Tag: loan

  • ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಅಡಮಾನ – ಪ್ರತಿ ತಿಂಗಳು ಬಿಎಂಟಿಸಿ ಪಾವತಿಸುತ್ತಿದೆ 1.04 ಕೋಟಿ ಬಡ್ಡಿ

    ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಅಡಮಾನ – ಪ್ರತಿ ತಿಂಗಳು ಬಿಎಂಟಿಸಿ ಪಾವತಿಸುತ್ತಿದೆ 1.04 ಕೋಟಿ ಬಡ್ಡಿ

    ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿ ಬೆಂಗಳೂರಿನ ಬಸ್‌ ನಿಲ್ದಾಣವನ್ನೇ ಅಡವಿಟ್ಟಿದ್ದು ಪ್ರತಿ ತಿಂಗಳು 1.04 ಕೋಟಿ ರೂ. ಹಣವನ್ನು ಬಡ್ಡಿಯಾಗಿ ಪಾವತಿಸುತ್ತಿದೆ.

    160 ಕೋಟಿ ರೂಪಾಯಿ ಸಾಲಕ್ಕೆ  ಶಾಂತಿನಗರ ಟಿಟಿಎಂಸಿಯನ್ನು ಅಡವಿಟ್ಟ ಬಿಎಂಟಿಸಿ ಈಗ ಪ್ರತಿ ತಿಂಗಳು 1.04 ಕೋಟಿ ರೂಪಾಯಿ ಬಡ್ಡಿಯನ್ನು ಕೆನರಾ ಬ್ಯಾಂಕಿಗೆ ಪಾವತಿಸುತ್ತಿರುವ ವಿಚಾರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಯಲಾಗಿದೆ.

    ಆನಂದ ಎಂಬವರು 2019 ಅಕ್ಟೋಬರ್‌ 10 ರಿಂದ 2021 ಜನವರಿ 12ರವರೆಗೆ ಬಿಎಂಟಿಸಿ ಸಂಸ್ಥೆ ಎಷ್ಟು ಸಾಲ ಮಾಡಿದೆ? ಇದಕ್ಕೆ ಎಷ್ಟು ಬಡ್ಡಿಯನ್ನು ಕಟ್ಟಲಾಗುತ್ತಿದೆ ಮತ್ತು ಈ ಸಾಲಕ್ಕೆ ಅಡಮಾನ ಇಟ್ಟಿರುವ ಆಸ್ತಿಯ ವಿವರಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು

    ಈ ಅರ್ಜಿಗೆ  ಬಿಎಂಟಿಸಿಯ ಅಯವ್ಯಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಜ.28 ರಂದು ಉತ್ತರ ನೀಡಿದ್ದಾರೆ. ಉತ್ತರದಲ್ಲಿ ಕೇಳಿದ ಅವಧಿಯಲ್ಲಿ ಒಟ್ಟು 160 ಕೋಟಿ ರೂ. ಸಾಲವನ್ನು ಕೆನರಾ ಬ್ಯಾಂಕಿನಿಂದ ಪಡೆಯಲಾಗಿದೆ. ಈ ಸಾಲಕ್ಕೆ ಪ್ರತಿ ತಿಂಗಳು 1.04 ಕೋಟಿ ರೂ. ಬಡ್ಡಿಯನ್ನು ಪಾವತಿಸಲಾಗುತ್ತಿದೆ. ಈ ಸಾಲ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿಬ್ಬಂದಿಯ ಪಿಎಫ್‌, ವಿಮೆ ಮತ್ತು ಇನ್ನಿತರೆ ಬಾಕಿ ಪಾವತಿಗೆ ಹಣವಿಲ್ಲದೆ ಬಿಎಂಟಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ 2019ರಲ್ಲಿ 160 ಕೋಟಿ ರೂ. ಸಾಲ ಕೋರಿ ಟೆಂಡರ್‌ ಕರೆದಿತ್ತು. ಆದರೆ ಯಾವುದೇ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬರದ ಕಾರಣ ಟಿಟಿಎಂಸಿ ಕಟ್ಟಡವನ್ನು ಅಡವಿಟ್ಟು, ಸಾಲವನ್ನು ಪಡೆಯಲಾಗಿತ್ತು.

  • ಸಾಲ ಕೊಡಿಸೋದಾಗಿ ಲಕ್ಷಾಂತರ ದೋಖಾ – ಎಸ್‍ಎಂಎಸ್ ಅಸೋಸಿಯೆಟ್ಸ್ ವಿರುದ್ಧ ದೂರು

    ಸಾಲ ಕೊಡಿಸೋದಾಗಿ ಲಕ್ಷಾಂತರ ದೋಖಾ – ಎಸ್‍ಎಂಎಸ್ ಅಸೋಸಿಯೆಟ್ಸ್ ವಿರುದ್ಧ ದೂರು

    ಚಾಮರಾಜನಗರ: ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಸೆಗೆ ಬಿದ್ದ ಜನರಿಗೆ ಅನಧಿಕೃತ ಖಾಸಗಿ ಸಂಸ್ಥೆಯೊಂದು ಲಕ್ಷಾಂತರ ರೂಪಾಯಿ ಟೋಪಿ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

    ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿದ ಅನಧಿಕೃತ ಖಾಸಗಿ ಸಂಸ್ಥೆಯ ಮಾಲೀಕ ನೂರಾರು ಜನರಿಂದ ಕಮಿಷನ್ ಹಾಗೂ ನೊಂದಣಿ ಶುಲ್ಕದ ರೂಪದಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಮೋಸ ಹೋದ ಜನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ವಂಚನೆ ಹೇಗೆ?
    ಎಸ್.ಎಂ.ಎಸ್. ಅಸೋಸಿಯೆಟ್ಸ್ ಹೆಸರಿನ ಸಂಸ್ಥೆ, ಉದ್ಯೋಗಿ ಶಶಿಕಲಾ ಎಂಬವರ ಹೆಸರಿನಲ್ಲಿ ಜಿ.ಎಸ್.ಟಿ. ನಂಬರ್ ಪಡೆದಿರುವುದನ್ನು ಬಿಟ್ಟರೆ ಇನ್ನೂ ಯಾವುದೇ ರೀತಿಯ ಸರ್ಕಾರಿ ಸಂಸ್ಥೆಗಳಿಂದ ಪರವಾನಗಿ ಪಡೆದಿಲ್ಲ. ಅಲ್ಲದೆ ನೊಂದವಣಿಯು ಆಗಿಲ್ಲ. ಆದರೂ ಚಾಮರಾಜನಗರ ಕೊಳ್ಳೇಗಾಲ, ಮಳವಳ್ಳಿ, ಟಿ.ನರಸೀಪುರ, ಮೈಸೂರು ಸೇರಿದಂತೆ 15 ಕಡೆ ಬ್ರ್ಯಾಂಚ್ ತೆರೆದು ಖಾಸಗಿ ಬ್ಯಾಂಕುಗಳಿಂದ ವ್ಯಾಪಾರ, ಕೈಗಾರಿಕೆ, ಮನೆ, ವಾಹನ, ಕೃಷಿ ಮತ್ತಿತರ ಸಾಲ ಸೌಲಭ್ಯ ಕೊಡಿಸುವುದಾಗಿ ಜನರನ್ನು ನಂಬಿಸಿದೆ. ಸಂಸ್ಥೆಯ ಬಿಸಿನೆಸ್ ಹೆಡ್ ಎಂದು ಹೇಳಿಕೊಂಡ ಮೋಹನಸುಂದರಂ ಎಂಬಾತ ನೂರಾರು ಮಂದಿಯಿಂದ ತಲಾ 2000 ರೂಪಾಯಿಯಂತೆ ನೊಂದಣಿ ಶುಲ್ಕ ವಸೂಲಿ ಮಾಡಿದ್ದಾನೆ. ಅಲ್ಲದೆ ಕೋಟಿಗಟ್ಟಲೆ ಸಾಲ ಕೊಡಿಸುವುದಾಗಿ ಮುಂಗಡವಾಗಿ ಶೇಕಡಾ ಮೂರರಂತೆ ಲಕ್ಷಾಂತರ ರೂಪಾಯಿ ಕಮಿಷನ್ ವಸೂಲಿ ಮಾಡಿದ್ದಾನೆ.

    ಚಾಮರಾಜನಗರ ಹಾಗು ಕೊಳ್ಳೇಗಾಲ ಪೊಲೀಸ್ ಠಾಣೆಗಳಲ್ಲಿ ಈ ಅನಧಿಕೃತ ಖಾಸಗಿ ಸಂಸ್ಥೆಯ ವಿರುದ್ದ ದೂರು ದಾಖಲಿಸಿದ್ದಾರೆ. ಇದೀಗ ಕೊಳ್ಳೇಗಾಲ ಪೊಲೀಸರು ಈ ಸಂಸ್ಥೆಯ ಬಿಸಿನೆಸ್ ಹೆಡ್ ಮೋಹನ ಸುಂದರಂ ಹಾಗು ಉದ್ಯೋಗಿ ಶಶಿಕಲಾ ಎಂಬುವರನ್ನು ಬಂಧಿಸಿದ್ದಾರೆ.

    ವಿಷಯ ತಿಳಿದು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಠಾಣೆಗೆ ಧಾವಿಸಿ, ಈ ಬಗ್ಗೆ ಪ್ರಕರಣ ದಾಖಲಿಸಿ ನೊಂದ ಜನರಿಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕೊಳ್ಳೇಗಾಲ ಪೊಲೀಸರು, ಬಿಸಿನೆಸ್ ಹೆಡ್ ಮೋಹನಸುಂದರಂ ಹಾಗು ಸಂಸ್ಥೆಯ ಉದ್ಯೋಗಿ ಶಶಿಕಲಾ ಎಂಬುವರನ್ನು ಬಂಧಿಸಿ ಇವರ ವಿರುದ್ದ ಮೋಸ ಹಾಗು ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದಾರೆ.

  • 200 ಕೋಟಿ ಸಾಲ ಪಡೆಯಲು ವಾಯುವ್ಯ ಸಾರಿಗೆ ಸಂಸ್ಥೆಯಿಂದ ಅರ್ಜಿ ಆಹ್ವಾನ

    200 ಕೋಟಿ ಸಾಲ ಪಡೆಯಲು ವಾಯುವ್ಯ ಸಾರಿಗೆ ಸಂಸ್ಥೆಯಿಂದ ಅರ್ಜಿ ಆಹ್ವಾನ

    ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳಿಂದ 200 ಕೋಟಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಿದೆ.

    2020-21 ನೇ ಸಾಲಿನಲ್ಲಿ ಭವಿಷ್ಯ ನಿಧಿ ನ್ಯಾಸ ಮಂಡಳಿಯ ಬಾಕಿ ಮೊತ್ತ ಪಾವತಿಸಲು 200 ರೂ. ಕೋಟಿ ದೀರ್ಘಾವದಿ ಸಾಲವನ್ನು, 7 ವರ್ಷಗಳ ಅವಧಿಗೆ ಸಂಸ್ಥೆ ಪಡೆಯಲಿದೆ. ಆಸಕ್ತಿ ಹೊಂದಿದ ಬ್ಯಾಂಕ್, ವಾಣಿಜ್ಯ ಹಾಗೂ ಹಣಕಾಸು ಸಂಸ್ಥೆಗಳು ಮುಚ್ಚಿದ ಲಕೋಟಿಯಲ್ಲಿ ಅರ್ಜಿಯನ್ನು ಫೆಬ್ರವರಿ 19ರ ಮಧ್ಯಾಹ್ನ 3 ಗಂಟೆಯೊಳಗೆ ಗೋಕಲ ರಸ್ತೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು.

     

    ಗೋಕುಲ ರೋಡ್ ನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲೆಕ್ಕ ಪತ್ರ ಇಲಾಖೆಯವರಿಗೆ ಸಲ್ಲಿಸಬೇಕು. ಅದೇ ದಿನ 4 ಗಂಟೆಗೆ ಲಕೋಟೆಯನ್ನು ತೆರೆಯಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ www.nwksrtc.in ಹಾಗೂ ಮೊಬೈಲ್ ಸಂಖ್ಯೆ 77609 91527, 77609 91512 ಸಂಪರ್ಕಿಸಬಹುದು ಎಂದು ಮುಖ್ಯ ಲೆಕ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಲೋನ್ ಹೆಸರಲ್ಲಿ ಪೊಲೀಸಪ್ಪನಿಗೆ ಟೋಪಿ- ಲೋನ್ ಹೆಸರಲ್ಲಿ 34 ಲಕ್ಷ ರೂ ಗುಳುಂ

    ಲೋನ್ ಹೆಸರಲ್ಲಿ ಪೊಲೀಸಪ್ಪನಿಗೆ ಟೋಪಿ- ಲೋನ್ ಹೆಸರಲ್ಲಿ 34 ಲಕ್ಷ ರೂ ಗುಳುಂ

    ಬಳ್ಳಾರಿ: ಲೋನ್ ಕೋಡುತ್ತೇವೆ ಎಂದು ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಗೆ ವಂಚಿಸಿ 34 ಲಕ್ಷರೂಪಾಯಿ ದೋಚಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಆರೋಗ್ಯಪ್ಪ (43) ಖದೀಮರಿಂದ ಮೋಸ ಹೋಗಿರುವ ಹೆಡ್ ಕಾನ್‌ಸ್ಟೇಬಲ್. ಇವರು ಬಳ್ಳಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಂಜಯ್ ಶರ್ಮ ಎಂಬಾತ ಲೋನ್ ಕೊಡಿಸುವುದಾಗಿ ಮೋಸ ಮಾಡಿದ್ದಾನೆ.

    ಲೋನ್ ಬಗ್ಗೆ ರಾಜಸ್ಥಾನದಿಂದ ಕಂಪನಿಯೊಂದರಿಂದ ಕವಿತಾದೇವಿ ಎಂದು ಹೇಳಿಕೊಂಡು ಕರೆ ಮಾಡಿ 50 ಲಕ್ಷ ರೂ. ಹೌಸಿಂಗ್ ಸಾಲದ ಆಫರ್ ಇದೆ. ವರ್ಷಕ್ಕೆ ಎರಡರಷ್ಟು ಬಡ್ಡಿ ಮಾತ್ರ ಎಂದು ಮಾಹಿತಿ ನೀಡುತ್ತಾರೆ. ನಿಜವೆಂದು ನಂಬಿದ ಆರೋಗ್ಯಪ್ಪ, ಅವರು ಹೇಳಿದ ಹಾಗೆ ಕೇಳಿದ್ದಾರೆ. ತಮ್ಮ ಮೂಲ ದಾಖಲೆಗಳನ್ನು ವ್ಯಾಟ್ಸಪ್ ಮೂಲಕ ಆರ್ಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಎಲ್ಲ ಪ್ರತಿಗಳನ್ನು ಕಳಿಸಿದ್ದಾರೆ. ನಿಮಗೆ 50 ಲಕ್ಷ ಹೌಸ್ ಲೋನ್ ಮಂಜೂರಾಗಿದೆ. ಅದಕ್ಕೆ ಶುಲ್ಕ ಭರಿಸಬೇಕು ಎಂದು ತಿಳಿಸಿದ್ದಾರೆ. ಕಾರಣ ಮೊದಲಿಗೆ 93 ಸಾವಿರ ರೂಪಾಯಿಗಳನ್ನು ಅಡ್ವಕೇಟ್ ಮತ್ತು ಶೂರಿಟಿ ಶುಲ್ಕಕ್ಕೆ 2 ಲಕ್ಷ 50 ಸಾವಿರ, ಜಿಎಸ್‍ಟಿ 3 ಲಕ್ಷ 98 ಸಾವಿರ ಜೊತೆಗೆ ಇನ್ನಿತರ ಶುಲ್ಕ ಎಂದು ಒಟ್ಟು 22 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಆರ್‍ಟಿಜಿಎಸ್ ಮತ್ತು ನೆಫ್ಟ್‍ನಲ್ಲಿ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಇದರಂತೆ ಆರೋಗ್ಯಪ್ಪ ಹಣವನ್ನು ಕಳುಹಿಸಿದ್ದಾರೆ. ತದನಂತರ ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿದೆ ಬಳಿಕ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ.

    ಆರೋಗ್ಯಪ್ಪ ಅವರಿಂದ ಹಂತ ಹಂತವಾಗಿ 12 ಲಕ್ಷರೂ.ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಆರೋಗ್ಯಪ್ಪ ಫೋನ್ ಕರೆ ನಂಬಿ 34 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಬಳ್ಳಾರಿ ನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

  • ಮಗನ ಸಾಲ ಬಾಧೆಗೆ ಪ್ರಾಣ ಕಳೆದುಕೊಂಡ ತಂದೆ

    ಮಗನ ಸಾಲ ಬಾಧೆಗೆ ಪ್ರಾಣ ಕಳೆದುಕೊಂಡ ತಂದೆ

    – ಅಂತ್ಯಸಂಸ್ಕಾರಕ್ಕೆ ಬರುವಂತೆ ತಾಯಿ ಕಣ್ಣೀರು

    ಹಾಸನ: ಮಗ ಮಾಡಿರುವ ಸಾಲಕ್ಕೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಶಿವಣ್ಣ (50) ಎಂದು ಗುರುತಿಸಲಾಗಿದೆ. ಮಗ ಮಂಜುನಾಥ್ ಮಾಡಿಕೊಂಡಿದ್ದ ಸಾಲಕ್ಕೆ ಮನನೊಂದು ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಣ್ಣರ ಮಗ 25 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದನು. ಸಾಲಗಾರರ ಕಾಟ ತಾಳಲಾರದೆ ಮಂಜುನಾಥ್ ಮೂರು ತಿಂಗಳ ಹಿಂದಯೇ ಊರು ಬಿಟ್ಟು ಹೋಗಿದ್ದಾನೆ. ಆದರೆ ಮಂಜುನಾಥ್ ಸಾಲ ಮಾಡಿರುವ ವಿಚಾರ ಪೋಷಕರಿಗೆ ತಿಳಿದಿರಲಿಲ್ಲ. ಮಗ ಸಾಲಗಾರ ಕಾಟಕ್ಕೆ ಊರು ಬಿಟ್ಟು ಹೋಗಿದ್ದಾನೆ ಎಂಬ ವಿಚಾರ ತಂದೆಗೆ ತಿಳಿದಿರಲಿಲ್ಲ.

    ಮಂಜುನಾಥ್ ಊರು ಬಿಡುತ್ತಿದ್ದಂತೆ, ಸಾಲ ಕೊಟ್ಟವರು ಮನೆ ಬಳಿ ಬಂದು ಪ್ರತಿನಿತ್ಯ ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ಸಾಲಗಾರರ ಕಾಟ ತಾಳಲಾರದೆ ಮನನೊಂದು ಮಂಜುನಾಥ್ ತಂದೆ ಶಿವಣ್ಣ ವಿಷ ಸೇವಿಸಿದ್ದಾರೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಸಾವನ್ನಪ್ಪಿದ್ದಾರೆ. ಎಲ್ಲಿದ್ದರು ಬಾ ಮಗ, ತಂದೆ ಅಂತ್ಯಸಂಸ್ಕಾರ ಮಾಡು ಎಂದು ತಾಯಿ ಹಾಗೂ ಅಕ್ಕ ಕಣ್ಣೀರಿಡುತ್ತಿದ್ದಾರೆ.

  • ತನ್ನ ಅಪಹರಣಕ್ಕೆ ವ್ಯೂಹ ರಚಿಸಿ ಪೊಲೀಸ್ ಬಲೆಗೆ ಬಿದ್ದ ಯುವಕ

    ತನ್ನ ಅಪಹರಣಕ್ಕೆ ವ್ಯೂಹ ರಚಿಸಿ ಪೊಲೀಸ್ ಬಲೆಗೆ ಬಿದ್ದ ಯುವಕ

    – ಯುವಕನ ಜೊತೆ ಆತನ ಗೆಳೆಯರು ಅಂದರ್

    ಜೈಪುರ: ತನ್ನದೇ ಅಪಹರಣಕ್ಕೆ ವ್ಯೂಹ ರಚಿಸಿದ್ದ ಯುವಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಕಿಡ್ನ್ಯಾಪ್ ಗೆ ಗೆಳೆಯರ ಸಹಾಯ ಪಡೆದು ತಂದೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದನು.

    ವಿಕಾಸ್ ತನ್ನ ಕಿಡ್ನ್ಯಾಪ್ ಗೆ ಪ್ಲಾನ್ ಮಾಡಿದ್ದ ಯುವಕ. ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೇಕಡಾ ಗ್ರಾಮದ ನಿವಾಸಿಯಾಗಿದ್ದ ವಿಕಾಸ್ ಕ್ರೆಡಿಟ್ ಕಾರ್ಡ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದನು. ಹಣಕ್ಕಾಗಿ ತನ್ನ ಅಪಹರಣ ಮಾಡುವಂತೆ ಗೆಳೆಯರಾದ ಯಾದರಾಮ್ ಮತ್ತು ಲೋಕೇಂದ್ರ ಸಿಂಗ್ ಗೆ ಸೂಚಿಸಿದ್ದನು. ವಿಕಾಸ್ ಸಲಹೆಯಂತೆ ಇಬ್ಬರು ಗೆಳೆಯರು ಸಿನಿಮಾ ಶೈಲಿಯಲ್ಲಿ ಆತನನ್ನು ಕುರ್ಚಿಗೆ ಕಟ್ಟಿ ಹಾಕಿ ಥಳಿಸುತ್ತಿರುವ ವೀಡಿಯೋ ಮಾಡಿದ್ದರು. ನಂತರ ಆ ವೀಡಿಯೋವನ್ನ ವಿಕಾಸ್ ತಂದೆ ಪ್ರೇಮ್ ಸಿಂಗ್ ಮೊಬೈಲ್ ಗೆ ಕಳುಹಿಸಿ, ಎರಡೂವರೆ ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು.

    ವೀಡಿಯೋ ನೋಡಿದ ಪ್ರೇಮ್ ಸಿಂಗ್ ಆತಂಕಕ್ಕೊಳಗಾಗಿ ಮಗನ ಉಳಿಸಿಕೊಳ್ಳಲು ಪೊಲೀಸರ ಮೊರೆ ಹೋಗಿದ್ದಾರೆ. ಅಖಾಡಕ್ಕಿಳಿದ ಪೊಲೀಸರು ಕೆಲವೇ ಗಂಟೆಯಲ್ಲಿ ವಿಕಾಸ್ ಮತ್ತು ಆತನ ಇಬ್ಬರು ಗೆಳೆಯರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಅಪಹರಣ- ಕೇವಲ 7 ನಿಮಿಷದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು

    ಕೆಲ ದಿನಗಳ ಹಿಂದೆ ಮಗ ನನ್ನ ಬಳಿ ಹಣ ಕೇಳಿದ್ದನು. ಈಗ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇಂದು ಈ ವೀಡಿಯೋ ಬಂದಿದೆ ಎಂದು ನಮಗೆ ತೋರಿಸಿದರು. ಅಪಹರಣಕಾರರನ್ನು ಬಂಧಿಸಿದಾಗ ವಿಕಾಸ್ ಸೂಚನೆಯಂತೆಯೇ ಕಿಡ್ನ್ಯಾಪ್ ಮಾಡಲಾಗಿತ್ತು ಎಂದು ಬಾಯಿ ಬಿಟ್ಟಿದ್ದಾರೆ. ಕೊನೆಗೆ ವಿಕಾಸ್ ಸಹ 70 ಸಾವಿರ ರೂಪಾಯಿ ಸಾಲ ಹಿಂದಿರುಗಿಸಲು ಈ ಪ್ಲಾನ್ ಮಾಡಿರೋದು ಅಂತ ಹೇಳಿದ್ದಾರೆ. ಸದ್ಯ ಮೂವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ರಾಹುಲ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಬಾಲಕಿಯ ಅಪಹರಣಕ್ಕೆ ಯತ್ನ- ಆರೋಪಿಗಳನ್ನು ಕೊಂದ ಗ್ರಾಮಸ್ಥರು

  • ಸಾಲ ಮರುಪಾವತಿಸಲಾಗದೆ ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

    ಸಾಲ ಮರುಪಾವತಿಸಲಾಗದೆ ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

    – ಮೂರುದಿನಗಳಿಂದ ಕಾಣೆಯಾಗಿದ್ದ ರೈತ
    – ಬ್ಯಾಂಕ್ ಅಧಿಕಾರಿಯ ಬೆದರಿಕೆಗೆ ಮನನೊಂದ ರೈತ

    ಲಕ್ನೋ: ಬ್ಯಾಂಕ್‍ನಿಂದ ಪಡೆದ ಸಾಲವನ್ನು ಮರುಪಾವತಿಸಲಾಗದೆ ರೈತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಧುಲ್ಲಾ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ರೈತನನ್ನು ಸುರೇಶ್ (45) ಎಂದು ಗುರುತಿಸಲಾಗಿದೆ. ಈ ರೈತ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರು. ಆದರೆ ಸಾಲ ಮರುಪಾವತಿಸಲು ಇವರಿಗೆ ಸಾಧ್ಯವಾಗಿಲ್ಲ. ಆಗ ಬ್ಯಾಂಕ್‍ನ ಅಧಿಕಾರಿಯೊಬ್ಬರು ಸಾಲ ಮರುಪಾವತಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

    ಮೃತ ರೈತ ಸುರೇಶ್ ಕುಟುಂಬದವರು ಹೇಳುವ ಪ್ರಕಾರ ಕೆಲವು ವರ್ಷಗಳ ಹಿಂದೆ ರೈತ ಸುರೇಶ್ ಅವರು ಬ್ಯಾಂಕಿನಿಂದ 4 ರಿಂದ 5 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿ ಬೆಳೆ ಸರಿಯಾಗಿ ಬರದೆ ಇರುವ ಕಾರಣದಿಂದಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಒಂದು ದಿನ ಬ್ಯಾಂಕ್‍ನ ಅಧಿಕಾರಿಯೊಬ್ಬರು ಸಾಲವನ್ನು ಮರುಪಾವತಿಸದಿದ್ದರೆ ಮನೆಗೆ ಬರುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

    ಬ್ಯಾಕ್ ಅಧಿಕಾರಿ ಸಾಲ ಮರುಪಾವತಿಸಲು ಒತ್ತಡ ಹೇರಿದ ದಿನದಿಂದಲೂ ಒತ್ತಡದಲ್ಲಿದ್ದರು. ಮೂರು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದರು. ಆದರೆ ಇದೀಗ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ರಾರಾ ಗ್ರಾಮದ ಕಾಲುವೆಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಮೃತ ರೈತ ಸುರೇಶ್ ಅವರ ಸಹೋದರ ಜಗದೀಶ್ ತಿಳಿಸಿದ್ದಾರೆ.

    ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 10 ಲಕ್ಷ ರೂ. ಸಾಲಮಾಡಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

    10 ಲಕ್ಷ ರೂ. ಸಾಲಮಾಡಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

    _ ಸಾಲಾಭಾದೆ ತಾಳಲಾರದೆ ರೈತ ಆತ್ಮಹತ್ಯೆ
    – ಅತಿಯಾದ ಮಳೆಯಿಂದ ಬೆಳೆ ಹಾನಿ

    ಗದಗ: 10 ಲಕ್ಷ ರೂ. ಸಾಲಮಾಡಿ ಬೆಳೆದಿರುವ ಫಸಲು ಹಾಳಾಗಿದೆ ಎಂದು ಮನನೊಂದು ರೈತ ಸಾಲಭಾದೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.

    ಆತ್ಮಹತ್ಯೆ ಶರಣಾದ ರೈತನನ್ನು ಶಿವಪ್ಪ ಮುರಗಿ (40) ಎಂದು ಗುರುತಿಸಲಾಗಿದೆ. ಮೃತ ರೈತ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಗ್ರಾಮದವರಾಗಿದ್ದಾರೆ.

    ರೈತ ಶಿವಪ್ಪ ಎಸ್.ಬಿ.ಐ ಬ್ಯಾಂಕಲ್ಲಿ 7ಲಕ್ಷ ಸಾಲ ಹಾಗೂ ಕೈಸಾಲ 3 ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು. ಈ ಹಣದಿಂದ 7 ಎಕರೆಯಲ್ಲಿ ಹತ್ತಿ, ಮೆಕ್ಕೆಜೋಳ ಬೆಳೆದಿದ್ದರು. ಆದರೆ ಈ ಭಾರಿ ಆಗಿರುವ ಅತಿಯಾದ ಮಳೆಯಿಂದ ಬೆಳೆದಿರುವ ಫಸಲು ಹಾಲಾಗಿದೆ. ಸಾಲಾ ಮಾಡಿ ಬೆಳೆದಿರುವ ಬೆಳೆ ಹಾಳಾಗಿದೆ ಎಂದು ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಿಷ ಸೇವಿಸಿದ ರೈತನನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಾರ್ಗದ ಮಧ್ಯದಲ್ಲೇ ರೈತ ಮೃತಪಟ್ಟಿದ್ದಾರೆ. ಈ ಘಟನೆ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಸಾಲ ಕೊಟ್ಟವಳನ್ನೇ ಕೊಂದ ಡ್ರೈವರ್ – ಶವವನ್ನ 2 ದಿನ ಕಾರಿನಲ್ಲಿ ಇಟ್ಕೊಂಡು ಸುತ್ತಾಟ

    ಸಾಲ ಕೊಟ್ಟವಳನ್ನೇ ಕೊಂದ ಡ್ರೈವರ್ – ಶವವನ್ನ 2 ದಿನ ಕಾರಿನಲ್ಲಿ ಇಟ್ಕೊಂಡು ಸುತ್ತಾಟ

    ಮಂಡ್ಯ: ಕಾರಿನ ಚಾಲಕನೊಬ್ಬ ತನಗೆ ಸಾಲ ಕೊಟ್ಟ ಮಹಿಳೆಯನ್ನೇ ಕೊಲೆ ಮಾಡಿದ್ದು, ಮೃತದೇಹವನ್ನು ಎರಡು ದಿನ ಕಾರಿನಲ್ಲಿ ಇಟ್ಟುಕೊಂಡು ಸುತ್ತಾಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.

    ಚಿಕ್ಕಬಾಗಿಲು ಗ್ರಾಮದ ನಿವಾಸಿ ಜಯಮ್ಮ ಕೊಲೆಯಾದ ಮಹಿಳೆ. ಈಕೆ ಸಣ್ಣದಾಗಿ ಬಡ್ಡಿ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆದರೆ ಕಷ್ಟ ಎಂದು ಸಾಲ ಪಡೆದುಕೊಂಡಿದ್ದ ಅದೇ ಗ್ರಾಮದ ಸುರೇಶ್ ಎಂಬಾತ ಕೊಲೆ ಮಾಡಿದ್ದಾನೆ.

    ಆರೋಪಿ ಸುರೇಶ್ ಬೆಂಗಳೂರಿನಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಲಾಕ್‍ಡೌನ್ ವೇಳೆ ಊರಿಗೆ ಮರಳಿ ಬಂದಿದ್ದ. ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಜಯಮ್ಮನ ಬಳಿ ಬಡ್ಡಿಗೆ ಸಾಲ ಪಡೆದಿದ್ದನು. ಬಳಿಕ ಅವರಿಬ್ಬರ ನಡುವೆ ಅನೇಕ ಬಾರಿ ಹಣದ ವ್ಯವಹಾರ ನಡೆದಿತ್ತು. ಆರೋಪಿ ಸುರೇಶ್ ಜಯಮ್ಮನ ಹಣ ಮತ್ತು ಒಡವೆ ಮೇಲೆ ಕಣ್ಣು ಹಾಕಿದ್ದನು.

    ಸೆ.13ರಂದು ಜಯಮ್ಮನ ಕಿರಿಯ ಮಗನಿಗೆ ಮದುವೆ ಮಾಡಲು ಹೆಣ್ಣು ತೋರಿಸುತ್ತೇನೆಂದು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಎರಡು ದಿನ ಶವವನ್ನು ಕಾರಿನಲ್ಲೇ ಇಟ್ಟುಕೊಂಡು ಓಡಾಡಿದ್ದಾನೆ. ಬಳಿಕ ಮೈಸೂರಿನ ವರುಣ ಸಮೀಪ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾನೆ. ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ ಜಯ್ಯಮ್ಮನ ಕಿರಿಯ ಮಗ ಕುಮಾರ್ ಸೆ.18ರಂದು ಊರಿಗೆ ಬಂದಾಗ ತಾಯಿ ಊರಿನಲ್ಲಿ ಇಲ್ಲದಿರೋದು ತಿಳಿದಿದೆ. ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂದು ಸುಮ್ಮನಾಗಿದ್ದಾನೆ.

    ಸೆ.19ರಂದು ಬೆಳಕವಾಡಿ ಪೊಲೀಸ್ ಠಾಣೆಯ ಪಿಎಸ್‍ಐ ಕರೆ ಮಾಡಿ ಕರೆಸಿಕೊಂಡು ಬಲವಂತವಾಗಿ ತಾಯಿ ನಾಪತ್ತೆಯಾಗಿದ್ದಾಳೆಂದು ದೂರು ಬರೆಸಿಕೊಂಡಿದ್ದರು ಎಂದು ಕುಮಾರ್ ಆರೋಪಿಸಿದ್ದಾನೆ. ಅಲ್ಲದೇ ಭಾನುವಾರ ಮತ್ತೆ ಕರೆ ಮಾಡಿ ಸುರೇಶ್ ನಿನ್ನ ತಾಯಿಯನ್ನು ಕೊಲೆಗೈದು ಠಾಣೆಗೆ ಬಂದು ಶರಣಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ಸುರೇಶ್ ಸಹೋದರ ಮಳವಳ್ಳಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅದಕ್ಕಾಗಿ ಪೊಲೀಸರು ಆರೋಪಿಗೆ ಪ್ರಕರಣದಲ್ಲಿ ಸಹಾಯ ಮಾಡುತ್ತಿದ್ದಾರೆಂದು ಜಯಮ್ಮನ ಮಕ್ಕಳು ಆರೋಪಿಸಿದ್ದಾರೆ. ಈ ಕುರಿತು ಸದ್ಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಿಂದಿ ಬರಲ್ಲ, ಲೋನ್ ಕೊಡಲ್ಲ- ವೈದ್ಯರ ಸಾಲದ ಅರ್ಜಿ ವಜಾಗೊಳಿಸಿದ ಬ್ಯಾಂಕ್

    ಹಿಂದಿ ಬರಲ್ಲ, ಲೋನ್ ಕೊಡಲ್ಲ- ವೈದ್ಯರ ಸಾಲದ ಅರ್ಜಿ ವಜಾಗೊಳಿಸಿದ ಬ್ಯಾಂಕ್

    – ಹಿಂದಿ ಮಾತ್ರ ಬರೋದು, ಲೋನ್ ಕೊಡಲ್ಲ ಎಂದ ಬ್ಯಾಂಕ್ ವ್ಯವಸ್ಥಾಪಕ

    ಚೆನ್ನೈ: ಹಿಂದಿ ಭಾಷೆ ಬಾರದ್ದಕ್ಕೆ ಸರ್ಕಾರಿ ನಿವೃತ್ತ ವೈದ್ಯರೊಬ್ಬರ ಸಾಲದ ಅರ್ಜಿಯನ್ನು ಬ್ಯಾಂಕ್ ವಜಾಗೊಳಿಸಿರುವ ಆಘಾತಕಾರಿ ಘಟನೆ ನಡೆದಿದೆ.

    ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಜಯಂಕೊಂಡನ್‍ನಲ್ಲಿ ಘಟನೆ ನಡೆದಿದ್ದು, ವೈದ್ಯ ಬಾಲಸುಬ್ರಹ್ಮಣಿಯನ್ ಅವರ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ನ ಗಂಗಾಯಿಕೊಂಡ ಚೋಝಾಪುರಂ ಶಾಖೆಯ ಅಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ವೈದ್ಯರು ಕಳೆದ 15 ವರ್ಷಗಳಿಂದ ಈ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಕೇವಲ ಹಿಂದಿ ಬಾರದ ಒಂದೇ ಕಾರಣಕ್ಕೆ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ.

    ಸಾಲಕ್ಕಾಗಿ ವೈದ್ಯರು ಎಲ್ಲ ದಾಖಲೆಗಳನ್ನು ಒದಗಿಸಿದ್ದು, ಬ್ಯಾಂಕ್ ವ್ಯವಸ್ಥಾಪಕ ನನಗೆ ಹಿಂದಾ ಮಾತ್ರ ತಿಳಿದಿದೆ. ಸಾಲದ ಅರ್ಜಿಯನ್ನು ಎಂದು ಸಾಲದ ಅರ್ಜಿಯನ್ನು ಪುರಸ್ಕರಿಸಿಲ್ಲ. ಡಾ.ಬಾಲಸುಬ್ರಹ್ಮಣಿಯನ್ ಅವರು ಇದೀಗ ಬ್ಯಾಂಕ್‍ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ ಮಾನಸಿಕ ಕಿರುಕುಳ ನೀಡಿದ್ದಕ್ಕೆ ಒಂದು ಲಕ್ಷ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ.

    ಈ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರ ನಡೆಯನ್ನು ಖಂಡಿಸಿದ್ದು, ತಮಿಳರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.