Tag: loan

  • ಲೋನ್ ಪಡೆಯಲು ಶ್ಯೂರಿಟಿ ಹಾಕಿ ಅಂದ್ರು, ದಾಖಲೆಗಳೇ ಇರಲಿಲ್ಲ: ಉಮಾಪತಿ

    ಲೋನ್ ಪಡೆಯಲು ಶ್ಯೂರಿಟಿ ಹಾಕಿ ಅಂದ್ರು, ದಾಖಲೆಗಳೇ ಇರಲಿಲ್ಲ: ಉಮಾಪತಿ

    ಬೆಂಗಳೂರು: ಲೋನ್ ಪಡೆಯಲು ಶ್ಯೂರಿಟಿ ಹಾಕುವಂತೆ ಕೇಳಿದ್ದರು. ಆದರೆ ಅವರ ಬಳಿ ಆಸ್ತಿಯ ಕುರಿತು ಯಾವುದೇ ಓರಿಜಿನಲ್ ದಾಖಲೆಗಳು ಇರಲಿಲ್ಲ. ಹೀಗಾಗಿ ಇದು ಫೇಕ್ ಎಂದು ತಿಳಿದು ದೂರು ನೀಡಿದೆವು ಎಂದು ನಿರ್ಮಾಪಕ ಉಮಾಪತಿಯವರು ತಿಳಿಸಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 25 ಕೋಟಿ ರೂ. ವಂಚನೆ ಪ್ರಕರಣದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ಈ ಕುರಿತು ನಿರ್ಮಾಪಕ ಉಮಾಪತಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಹರ್ಷ ಅವರು ಲೋನ್‍ಗೆ ಅಪ್ಲೈ ಮಾಡಿದ್ದರು, ಶ್ಯೂರಿಟಿ ಹಾಕುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಾನಗೆ ಫೋನ್ ಕರೆ ಬಂದಿತ್ತು. ಇದಾದ ಬಳಿಕ ದರ್ಶನ್ ಅವರು ಹಾಗೂ ನಾನು ಮಾತನಾಡಿಕೊಂಡು ಬಳಿಕ ಡಾಕ್ಯೂಮೆಂಟ್ ವೆರಿಫಿಕೇಶನ್‍ಗೆ ಕರೆಯುತ್ತೇವೆ. ಆಗ ಅವರ ಬಳಿ ಸಂಪೂರ್ಣವಾದ ದಾಖಲೆ ಇಲ್ಲದಿರುವುದು ಹಾಗೂ ಫೇಕ್ ಎನ್ನುವುದು ತಿಳಿಯುತ್ತದೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

    ಬಳಿಕ ದರ್ಶನ್ ಅವರು ಹಾಗೂ ನಾನು ನಮ್ಮ ಆಫೀಸ್‍ನಲ್ಲಿ ಕುಳಿತು ಮಾತನಾಡಿ, ಬಳಿಕ ನಮ್ಮ ಆಫೀಸ್ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ. ಆದರೆ ಈ ಆಸ್ತಿ ಮೈಸೂರು ವ್ಯಾಪ್ತಿಗೆ ಬರುತ್ತವೆ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಬಳಿಕ ತನಿಖೆ ಆರಂಭವಾಗುತ್ತದೆ, ಕೆಲ ಮಾಹಿತಿ ಬೇಕೆಂದು ನನ್ನನ್ನು, ದರ್ಶನ್ ಅವರನ್ನು ಹಾಗೂ ಹರ್ಷ ಅವರನ್ನು ಕರೆದಿದ್ದರು. ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿ ಬಂದಿದ್ದೇವೆ ಎಂದು ವಿವರಿಸಿದರು.

    ಯಾವ ಆಸ್ತಿ, ಅದರ ಆಧಾರದ ಕುರಿತು ಯಾವುದೇ ಒರಿಜಿನಲ್ ಡಾಕ್ಯೂಮೆಂಟ್ ಇಲ್ಲ. ಅಲ್ಲದೆ ದರ್ಶನ್ ಅವರಿಗೆ ಸಂಬಂಧಿಸಿದ ದಾಖಲೆಗಳು ಸಹ ಇಲ್ಲ. ಆದರೆ ಯಾವುದೋ ವಿವರ ಬರೆದು ಹಾಕಿದ್ದಾರೆ. ಆಸ್ತಿ ದಾಖಲೆ ಯಾವುದೂ ಇಲ್ಲ ಎಂದಿದ್ದಾರೆ. ಒಟ್ಟು 25 ಕೋಟಿ ರೂ. ಲೋನ್ ಗೆ ಅಪ್ಲೈ ಮಾಡಿ ಶ್ಯೂರಿಟಿ ಹಾಕಲು ನಮ್ಮ ಬಳಿ ಬಂದಿದ್ದರು. ಆದರೆ ಆಸ್ತಿಯ ಯಾವುದೇ ದಾಖಲೆ ಇವರ ಬಳಿ ಇರಲಿಲ್ಲ. ಯಾಕೆ ಹೀಗೆ ಮಾಡಿದರು ಎಂಬುದನ್ನು ತಿಳಿದುಕೊಳ್ಳಲು ದೂರು ನಿಡಿದ್ದೇವೆ. ಇನ್ನೂ ಸರಿಯಾದ ಮಾಹಿತಿಯನ್ನು ಬಾಯ್ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.

    ಪರಿಚಯ ಹೇಗಾಯ್ತು?
    ಅರುಣಾ ಕುಮಾರಿ ಅವರು ಏಪ್ರಿಲ್‍ನಿಂದ ನನಗೆ ಪರಿಚಯವಾಗಿದ್ದರು. ಲೋನ್ ವಿಚಾರವಾಗಿ ನನ್ನ ಬಳಿ ಮಾತನಾಡುತ್ತಿದ್ದರು. ಮೇನಲ್ಲಿ ಈ ಘಟನೆ ನಡೆದಿದೆ, ಜೂನ್‍ನಲ್ಲಿ ದರ್ಶನ್ ಅವರಿಗೆ ಮಾಹಿತಿ ನೀಡಿ, ಇದೀಗ ದೂರು ನೀಡಿದ್ದೇವೆ. ಪರಿಚಯವಾದ ನಂತರ ಲೋನ್ ಬಗ್ಗೆ ಮಾತನಾಡಿದ್ದರು, ಬಳಿಕ ಫೆಸ್ಬುಕ್‍ನಲ್ಲಿ ಅರುಣಾ ಕುಮಾರಿ ಪರಿಚಯವಾಗಿದ್ದರು. ಮ್ಯಾನೇಜರ್ ಎಂದೇ ಪರಿಚಯ ಮಾಡಿಕೊಂಡಿದ್ದರು. ನಮ್ಮಲ್ಲಿ ಪ್ರಾಪರ್ಟಿ ಸೀಜ್ ಆಗುತ್ತಿರುತ್ತದೆ, ತೆಗೆದುಕೊಳ್ಳಲು ಆಸಕ್ತಿ ಇದ್ದರೆ ನಿಮಗೆ ಕೊಡುತ್ತೇನೆ ಎಂದಿದ್ದರು.

    ಇದಾದ ಬಳಿಕ ಲೋನ್ ವಿಚಾರದಲ್ಲಿ ದರ್ಶನ್ ಸರ್ ಹಾಗೂ ನಿಮ್ಮ ಹೆಸರು ಬರುತ್ತಿದೆ, ನೀವು ಲೋನ್‍ಗೆ ಅಪ್ಲೈ ಮಾಡುತ್ತಿದ್ದಿರಂತೆ ಎಂದು ಕೇಳಿದರು. ಆಗ ಇಲ್ಲ ನಾವು ಯಾವುದೇ ಲೋನ್‍ಗೆ ಅಪ್ಲೈ ಮಾಡುತ್ತಿಲ್ಲ. ಶ್ಯೂರಿಟಿನೂ ಹಾಕುತ್ತಿಲ್ಲ ಎಂದು ಹೇಳಿದೆ ಎಂದು ಉಮಾಪತಿಯವರು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

  • ನನ್ನ, ದರ್ಶನ್ ಹೆಸರು ಬಳಸಿ ಲೋನ್ ವಿಚಾರವಾಗಿ ವಂಚನೆ: ಉಮಾಪತಿ

    ನನ್ನ, ದರ್ಶನ್ ಹೆಸರು ಬಳಸಿ ಲೋನ್ ವಿಚಾರವಾಗಿ ವಂಚನೆ: ಉಮಾಪತಿ

    ಮೈಸೂರು: ನನ್ನ ಮತ್ತು ದರ್ಶನ್ ಅವರ ಹೆಸರನ್ನು ಬಳಸಿಕೊಂಡು ಲೋನ್ ಕೊಡುವುದಾಗಿ ಒರ್ವ ಮಹಿಳೆ ವಂಚನೆ ಮಾಡುತ್ತಿರುವ ಬಗ್ಗೆ ದೂರು ನೀಡಲು ಎಸಿಪಿ ಕಚೇರಿಗೆ ಬಂದಿದ್ದೇವೆ ಎಂದು ನಿರ್ಮಾಪಕರಾದ ಉಮಾಪತಿ ಅವರು ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮಾಪತಿ ಅವರು, ಲೋನ್ ವಿಚಾರದಲ್ಲಿ ನಟ ದರ್ಶನ್ ಹಾಗೂ ನೀವು ಶ್ಯೂರಿಟಿ ಹಾಕುತ್ತಿದ್ದೀರಂತೆ ಎಂದು ಒಂದು ಕರೆ ಬರುತ್ತದೆ. ಆಗ ನಾನು ದರ್ಶನ್ ಅವರನ್ನು ಕೇಳಿದೆ ನೀವು ಯಾರಿಗಾದರು ಶ್ಯೂರಿಟಿ ಹಾಕಿದ್ದೀರ ಎಂದು ಅವರು ಇಲ್ಲ ಎನ್ನುತ್ತಾರೆ. ಆ ಬಳಿಕ ವಂಚನೆಯ ಬಗ್ಗೆ ತಿಳಿದುಬಂದು ನಾನು ದರ್ಶನ್ ಅವರೊಂದಿಗೆ ಮಾತುಕತೆ ನಡೆಸಿ ನಮ್ಮ ಸ್ನೇಹಿತರ ಹೆಸರು ಸೇರಿದಂತೆ ನಮ್ಮ ಹೆಸರನ್ನು ಬಳಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಜೂನ್ 16 ರಂದೇ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ.

    ವಂಚನೆಯ ಬಗ್ಗೆ ನಾನು ಮತ್ತು ದರ್ಶನವರು ಕೂತು ಮಾತನಾಡಿ ಈ ಬಗ್ಗೆ ಮೈಸೂರಿನಲ್ಲಿ ದೂರು ದಾಖಲಿಸಿದರೆ ಒಳ್ಳೆಯದು ಎಂದು ಇಲ್ಲಿ ದೂರು ನೀಡಿದ್ದೇವೆ. ವಂಚನೆ ಮಾಡುತ್ತಿರುವ ಮಹಿಳೆ ಬಗ್ಗೆ 2 ತಿಂಗಳ ಹಿಂದೆ ನಮಗೆ ಗೊತ್ತಾಗಿದೆ. ಆಕೆಯನ್ನು ದರ್ಶನ್ ಅವರಿಗೆ ನಾನು ಪರಿಚಯ ಮಾಡಿರುವ ಸುದ್ದಿ ಸುಳ್ಳು. ನಾವು ಈ ಬಗ್ಗೆ ದೂರು ನೀಡಿದ್ದೇವೆ ಇದೀಗ ಮಹಿಳೆಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಮುಂದಿನ ವಿಚಾರ ತಿಳಿದುಬರಲಿದೆ ಎಂದರು. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

    ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ದರ್ಶನ್ ಬಳಿ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ಮಹಿಳೆ ಸೇರಿದಂತೆ ಇನ್ನಿಬ್ಬರ ಹೆಸರು ಎಫ್‍ಐಆರ್ ನಲ್ಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅರುಣಾ ಕುಮಾರಿ, ಮಧುಕೇಶವ ಮತ್ತು ನಂದೀಶ್ ಎಂಬವರ ವಿರುದ್ಧವೇ ಎಫ್‍ಐಆರ್ ದಾಖಲಾಗಿದೆ. ನಿರ್ಮಾಪಕ ಉಮಾಪತಿ ಗೆಳೆಯ ಹರ್ಷ ಮೆಲಂತಾ ನೀಡಿದ ದೂರಿನಡಿ ಈ ಮೂವರ ವಿರುದ್ಧ ದೂರು ದಾಖಲಾಗಿದೆ.

  • ವಿವಿಧ ಯೋಜನೆಗಳಡಿ ರೈತರಿಗೆ ಸಾಲ- ಚೆಕ್ ವಿತರಿಸಿದ ಸೋಮಶೇಖರ್

    ವಿವಿಧ ಯೋಜನೆಗಳಡಿ ರೈತರಿಗೆ ಸಾಲ- ಚೆಕ್ ವಿತರಿಸಿದ ಸೋಮಶೇಖರ್

    ಮಡಿಕೇರಿ: ವಿವಿಧ ಯೋಜನೆಗಳ ಅಡಿಯಲ್ಲಿ ಕೊಡಗಿನ 25ಕ್ಕೂ ಹೆಚ್ಚು ರೈತರಿಗೆ ಸಹಕಾರ ಸಚಿವ ಸೋಮಶೇಖರ್ ಚೆಕ್ ವಿತರಣೆ ಮಾಡಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೈತರಿಗೆ ಸಾಲದ ಚೆಕ್ ವಿತರಿಸಿದರು. ಈ ವೇಳೆ ಮಾತನಾಡಿದ ಸಚಿವ ಸೋಮಶೇಖರ್, ರಾಜ್ಯದಲ್ಲಿ ಸಹಕಾರ ಬ್ಯಾಂಕ್ ಗಳ ಮೂಲಕ ಈಗಾಗಲೇ 30 ಲಕ್ಷ ರೈತರಿಗೆ 20,810 ಕೋಟಿ ಸಾಲ ನೀಡಲು ಗುರಿ ನಿಗದಿ ಮಾಡಲಾಗಿದೆ. ಇಂದು ಕೊಡಗು ಜಿಲ್ಲೆಯಲ್ಲಿ ಈ ಸಾಲ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

    ಸಹಕಾರ ಕ್ಷೇತ್ರದ ಮೂಲಕ ಲಕ್ಷಾಂತರ ರೈತರ ಜೀವನ ಸುಧಾರಿಸಲು ಅನುಕೂಲವಾಗಿದೆ. ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿದೆ. ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಸಹಕಾರ ಇಲಾಖೆ ಹಾಗೂ ಸಹಕಾರ ಮಂತ್ರಿಯನ್ನು ಮಾಡುತ್ತಿದ್ದಾರೆ. ಎಷ್ಟೋ ವರ್ಷಗಳ ಕಾಲ ಈ ಸ್ಥಾನ ಇರಲ್ಲಿಲ್ಲ. ಮೊದಲು ಬೇರೆ ಇಲಾಖೆಯೊಂದಿಗೆ ಸಹಕಾರ ಇಲಾಖೆ ಇತ್ತು. ಆದರೆ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಈ ಇಲಾಖೆ ಮಾಡಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಹೊಂದಾಣಿಕೆಯಿಂದ ಹೋಗುವುದಕ್ಕೆ ಬಹಳ ಅನುಕೂಲವಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

  • 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ: ಎಸ್.ಟಿ.ಸೋಮಶೇಖರ್

    30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ: ಎಸ್.ಟಿ.ಸೋಮಶೇಖರ್

    – ರೈತರಿಗೆ ನೂರಕ್ಕೆ ನೂರು ಸಾಲ ಸಿಗಲು ಕ್ರಮ
    – ಡಿಸಿಸಿ ಬ್ಯಾಂಕ್‍ಗಳಿಗೆ ಅಪೆಕ್ಸ್ ಬ್ಯಾಂಕ್ ನಿಂದ ಸಹಕಾರ

    ಬೆಂಗಳೂರು: ಕಳೆದ ಸಾಲಿನಲ್ಲಿ ಶೇ. 114.70 ರೈತರಿಗೆ ಬೆಳೆಸಾಲ ನೀಡಿಕೆ ಮೂಲಕ ಗುರಿಯನ್ನು ಮೀರಿ ಸಾಧನೆ ಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಪ್ರಸಕ್ತ ಸಾಲಿನ ಅಂದರೆ, 2021-22ರಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿಯನ್ನು ನೀಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು. 

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ನಮ್ಮ ರೈತಾಪಿ ವರ್ಗದವರಿಗೆ ತೊಂದರೆಯಾಗಬಾರದು. ಹೀಗಾಗಿ 30 ಲಕ್ಷ ರೈತರಿಗೆ ಹೆಚ್ಚಿನ ಸಾಲ ತಲುಪುವಂತಾಗಬೇಕು ಎಂದು ಮುಖ್ಯಮಂತ್ರಿಗಳು ನೀಡಿದ ಸೂಚನೆಯನ್ವಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಕಳೆದ ಆರ್ಥಿಕ ವರ್ಷವಾದ 2020-21ರಲ್ಲಿ 24.50 ಲಕ್ಷ ರೈತರಿಗೆ 15400 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಿಕೆಯ ಗುರಿಯನ್ನು ಹೊಂದಲಾಗಿತ್ತು. ನಮ್ಮ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್ ಗಳು 25,93,982 ರೈತರಿಗೆ 17490 ಕೋಟಿ ರೂಪಾಯಿ ಸಾಲವನ್ನು ನೀಡಿವೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶೇಕಡಾ 100 ಗುರಿ ಮೀರಿ ಶೇ. 114.70 ಸಾಧನೆಯನ್ನು ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಈ ಸಾಲಿನಲ್ಲಿಯೂ ಇದೇ ರೀತಿಯ ಸಾಧನೆಯನ್ನು ಮಾಡುವ ಬಗ್ಗೆ ಎಂದು ಸಚಿವರಾದ ಸೋಮಶೇಖರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.  ಇದನ್ನೂ ಓದಿ: ಕೋವಿಡ್ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟಿಸಿದ ಎಸ್.ಟಿ.ಸೋಮಶೇಖರ್

    ಲಾಕ್‍ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್‍ಗಳಿಗೆ ಭೇಟಿ: 21 ಡಿಸಿಸಿ ಬ್ಯಾಂಕ್‍ಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 30 ಲಕ್ಷ ರೈತರನ್ನೂ ತಲುಪಬೇಕು, 20810 ಕೋಟಿ ರೂ. ಬೆಳೆ ಸಾಲವನ್ನು ನೀಡಬೇಕು ಎಂದು ಸೂಚಿಸಿದ್ದೇನೆ. ಲಾಕ್‍ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್‍ಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ, ಸಲಹೆ-ಸೂಚನೆಗಳನ್ನು ನೀಡಲಿದ್ದೇನೆ. ಕಳೆದ ಬಾರಿ 5-6 ಡಿಸಿಸಿ ಬ್ಯಾಂಕ್ ಗಳು ಶೇ. 100 ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಈ ವೇಳೆ ಅವರಿಗೂ ಸಹ ಗುರಿ ಮುಟ್ಟಲೇಬೇಕು ಎಂದು ಸೂಚನೆಯನ್ನು ನೀಡಿದ್ದಾಗಿ ಸಚಿವರಾದ ಸೋಮಶೇಖರ್ ತಿಳಿಸಿದರು.

    ರೈತರಿಗೆ ನೂರಕ್ಕೆ ನೂರು ಸಾಲ ಸಿಗಬೇಕು: ಡಿಸಿಸಿ ಬ್ಯಾಂಕ್ ಗಳು ತಮಗೆ ನೀಡಿರುವ ಗುರಿಯನ್ನು ತಲುಪಲೇಬೇಕು. ಯಾವುದೇ ಕಾರಣಕ್ಕೂ ಇದರಿಂದ ತಪ್ಪಿಸಿಕೊಳ್ಳಬಾರದು. ರೈತರಿಗೆ ನೂರಕ್ಕೆ ನೂರು ಸಾಲ ಸಿಗಬೇಕು. 21 ಡಿಸಿಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆಯನ್ನೂ ಮಾಡಲಿದ್ದು, 30 ಲಕ್ಷ ರೈತರಿಗೆ 20810 ಕೋಟಿ ರೂಪಾಯಿ ಬೆಳೆ ಸಾಲ ದೊರೆಯುವಂತೆ ನೋಡಿಕೊಳ್ಳಲಾಗುವುದು. ಇದನ್ನೂ ಓದಿ:  ಜೂನ್ 7ರ ನಂತರ ಲಾಕ್ ಡೌನ್ ಬೇಡ: ಎಸ್.ಟಿ.ಸೋಮಶೇರ್

    ಡಿಸಿಸಿ ಬ್ಯಾಂಕ್ ಗಳಿಗೆ ಅಪೆಕ್ಸ್ ಬ್ಯಾಂಕ್ ನಿಂದ ಸಹಕಾರ: ಕಳೆದ ಬಾರಿ ಏನು ಗುರಿ ಇತ್ತು ಎಷ್ಟು ಸಾಧನೆ ಮಾಡಲಾಗಿದೆ ಈ ಬಾರಿ ಎಷ್ಟು ಗುರಿಯನ್ನು ನೀಡಬಹುದು ಎಂಬುದನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಹಾಗೂ ಸಹಕಾರ ಸಂಘಗಳ ನಿಬಂಧಕರಾದ ಜಿಯಾವುಲ್ಲ ಅವರು ಖುದ್ದು ಎಲ್ಲ ಡಿಸಿಸಿ ಬ್ಯಾಂಕ್‍ಗಳ ಜೊತೆಗೆ ಚರ್ಚಿಸಿ ಗುರಿಯನ್ನು ನಿಗದಿಪಡಿಸಿದ್ದಾರೆ. ಅಲ್ಲದೆ, ಶೇ. 100 ಗುರಿ ಸಾಧನೆ ಮಾಡಿದ ಡಿಸಿಸಿ ಬ್ಯಾಂಕ್ ಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದೇವೆ. ಡಿಸಿಸಿ ಬ್ಯಾಂಕ್ ಗಳಿಗೆ ಅಪೆಕ್ಸ್ ಬ್ಯಾಂಕ್ ನಿಂದ ಆಗಬೇಕಾದ ಎಲ್ಲ ಸೌಲಭ್ಯಗಳನ್ನು ಮಾಡಿಕೊಡಲಾಗುವುದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಶಾಸಕರಾದ ಬೆಳ್ಳಿ ಪ್ರಕಾಶ್ ಅವರ ಸಮ್ಮುಖದಲ್ಲಿ ತಿಳಿಸಿದ್ದೇವೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು. ಇದನ್ನೂ ಓದಿ: ಲಾಕ್‍ಡೌನ್‍ನಿಂದ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ : ಶೆಟ್ಟರ್

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಶಾಸಕರಾದ ಬೆಳ್ಳಿ ಪ್ರಕಾಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕರಾದ ಜಿಯಾವುಲ್ಲ, ಎಲ್ಲ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಸಾಲದ ಸುಳಿ – ಮನೆಯವರನ್ನು ಹೊರಹಾಕಿ ನೇಣಿಗೆ ಶರಣಾದ

    ಸಾಲದ ಸುಳಿ – ಮನೆಯವರನ್ನು ಹೊರಹಾಕಿ ನೇಣಿಗೆ ಶರಣಾದ

    ಹುಬ್ಬಳ್ಳಿ: ಮನೆಯವರ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬ ಎಲ್ಲರನ್ನು ಮನೆಯಿಂದ ಹೊರ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೇ ಹುಬ್ಬಳ್ಳಿಯ ಬೇಪಾರಿ ಪ್ಲಾಟ್ ನಲತಲಿಯಲ್ಲಿ ನಡೆದಿದೆ.

    ಅಮೀರ್ ಮಹ್ಮದಾಲಿ ಮನಿಯಾರ್ (28) ಮೃತನಾಗಿದ್ದಾನೆ. ನಿನ್ನೆ ರಾತ್ರಿ ಪತ್ನಿಯೊಂದಿಗೆ ಸಾಲದ ವಿಚಾರವಾಗಿ ಜಗಳ ಮಾಡಿದ್ದ ಅಮೀರ್ ತಡರಾತ್ರಿ ಮಡದಿ ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿದ್ದಾನೆ. ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

    ಆದರೆ ಆತ್ಮಹತ್ಯೆಗೆ ಸಾಲ ಕಾರಣವಾ ಅಥವಾ ಬೇರೆ ಏನಾದರೂ ಕಾರಣವಿರಬಹುದೇ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೋವಿಶೀಲ್ಡ್ ತಯಾರಿಕಾ ಕಂಪನಿಗೆ 500 ಕೋಟಿ ತುರ್ತು ಸಾಲ

    ಕೋವಿಶೀಲ್ಡ್ ತಯಾರಿಕಾ ಕಂಪನಿಗೆ 500 ಕೋಟಿ ತುರ್ತು ಸಾಲ

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಕೋವಿಡ್ ವಿರುದ್ಧ ಹೋರಾಟದಲ್ಲಿ ಆರೋಗ್ಯ ಮೂಲಸೌಕರ್ಯಕ್ಕಾಗಿ 50 ಸಾವಿರ ಕೋಟಿ ರೂ.ಗಳನ್ನ ಸಾಲದ ರೂಪದಲ್ಲಿ ನೀಡೋದಾಗಿ ಬುಧವಾರ ಹೇಳಿತ್ತು. ಇದರ ಮೊದಲ ಲಾಭ ಕೋವಿಶೀಲ್ಡ್ ತಯಾರಿಕೆಯ ಸೀರಂ ಸಂಸ್ಥೆಗೆ ಲಭ್ಯವಾಗಿದ್ದು, ಬ್ಯಾಂಕ್ ಆಫ್ ಬರೋಡಾ 500 ಕೋಟಿ ರೂ. ಸಾಲ ನೀಡುವ ಬಗ್ಗೆ ನಿರ್ಧರಿಸಿದೆ.

    ಭಾರತದಲ್ಲಿ ಮೂರು ಕೊರೊನಾ ಲಸಿಕೆ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಲ್ಲಿ ಕೋವಿಶೀಲ್ಡ್ ಹೆಚ್ಚು ಪೂರೈಕೆಯಾಗುತ್ತಿದ್ದು, ಬಳಕೆಯಾಗ್ತಿದೆ. ಹಾಗಾಗಿ ಕೋವಿಶೀಲ್ಡ್ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಬ್ಯಾಂಕ್ ಆಫ್ ಬರೋಡಾ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋವ್ಯಾಕ್ಸಿನ್ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಗೆ ಲೋನ್ ನೀಡಲು ಮುಂದಾಗಿದೆ. ಆದ್ರೆ ಸಾಲದ ಮೊತ್ತವನ್ನ ಬಹಿರಂಗಪಡಿಸಿಲ್ಲ.

    ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಆರ್ ಬಿಐ, ಕೋವಿಡ್ ಹೋರಾಟದಲ್ಲಿ ಭಾಗಿಯಾಗುತ್ತಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳಿಗೆ ನೆರವು ನೀಡಲಾಗುವುದು. ಬ್ಯಾಂಕ್‍ಗಳು ವ್ಯಾಕ್ಸಿನ್ ತಯಾರಿಕೆ ಕಂಪನಿಗಳು, ಆಮದುದಾರರಿಗೆ, ಆಕ್ಸಿಜನ್ ಪೂರೈಕೆದಾರರಿಗೆ, ಔಷಧಿ ಕಂಪನಿಗಳು, ಲ್ಯಾಬ್, ಆಸ್ಪತ್ರೆಗಳಿಗೂ ಲೋನ್ ಸಿಗಲಿದೆ ಎಂದು ಹೇಳಿತ್ತು. ಈ ಸೌಲಭ್ಯ ಮಾರ್ಚ್ 31, 2022ರವರೆಗೆ ಇರಲಿದೆ ಎಂದು ಆರ್ ಬಿಐ ಹೇಳಿದೆ.

  • ತೀರುವಳಿ ಪತ್ರ ನೀಡಿ, ಸಾಲ ಕಟ್ಟುವಂತೆ ರೈತಗೆ ಎಸ್‍ಬಿಐ ಮತ್ತೆ ನೋಟಿಸ್

    ತೀರುವಳಿ ಪತ್ರ ನೀಡಿ, ಸಾಲ ಕಟ್ಟುವಂತೆ ರೈತಗೆ ಎಸ್‍ಬಿಐ ಮತ್ತೆ ನೋಟಿಸ್

    ಚಾಮರಾಜನಗರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ರೈತನಿಗೆ ತೀರುವಳಿ ಪತ್ರ ನೀಡಿದೆ. ಆದರೆ ಮೂರು ತಿಂಗಳ ನಂತರ ಸಾಲ ಕಟ್ಟುವಂತೆ ರೈತನಿಗೆ ಮತ್ತೆ ನೋಟಿಸ್ ನೀಡಿ ಎಡವಟ್ಟು ಮಾಡಿದೆ.

    ತಾಲೂಕಿನ ಬೇಡರಪುರದ ರೈತ ಶಿವಸ್ವಾಮಿ ಅವರಿಗೆ ಎಸ್‍ಬಿಐ ನೋಟಿಸ್ ನೀಡಿದೆ. 10 ಲಕ್ಷ ರೂಪಾಯಿ ಬೆಳೆ ಸಾಲ ಬಾಕಿ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ. ಮೂರು ತಿಂಗಳ ಹಿಂದಷ್ಟೇ ಯಾವುದೇ ಬಾಕಿ ಇಲ್ಲ ಎಂದು ರೈತನಿಗೆ ಬ್ಯಾಂಕ್ ಸಾಲ ತೀರುವಳಿ ಪತ್ರ ನೀಡಿದೆ. ಸಾಲ ಮನ್ನಾ ಆಗಿದೆ ಎಂದು ರೈತ ಶಿವಸ್ವಾಮಿ ಖುಷಿಯಾಗಿದ್ದರು. ಆದರೆ ಇದೀಗ ದಿಢೀರನೆ ಬಂದ ನೋಟಿಸ್ ನೋಡಿ ಕಂಗಾಲಾಗಿದ್ದಾರೆ.

    ವಿಷಯ ತಿಳಿದು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ನೋಟಿಸ್ ಹಿಂಪಡೆದು ನೋ ಡ್ಯೂ ಸರ್ಟಿಫಿಕೇಟ್ ನೀಡುವುದಾಗಿ ಬ್ಯಾಂಕ್ ವ್ಯವಸ್ಥಾಪಕ ಲಿಖಿತ್ ತಿಳಿಸಿದರು. ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು.

  • ಜೀವವನ್ನೇ ಕಿತ್ತುಕೊಂಡ ಕೃಷಿ ಸಾಲ – ನಾಲ್ವರು ನೇಣಿಗೆ ಶರಣು

    ಜೀವವನ್ನೇ ಕಿತ್ತುಕೊಂಡ ಕೃಷಿ ಸಾಲ – ನಾಲ್ವರು ನೇಣಿಗೆ ಶರಣು

    – ಸಾಲಕ್ಕಾಗಿ ಇಡೀ ಕುಟುಂಬವೇ ಬಲಿ

    ಹೈದರಾಬಾದ್: ಕೃಷಿಗಾಗಿ ಮಾಡಿದ ಸಾಲದ ಹೊರೆಯಿಂದ ಮನನೊಂದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನ ಮಂಚಿರ್ಯಾಲ ಜಿಲ್ಲೆಯ ಮಲ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.

    ರೈತ ರಮೇಶ್(40) ಈತನ ಪತ್ನಿ ಹಾಗೂ ಮತ್ತು ಇಬ್ಬರು ಮಕ್ಕಳಾದ ಸೌಮ್ಯಾ(19) ಮತ್ತು ಅಕ್ಷಯ್(17) ನೇಣಿಗೆ ಶರಣಾಗಿದ್ದಾರೆ. ಸಾಲ ಬಾಧೆಗೆ ಸಿಲುಕಿದ ಒಂದು ಕುಟುಂಬದ ನಾಲ್ವರು ನೇಣು ಬೀಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

    ನಾಲ್ವರು ನೇಣಿಗೆ ಶರಣಾಗುವ ಮುನ್ನ ಡೇತ್ ನೋಟ್ ಬರೆದಿಟ್ಟಿದ್ದಾರೆ. ನಿನ್ನೆ ನಮಗೆ ಸಾಲ ಕೊಟ್ಟವರಿಗೆ ವಾಪಸ್ ಸಾಲ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದೆವು. ಆದರೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿಟ್ಟು ಸಾವನ್ನಪ್ಪಿದ್ದಾರೆ.

    ರೈತ ರಮೇಶ್ ಅವರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕಳೆದ ವರ್ಷ ಸಾಕಷ್ಟು ಬೆಳೆ ಹಾನಿಯಾಗಿತ್ತು. ಮಗಳ ಮದುವೆಗೆಂದು ಸಾಲ ಮಾಡಿದ್ದಾರೆ. ಸಾಲ ತೀರಿಸಲು ಸಾಧ್ಯವಾಗಿಲ್ಲ. ಇದರ ನಡುವೆ ಸಾಲಗಾರರ ಕಾಟ ಜೋರಾಗಿತ್ತು. ನಿನ್ನೆ ಸಾಲ ಮರಳಿ ಕೊಡುವುದಾಗಿ ಮಾತುಕೊಟ್ಟಿದ್ದರು. ಆದರೆ ಹಣವನ್ನು ವಾಪಸ್ ಕೊಡುವ ಪರಿಸ್ಥಿತಿಯಲ್ಲಿ ರಮೇಶ್ ಅವರ ಕುಟುಂಬ ಇರಲಿಲ್ಲ. ಹೀಗಾಗಿ ಕುಟುಂಬದ ನಾಲ್ವರು ಸದಸ್ಯರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮಂಚಿರ್ಯಾಲ ಜಿಲ್ಲಾ ಕಾಸಿಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಡುತ್ತಿದ್ದಾರೆ. ಸಾಲಕ್ಕಾಗಿ ಇಡೀ ಕುಟುಂಬವೇ ಬಲಿಯಾಗಿದೆ.

  • ಹೆಲಿಕಾಪ್ಟರ್ ಲೋನ್‍ಗಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

    ಹೆಲಿಕಾಪ್ಟರ್ ಲೋನ್‍ಗಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ

    ಭೋಪಾಲ್: ಮಹಿಳೆಯೊಬ್ಬರು ತನಗೆ ಹೆಲಿಕಾಪ್ಟರ್ ಖರೀದಿಗಾಗಿ ಲೋನ್ ಮತ್ತು ಅದರಲ್ಲಿ ಹಾರಾಟ ನಡೆಸಲು ಪರವಾನಿಗೆ ನೀಡಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಸಂತಿ ಬಾಯಿ ಲೋಹರ್ ಅವರು ಮಾಂಡ್ಸೌರ್ ಜಿಲ್ಲೆ, ಅಗರ್ ಗ್ರಾಮದಲ್ಲಿ ವಾಸಿಸುತ್ತಿದ್ದು. ಕಳೆದ ಕೆಲದಿನಗಳ ಹಿಂದೆ ತಮ್ಮ ಮಕ್ಕಳು ಬಸಂತಿ ಬಾಯಿ ಲೋಹರ್ ಅವರು ಜಮೀನಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದಾರೆ. ಹಾಗಾಗಿ ರಾಷ್ಟ್ರಪತಿಗೆ ಪತ್ರ ಬರೆದು ಹೆಲಿಕಾಪ್ಟರ್ ಖರೀದಿಸಿ ಜಮೀನಿಗೆ ಹೋಗುವ ಉಪಾಯ ಮಾಡಿದ್ದಾರೆ.

    ಬಸಂತಿ ಬಾಯಿ ಲೋಹರ್ ಪತ್ರವನ್ನು ಹಿಂದಿಯಲ್ಲಿ ಬರೆದಿದ್ದು, ನನ್ನ ಮಕ್ಕಳಾದ ಲವ ಮತ್ತು ಕುಶ ಹಾಗೂ ಸ್ಥಳೀಯ ನಿವಾಸಿ ಪರಮಾನಂದ್ ಪಾಟಿದಾರ್ ಸೇರಿಕೊಂಡು ದಿನನಿತ್ಯ ನಾನೂ ಸಂಚರಿಸುವ ಜಮೀನಿನ ದಾರಿಯನ್ನು ಮುಚ್ಚಿದ್ದಾರೆ. ಹಾಗಾಗಿ ಜಮೀನಿಗೆ ಯಾವುದೇ ವಸ್ತುಗಳು ಮತ್ತು ದನಕರುಗಳನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಕ್ತಿ ಹೊಂದಲು ಹೆಲಿಕಾಪ್ಟರ್ ಖರೀದಿಗೆ ಸಾಲ ಕೊಡುವಂತೆ ರಾಷ್ಟ್ರಪತಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಜಮೀನಿನ ದಾರಿಯ ತಕರಾರನ್ನು ಸರಿಪಡಿಸುವಂತೆ ಮತ್ತೊಂದು ಪತ್ರ ಬರೆದಿರುವ ಬಸಂತಿ. ಈ ಪತ್ರವನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರದು ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ.

    ಮಾಂಡ್ಸೌರ್ ಜಿಲ್ಲೆಯ ಸ್ಥಳೀಯಾಡಳಿತ ಪತ್ರದ ಕುರಿತು ತನಿಖೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಪತ್ರ ವೈರಲ್ ಆಗುತ್ತಿದ್ದಂತೆ ಈ ಕುರಿತು ಕಂದಾಯ ಇಲಾಖೆ ಗಮನಹರಿಸಿದ್ದು ಜಿಲ್ಲಾ ತಾಹಶೀಲ್ದಾರ್ ಬಸಂತಿ ಅವರ ಮನೆಗೆ ತೆರಳಿ ಸ್ಥಳ ಪರಿಶೀಲಿಸಿದ್ದಾರೆ. ಆದರೆ ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ತಿಳಿಸಿದ್ದಾರೆ.

  • ಜಮೀನಿನ ಲೀಸ್ ಹಣ ಕೊಡಲಾಗದೇ ರೈತ ಅತ್ಮಹತ್ಯೆಗೆ ಶರಣು

    ಜಮೀನಿನ ಲೀಸ್ ಹಣ ಕೊಡಲಾಗದೇ ರೈತ ಅತ್ಮಹತ್ಯೆಗೆ ಶರಣು

    ವಿಜಯಪುರ : ಜಮೀನಿನ ಲೀಸ್ ಹಣ ಕೊಡಲಾಗದೇ ರೈತರೊಬ್ಬರು ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಅಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.

    ಪುಂಡಲಿಂಗ ಜೀರಟಗಿ (22) ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರಾಗಿದ್ದಾರೆ. ಸಾಲಬಾಧೆಯಿಂದ ಮನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಜಮೀನಿನಲ್ಲಿದ್ದ ಬೆಳೆ ಹಾಳಾದ ಕಾರಣ, ಜಮೀನಿನ ಲೀಸ್ ಹಣ ಕೊಡಲಾಗದೇ ಪರದಾಡುತ್ತಿದ್ದರಂತೆ. ಈ ಎಲ್ಲಾ ವಿಚಾರವಾಗಿ ಮನನೊಂದಿರುವ ಪುಂಡಲಿಂಗ ಜಮೀನಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೃಷಿ ಮಾತ್ರವಲ್ಲದೇ ಖಾಸಗಿಯಾಗಿ ಕೂಡ ಪಡೆದ ಸಾಲವನ್ನು ಮರು ಪಾವತಿ ಮಾಡಲಾರದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.