Tag: lock down

  • ಲಾಕ್‍ಡೌನ್ ಸಡಿಲಿಕೆ – ಯಾವೆಲ್ಲ ಅಂಗಡಿ ತೆರೆಯಬಹುದು?

    ಲಾಕ್‍ಡೌನ್ ಸಡಿಲಿಕೆ – ಯಾವೆಲ್ಲ ಅಂಗಡಿ ತೆರೆಯಬಹುದು?

    ನವದೆಹಲಿ: ದೇಶದಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಮತ್ತಷ್ಟು ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆ ರಾತ್ರಿ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಎಲ್ಲಾ ಅಂಗಡಿ ತೆರೆಯಲು ಅವಕಾಶ ನೀಡಿತ್ತು. ಆದರೆ ಇಂದು ಮಧ್ಯಾಹ್ನ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

    ಕೆಲವೊಂದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಬಗೆಯ ಅಂಗಡಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕರ್ನಾಟಕ ಅಂಗಡಿ ಮತ್ತು ಮಳಿಗೆಗಳ ಕಾಯ್ದೆ ಪ್ರಕಾರ ನೋಂದಣಿ ಆಗಿರುವ ಅಂಗಡಿ ತೆರೆಯಬಹುದಾಗಿದೆ. ಆದ್ರೆ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಮೇ 3ವರೆಗೂ ಯಥಾರೀತಿಯ ಲಾಕ್‍ಡೌನ್ ಮುಂದುವರಿಯಲಿದೆ. ಇಲ್ಲಿನ ಮಂದಿಗೆ ಯಾವುದೇ ವಿನಾಯಿತಿ, ರಿಯಾಯಿತಿ ನೀಡಿಲ್ಲ.

    ಯಾವುದಕ್ಕೆ ವಿನಾಯಿತಿ? ಯಾವುದಕ್ಕೆ ಇಲ್ಲ?
    * ಮದ್ಯ – ಮಾರಾಟಕ್ಕೆ ಅವಕಾಶ ಸಿಕ್ಕಿದೆಯಾ?
    ಉತ್ತರ – ಇಲ್ಲ (ಮೇ 3ವರೆಗೂ ಅವಕಾಶ ಇಲ್ಲ)

    * ಗುಟ್ಕಾ, ತಂಬಾಕು ಮಾರಾಟಕ್ಕೆ ಅವಕಾಶ ಇದೆಯಾ?
    ಉತ್ತರ – ಇಲ್ಲ (ಮೇ 3ವರೆಗೂ ಅವಕಾಶ ಇಲ್ಲ)

    * ಹೇರ್ ಸಲೂನ್ ಶಾಪ್ ತೆರೆಯಬಹುದಾ?
    ಉತ್ತರ – ಖಂಡಿತವಾಗಿ ಇಲ್ಲ .ಇದಕ್ಕೆ ಸಂಬಂಧಿಸಿದಂತೆ ಮೊದಲು ಗೊಂದಲ ಇತ್ತು. ಮಧ್ಯಾಹ್ನ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿತು.


    * ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದೆಯಾ?
    ಉತ್ತರ – ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ.

    * ಶಾಪಿಂಗ್ ಮಾಲ್ ತೆರೆಯಬಹುದಾ?
    ಉತ್ತರ – ಇಲ್ಲ. ಒಂದು ಮತ್ತು ಬಹು ಬ್ರ್ಯಾಂಡ್‍ನ ಶಾಪಿಂಗ್ ಮಾಲ್‍ಗಳನ್ನು ಮೇ 3ವರೆಗೂ ಓಪನ್ ಮಾಡಬಾರದು.

    * ವಾಣಿಜ್ಯ ಸಂಕೀರ್ಣ, ಮಾರುಕಟ್ಟೆ ಮಳಿಗೆ ತೆರೆಯಬಹುದಾ?
    ಉತ್ತರ – ಹೌದು.. ಆದರೆ ಷರತ್ತುಗಳು ಅನ್ವಯ. ನಗರಸಭೆ, ಕಾರ್ಪೋರೇಷನ್ ವ್ಯಾಪ್ತಿಯ ಹೊರಗಿರುವ ಪ್ರದೇಶಗಳಲ್ಲಿ ಮಾತ್ರ ಅವಕಾಶ. ಶೇ.50ರಷ್ಟು ಕಾರ್ಮಿಕರೊಂದಿಗೆ ಕೆಲಸ ಮಾಡಿಸಬೇಕು ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಇಲ್ಲ)

    * ಯಾವ ರೀತಿಯ ಅಂಗಡಿಗಳನ್ನು ತೆರೆಯಬಹುದು?
    ಉತ್ತರ – ಒಂಟಿ ಅಂಗಡಿಗಳು. ಸಾಲಾಗಿ ನಿರ್ಮಿಸಿರುವ ಅಂಗಡಿಗಳನ್ನು ತೆರೆಯಬಹುದು.

    * ಬೆಂಗಳೂರಿನ ಎಲ್ಲೆಲ್ಲಿ ಅಂಗಡಿ ತೆರೆಯಬಹುದು?
    ಉತ್ತರ – ವಸತಿ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ.

    * ಟೈಲರಿಂಗ್ ಶಾಪ್ ಓಪನ್ ಮಾಡಬಹುದಾ?
    ಉತ್ತರ – ಹೌದು. ಮನೆ ಅಥವಾ ಪ್ರತ್ಯೇಕವಾಗಿರುವ ಟೈಲರಿಂಗ್ ಶಾಪ್‍ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

     

  • ಕಾರ್ಮಿಕ ಮಹಿಳೆ ಸಾವು: ಮಾನವೀಯತೆ ಮೆರೆದ ರಕ್ಷಣಾ ವೇದಿಕೆ

    ಕಾರ್ಮಿಕ ಮಹಿಳೆ ಸಾವು: ಮಾನವೀಯತೆ ಮೆರೆದ ರಕ್ಷಣಾ ವೇದಿಕೆ

    ಮಡಿಕೇರಿ: ಅನಾರೋಗ್ಯದಿಂದ ಮೃತಪಟ್ಟ ಕಾರ್ಮಿಕ ಮಹಿಳೆಯ ಅಂತ್ಯ ಸಂಸ್ಕಾರವನ್ನು ಕುಶಾಲನಗರದ ರುದ್ರ ಭೂಮಿಯಲ್ಲಿ ನೆರವೇರಿಸುವ ಮೂಲಕ ಮಾನವೀಯತೆಯ ಕಾರ್ಯವೊಂದು ನಡೆದಿದೆ.

    ಮಡಿಕೇರಿ ರಕ್ಷಣಾ ವೇದಿಕೆ ಹಾಗೂ ಯೂತ್ ಕಮಿಟಿಯಿಂದ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಅನಾರೋಗ್ಯದಿಂದ ಕಾರ್ಮಿಕ ಚಂದ್ರ ಎಂಬಾತನ ಪತ್ನಿ ಕವಿತಾ ಮೃತಪಟ್ಟಿದ್ದರು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮ ಗ್ರಾಮದವರಾದ ಈ ಕುಟುಂಬ ಲಾಕ್‍ಡೌನ್‍ಗೂ ಮೊದಲೇ ಸೋಮವಾರಪೇಟೆ ತಾಲೂಕಿನ ಮಾದಾಪುರದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದರು.

    ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದ ಕವಿತಾ ಅವರಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಮೃತಪಟ್ಟಿದ್ದರು. ಲಾಕ್‍ಡೌನ್ ಪರಿಣಾಮ ಸ್ವಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಗದಿದ್ದರಿಂದ ರಕ್ಷಣಾ ವೇದಿಕೆಯ ಉಮೇಶ್ ಹಾಗೂ ಸಂದೀಪ್ ಹಾಗೆಯೇ ಯೂತ್ ಕಮಿಟ್ ಕಲೀಲ್ ಕ್ರಿಯೇಟಿವ್ ಸೇರಿ ಹಲವರು ಸ್ವತಃ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

  • ನಾಡದೋಣಿ ಮೀನಿಗೆ ಉಡುಪಿಯಲ್ಲಿ ಭಾರೀ ಬೇಡಿಕೆ

    ನಾಡದೋಣಿ ಮೀನಿಗೆ ಉಡುಪಿಯಲ್ಲಿ ಭಾರೀ ಬೇಡಿಕೆ

    ಉಡುಪಿ: ಸರ್ಕಾರ ಮೀನುಗಾರಿಕೆಗೆ ಅಸ್ತು ಅಂದಿದ್ದೇ ತಡ ಉಡುಪಿ ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗಿದೆ. ಇಂದು ಕಡಲಿಗಿಳಿದ ಮೀನುಗಾರರು ಕಸುಬು ಮಾಡಿ ದಡಕ್ಕೆ ವಾಪಸ್ಸಾದರು. ಬುಟ್ಟಿಯಲ್ಲಿ ಮೀನು ಹೊತ್ತು ತಂದು ಸ್ಥಗಿತಗೊಂಡಿದ್ದ ಕಸುಬಿನ ಜೊತೆ ಜೀವನವನ್ನು ಆರಂಭಿಸಿದರು.

    ಕಿಲ್ಲರ್ ಕೊರೊನಾಗೆ ಬೆಚ್ಚಿ ಬಿದ್ದಿರುವ ಭಾರತ 22 ದಿನಗಳಿಂದ ಸ್ತಬ್ಧವಾಗಿತ್ತು. ಜನ ರಸ್ತೆಗಿಳಿಯದೇ ಮನೆಯೊಳಗೆ ಅವಿತು ಕುಳಿತಿದ್ದರು. ಸದಾ ಸಾವಿನ ಜೊತೆ ಸರಸವಾಡುವ ಮೊಗವೀರರು ಕೊರೊನಾ ಭಯದಿಂದ ಕಡಲಿಗೆ ಇಳಿದಿರಲಿಲ್ಲ. ಮೀನುಗಾರಿಕೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿನಾಯಿತಿ ಕೊಟ್ಟ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಾಡದೋಣಿ ಮೀನುಗಾರಿಕೆ ಭರ್ಜರಿಯಾಗಿ ಆರಂಭವಾಗಿದೆ. ಸೂರ್ಯ ಹುಟ್ಟುವ ಮೊದಲೇ ಮೀನುಗಾರರು ಸಮುದ್ರಕ್ಕಿಳಿದು ಒಂದೆರಡು ಸಾವಿರ ರೂಪಾಯಿಯ ಮೀನನ್ನು ಬಲೆ ಹಾಕಿ ಹಿಡಿದು ವಾಪಸ್ಸಾಗಿದ್ದಾರೆ. ಸರ್ಕಾರದ ನಿಯಮದಂತೆ ಒಂದೊಂದು ದೋಣಿಯಲ್ಲಿ ಐದು ಜನಕ್ಕಿಂತ ಕಡಿಮೆ ಇರುವಂತೆ ನೋಡಿಕೊಂಡು ಕಸುಬನ್ನು ಆರಂಭಿಸಿದ್ದಾರೆ.

    ನಾಡದೋಣಿ ಮೀನುಗಾರಿಕೆ ನಡೆಸುವ ಸಂದರ್ಭ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿತ್ತು. ಸಾಮಾಜಿಕ ಅಂತರದ ಜೊತೆಗೆ ಹೆಚ್ಚು ಜನ ಗುಂಪುಗೂಡುವಂತಿಲ್ಲ ಎಂದಿತ್ತು. ಎಲ್ಲ ನಿಯಮಗಳನ್ನು ಅಳವಡಿಸಿಕೊಂಡು ಮೀನುಗಾರರು ಮತ್ತೆ ತಮ್ಮ ಜೀವನವನ್ನು ಶುರು ಮಾಡಿದ್ದಾರೆ. ಅಲೆಗಳ ಮಧ್ಯೆ ಪ್ರಾಣವನ್ನು ಪಣಕ್ಕಿಟ್ಟು ತಂದ ಮೀನಿಗೆ ದುಬಾರಿ ಬೆಲೆ ಫಿಕ್ಸ್ ಮಾಡಬಾರದು ಎಂದು ಕಂದಾಯ ಇಲಾಖೆ ಮತ್ತು ಪೊಲೀಸರು ಮೀನುಗಾರರಿಗೆ ತಾಕೀತು ಮಾಡಿದೆ. ಕೆಲ ಮೀನುಗಾರರಲ್ಲಿ ಇದು ಅಸಮಾಧಾನಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೀನುಗಾರ ರಮೇಶ್ ಕಾಂಚನ್, ನಾವು ಕಡಲಿನ ನಿಯಮಕ್ಕೆ ತಲೆ ಬಾಗುತ್ತೇವೆ. ನಿಯಮದಂತೆ ಮೀನು ಹಿಡಿದು ಬಂದು ಜೀವನ ಮಾಡುತ್ತೇವೆ. ಆದ್ರೆ ಬಂದ ಮೇಲೆ ರೂಲ್ಸ್ ಹಾಕುತ್ತೇನೆ ಅಂತ ಹೇಳುವುದು ನಮಗೆ ಬೇಸರವಾಗಿದೆ. ಒಂದೆರಡು ಸಾವಿರದ ಮೀನು ಹಿಡಿದು ಅಷ್ಟಕ್ಕೇ ಮಾರಬೇಕು ಅಂತ ಹೇಳಿದ್ರೆ ಕಷ್ಟ ಎಂದಿದ್ದಾರೆ.

    ಕಳೆದ ಇಪ್ಪತ್ತು ದಿನಗಳಿಂದ ಸ್ಥಗಿತವಾಗಿದ್ದ ಮೀನುಗಾರಿಕೆಯಿಂದ ಇದೀಗ ಮೊಗವೀರರು ದುಡಿಯುವಂತಾಗಿದೆ. ಬಾಯಿ ಸಪ್ಪೆ ಸಪ್ಪೆ ಎಂದು ಚಡಪಡಿಸುತ್ತಿದ್ದ ಮೀನು ಪ್ರಿಯರು ಮಾಂಸದ ರುಚಿ ನೋಡುವಂತಾಗಿದೆ.

  • ಲಾಕ್‍ಡೌನ್ ನಡುವೆಯೂ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭ

    ಲಾಕ್‍ಡೌನ್ ನಡುವೆಯೂ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭ

    -ಸಮುದ್ರಕ್ಕಿಳಿದ ಮೀನುಗಾರರು

    ಕಾರವಾರ: ಲಾಕ್‍ಡೌನ್ ನಿಂದಾಗಿ ಕರಾವಳಿಯಲ್ಲಿ ಕಳೆದೊಂದು ತಿಂಗಳಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗುತ್ತಾದರೂ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದ ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಿದ್ದು ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದು ಇಂದಿನಿಂದ ಸಮುದ್ರಕ್ಕಿಳಿದಿದ್ದಾರೆ.

    ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು ದೇಶದಲ್ಲಿ 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದ ರಾಜ್ಯದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ್ದು ಆಳಸಮುದ್ರ ಸೇರಿದಂತೆ ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್ ಬಿದ್ದಿತ್ತು. ಪರಿಣಾಮ ರೆಡ್ ಜೋನ್ ನಲ್ಲಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ ಎದುರಾಗಿತ್ತು. ಇದೀಗ ರಾಜ್ಯದಲ್ಲಿ ಲಾಕ್‍ಡೌನ್ ನಡುವೆ ಸಾಂಪ್ರದಾಯಿಕ ಮೀನುಗಾರಿಕೆಗೆ ಸದ್ಯ ಅವಕಾಶ ನೀಡಿದ್ದು ಮೀನುಗಾರರಿಗೆ ಜೀವ ಬಂದಂತಾಗಿದೆ.

    ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳಲ್ಲಿ ಸಾವಿರಾರು ಕುಟುಂಬಗಳು ಅನಾದಿಕಾಲದಿಂದಲೂ ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಆದರೆ ಲಾಕ್‍ಡೌನ್ ವೇಳೆ ಮೀನುಗಾರಿಕೆಗೆ ನಿರ್ಬಂಧ ವಿಧಿಸಿದ್ದರಿಂದ ಊಟಕ್ಕೆ ಅಕ್ಕಿ ಸಿಗುತ್ತಿದ್ದರೂ ಸಹ ಖರ್ಚು ಮಾಡಲು ಹಣವಿಲ್ಲದೇ ಪರದಾಡುವಂತಾಗಿತ್ತು. ಇದೀಗ ಮೀನುಗಾರಿಕೆಗೆ ಅವಕಾಶ ನೀಡಿದ ಹಿನ್ನೆಲೆ ಸಣ್ಣ ದೋಣಿಗಳು ಮೀನುಗಾರಿಕೆಗೆ ತೆರಳುತ್ತಿದ್ದು ಅವು ಹಿಡಿದು ತಂದ ಮೀನುಗಳನ್ನೇ ಮಾರಾಟಕ್ಕೆ ಕೊಂಡೊಯ್ಯಲಾಗುತ್ತಿದ್ದು ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಕೊರೊನಾ ತಡೆಗೆ ಲಾಕ್ ಡೌನ್- ಆಹಾರಕ್ಕಾಗಿ ಜನ ಪರದಾಟ

    ಕೊರೊನಾ ತಡೆಗೆ ಲಾಕ್ ಡೌನ್- ಆಹಾರಕ್ಕಾಗಿ ಜನ ಪರದಾಟ

    ಗದಗ: ಕೊರೊನಾ ವೈರಸ್ ತಡೆಗೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಗದಗ ಜಿಲ್ಲೆಯಲ್ಲಿ ಬಡವರು ಆಹಾರಕ್ಕಾಗಿ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ.

    ಗದಗನ ಹೊಂಬಳ ನಾಕಾ ಜನತಾ ಕಾಲೋನಿ ಜನ ಆಹಾರಕ್ಕಾಗಿ ಗೋಳಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳಿಗೆ ಕೈಮುಗಿದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಉಚಿತ ಹಾಲು ಇಲ್ಲ, ದಿನಸಿ, ಪಡಿತರ ಧಾನ್ಯವೂ ನೀಡಿಲ್ಲ ಅಂತ ವಿಡಿಯೋ ಮಾಡುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಲಾಕ್ ಡೌನ್ ಗೆ ನಮ್ಮ ಬೆಂಬಲವಿದೆ. ಆದರೆ ನಮ್ಮ ಹೊಟ್ಟೆಗೂ ಏನಾದ್ರೂ ಕೊಡಿ ಎಂದು ಊಟ, ಉಪಹಾರಕ್ಕಾಗಿ ಮಕ್ಕಳು, ವೃದ್ಧರು, ಮಹಿಳೆಯರ ಪರದಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ತಾವೇ ವಿಡಿಯೋ ಮಾಡಿ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಪ್ರತಿ ಏರಿಯಾಕ್ಕೂ ಬರಲಿದೆ ಸುರಕ್ಷಾ ಸ್ಟೋರ್- ಸೋಂಕು ಮುಕ್ತ ವ್ಯಾಪಾರಕ್ಕೆ ಕೇಂದ್ರ ಚಿಂತನೆ

    ಪ್ರತಿ ಏರಿಯಾಕ್ಕೂ ಬರಲಿದೆ ಸುರಕ್ಷಾ ಸ್ಟೋರ್- ಸೋಂಕು ಮುಕ್ತ ವ್ಯಾಪಾರಕ್ಕೆ ಕೇಂದ್ರ ಚಿಂತನೆ

    ನವದೆಹಲಿ: ಲಾಕ್ ಡೌನ್ ವಿಸ್ತರಣೆ ಆಗೋದು ಪಕ್ಕಾ ಆಗಿದೆ. ಆದರೆ ಜನರು ಹಾಲು ತರಕಾರಿ, ದಿನಸಿ ಎಂದು ಹೊರಗಡೆ ಬರುತ್ತಾನೆ ಇರುತ್ತಾರೆ. ಹೀಗೆ ಹೊರ ಬರುವ ಮಂದಿಗೆ ಸೋಂಕಿನಿಂದ ಸಂರಕ್ಷಿಸಲು ಕೇಂದ್ರ ಸರ್ಕಾರ ಹೊಸದೊಂದು ಪ್ಲಾನ್ ಮಾಡಿದೆ.

    ಹೌದು. ಲಾಕ್ ಡೌನ್ ಆಗಿ ಮೂರು ವಾರ ಕಳೆದ್ರೂ ಜನರು ಎಚ್ಚೆತ್ತುಕೊಳ್ತಿಲ್ಲ. ದಿನ ಬೆಳಗಾದ್ರೆ ಹಾಲು, ತರಕಾರಿ, ದಿನಸಿ ಎಂದು ಹೊರಗಡೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಜೊತೆಗೆ ವಾಗ್ವಾದಕ್ಕೂ ಇಳಿಯುತ್ತಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಾರಕಾಸ್ತ್ರಗಳಿಂದ ದಾಳಿ ಮಾಡಲು ಶುರು ಮಾಡ್ಕೊಂಡಿದ್ದಾರೆ.

    ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೀಗೆ ಹೊರಗೆ ಸುತ್ತಾಡ್ತಾ ಇರೋದ್ರಿಂದ ಕೊರೊನಾ ಸೋಂಕು 3ನೇ ಹಂತಕ್ಕೆ ಹೋಗಿಬಿಡಬಹುದು ಎನ್ನುವ ಭೀತಿ ಈಗ ಕೇಂದ್ರ ಸರ್ಕಾರಕ್ಕೆ ಶುರುವಾಗಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಯಲು ಸುರಕ್ಷಾ ಸ್ಟೋರ್ ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

    ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ದೇಶದ್ಯಾಂತ 20 ಲಕ್ಷ ಸುರಕ್ಷಾ ಸ್ಟೋರ್ ಗಳನ್ನು ಪ್ರಾರಂಭಿಸಲಿದ್ದು, ಎಲ್ಲಾ ಸುರಕ್ಷಾ ಮಾನದಂಡಗಳನ್ನು ಪಾಲಿಸಲು ತೀರ್ಮಾನಿಸಿದೆ. ಈ ಸಂಬಂಧ ಗ್ರಾಹಕ ವ್ಯವಹಾರಗಳ ಸಚಿವಾಲಯ ಕೆಲ ಎಫ್‍ಎಂಸಿಜಿ ಕಂಪನಿಗಳ ಜೊತೆ ಮಾತುಕತೆ ಕೂಡ ನಡೆಸಿದೆ. ಸ್ಥಳೀಯ ಚಿಲ್ಲರೆ ಅಂಗಡಿ ವ್ಯಾಪಾರಸ್ಥರನ್ನು ಒಳಗೂಡಿಸಿಕೊಳ್ಳಲು ಚಿಂತನೆ ನಡೆದಿದೆ.

    ಹೇಗಿರಲಿದೆ ಸುರಕ್ಷಾ ಸ್ಟೋರ್?
    * ಉತ್ಪಾದನಾ ಘಟಕಗಳಿಂದ ಚಿಲ್ಲರೆ ಮಾರಾಟ ಅಂಗಡಿಗಳವರೆಗೂ ಪ್ರೊಟೊಕಾಲ್ ಪ್ರಕಾರ ಸಾಗಣೆ
    * ಸುರಕ್ಷಾ ಸ್ಟೋರ್‍ಗೆ ನೋಂದಣಿಯಾಗಲು ಬಯಸುವ ಸ್ಟೋರ್‍ಗಳಿಗೆ ನಿಯಮ ಪಾಲನೆ ಕಡ್ಡಾಯ
    * ಅಂಗಡಿಗಳಿಗೆ ಗ್ರಾಹಕರು ಬರ್ತಿದ್ದಂತೆ ಸ್ಯಾನಿಟೈಜರ್ ಮೂಲಕ ಹ್ಯಾಂಡ್ ವಾಶ್ ಮಾಡ್ಕೋಬೇಕು
    * ಕೊರೋನಾದಿಂದ ಪಾರಾಗಲು ಅಂಗಡಿಯಲ್ಲಿರುವ ಸಿಬ್ಬಂದಿ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ
    * ಬಿಲ್ಲಿಂಗ್ ಕೌಂಟರ್‍ನಲ್ಲಿ ಗ್ರಾಹಕರಿಂದ ಕನಿಷ್ಠ 1.5 ಮೀಟರ್ ಅಂತರ ಕಾಯ್ದುಕೊಳ್ಳಬೇಕು
    * ದಿನಕ್ಕೆ ಎರಡು ಬಾರಿ ಸ್ಟೋರ್ ಸ್ಯಾನಿಟೈಜ್ ಮಾಡಬೇಕು
    * ಅಂಗಡಿಯ ವಸ್ತುಗಳನ್ನು ಸಹ ಸಾಧ್ಯವಾದಷ್ಟು ಸ್ಯಾನಿಟೈಜ್ ಮಾಡಬೇಕು
    * ಆರೋಗ್ಯ ಇಲಾಖೆಯ ಕಿಟ್‍ಗಳನ್ನು ಎಫ್‍ಎಂಸಿಜಿ ಕಂಪನಿಗಳ ಸಿಬ್ಬಂದಿ ಬಳಸಲೇಬೇಕು

    ಒಟ್ಟಿನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರದ ಹಂತದಲ್ಲಿ ಮಾತುಕತೆ ಅಂತ್ಯವಾಗಲಿದ್ದು, ಇನ್ನೊಂದೆರಡು ವಾರದಲ್ಲಿ ದೇಶಾದ್ಯಂತ ಸುರಕ್ಷಾ ಸ್ಟೋರ್ ಆರಂಭವಾಗಲಿದೆ. ಕೊರೊನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರದ ಹೊಸ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  • ಲಾಕ್‍ಡೌನ್ ಉಲ್ಲಂಘಿಸಿ ಮನೆಯಿಂದ ಹೊರಗಡೆ ಬಂದವ್ರ ಮೇಲೆ ಡ್ರೋಣ್ ಕಣ್ಣು

    ಲಾಕ್‍ಡೌನ್ ಉಲ್ಲಂಘಿಸಿ ಮನೆಯಿಂದ ಹೊರಗಡೆ ಬಂದವ್ರ ಮೇಲೆ ಡ್ರೋಣ್ ಕಣ್ಣು

    ದಾವಣಗೆರೆ: ಕೋವಿಡ್-19 ಸೋಂಕು ಹರಡದಂತೆ ಲಾಕ್ ಡೌನ್ ಮಾಡಲಾಗಿದ್ದರೂ ಜನ ಹೊರ ಬರುತ್ತಿರುವುದನ್ನು ಮಟ್ಟ ಹಾಕಲು ಎಸ್‍ಪಿ ಹನುಮಂತರಾಯ ನೇತೃತ್ವದ ತಂಡ ಡ್ರೋಣ್ ಕ್ಯಾಮೆರಾ ಮೂಲಕ ಹದ್ದಿನ ಕಣ್ಣಿಟ್ಟಿದೆ.

    ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಹಂತವಾಗಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಕ್ಯಾಮೆರಾವನ್ನು ನಗರದಲ್ಲಿ ಹಾರಿಸಲಾಯಿತು. ಆಜಾದ್ ನಗರ, ಬಾಷಾನಗರ, ವೆಂಕೊಬ ಕಾಲೊನಿ ಸೇರಿದಂತೆ ಠಾಣೆ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾವನ್ನು ಪೊಲೀಸ್ ಪೇದೆ ಪ್ರಶಾಂತ್, ಠಾಣಾ ವ್ಯಾಪ್ತಿಯಲ್ಲಿ ಹಾರಿಸಿದರು. ಅಲ್ಲದೇ ಪೊಲೀಸ್ ವಾಹನಗಳಲ್ಲಿನ ಮೈಕ್ ಮೂಲಕ ಹೊರಗಡೆ ಬಂದರೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಲಾಯಿತು.

    ಈ ಕಾಲೊನಿಗಳಲ್ಲಿ ಜನರು ಹೊರಗಡೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರು. ಇಲ್ಲಿನ ಗಲ್ಲಿಗಲ್ಲಿಗಳಲ್ಲೂ ಡ್ರೋಣ್ ಕ್ಯಾಮೆರಾದ ಮೂಲಕ ಕಣ್ಗಾವಲು ಇರಿಸಲಾಗಿದ್ದು, ಮೈದಾನ, ಗದ್ಡೆ ಸೇರಿ ಹಲವೆಡೆ ಕ್ರಿಕೆಟ್ ಆಡುವವರ, ಗುಂಪು ಸೇರುವವರ ಪತ್ತೆಗೆ ಡ್ರೋಣ್ ಕ್ಯಾಮೆರಾ ಬಳಕೆ ಮಾಡಲಾಯಿತು. ಪೊಲೀಸರ ಡ್ರೋನ್ ಕ್ಯಾಮಾರಾ ಕಂಡು ಬೈಕ್ ಸವಾರರು ಅರ್ಧ ದಾರಿಯಿಂದಲೇ ವಾಪಸಾಗುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗುಂಪು ಸೇರಿ ಮಾತನಾಡುವ, ಕ್ರಿಕೆಟ್ ಆಡುವ ಯುವಕರೂ ಡ್ರೋಣ್ ನನ್ನು ಕುತುಹೂಲದಿಂದ ನೋಡುತ್ತಿದ್ದರು.

    ಒಟ್ಟಾರೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುವ ಜನರನ್ನು ನಿಯಂತ್ರಿಸಲು ಡ್ರೋಣ್ ಕ್ಯಾಮೆರಾದ ಬಳಕೆ ಮಾಡಿ ಹೊಸ ಪ್ರಯೋಗವೊಂದನ್ನು ಜಿಲ್ಲಾ ಪೊಲೀಸರು ಕೈಗೊಂಡಿದ್ದು, ಈ ಪ್ರಯೋಗ ಯಶಸ್ವಿಯಾಗುತ್ತಿದೆಯೇ ಎಂದು ಕಾದು ನೋಡಬೇಕಾಗಿದೆ.

    ಡ್ರೋಣ್ ಕ್ಯಾಮೆರಾ ವಿಶೇಷ:
    ಈ ಡ್ರೋಣ್ ಕ್ಯಾಮೆರಾ ಅಂದಾಜು ಎರಡು ಲಕ್ಷ ರೂಪಾಯಿದ್ದಾಗಿದ್ದು, ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ಕವರ್ ಮಾಡುತ್ತದೆ. ಸುಮಾರು 700 ಮೀಟರ್ ಎತ್ತರಕ್ಕೆ ಹಾರುತ್ತದೆ. ಇದರೊಳಗೆ 4 ಬ್ಯಾಟರಿಗಳಿದ್ದು, ಒಂದು ಬ್ಯಾಟರಿ 2 ಗಂಟೆಗಳ ಕಾಲ ಚಾಲ್ತಿಯಲ್ಲಿರುತ್ತದೆ.

  • ಇಂದಿನಿಂದ ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್

    ಇಂದಿನಿಂದ ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್

    ಮಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ಮಂಗಳೂರಿನಲ್ಲಿ ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೂ ದಿನಸಿ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಸ್ಥಳೀಯ ಅಂಗಡಿಗಳಲ್ಲಿ ಮಾತ್ರ ದಿನಸಿ, ತರಕಾರಿ ಖರೀದಿಸಬಹುದಾಗಿದೆ. ತಮ್ಮ ವಾಹನಗಳಲ್ಲಿ ಬೇರೆ ಕಡೆ ಖರೀದಿಗೆ ಹೋದ್ರೆ ವಾಹನ ಜಪ್ತಿ ಮಾಡಲಾಗುತ್ತಿದ್ದು, ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲೂ ಖಾಸಗಿ ಸಂಚಾರ ನಿರ್ಬಂಧಿಸಲಾಗಿದೆ ಎಂದಿದ್ದಾರೆ.

    ಒಟ್ಟಿನಲ್ಲಿ ವಾಹನ ಜಪ್ತಿ ಕ್ರಮ ಮಂಗಳೂರಿನಲ್ಲಿ ಬಹುತೇಕ ಸಕ್ಸಸ್ ಆಗುತ್ತಿದ್ದು, ಜನ ನಡೆದುಕೊಂಡೇ ಸ್ಥಳೀಯ ಅಂಗಡಿಗಳಿಗೆ ತೆರಳುತ್ತಿದ್ದಾರೆ. ಆದರೆ ಕೆಲವರು ಆದೇಶ ದಿಕ್ಕರಿಸಿ ವಾಹನ ರಸ್ತೆಗಿಳಿಸಿದ್ದಾರೆ. ಸ್ಥಳೀಯ ಆಂಗಡಿಗಳನ್ನು ಬಿಟ್ಟು ಕದ್ರಿಯ ಮಲ್ಲಿಕಟ್ಟೆ ಮಾರುಕಟ್ಟೆ ವಾಹನಗಳಲ್ಲಿ ಜನರು ಬರುತ್ತಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂತಹ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.

  • ಏಪ್ರಿಲ್ ಫೂಲ್ ಅಲ್ಲ, ನಿರ್ಲಕ್ಷ್ಯ ವಹಿಸಿದ್ರೆ ವಾಹನ ಸೀಜ್ ಗ್ಯಾರಂಟಿ:  ಡಿಜಿಪಿ ಎಚ್ಚರಿಕೆ

    ಏಪ್ರಿಲ್ ಫೂಲ್ ಅಲ್ಲ, ನಿರ್ಲಕ್ಷ್ಯ ವಹಿಸಿದ್ರೆ ವಾಹನ ಸೀಜ್ ಗ್ಯಾರಂಟಿ: ಡಿಜಿಪಿ ಎಚ್ಚರಿಕೆ

    ಬೆಂಗಳೂರು: ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಇನ್ನೂ 14 ದಿನ ಇದ್ದು, ಈ ಮಧ್ಯೆ ರಸ್ತೆಗಿಳಿಯುವವರಿಗೆ ಡಿಜಿಪಿ ಪ್ರವೀಣ್ ಸೂದ್ ಖಡಕ್ ಎಚ್ಚರಿಕೆ ನಿಡಿದ್ದಾರೆ.

    ಇದು ಏಪ್ರಿಲ್ ಫೂಲ್ ಅಲ್ಲ. ದ್ವಿ-ಚಕ್ರ ವಾಹನ, ಕಾರು ಮುಂತಾದ ವಾಹನಗಳು ಏಪ್ರಿಲ್ 14ರವರೆಗೆ ರಸ್ತೆಗೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ನೀವು ಆದೇಶವನ್ನು ಉಲ್ಲಂಘಿಸಿದರೆ ನಿಮ್ಮ ವಾಹನಗಳನ್ನು ಸೀಜ್ ಮಾಡುವುದು ಗ್ಯಾರಂಟಿ ಎಂದು ಟ್ವೀಟ್ ಮಾಡುವ ಮೂಲಕ ಸೂಚನೆ ನೀಡಿದ್ದಾರೆ.

    ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್ 19 ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಮಧ್ಯೆಯೂ ಕೆಲವರು ಸುಖಾಸುಮ್ಮನೆ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ.

    ಈಗಾಗಲೇ ನಿಯಮ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಕೆಲವೆಡೆ ಆರತಿ ಬೆಳಗಿದರೆ, ಇನ್ನೂ ಕೆಲವೆಡೆ ಬಸ್ಕಿ ಹೊಡೆಸಿ, ಚರಂಡಿ ಕ್ಲೀನ್ ಹಾಗೂ ಕಸ್ ಗುಡಿಸುವ ಶಿಕ್ಷೆಯನ್ನು ಕೂಡ ಪೊಲೀಸರು ನೀಡಿದ್ದಾರೆ. ಅಲ್ಲದೆ ಕೊರೊನಾ ಮಾದರಿಯ ಹೆಲ್ಮೆಟ್ ಹಾಕಿಕೊಂಡು ಪರಿಸ್ಥಿತಿಯ ಗಂಭಿರತೆಯನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಕೂಡ ಮಾಡಿದ್ದಾರೆ. ಆದರೂ ಜನ ಕ್ಯಾರೇ ಎನ್ನದೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಈ ಎಚ್ಚರಿಕೆ ನೀಡಿದ್ದಾರೆ.

     

  • ಲಾಕ್‍ಡೌನ್ ಎಫೆಕ್ಟ್: ಊಟಕ್ಕಾಗಿ ತಹಶೀಲ್ದಾರ್ ಕಚೇರಿಗೆ ನುಗ್ಗಿದ ಮಹಿಳೆಯರು

    ಲಾಕ್‍ಡೌನ್ ಎಫೆಕ್ಟ್: ಊಟಕ್ಕಾಗಿ ತಹಶೀಲ್ದಾರ್ ಕಚೇರಿಗೆ ನುಗ್ಗಿದ ಮಹಿಳೆಯರು

    ರಾಯಚೂರು: ಐದು ದಿನಗಳಿಂದ ಊಟವಿಲ್ಲದೆ ಪರದಾಡಿದ ಬೀದಿಬದಿಯ ಅಲೆಮಾರಿ ವ್ಯಾಪಾರಿಗಳು ಊಟಕ್ಕಾಗಿ ತಹಶೀಲ್ದಾರ್ ಕಚೇರಿಗೆ ನುಗ್ಗಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

    ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಹೊಟ್ಟೆಪಾಡಿಗೆ ದುಡಿಯಲು ಬಂದ ಅಲೆಮಾರಿಗಳಿಗೆ ಕೆಲಸವಿಲ್ಲದೆ ಊಟವೂ ಇಲ್ಲದಂತಾಗಿದೆ.

    ಊಟ ನೀಡುವಂತೆ ಕೇಳಿಕೊಂಡು ತಹಶೀಲ್ದಾರ್ ಕಚೇರಿಗೆ ಮಹಿಳೆಯರು ನುಗ್ಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಐದಾರು ದಿನಗಳಿಂದ ವ್ಯಾಪಾರವೇ ಇಲ್ಲದಾಗಿ ಊಟವೂ ಸಿಕ್ಕಿಲ್ಲ. ದೆಹಲಿಯಿಂದ ವ್ಯಾಪಾರಕ್ಕಾಗಿ ಸಿಂಧನೂರಿಗೆ ಆಗಮಿಸಿದ 10 ಕುಟುಂಬಗಳು ಕಳೆದ 5 ದಿನಗಳಿಂದ ಊಟ ಇಲ್ಲದೇ ಪರದಾಡಿವೆ.

    ಹಸಿವು ತಾಳಲಾರದೆ ಸಿಂಧನೂರು ತಹಶೀಲ್ದಾರ್ ಕಛೇರಿಗೆ ನುಗ್ಗಿ ದಿನಸಿ ಅಥವಾ ಊಟದ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ. ಊಟದ ವ್ಯವಸ್ಥೆ ಮಾಡುವವರೆಗೆ ಕಚೇರಿ ಬಿಟ್ಟು ಕದಲುವುದಿಲ್ಲ ಅಂತ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ಕೊನೆಗೆ ಸಿಂಧನೂರು ತಹಶೀಲ್ದಾರ್ ಮಂಜುನಾಥ್ 50 ಕೆ.ಜಿ ಅಕ್ಕಿ ನೀಡಿದ್ದು ಊಟದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.