Tag: lock down

  • ಕೊರೊನಾ ಎಫೆಕ್ಟ್: ಬೀದಿಗೆ ಬಿತ್ತು ಬಸ್ ನಿಲ್ದಾಣ ಶುಚಿಗೊಳಿಸ್ತಿದ್ದ ವೃದ್ಧ ದಂಪತಿ ಬದುಕು

    ಕೊರೊನಾ ಎಫೆಕ್ಟ್: ಬೀದಿಗೆ ಬಿತ್ತು ಬಸ್ ನಿಲ್ದಾಣ ಶುಚಿಗೊಳಿಸ್ತಿದ್ದ ವೃದ್ಧ ದಂಪತಿ ಬದುಕು

    ಮಡಿಕೇರಿ: ಇದ್ದಕ್ಕಿದ್ದಂತೆ ಬಂದ ಕೊರೊನಾ ಮಹಾಮಾರಿ ಬಸ್ ನಿಲ್ದಾಣವನ್ನು ಸ್ವಚ್ಚತೆ ಮಾಡುತ್ತಿದ್ದ ಕುಟುಂಬದ ಕೂಲಿಯನ್ನೇ ಕಿತ್ತುಕೊಂಡಿತು. ಬದುಕಿಡೀ ಬಸ್ ನಿಲ್ದಾಣವನ್ನೇ ಸ್ವಚ್ಛತೆ ಮಾಡಿದ್ದ ಈ ವೃದ್ಧ ಕುಟುಂಬಕ್ಕೆ ನಿಲ್ಲೋದಕ್ಕೆ ಸೂರು ಇಲ್ಲದೆ ಬೀದಿಗೆ ಬಿದ್ದಿದೆ.

    ಹೌದು. ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಸ್ವಚ್ಚತಾ ಕಾರ್ಮಿಕರಾಗಿ ಈ ವೃದ್ಧ ದಂಪತಿ ದುಡಿಯುತ್ತಿದ್ದರು. ಆದರೆ ಕೊರೊನಾ ಮಹಾಮಾರಿ ಲಾಕ್‍ಡೌನ್ ಮೂಲಕ ಈ ಸ್ವಚ್ಛತಾ ಕಾರ್ಮಿಕರ ಕೆಲಸವನ್ನೂ ಕಿತ್ತುಕೊಂಡಿದೆ.

    ಇದೀಗ ಅತ್ತ ಕೂಲಿಯೂ ಇಲ್ಲದೆ, ಇತ್ತ ಸೂರು ಇಲ್ಲದೆ ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿ ಬದುಕು ದೂಡುತ್ತಿತ್ತು. ಬಸ್ಸಿನಿಂದ ಒಮ್ಮೆ ಬಿದ್ದು ಸೊಂಟ ಮುರಿದುಕೊಂಡಿದ್ದ ವೃದ್ಧೆ ಜಯಮ್ಮನಿಗೆ ಸದ್ಯ ತೆವಳುವುದಕ್ಕೂ ಆಗುವುದಿಲ್ಲ. ಹೀಗಾಗಿ ಗುಡಿಸಲು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ಕಣ್ಣು ಕಾಣದ ಪತಿ ಚಿಕ್ಕ, ತನ್ನ ಪತ್ನಿಯ ಸ್ಥಿತಿ ನೋಡಿ ಕಣ್ಣೀರುಡುತ್ತಿದ್ದಾರೆ.

    ದಿಕ್ಕು ದೆಸೆಯಿಲ್ಲದ ಈ ವೃದ್ಧ ದಂಪತಿ ಕನಿಷ್ಠ ಊಟಕ್ಕೂ ಗತಿ ಇಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕಾದ ಈ ಜೀವಗಳು ಇದುವರೆಗೆ ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಾ, ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿ ಹೇಗೋ ಕಾಲ ಕಳೆಯುತ್ತಿದ್ದವು. ಆದರೆ ಜಾಗದ ಮಾಲೀಕ ಆ ಗುಡಿಸಲುಗಳನ್ನು ಕಿತ್ತು ಇಡೀ ನಿವೇಶನವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ವೃದ್ಧ ಕುಟುಂಬ ಬೀದಿಗೆ ಬಿದ್ದಿದೆ.

    ಈ ಸ್ಥಿತಿಯನ್ನು ಕೆಲವು ತಿಂಗಳಿಂದ ಗಮನಿಸುತ್ತಿದ್ದ ಬಾರ್ ಮಾಲೀಕ ಪ್ರತೀ ದಿನ ಇವರಿಗೆ ಊಟ ತಿಂಡಿ ಪೂರೈಸುತ್ತಿದ್ದರು. ಆದರೆ ಇದೀಗ ಖಾಸಗಿ ಜಾಗದ ಮಾಲೀಕ ಈ ಗುಡಿಸಲುಗಳನ್ನು ಕೀಳಿಸಿ ಜಾಗವನ್ನು ಸ್ವಚ್ಛಗೊಳಿಸಲು ಮುಂದಾಗಿರುವುದರಿಂದ ವೃದ್ಧ ದಂಪತಿ ಪಾಲಿಗೆ ನಿಲ್ಲುವುದಕ್ಕೂ ಸೂರು ಇಲ್ಲದಂತಾಗಿದೆ. ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗುಡಿಸಲು ಬಿಟ್ಟು ಎಲ್ಲಿಗೆ ಹೋಗೋದೆಂದು ದಂಪತಿ ಕಣ್ಣೀರು ಸುರಿಸುತ್ತಿದ್ದಾರೆ.

    ಈ ಸ್ಥಿತಿಯನ್ನು ಕಂಡರೆ ಎಂಥವರಿಗೂ ಕರುಳು ಹಿಂಡುತ್ತದೆ. ಹೀಗಾಗಿ ಇದೂವರೆಗೆ ಊಟ ತಿಂಡಿ ಪೂರೈಸುತ್ತಿದ್ದ ಬಾರ್ ಮಾಲೀಕ, ಯಾರಾದರೂ ಸಹಾಯ ಮಾಡಿ ಪ್ಲೀಸ್. ಇವರನ್ನು ಕನಿಷ್ಠ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸೋಣ ಎಂದು ಸಹಾಯ ಹಸ್ತ ಚಾಚಿದ್ದಾರೆ.

  • ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಲಾಕ್‍ಡೌನ್ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಲಾಕ್‍ಡೌನ್ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    -ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸುಗಳು ಮಿತಿಮೀರುತ್ತಲೇ ಇವೆ. ಕಳೆದ ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ಎರಡಂಕಿಯನ್ನು ದಾಟದ ಮಹಾಮಾರಿ, 7 ದಿನ ಎನ್ನುವಷ್ಟರಲ್ಲೇ 200ರ ಗಡಿಯನ್ನು ದಾಟಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡಬೇಕು ಅನ್ನೋ ಕೂಗು ಕೇಳಿಬಂದಿತ್ತು.

    ನಾಲ್ಕು ದಿನಗಳ ಹಿಂದೆಯಷ್ಟೇ ಜಿಲ್ಲೆಯ ಶಾಸಕರು ಪರಿಷತ್ ಸದಸ್ಯರು ಲಾಕ್‍ಡೌನ್ ಮಾಡಿದ್ರೆ ಉತ್ತಮ ಎಂದು ಉಸ್ತುವಾರಿ ಸಚಿವರ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಜಿಲ್ಲಾಧಿಕಾರಿ ಮಾತ್ರ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡುವುದಿಲ್ಲ. ಅಷ್ಟಕ್ಕೂ ಲಾಕ್‍ಡೌನ್ ಮಾಡಿದರೆ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ.

    ಲಾಕ್‍ಡೌನ್ ಮಾಡಿ ಮತ್ತೆ ಓಪನ್ ಮಾಡಿದಾಗ ಸಹಜವಾಗಿಯೇ ವೈರಸ್ ಹರಡಿಯೇ ಹರಡುತ್ತದೆ. ಜೊತೆಗೆ ಮುಖ್ಯವಾಗಿ ಲಾಕ್ ಡೌನ್ ಮಾಡಿದರೆ ಬಡವರು, ಮಧ್ಯಮ ವರ್ಗದ ಜನರು ತೀವ್ರ ಸಮಸ್ಯೆ ಅನುಭವಿಸಲಿದ್ದಾರೆ. ಹೀಗಾಗಿ ಲಾಕ್ ಡೌನ್ ಮಾಡುವುದಿಲ್ಲ. ಬದಲಾಗಿ ಜಿಲ್ಲೆಗೆ ಹೊಅರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯ, ದೇಶಗಳಿಂದ ಕೊಡಗಿಗೆ ಬರುವವರಿಂದ ಕೊವಿಡ್ ವೈರಸ್ ಹರಡುತ್ತಿದೆ. ಆದ್ದರಿಂದ ಹೊರ ಜಿಲ್ಲೆಗಳಿಂದ ಬರುವವರಿಗೆ ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ.

    ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬರುತ್ತಿವವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡುತ್ತಿದೆ. ಇವರಿಗೆ ಕೈಗೆ ಸೀಲು ಹಾಕಲಾಗುತ್ತಿದ್ದು, ಅಂತಹವರು ಯಾವುದೇ ಕಾರಣಕ್ಕೂ ಹೊರಬರಬಾರದು. ಕೋವಿಡ್ ಲಕ್ಷಣಗಳಿರುವವರು ಹೊರಗೆ ಓಡಾಡುವ ಬದಲು ತಪ್ಪದೆ ಆಸ್ಪತ್ರೆಗೆ ಹೋಗಿ ಪರಿಶೀಲಿಸಿಕೊಳ್ಳಬೇಕು.

    ಜನರು ಕೂಡ ಗುಂಪುಗೂಡುವುದನ್ನು ನಿಯಂತ್ರಿಸಬೇಕು ಎಂದಿದ್ದಾರೆ. ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಜಿಲ್ಲೆಯಲ್ಲಿ ಕಫ್ರ್ಯೂ ಜಾರಿ ಮಾಡಲಾಗಿದ್ದು, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

  • ಶ್ರಮಿಕರಿಗಾಗಿ ಇಂದು ವಿಶೇಷ ಪ್ಯಾಕೇಜ್ ವಿಸ್ತರಣೆ ಮಾಡ್ತಾರಾ ಬಿಎಸ್‍ವೈ?

    ಶ್ರಮಿಕರಿಗಾಗಿ ಇಂದು ವಿಶೇಷ ಪ್ಯಾಕೇಜ್ ವಿಸ್ತರಣೆ ಮಾಡ್ತಾರಾ ಬಿಎಸ್‍ವೈ?

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾತ್ರಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರಮಿಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ.

    ಹೌದು. ಇಂದು ಲಾಕ್ ಡೌನ್ ನ ಮತ್ತೊಂದು ಪ್ಯಾಕೇಜ್ ವಿಸ್ತರಣೆ ಘೋಷಣೆ ಮಾಡುವ ಸಾಧ್ಯತೆ ಇದ್ದು, ಕೆಲವು ಕಸುಬುದಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದು. ಅಕ್ಕಸಾಲಿಗರು, ಬಡಗಿಗಳು, ಕುಂಬಾರರು, ಅರ್ಚಕರು, ಟೈಲರ್ ಗಳು, ಅಡುಗೆ ಕೆಲಸದವರು ಹಾಗೂ ಹೂಮಾರಾಟಗಾರರು ಸೇರಿ ಕೆಲವು ಕಾಯಕ ವರ್ಗಗಳಿಗೆ ಒನ್ ಟೈಂ ಪರಿಹಾರ ನೀಡೋ ನಿರೀಕ್ಷೆ ಇದೆ. ಪ್ರತೀ ಸಮುದಾಯಕ್ಕೆ ಈ ಸಲ 3,000ದಂತೆ ಒನ್ ಟೈಂ ಪರಿಹಾರಕ್ಕೆ ಪ್ಲಾನ್ ಮಾಡಲಾಗಿದೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸುಮಾರು 500ರಿಂದ 800 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಭಾನುವಾರವೇ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆಯಾಗಬೇಕಿತ್ತು. ಆದರೆ ಸೋಮವಾರ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಕಾರಣದಿಂದ ಮುಂದೂಡಿಕೆಯಾಗಿತ್ತು. ನಿನ್ನೆ ಮಂಗಳವಾರವೂ ಮೋದಿಯವರ ರಾಷ್ಟ್ರೀಯ ಭಾಷಣ ಕಾರಣದಿಂದ ಘೋಷಣೆಯಾಗಲಿಲ್ಲ. ಹಾಗಾಗಿ ಇವತ್ತು ಸಿಎಂ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆ ಮಾಡಬಹುದು ಎಂಬುದಾಗಿ ತಿಳಿದುಬಂದಿದೆ.

    ಕಳೆದ ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ, ಲಾಕ್‍ಡೌನ್ ಅವಧಿಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ಆಯಾ ದಿನದ ಕೆಲಸವನ್ನೇ ನಂಬಿ ಜೀವನ ನಡೆಸುತ್ತಾ ಬಂದಿವರೇ ಆಗಿದ್ದಾರೆ. ವೃತ್ತಿನಿರತ ಕ್ಷೌರಿಕರು, ಅಗಸರು, ರೈತರು, ಆಟೋ ಟ್ಯಾಕ್ಸಿ ಚಾಲಕರು, ಹೂ, ಹಣ್ಣು ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದರು. ಉದ್ಯಮ ವಲಯವೂ ಸ್ತಬ್ಧ ಆಗಿ ಉದ್ಯಮಿಗಳು ಕಂಗಾಲಾಗಿದ್ದರು. ಇದೀಗ ಈ ವರ್ಗದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದ್ದು, 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು.

  • ಇಂದು ರಾತ್ರಿ 8 ಗಂಟೆಗೆ ಮೋದಿ ಭಾಷಣ

    ಇಂದು ರಾತ್ರಿ 8 ಗಂಟೆಗೆ ಮೋದಿ ಭಾಷಣ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

    ಈ ಬಗ್ಗೆ ಪ್ರಧಾನಿಗಳ ಕಾರ್ಯಾಲಯ ಟ್ವೀಟ್ ಮಾಡಿದ್ದು, ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಬರೆದುಕೊಂಡಿದೆ.

    ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಹೇರಲಾಗಿದ್ದ ಲಾಕ್ ಡೌನ್ ಬಗ್ಗೆ ಮೋದಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

    ನಿನ್ನೆಯಷ್ಟೇ ಮೋದಿಯವರು ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದರು. ಸುದೀರ್ಘವಾಗಿ ನಡೆಸಿದ ಸಂವಾದದಲ್ಲಿ ಲಾಕ್ ಡೌನ್ ಮುಂದುವರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದರು.

    ಒಟ್ಟಿನಲ್ಲಿ ಕೊರೊನಾ ವೈರಸ್ ಭೀತಿ ಬಳಿಕ ಇಂದಿನ ಭಾಷಣ ಸೇರಿ ಐದನೇಯ ಬಾರಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ಇಂದಿನ ಭಾಷಣದಲ್ಲಿ ದೇಶವ್ಯಾಪಿ ಲಾಕ್ ಡೌನ್ ಮತ್ತೆ ವಿಸ್ತರಿಸುತ್ತಾರಾ ಅಥವಾ ವಿಸ್ತರಿಸದೇ ಮತ್ತಷ್ಟು ವಿನಾಯಿತಿ ಪ್ರಕಟಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಈ ಹಿಂದೆ ಮಾರ್ಚ್ 19 ರಂದು ದೇಶವನ್ನು ಉದ್ದೇಶಿಸಿ ಮಾ.21 ರಂದು ಜನತಾ ಕರ್ಫ್ಯೂ ಮಾಡಬೇಕೆಂದು ಕೇಳಿಕೊಂಡಿದ್ದರು. ಇದಾದ ಬಳಿಕ ಮಾ.24 ರಂದು 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದರು.

    ಬಳಿಕ ಏ.5 ರಂದು ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಲು ರಾತ್ರಿ 9 ಗಂಟೆಗೆ ವಿದ್ಯುತ್ ದೀಪ ಆಫ್ ಮಾಡಿ ದೀಪ/ ಕ್ಯಾಂಡಲ್ ಲೈಟ್/ ಮೊಬೈಲ್ ಟಾರ್ಚ್ ಬೆಳಗಿ ಎಂದು ಮನವಿ ಮಾಡಿದ್ದರು. ಇದಕ್ಕೂ ದೇಶದಲ್ಲಿ ಭಾರೀ ಬೆಂಬಲ ಸಿಕ್ಕಿತ್ತು. ಇದಾದ ಬಳಿಕ ಏಪ್ರಿಲ್ 14 ರಂದು ಭಾಷಣ ಮಾಡಿದ್ದರು.

  • ವಲಸೆ ಕಾರ್ಮಿಕರನ್ನು ಸ್ವೀಕರಿಸಲು ತಮಿಳುನಾಡು ನಕಾರ- ಊಟ, ತಿಂಡಿ ಇಲ್ಲದೆ ಪರದಾಟ

    ವಲಸೆ ಕಾರ್ಮಿಕರನ್ನು ಸ್ವೀಕರಿಸಲು ತಮಿಳುನಾಡು ನಕಾರ- ಊಟ, ತಿಂಡಿ ಇಲ್ಲದೆ ಪರದಾಟ

    ಚಾಮರಾಜನಗರ: ಲಾಕ್ ಡೌನ್ ನಿಂದಾಗಿ ಊಟ, ತಿಂಡಿ ಇಲ್ಲದೆ ಚಾಮರಾಜನಗರದಲ್ಲಿ ವಲಸೆ ಕಾರ್ಮಿಕರು ಪರದಾಡುತ್ತಿದ್ದಾರೆ.

    ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಚೆಕ್ ಪೋಸ್ಟ್ ಆದ ಚಾಮರಾಜನಗರ ತಾಲೂಕಿನ ಬಾಗಳಿ ಚೆಕ್ ಪೋಸ್ಟ್ ಬಳಿ ತಮಿಳುನಾಡಿನ ರಾಮೇಶ್ವರ ಮೂಲದ ಕಾರ್ಮಿಕರು ಅನ್ನ, ನೀರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ.

    ಉಡುಪಿಯಿಂದ ಬಂದಿರುವ ಸುಮಾರು 100 ಕಾರ್ಮಿಕರು ಕಳೆದ ರಾತ್ರಿಯಿಂದ ಚೆಕ್ ಪೋಸ್ಟ್ ನಲ್ಲಿಯೇ ಉಳಿದಿದ್ದಾರೆ. ನಾಲ್ಕು ಕೆಎಸ್‍ಆರ್‍ಟಿಸಿಬಸ್ ನಲ್ಲಿ ಬಂದಿರುವ ಇವರನ್ನು ತಮಿಳುನಾಡು ಸರ್ಕಾರ ಸ್ವೀಕರಿಸಲು ಸಿದ್ಧವಿಲ್ಲದಿರುವುದರಿಂದ ಪಡಬಾರದ ಕಷ್ಟ ಪಡುತ್ತಿದ್ದಾರೆ.

    ಇತ್ತ ಚಾಮರಾಜನಗರ ಜಿಲ್ಲಾಧಿಕಾರಿಗಳು ಕೂಡ ಮೈಸೂರಿನಿಂದ ಬಂದ ಕಾರ್ಮಿಕರನ್ನು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿರುವುದರಿಂದ ಕಾರ್ಮಿಕರು ವೇದನೆ ಅನುಭವಿಸುತ್ತಿದ್ದಾರೆ.

  • ಸಂಕಷ್ಟದಲ್ಲಿರೋ ಬಡ ಸ್ವಸಹಾಯ ಗುಂಪುಗಳಿಗೆ ಮರುಜೀವ ತುಂಬಿದ ಪೊಲೀಸರು

    ಸಂಕಷ್ಟದಲ್ಲಿರೋ ಬಡ ಸ್ವಸಹಾಯ ಗುಂಪುಗಳಿಗೆ ಮರುಜೀವ ತುಂಬಿದ ಪೊಲೀಸರು

    – ಯಾದಗಿರಿಯಲ್ಲಿ ಪೊಲೀಸರ ವಿನೂತನ ಪ್ಲಾನ್

    ಯಾದಗಿರಿ: ಸದ್ಯ ಲಾಕ್ ಡೌನ್ ಸಂಪೂರ್ಣ ಸಡಲಿಕೆ ಅನುಭವಿಸುತ್ತಿರುವ ಯಾದಗಿರಿ ಜನತೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಮರೆತು ಬಿಟ್ಟಿದ್ದಾರೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರೂ ಜನ ಮಾತ್ರ ನಿಯಮ ಪಾಲಿಸುತ್ತಿಲ್ಲ. ಮತ್ತೊಂದು ಕಡೆ ಲಾಕ್ ಡೌನ್ ನಲ್ಲಿ ಬಡ ಟೈಲರಿಂಗ್ ಕುಟುಂಬಗಳು ಕಂಗಾಲಾಗಿವೆ. ಈ ಹಿನ್ನೆಲೆಯಲ್ಲಿ ಜನರ ಹಿತಕ್ಕಾಗಿ ಮಾಸ್ಟರ್ ಪ್ಲಾನ್ ಮೂಲಕ ಯಾದಗಿರಿ ಪೊಲೀಸ್ ಇಲಾಖೆ ವಿನೂತನ ಅಭಿಯಾನಕ್ಕೆ ಮುಂದಾಗಿದೆ.

    ಹೌದು. ಯಾದಗಿರಿ ಪೊಲೀಸರು ಮಾಸ್ಕ್ ಧರಿಸದೇ ಮತ್ತು ಸಂಚಾರ ನಿಯಮಗಳನ್ನು ಪಾಲಿಸದ ವಾಹನ ಸವಾರರನ್ನು ಹಿಡಿದು ಅವರಿಗೆ ಬುದ್ಧಿವಾದ ಹೇಳಿ, ಅವರಿಗೆ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗೆ ಪೊಲೀಸರು ಮಾರಾಟ ಮಾಡುತ್ತಿರುವ ಮಾಸ್ಕ್ ಗಳನ್ನು ಟೈಲರಿಂಗ್ ಮಾಡುವ ಬಡ ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳು ತಯಾರಿಸುತ್ತಿವೆ.

    ಇವರ ಬದುಕಿಗೆ ಸ್ವಲ್ಪ ಪ್ರಮಾಣದಲ್ಲಿ ಆಸರೆಯಾಗುವ ನಿಟ್ಟಿನಲ್ಲಿ ಯಾದಗಿರಿ ಎಸ್.ಪಿ ಋಷಿಕೇಶ್ ಭಗವಾನ್ ಸೂಚನೆ ಮೇರೆಗೆ ಡಿವೈಎಸ್ ಪಿ ಶರಣಪ್ಪ ಮತ್ತು ಟ್ರಾಫಿಕ್ ವಿಭಾಗದ ಪಿಎಸ್ ಪ್ರದೀಪ್ ನಗರದ ವಿವಿಧ ವೃತ್ತಗಳಲ್ಲಿ ಸ್ವಸಹಾಯ ಸಂಘಗಳ ಸದಸ್ಯರ ಜೊತೆ ಪೇದೆಗಳನ್ನು ನಿಲ್ಲಿಸಿದ್ದಾರೆ.

    ಈ ಮೂಲಕ ಸಂಚಾರ ನಿಯಮಗಳನ್ನು ಪಾಲಿಸದ ಮತ್ತು ಮಾಸ್ಕ್ ಧರಿಸದೆ ವಾಹನ ಚಲಾಯಿಸುವ ಸವಾರರನ್ನು ತಡೆದು ಅವರಿಗೆ ಬುದ್ಧಿವಾದ ಹೇಳಿ ಒಂದು ಕಡೆ ದಂಡ ವಿಧಿಸಿ ಮತ್ತೊಂದು ಕಡೆ ಸ್ವಸಹಾಯ ಗುಂಪುಗಳ ಮೂಲಕ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ.

    ಇದರಿಂದ ಒಂದು ಕಡೆ ತಪ್ಪು ಮಾಡಿದ ವಾಹನ ಸವಾರರಿಗೆ ದಂಡ ಬಿದ್ದರೆ, ಮತ್ತೊಂದು ಕಡೆ ಸಂಕಷ್ಟದಲ್ಲಿರುವ ಸ್ವಸಹಾಯ ಗುಂಪುಗಳಿಗೆ ಜೀವನಕ್ಕೆ ಒಂದು ದಾರಿಯಾದಂತಾಗಿದೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಮದ್ಯ ಸೇವಿಸ್ತೀವಿ, ನಿಯಮ ಉಲ್ಲಂಘಿಸಲ್ಲ- ಬೆಂಗ್ಳೂರಲ್ಲಿ ಮುಂಜಾನೆಯಿಂದ್ಲೇ ಕ್ಯೂ ನಿಂತ ಜನ

    ಮದ್ಯ ಸೇವಿಸ್ತೀವಿ, ನಿಯಮ ಉಲ್ಲಂಘಿಸಲ್ಲ- ಬೆಂಗ್ಳೂರಲ್ಲಿ ಮುಂಜಾನೆಯಿಂದ್ಲೇ ಕ್ಯೂ ನಿಂತ ಜನ

    – ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಎಣ್ಣೆಪ್ರಿಯರು

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲಿ ದೇಶಾದ್ಯಂತ ಹೇರಲಾದ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಕರ್ನಾಟಕದಲ್ಲಿ ಇಂದಿನಿಂದ ಜನರಿಗೆ ಲಾಕ್ ಡೌನ್ ನಿಂದ ರಿಲೀಫ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮುಂಜಾನೆಯಿಂದಲೇ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿರುವ ನವರಂಗ್ ಸಿಗ್ನಲ್ ಬಳಿಯ ಬಾರ್ ವೊಂದರ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಮಾಸ್ಕ್ ಧರಿಸಿ ಜನ ಕ್ಯೂನಲ್ಲಿ ನಿಂತಿದ್ದಾರೆ.

    ಬಾರ್ ಓಪನ್ ಆಗ್ತಿರೋದಕ್ಕೆ ಎಣ್ಣೆ ಪ್ರಿಯರು ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೇ ಕ್ಯೂನಲ್ಲಿ ನಿಂತ ಜನ, ತುಂಬಾ ಖುಷಿಯಾಗ್ತಿದೆ ಸರ್. ನಮ್ಮ ಕೈಗೆ ಯಾವಾಗ ಬಾಟಲ್ ಸಿಗುತ್ತೋ ಅಂತ ಕಾಯುತ್ತಾ ಇದ್ದೀವಿ. ಮದ್ಯ ಸೇವಿಸ್ತೀವಿ. ಆದರೆ ನಿಯಮಗಳನ್ನ ಉಲ್ಲಂಘಿಸಲ್ಲ ಅಂತ ಹೇಳುತ್ತಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ಇತ್ತ ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಮಾರಾಟಗಾರರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅಂಗಡಿಯ ಮುಂದೆ ಮರದ ಕಂಬಗಳನ್ನ ಬಳಕೆ ಮಾಡಿ ಕ್ಯೂಗೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ಆರು ಅಡಿಗಳಿಗೆ ಒಂದರಂತೆ ಬಾಕ್ಸ್ ಬರೆದಿರೋ ಸಿಬ್ಬಂದಿ, ಆ ಬಾಕ್ಸ್ ನಲ್ಲೇ ನಿಂತು ಬರುವಂತೆ ನಿರ್ದೇಶನ ನೀಡಿದ್ದಾರೆ. ಭಾನುವಾರವೇ ಎಂಆರ್‍ಪಿ ಸೆಂಟರ್ ಗಳು ಈ ಸಿದ್ಧತೆ ಮಾಡಿಕೊಂಡಿವೆ. ಇದನ್ನೂ ಓದಿ: ನಾಳೆ ಬಾರ್ ಓಪನ್ – ಇಂದೇ ಮದ್ಯದಂಗಡಿಗೆ ಆರತಿ ಎತ್ತಿ, ಕಾಯಿ ಒಡೆದ ಮದ್ಯಪ್ರಿಯ

    ನಿಯಮಗಳೇನು?
    ಒಬ್ಬರಿಗೆ ಎರಡೇ ಲೀಟರ್ ಮದ್ಯ ಸಿಗಲಿದ್ದು, ಬೆಳಗ್ಗೆ 9 ರಿಂದ ಸಂಜೆ 7 ರ ತನಕ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನಗರದ ಹಲವಡೆ ಬಾರ್ ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬ್ಯಾರಿಕೇಡ್ ನಿರ್ಮಿಸಿ, ಬಾಕ್ಸ್ ಗಳ ಅಳವಡಿಕೆ ಮಾಡಲಾಗಿದೆ. ಲಾಕ್ ಡೌನ್ ಹಿನ್ನಲೆ ಸ್ಥಗಿತಗೊಂಡಿದ್ದ ಮದ್ಯ ಮಾರಾಟ 42 ದಿನಗಳ ಬಳಿಕ ಆರಂಭವಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಎಂಎಸ್‍ಐಎಲ್ (ಸಿಎಲ್ 11ಸಿ) , ಸಿಎಲ್ 2 ನಲ್ಲಿ ಪಾರ್ಸೆಲ್ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಯಶವಂತಪುರ, ಮತ್ತಿಕೆರೆ, ರಾಜಾಜಿನಗರ ಸೇರಿದಂತೆ ಹಲವಡೆ ಬಾರ್ ಗಳ ಮುಂದೆ ಬ್ಯಾರಿಕೇಡ್ ಅಳವಡಿಕೆ, ಮದ್ಯ ಮಾರಾಟಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು

  • ಇಂದಿನಿಂದ ರಾಜ್ಯದಲ್ಲಿ ಲಾಕ್‍ಡೌನ್ ರಿಲೀಫ್- ಒಂದೂವರೆ ತಿಂಗ್ಳ ಬಳಿಕ ಮುಕ್ಕಾಲು ಕರ್ನಾಟಕ ಓಪನ್

    ಇಂದಿನಿಂದ ರಾಜ್ಯದಲ್ಲಿ ಲಾಕ್‍ಡೌನ್ ರಿಲೀಫ್- ಒಂದೂವರೆ ತಿಂಗ್ಳ ಬಳಿಕ ಮುಕ್ಕಾಲು ಕರ್ನಾಟಕ ಓಪನ್

    – ಕಂಟೈನ್‍ಮೆಂಟ್ ಝೋನ್‍ನಲ್ಲಿ ಎಲ್ಲವೂ ಬಂದ್

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ಸಡಿಲಿಕೆಗೊಂಡಿದ್ದು, ಇಂದಿನಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ರಿಲೀಫ್ ಸಿಗಲಿದೆ.

    ಕರ್ನಾಟಕದಲ್ಲಿ ಲಾಕ್‍ಡೌನ್ ಭಾಗಶಃ ಸಡಿಲವಾಗಿದ್ದು, ಒಂದೂವರೆ ತಿಂಗಳ ಬಳಿಕ ಮುಕ್ಕಾಲು ಕರ್ನಾಟಕ ಓಪನ್ ಆಗಲಿದೆ. ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತು ಪಡಿಸಿ ಉಳಿದ ಕಡೆ ರಿಲೀಫ್ ಸಿಗಲಿದೆ. ಕಂಟೈನ್ಮೆಂಟ್ ಝೋನ್‍ಗಳನ್ನು ಬಿಟ್ಟು ಉಳಿದೆಡೆ ಅಗತ್ಯ ಸೇವೆಗಳು ಲಭ್ಯ ವಾಗಲಿದೆ. ಕಂಟೈನ್‍ಮೆಂಟ್ ಝೋನ್‍ಗಳಲ್ಲಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

    ಮೂರು ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಹಾಗಾದ್ರೆ ಇಂದಿನಿಂದ ಏನಿರುತ್ತೆ..? ಏನಿರಲ್ಲ..? ಎಂಬುದರ ಕುರಿತು ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

    ಇಂದಿನಿಂದ ಏನಿರುತ್ತೆ..?
    ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಮದ್ಯದಂಗಡಿ ಓಪನ್ ಆಗಲಿದೆ. ಪಾನ್, ಗುಟ್ಕಾ, ಸಿಗರೇಟ್, ಬೀಡಿ ಮಾರಾಟಕ್ಕೆ ಹಾಗೂ ಮದುವೆ, ಶುಭ ಸಮಾರಂಭಗಳಿಗೆ ಅವಕಾಶ (ಗರಿಷ್ಠ 50 ಮಂದಿ) ಅವಕಾಶ ಮಾಡಿಕೊಡಲಾಗಿದೆ.

    ಅಂತ್ಯಕ್ರಿಯೆಯಲ್ಲಿ 20 ಜನ ಪಾಲ್ಗೊಳ್ಳಬಹುದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಕೆಲಸದ ಸ್ಥಳಗಳಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಾಗಿದೆ.

    ಏನಿರಲ್ಲ..?
    ರೈಲು, ಮೆಟ್ರೋ, ವಿಮಾನ ಸಂಚಾರ ಇರಲ್ಲ. ಅಂತರ್ ರಾಜ್ಯಗಳ ನಡುವೆ ಬಸ್ ಸಂಚಾರ ಇರಲ್ಲ. ಶಾಲೆ ಕಾಲೇಜು, ದೇಗುಲ, ಆತಿಥ್ಯ ಸೇವೆ ಇರಲ್ಲ. ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ ಇರಲ್ಲ. ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷೇಧ ಮಾಡಲಾಗಿದೆ. ಸಾರ್ವಜನಿಕ ಶೌಚಾಲಯ ಬಳಕೆಗೆ ಅವಕಾಶವಿಲ್ಲ.

  • ಆಟೋ ಚಾಲಕರು, ಬಿಹಾರಿ ಕಾರ್ಮಿಕರಿಗೆ ಸಮಾಜ ಸುಧಾರಕ ಸಹಾಯ

    ಆಟೋ ಚಾಲಕರು, ಬಿಹಾರಿ ಕಾರ್ಮಿಕರಿಗೆ ಸಮಾಜ ಸುಧಾರಕ ಸಹಾಯ

    ಚಿಕ್ಕೋಡಿ(ಬೆಳಗಾವಿ): ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಆಟೋ ಚಾಲಕರು ಹಾಗೂ ಬಿಹಾರಿ ಕಾರ್ಮಿಕರಿಗೆ ಚಿಕ್ಕೋಡಿ ಪಟ್ಟಣದ ಸಮಾಜ ಸುಧಾರಕರೊಬ್ಬರು ಸಹಾಯ ಹಸ್ತ ಚಾಚಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಪ್ರಕಾಶ ವಂಟಮತ್ತೆ ಎಂಬವರು 600 ಬಡ ಕುಟುಂಬಗಳು ಹಾಗೂ ಬಿಹಾರಿ ಕಾರ್ಮಿಕರಿಗೆ 15 ದಿನಗಳವರೆಗೆ ದಿನಸಿ ಸಾಮಗ್ರಿ ವಿತರಿಸಿ ಮಾದರಿಯಾಗಿದ್ದಾರೆ. ತರಕಾರಿ, ಬ್ರೆಡ್, ಮಸಾಲೆ ಪದಾರ್ಥಗಳು, ಅಡುಗೆ ಎಣ್ಣೆ, ಸಕ್ಕರೆ, ಬೇಳೆ, ಚಹಾ ಪುಡಿ ಸೇರಿದಂತೆ ದಿನನಿತ್ಯ ಆಹಾರಕ್ಕೆ ಬಳಸುವ ಸಾಮಗ್ರಿಗಳನ್ನ ನೀಡಿದ್ದಾರೆ.

    ಸರ್ಕಾರ ಅಕ್ಕಿ ನೀಡಿದೆ. ಚಿಕ್ಕೋಡಿ ಶಾಸಕರು ಜೋಳ ಹಾಗೂ ಬೇಳೆ ಕಾಳು ಕೊಟ್ಟಿರುವ ಕಾರಣ ಈ ಸಮಾಜ ಸೇವಕ ಆಹಾರ ತಯಾರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನ ನೀಡಿ ಮಾದರಿಯಾಗಿದ್ದಾರೆ. ವಿಶೇಷವಾಗಿ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿರುವ ಒಳ ಚರಂಡಿ ಕಾಮಗಾರಿಗೆ ಆಗಮಿಸಿ ಸಂಕಷ್ಟದಲ್ಲಿರುವ ಬಿಹಾರಿ ಕಾರ್ಮಿಕರ ಶೆಡ್‍ಗಳಿಗೆ ತೆರಳಿ ಆಹಾರ ಸಾಮಗ್ರಿ ವಿತರಿಸಿದ್ದಾರೆ.

    ಚಿಕ್ಕೋಡಿ ಪಟ್ಟಣದಲ್ಲಿ ಬಡ ಕುಟುಂಬಗಳಲ್ಲಿ ಯಾರಿಗಾದರೂ ದಿನಸಿ ಸಾಮಗ್ರಿಯ ಸಮಸ್ಯೆ ಇದ್ದರೆ ನಮಗೆ ದೂರವಾಣಿ ಕರೆ ಮಾಡಿದ್ರೆ ನಾವು ಅವರಿಗೆ ಆಹಾರ ಸಾಮಗ್ರಿ ತಲುಪಿಸುತ್ತೇವೆ ಎಂದು ಪ್ರಕಾಶ ವಂಟಮೂತ್ತೆ ತಿಳಿಸಿದ್ದಾರೆ. ಮತ ಪಡೆದು ಅದೆಷ್ಟೋ ಜನ ಪ್ರತಿನಿಧಿಗಳು ಜನರ ಸಂಕಷ್ಟ ಕೇಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ ಸಮಾಜ ಸುಧಾಕರೊಬ್ಬರು ಕಾರ್ಮಿಕರು ಹಾಗೂ ಆಟೋ ಚಾಲಕರ ನೆರವಿಗೆ ನಿಂತು ಇತರರಿಗೂ ಮಾದರಿಯಾಗಿದ್ದಾರೆ.

  • ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಶೇವಿಂಗ್ ಕಿಟ್ ವಿತರಿಸಿದ ಪಬ್ಲಿಕ್ ಹೀರೋ

    ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಶೇವಿಂಗ್ ಕಿಟ್ ವಿತರಿಸಿದ ಪಬ್ಲಿಕ್ ಹೀರೋ

    ಉಡುಪಿ: ಕಳೆದ ಒಂದು ತಿಂಗಳಿಂದ ಉಡುಪಿಯಲ್ಲಿ ಸೆಲೂನ್‍ಗಳು ಬಂದ್ ಆಗಿರುವುದರಿಂದ ಹೇರ್ ಕಟ್ಟಿಂಗ್, ಶೇವಿಂಗ್ ಮಾಡದೆ ಜನಕ್ಕೆ ಕಿರಿಕಿರಿಯಾಗುತ್ತಿದೆ. ಮನೆಯಲ್ಲಿ ಲಾಕ್ ಆಗಿರೋರು ತಮ್ಮ ಹೇರ್ ಕಟ್ಟಿಂಗ್ ತಾವೇ ಮಾಡಿಕೊಳ್ತಾ ಇದ್ದಾರೆ.

    ಹೊರ ಜಿಲ್ಲೆಯಿಂದ ಬಂದು ಉಡುಪಿಯ ನಿರಾಶ್ರಿತರ ಕೇಂದ್ರದಲ್ಲಿ ಇರುವವರು ಕಟ್ಟಿಂಗ್, ಶೇವಿಂಗ್ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟವನ್ನು ಅರಿತುಕೊಂಡ ಉಡುಪಿಯ ಸಮಾಜಸೇವಕ, ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಶೇವಿಂಗ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿದ್ದಾರೆ.

    ಉಡುಪಿಯ ಇಂದಿರಾ ಕ್ಯಾಂಟೀನ್, ಬಸ್ ನಿಲ್ದಾಣ, ರಸ್ತೆ ಬಳಿ ಪ್ರತಿನಿತ್ಯ ನೂರಾರು ಮಂದಿ ನಿರ್ಗತಿಕರು ಹೊರ ಜಿಲ್ಲೆಯ ಹೊರ ರಾಜ್ಯದ ಕಾರ್ಮಿಕರು ಇದ್ದಾರೆ. ಅವರಿಗೆಲ್ಲಾ ಶೇವಿಂಗ್ ಕಿಟ್ ಕೊಟ್ಟಿದ್ದಾರೆ. ಊಟ, ತಿಂಡಿಗಂತ ಇಂದಿರಾ ಕ್ಯಾಂಟೀನ್ ಆವರಣಕ್ಕೆ ಬಂದವರಿಗೆ ನಿತ್ಯಾನಂದ ಒಳಕಾಡು ಸೋಪು ಬ್ಲೇಡು ಯೂಸ್ ಆಂಡ್ ಥ್ರೋ ಶೇವಿಂಗ್ ಕಿಟ್ ಮತ್ತು ಬ್ರೆಶ್ ಗಳನ್ನು ಕೊಟ್ಟರು. ಉದ್ದುದ್ದ ಗಡ್ಡ ಮತ್ತು ಕೂದಲು ಬಂದವರನ್ನು ಗುರುತಿಸಿ ಶೇವಿಂಗ್ ಕಿಟ್ಟನ್ನು ವಿತರಣೆ ಮಾಡಿದರು.

    ನಾನು ನಾಳೆ ಮತ್ತೆ ಬರುತ್ತೇನೆ ಎಲ್ಲರೂ ನೀಟ್ ಆ್ಯಂಡ್ ಕ್ಲೀನ್ ಆಗಿ ಶೇವ್ ಮಾಡ್ಕೊಂಡು ಬರ್ಬೇಕು ಅಂತ ವಿನಂತಿ ಮಾಡಿಕೊಂಡರು. ಉಡುಪಿ ಟೌನ್ ಟ್ರಾಫಿಕ್ ಎಸ್.ಐ ಅಬ್ದುಲ್ ಖಾದರ್ ಶೇವಿಂಗ್ ಕಿಟ್ ಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಉದ್ಯಮಿ ರಂಜನ್ ಕಲ್ಕೂರ ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಿದರು. ಮಾತನಾಡಿದ ಎಸ್‍ಐ ಖಾದರ್, ಕಳೆದ ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ನಿರ್ಗತಿಕರಿಗೆ ನಿರಾಶ್ರಿತರಿಗೆ ಕೂಲಿ ಕಾರ್ಮಿಕರಿಗೆ ಜನರು ಊಟೋಪಚಾರದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಅನ್ನದಾನಕ್ಕಿಂತ ದೊಡ್ಡದಾದ ದಾನ ಬೇರೆ ಇಲ್ಲ. ಹಸಿದವನಿಗೆ ಅನ್ನ ಹಾಕುವುದು ದೇವರು ಮೆಚ್ಚುವ ಕಾರ್ಯ ಎಂದು ಹೇಳಿದರು.

    ಸಮಾಜಸೇವಕ ನಿತ್ಯಾನಂದ ಒಳಕಾಡು ಮಾತನಾಡಿ ಕಷ್ಟದಲ್ಲಿರುವವರಿಗೆ ಆಹಾರ ಕೊಡುವುದು ಎಷ್ಟು ಮುಖ್ಯವೋ ಅವರ ಆರೋಗ್ಯವನ್ನು ಕಾಪಾಡುವ ಕೂಡ ಅಷ್ಟೇ ಮುಖ್ಯ. ಜಿಲ್ಲೆಯಲ್ಲಿ ಸೆಲೂನ್ ಬಂದ್ ಆಗಿ ಒಂದು ತಿಂಗಳಾಯ್ತು, ಅವರಾಗಿಯೇ ಶೇವಿಂಗ್ ಕಟ್ಟಿಂಗ್ ಮಾಡಿಕೊಳ್ಳೋಣ ಎಂದರೂ ಅವರಿಗೆ ಬೇಕಾದ ಶೇವಿಂಗ್ ಕಿಟ್ ಗಳ ಸಿಗುತ್ತಿಲ್ಲ. ಹಾಗಾಗಿ ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ಈಗ ನೂರು ಜನರಿಗೆ ಕೆಟ್ ವಿತರಿಸಿದ್ದೇವೆ. ಒಟ್ಟು ಐನೂರು ಜನಕ್ಕೆ ಒಂದೆರಡು ದಿನದಲ್ಲಿ ವಿತರಿಸುತ್ತೇವೆ ಎಂದರು.