Tag: loan

  • ಮಹಿಳೆ ಜೊತೆ ಅಕ್ರಮ ಸಂಬಂಧ, ಬ್ಯಾಂಕ್ ಲೋನ್ – 2 ಸಮಸ್ಯೆಗೆ ಪರಿಹಾರ ಅಂತ ಪತ್ನಿಯನ್ನೇ ಕೊಂದ

    ಮಹಿಳೆ ಜೊತೆ ಅಕ್ರಮ ಸಂಬಂಧ, ಬ್ಯಾಂಕ್ ಲೋನ್ – 2 ಸಮಸ್ಯೆಗೆ ಪರಿಹಾರ ಅಂತ ಪತ್ನಿಯನ್ನೇ ಕೊಂದ

    – ಹಾವು ಕಚ್ಚಿದೆ ಅಂತ ನಾಟಕ, ತನಿಖೆ ವೇಳೆ ಸತ್ಯಾಂಶ ಬಯಲು

    ದಾವಣಗೆರೆ: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದರೆ ಬ್ಯಾಂಕ್ ಲೋನ್ ಸಂಪೂರ್ಣವಾಗಿ ಕ್ಲಿಯರ್ ಆಗುತ್ತೆ ಎಂದುಕೊಂಡು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.

    ರೋಜಾ ಮೃತ ಮಹಿಳೆ. ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ ಎಂದು ಹೇಳಿ ಪತಿ ಅಶೋಕ್ ನಾಟಕವಾಡಿದ್ದನು. ಆದರೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಗಂಡನೇ ಕೊಲೆ ಮಾಡಿರುವ ಸತ್ಯಾಂಶ ಹೊರಗೆ ಬಂದಿದೆ.

    ಏನಿದು ಪ್ರಕರಣ?
    ಸಿಂಗಟಗೆರೆ ಗ್ರಾಮದ ಅಶೋಕ್ ಕಳೆದ ಆರು ವರ್ಷಗಳ ಹಿಂದೆ ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದ ರೋಜಾಳನ್ನು ಮದುವೆಯಾಗಿದ್ದನು. ಕಳೆದ ಆರು ವರ್ಷಗಳಿಂದ ಗಂಡ-ಹೆಂಡತಿ ಸುಖವಾಗಿ ಸಂಸಾರ ನಡೆಸುತ್ತಾ ಬಂದಿದ್ದರು. ರೋಜಾ ಹೆಸರಿನಲ್ಲಿ ಆರೋಪಿ ಅಶೋಕ್ ಬ್ಯಾಂಕ್ ಒಂದರಲ್ಲಿ 5 ಲಕ್ಷ ಗೃಹ ಸಾಲ ತೆಗೆದುಕೊಂಡಿದ್ದನು. ಆದರೆ ಹಣವನ್ನು ಖರ್ಚು ಮಾಡಿಕೊಂಡಿದ್ದು, ಹೇಗೆ ಸಾಲ ತೀರಿಸೋದು ಎಂದು ಯೋಚನೆ ಮಾಡುತ್ತಿದ್ದನು.

    ಆಗ ಪತ್ನಿ ರೋಜಾಳನ್ನು ಕೊಲೆ ಮಾಡಿದರೆ ಲೋನ್ ಸಂಪೂರ್ಣ ಕ್ಲಿಯರ್ ಆಗುತ್ತೆ. ಮುಂದೆ ಕಟ್ಟುವ ಅವಶ್ಯಕತೆ ಇರೋದಿಲ್ಲ ಎಂದು ಯೋಚನೆ ಮಾಡಿದ್ದಾನೆ. ಅದರಂತೆಯೇ ಪತ್ನಿಯನ್ನು ತನ್ನ ಮೆಕ್ಕೆಜೋಳದ ಹೊಲಕ್ಕೆ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪತ್ನಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡು ರೋಜಾ ಪ್ರಜ್ಞೆ ತಪ್ಪಿದ್ದಾರೆ ಎಂದು ಎಸ್.ಪಿ.ಹನುಮಂತರಾಯ ತಿಳಿಸಿದ್ದಾರೆ. ಆಗ ಮನೆಗೆ ಫೋನ್ ಮಾಡಿ ಹೊಲದಲ್ಲಿ ಕೆಲಸ ಮಾಡುವಾಗ ರೋಜಾಳಿಗೆ ಹಾವು ಕಚ್ಚಿರಬಹುದು. ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಹೇಳಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರೋಜಾ ಸಾವನ್ನಪ್ಪಿದ್ದಾಳೆ.

    ಹೊನ್ನಾಳಿ ಪೊಲೀಸರು ಸಹಜ ಸಾವು ಎಂದು ಕೇಸ್ ದಾಖಲಿಸಿ ನಂತರ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ರೋಜಾಳ ತವರು ಮನೆಯವರು ಮೃತದೇಹವನ್ನು ಪಡೆದು ಅಂತ್ಯಸಂಸ್ಕಾರ ಮಾಡಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನವಿದ್ದ ರೋಜಾಳ ತಂದೆ ಹಾಲೇಶಪ್ಪ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೊನ್ನಾಳಿ ಪೊಲೀಸರು ಸಿಪಿಐ ದೇವರಾಜ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ.

    ಆರೋಪಿ ಅಶೋಕನಿಗೆ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಕೂಡ ಇದ್ದು, ಇದೇ ಕಾರಣಕ್ಕೆ ರೋಜಾಳ ಜೊತೆ ಮನೆಯಲ್ಲಿ ಸಾಕಷ್ಟು ಬಾರಿ ಜಗಳವಾಗಿತ್ತು. ಲೋನ್‍ನ ಹಣವನ್ನು ಕೂಡ ಬಳಕೆ ಮಾಡಿಕೊಂಡು ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೋಜಾಳನ್ನು ಸಾಯಿಸಿದರೆ ಮಾತ್ರ ಎರಡು ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿದಿದ್ದನು. ಅದರಂತೆಯೇ ಮೆಕ್ಕೆಜೋಳದ ಹೊಲಕ್ಕೆ ಕರೆದುಕೊಂಡು ಹೋಗಿ ಹೊಡೆದಿದ್ದಾನೆ. ಅಲ್ಲದೆ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

  • ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ – ಕೇಂದ್ರಕ್ಕೆ ಕೊನೆ ಅವಕಾಶ ನೀಡಿದ ಸುಪ್ರೀಂಕೋರ್ಟ್

    ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ – ಕೇಂದ್ರಕ್ಕೆ ಕೊನೆ ಅವಕಾಶ ನೀಡಿದ ಸುಪ್ರೀಂಕೋರ್ಟ್

    ನವದೆಹಲಿ: ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದ್ದು, ಇದು ಕೊನೆಯ ಅವಕಾಶ ಎಂದು ಹೇಳಿದೆ.

    ಇಂದು ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಇನ್ನೂ ಎರಡು ವಾರಗಳಲ್ಲಿ ಏನಾಗುತ್ತದೆ ಎಂದು ಕಾದುನೋಡಲು ನಾವು ಕೇಂದ್ರಕ್ಕೆ ಸಮಯ ನೀಡುತ್ತಿದ್ದೇವೆ. ಕೇಂದ್ರ ಹಾಗೂ ಆರ್‍ ಬಿಐ ಸೂಕ್ತ ಯೋಜನೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಇದೊಂದು ಕೊನೆಯ ಅವಕಾಶವಾಗಿದೆ ಎಂದು ಎಚ್ಚರಿಸಿದೆ.

    ಇಂದು ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈಗಾಗಲೇ ಎರಡರಿಂದ ಮೂರು ಸುತ್ತುಗಳ ಸಭೆಗಳನ್ನು ನಡೆಸಲಾಗಿದೆ. ಸಾಲ ಮರು ಪಾವತಿ ಅಂತಿಮ ದಿನಾಂಕದ ಬಗ್ಗೆ ಗೊಂದಲಗಳು ವ್ಯಕ್ತವಾಗಿದೆ. ಅದನ್ನು ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

    ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್, ಮುಂದಿನ ಹಂತಗಳಲ್ಲಿ ವಿಚಾರಣೆ ಮುಂದೂಡುವುದಿಲ್ಲ. ಕೇಂದ್ರ ಮತ್ತು ಆರ್ ಬಿಐ ಸಲಹೆ ಆಧರಿಸಿ ಸೂಕ್ತ ಆದೇಶವನ್ನು ನೀಡಲಿದ್ದೇವೆ ಎಂದು ಪೀಠ ಹೇಳಿದೆ.

    ಲಾಕ್‍ಡೌನ್ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿಯ ಮೇಲಿನ ಬಡ್ಡಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಸಾಲ ಮರುಪಾವತಿಗೆ ಅಗಸ್ಟ್ 31 ಕ್ಕೆ ಆರ್‍ಬಿಐ ನೀಡಿದ್ದ ವಿನಾಯಿತಿ ಮುಕ್ತಾಯವಾಗಿದ್ದು, ಆರ್ಥಿಕ ಸಂಕಷ್ಟದ ನಡುವೆ ಸಾಲ ಮರು ಪಾವತಿ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿದೆ.

  • ಅತ್ಯಾಚಾರದ ಕೇಸ್ ಹಾಕ್ತೀನಿ – ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆ ಅವಾಜ್

    ಅತ್ಯಾಚಾರದ ಕೇಸ್ ಹಾಕ್ತೀನಿ – ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆ ಅವಾಜ್

    – ಕಾಲು ಹಿಡಿದುಕೊಂಡರೂ ಬಿಡದೆ ದರ್ಪ ತೋರಿದ ಮಹಿಳೆ

    ಬೆಂಗಳೂರು: ಸಾಲ ವಾಪಸ್ ಕೇಳಲು ಬಂದ ಬ್ಯಾಂಕ್ ಸಿಬ್ಬಂದಿಗೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಮಹಿಳೆ ಅವಾಜ್ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಂಕಿನಲ್ಲಿ ಪಡೆದ ಸಾಲವನ್ನು ವಾಪಸ್ ಕೊಡಿ ಎಂದು ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿ ಮಹಿಳೆಯ ಮನೆಗೆ ಬಂದಿದ್ದಾರೆ. ಈ ವೇಳೆ ಮಹಿಳೆ ಸುಮ್ಮನೆ ಜಗಳ ಮಾಡಿ ನಿಮ್ಮ ಮೇಲೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದಾಳೆ. ಮಹಿಳೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕಿದ್ದಾಳೆ. ಅಲ್ಲದೇ ನಿಮ್ಮ ಫೋಟೋವನ್ನು ಫೇಸ್‍ಬುಕ್‍ಗೆ ಹಾಕಿ ಅರೆಸ್ಟ್ ಮಾಡಿಸುತ್ತೇನೆ ಎಂದಿದ್ದಾಳೆ. ಈ ವೇಳೆ ಸಿಬ್ಬಂದಿಯೋರ್ವರು ಮಹಿಳೆಯ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬೀಡಿ ಎಂದು ಕೇಳಿಕೊಂಡರು ಮಹಿಳೆ ದರ್ಪ ತೋರಿದ್ದಾಳೆ. ಹಿರಿಯ ನಾಗರೀಕರು ಎಂಬ ಅರಿವಿಲ್ಲದೇ ಮಹಿಳೆ ನಡೆದುಕೊಂಡ ರೀತಿಗೆ ನೆಟ್ಟಗರು ಛೀಮಾರಿ ಹಾಕುತ್ತಿದ್ದಾರೆ.

     

  • ಎರಡು ರಾತ್ರಿ ನನ್ನೊಂದಿಗೆ ಕಳೆದ್ರೆ ಬಾಕಿ ಸಾಲ ಮನ್ನಾ – ಬ್ಯೂಟಿಷಿಯನ್‍ಗೆ ಕಿರುಕುಳ

    ಎರಡು ರಾತ್ರಿ ನನ್ನೊಂದಿಗೆ ಕಳೆದ್ರೆ ಬಾಕಿ ಸಾಲ ಮನ್ನಾ – ಬ್ಯೂಟಿಷಿಯನ್‍ಗೆ ಕಿರುಕುಳ

    – 4 ಸಾವಿರ ಸಾಲ ನೀಡಿ, 8,000 ವಾಪಸ್ ಕೊಡುವಂತೆ ಒತ್ತಾಯ

    ಬೆಂಗಳೂರು: ಎರಡು ರಾತ್ರಿ ನನ್ನೊಂದಿಗೆ ಕಳೆದರೆ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ಏಜೆಂಟ್ ಓರ್ವ ಬ್ಯೂಟಿಷಿಯನ್‍ಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಜೀವನ್ ಭೀಮಾನಗರ ನಿವಾಸಿ ಅಕ್ಷತಾಗೆ (ಹೆಸರು ಬದಲಾಯಿಸಲಾಗಿದೆ) ಸಾಲ ನೀಡಿದ್ದ ಏಜೆಂಟ್ ಓರ್ವ ಕಿರುಕುಳ ನೀಡಿದ್ದಾನೆ. ಅಕ್ಷತಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದು, ಆರ್ಥಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಲಾಕ್‍ಡೌನ್ ಜಾರಿಗೆ ಬರುವ ಮೊದಲು ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಸಾಲವನ್ನು ಮರು ಪಾವತಿಸುವಂತೆ ಏಜೆಂಟರು ಆಕೆಗೆ ನಿರಂತರವಾಗಿ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಬ್ಯೂಟಿಷಿಯನ್ ಏಜೆಂಟರ ಕಿರುಕುಳವನ್ನು ಸಹಿಸಲಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಬ್ಯೂಟಿಷಿಯನ್ ಜೀವನ್‍ಭೀಮಾನಗರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಬ್ಯೂಟಿಷಿಯನ್ ಆರೋಪಿಸಿದ್ದಾರೆ. ನನಗೆ ಬಂದಂತಹ ಮೆಸೇಜ್ ಮತ್ತು ಏಜೆಂಟರ ನಂಬರ್‌ಗಳನ್ನು ಸ್ಕ್ರೀನ್‍ಶಾಟ್ ತೆಗೆದು ಪೊಲೀಸರಿಗೆ ನೀಡಿದ್ದೇನೆ. ಆದರೂ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ. ಮೇಲ್ ಮಾಡುವ ಮೂಲಕ ನಾನು ಪೊಲೀಸರಿಗೆ ದೂರು ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.

    ನಾನು ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗಾಗಿ 4,000 ರೂ. ಸಾಲ ಪಡೆದುಕೊಂಡಿದ್ದೆ. ಸಾಲವನ್ನು ಮರುಪಾವತಿಸಲು ನನಗೆ 15 ದಿನಗಳ ಕಾಲ ಸಮಯ ನೀಡಿದ್ದರು. ಆದರೆ ನಾನು ಕೆಲಸವನ್ನು ಕಳೆದುಕೊಂಡಿದ್ದರಿಂದ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಆಗ ನನಗೆ ಇನ್ನೂ ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿಕೊಂಡೆ. ಆದರೆ ಅವರು ಸಾಲ ಹಿಂದಿರುಗಿಸಲು ವಿಳಂಬ ಮಾಡಿದ್ದಕ್ಕೆ ದಂಡವನ್ನು ಸೇರಿಸಲು ಪ್ರಾರಂಭಿಸಿದರು. ಅದು ಏಪ್ರಿಲ್ ಅಂತ್ಯದ ವೇಳೆಗೆ 8,000 ಆಗಿತ್ತು. ನನಗೆ ಯಾವುದೇ ಕೆಲಸವಿಲ್ಲದ ಕಾರಣ ಹಣ ವಾಪಸ್ ನೀಡಲು ಸಾಧ್ಯವಾಗಿಲ್ಲ ಎಂದು ಬ್ಯೂಟಿಷಿಯನ್ ಹೇಳಿದ್ದಾರೆ.

    ಏಜೆಂಟ್ ಓರ್ವ ನನಗೆ ನಿರಂತರವಾಗಿ ಮೆಸೇಜ್ ಕಳುಹಿಸುತ್ತಿದ್ದನು. ಒಂದು ವೇಳೆ ನಾನು ಹಣ ಮರುಪಾವತಿ ಮಾಡದಿದ್ದರೆ ಸಾರ್ವಜನಿಕವಾಗಿ ಅವಮಾನಿಸುವುದಾಗಿ ಬೆದರಿಕೆ ಹಾಕಿದನು. ಕೊನೆಗೆ ನಾನು ಹೇಗೋ ಸ್ವಲ್ಪ ಹಣವನ್ನು ಹೊಂದಿಸಿ ಸಾಲ ತೀರಿಸಿದೆ. ಆದರೂ ಏಜೆಂಟ್ ಎರಡು ರಾತ್ರಿ ನನ್ನೊಂದಿಗೆ ಕಳೆಯಲು ಒಪ್ಪಿದರೆ ಉಳಿದ ಬಾಕಿ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದನು. ಅಲ್ಲದೇ ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡುತ್ತಿದ್ದಾನೆ ಎಂದು ನೊಂದ ಬ್ಯೂಟಿಷಿಯನ್ ಹೇಳಿಕೊಂಡಿದ್ದಾರೆ.

    ನಾನು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಆ ನಂಬರಿಗೆ ಫೋನ್ ಮಾಡಿದರೆ ಕನೆಕ್ಟ್ ಆಗುತ್ತಿಲ್ಲ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

  • ಕೊರೊನಾ ಸಂಕಷ್ಟ- ಒಂದು ಕೋಟಿ ರೂ. ಸಾಲಕ್ಕೆ ಮುಂದಾದ ಕೃಷ್ಣಮಠ

    ಕೊರೊನಾ ಸಂಕಷ್ಟ- ಒಂದು ಕೋಟಿ ರೂ. ಸಾಲಕ್ಕೆ ಮುಂದಾದ ಕೃಷ್ಣಮಠ

    ಉಡುಪಿ: ಕೊರೊನಾ ಸಂಕಷ್ಟ ಕಾಲದಲ್ಲಿ ಉಡುಪಿ ಶ್ರೀಕೃಷ್ಣ ಮಠ ಸಾಲ ಮಾಡಲು ಮುಂದಾಗಿದೆ. ಮಠದ ನಿರ್ವಹಣೆಗೆ ಒಂದು ಕೋಟಿ ರೂ. ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಕೃಷ್ಣಮಠ ಸಾಲ ಮಾಡಲು ಮುಂದಾಗಿದ್ದು ಮಠದ ಭಕ್ತರಿಗೆ ನೋವುಂಟು ಮಾಡಿದೆ.

    ಉಡುಪಿ ಕೃಷ್ಣಮಠದ ಪರ್ಯಾಯ ಅದಮಾರು ಮಠ ಕಳೆದ ಐದು ತಿಂಗಳಿಂದ ತೆರೆದಿಲ್ಲ. ಯಾವುದೇ ಧಾರ್ಮಿಕ ಸೇವೆ ನಡೆಯದೆ ಆರ್ಥಿಕ ಚಟುವಟಿಕೆ ಆರಂಭವಾಗಿದೆ. ದಿನಕ್ಕೆ ಒಂದೂವರೆ ಲಕ್ಷ ರೂ. ಖರ್ಚು ಬರುತ್ತಿದೆ. ಈ ಬಗ್ಗೆ ಪರ್ಯಾಯ ಅದಮಾರು ಮಠಾಧೀಶ ಈಶಪ್ರೀಯ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

    ಕೊರೊನಾ ಕಾಲದಲ್ಲಿ ಹಲವಾರು ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ದೊಡ್ಡ ಕಂಪನಿಗಳು ಕೂಡ ನಷ್ಟದಲ್ಲಿದೆ. ನಿರ್ವಹಣೆ ಮಾಡಲು ಸಾಧ್ಯವಾಗದಷ್ಟು ಸಮಸ್ಯೆಗಳಲ್ಲಿ ಜನ ಇದ್ದಾರೆ. ಪ್ರತಿವರ್ಷ ಮಠದಿಂದ ಶೈಕ್ಷಣಿಕ ಸಂಸ್ಥೆಗಳಿಗೆ ಹಣದ ಹರಿವು ಹೋಗುತ್ತಿದ್ದು. ಶಿಕ್ಷಣ ಸಂಸ್ಥೆಗಳಿಂದ ಈವರೆಗೆ ಹಣವನ್ನು ಮಠದ ಬಳಕೆಗೆ ಉಪಯೋಗ ಮಾಡಿಲ್ಲ. ಇದನ್ನೂ ಓದಿ:ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?

    ಅದಮಾರು ಮಠದ ವಿದ್ಯಾ ಸಂಸ್ಥೆಗಳು ಇವೆ. ಅಲ್ಲಿಂದ ಹಣವನ್ನು ತೆಗೆದುಕೊಂಡು ಬಳಕೆ ಮಾಡಬಹುದಲ್ಲ ಎಂಬ ಸಾಕಷ್ಟು ಅಭಿಪ್ರಾಯಗಳು ಬಂದವು. ಯಾವುದೇ ಕಾರಣಕ್ಕೂ ವಿದ್ಯಾಸಂಸ್ಥೆಗಳ ಹಣವನ್ನು ಮಠದ ಉಪಯೋಗಕ್ಕೆ ನಾವು ಬಳಸುವುದಿಲ್ಲ. ಅದಮಾರು ಮಠದ ಬಳಿ, ಕೃಷ್ಣಮಠದಲ್ಲಿ ಸಂಪತ್ತು ಇದ್ದರೂ ಕೂಡ ಅದೆಲ್ಲವನ್ನು ವಿನಿಯೋಗಪಡಿಸಲು ಸಾಧ್ಯವಿಲ್ಲ. ಮೂಲಧನವನ್ನು ಪ್ರತಿನಿತ್ಯದ ಖರ್ಚಿಗೆ ನಾವು ವಿನಿಯೋಗಿಸುವುದು ಇಲ್ಲ ಎಂದರು.

    ಅದಮಾರು ಮಠದ ಸಿಬ್ಬಂದಿಗಳಿಗೆ ನಾವು ಕೊರೊನಾ ಕಾಲದಿಂದಲೂ ಸಂಬಳವನ್ನು ಚಾಚೂ ತಪ್ಪದೆ ಕೊಡುತ್ತಿದ್ದೇವೆ. ನಮ್ಮ ಪರ್ಯಾಯ ಮುಗಿದ ನಂತರವೂ ಅವರು ನಮ್ಮ ಸಿಬ್ಬಂದಿಗಳಾಗಿರುತ್ತಾರೆ. ಬಹಳ ಶ್ರದ್ಧೆಯಿಂದ ದುಡಿಯುವ ಸುಮಾರು ಜನ ವಿದ್ವಾಂಸರುಗಳು ನಮ್ಮ ಜೊತೆ ಇದ್ದಾರೆ. ಅವರಿಗೆ ಮಠದಿಂದ ಹೊರಗೆ ಹೋಗಿ ಕೆಲಸ ಮಾಡುವ ಅವಕಾಶಗಳು ಇದ್ದರೂ ಕೂಡ ಅವರು ಬದ್ಧತೆಯಿಂದ ಕೃಷ್ಣಮಠ ಮತ್ತು ಅದಮಾರು ಮಠದ ಜೊತೆ ಇದ್ದಾರೆ. ಅವರು ಸಾಕಷ್ಟು ತ್ಯಾಗವನ್ನು ಮಾಡಿ ದೇವರ ಸೇವೆಯನ್ನು ಮಾಡುತ್ತಿದ್ದಾರೆ. ಸಿಬ್ಬಂದಿಗಳ ಜೊತೆ ನಾವು ಇರುವುದು ಕೂಡ ಬಹಳ ಮುಖ್ಯ. ಇರುವ ಸಂಪತ್ತನ್ನು ಖಾಲಿ ಮಾಡುವುದು ಬಹಳ ಸುಲಭ. ಸಾಲ ಅನ್ನೋದು ಒಂದು ಎಚ್ಚರಿಕೆ. ನಾವು ಸಾಲ ಮಾಡಿದರೆ ನಮ್ಮ ಮನಸ್ಸು ಬಹಳ ಎಚ್ಚರಿಕೆಯಿಂದ ಇರುತ್ತದೆ. ಧಾರ್ಮಿಕ ಸಂಸ್ಥೆಯಲ್ಲಿ ಒಂದು ಕಾಳು ಕೂಡ ವ್ಯತ್ಯಾಸವಾಗದಂತೆ ಮುತುವರ್ಜಿವಹಿಸಿ ತೆಗೆದುಕೊಂಡ ಜವಾಬ್ದಾರಿಯಿಂದ ಹಿಂದಿರುಗಿಸುತ್ತೇವೆ ಎಂದು ಹೇಳಿದರು.

  • ಕೇಂದ್ರವೇ RBIನಿಂದ ಸಾಲ ಪಡೆದು ರಾಜ್ಯಗಳ ನಷ್ಟ ಪರಿಹಾರ ತುಂಬಿ ಕೊಡಲಿ: ಎಚ್‍ಡಿಕೆ

    ಕೇಂದ್ರವೇ RBIನಿಂದ ಸಾಲ ಪಡೆದು ರಾಜ್ಯಗಳ ನಷ್ಟ ಪರಿಹಾರ ತುಂಬಿ ಕೊಡಲಿ: ಎಚ್‍ಡಿಕೆ

    ಬೆಂಗಳೂರು: ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಆರ್‌ಬಿಐನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿ ಕೊಡಲಿ ಎಂದು ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

    ಕುಮಾರಸ್ವಾಮಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊದಲಿಗೆ “ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಮೇಲೆ ಗದಾಪ್ರಹಾರ ಮಾಡುವ ಮೂಲಕ ಹೊಣೆಗೇಡಿತನ ಪ್ರದರ್ಶಿಸಿರುವುದು ತೀವ್ರ ಖಂಡನೀಯ” ಎಂದು ಆಗ್ರಹಿಸಿದ್ದಾರೆ.

    ಕೊರೊನಾ ಸಂಕಷ್ಟ ‘ದೇವರ ಅಸಮಾನ್ಯ ಆಟ’ ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಬಹುದೊಡ್ಡ ನಂಬಿಕೆಗೆ ಕೊಡಲಿಪೆಟ್ಟು ಕೊಟ್ಟಿದೆ. ಸುಲಭದ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಿ. ಪಡೆದ ಸಾಲವನ್ನು ರಾಜ್ಯಗಳೇ ತೀರಿಸಿ ಎನ್ನುವ ಆಯ್ಕೆ ಮುಂದಿಟ್ಟು ರಾಜ್ಯಗಳ ಆರ್ಥಿಕತೆಗೆ ಕೇಂದ್ರ ಸರ್ಕಾರ ‘ಕೊಳ್ಳಿ’ ಇಟ್ಟಿದೆ ಎಂದಿದ್ದಾರೆ.

    ಯಾವುದೇ ಪ್ರಲೋಭನೆ ಒಡ್ಡುವ ಮೂಲಕ ರಾಜ್ಯಗಳ ಆರ್ಥಿಕತೆಯ ವ್ಯವಸ್ಥೆ ಮೇಲೆ ನಿಯಂತ್ರಣ ಸಾಧಿಸುವ ಕಾನೂನು, ತಿದ್ದುಪಡಿ ಮಸೂದೆಗಳು ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಅಪಾಯ ಇಲ್ಲದಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಇಂತಹದೊಂದು ಅಪಾಯ ಈಗ ಎದುರಾಗಿದೆ ಎಂದರು.

    ಈಗ ಸಂಗ್ರಹವಾಗಿರುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡಲು 97 ಸಾವಿರ ಕೋಟಿ ರೂ. ಹಾಗೂ ಆದಾಯ ಕೊರತೆ ಎದುರಾಗಲಿರುವ 2.35 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳು ಸಾಲ ಪಡೆಯುವ ಆಯ್ಕೆಗಳನ್ನು ಮುಂದಿಟ್ಟಿದೆ” ಎಂದು ತಿಳಿಸಿದ್ದಾರೆ.

    “ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ” ಎಂಬಂತೆ ರಾಜ್ಯ ಸರ್ಕಾರಗಳು ಕಣ್ಣುಬಾಯಿ ಬಿಡುತ್ತಿವೆ. ಈಗ ಕೊರೊನಾ ನೆಪ ಮುಂದಿಟ್ಟು ಅನ್ಯಾಯ ಮಾಡಿಬಿಟ್ಟರೆ ರಾಜ್ಯ ಸರ್ಕಾರಗಳು ಏನು ಮಾಡಬೇಕು? ಎಂದು ಪ್ರಶ್ನಿಸಿದರು. ಕೋವಿಡ್ 19 ಮತ್ತು ನೆರೆಯಿಂದ ಬಳಲಿರುವ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿವೆ.

    ತಾಳ ತಪ್ಪಿದ ಕೇಂದ್ರ ಸರ್ಕಾರದ ದಿಕ್ಕೆಟ್ಟ ಅರ್ಥವ್ಯವಸ್ಥೆ ಮತ್ತು ಮುನ್ನೋಟದ ಅಂದಾಜು ಗ್ರಹಿಸದ ವೈಫಲ್ಯದ ಫಲವಾಗಿ ರಾಜ್ಯ ಸರ್ಕಾರಗಳು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಗೆ ಸಿಲುಕಿ ನಲುಗುತ್ತಿವೆ. ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ ಆರ್‌ಬಿಐನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿ ಕೊಡಲಿ” ಎಂದು ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

    “ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ, ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ. ಒಬ್ಬರಿಗಾಳಾಗಿ, ಒಬ್ಬರನೋಲೈಸುವ ನಿರ್ಬುದ್ಧಿ ಮನುಜರನೇನೆಂಬೆ, ಕೂಡಲಸಂಗಮದೇವಾ ಬಸವಣ್ಣ” ಎಂದು ಕೊನೆಯಲ್ಲಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

  • ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಟೀ ಮಾರಾಟಗಾರನಿಗೆ ಬ್ಯಾಂಕ್ ನೀಡಿತ್ತು 50 ಕೋಟಿಯ ಶಾಕ್!

    ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಟೀ ಮಾರಾಟಗಾರನಿಗೆ ಬ್ಯಾಂಕ್ ನೀಡಿತ್ತು 50 ಕೋಟಿಯ ಶಾಕ್!

    ಚಂಡೀಗಢ: ಸಾಲಕ್ಕಾಗಿ ಅರ್ಜಿ ಹಾಕಿದ ಟೀ ಮಾರಾಟಗಾರರೊಬ್ಬರಿಗೆ ಬ್ಯಾಂಕ್ 50 ಕೋಟಿ ರೂಪಾಯಿಯ ಶಾಕ್ ನೀಡಿದ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ.

    ಹೌದು. ಕೊರೊನಾ ಎಂಬ ಚೀನಿ ವೈರಸ್ ದೇಶಕ್ಕೆ ಕಾಲಿಟ್ಟ ಬಳಿಕ ಹಲವು ಮಂದಿಯ ಬದುಕು ದುಸ್ಥರವಾಗಿದೆ. ಹಾಗೆಯೇ ರಸ್ತೆ ಬದಿ ಟೀ ಮಾರುತ್ತಾ ಜೀವನ ನಡೆಸುತ್ತಿದ್ದ ರಾಜ್‍ಕುಮಾರ್ ಅವರ ಬದುಕಿಗೂ ಮಹಾಮಾರಿ ವೈರಸ್ ಕುತ್ತು ತಂದಿದೆ. ಈ ಹಿನ್ನೆಲೆಯಲ್ಲಿ ಜೀವನ ನಡೆಸಲು ಬೇರೆ ದಾರಿ ಇಲ್ಲದೆ ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿ, ಅರ್ಜಿ ತಿರಸ್ಕರಿಸಿದ್ದಾರೆ. ಪರಿಣಾಮ ರಾಜ್ ಕುಮಾರ್ ಜೀವನ ಹೇಗೆ ನಡೆಸುವುದು ಎಂದು ಚಿಂತೆಗೀಡಾದರು.

    ಹೀಗೆ ಆಲೋಚನೆಯಲ್ಲಿರುವಾಗಲೇ ಬ್ಯಾಂಕ್ ಸಿಬ್ಬಂದಿ, ನೀವು ಈಗಾಗಲೇ 50 ಕೋಟಿ ಸಾಲ ಪಡೆದಿದ್ದು, ಹೀಗಾಗಿ ಮತ್ತೆ ಸಾಲ ನೀಡಲು ಸಾಧ್ಯವಿಲ್ಲ ಎಂಬ ಶಾಕಿಂಗ್ ವಿಚಾರವೊಂದನ್ನು ತಿಳಿಸಿದ್ದಾರೆ.

    ಕುರುಕ್ಷೇತ್ರ ನಿವಾಸಿಯಾಗಿರುವ ರಾಜ್‍ಕುಮಾರ್ ಚಹಾ ಮಾರಟ ಮಾಡಿ ತನ್ನ ಕುಟುಂಬದ ಬಂಡಿ ಸಾಗಿಸುತ್ತಿದ್ದರು. ಇದೂವರೆಗೂ ಸಾಲ ಪಡೆಯದ ರಾಜ್ ಕುಮಾರ್‍ಗೆ ಇದೀಗ ಬ್ಯಾಂಕ್ ಸಿಬ್ಬಂದಿ ನೀವು ಈಗಾಗಲೇ 50 ಕೋಟಿ ಸಾಲ ಉಳಿಸಿಕೊಂಡಿದ್ದೀರಿ ಎಂದು ಹೇಳಿರುವುದು ಆಕಾಶವೇ ಕಳಚಿ ಬಿದ್ದಂತಾಗಿದೆ.

    ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ನನ್ನ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಮುಂದೆ ಜೀವನ ಸಾಗಿಸಲೆಂದು ಸಾಲಕ್ಕಾಗಿ ಬ್ಯಾಮಕಿಗೆ ಅರ್ಜಿ ಸಲ್ಲಿಸಿದೆ. ಈ ವೇಳೆ ಬ್ಯಾಂಕ್ ನನ್ನ ಅರ್ಜಿ ತಿರಸ್ಕರಿಸಿ, 50 ಕೋಟಿ ಸಾಲ ಉಳಿಸಿಕೊಂಡಿದ್ದೀರಿ ಎಂದು ಹೇಳಿದೆ. ಇದು ಹೇಗೆ ಸಾಧ್ಯ ಎಂದು ನನಗೆ ತಿಳಿದಿಲ್ಲ ಎಂದು ರಾಜ್ ಕುಮಾರ್ ಮಾಧ್ಯಮದ ಜೊತೆ ಮಾತನಾಡುತ್ತಾ ಬೇಸರ ಹೊರಹಕಿದ್ದಾರೆ.

    ರಸ್ತೆ ಬದಿಯಲ್ಲಿ ನಾನು ಟೀ ಮಾರಾಟ ಮಾಡುತ್ತಿದ್ದೇನೆ. ಸದ್ಯ ಕೋವಿಡ್ 19 ಎಂಬ ಮಹಾಮಾರಿ ಒಕ್ಕರಿಸಿದ್ದು, ಇದು ನನ್ನ ವ್ಯಾಪಾರದ ಮೇಲೆಯೂ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಈ ಹಣಕಾಸಿನ ಬಿಕ್ಕಟ್ಟು ಎದುರಿಸಲು ಹೊಸ ಉದ್ಯಮವನ್ನು ಪ್ರಾರಂಭಿಸಲು ಯೋಚನೆ ಮಾಡಿದ್ದು, ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋದೆ ಎಂದರು.

    ನಾನು ಈ ಮೊದಲು ಸಾಲ ಪಡೆದಿಲ್ಲ ಎಂದು ಆಧಾರ್ ಕಾರ್ಡ್ ಹಾಗೂ ನನ್ನ ಬಳಿಯಿದ್ದ ಎಲ್ಲಾ ದಾಖಲೆಗಳನ್ನು ಬ್ಯಾಂಕ್ ಸಿಬ್ಬಂದಿಗೆ ತೋರಿಸಿದೆ. ಆದರೆ ಅವರು ನನ್ನ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಇದೂವರೆಗೂ ಸಾಲ ಪಡೆಯದ ನನ್ನ ಹೆಸರಿನಲ್ಲಿ ಮತ್ತು ಯಾವಾಗ ನೀಡಲಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ರಾಜ್ ಕುಮಾರ್ ತಿಳಿಸಿದ್ದಾರೆ.

  • ಲೋನ್ ಕೊಡಿಸುವುದಾಗಿ ನಂಬಿಸಿ ಮೋಸ- ಮಹಿಳೆಗೆ ಬಿತ್ತು ಗೂಸಾ

    ಲೋನ್ ಕೊಡಿಸುವುದಾಗಿ ನಂಬಿಸಿ ಮೋಸ- ಮಹಿಳೆಗೆ ಬಿತ್ತು ಗೂಸಾ

    ಬೆಂಗಳೂರು: ಕೊರೊನಾದಿಂದಾಗಿ ಜನ ಹಣವಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬಳು ಲೋನ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದು, ಸಿಟ್ಟಿಗೆದ್ದ ಜನ ಮನಬಂದಂತೆ ಥಳಿಸಿದ್ದಾರೆ.

    ನಗರದ ಮುನೇಶ್ವರ ಬಡವಾಣೆಯಲ್ಲಿ ಘಟನೆ ನಡೆದಿದ್ದು, ಸಮಾಜ ಸೇವೆ ಹೆಸರಲ್ಲಿ ಶೀಲಾ ಲಕ್ಷ-ಲಕ್ಷ ರೂಪಾಯಿ ಪೀಕುತ್ತಿದ್ದಾಳೆ. ಲೋನ್ ಕೊಡಿಸುತ್ತೇನೆ ಎಂದು ನಂಬಿಸಿ ಇದೀಗ ಮೋಸ ಮಾಡಿದ್ದು, ಇದು ತಿಳಿಯುತ್ತಿದ್ದಂತೆ ಗ್ರಾಹಕರು ರೊಚ್ಚಿಗೆದ್ದು, ಮನೆಗೆ ನುಗ್ಗಿ, ರಸ್ತೆಗೆ ಎಳೆದು ಮಹಿಳೆಗೆ ಧರ್ಮದೇಟು ನೀಡಿದ್ದಾರೆ.

    ಲೋನ್ ಕೊಡಿಸುವುದಾಗಿ ನಂಬಿಸಿ ಹಣ ಪೀಕಿದ್ದಾಳೆ ಎಂಬುದು ಹಣ ಕಳೆದುಕೊಂಡವರ ಆರೋಪವಾಗಿದ್ದು, ಲಕ್ಷ ಲಕ್ಷ ರೂ. ಹಣ ಪೀಕಿದ್ದಾಳೆ ಎಂದು ಲೇಡಿ ಮನೆಗೆ ನುಗ್ಗಿ ಸಖತ್ ಗೂಸಾ ಕೊಟ್ಟಿದ್ದಾರೆ. ಪ್ರತಿಯೊಬ್ಬರಿಂದ 15-30 ಸಾವಿರ ರೂಪಾಯಿಯಂತೆ ಎಲ್ಲರಿಂದ ಒಟ್ಟು 5.10 ಲಕ್ಷ ರೂ. ಪಡೆದು ಮಹಿಳೆ ವಂಚಿಸಿದ್ದಾಳೆ. ಸುಮಾರು 35 ಜನರಿಂದ ಹಣ ಪೀಕಿ, ಹಣ ಕೊಡುತ್ತೇನೆಂದು ದಿನಕ್ಕೊಂದು ಕಾರಣ ಹೇಳಿ ವಂಚಿಸಲು ಯತ್ನಿಸಿದ್ದಾಳೆ.

    ಇಂದು ತಾಳ್ಮೆ ಕಳೆದುಕೊಂಡ ಹಣ ಕಳೆದುಕೊಂಡ ಮಹಿಳೆಯರು, ವಂಚನೆ ಮಾಡಿದ ಶೀಲಾ ಮನೆಗೆ ನುಗ್ಗಿ ಮನಬಂದಂತೆ ಥಳಿಸಿದ್ದಾರೆ. ಸರ್ಕಾರದಿಂದ ಸಬ್ಸಿಡಿ ಲೋನ್ ಕೊಡಿಸುತ್ತೇನೆ ಎಂದು ಮಹಿಳೆ ವಂಚನೆ ಮಾಡುತ್ತಿದ್ದಳಂತೆ. ಕೊಟ್ಟ ಹಣ ವಾಪಸ್ ಕೇಳಿದರೆ ಶೀಲಾ ದರ್ಪ ಮೆರೆಯುತ್ತಿದ್ದಳಂತೆ. ಹೀಗಾಗಿ ಇದರಿಂದ ಬೇಸತ್ತ 10-12 ಜನ ಶೀಲಾ ಮನೆಗೆ ನುಗ್ಗಿ ಭರ್ಜರಿ ಗೂಸಾ ಕೊಟ್ಟಿದ್ದಾರೆ.

  • ತಾಯಿಯ ಸಾಲ ವಾಪಸ್ ಕೊಡದ್ದಕ್ಕೆ ಯುವಕನ ಕೊಲೆ- ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

    ತಾಯಿಯ ಸಾಲ ವಾಪಸ್ ಕೊಡದ್ದಕ್ಕೆ ಯುವಕನ ಕೊಲೆ- ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

    ಕಲಬುರಗಿ: ಹಣಕಾಸಿನ ವಿಚಾರಕ್ಕೆ ಮೂವರು ಸ್ನೇಹಿತರು ಯುವಕನನ್ನು ಕೊಲೆ ಮಾಡಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ತಾರಫೈಲ್ ಬಡಾವಣೆ ನಿವಾಸಿಗಳಾದ ಸುನೀಲ್ ಅಲಿಯಾಸ್ ಸೋನು, ಶಿವಲಿಂಗ ಹುಲಿಮನಿ ಮತ್ತು ರಾಜು ಬಂಧಿತ ಆರೋಪಿಗಳು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತಾರಫೈಲ್ ಬಡಾವಣೆ ನಿವಾಸಿ ವಿಶಾಲ್‍ನನ್ನ ಜೂನ್ 26 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

    ಮೃತ ವಿಶಾಲ್ ಆರೋಪಿ ಸುನೀಲ್ ತಾಯಿ ಬಳಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದನು. ಹೀಗಾಗಿ ಹಣವನ್ನು ವಾಪಸ್ ಕೊಡುವಂತೆ ಆರೋಪಿ ಸೋನು ಪದೇ ಪದೇ ಕೇಳುತ್ತಿದ್ದನು. ಆದರೆ ಮೃತ ವಿಶಾಲ್ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದನು. ಇದರಿಂದ ಕೋಪಗೊಂಡ ಆರೋಪಿ ಸೋನು ಸ್ನೇಹಿತರ ಜೊತೆ ಸೇರಿ ಸಾಲ ವಾಪಾಸ್ ಕೊಡಲು ವಿಳಂಬ ಮಾಡಿದ್ದಕ್ಕೆ ನಾಗನಹಳ್ಳಿ ಕ್ರಾಸ್ ಬಳಿ ವಿಶಾಲನ ಹತ್ಯೆ ಮಾಡಲಾಗಿತ್ತು.

    ನಾಗನಹಳ್ಳಿ ಕ್ರಾಸ್‍ನ ರಾಜಾಪುರ ನಾಲಾದ ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ವಿಶಾಲ್ ಮೃತ ಸಿಕ್ಕಿತ್ತು. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • 3 ರೂ. 46 ಪೈಸೆ ಸಾಲ ಕಟ್ಟಲು 15 ಕಿ.ಮೀ ನಡೆದ ರೈತ

    3 ರೂ. 46 ಪೈಸೆ ಸಾಲ ಕಟ್ಟಲು 15 ಕಿ.ಮೀ ನಡೆದ ರೈತ

    ಶಿವಮೊಗ್ಗ: ಬ್ಯಾಂಕ್‍ಗಳಲ್ಲಿ ಲಕ್ಷ, ಕೋಟಿ ಲೆಕ್ಕದಲ್ಲಿ ಸಾಲ ಪಡೆದವರು ಪಡೆದ ಸಾಲ ಹಿಂದಿರುಗಿಸದೇ ಆರಾಮಾಗಿ ಇದ್ದಾರೆ. ಅಂತಹವರಿಗೆ ಯಾವ ಸರ್ಕಾರಗಳು ಆಗಲಿ, ಬ್ಯಾಂಕ್ ಗಳಾಗಲಿ ಏನು ಮಾಡಲು ಹೋಗಿಲ್ಲ. ಆದರೆ ಇಲ್ಲೊಬ್ಬ ಸ್ವಾಭಿಮಾನಿ ರೈತನನ್ನು ಬ್ಯಾಂಕ್ ಅವಮಾನವೀಯವಾಗಿ ನಡೆಸಿಕೊಂಡಿರುವುದು ಬೆಳಕಿಗೆ ಬಂದಿದೆ.

    ಹೌದು, ಬ್ಯಾಂಕ್‍ಗೆ ಕೇವಲ 3 ರೂಪಾಯಿ 46 ಪೈಸೆ ಸಾಲ ಕಟ್ಟಲು ರೈತ 15 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ತೆರಳಿ ಸಾಲ ಮರುಪಾವತಿ ಮಾಡಿ ಬಂದಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಮಡೆ ಗ್ರಾಮದಲ್ಲಿ ನಡೆದಿದೆ.

    ಅಮಡೆ ಗ್ರಾಮದ ರೈತ ಲಕ್ಷ್ಮೀನಾರಾಯಣ ನಿಟ್ಟೂರಿನ ಬ್ಯಾಂಕಿವೊಂದರಲ್ಲಿ 35 ಸಾವಿರ ಬೆಳೆ ಸಾಲ ಪಡೆದಿದ್ದರು. ಇದರಲ್ಲಿ 32 ಸಾವಿರ ರೂ. ಸಾಲ ಮನ್ನಾ ಯೋಜನೆಯಡಿ ಮನ್ನಾ ಆಗಿತ್ತು. ಉಳಿದ 3 ಸಾವಿರ ರೂಗಳನ್ನು ಬಡ್ಡಿ ಸಮೇತ ವಾಪಸ್ ಮಾಡಿದ್ದರು. ಆದರೆ ಕಳೆದ ಗುರುವಾರ ಬ್ಯಾಂಕಿನಿಂದ ಲಕ್ಷ್ಮೀ ನಾರಾಯಣ್ ರವರಿಗೆ ಫೋನ್ ಮಾಡಿದ ಸಿಬ್ಬಂದಿ, ತಕ್ಷಣ ನೀವು ಬ್ಯಾಂಕಿಗೆ ಬಂದು ಹೋಗಿ ಎಂದು ತಿಳಿಸಿದ್ದಾರೆ. ಕೆಲಸದ ಕಾರಣ ಶುಕ್ರವಾರ ಬ್ಯಾಂಕಿಗೆ ಹೋಗಿದ್ದಾರೆ. ಅದು ಸುಮಾರು 15 ಕಿ.ಮೀ. ದೂರ ನಡೆದೇ ಹೋಗಿ ಬ್ಯಾಂಕಿನಲ್ಲಿ ವಿಚಾರಿಸಿದಾಗ ನಿಮ್ಮ ಸಾಲದ ಹಣದಲ್ಲಿ 3 ರೂ. 46 ಪೈಸೆ ಬಾಕಿ ಇದೆ ಅದನ್ನು ಕಟ್ಟಿ ಎಂದು ಹೇಳಿದ್ದಾರೆ.

    ಬ್ಯಾಂಕ್ ಸಿಬ್ಬಂದಿ ಮಾತು ಕೇಳುತ್ತಿದ್ದಂತೆ ಲಕ್ಷ್ಮಿನಾರಾಯಣ್ ರವರಿಗೆ ಕುಸಿದು ಹೋಗುವಂತೆ ಆಗಿದೆ. ಇದನ್ನು ಫೋನ್ ನಲ್ಲಿಯೇ ಹೇಳಿದ್ದರೆ ನಿಟ್ಟೂರಿನಲ್ಲಿನ ತನ್ನ ಸ್ನೇಹಿತರಿಂದ ಹಣ ಕಟ್ಟಿಸುತ್ತಿದ್ದೆ. ಹಿಂದೆ ಸಾಲದ ಬಡ್ಡಿ ಕಟ್ಟಲು ಬಂದಾಗ ಕೇಳಿದರೆ ಅಂದೇ ಕಟ್ಟುತ್ತಿದ್ದೆ. ಆದರೆ ಬ್ಯಾಂಕಿನವರು ಅರ್ಜೆಂಟ್ ಆಗಿ ಬಂದು ಹೋಗಿ ಎಂದು ಕರೆದು ಈಗ ಸಾಲ ಕಟ್ಟಿ ಎಂದಿದ್ದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.