Tag: loan

  • ಸಾಲಬಾಧೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ

    ಸಾಲಬಾಧೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ

    ರಾಯಚೂರು : ಸಾಲಬಾಧೆ ತಾಳಲಾರದೆ ಜಿಲ್ಲೆಯ ಸಿಂಧನೂರು ತಾಲೂಕಿನ ಚಿತ್ರಾಲಿ ಗ್ರಾಮದ ರೈತರೊಬ್ಬರು ಇಂದು ಬೆಳಗಿನ ಜಾವ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    45 ವರ್ಷದ ಸಿದ್ದಯ್ಯಸ್ವಾಮಿ ಮೃತ ರೈತ. 9 ಎಕರೆ ಜಮೀನು ಹೊಂದಿದ್ದ ಸಿದ್ದಯ್ಯಸ್ವಾಮಿ ಅವರು ನೀರಿನ ಕೊರತೆಯಿಂದ ಬೆಳೆ ನಷ್ಟವಾಗಿ ಕೈ ಸಾಲ ಸೇರಿದಂತೆ ಬ್ಯಾಂಕ್‍ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ಮೋಟಾರ್ ತಂತಿ ಹಿಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಸಿದ್ದಯ್ಯಸ್ವಾಮಿ ಅವರು ತಮ್ಮ ಒಂಬತ್ತು ಎಕರೆಯಲ್ಲಿ ಭತ್ತವನ್ನು ಬೆಳದಿದ್ದರು. ತುಂಗಭದ್ರ ಕಾಲುವೆಯ ನೀರನ್ನೇ ನಂಬಿ ಭತ್ತ ಬೆಳದಿದ್ದರು. ಬರಗಾಲದಿಂದ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಸಿದ್ದಯ್ಯಸ್ವಾಮಿ ಬೆಳೆದ ಭತ್ತ ಸಂಪೂರ್ಣವಾಗಿ ಒಣಗಿ ಹೋಗಿತ್ತು. ರೈತ ಸಿದ್ದಯ್ಯಸ್ವಾಮಿ ಜವಳಗೇರಾ ಸಿಂಡಿಕೇಟ್ ಬ್ಯಾಂಕ್ ನಲ್ಲಿ 8 ಲಕ್ಷ ಸಾಲ, ಖಾಸಗಿಯಾಗಿ 8 ಲಕ್ಷ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಸಾಲಬಾಧೆ: ವಿಷಸೇವಿಸಿ ಮೂವರು ರೈತರ ಆತ್ಮಹತ್ಯೆ

    ಹಾವೇರಿ/ಹಾಸನ/ಮಂಡ್ಯ: ಸಾಲಭಾದೆ ತಾಳಲಾರದೆ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯದ ಹಾವೇರಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದಿವೆ.

    ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಈರನಗೌಡ ನೀಲನಗೌಡ (40) ಆತ್ಮಹತ್ಯೆಗೆ ಶರಣಾದ ರೈತ. ಈರನಗೌಡ ಅವರು ಆರು ಎಕರೆ ಜಮೀನು ಹೊಂದಿದ್ದು, ಬ್ಯಾಂಕ್ ಮತ್ತು ಕೈ ಸಾಲ ಸೇರಿದಂತೆ 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮತ್ತು ಹತ್ತಿ ಮಳೆ ಬಾರದೇ ಕೈ ಕೊಟ್ಟಿದ್ದರಿಂದ ಇಂದು ಬೆಳಗ್ಗೆ ತಮ್ಮ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾಸನ-ರುದ್ರೇಗೌಡ

    ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿಯ ರೈತ ರುದ್ರೇಗೌಡ (58) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರೇಗೌಡ ಅವರು ಬ್ಯಾಂಕ್ ಮತ್ತು ಕೈ ಸಾಲ ಸೇರಿದಂತೆ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಜಮೀನು ಬಳಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ, ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮಂಡ್ಯ-ಯುವ ರೈತ ಮಧುಕುಮಾರ್

    ಇನ್ನೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದ ಯುವ ರೈತ ಮಧುಕುಮಾರ್ (23) ಮಂಗಳವಾರ ರಾತ್ರಿ ವಿಷ ಸೇವಿಸಿದದ್ರು, ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮಧುಕುಮಾರ್ ಒಂದೂವರೆ ಎಕರೆ ಭೂಮಿಯಲ್ಲಿ ಭತ್ತ ಬೆಳದಿದ್ದರು. ಇತ್ತೀಚಿಗೆ ಜಮೀನಿನಲ್ಲಿ ಕೊರಸಿದ್ದ ಬೋರವೆಲ್‍ನಲ್ಲಿ ನೀರು ಬಂದಿರಲಿಲ್ಲ. ಮಧುಕರ್ ಬೇಸಾಯಕ್ಕೆಂದು ಎರಡೂವರೆ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 5 ಸಾವಿರ ಸಾಲ ಹಿಂದಿರುಗಿಸದ್ದಕ್ಕೆ ಗೆಳಯನನ್ನೆ ಕೊಂದ!

    ಧಾರವಾಡ: ಕೇವಲ 5 ಸಾವಿರ ಸಾಲ ವಾಪಸ್ ಮಾಡಲಿಲ್ಲ ಎಂದು ತನ್ನ ಗೆಳೆಯನಿಗೆ ಇನ್ನಿಬ್ಬರು ಗೆಳೆಯರು ಸೇರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ಮಧ್ಯರಾತ್ರಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ಬಸವರಾಜ್ ಹೊಸಕೇರಿ (28) ತನ್ನ ಗೆಳೆಯರಿಂದ ಕೊಲೆಯಾದ ವ್ಯಕ್ತಿ. ಅಲ್ತಾಫ್ ನದಾಫ್ ಮತ್ತು ಶಂಕರಪ್ಪ ಇಬ್ಬರೂ ಸೇರಿ ಬಸವರಾಜ್‍ನ ಕೊಲೆ ಮಾಡಿರುವ ಆರೋಪಿಗಳು. ಬುಧವಾರ ರಾತ್ರಿ ಬಸವರಾಜ್ ಹಾಗೂ ಅಲ್ತಾಫ್ ನದಾಫ್ ಮತ್ತು ಶಂಕ್ರಪ್ಪ ಸೇರಿ ಮದ್ಯವನ್ನ ಕುಡಿದಿದ್ದಾರೆ.

    ಆರೋಪಿ ಅಲ್ತಾಫ್‍

    ಬಾರ್‍ವೊಂದರಲ್ಲಿ ಮದ್ಯ ಕುಡಿದು ಬಸವರಾಜನ ಮನೆಗೆ ಬಂದು ಅಲ್ಲಿ ಕುಡಿದಿದ್ದಾರೆ. ಈ ವೇಳೆ ಅಲ್ತಾಫ್, ಗೆಳೆಯ ಬಸವರಾಜನಿಗೆ ತನ್ನ 5 ಸಾವಿರ ರೂಪಾಯಿ ಸಾಲ ವಾಪಸ್ ನೀಡಲು ಒತ್ತಾಯಿಸಿದ್ದಾನೆ. ಹಣದ ವಿಚಾರವಾಗಿ ಅಲ್ತಾಫ್ ಮತ್ತು ಬಸವರಾಜನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗುತ್ತಿದ್ದಂತೆಯೇ ಶಂಕ್ರಪ್ಪ ಬಸವರಾಜನ ಕೈಗಳನ್ನ ಹಿಡಿದುಕೊಂಡಿದ್ದಾನೆ. ಈ ವೇಳೆ ಅಲ್ತಾಫ್ ದೊಣ್ಣೆಯಿಂದ ಹೊಡೆದು ಬಸವರಾಜನನ್ನು ಕೊಲೆ ಮಾಡಿದ್ದಾನೆ.

    ಬಸವರಾಜ್ ಹೊಸಕೇರಿ

    ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಅಲ್ತಾಫ್‍ ಮತ್ತು ಶಂಕ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.