Tag: loan

  • ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಪಹಣಿಯಲ್ಲಿ 24 ಲಕ್ಷ ರೂ. ಸಾಲ ಕಂಡು ದಂಗಾದ ರೈತ

    ಧಾರವಾಡ: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಧಾರವಾಡದ ರೈತರೊಬ್ಬರು ಪರದಾಡುವಂತಾಗಿದ್ದು, ಬ್ಯಾಂಕಿನಿಂದ ಸಾಲ ಸಿಗದೇ ಪರಿತಪಿಸುತ್ತಿದ್ದಾರೆ.

    ಅಧಿಕಾರಿಗಳ ಎಡವಟ್ಟಿನಿಂದ ತಾಲೂಕಿನ ರೈತ ನರೇಂದ್ರ ಗ್ರಾಮದ ನಾಗಪ್ಪ ಮೊರಬ ಬ್ಯಾಂಕಿನಿಂದ ಬ್ಯಾಂಕ್‍ಗೆ ಹಾಗೂ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇವರ ಜಮೀನಿನ ಪಹಣಿ ಪತ್ರದಲ್ಲಿ 24 ಲಕ್ಷ ರೂ. ಸಾಲದ ಭೋಜಾ ಏರಿಸಲಾಗಿದ್ದು, ಇದರಿಂದ ಭೋಜಾ ಇಳಿಸದೇ ಯಾವುದೇ ಬ್ಯಾಂಕಿನವರು ಸಾಲ ಕೊಡಲು ನಿರಾಕರಿಸುತ್ತಿದ್ದಾರೆ. ಇನ್ನೂ ಅಚ್ಚರಿ ಸಂಗತಿ ಎಂದರೆ 7 ಎಕ್ರೆ ಜಮೀನಿನ ಈ ಪಹಣಿ ಪತ್ರದಲ್ಲಿ ಎಸ್‍ಬಿಎಂ ಬ್ಯಾಂಕ್‍ನ ಸಾಲ ಎಂದು ನಮೂದಿಸಲಾಗಿದೆ.

    ಆದರೆ ಈ ಬ್ಯಾಂಕ್‍ನಲ್ಲಿ ನಾಗಪ್ಪ ಮೊರಬ ಅವರ ಖಾತೆಯೇ ಇಲ್ಲ. ಹೀಗಾಗಿ ಇವರು ಸಾಲ ಕೇಳಲು ಬ್ಯಾಂಕ್‍ಗಳಿಗೆ ಹೋದರೆ ಸಾಲದ ಭೋಜಾ ಇದೆ ಅದನ್ನು ಕಡಿಮೆ ಮಾಡಿಸಿಕೊಂಡು ಬನ್ನಿ ಇಲ್ಲವೇ ಎಸ್‍ಬಿಎಂನಿಂದ ಎನ್‍ಒಸಿ ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಇತ್ತ ಎಸ್‍ಬಿಎಂ ವಿಲೀನಗೊಂಡ ಹಿನ್ನೆಲೆ ನಾಗಪ್ಪ ಅವರು ಎಸ್‍ಬಿಐನ ಹುಬ್ಬಳ್ಳಿ ಶಾಖೆಗೆ ಹೋಗಿ ಭೋಜಾದ ಎನ್‍ಒಸಿ ಕೊಡುವಂತೆ ಕೇಳಿದ್ದಾರೆ. ನಮ್ಮಲ್ಲಿ ಖಾತೆಯೇ ಇಲ್ಲದೇ ಎನ್‍ಒಸಿ ಹೇಗೆ ಕೊಡುವುದು ಎಂದು ಪ್ರಶ್ನಿಸಿದ್ದಾರೆ.

    ಒಂದೆಡೆ ಎನ್‍ಒಸಿ ಇಲ್ಲದೇ ಬೇರೆ ಬ್ಯಾಂಕ್‍ಗಳು ಸಾಲ ಕೊಡುತ್ತಿಲ್ಲ. ಇತ್ತ ಭೋಜಾ ತೆಗೆದುಕೊಡಿ ಎಂದು ತಹಶೀಲ್ದಾರ ಕಚೇರಿಗೆ ಅಲೆದಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಈ ಹಿಂದೆ ಪಹಣಿ ಪತ್ರಗಳನ್ನು ಗಣಕೀಕೃತಗೊಳಸುವಾಗ ಅಧಿಕಾರಿಗಳು ಈ ರೀತಿ ಎಡವಟ್ಟು ಮಾಡಿದ್ದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ರೈತ ನಾಗಪ್ಪ ಅವರು ಮಾತ್ರ ಸಾಲ ಸಿಗದೆ ಪರದಾಡುತ್ತಿದ್ದಾರೆ.

  • ಸರ್ಕಾರದಿಂದ ಸಿಗದ ನೆರೆ ಪರಿಹಾರ- ಆತ್ಮಹತ್ಯೆಗೆ ಶರಣಾದ ರೈತ

    ಸರ್ಕಾರದಿಂದ ಸಿಗದ ನೆರೆ ಪರಿಹಾರ- ಆತ್ಮಹತ್ಯೆಗೆ ಶರಣಾದ ರೈತ

    ಚಿಕ್ಕಮಗಳೂರು: ಸರ್ಕಾರ ಸಂತ್ರಸ್ತರಿಗೆ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆ ಮಲೆನಾಡಿನಲ್ಲಿ ನಿರಾಶ್ರಿತ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೂಡಿಗೆರೆ ತಾಲೂಕಿನ ಎಸ್.ಕೆ ಮೇಗಲ್ ಗ್ರಾಮದಲ್ಲಿ ವಿಷ ಸೇವಿಸಿ ಚಂದ್ರೇಗೌಡ(55) ಸಾವಿಗೆ ಶರಣಾಗಿದ್ದಾರೆ. ಮಲೆನಾಡ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಚಂದ್ರೆ ಗೌಡರ ಒಂದು ಎಕ್ರೆ ಗದ್ದೆ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದರು. ಮಳೆಯಿಂದ ಹಾನಿಯಾಗಿದ್ದ ಗದ್ದೆ-ತೋಟವನ್ನು ಸರಿ ಮಾಡಲು ರೈತ ಕೈ ಸಾಲ ಕೂಡ ಮಾಡಿಕೊಂಡಿದ್ದರು.

    ಇತ್ತ ಸರ್ಕಾರ ಇಂದು ನೆರೆ ಪರಿಹಾರ ಕೊಡುತ್ತೆ ನಾಳೆ ಪರಿಹಾರ ನೀಡುತ್ತೆ ಎಂದು ಕಾದು ಕುಳಿತಿದ್ದ ಚಂದ್ರೇಗೌಡರು, ಸರ್ಕಾರ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಸಾಕಷ್ಟು ಬೇಸತ್ತು ಹೋಗಿದ್ದರು. ಅತ್ತ ಬೆಳೆ ಹಾನಿಯಾಗಿ ನಷ್ಟವಾಗಿ, ಇತ್ತ ಸಾಲ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಸಾಲಕ್ಕೆ ಹೆದರಿ, ಪರಿಹಾರ ಹಣ ಬರದಿದ್ದಕ್ಕೆ ನೊಂದು ಚಂದ್ರೆ ಗೌಡರು ಆತ್ಮಹತ್ಯೆಗೆ ಶರಣಾಗಿದ್ದಾರೆ.

  • ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ತುಮಕೂರು: ಸೆಪ್ಟೆಂಬರ್ 24 ರಂದು ಕೊರಿಯರ್ ನಲ್ಲಿ ನನಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದೆ. ಅಕ್ಟೋಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಇಡಿ ಸಹಾಯಕ ನಿರ್ದೇಶಕರು ದೂರವಾಣಿ ಕರೆ ಮಾಡಿ 8 ರಂದು ದಸರಾ ಇರುವುದರಿಂದ ರಾತ್ರಿ 8ಕ್ಕೆ ಬರಲು ಹೇಳಿದರು. ನಂತರ ಇಮೇಲ್ ಮಾಡಿದ್ದು, 9 ರಂದು ಬರಲು ಸೂಚಿಸಿದ್ದಾರೆ. ಯಾವ ಕೇಸು, ಯಾವ ದಾಖಲೆ ಎನ್ನೋದು ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

    ನನ್ನ ಪ್ರಕಾರ ನಾವು ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಕಂಪನಿಗೆ ಸಾಥ್ ಕೊಟ್ಟಿದ್ದೇವೆ. ಆ ಹಿನ್ನೆಲೆಯಲ್ಲಿ ಸಮನ್ಸ್ ನೀಡಿರಬಹುದು. ಅಪೆಕ್ಸ್ ಬ್ಯಾಂಕ್ ಆಡಿಯಲ್ಲಿ ಬರುವ ಕೆಲ ಬ್ಯಾಂಕ್‍ಗಳು ಸೇರಿಕೊಂಡು ಅವರಿಗೆ ಸುಮಾರು 300 ಕೋಟಿಯಷ್ಟು ಸಾಲ ನೀಡಿದ್ದೇವೆ. ಆದರಲ್ಲಿ ನಮ್ಮ ತುಮಕೂರು ಡಿಸಿಸಿ ಬ್ಯಾಂಕಿನಿಂದ ಹರ್ಷ ಶುಗರ್ಸ್ ಗೆ 25 ಕೋಟಿ ರೂ. ಸಾಲ ಕೊಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ನೋಟಿಸ್ ಬಂದಿರಬಹುದು. ಇದರ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಧುಗಿರಿ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದ ಜಿ.ಪರಮೇಶ್ವರ್ ಟಾಂಗ್ ಕೊಟ್ಟ ರಾಜಣ್ಣ, ಅವರು ಡಿಸಿಎಂ ಆಗಿದ್ದಾಗ ಯಾಕೆ ಮಧುಗಿರಿ ಜಿಲ್ಲೆ ಮಾಡಲಿಲ್ಲ. ಡಿಸಿಎಂ ಆಗಿ, ಜಿಲ್ಲಾ ಉಸ್ತುವಾರಿಯಾಗಿದ್ದರು. ಕಾಂಗ್ರೆಸ್‍ನಲ್ಲಿ ನಂಬರ್ ಒನ್ ಮುಖಂಡರಾಗಿದ್ದರು. ಎಲ್ಲಾ ಅಧಿಕಾರ ಇದ್ದಾಗ ಮಾಡದೇ ಇದ್ದವರು ಈಗ ಜಿಲ್ಲೆ ಮಾಡಿ ಎನ್ನಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಕಿಡಿಕಾರಿದರು.

    ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಮಧುಗಿರಿ ಜಿಲ್ಲೆ ಮಾಡುವ ಪ್ರಸ್ತಾಪ ಮಾಡಿದ್ದೆ. ಪಿಡಬ್ಲ್ಯುಡಿ ವಿಭಾಗ, ಆರ್‍ಟಿಓ ಎಲ್ಲ ಇದೆ. ಶೈಕ್ಷಣಿಕ ಜಿಲ್ಲೆ ಆಗಿದೆ. ಎಸ್‍ಪಿ ಮತ್ತು ಡಿಸಿ ಕಚೇರಿ ಹೊರತುಪಡಿಸಿದರೆ ಮಧುಗಿರಿಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳಿವೆ. ಆ ಮನುಷ್ಯನೇ ತೀರ್ಮಾನ ತೆಗೆದುಕೊಳ್ಳುವಾಗ ಮಾಡಲಿಲ್ಲ. ಈಗ ತಾನು ಏನೋ ಮಾಡೋಕೆ ಹೊರಟಿದ್ದೇನೆ ಎಂದು ತೋರಿಸಿಕೊಳ್ಳಲು ಪತ್ರ ಬರೆದಿದ್ದಾರೆ. ಮಧುಗಿರಿ ಜಿಲ್ಲೆ ಮಾಡಲು ನಾನೂ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆನೆ. ಸೆಪ್ಟೆಂಬರ್ 9 ರಂದು ಭೇಟಿಯಾಗಿ ಮುಖ್ಯಮಂತಿ ಅವರನ್ನು ಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

  • ಕೃಷಿ ಸಾಲಕ್ಕೆ ಅಡವಿಟ್ಟ ಮಾಂಗಲ್ಯ ಸರವನ್ನೇ ಮಾರಿಕೊಂಡ ಬ್ಯಾಂಕ್

    ಕೃಷಿ ಸಾಲಕ್ಕೆ ಅಡವಿಟ್ಟ ಮಾಂಗಲ್ಯ ಸರವನ್ನೇ ಮಾರಿಕೊಂಡ ಬ್ಯಾಂಕ್

    ಬೆಳಗಾವಿ: ಕೃಷಿ ಸಾಲಕ್ಕೆ ಅಡವಿಟ್ಟ ಮಾಂಗಲ್ಯ ಸರವನ್ನೇ ಐಸಿಐಸಿಐ ಬ್ಯಾಂಕ್ ಮಾರಿಕೊಂಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

    ಕೃಷಿಗೆ ಸಂಬಂಧಿಸಿದಂತೆ ಸಾಲ ಪಡೆಯಲು 50 ಸಾವಿರ ರೂ.ಗೆ ಪತ್ನಿಯ 48 ಗ್ರಾಂ. ಚಿನ್ನದ ಮಾಂಗಲ್ಯ ಸರವನ್ನು ಹರೀಶ್ ಮಿರಜಕರ್ ನವೆಂಬರ್ 28, 2018 ರಂದು ಐಸಿಐಸಿಐ ಬ್ಯಾಂಕಿನಲ್ಲಿ ಅಡವಿಟ್ಟಿದ್ದರು. 10 ತಿಂಗಳವರೆಗೆ ಬಡ್ಡಿ ತುಂಬದಿದ್ದಕ್ಕೆ ಕಷ್ಟವಿದೆ ಎಂದು ಅಡವಿಟ್ಟಿದ್ದ ಮಾಂಗಲ್ಯ ಸರವನ್ನೇ ಬ್ಯಾಂಕ್ ಸಿಬ್ಬಂದಿ ಮಾರಿಕೊಂಡಿದ್ದಾರೆ.

    ಹರೀಶ್ ಮಿರಜಕರ್ ಕುಟುಂಬಕ್ಕೆ ಯಾವುದೇ ಮಾಹಿತಿ, ನೋಟಿಸ್ ನೀಡದೇ ಹರಾಜು ಮಾಡಿ ಬ್ಯಾಂಕಿನವರು ಮಾರಿಕೊಂಡಿದ್ದಾರೆ. 1,23,000 ಬ್ಯಾಂಕ್ ಅಧಿಕಾರಿಗಳು ಮಾರಿಕೊಂಡಿದ್ದಾರೆ. ತಮ್ಮ ಬಡ್ಡಿ ಹಣ ಅಸಲು ಕಟ್ ಮಾಡಿಕೊಂಡು ಉಳಿದ ಹಣವನ್ನು ಹರೀಶ್ ಖಾತೆಗೆ ಡಿಪಾಸಿಟ್ ಮಾಡಿದ್ದಾರೆ. ಹರೀಶ್ ತಂದೆ, ತಾಯಿ ಈ ಕುರಿತು ನೊಂದುಕೊಂಡಿದ್ದು, ನಮ್ಮ ಸೊಸೆಯ ಮಾಂಗಲ್ಯ ಸರವನ್ನು ಕೊಡಿ ಎಂದು ಬ್ಯಾಂಕ್ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

    ಬ್ಯಾಂಕಿನಲ್ಲಿ ಅಡವಿಟ್ಟ ಮಾಂಗಲ್ಯ ಸರಕ್ಕೆ ಒಂದು ವರ್ಷ ಅವಧಿ ಇದ್ದರೂ, ಒಂದು ವರ್ಷದೊಳಗೆಯೇ ಐಸಿಐಸಿಐ ಬ್ಯಾಂಕಿನವರು ಹರಾಜು ಹಾಕಿದ್ದಾರೆ. ನಮಗೆ ನಮ್ಮ ಸೊಸೆಯ ಮಾಂಗಲ್ಯ ಸರವನ್ನು ಕೊಡಿ ಎಂದು ಹರೀಶ್ ತಂದೆ, ತಾಯಿ ಬ್ಯಾಂಕಿಗೆ ಅಲೆದಾಡುತ್ತಿದ್ದಾರೆ. ಅಲ್ಲದೆ, ನಿತ್ಯ ಬ್ಯಾಂಕಿಗೆ ಬಂದು ವೃದ್ಧರು ಕಣ್ಣೀರಿಡುತ್ತಿದ್ದಾರೆ. ಆದರೆ ಈ ಕುರಿತು ಬ್ಯಾಂಕ್ ಅಧಿಕಾರಿಗಳು ನಾವೇನೂ ಮಾಡಲು ಸಾಧ್ಯವಿಲ್ಲ. ಅದನ್ನು ಮಾರಿಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.

  • ತುರ್ತಾಗಿ 2 ಲಕ್ಷ ರೂ, ಸಾಲ ಕೊಡಿಸು – ವಾಯು ಪುತ್ರನಿಗೆ ಪತ್ರ ಬರೆದ ಭಕ್ತ

    ತುರ್ತಾಗಿ 2 ಲಕ್ಷ ರೂ, ಸಾಲ ಕೊಡಿಸು – ವಾಯು ಪುತ್ರನಿಗೆ ಪತ್ರ ಬರೆದ ಭಕ್ತ

    – ನನಗೆ ಸರ್ಕಾರಿ ಕೆಲಸದ ಜೊತೆಗೆ ಮದುವೆಯೂ ಆಗಬೇಕು

    ಕೊಪ್ಪಳ: ತುರ್ತಾಗಿ 2 ಲಕ್ಷ ರೂಪಾಯಿ ಸಾಲ ಕೊಡಿಸು ಎಂದು ಭಕ್ತನೊರ್ವ ದೇವರಿಗೆ ಪತ್ರ ಬರೆದಿದ್ದಾನೆ.

    ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಬೆಟ್ಟದಲ್ಲಿ ಇಂದು ಹುಂಡಿಯಲ್ಲಿರುವ ಹಣವನ್ನು ಎಣಿಸುವ ಕಾರ್ಯ ನೆಡದಿತ್ತು. ಈ ವೇಳೆ ಲಕ್ಷಾಂತರ ರೂಪಾಯಿ ಹಣದ ಜೊತೆಗೆ ಇಬ್ಬರೂ ಭಕ್ತರು ತಮ್ಮ ಕಷ್ಟವನ್ನು ಪತ್ರದ ಮೂಲಕ ಬರೆದು ವಾಯು ಪುತ್ರನಿಗೆ ಮನವಿ ಮಾಡಿರುವ ಪತ್ರಗಳು ಸಿಕ್ಕಿವೆ.

    ದೇವರಿಗೆ ಬರೆದ ಒಂದು ಪತ್ರದಲ್ಲಿ ಭಕ್ತ, ನನ್ನ ಮನೆಯ ಕಟ್ಟಡದ ಕೆಲಸ ಪೂರ್ತಿಯಾಗಬೇಕು. ನಾನು ಕಳೆದುಕೊಂಡ ಶಕ್ತಿ ನನಗೆ ವಾಪಸ್ ಬರಬೇಕು. ಕೇಸ್ ನಿಂದ ಮುಕ್ತಿ ಹೊಂದಬೇಕು. ಈ ಸದ್ಯ ನನಗೆ 2 ಲಕ್ಷ ರೂಪಾಯಿ ಸಾಲ ಕೊಡಿಸು ಬೇಕು ಎಂದು ವಾಯು ಪುತ್ರನಿಗೆ ಮನವಿ ಮಾಡಿದ್ದಾನೆ.

    ಇದೇ ರೀತಿ ಇನ್ನೊಬ್ಬ ಭಕ್ತನೂ ಸಹ ವಿಭಿನ್ನವಾಗಿ ಮನವಿ ಮಾಡಿದ್ದಾನೆ. ನನಗೆ ಸರ್ಕಾರಿ ಕೆಲಸದ ಜೊತೆಗೆ ಮದುವೆಯೂ ಆಗಬೇಕು ಎಂದು ಮನವಿ ಮಾಡಿ ಪತ್ರ ಬರೆದಿದ್ದಾನೆ. ಒಟ್ಟಾರೆ ವಾಯುಪುತ್ರನಿಗೆ ನೊಂದ ಭಕ್ತರ ಪತ್ರ ವ್ಯವಹಾರದ ಮುಖಾಂತರ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹಣದ ಜೊತೆ ಪತ್ರಗಳನ್ನು ನೋಡಿದ ದೇವಸ್ಥಾನ ಆಡಳಿತ ಮಂಡಳಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

  • ಗುಡ್‍ನ್ಯೂಸ್, ಸಾಲದ ಮೇಲಿನ ಬಡ್ಡಿ ದರ ಇಳಿಕೆ

    ಗುಡ್‍ನ್ಯೂಸ್, ಸಾಲದ ಮೇಲಿನ ಬಡ್ಡಿ ದರ ಇಳಿಕೆ

    – ಎಲ್ಲ ಅವಧಿಯ ಎಂಸಿಎಲ್‍ಆರ್ ದರ ಕಡಿತ
    – ಸೆ.10 ರಿಂದ ಎಲ್ಲ ದರ ಅನ್ವಯ

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಸಾಲ ಪಡೆದ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಎಸ್‍ಬಿಐ ಎಲ್ಲ ಅವಧಿಯ ಸಾಲದ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲ್ಯಾಂಡಿಂಗ್ ರೇಟ್ (ಎಂಸಿಎಲ್‍ಆರ್) 10 ಬೇಸಿಸ್ ಪಾಯಿಂಟ್ (ಬಿಪಿಎಸ್) ಕಡಿತಗೊಳಿಸಿದ್ದು, ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10ರಿಂದ ಅನ್ವಯವಾಗಲಿದೆ. (1 ಬೇಸಿಸ್ ಪಾಯಿಂಟ್=0.01%)

    ಬಿಪಿಎಸ್ ಕಡಿತಗೊಂಡ ಪರಿಣಾಮ ಒಂದು ವರ್ಷದ ಅವಧಿಯ ಎಂಸಿಎಲ್‍ಆರ್ 8.25% ರಿಂದ 8.15% ಕ್ಕೆ ಇಳಿಕೆಯಾಗಲಿದೆ. 2019-20ರ ಅರ್ಥಿಕ ವರ್ಷದಲ್ಲಿ ಎಸ್‍ಬಿಐ ಐದನೇ ಬಾರಿ ಎಂಸಿಎಲ್‍ಆರ್ ಕಡಿತಗೊಳಿಸಿದೆ. ಆಗಸ್ಟ್ ನಲ್ಲಿ ಆರ್ ಬಿಐ ಹಣಕಾಸಿನ ನೀತಿಯ ವಿಮರ್ಶೆ ಬಳಿಕ ಬ್ಯಾಂಕುಗಳ ಎಂಸಿಎಲ್‍ಆರ್ ಎರಡನೇ ಬಾರಿ ಕಡಿತಗೊಳಿಸಿತ್ತು. ಹಣಕಾಸಿನ ನೀತಿಯ ವಿಮರ್ಶೆ ಬಳಿಕ ಆರ್ ಬಿಐ 15 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿದಾಗ, ಹೊಸ ನಿಯಮ ಆಗಸ್ಟ್ 10ರಿಂದ ಅನ್ವಯವಾಗಿತ್ತು. ಈಗ ಸೆಪ್ಟೆಂಬರ್ ನಲ್ಲಿ 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.

    ಕೇವಲ ಎಸ್‍ಬಿಐ ಅಲ್ಲದೇ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಐಡಿಬಿಐ ಮತ್ತು ಐಡಿಎಫ್‍ಸಿ ಬ್ಯಾಂಕುಗಳು ಸಹ ಎಂಸಿಎಲ್‍ಅರ್ ಕಡಿತಗೊಳಿಸಿವೆ.

    ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆರ್ ಬಿಐ ರಿಪೋ ದರದಲ್ಲಿ 110 ಬೇಸಿಸ್ ಪಾಯಿಂಟ್ ಅಂದ್ರೆ 1.10% ರಷ್ಟು ಕಡಿತ ಮಾಡಿದೆ. ಆದರೆ ಬ್ಯಾಂಕುಗಳು ಇದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಿರಲಿಲ್ಲ. ಸತತವಾಗಿ ಕೇಂದ್ರ ಬ್ಯಾಂಕ್ ಎಲ್ಲ ರಿಪೋ ದರ ಕಡಿತಗೊಳಿಸುತ್ತಾ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಿಂದಲೇ ಹೊಸ ಮಾನದಂಡಗಳನ್ನು ಬ್ಯಾಂಕುಗಳು ಅಳವಡಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿತ್ತು.

    ಎಂಸಿಎಲ್‍ಆರ್ ಕಡಿತದಿಂದಾಗಿ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ಮತ್ತೊಂದು ಕಡೆ ನಿಶ್ಚಿಯ ಠೇವಣಿ (ಫಿಕ್ಸಡ್ ಡೆಪಾಸಿಟ್) ಮೇಲಿನ ಬಡ್ಡಿ ಇಳಿಕೆಯಾಗಲಿದೆ. ಎಲ್ಲ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಮೊತ್ತದ ಮೇಲೆ 20-25 ಬೇಸಿಸ್ ಪಾಯಿಂಟ್ ಕಡಿತಗೊಳಿಸುವಂತೆ ಆದೇಶಿಸಲಾಗಿದೆ. ಬಲ್ಕ್ ಡೆಪಾಸಿಟ್ ಮೇಲಿನ ದರವನ್ನು 10-20 ಬಿಪಿಎಸ್ ಕಡಿತಗೊಳಿಸಲಾಗಿದೆ. ಎಲ್ಲ ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10ರಿಂದ ಅನ್ವಯವಾಗಲಿವೆ.

  • ಲೋನ್ ನೀಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್ ಕಪಾಳಕ್ಕೆ ಬಾರಿಸಿದ ಗ್ರಾಹಕ

    ಲೋನ್ ನೀಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್ ಕಪಾಳಕ್ಕೆ ಬಾರಿಸಿದ ಗ್ರಾಹಕ

    ವಿಜಯಪುರ: ಹಲವು ದಿನಗಳಿಂದ ಲೋನ್‍ಗಾಗಿ ಅಲೆದಾಡಿ ರೋಸಿ ಹೋದ ಗ್ರಾಹಕರೊಬ್ಬರು ತಮ್ಮನ್ನು ಸತಾಯಿಸಿದ ಬ್ಯಾಂಕ್  ಮ್ಯಾನೇಜರ್​ಗೆ ಕಪಾಳಮೋಕ್ಷ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕ ಶರಣು ಮಾಮನೆ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಬಿ.ವಿ. ಕುಲಕರ್ಣಿಗೆ ಕಪಾಳಮೋಕ್ಷ ಮಾಡಿದ್ದಾರೆ. ಎರಡು ದಿನದ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಹಲವು ದಿನಗಳಿಂದ ಲೋನ್‍ಗಾಗಿ ಶರಣು ಅವರು ಬ್ಯಾಂಕಿಗೆ ಅಲೆದಾಡಿ ರೋಸಿ ಹೋಗಿದ್ದರು. ಹೀಗಾಗಿ ಲೋನ್ ನೀಡಲು ಸತಾಯಿಸುತ್ತಿದ್ದ ಮ್ಯಾನೇಜರ್ ಮೇಲೆ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ. ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಬ್ಯಾಂಕಿನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ ಈ ವಿಚಾರ ಬಯಲಾಗಿದೆ. ಕಪಾಳಮೋಕ್ಷ ಮಾಡಿದ ದೃಶ್ಯಗಳು ಬ್ಯಾಂಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

    ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

    ತುಮಕೂರು: ಕಣ್ಣು, ಕಿಡ್ನಿ ಮಾರುತ್ತೇನೆ, ನನಗೆ ಸಾಲ ತೀರಿಸಲು ದುಡ್ಡು ಕೊಡಿ ಎಂದು ಬೋರ್ಡ್ ಹಿಡಿದು ಶಿರಾ ತಾಲೂಕಿನಲ್ಲಿ ರೈತರೊಬ್ಬರು ಬೀದಿ ಬೀದಿ ಅಲೆಯುತ್ತಿದ್ದಾರೆ.

    ಮೂರ್ನಾಲ್ಕು ಬೋರ್ ವೆಲ್ ಕೊರೆದರೂ ಕೂಡ ರೇಷ್ಮೆ ಬೆಳೆ ಕೈ ಹತ್ತದೆ ಸಾಲ ಮಾಡಿದ ರೈತ ಚಂದ್ರಶೇಖರ್ ನಂತರ ಆ ಸಾಲವನ್ನು ತೀರಿಸಲಾಗದೆ ವಿಷವನ್ನು ಕುಡಿದಿದ್ದರು. ಅದೃಷ್ಟವಾಶಾತ್ ಬದುಕಿ ಬಂದು ಈಗ ಕೈ ಸಾಲ ಮಾಡಿ ಬ್ಯಾಂಕ್ ಸಾಲ ತೀರಿಸಿದ್ದರು. ಈಗ ಕೈ ಸಾಲ ತೀರಿಸಲಾಗದೆ ಕಿಡ್ನಿ ಮಾರುವ ಹಂತಕ್ಕೆ ಬಂದು ತುಲುಪಿದ್ದಾರೆ.

    ಶಿರಾ ತಾಲೂಕಿನ ಮಾಗೂಡಿನ ರೈತನಾದ ಚಂದ್ರಶೇಖರ್ 15 ವರ್ಷದ ಹಿಂದೆ ಪಿಎಲ್‍ಡಿ ಹಾಗೂ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ನಂತರ ಹಂತಹಂತವಾಗಿ ಸಾಲ ತೀರಿಸಿದ್ದರೂ ಕ್ಲಿಯರೆನ್ಸ್ ಸಿಗದೆ ಪಹಣಿಯಲ್ಲು ಇನ್ನೂ ಸಾಲವಿದೆ ಎಂದು ಬರುತ್ತಿದ್ದು ಜಮೀನನ್ನು ಉಪಯೋಗಿಸಿಕೊಂಡು ಮರುಸಾಲವೂ ಮಾಡಲಾಗದ ಪರಿಸ್ಥಿತಿ ತುಲುಪಿದ್ದಾರೆ.

    ಇನ್ನೊಂದಡೆ ಕೈ ಸಾಲ ವಿಪರೀತ ಬೆಳೆದು 10ನೇ ತರಗತಿ ಓದುತ್ತಿರುವ ಮಗಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದಂತೆ ಪರಿತಪಿಸುವ ಹಂತಕ್ಕೆ ತಲುಪಿದ್ದಾರೆ. ಈಗ ಕಿಡ್ನಿ ಮಾರಾಟ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಬೇರೆ ದಾರಿ ಕಾಣದೆ ಇತ್ತ ಜೀವನವನ್ನೂ ನಡೆಸಲಾಗದೆ ತುತ್ತು ಅನ್ನಕ್ಕೂ ಕೈ ಚಾಚುತ್ತಿದ್ದಾರೆ.

  • ಬಿಬಿಎಂಪಿ ಅಡವಿಟ್ಟ 11ರಲ್ಲಿ 10 ಆಸ್ತಿಗಳು ಋಣಮುಕ್ತ

    ಬಿಬಿಎಂಪಿ ಅಡವಿಟ್ಟ 11ರಲ್ಲಿ 10 ಆಸ್ತಿಗಳು ಋಣಮುಕ್ತ

    ಬೆಂಗಳೂರು: ಬಿಬಿಎಂಪಿ ತನ್ನ ಆಸ್ತಿಗಳನ್ನು ಅಡವಿಡುತ್ತ ಬರುತ್ತಿದೆ, ಅಲ್ಲದೆ ಆಸ್ತಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಳಿ ಬರುತ್ತಿದ್ದವು. ಇದೀಗ ಆ ಸ್ಥಿತಿ ಬದಲಾಗಿದ್ದು, ಅಡವಿಟ್ಟ ಆಸ್ತಿಯನ್ನು ಬಿಬಿಎಂಪಿ ಬಿಡಿಸಿಕೊಂಡಿದೆ.

    ಇದೆಲ್ಲದರ ನಡುವೆ ಒಂದೇ ಪಾಲಿಕೆಯಿಂದ ಆಡಳಿತ ನಿರ್ವಹಣೆ ಸಾಧ್ಯವಾಗುತ್ತಿಲ್ಲ, ಸಾಲ ಹೆಚ್ಚುತ್ತಿದೆ. ಹೀಗಾಗಿ ಬಿಬಿಎಂಪಿಯನ್ನು ನಾಲ್ಕು ಪಾಲಿಕೆಗಳನ್ನಾಗಿ ವಿಂಗಡಿಸಬೇಕು. ಅಂದರೆ ಮಾತ್ರ ಆಡಳಿತ ನಿರ್ವಹಣೆ ಸುಗಮವಾಗಲಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಬಿಬಿಎಂಪಿಗೆ ಆಸ್ತಿ ನಿರ್ವಹಣೆ, ತೆರಿಗೆ ಸಂಗ್ರಹ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತದೆ. ಇದೆಲ್ಲದರ ಮಧ್ಯೆ ಇದೀಗ ಬಿಬಿಎಂಪಿ ಅಡವಿಟ್ಟ ತನ್ನ ಆಸ್ತಿಯನ್ನು ಮತ್ತೆ ಬಿಡಿಸಿಕೊಳ್ಳುತ್ತಿದ್ದು, ಈ ಮೂಲಕ ಉತ್ತಮ ಸ್ಥಿತಿಗೆ ಮರಳುತ್ತಿದೆ.

    ಅಡವಿಟ್ಟ ಆಸ್ತಿಯನ್ನು ಬಿಡಿಸಿಕೊಳ್ಳಲು ಬಿಬಿಎಂಪಿ ನಿರಂತರ ಪ್ರಯತ್ನ ನಡೆಸಿದ್ದು, ಸ್ಲಾಟರ್ ಹೌಸ್ ಹಾಗೂ ರಾಜಾಜಿನಗರದ ಬಿಬಿಎಂಪಿಯ ಆಸ್ತಿಯನ್ನು ಋಣಮುಕ್ತವನ್ನಾಗಿ ಮಾಡಿಕೊಂಡಿದೆ. ಒಟ್ಟು 211 ಕೋಟಿ ರೂ. ಸಾಲವನ್ನು ಪಾಲಿಕೆ ಮರುಪಾವತಿಸಿ ಆಸ್ತಿಯನ್ನು ಪಡೆದುಕೊಂಡಿದೆ. ಅಲ್ಲದೆ, 9 ತಿಂಗಳ ಹಿಂದೆಯಷ್ಟೇ 871 ಕೋಟಿ ರೂ. ಸಾಲವನ್ನು ಬಿಬಿಎಂಪಿ ತೀರಿಸಿತ್ತು. ಈ ಮೂಲಕ ದಾಸಪ್ಪ ಆಸ್ಪತ್ರೆ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಕಲಾಸಿಪಾಳ್ಯ ಮಾರುಕಟ್ಟೆ ಮತ್ತು ಪೂರ್ವ ಬಿಬಿಎಂಪಿ ಕಚೇರಿಯನ್ನು ಋಣ ಮುಕ್ತವಾಗಿದ್ದವು.

    ಒಟ್ಟು ಅಡವಿಟ್ಟ 11 ಆಸ್ತಿಗಳ ಪೈಕಿ ಇದೀಗ 10 ಆಸ್ತಿಗಳನ್ನು ಋಣಮುಕ್ತವನ್ನಾಗಿಸಿದ್ದು, ಪಾಲಿಕೆಯಲ್ಲಿ ಕಾಂಗ್ರೆಸ್ ಮಾಡಿದ್ದ ಸಾಲವನ್ನು ಮೈತ್ರಿ ತೀರಿಸುತ್ತಿದೆ ಎಂದು ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ವ್ಯಂಗ್ಯವಾಡಿದ್ದಾರೆ.