ರಾಯಚೂರು: ಸಾಲ ನೀಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಕ್ಕೆ ಬ್ಯಾಂಕ್ ನಲ್ಲಿಯೇ ಕ್ರಿಮಿನಾಶಕ ಕುಡಿದು ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಗ್ರಾಮದ ಎಸ್‍ಬಿಐ ಬ್ಯಾಂಕ್ ನಲ್ಲಿ ಘಟನೆ ನಡೆದಿದ್ದು, ಸಾಲದ ಹಣ ತುಂಬಿದ್ದರೂ ಸಾಲ ನವೀಕರಣ ಮಾಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಾರೆ. ಮನನೊಂದ ತಾಲೂಕಿನ ಹಾಲಾಪುರ ಗ್ರಾಮದ ರೈತ ಹುಲಗಪ್ಪ ಅವರು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಮ್ಮ ಸಾವಿಗೆ ಮಧ್ಯವರ್ತಿಗಳ ಹಾವಳಿ ಮತ್ತು ಬ್ಯಾಂಕಿನ ದಿನಗೂಲಿ ನೌಕರ ಹಾಗೂ ಮ್ಯಾನೇಜರ್ ಕಾರಣವೆಂದು ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಂತರ ರೈತ ಹುಲಗಪ್ಪ ಅವರನ್ನು ತಡೆದಿದ್ದು, ತಕ್ಷಣವೇ ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಮೂವರು ಸ್ನೇಹಿತರಿಂದ ಇಂಜಿನಿಯರ್ ವಿದ್ಯಾರ್ಥಿ ಬರ್ಬರ ಹತ್ಯೆ
ಥಾಣೆ: 15 ಸಾವಿರ ಸಾಲ ಪಡೆದು ಸರಿಯಾದ ಸಮಯಕ್ಕೆ ವಾಪಸ್ ಕೊಡಲಿಲ್ಲ ಎಂದು ಸ್ನೇಹಿತನನ್ನೇ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿಕೊಂಡು 11 ಮಹಡಿಯಿಂದ ಕೆಳಗೆ ತಳ್ಳಿ ಕೊಲೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಮೂವರು ಆರೋಪಿಗಳನ್ನು ಅಭಿನವ್ ಜಾಧವ್, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಎಂದು ಗುರುತಿಸಲಾಗಿದೆ. ಮೃತನನ್ನು ಸಾಗರ್ ಚಿಲ್ವೆರಿ ಎಂದು ಗುರುತಿಸಲಾಗಿದೆ. ಕೊಲೆಯಾದ ಸಾಗರ್ ಮತ್ತು ಆರೋಪಿಗಳು ಫ್ಲ್ಯಾಟ್‍ನಲ್ಲಿ ಒಟ್ಟಿಗೆ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಸಾಗರ್ ಜನವರಿ 9 ರಂದು ಅಭಿನವ್ ಜಾಧವ್ ಕಡೆಯಿಂದ ಶೇ.10 ಬಡ್ಡಿಗೆ 15 ಸಾವಿರ ಸಾಲ ಪಡೆದುಕೊಂಡಿರುತ್ತಾನೆ. ಈ ಹಣವನ್ನು ಕಳೆದ ಸೋಮವಾರಕ್ಕೆ ವಾಪಸ್ ಕೊಡುವುದಾಗಿ ಸಾಗರ್ ಹೇಳಿರುತ್ತಾನೆ. ಆದರೆ ಕೊಡಲು ಸಾಧ್ಯವಾಗಿರಲಿಲ್ಲ. ಈ ವಿಚಾರಕ್ಕೆ ಫ್ಲ್ಯಾಟ್‍ನ ಪಾರ್ಕಿಂಗ್ ಜಾಗದಲ್ಲಿ ಜಾಧವ್ ಮತ್ತು ಸಾಗರ್ ಜಗಳವಾಡಿರುತ್ತಾರೆ. ಆಗ ಮಧ್ಯೆ ಬಂದ ಸೆಕ್ಯೂರಿಟಿ ಗಾರ್ಡ್ ಜಗಳ ಬಿಡಿಸಿ ವಾಪಸ್ ಕಳುಹಿಸಿರುತ್ತಾರೆ.
ಈ ಘಟನೆಯ ನಂತರ ಫ್ಲ್ಯಾಟ್‍ಗೆ ಹೋದ ಇಬ್ಬರು ಮತ್ತೆ ಜಗಳವಾಡುತ್ತಾರೆ. ಈ ವೇಳೆ ಜಾಧವ್‍ಗೆ ಅಕ್ಷಯ್ ಮತ್ತು ತೇಜಸ್ ಸಾಥ್ ಕೊಡುತ್ತಾರೆ. ಆಗ ಮೂವರು ಸೇರಿಕೊಂಡು ಸಾಗರ್ ಅನ್ನು 11 ಮಹಡಿಯಿಂದ ತಳ್ಳಿದ್ದಾರೆ. ಇದನ್ನು ನೋಡಿದ ಸೆಕ್ಯೂರಿಟಿ ಗಾರ್ಡ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸೆಕ್ಯೂರಿಟಿ ಗಾರ್ಡ್ ನೀಡಿದೆ ಹೇಳಿಕೆ ಮೇಲೆ ಅಭಿನವ್ ಜಾಧವ್, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರು/ಮುಂಬೈ: ಖಾಸಗಿ ರಂಗದ 5ನೇ ಅತಿ ದೊಡ್ಡ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್‌ಬಿಐ ಸೂಪರ್ ಸೀಡ್ ಮಾಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
ಇದೆ ವೇಳೆ ಮುಂದಿನ ಆದೇಶದವರೆಗೂ ಬ್ಯಾಂಕ್ ಗ್ರಾಹಕರು ಗರಿಷ್ಠ 50 ಸಾವಿರ ರೂ.ವರೆಗೆ ನಗದು ಹಣವನ್ನು ಡ್ರಾ ಮಾಡಲು ಅವಕಾಶವನ್ನು ನೀಡಿದೆ. ಈ ವಿಚಾರವನ್ನು ತಿಳಿದು ಗ್ರಾಹಕರು ಬ್ಯಾಂಕ್ ಕಚೇರಿಗೆ ದೌಡಾಯಿಸುತ್ತಿದ್ದು ಎಟಿಎಂ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.
ಕೆಲವೊಂದು ಎಟಿಎಂಗಳು ಸಹ ಕಾರ್ಯನಿರ್ವಹಿಸದ ಪರಿಣಾಮ ಗ್ರಾಹಕರು ಶಾಪ ಹಾಕುತ್ತಿದ್ದಾರೆ. ಎಟಿಎಂ ಮುಂದೆ ಆರ್‌ಬಿಐ ನೋಟಿಸ್ ಅಂಟಿಸಲಾಗಿದ್ದು ಸಹಕರಿಸುವಂತೆ ಬ್ಯಾಂಕ್ ಕೇಳಿಕೊಂಡಿದೆ. ಭಾರೀ ಸಂಖ್ಯೆಯಲ್ಲಿ ಗ್ರಾಕರು ಇಂಟರ್ ನೆಟ್ ವ್ಯವಹಾರ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿದೆ. ಶೀಘ್ರವೇ ಮರಳುತ್ತೇವೆ ಎಂದು ಯೆಸ್ ಬ್ಯಾಂಕ್ ಹೇಳಿದೆ.
ಆರ್‌ಬಿಐ ಆದೇಶದಲ್ಲಿ ಏನಿದೆ?
ಯೆಸ್ ಬ್ಯಾಂಕ್‍ನ ಎಲ್ಲಾ ಹಣಕಾಸು ಕಾರ್ಯ ಚಟುವಟಿಕೆಗಳ ಮೇಲೆ ತಡೆ ವಿಧಿಸಲಾಗಿದೆ. ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲಾಗಿದ್ದು, ಗ್ರಾಹಕರು ಗರಿಷ್ಟ 50 ಸಾವಿರ ರೂ. ಹಣವನ್ನು ಡ್ರಾ ಮಾಡಬಹುದು ಎಂದು ತಿಳಿಸಿದೆ. ಮುಂದಿನ 30 ದಿನಗಳವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬ್ಯಾಂಕಿನ ಹಣಕಾಸು ಪರಿಸ್ಥಿತಿ ಮತ್ತು ಗ್ರಾಹಕರ ಹಿತ ಕಾಪಾಡುತ್ತೇವೆ ಎಂದು ಆರ್‌ಬಿಐ ಹೇಳಿದೆ. ಎಸ್‍ಬಿಐನ ಮಾಜಿ ಸಿಎಫ್‍ಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ.
ಫೋನ್ ಪೇ ಅಲಭ್ಯ: ಯೆಸ್ ಬ್ಯಾಂಕ್ ಜೊತೆ ಫೋನ್ ಪೇ ಹಣಕಾಸು ವ್ಯವಹಾರ ನಡೆಸುತಿತ್ತು. ಈಗ ವ್ಯವಹಾರಕ್ಕೆ ನಿರ್ಬಂಧ ಹೇರಿದ್ದರಿಂದ ಪೋನ್ ಪೇ ಸೇವೆ ಸಹ ಅಲಭ್ಯವಾಗಿದೆ. ಶೀಘ್ರವೇ ನಾವು ಸೇವೆ ನೀಡುತ್ತೇವೆ ಎಂದು ಫೋನ್ ಪೇ ಸಿಇಒ ಸಮೀರ್ ನಿಗಮ್ ತಿಳಿಸಿದ್ದಾರೆ.
Dear @PhonePe_ customers. We sincerely regret the long outage. Our partner bank (Yes Bank) was placed under moratorium by RBI. Entire team's been working all night to get services back up asap. We hope to be live in a few hours. Thanks for your patience. Stay tuned for updates!
ಸಂಕಷ್ಟಕ್ಕೆ ಗುರಿಯಾಗಿದ್ದು ಯಾಕೆ?
ವಸೂಲಾಗದ ಸಾಲದ ಪ್ರಮಾಣದಲ್ಲಿನ ಭಾರಿ ಹೆಚ್ಚಳದಿಂದಾಗಿ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಗುರಿಯಾಗಿದೆ. 2003-04 ರಲ್ಲಿ ಆರಂಭಗೊಂಡ ಈ ಬ್ಯಾಂಕ್ 10 ವರ್ಷಗಳಲ್ಲಿ ದೇಶದ ಟಾಪ್ 5 ಖಾಸಗಿ ಬ್ಯಾಂಕ್ ಆಗಿ ಹೊರಹೊಮ್ಮಿತ್ತು. ರಾಣಾ ಕಪೂರ್ ಮಾಲೀಕತ್ವದ ಈ ಬ್ಯಾಂಕ್ ನಲ್ಲಿ ರಾಬೋ ಬ್ಯಾಂಕ್ ಸಹ ಪಾಲು ಹೊಂದಿತ್ತು. ರಾಣಾ ಕಪೂರ್ ಶೇ.26 ರಷ್ಟು ಷೇರು ಹೊಂದಿದ್ದರೆ, ರಾಬೋ ಬ್ಯಾಂಕ್ ಇಂಟರ್ನ್ಯಾಷನಲ್ ಶೇ.20 ರಷ್ಟು ಷೇರುಗಳನ್ನು ಹೊಂದಿತ್ತು.
Hi, we regret the inconvenience caused. We are facing intermittent issues on Net Banking. Request you to please try after some time.
ವಿಜಯ್ ಮಲ್ಯ, ನೀರವ್ ಮೋದಿಯಂತಹ ವ್ಯಕ್ತಿಗಳು ಕೋಟ್ಯಂತರ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾದ ಬಳಿಕ ಕೇಂದ್ರ ಸರ್ಕಾರ ಭಾರೀ ಟೀಕೆಗೆ ಗುರಿಯಾಯಿತು. ಬಡವರ ಸಾಲ ಮನ್ನಾ ಮಾಡಲು ಹಿಂದೆ ಮುಂದೆ ನೋಡುವ ಸರ್ಕಾರಗಳು ಉದ್ಯಮಿಗಳ ಸಾಲ ಮನ್ನಾ ಮಾಡುವುದು ಸರಿಯೇ ಎನ್ನುವ ಪ್ರಶ್ನೆ ಎದ್ದಿತ್ತು. ಈ ಟೀಕೆಯ ನಂತರ ಎಚ್ಚೆತ್ತ ಆರ್‌ಬಿಐ ಸಾಲ ಮಾಡಿ ವಿದೇಶಕ್ಕೆ ಉದ್ಯಮಿಗಳು ಪರಾರಿ ಆಗದೇ ಇರಲು ಎಲ್ಲ ಬ್ಯಾಂಕ್ ಗಳು ಸಾಲದ ವಿವರಗಳನ್ನು ಕಡ್ಡಾಯವಾಗಿ ತನಗೆ ಸಲ್ಲಿಸಬೇಕು ಎಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ ಅದನ್ನು ಮರಳಿ ಪಾವತಿಸದೆ ಇರುವವರನ್ನು ಆಯಾ ಬ್ಯಾಂಕುಗಳೇ ದಿವಾಳಿ ನ್ಯಾಯಾಲಯಕ್ಕೆ ಎಳೆಯಬೇಕು. ಈ ವಿಚಾರದಲ್ಲಿ ಬ್ಯಾಂಕ್ ಗಳು ಉದ್ಯಮಿಗಳ ಜೊತೆ ಸೇರಿ ಸಾಲವನ್ನು ಮುಚ್ಚಿಟ್ಟು ದಿವಾಳಿ ಪ್ರಕ್ರಿಯೆ ನಡೆಸದೇ ಇದ್ದರೆ ಬ್ಯಾಂಕ್ ಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಆರ್‌ಬಿಐ ಈ ಕಠಿಣ ನಿಯಮ ಯೆಸ್ ಬ್ಯಾಂಕಿಗೆ ಭಾರೀ ಹೊಡೆತ ನೀಡಿತ್ತು. ಕಠಿಣ ನಿಯಮ ಜಾರಿಯಾದ ನಂತರ ಯೆಸ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ನಲ್ಲಿ ವಸೂಲಾಗದ ಸಾಲದ ವಿಚಾರದಲ್ಲಿ ವ್ಯತ್ಯಾಸ ಇರುವುದು ಆರ್‌ಬಿಐ ಗಮನಕ್ಕೆ ಬಂದಿತ್ತು. 2019ರ ಸೆಪ್ಟೆಂಬರ್ ವೇಳೆ ವಸೂಲಾಗದ ಸಾಲದ ಪ್ರಮಾಣ ಶೇ.7.4ಕ್ಕೆ ಏರಿಕೆಯಾಗಿತ್ತು. ಈ ಸಮಸ್ಯೆಯ ಸುಳಿಯಿಂದ ಹೊರಬರಬೇಕಾದರೆ ಯೆಸ್ ಬ್ಯಾಂಕಿಗೆ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಅವಶ್ಯಕತೆಯಿತ್ತು.
ವಿವಿಧ ಮೂಲಗಳನ್ನು ಹುಡುಕುತ್ತಿದ್ದಾಗ ಯೆಸ್ ಬ್ಯಾಂಕ್ ಕಳೆದ ನವೆಂಬರ್ ತಿಂಗಳಿನಲ್ಲಿ 2 ಶತಕೋಟಿ ಡಾಲರ್ ಹಣವನ್ನು ಷೇರುಗಳ ಮೂಲಕ ಸಂಗ್ರಹಿಸುವುದಾಗಿ ಘೋಷಣೆ ಮಾಡಿತ್ತು. ಘೋಷಣೆ ಮಾತ್ರ ಆಯ್ತ, ಆದರೆ ಮುಂದೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ.
ಆರ್‌ಬಿಐನಿಂದ ಪ್ರಕ್ರಿಯೆ ತಡವಾಯ್ತೆ?
ಕಳೆದ ವರ್ಷ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ(ಪಿಎಂಸಿ) ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿತ್ತು. ಈ ಪ್ರಕರಣ ನಡೆದ 6 ತಿಂಗಳ ಬಳಿಕ ಖಾಸಗಿ ರಂಗದ ದೊಡ್ಡ ಬ್ಯಾಂಕ್ ಆಗಿದ್ದ ಯೆಸ್ ಬ್ಯಾಂಕನ್ನು ಆರ್‌ಬಿಐ ಸೂಪರ್ ಸೀಡ್ ಮಾಡಿದೆ. ಹಾಗೆ ನೋಡಿದರೆ ಯೆಸ್ ಬ್ಯಾಂಕ್ ಸಂಕಷ್ಟದಲ್ಲಿ ಅಕ್ರಮ ನಡೆದಿರುವ ವಿಚಾರ ಆರ್‌ಬಿಐಗೆ 2018ರಲ್ಲೇ ಗೊತ್ತಾಗಿತ್ತು. ಸೆಬಿ ಸೂಚನೆಯ ಹಿನ್ನೆಲೆಯಲ್ಲಿ ಬ್ಯಾಂಕಿನ ಮುಖ್ಯಸ್ಥ ರಾಣಾ ಕಪೂರ್ 2019ರ ಜ.31ರಂದು ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ವೇಳೆ ತಮ್ಮ ಬಳಿಯಿದ್ದ ಅಷ್ಟು ಷೇರುಗಳನ್ನು ಮಾರಾಟ ಮಾಡಿದ್ದರು. ಸದ್ಯ ಈಗ ಶೇ.48ರಷ್ಟು ಷೇರು ಚಿಲ್ಲರೆ ಹೂಡಿಕೆದಾರರ ಬಳಿ ಇದೆ. 2019 ಹಣಕಾಸು ವರ್ಷದ ನಾಲ್ಕನೇಯ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ 1,507 ಕೋಟಿ ರೂ. ನಷ್ಟ ಅನುಭವಿಸಿತ್ತು.
ಯಾರಿಗೆ ಸಾಲ ನೀಡಿದೆ?
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ಜೆಟ್ ಏರ್ ವೇಸ್, ಐಎಲ್ ಆಂಡ್ ಎಫ್‍ಎಸ್, ದಿವಾನ್ ಹೌಸಿಂಗ್, ಕಾಕ್ಸ್ ಆಂಡ್ ಕಿಂಗ್ಸ್, ಸಿಜಿ ಪವರ್, ಅಲ್ಟಿಕೋ ಕಂಪನಿಗಳಿಗೆ ಸಾಲ ನೀಡಿದೆ.
ಬೇಕಾಬಿಟ್ಟಿ ಸಾಲ?
ಸಾರ್ವಜನಿಕ ರಂಗದ ಬ್ಯಾಂಕ್ ಗಳಲ್ಲಿ ಸಾಲ ತೆಗೆದುಕೊಳ್ಳಬೇಕಾದರೆ ಹಲವು ಮಾನದಂಡಗಳು ಇರತ್ತದೆ ಮತ್ತು ಅಷ್ಟು ಸುಲಭವಾಗಿ ಸಾಲ ಸಿಗುವುದಿಲ್ಲ. ಆದರೆ ಖಾಸಗಿ ಬ್ಯಾಂಕ್ ಗಳು ಉದ್ಯಮಿಗಳಿಗೆ ಕಠಿಣ ನಿಯಮವನ್ನು ವಿಧಿಸುವುದಿಲ್ಲ. ಹೀಗಾಗಿ ಉದ್ಯಮಿಗಳು ಬಡ್ಡಿ ಜಾಸ್ತಿ ಇದ್ದರೂ ಖಾಸಗಿ ಬ್ಯಾಂಕುಗಳಿಂದ ಸಾಲವನ್ನು ಸುಲಭವಾಗಿ ಪಡೆಯುತ್ತಾರೆ. ಸರಿಯಾದ ಮಾನದಂಡಗಳನ್ನು ಅನುಸರಿಸದೇ ಸಾಲ ನೀಡಿರುವುದು ಮತ್ತು ಸಾಲ ಮರುಪಾವತಿ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದರೂ ಕಠಿಣ ಕ್ರಮಗಳನ್ನು ಕೈಗೊಳ್ಳದ ಕಾರಣ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಹೆಚ್ಚಾಗುತ್ತದೆ.
ಬೆಂಗಳೂರು: ಲೋನ್ ರಿಕವರಿಗೆ ಬಂದವನ ಮೇಲೆ ಉದ್ಯಮಿಯೊಬ್ಬರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಕಲ್ಯಾಣ ನಗರದ ಲಿವಿಂಗ್‍ವಾಲ್ ಅಪಾರ್ಟ್‍ಮೆಂಟ್ ಬಳಿ ನಡೆದಿದೆ.
ಐಟಿ ಉದ್ಯಮಿ ಮಯೂರೇಶ್ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸುವಾಗ ಹೆಚ್.ಡಿಎ.ಫ್‍ಸಿ ಬ್ಯಾಂಕ್‍ನಲ್ಲಿ ಲೋನ್ ಪಡೆದಿರುತ್ತಾರೆ. ಮಯೂರೇಶ್ ಪಡೆದಿರುವ ಲೋನ್ ಹಣದಲ್ಲಿ ಕೇವಲ 32 ಸಾವಿರ ಮಾತ್ರ ಬಾಕಿ ಉಳಿಸಿಕೊಂಡಿದ್ದರು. 32 ಸಾವಿರ ಲೋನ್ ಕ್ಲೀಯರ್ ಮಾಡುವಂತೆ ಸಯ್ಯದ್ ಅರ್ಪಾದ್ ಮಯೂರೇಶ್ ಜೊತೆ ಫೋನ್ ನಲ್ಲಿ ವಾಗ್ವಾದ ನಡೆಸಿದ್ದಾನೆ.
ವಾಗ್ವಾದ ವಿಕೋಪಕ್ಕೆ ಹೋದಾಗ ಸಯ್ಯದ್ ಅರ್ಪಾದ್ ಉದ್ಯಮಿ ವಾಸವಿರುವ ಲಿವಿಂಗ್‍ವಾಲ್ ಅಪಾರ್ಟ್‍ಮೆಂಟ್ ಮುಂದೆ ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ಆಗುತ್ತಿದ್ದಂತೆ ಅರ್ಪಾದ್ ಸಂಬಂಧಿ ಅಬ್ದುಲ್ ಸಲೀಂ ಅಂಡ್ ಟೀಂನನ್ನ ಅಪಾರ್ಟ್‍ಮೆಂಟ್ ಬಳಿ ಕರೆಸಿಕೊಂಡಿದ್ದಾರೆ. ಮಯೂರೇಶ್ ಸಹಾಯಕ್ಕೆ ಗೆಳೆಯ ಉದ್ಯಮಿ ಅಮರೇಂದರ್ ಬಂದು ಗಲಾಟೆಯನ್ನು ನಿಲ್ಲಿಸಲು ಮುಂದಾಗಿದ್ದಾರೆ. ಅರ್ಪಾದ್ ಮತ್ತು ಸಲೀಂ ಟೀಂ ಉದ್ಯಮಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅರ್ಪಾದ್ ಅಂಡ್ ಟೀಂ ಹಲ್ಲೆಗೆ ಮುಂದಾಗುತ್ತಿದ್ದಂತೆ ಉದ್ಯಮಿ ಅಮರೇಂದರ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿದ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ಅರ್ಪಾದ್ ಸಂಬಂಧಿ ಸೈಯ್ಯದ್ ಸಲೀಂ ಎದೆಯ ಭಾಗಕ್ಕೆ ಅಮರೆಂದರ್ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಸಯ್ಯದ್ ಸಲೀಂ ಎದೆಯ ಭಾಗಕ್ಕೆ ಗುಂಡು ತಗುಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉದ್ಯಮಿಗಳಾದ ಮಯೂರೇಶ್, ಅಮರೇಂದರ್ ಹಾಗೂ ಅರ್ಪಾದ್ ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಗಲಾಟೆ ಮಾಡಿದ ಎರಡು ಗ್ಯಾಂಗ್ ಅನ್ನು ವಶಕ್ಕೆ ಪಡೆದು ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳು ಮುಂದಾಗಿದ್ದಾರೆ. ಪ್ರಕರಣದ ವಿಶೇಷ ಅಂದರೆ ಸಾಲ ಪಡೆದುಕೊಂಡವನ ಸಹಾಯಕ್ಕೆ ಬಂದ ಅಮರೇಂದರ್ ಬ್ಯಾಂಕ್ ಸಿಬ್ಬಂದಿಯ ಬೆಂಬಲಕ್ಕೆ ಬಂದ ಸಯ್ಯದ್ ಸಲೀಂ ಅನ್ನು ಶೂಟ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಸಾಲದ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 12ರಂದು ದೊಡ್ಡಬಳ್ಳಾಪುರ ತಾಲೂಕಿನ ಚನ್ನಾಪುರ ಬಳಿ ಚಂದ್ರಗಿರಿ ಬೆಟ್ಟಕ್ಕೆ ಹೋಗುವ ರಸ್ತೆಬದಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬೆಂಗಳೂರು ಮೂಲದ ಮೆಲ್ವಿನ್, ರವಿ, ನಿಖಿಲ್ ಕುಮಾರ್, ಕುಶಾಲ್, ಮೋಹನ್, ವಿಘ್ನೇಶ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಮೃತ ವ್ಯಕ್ತಿ 35 ವರ್ಷದ ವಿನು ಪ್ರಸಾದ್, ಎ 1 ಆರೋಪಿ ಮೆಲ್ವಿನ್ ಬಳಿ ಸಾಲ ಪಡೆದುಕೊಂಡಿದ್ದನು. ಸಾಲದ ಹಣ ವಾಪಸ್ ಕೊಡುವಂತೆ ಮೆಲ್ವಿನ್ ಕೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಹೀಗಾಗಿ ಪ್ಲಾನ್ ಮಾಡಿ ಪಾರ್ಟಿ ಮಾಡೋಣ ಬಾ ಅಂತ ವಿನು ಪ್ರಸಾದ್ ತನ್ನ ಸ್ನೇಹಿತರ ಜೊತೆಗೆ ಚಂದ್ರಗಿರಿ ಬೆಟ್ಟದ ಕಡೆಗೆ ಕರೆದುಕೊಂಡು ಬಂದಿದ್ದನು. ಮೆಲ್ವಿನ್ ಕುಡಿದ ಅಮಲಿನಲ್ಲಿ ಮತ್ತೆ ಜಗಳ ಮಾಡಿದ್ದಾನೆ. ಈ ವೇಳೆ ಮೊದಲೇ ಪ್ಲಾನ್ ಮಾಡಿದಂತೆ ಎಲ್ಲರೂ ಸೇರಿಕೊಂಡು ವಿನು ಪ್ರಸಾದ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ತುಮಕೂರು: 2019, ಡಿಸೆಂಬರ್ 30ರಂದು ಗುಬ್ಬಿ ತಾಲೂಕಿನ ಸಿ.ಎಸ್.ಪುರದ ಅವರೇಹಳ್ಳಿಯಲ್ಲಿ ಸಿಕ್ಕಿದ್ದ ಅಪರಿಚಿತ ಮಹಿಳೆಯ ಶವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಮೃತ ಮಹಿಳೆಯನ್ನು ತುಮಕೂರು ನಗರದ ಜಯನಗರ ಬಡಾವಣೆಯ ಮಧುಕುಮಾರಿ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಮೊಹಮದ್ ರೆಹಮಾನ್ ಕೊಲೆ ಮಾಡಿದ್ದಾನೆ.
ತುಮಕೂರು ನಗರದ ಮಂಜುನಾಥ್ ನಗರದ ರೆಹಮಾನ್ ಜೊತೆ ಜಯನಗರ ಬಡಾವಣೆಯ ಮಧುಕುಮಾರಿಗೂ ದೈಹಿಕ ಸಂಪರ್ಕ ಇತ್ತು. ಈ ವೇಳೆ ಮಧುಕುಮಾರಿ ಆರೋಪಿ ರೆಹಮಾನ್ ಬಳಿ 4 ಲಕ್ಷ ರೂ ಸಾಲ ಪಡೆದಿದ್ದಳು ಎನ್ನಲಾಗಿದೆ. ಸಾಲ ವಾಪಸ್ ಕೇಳಿದಾಗ ರೇಪ್ ಕೇಸ್ ಹಾಕಿ ಜೈಲಿಗೆ ಕಳಿಸೋದಾಗಿ ಮಧುಕುಮಾರಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಆಕ್ರೋಶಗೊಂಡ ಮೊಹಮದ್ ರೆಹಮಾನ್ ಉಪಾಯ ಮಾಡಿ ಮಧುಕುಮಾರಿಯನ್ನ ಕೊಲೆ ಮಾಡಿದ್ದಾನೆ.
ಡಿಸೆಂಬರ್ 25ರ ಸಂಜೆ ವೇಳೆ ಮಧುಕುಮಾರಿಯನ್ನ ರೌಂಡ್ಸ್ ಕರೆದುಕೊಂಡು ಹೋಗಿದ್ದಾನೆ. ಸಿ.ಎಸ್.ಪುರದ ಅವರೇಹಳ್ಳಿಬಳಿ ಕಾರು ನಿಲ್ಲಿಸಿ ಹತ್ಯೆ ಮಾಡಿದ್ದಾನೆ. ಮಧುಕುಮಾರಿಯ ವೇಲ್ ನಿಂದ ಉಸಿರುಗಟ್ಟಿಸಿ ಸಾಯಿಸಿ ನಾಲೆಯಲ್ಲಿ ಶವ ಹಾಕಿ ಪರರಾರಿಯಾಗಿದ್ದ. ಜಯನಗರ ಪೊಲೀಸರ ಸುಳಿವಿನ ಮೂಲಕ ಸಿಎಸ್ ಪುರ ಪೊಲೀಸರು ಆರೋಪಿ ಮೊಹಮ್ಮದ್ ರೆಹಮಾನ್ ನ ಹೆಡೆಮುರಿಕಟ್ಟಿದ್ದಾರೆ.
ತುಮಕೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ್ದ ಟ್ರ್ಯಾಕ್ಟರ್ ಅನ್ನ ರೈತರು ಬ್ಯಾಂಕ್ ಗೇಟನ್ನು ಮುರಿದು ವಾಪಸ್ ತೆಗೆದುಕೊಂಡು ಹೋದ ಘಟನೆ ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿರುವ ಪಿ.ಎಲ್.ಡಿ ಬ್ಯಾಂಕಿನಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ರೈತ ರಂಗನಾಥ್ ಎಂಬವರ ಟ್ರ್ಯಾಕ್ಟರ್ ಸೇರಿದಂತೆ ಒಟ್ಟು ನಾಲ್ಕು ರೈತರ ಟ್ರ್ಯಾಕ್ಟರ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ತಮಗೆ ಯಾವುದೇ ನೋಟಿಸ್ ನೀಡದೆ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ ಎಂದು ಆರೋಪಿಸಿದ ರೈತರು, ರೈತ ಸಂಘದ ಮುಖಂಡರೊಂದಿಗೆ ಬಂದು ಪಿ.ಎಲ್.ಡಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೆ ಬೀಗ ಹಾಕಿದ್ದ ಬ್ಯಾಂಕಿನ ಗೇಟ್ ಮುರಿದು ಜಪ್ತಿಯಾದ ಟ್ರ್ಯಾಕ್ಟರನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಂಕ್ ಎದುರು ಸುಮಾರು ಅರ್ಧಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ರೈತರು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ಇದ್ದು ರೈತರಿಗೆ ಸಾಲ ಕಟ್ಟಲು ಕಷ್ಟವಾಗುತ್ತಿದೆ. ಈ ನಡುವೆ ರೈತರ ಕೃಷಿ ಉಪಕರಣಗಳನ್ನು ಜಪ್ತಿ ಮಾಡಿದ್ದು ತಪ್ಪು ಎಂದು ಅಧಿಕಾರಿಗಳ ಧೋರಣೆ ಖಂಡಿಸಿದ್ದಾರೆ.
ಬೆಂಗಳೂರು: ಕೋಟಿ ಕೋಟಿ ಲೋನ್ ಕೊಡಿಸುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಲಕ್ಷ-ಲಕ್ಷ ವಂಚನೆ ಮಾಡುತ್ತಾ ಇದ್ದ ನಟೋರಿಯಸ್ ಗ್ಯಾಂಗ್ ಒಂದನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಎಂ. ಶರೂನ್, ರಿಬಿನ್, ಸೈಯದ್ ಅಹಮದ್ ಬಂಧಿತ ಆರೋಪಿಗಳು. ಇವರು ರಾಷ್ಟ್ರೀಯ ಬ್ಯಾಂಕಿನಲ್ಲಿ 33 ಕೋಟಿ ಹಣ ಬ್ಯಾಂಕ್ ಸಾಲ ಕೊಡಿಸುವುದಾಗಿ 26 ಲಕ್ಷ ಹಣ ಪಡೆದು ವಂಚಿಸಿದ್ದಾರೆ.
ಬ್ಯಾಂಕ್ ಲೋನ್ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರು 3 ಲಕ್ಷ ಪಡೆದು ಪರಾರಿಯಾಗಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಿದ ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆ ವೇಳೆ ಮತ್ತೊಂದು ಪ್ರಕರಣ ಬಯಲಾಗಿದೆ.
ಈ ಮೂವರು ಆರೋಪಿಗಳು ಕೇರಳ ಮೂಲದ ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡುತ್ತಾ ಇದ್ದರು. ಜಾಹೀರಾತನ್ನು ನೀಡಿದ ಬಳಿಕ ಸಂಪರ್ಕ ಮಾಡಿದ ಜನರಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಾ ಇದ್ದ ಗ್ಯಾಂಗ್, ಕೋಟಿ ಕೋಟಿ ಹಣ ಸಿಗಬೇಕು ಅಂದರೆ ಪ್ರೊಷಿಜರ್ ಫೀ ಅಂತ ಲಕ್ಷಾಂತರ ರೂಪಾಯಿಯನ್ನು ಕೊಡಬೇಕು ಎಂದು ಹಣ ಪೀಕಿ ಯಾಮಾರಿಸುತ್ತಿದ್ದರು. ಇದೇ ರೀತಿ ವಂಚನೆ ಮಾಡಿದ ಗ್ಯಾಂಗ್ ಸಾಕಷ್ಟು ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಜೈಪುರ: 50 ಪೈಸೆ ಸಾಲ ಉಳಿಸಿಕೊಂಡಿದ್ದಕ್ಕಾಗಿ ಬ್ಯಾಂಕ್ ನೋಟಿಸ್ ಕಳುಹಿಸಿದ್ದು, ಕಟ್ಟಲು ಬ್ಯಾಂಕಿಗೆ ತೆರಳಿದರೆ ಹಣ ಪಡೆಯಲು ನಿರಾಕರಿಸಿದೆ.
ಈ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯ ಖೇಟ್ರಿ ಗ್ರಾಮದಲ್ಲಿ ನಡೆದಿದ್ದು, ಬಾಕಿ ಉಳಿದಿರುವ 50 ಪೈಸೆಯನ್ನು ಕಟ್ಟುವಂತೆ ಬ್ಯಾಂಕ್ ಜಿತೇಂದ್ರ ಸಿಂಗ್ ಅವರ ಮನೆಗೆ ರಾತ್ರಿ ವೇಳೆ ನೋಟಿಸ್ ಅಂಟಿಸಿದೆ.
Rajasthan: Bank issues notice for 50 paise, refuses to deposit it
ನೋಟಿಸ್ ಸ್ವೀಕರಿಸಲು ಸಿಂಗ್ ನಿರಾಕರಿಸಿದ್ದು, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಸಿಂಗ್ ಬೆನ್ನು ಮೂಳೆ ಮುರಿತದಿಂದ ಬಳಲುತ್ತಿದ್ದು, ಬಾಕಿ ಹಣವನ್ನು ಲೋಕ್ ಅದಾಲತ್ ವೇಳೆ ಕಟ್ಟಲು ಸಾಧ್ಯವಾಗಿಲ್ಲ. ನಂತರ ಅವರ ತಂದೆ ವಿನೋದ್ ಸಿಂಗ್ ಅವರು ಬ್ಯಾಂಕ್ ಬಳಿ ತೆರಳಿ ಹಣ ಕಟ್ಟಲು ಹೋಗಿದ್ದಾರೆ. ಆದರೆ ಅಧಿಕಾರಿಗಳು ಸ್ವೀಕರಿಸಿದೆ, ಹಾಗೆ ಕಳುಹಿಸಿದ್ದಾರೆ.
ನನ್ನ ಮಗನ ಬೆನ್ನು ಮೂಳೆ ಮುರಿದಿದೆ. ಹಣ ಪಾವತಿಸಲು ಅವನು ಬ್ಯಾಂಕಿಗೆ ಬರಲು ಸಾಧ್ಯವಿಲ್ಲ ಹೀಗಾಗಿ ನಾನು ಬಂದಿದ್ದೇನೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದೆ. ಆದರೂ ಬ್ಯಾಂಕ್ ಅಧಿಕಾರಿಗಳು ಹಣವನ್ನು ಸ್ವೀಕರಿಸಲಿಲ್ಲ ಎಂದು ವಿನೋದ್ ಸಿಂಗ್ ಅಳಲು ತೋಡಿಕೊಂಡಿದ್ದಾರೆ.
50 ಪೈಸೆಗೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದು, ನಮ್ಮ ಕಕ್ಷಿದಾರರು ಹಣ ಕಟ್ಟಿ ಬ್ಯಾಂಕಿನಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್(ಎನ್‍ಒಸಿ) ತರಲು ಹೋಗಿದ್ದಾರೆ. ಆದರೆ ಬ್ಯಾಂಕಿನವರು ಹಣ ಸ್ವೀಕರಿಸಲು ನಿರಾಕರಿಸಿದ್ದಾರೆ. ಹೀಗಾಗಿ ಬ್ಯಾಂಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಮೆಟ್ಟಿಲೇರುತ್ತೇವೆ ಎಂದು ವಕೀಲ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಧಾರವಾಡ: ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಧಾರವಾಡದಲ್ಲಿ ರೈತರೊಬ್ಬರ ಮೇಲೆ ಬ್ಯಾಂಕ್‍ನಲ್ಲಿ ಸಾಲ ಪಡೆಯದಿದ್ದರೂ ಪಹಣಿ ಪತ್ರದಲ್ಲಿ 24 ಲಕ್ಷ ರೂಪಾಯಿ ಸಾಲದ ಭೋಜಾ ಏರಿಸಲಾಗಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಈ ಎಡವಟ್ಟನ್ನು ತಹಶೀಲ್ದಾರ್ ಅವರು ಸರಿಪಡಿಸಿ ರೈತರಿಗೆ ಸಹಾಯ ಮಾಡಿದ್ದಾರೆ.
ಜಿಲ್ಲೆಯ ನರೇಂದ್ರ ಗ್ರಾಮದ ನಿವಾಸಿ ರೈತ ನಾಗಪ್ಪ ಅವರು, ಸಾಲ ಪಡೆಯದಿದ್ದರೂ 24 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ ಎಂದು ಅವರ ಜಮೀನಿನ ಪಹಣಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ನಾಗಪ್ಪ ಅವರ 7 ಎಕ್ರೆ ಜಮೀನಿನ ಪಹಣಿ ಪತ್ರದಲ್ಲಿ ಎಸ್‍ಬಿಐ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದಾರೆ ಎಂದು ನಮೂದಿಸಲಾಗಿತ್ತು. ಆದರೆ ನಾಗಪ್ಪ ಅವರು ಎಸ್‍ಬಿಐನಲ್ಲಿ ಖಾತೆಯನ್ನೇ ಹೊಂದಿಲ್ಲ. ಆದರೂ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ನಾಗಪ್ಪ ಅವರ ಮೇಲೆ ಬರೋಬ್ಬರಿ 24 ಲಕ್ಷ ರೂಪಾಯಿ ಸಾಲದ ಹೊರೆ ಹೊರೆಸಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೆ ಪಹಣಿಯಲ್ಲಾಗಿದ್ದ ಎಡವಟ್ಟನ್ನು ಧಾರವಾಡ ತಹಶೀಲ್ದಾರ್ ಸರಿಪಡಿಸಿಕೊಟ್ಟಿದ್ದಾರೆ.
ಪಡೆಯದ ಸಾಲದಿಂದ ಕಂಗಲಾಗಿದ್ದ ರೈತ ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದಾಗ ಹೇಗೆ ಈ ಎಡವಟ್ಟು ನಡೆಯಿತು ಎಂಬುದು ಬೆಳಕಿಗೆ ಬಂದಿದೆ. ಸದ್ಯ ಧಾರವಾಡ ತಹಶೀಲ್ದಾರ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ನಾಗಪ್ಪ ಅವರ ಪಹಣಿ ಪತ್ರದಲ್ಲಿದ್ದ ಲೋಪ ದೋಷವನ್ನು ಸರಿಪಡಿಸಿದ್ದಾರೆ.
ನಾಗಪ್ಪ ಅವರು 2013ರಲ್ಲಿ ತಮ್ಮ 7 ಏಕ್ರೆ ಜಮೀನಿನಲ್ಲಿ 5 ಗುಂಟೆ ಜಾಗವನ್ನು ಮಂಜುಳಾ ಎಂಬವರಿಗೆ ಮಾರಾಟ ಮಾಡಿದ್ದರು. ಮಂಜುಳಾ ಆ ಜಾಗದ ಮೇಲೆ ಸಾಲ ಪಡೆದಿದ್ದರಿಂದ ನಾಗಪ್ಪ ಅವರಿಗೆ ತೊಂದರೆಯಾಗಿತ್ತು. ಇದರಿಂದ ನಾಗಪ್ಪ ಅವರಿಗೆ ಎಲ್ಲೂ ಸಾಲ ಸಿಗುತ್ತಿರಲಿಲ್ಲ. ಹೀಗಾಗಿ ಸಾಲಕ್ಕಾಗಿ ನಾಗಪ್ಪ ಅವರು ತುಂಬಾ ಕಡೆ ಓಡಾಡಿ ಬೇಸತ್ತು ಹೋಗಿದ್ದರು.
ಅಲ್ಲದೆ ಮಂಜುಳಾ ಅವರಿಗೆ ನಾಗಪ್ಪ ಅವರು ಮಾರಾಟ ಮಾಡಿದ್ದ ಜಾಗದ ಪಹಣಿ ಪತ್ರವನ್ನು ಕಂದಾಯ ಇಲಾಖೆಯವರು ಸರಿಯಾಗಿ ಪರಿಶೀಲಿಸದಿದ್ದಕ್ಕೆ ಈ ಎಡವಟ್ಟಾಗಿದೆ. ಸದ್ಯ ಅಧಿಕಾರಿಗಳು ಪಹಣಿ ಪತ್ರದಲ್ಲಿದ್ದ ತಪ್ಪನ್ನು ಸರಿಪಡಿಸಿ, ನಾಗಪ್ಪ ಅವರಿಗೆ ದಾಖಲೆಗಳನ್ನ ನೀಡಿದ್ದಾರೆ. ಇದರಿಂದ ಪಡೆಯದ ಸಾಲದಿಂದ ಕಂಗಾಲಾಗಿದ್ದ ರೈತ ನಿಟ್ಟುಸಿರು ಬಿಟ್ಟಿದ್ದಾರೆ.