ಹಾವೇರಿ: ಸಾಲಬಾಧೆ ತಾಳಲಾರದೆ ಆರು ವರ್ಷದ ಮಗನೊಂದಿಗೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡಗಿ ತಾಲೂಕಿನ ಶಂಕರಿಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರೈತ ಮಂಜಪ್ಪ ಕಲ್ಲಮ್ಮನವರ (40)ಮತ್ತು ಮಗ ಲಿಂಗರಾಜ್(6) ಗುರುತಿಸಲಾಗಿದೆ. ಮಂಜಪ್ಪ ಇಪ್ಪತ್ತೈದು ಎಕರೆ ಜಮೀನು ಹೊಂದಿದ್ದರು. ಬ್ಯಾಂಕ್ ಮತ್ತು ಕೈ ಸಾಲ ಅಂತಾ ಇಪ್ಪತ್ತು ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದರು. ಕಳೆದ ಎರಡು ಮೂರು ವರ್ಷಗಳಿಂದ ಬೆಳೆದ ಬೆಳೆ ಕೈಗೆ ಬಂದಿರಲಿಲ್ಲ.
ಕಳೆದೆರಡು ವರ್ಷಗಳಿಂದ ಕ್ಯಾಬೇಜ್ ಬೆಳೆ ಕೈ ಕೊಟ್ಟಿದ್ದರಿಂದ ಬೇಸತ್ತು ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರೈತರಿಗೆ ಸಾಲ ವಿತರಣೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕಿನಲ್ಲಿ ನಡೆದಿದೆ. ಸಾಲ ವಿತರಣೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಘಟನೆಯ ಕುರಿತು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣನ ಕ್ಷೇತ್ರದಲ್ಲಿ ಮತದಾರರಿಗೆ ಸಾಲದ ರೂಪದಲ್ಲಿ ಆಮಿಷ ಒಡ್ಡುತ್ತಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಶಾಸಕ ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕಾರಣ ಈ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನಲಾಗಿದೆ.
ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕ್ ನಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಚೆಕ್ ಅಥವಾ ಆರ್ ಟಿಜಿಎಸ್ ಮೂಲಕ ನೀಡಬೇಕಿದ್ದ ಸಾಲವನ್ನು ನಗದು ರೂಪದಲ್ಲಿ ಕೊಟ್ಟು ಕಾಂಗ್ರೆಸ್ ಗೆ ಮತಹಾಕುವಂತೆ ಹೇಳಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.
ಜಮೀನಿನ ಪಹಣಿ ಹೊಂದಿರುವ ಕಾಂಗ್ರೆಸ್ ಬೆಂಬಲಿತ ರೈತರಿಗೆ ಮಾತ್ರ ಹಳೇ ದಿನಾಂಕ ನಮೂದಿಸಿ ಸಾಲ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ವಿಎಸ್‍ಎಸ್‍ಎನ್ ಅಧಿಕಾರಿಗಳ ಜಾಣ ನಡೆಗೆ ಮುಂದಾಗಿದ್ದಾರೆ. ರೈತರಿಗೆ ಸಾಲ ನೀಡುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಪ್ಪಳ: ಹತ್ತಾರು ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಉದ್ಯಮಿಗಳ ವಿರುದ್ಧ ಕ್ರಮಕ್ಕೆ ಬ್ಯಾಂಕ್‍ಗಳು ಮುಂದಾಗುತ್ತಿಲ್ಲ. ಆದರೆ ಇಲ್ಲೊಂದು ಸಹಕಾರಿ ಬ್ಯಾಂಕ್ ರೈತನಿಗೆ ಕೊಟ್ಟ 3 ಲಕ್ಷ ರೂ. ಸಾಲಕ್ಕೆ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಳ್ಳಿ ಕ್ರಾಸ್‍ನಲ್ಲಿನ ರೈತ ಸುಕೊ ಸಹಕಾರಿ ಬ್ಯಾಂಕ್ ನಲ್ಲಿ ಹೈನುಗಾರಿಕೆಗಾಗಿ ಸಾಲ ಮಾಡಿದ್ದರು. ಚಿನ್ನ ಮತ್ತು ಭೂಮಿಯನ್ನು ಅಡವಿಟ್ಟುಕೊಂಡು ಬ್ಯಾಂಕ್ ಸಾಲ ನೀಡಿತ್ತು. ಆದ್ರೆ ಪ್ರಕೃತಿ ವಿಕೋಪದಿಂದ ಹೈನುಗಾರಿಕೆಯಲ್ಲಿ ನಷ್ಟ ಉಂಟಾಗಿದ್ದರಿಂದ ರೈತ ವಿಷ್ಟುವರ್ಧನ ರೆಡ್ಡಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬ್ಯಾಂಕ್ ಸಿಬ್ಬಂದಿ ರೈತನ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿದ್ದಾರೆ.
ಒಂದು ವಾರದ ಹಿಂದೆ ಪೊಲೀಸರ ಸಮೇತ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿ, ಮನೆಯಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ರೈತನ ಮನೆ ಬೀಗ ಮುರಿದು, ಗೃಹ ಉಪಯೋಗಿ ವಸ್ತುಗಳನ್ನು ಎತ್ತೊಯ್ಯುವ ಮೂಲಕ ಅಕ್ಷರಶಃ ಗೂಂಡಾಗಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಗೆ ಬೀಗ ಮುದ್ರೆ ಹಾಕಿದ್ದಾರೆ. ಆಗ ಬ್ಯಾಂಕ್ ಗೆ ಹೋಗಿರೋ ರೈತ, ಯಾವ ಕಾನೂನಿನಡಿ ನಮ್ಮ ಮನೆಗೆ ನುಗ್ಗಿ ಹೀಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬ್ಯಾಂಕ್ ಮ್ಯಾನೇಜರ್ ನಮಗೂ ಮತ್ತು ಮನೆಗೆ ನುಗ್ಗಿ ವಸ್ತು ತೆಗದುಕೊಂಡು ಹೋಗಿದ್ದಕ್ಕೂ ಸಂಬಂಧವಿಲ್ಲ ಎಂದು ಹಿಂಬರಹ ನೀಡಿದ್ದಾರೆ.
ಇದರ ವಿರುದ್ಧ ರೈತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಕೃತ್ಯಕ್ಕೆ ರೈತನ ಕುಟುಂಬ ಕಂಗಾಲಾಗಿದೆ.
ಬೆಂಗಳೂರು: ನಟಿ ಸಿಂಧು ಮೆನನ್ ಕುಟುಂಬದ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.
ಕಚೇರಿಗೆ ಕಟ್ಟಡ ಬೋಗ್ಯಕ್ಕೆ ಪಡೆದು ವಂಚನೆ ಎಸಗಿರೋ ಅರೋಪದಡಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ಹಾಗೂ ಸುಧಾ ರಾಜಶೇಖರ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಸಿಂಧು ಮೆನನ್ ಸಹೋದರ ಮನೋಜ್ ಕಟ್ಟಡದ ದಾಖಲೆಗಳನ್ನು ನಕಲು ಮಾಡಿ ಬ್ಯಾಂಕಿನಲ್ಲಿ ಲೋನ್ ಮಾಡಿಸಿದ್ದ. ಕಚೇರಿ ಪ್ರಾರಂಭಿಸಲು ಕಮರ್ಷಿಯಲ್ ಜಾಗ ಬೇಕು ಎಂದು ಗಣೇಶ್ ರಾವ್‍ರನ್ನು ಸಂಪರ್ಕಿಸಿದ್ದ. ನಂತರ ಮನೋಜ್ ಕಟ್ಟಡ ಮಾಲೀಕ ಗಣೇಶ್ ರಾವ್ ರಿಂದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಕಟ್ಟಡದ ದಾಖಲೆಗಳನ್ನ ಪಡೆದಿದ್ದ.
ಮೂರು ತಿಂಗಳ ಬಳಿಕ ಕಚೇರಿ ಬೇಡ ಎಂದು ಬೀಗ ವಾಪಸ್ ನೀಡಿದ್ದು, ಬ್ಯಾಂಕ್ ಲೋನ್ ಆಗಿಲ್ಲ. ನಿಮ್ಮ ಮಳಿಗೆ ಬೇಡ ಎಂದು ಮನೋಜ್ ಹೇಳಿದ್ದ. ಅಗ್ರೀಮೆಂಟ್ ದಾಖಲೆಗಳನ್ನು ಕೇಳಿದಾಗ ತಂದು ಕೊಡುತ್ತೇನೆ ಎಂದು ಮನೋಜ್ ಕೈ ಎತ್ತಿದ್ದ. ಗಣೇಶ್ ರಾವ್ ಮನೆ ದಾಖಲೆಗಳನ್ನು ಅಡವಿಟ್ಟು ವಿಜಯಾ ಬ್ಯಾಂಕಿನಲ್ಲಿ ಲೋನ್ ಗೆ ಅರ್ಜಿ ಹಾಕಿದ್ದ.
ಬಾಡಿಗೆ ಕಟ್ಟಡವನ್ನ ಸ್ವಂತದ್ದು ಎಂದು ಮನೋಜ್ ಉಲ್ಲೇಖಿಸಿದ್ದನು. ಅಷ್ಟೇ ಅಲ್ಲದೇ ಲೋನ್ ಗೆ ಶ್ಯೂರಿಟಿ ಗಣೇಶ್ ರಾವ್ ಎಂದು ಫಾರಂ 16 ರಲ್ಲಿ ಉಲ್ಲೇಖವಾಗಿತ್ತು. ಸಿಂಧು ಮೆನನ್ ಸಹೋದರನ ವಂಚನೆ ವಿರುದ್ಧ ಗಣೇಶ್ ರಾವ್ ದೂರು ನೀಡಿದ್ದಾರೆ.
ರಾಮನಗರ: ಸಾಲಬಾಧೆ ತಾಳಲಾರದೆ ಮಗುವನ್ನು ತಾವೂ ನೇಣಿಗೆ ಶರಣಾದ ಆಘಾತಕಾರಿ ಘಟನೆಯೊಂದು ಕನಕಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.
ಪತಿ ಸೋಮಶೇಖರ್ (36), ಪತ್ನಿ ಸುಧಾ (27) ಹಾಗೂ ಮಗು ಪ್ರೀತಂ ಮೃತರು. ಗೂಡಿನ ವ್ಯಾಪಾರ ಮಾಡಿಕೊಂಡಿದ್ದ ಮೃತ ಸೋಮಶೇಖರ್ ರೈತರ ಬಳಿ ಸಾಲಕ್ಕೆ ಗೂಡು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು.
ಕಳೆದ ಕೆಲವು ದಿನಗಳ ಹಿಂದೆ ರೈತರ ಬಳಿ ರೇಷ್ಮೆ ಗೂಡು ತೆಗೆದುಕೊಂಡಿದ್ದು, ಹಣ ನೀಡಿರಲಿಲ್ಲ. ಅಲ್ಲದೇ ವ್ಯಾಪಾರ ಕೂಡಾ ಕೈಕೊಟ್ಟು ಸುಮಾರು 3 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು. ಸೋಮವಾರ ಮನೆಯ ಬಳಿ ಹಣಕ್ಕಾಗಿ ರೈತರು ಬಂದಿದ್ದು, ಹಣ ನೀಡದೇ ಇದ್ದದ್ದಕ್ಕೆ ಗಲಾಟೆ ಮಾಡಿದ್ದರು. ಈ ವಿಚಾರವಾಗಿ ಮನನೊಂದ ಸುಧಾ ಸಂಜೆ ವೇಳೆಗೆ ತನ್ನ ಮಗುವಿನ ಜೊತೆ ನೇಣು ಬಿಗಿದುಕೊಂಡಿದ್ದಾರೆ.
ನಂತರ ಮನೆಗೆ ಬಂದ ಸೋಮಶೇಖರ್ ಪತ್ನಿ ಹಾಗೂ ಮಗುವಿನ ಸಾವು ಕಂಡು ತಾನೂ ಸಹ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸಂಜೆ ಬಳಿಕ ಟ್ಯೂಷನ್ ಗೆ ಹೋಗಿದ್ದ ಸೋಮಶೇಖರ್ ಅವರ ಇನ್ನೋರ್ವ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕನಕಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಡ್ಯ: ನನ್ನ ಜಮೀನನ್ನು ವಶಪಡಿಸಿಕೊಂಡು ಸಾಲವನ್ನು ತೀರಿಸಿ ಎಂದು ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹಲವರಿಗೆ ಕಳೆದೊಂದು ವರ್ಷದಿಂದ ಮನವಿ ಮಾಡುತ್ತಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೋಳಾರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಬಿ. ಜವರೇಗೌಡ ಅವರಿಗೆ ಸುಮಾರು ಎರಡು ಎಕರೆ ಹತ್ತು ಗುಂಟೆ ಜಮೀನಿದೆ. ಇವರು ವ್ಯವಸಾಯದ ಜೊತೆಗೆ ತೃತೀಯ ದರ್ಜೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಉದ್ಯೋಗ ಖಾತರಿ ಯೋಜನೆಯಡಿ ಮಾಡಿಸಿದ ಕೆಲಸಕ್ಕೆ ಹಣ ಸಂದಾಯವಾಗಿಲ್ಲವಂತೆ. ಅಲ್ಲದೆ ಬರದಿಂದಾಗಿ ಕಳೆದ ಮೂರು ನಾಲ್ಕು ವರ್ಷದಿಂದ ಸರಿಯಾಗಿ ಬೆಳೆಯೂ ಕೈ ಸೇರಿಲ್ಲ. ಇವೆಲ್ಲದರ ನಡುವೆ ಸಾಲ ಮಾಡಿ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದಾರೆ. ಇದರಿಂದಾಗಿ ಅಸಲು ಬಡ್ಡಿ ಎಲ್ಲ ಸೇರಿ ಸುಮಾರು 30 ಲಕ್ಷದಷ್ಟು ಸಾಲವಾಗಿದೆ.
ಇದನ್ನು ತೀರಿಸಲು ದಾರಿ ಕಾಣದ ರೈತ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿದಂತೆ ಹಲವರಿಗೆ ಪತ್ರ ಬರೆದು ನನ್ನ ಜಮೀನನ್ನು ವಶಕ್ಕೆ ಪಡೆದು ಸಾಲ ತೀರಿಸಿ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಮನವಿ ಮಾಡುತ್ತಿದ್ದರೂ, ಯಾರೊಬ್ಬರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವೆ ಉಮಾಶ್ರೀ ಹೆಸರು ಹೇಳಿಕೊಂಡು ಮಹಿಳೆಯೊಬ್ಬಳು ನೂರಾರು ಜನರಿಗೆ ವಂಚಿಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ಶಿರಾ ಗೇಟ್ ನ ನಿವಾಸಿ ಪುಷ್ಪಾ ಜನರಿಗೆ ಪಂಗನಾಮ ಹಾಕಿದ ವಂಚಕಿ. ಈಕೆ ಸರ್ಕಾರದ ವತಿಯಿಂದ ಎಸ್.ಬಿ.ಐ ನಲ್ಲಿ ಎರಡು ಲಕ್ಷದವರೆಗೂ ಲೋನ್ ಕೊಡಿಸುತ್ತೀನಿ ಎಂದು ಹೇಳಿ ದೊಡ್ಡಸಾರಂಗಿಪಾಳ್ಯ ಸೇರಿದಂತೆ ಹಲವು ಗ್ರಾಮಗಳ ನೂರಾರು ಜನರಿಂದ ಮುಂಗಡವಾಗಿ ಮನಸೋ ಇಚ್ಛೆ ಹಣ ವಸೂಲಿ ಮಾಡಿ ಮೋಸ ಮಾಡಿದ್ದಾಳೆ.
ಸ್ವಯಂ ಉದ್ಯೋಗ ಮಾಡಲು ಸರ್ಕಾರವೇ ಲೋನ್ ನೀಡುತ್ತೆ. ಅದಕ್ಕೆ ಮುಂಗಡವಾಗಿ ಹಣ ಕಟ್ಟಬೇಕು ಎಂದು ಹೇಳಿ ಕೆಲವರಿಂದ ನಾಲ್ಕು ಸಾವಿರ, ಇನ್ನೂ ಕೆಲವರಿಂದ ಐದು ಸಾವಿರ ಹೀಗೆ ಮನಬಂದಂತೆ ಲಕ್ಷಾಂತರ ರೂ. ಹಣ ಪೀಕಿದ್ದಾಳೆ. ಸುಳ್ಳು ದಾಖಲೆ ಪತ್ರ ತೋರಿಸಿ ವಂಚಿಸಿದ್ದಾಳೆ.
ಒಂದು ವರ್ಷ ಆದರೂ ಲೋನ್ ಸಿಗದಿದ್ದಾಗ ರೊಚ್ಚಿಗೆದ್ದ ಜನರು ಶಿರಾ ಗೇಟ್ ನಲ್ಲಿ ಇರುವ ಪುಷ್ಪಾಳ ಮನೆಗೆ ಹೋಗಿ ತರಾಟೆ ತೆಗೆದುಕೊಂಡಿದ್ದಾರೆ. ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಪುಷ್ಪಾ ಒಪ್ಪದಿದ್ದಾಗ ನಗರ ಠಾಣೆವರೆಗೆ ಸುಮಾರು 2 ಕಿ.ಮಿ.ನಷ್ಟು ದೂರ ಮೆರವಣಿಗೆ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ಮೆರವಣಿಗೆ ಉದ್ದಕ್ಕೂ ಧರ್ಮದೇಟು ನೀಡುತ್ತಾ ಬಂದಿದ್ದಾರೆ.
ಪುಷ್ಪಾಳ ವಂಚನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಕೋಲಾರ: ಅನಾರೋಗ್ಯ ಹಾಗೂ ಸಾಲಬಾಧೆ ತಾಳಲಾರದೆ ದಂಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮಂಡಿಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವೆಂಕಟರಮಣಪ್ಪ (57), ಪಾರ್ವತಮ್ಮ (45) ಆತ್ಮಹತ್ಯೆಗೆ ಶರಣಾದ ದಂಪತಿ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಗಂಡನ ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಸತಿ-ಪತಿ ನೇಣಿಗೆ ಶರಣಾಗಿದ್ದಾರೆ ಎಂದು ಮಗ ನರೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ವೆಂಕಟರಮಣಪ್ಪ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದರು. ಸಾಲಬಾಧೆ ತಾಳಲಾರದೆ ಸಾವಿಗೆ ಶರಣಾಗಿದ್ದಾರೆ ಎಂದು ಮಗ ನರೇಶ್ ಮುಳಬಾಗಿಲು ಪೊಲೀಸರಿಗೆ ತಿಳಿಸಿದ್ದಾರೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಲಕ್ನೋ: ಲೋನ್ ರಿಕವರಿ ಏಜೆಂಟ್‍ಗಳು ರೈತನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 100 ಕಿ.ಮೀ ದೂರವಿರುವ ಸೀತಾಪುರದಲ್ಲಿ ನಡೆದಿದೆ.
ಗ್ಯಾನ ಚಂದ್ರ(45) ಮೃತ ರೈತ. ಪೊಲೀಸರ ಪ್ರಕಾರ, ಗ್ಯಾನ ಚಂದ್ರ ಅವರು ಖಾಸಗಿ ಸಂಸ್ಥೆ ಎಲ್&ಟಿ ಫೈನಾನ್ಸ್‍ನಿಂದ ಕೆಲವು ವರ್ಷಗಳ ಹಿಂದೆ 5 ಲಕ್ಷ ರೂ. ಸಾಲ ಪಡೆದಿದ್ದರು. ಲೋನ್ ಪೂರ್ಣಗೊಳಿಸಲು 1.25 ಲಕ್ಷ ರೂ. ಪಾವತಿಸಬೇಕಿತ್ತು. ಚಂದ್ರ ಅವರು ಎರಡು ವಾರಗಳ ಹಿಂದೆ ಸಂಸ್ಥೆಗೆ 35 ಸಾವಿರ ರೂ. ಹಣವನ್ನ ಪಾವತಿಸಿದ್ದರು. ಲೋನ್ ಹಣ ಪಾವತಿಯಲ್ಲಿ ಕೆಲವು ವಾರ ವಿಳಂಬವಾದ ಕಾರಣ ಎರಡು ದಿನಗಳ ಹಿಂದೆ ಐವರು ರಿಕವರಿ ಏಜೆಂಟ್‍ಗಳು ಮನೆಯ ಬಳಿ ಬಂದು ಟ್ರ್ಯಾಕ್ಟರ್ ಹಿಂದಿರುಗಿಸುವಂತೆ ಚಂದ್ರ ಅವರಿಗೆ ಕೇಳಿದ್ದಾರೆ.
ರೈತ ಹಾಗೂ ಏಜೆಂಟ್‍ಗಳ ನಡುವೆ ವಾಗ್ವಾದ ನಡೆದಿದದ್ದು, ಈ ವೇಳೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರಿಕವರಿ ಏಜೆಂಟ್‍ಗಳು ಮುಂದಾಗಿದ್ದಾರೆ. ಅವರಲ್ಲಿ ಒಬ್ಬರು ಚಂದ್ರ ಅವರನ್ನ ಟ್ರ್ಯಾಕ್ಟರ್ ಮುಂದೆ ತಳ್ಳಿದ್ದಾರೆ. ಹೀಗಾಗಿ ಕುಟುಂಬಸ್ಥರ ಕಣ್ಣ ಮುಂದೆಯೇ ಚಂದ್ರ ಟ್ರ್ಯಾಕ್ಟರ್ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ನಾವು ಜನವರಿ 10ರಂದು 35 ಸಾವಿರ ರೂ. ಪಾವತಿಸಿದ್ದೆವು. ನಮ್ಮ ಅಣ್ಣ ಉಳಿದ ಹಣವನ್ನ ಬೇಗ ಪಾವತಿಸುತ್ತೇನೆಂದು ಹೇಳಿದ್ರು. ಆದ್ರೆ ಅವರು ಅದನ್ನು ಕೇಳಿಸಿಕೊಳ್ಳದೇ ಟ್ರ್ಯಾಕ್ಟರ್ ಕೀ ಕಸಿದುಕೊಂಡರು. ಅವರು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುವಾಗ ಅವರಲ್ಲಿ ಒಬ್ಬ ವ್ಯಕ್ತಿ ನನ್ನ ಅಣ್ಣನನ್ನು ತಳ್ಳಿದ್ರು. ನಂತರ ಅವರು ಟ್ರ್ಯಾಕ್ಟರ್ ಕೆಳಗೆ ಬಿದ್ದು, ನಮ್ಮ ಕಣ್ಣ ಮುಂದೆಯೇ ಸಾವನ್ನಪ್ಪಿದ್ರು ಎಂದು ಚಂದ್ರ ಅವರ ಸಹೋದರ ಓಂ ಪ್ರಕಾಶ್ ಹೇಳಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ಹೇಳಿದ್ದಾರೆ.
ಚಂದ್ರ ಅವರು 2.5 ಎಕರೆ ಜಮೀನು ಹೊಂದಿದ್ದರು. ಆದ್ರೆ ಐವರು ಪುತ್ರಿಯರು ಸೇರಿದಂತೆ 7 ಜನರ ಕುಟುಂಬವನ್ನು ಸಾಕಲು ಅದು ಸಾಕಾಗುತ್ತಿರಲಿಲ್ಲ. ಒಬ್ಬ ಮಗಳಿಗೆ ಶ್ರವಣ ಹಾಗೂ ಮಾತಾಡುವ ತೊಂದರೆಯೂ ಇತ್ತು. ಹಣ ಸಂಪಾದಿಸಲು ಚಂದ್ರ ಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ತುಮಕೂರು: 1 ಸಾವಿರ ರೂಪಾಯಿ ಸಾಲವನ್ನು ವಾಪಸ್ ನೀಡದ್ದಕ್ಕೆ ವ್ಯಕ್ತಿಯೊಬ್ಬರ ಬೆರಳನ್ನೇ ಕತ್ತರಿಸಿರುವ ಅಮಾನುಷ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ತಾಲೂಕಿನ ನಿಡುಹೊಳಲು ಗ್ರಾಮದ ನಿವಾಸಿ ಶಿವಣ್ಣ ಕೈ ಬೆರಳನ್ನು ಕಳೆದುಕೊಂಡ ವ್ಯಕ್ತಿ. ಶಿವಣ್ಣ ಅದೇ ಗ್ರಾಮದ ಕುಮಾರ್ ಎಂಬುವರಿಂದ ಕಳೆದ 15 ದಿನದ ಹಿಂದೆ ಒಂದು ಸಾವಿರ ರೂ. ಸಾಲ ಪಡೆದಿದ್ದರು.
ಭಾನುವಾರ ಕುಮಾರ್ ಸಾಲ ಹಿಂದಿರುಗಿಸುಂತೆ ಶಿವಣ್ಣಗೆ ತಾಕೀತು ಮಾಡಿದ್ದಾನೆ. ದುಡ್ಡು ಹೊಂದಿಸಲು ಆಗದೇ ಇದ್ದುದರಿಂದ ಇಂದು ಸೋಮವಾರ ಮರಳಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಕುಮಾರ್ ಹಾಗೂ ಆತನ ಪತ್ನಿ ವೀಣಾ ಶಿವಣ್ಣರ ಜೊತೆ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಿದ ಪರಿಣಾಮ ಶಿವಣ್ಣನ ಬಲಗೈಯ ಮಧ್ಯದ ಬೆರಳು ತುಂಡಾಗಿ ಬಿದ್ದಿದೆ. ಅಷ್ಟೇ ಅಲ್ಲದೇ ಎದೆ ಭಾಗಕ್ಕೂ ಏಟಾಗಿದೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.