹೊರಗೆ ಹೋಗಬೇಡಿ. ಸರ್ಕಾರ, ಕಾನೂನು ವಿವಿಧ ಯೋಜನೆಗಳನ್ನು ನಮ್ಮ ಜನರಿಗೆ ನೀಡಿದ್ದಾರೆ. ಇದು ನಮಗೆ ಒಳ್ಳೆಯದು ಅಗಬೇಕು ಎಂಬ ಉದ್ದೇಶದಿಂದ ಮಾಡಿದ್ದಾರೆ. ಜನಸಾಮಾನ್ಯರು ಇದನ್ನ ಅರ್ಥ ಮಾಡಿಕೊಳ್ಳುವ ಮನಸ್ಸು ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸ್ವಯಂಪ್ರೇರಿತರಾಗಿ ಬೀದಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

    ನಗರದ ಜನತೆ ಮಾತ್ರ ಈ ಕೊರೊನಾ ವೈರಸ್ ಗೂ ನಮಗೂ ಯಾವುದೇ ಸಂಬಂಧ ಇಲ್ಲ ಅನ್ನೋ ಹಾಗೆ ವರ್ತಸುತ್ತಿದ್ದಾರೆ. ದಯವಿಟ್ಟು ಮನೆಯಿಂದ ಯಾರು ಹೊರಗೆ ಬರಬೇಡಿ. ಮೊದಲು ನಿಮ್ಮ ಸೇಫ್ ಮುಖ್ಯ. ನಾವುಗಳು ಅಷ್ಟೇ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಯಾವಾಗ್ಲೂ ಶೂಟಿಂಗ್ ಅಂತ ಬ್ಯುಸಿ ಇರುತ್ತಿದ್ದೆವು. ಆದರೆ ಈಗ ಈ ಸಮಸ್ಯೆಯಿಂದ ಮನೆಯಲ್ಲೇ ಇದ್ದೇವೆ ಎಂದು ತಿಳಿಸಿದ್ದಾರೆ.

    ಒಂದು ರೀತಿಯಲ್ಲಿ ಮನೆಯಲ್ಲಿ ಇರುವುದು ಖುಷಿಯಾಗುತ್ತಿದೆ. ತಂದೆ-ತಾಯಿ ಜೊತೆ ಸಮಯ ಕಳೆಯುತ್ತಾ ಇದ್ದೀನಿ. ಮನೆಯಲ್ಲೇ ಕೆಲಸ ಮಾಡುತ್ತೇವೆ. ನಾವು ಮತ್ತು ನಮ್ಮ ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಮನೆಯಲ್ಲೇ ಇದ್ದೀವಿ. ಹಾಗೆಯೇ ತಾವು ಕೂಡ ಇರಿ. ಮನೆಯವರೊಂದಿಗೆ ನೀವು ಖುಷಿಯಿಂದ ಕೆಲಸ ಊಟ ಎಲ್ಲಾ ಮಾಡಿಕೊಂಡು ಮನೆಯ ಹೀರೋಗಳಾಗಿ ಇರಬಹುದು ಎಂದು ಇಬ್ಬರೂ ತಿಳಿಸಿದ್ದಾರೆ.

  • ವಾಹನದಲ್ಲಿ ಹೋಗಿ ದಿನಸಿ ವಸ್ತು ಖರೀದಿಸುವಂತಿಲ್ಲ: ಬೊಮ್ಮಾಯಿ

    ವಾಹನದಲ್ಲಿ ಹೋಗಿ ದಿನಸಿ ವಸ್ತು ಖರೀದಿಸುವಂತಿಲ್ಲ: ಬೊಮ್ಮಾಯಿ

    – ಬಾಡಿಗೆದಾರರ ಬಳಿ ಬಿಬಿಎಂಪಿ ಬಾಡಿಗೆ ಕೇಳುವಂತಿಲ್ಲ
    – ಬಾಡಿಗೆದಾರರಿಗೆ ತೊಂದ್ರೆ ಕೊಟ್ರೆ ಕೇಸ್

    ಬೆಂಗಳೂರು: ಇನ್ನು ಮುಂದೆ ವಾಹನದಲ್ಲಿ ತೆರಳಿ ಅಂಗಡಿಗೆ ಹೋಗುವಂತಿಲ್ಲ. ನಡೆದುಕೊಂಡೇ ಹೋಗಬೇಕೆಂದು ಕರ್ನಾಟಕ ಸರ್ಕಾರ ಹೇಳಿದೆ.

    ವಿಧಾನಸೌಧದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

    ಜನರು ದಿನಸಿ ವಸ್ತುಗಳನ್ನ ತರಲು ನಡೆದುಕೊಂಡೇ ಓಡಾಡಬೇಕು. ಯಾವುದೇ ವಾಹನ ಬಳಸುವಂತಿಲ್ಲ. ತಮ್ಮ ಏರಿಯಾದ ರಸ್ತೆಯಲ್ಲಿ ದಿನಸಿ ಖರೀದಿ ಮಾಡಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.

    ವಲಸೆ ಕಾರ್ಮಿಕರಿಗೆ ಹೊರ ಹೋಗದಂತೆ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ಅವರಿಗೆ ಊಟದ ವ್ಯವಸ್ಥೆ, ದಿನಸಿ ವ್ಯವಸ್ಥೆ ಮಾಡಲಾಗುತ್ತೆ. ಇದರ ನಿರ್ವಹಣೆ ಬಿಬಿಎಂಪಿ ಮಾಡುತ್ತೆ. ಯಾರು ಕೂಡ ಬೇರೆ ಪ್ರದೇಶಕ್ಕೆ ಹೋಗದಂತೆ ತಡೆಯಬೇಕು. ಅಯಾ ಜಿಲ್ಲೆಯಲ್ಲಿ ಡಿಸಿಗಳು ಇದರ ನಿರ್ವಹಣೆ ಮಾಡಬೇಕು. ಎಲ್ಲರಿಗೂ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸದ್ಯಕ್ಕೆ ಬಾಡಿಗೆದಾರರ ಬಳಿ ಬಾಡಿಗೆ ಕೇಳುವಂತಿಲ್ಲ. ಖಾಸಗಿಯವರೂ ಕೂಡ ಬಾಡಿಗೆ ಕೇಳಬಾರದು ಎಂಬ ವಿನಂತಿ ಮಾಡಿಕೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬಾಡಿಗೆದಾರರು ಮತ್ತು ಪಿಜಿಯಲ್ಲಿ ಇರುವವರನ್ನು ಖಾಲಿ ಮಾಡಿಸಬಾರದು. ಯಾರಾದರೂ ಬಾಡಿಗೆದಾರರಿಗೆ ತೊಂದರೆ ಕೊಟ್ಟರೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತೆ. ಡಾಕ್ಟರ್, ನರ್ಸ್ ಗಳಿಗೂ ತೊಂದರೆ ಕೊಟ್ಟರೆ ಕೇಸ್ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಬಾಡಿಗೆ ಮನೆಯವರ ಬಾಡಿಗೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಬಿಬಿಎಂಪಿ ಸದ್ಯಕ್ಕೆ ಬಾಡಿಗೆದಾರರ ಬಳಿ ಬಾಡಿಗೆ ಕೇಳೋದಿಲ್ಲ. ಖಾಸಗಿಯವರೂ ಕೂಡ ಬಾಡಿಗೆ ಕೇಳಬಾರದು ಎಂಬ ವಿನಂತಿ ಮಾಡಿ ಕೊಳ್ಳುತ್ತೇವೆ ಎಂದರು.

    ಪೊಲೀಸರು ಲಾಠಿ ಪ್ರಯೋಗ ಮಾಡಬಾರದು ಅನ್ನೋ ವಿಚಾರ ಸಂಬಂಧ ಮಾತನಾಡಿ, ಪೊಲೀಸರು ಆದಷ್ಟು ಸ್ಥಿತ ಪ್ರಜ್ಞೆಯಿಂದ ಕೆಲಸ ಮಾಡ್ತಿದ್ದಾರೆ. ಆದರೂ ಜನರು ಕೆಲವು ಕಡೆ ಮಾತು ಕೇಳ್ತಿಲ್ಲ. ಅಂತಹ ಸಂದರ್ಭದಲ್ಲಿ ಸಾಮ, ದಾನ, ಬೇಧ, ದಂಡ ಪ್ರಯೋಗ ಮಾಡಲು ಅವರ ವಿವೇಚನೆಗೆ ಬಿಟ್ಟದ್ದೇವೆ ಎಂದು ಸಭೆ ಬಳಿಕ ಗೃಹ ಸಚಿವರು ತಿಳಿಸಿದ್ದಾರೆ.

    ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ, ಸಿಎಸ್ ವಿಜಯ ಭಾಸ್ಕರ್, ಡಿಜಿ-ಐಜಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಎಲ್ಲಾ ಡಿಸಿಪಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ನಡೆಸಲಾಗಿತ್ತು.

  • ರೋಡಿಗಿಳಿದ್ರೆ ವಾಹನವೇ ಸೀಜ್- ಇತ್ತ ಎಣ್ಣೆ ಮಾರಿದ್ರೆ 500 ರೂ. ದಂಡ

    ರೋಡಿಗಿಳಿದ್ರೆ ವಾಹನವೇ ಸೀಜ್- ಇತ್ತ ಎಣ್ಣೆ ಮಾರಿದ್ರೆ 500 ರೂ. ದಂಡ

    ಹಾಸನ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಆದರೂ ಕೆಲವರು ಮನೆಯಿಂದ ಹೊರಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ರೋಡಿಗಿಳಿದ ವಾಹನವನ್ನೇ ಸೀಜ್ ಮಾಡುತ್ತಿದ್ದಾರೆ. ಇತ್ತ ಎಣ್ಣೆ ಮಾರಿದ್ರೆ 500 ರೂ. ದಂಡ ವಿಧಿಸಲಾಗುವುದು ಎಂದು ಗ್ರಾಮಸ್ಥರು ಡಂಗೂರ ಸಾರುತ್ತಿದ್ದಾರೆ.

    ಹೌದು. ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದವರ ವಾಹನವನ್ನು ಒಂದು ಕಡೆ ಪೊಲೀಸರು ಸೀಜ್ ಮಾಡಿದ್ದರೆ, ಮತ್ತೊಂದೆಡೆ ರಸ್ತೆಯಲ್ಲಿ ತಿರುಗುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಸಿ ಮನೆಯಿಂದ ಹೊರ ಬರದಂತೆ ಬುದ್ಧಿ ಹೇಳಿದ್ದಾರೆ.

    ಹಾಸನ ನಗರದಲ್ಲಿ ಇಂದು 8 ಗಂಟೆವರೆಗೆ ಮಾತ್ರ ಹಾಲು ಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೂ ಕೆಲವರು ತಮ್ಮ ವಾಹನಗಳಲ್ಲಿ ಓಡಾಡುತ್ತಿದ್ದರು. ಅಂತಹವರ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ವೇಳೆ ಕೆಲವರು ವೈದ್ಯಕೀಯ ಕಾರಣ ನೀಡಿ ತಿರುಗಾಡುತ್ತಿರುವುದಾಗಿ ಹೇಳಿದ್ರು. ಅದಕ್ಕೆ ಪೊಲೀಸರು ಅಗತ್ಯ ದಾಖಲೆ ಒದಗಿಸಿ ವಾಹನ ಬಿಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

    ಸಕಲೇಶಪುರ ತಾಲೂಕಿನ ಹೊಂಕರವಳ್ಳಿ ವೃತ್ತದಲ್ಲಿ ಸುತ್ತಾಡುತ್ತಿದ್ದ ಯುವಕರಿಗೆ ಬಸ್ಕಿ ಹೊಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಮತ್ತೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಿ ಕಳುಹಿಸಿದ್ದಾರೆ.

    ಎಣ್ಣೆ ಮಾರಿದ್ರೆ 500 ರೂ. ದಂಡ:
    ಕೊರೊನಾ ಕಫ್ರ್ಯೂ ನಡುವೆಯೂ ಕದ್ದು ಎಣ್ಣೆ ಮಾರುತ್ತಿದ್ದವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಎಣ್ಣೆ ಮಾರಿದ್ರೆ 500 ರೂ. ದಂಡ ಎಂದು ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು, ದಂಡಿಗನಹಳ್ಳಿ ಹೋಬಳಿ, ತೆಂಕನಹಳ್ಳಿ ಗ್ರಾಮದಲ್ಲಿ ಕದ್ದು ಎಣ್ಣೆ ಮಾರುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದಲ್ಲಿ ಡಂಗೂರ ಸಾರಿಸಿದ ಗ್ರಾಮಸ್ಥರು, ಕೂಡಲೇ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ನಾವು ನೇರವಾಗಿ ಎಣ್ಣೆ ಮಾರುವ ವ್ಯಕ್ತಿಯ ಮನೆಗೆ ನುಗ್ಗಲು ಆಗಲ್ಲ. ಹಾಗೇ ಮಾಡಿದ್ರೆ ಗ್ರಾಮದಲ್ಲಿ ಗಲಾಟೆ ಆಗುತ್ತೆ. ಆದ್ದರಿಂದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಆಗ್ರಹಿಸಿದ್ದಾರೆ.

  • ತೆರವುಗೊಳಿಸಿದ್ದ ಬೇಲಿ ಸರಿಪಡಿಸುತ್ತಿದ್ದ ಯುವಕರಿಬ್ಬರ ಮೇಲೆ ಚಾಕು ಇರಿತ

    ತೆರವುಗೊಳಿಸಿದ್ದ ಬೇಲಿ ಸರಿಪಡಿಸುತ್ತಿದ್ದ ಯುವಕರಿಬ್ಬರ ಮೇಲೆ ಚಾಕು ಇರಿತ

    ಶಿವಮೊಗ್ಗ: ಒಂದೆಡೆ ದೇಶವ್ಯಾಪಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್ ಡೌನ್ ಘೋಷಣೆ ಮಾಡಿದ್ದರೆ, ಇನ್ನೊಂದೆಡೆ ಮಲೆನಾಡಿನಲ್ಲಿ ರಕ್ತದ ಕಲೆ ಬಿದ್ದಿದೆ. ಅನ್ಯ ಕೋಮಿನವರು ಯುವಕರಿಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಂಕಳಲೆ ಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ಹರೀಶ್ ಹಾಗೂ ಅಶೋಕ್ ಎಂಬವರಿಗೆ ಗಾಯವಾಗಿದ್ದು, ಅಶೋಕ್ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಅಶೋಕ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಮತ್ತೊಬ್ಬ ಯುವಕನಿಗೆ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಂಕಳಲೆ ಗ್ರಾಮಸ್ಥರು ಬೇರೆ ಯಾರಿಗೂ ಗ್ರಾಮಕ್ಕೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಿ ಬೇಲಿ ಹಾಕಿದ್ದರು. ಕೆಲವು ಕಿಡಿಗೇಡಿಗಳು ಬೇಲಿಯನ್ನು ತೆರವುಗೊಳಿಸಿ ಗ್ರಾಮದ ಸಮೀಪ ಖಾಸಗಿ ಜಾಗದಲ್ಲಿ ಸುಮಾರು 15 ಮಂದಿ ತಂಡ ಇಸ್ಪೀಟು ಆಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಗದರಿಸಿ ಕಳಿಸಿದ್ದರು. ನಂತರ ತೆರವುಗೊಳಿಸಿದ್ದ ಬೇಲಿಯನ್ನು ಗ್ರಾಮದ ಯುವಕರು ಸರಿಪಡಿಸುತ್ತಿದ್ದರು. ಈ ವೇಳೆ ವಾಪಸ್ ಆಗಮಿಸಿದ ಕಿಡಿಗೇಡಿಗಳು ಅದೇ ಗ್ರಾಮದ ಇಬ್ಬರು ಯುವಕರಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಓರ್ವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬೆಂಗ್ಳೂರು ಲಾಕ್ ಡೌನ್: ಬಣಗುಡುತ್ತಿದೆ ಸಿಟಿ ಮಾರುಕಟ್ಟೆ

    ಬೆಂಗ್ಳೂರು ಲಾಕ್ ಡೌನ್: ಬಣಗುಡುತ್ತಿದೆ ಸಿಟಿ ಮಾರುಕಟ್ಟೆ

    ಬೆಂಗಳೂರು: ಮಹಾಮಾರಿ ಕೊರೊನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದ ಮಹಾಮಾರಿ ಅಟ್ಟಹಾಸದಿಂದ ಪಾರಾಗಲು ಸರ್ಕಾರ ಹೊಸ ಹೊಸ ಪ್ರಯತ್ನಗಳನ್ನ ಮಾಡುತ್ತಿದೆ.

    ಭಾನುವಾರ ದೇಶದ್ಯಾಂತ ಜನತಾ ಕಫ್ರ್ಯೂ ಮುಗಿಯುತ್ತಿದ್ದಂತೆ ಸರ್ಕಾರ ಕೊರೊನಾ ವೈರಸ್ ಹೆಚ್ಚಾಗಿ ಹರಡಿರುವ ಹಾಗೂ ಆಗುತ್ತಿರುವ ಪ್ರಮುಖ 9 ಜಿಲ್ಲೆಗಳನ್ನು ಸೂಕ್ಷ್ಮ ಜಿಲ್ಲೆಗಳನ್ನಾಗಿ ಗುರುತಿಸಿ ಲಾಕ್ ಡೌನ್ ಮಾಡಿದೆ. ಅದರಲ್ಲಿ ಬೆಂಗಳೂರು ನಗರ ಅತಿ ಸೂಕ್ಷ್ಮ ಮತ್ತು ಡೆಂಜರ್ ಜೋನ್ ನಲ್ಲಿದೆ. ಹಾಗಾಗಿ ಇದೇ ತಿಂಗಳು 31ರ ವರೆಗೆ ಬೆಂಗಳೂರು ಲಾಕ್ ಡೌನ್ ಆಗಿದೆ.

    ಪ್ರಮುಖವಾಗಿ ಜನರಿಗೆ ಬೇಕಾಗುವ ವಸ್ತುಗಳು ಸಿಗೋ ಅಂಗಡಿಗಳನ್ನ ಹೊರತುಪಡಿಸಿ ಉಳಿದ ಯಾವ ಅಂಗಡಿಗಳು ಮಾಲ್ ಗಳು ಬಂದ್ ಆಗಿರುತ್ತವೆ. ಸಿಟಿ ಮಾರ್ಕೆಟ್ ಚಿತ್ರಣವನ್ನ ಹೊರತಾಗಿಲ್ಲ. ನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ಕೆ.ಆರ್ ಮಾರ್ಕೇಟ್ ಇಂದು ಬೆಳಗ್ಗೆ ಬಣಗುಡುತ್ತಿತ್ತು.

    ಜನ ಇಲ್ಲದೆ ವ್ಯಾಪಾರಸ್ಥರು ವ್ಯಾಪಾರ ಇಲ್ಲದೇ ಖಾಲಿ ಹೊಡೆಯುತ್ತಿದ್ರು. ಬಿಎಂಟಿಸಿ ಸಂಪೂರ್ಣವಾಗಿ ರಸ್ತೆಗೆ ಇಳಿಯದೇ ಇದ್ದಿದ್ದರಿಂದ ಮಾರ್ಕೆಟ್ ಕಡೆ ಜನರು ಮುಖ ಮಾಡಿಲ್ಲ. ಜೊತೆಗೆ ಕಿಲ್ಲರ್ ಕೊರೊನಾ ಭಯಕ್ಕೆ ಮಾರುಕಟ್ಟೆ ಕಡೆ ಜನ ಮುಖ ಮಾಡುತ್ತಿಲ್ಲ ಎಂದು ಪಬ್ಲಿಕ್ ಟಿವಿ ಮುಂದೆ ವ್ಯಾಪಾರಸ್ಥರು ಅಳಲು ತೊಡಿಕೊಂಡರು.