Tag: loan waive

  • ಸಾಲಮನ್ನಾ ಮಾಡಿದ ಹೆಚ್‍ಡಿಕೆಗೆ ಜೋಳದ ರೊಟ್ಟಿ, ಚಟ್ನಿ ಪುಡಿ ಗಿಫ್ಟ್ ಕೊಟ್ಟ ರೈತ

    ಸಾಲಮನ್ನಾ ಮಾಡಿದ ಹೆಚ್‍ಡಿಕೆಗೆ ಜೋಳದ ರೊಟ್ಟಿ, ಚಟ್ನಿ ಪುಡಿ ಗಿಫ್ಟ್ ಕೊಟ್ಟ ರೈತ

    ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಸಾಲಮನ್ನಾ ಕಾರ್ಯಕ್ರಮವನ್ನ ಜಾರಿಗೆ ತಂದಿದ್ದರು. ನೂರಾರು ರೈತರು ಇದರ ಪ್ರಯೋಜನವನ್ನು ಪಡೆದರು. ವಿಶೇಷ ಅಂದ್ರೆ ಸಾಲಮನ್ನಾದಿಂದ ಸಹಾಯ ಪಡೆದ ರೈತರೊಬ್ಬರು ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರೀತಿಯ ಊಡುಗೊರೆ ಕೊಟ್ಟಿದ್ದಾರೆ.

    ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಕಿರೇಸೂರು ಗ್ರಾಮದ ಗೋವಿಂದಪ್ಪನಿಂದ ಸಾಲಮನ್ನಾ ಮಾಡಿದ ಕುಮಾರಸ್ವಾಮಿ ಅವರಿಗೆ ಪ್ರೀತಿಯ ಉಡುಗೊರೆ ಕಳಿಸಿದ್ದಾರೆ. ಕುಮಾರಸ್ವಾಮಿ ಸಿಎಂ ಅಗಿದ್ದಾಗ ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಗೋವಿಂದಪ್ಪ ನಿರ್ಧಾರ ಮಾಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದರು. ಪತ್ರಕ್ಕೆ ಸ್ಪಂದಿಸಿದ್ದ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದರು. ಬಳಿಕ ಫೋನ್ ಮೂಲಕ ಗೋವಿಂದಪ್ಪಗೆ ಧೈರ್ಯ ತುಂಬಿದ್ದರು. ಬಳಿಕ ಸಾಲಮನ್ನಾ ಆಗಿ ರೈತ ಗೋವಿಂದಪ್ಪ ಜೀವನ ರೂಪಿಸಿಕೊಂಡಿದ್ದಾರೆ. ಸಾಲಮನ್ನಾ ಮಾಡಿದ್ದಕ್ಕೆ ತನ್ನ ಹೊಲದಲ್ಲಿ ಬೆಳೆದ ಬೆಳೆಯಿಂದ ಜೋಳದ ರೊಟ್ಟಿ, ಶೇಂಗಾ ಚಟ್ನಿಪುಡಿ, ಪಲ್ಯವನ್ನ ತಯಾರಿಸಿ ಕುಮಾರಸ್ವಾಮಿ ಅವರಿಗೆ ಕಳುಹಿಸಿದ್ದಾರೆ.

    ಕೊರಿಯರ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ನಿವಾಸಕ್ಕೆ ಉಡುಗೊರೆ ಕಳಿಸಿದ್ದಾರೆ. ಕೊರಿಯರ್ ಬಾಕ್ಸ್ ನೋಡಿ ಮೊದಲು ಆತಂಕಗೊಂಡ ಭದ್ರತಾ ಸಿಬ್ಬಂದಿ, ಅಮೇಲೆ ತೆಗೆದು ನೋಡಿದಾಗ ಜೋಳದ ರೊಟ್ಟಿ, ಚಟ್ನಿ ಪುಡಿ ಇದೆ. ಅಲ್ಲದೆ ಒಂದು ಪತ್ರವನ್ನು ಬರೆದು ತಮ್ಮ ಗಿಫ್ಟ್ ಸ್ವೀಕಾರ ಮಾಡಬೇಕು ಅಂತ ಮನವಿ ಮಾಡಿದ್ದಾರೆ. ರೈತ ಗೋವಿಂದಪ್ಪನ ಪ್ರೀತಿಯ ಉಡುಗೊರೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಭಾವುಕರಾಗಿದ್ದಾರೆ.

  • ಸಿಎಂ ಎಲ್ಲಿ ಮಲಗಿದ್ದರು ಎಂಬುವುದು ರಾಜ್ಯದ ಜನತೆಗೆ ಗೊತ್ತಾಗದಿರಲಿ – ಸಿಟಿ ರವಿ ವ್ಯಂಗ್ಯ

    ಸಿಎಂ ಎಲ್ಲಿ ಮಲಗಿದ್ದರು ಎಂಬುವುದು ರಾಜ್ಯದ ಜನತೆಗೆ ಗೊತ್ತಾಗದಿರಲಿ – ಸಿಟಿ ರವಿ ವ್ಯಂಗ್ಯ

    ದಾವಣಗೆರೆ: ರಾಜ್ಯದ ಜನರ ಸಾಲಮನ್ನಾ ಬಗ್ಗೆ ಕೇಳಿದರೆ ಸಿಎಂ ಕುಮಾರಸ್ವಾಮಿ ಅವರಿಗೆ ಸಿಟ್ಟು ಬರುತ್ತದೆ. ರೈತ ಮಹಿಳೆಗೆ ಇಷ್ಟು ದಿನ ಎಲ್ಲಿ ಮಲಗಿದ್ದೆ ಎಂದು ಕೇಳುವ ಸಿಎಂ ಅವರು ಎಲ್ಲಿ ಮಲಗಿದ್ದರು ಎಂದು ರಾಜ್ಯದ ಜನರಿಗೆ ಗೊತ್ತಾಗದಿರಲಿ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

    ನಗರದ ಟೆನಿಸ್ ಟೂರ್ನಿಯ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಯಾವಾಗಲೂ ಸಿಟ್ಟು ಮಾಡಿಕೊಳ್ಳುವುದು ರೂಢಿ ಆಗಿದೆ. ಅವರ ತಪ್ಪುಗಳ ಬಗ್ಗೆ ಹೇಳಿದರೇ ಸಿಟ್ಟು ಮಾಡಿಕೊಳ್ಳುತ್ತಾರೆ. ಸಾಲಮನ್ನಾ ಬಗ್ಗೆ ಕೇಳಿದರೆ ಕುಮಾರಸ್ವಾಮಿಯವರು ರೈತರ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಹಾಗೆಯೇ ಕೇಂದ್ರದ ನೀಡಿದ ಅನುದಾನದ ಬಗ್ಗೆ ಹೇಳಿದರೂ ಸಂಸದರ ವಿರುದ್ಧ ಸಿಟ್ಟಾಗುತ್ತಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯದ ರೈತರು ಏನಾದರು ಹೋರಾಟ ಮಾಡಿದರೆ, ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂದು ಸಿಎಂ ಕೇಳುತ್ತಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಎಲ್ಲಿ ಮಲಗಿದ್ದರು ಎಂದು ಹೇಳಿದರೆ ರಾಜ್ಯದಲ್ಲಿ ಅವರಿಗೆ ಯಾವ ಗೌರವ ಉಳಿಯುವುದಿಲ್ಲ. ಸಿಎಂ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಾಗದ ಹಾಗೇ ಇರಲಿ ಎಂದು ಬಿಡಿ ವ್ಯಂಗ್ಯವಾಡಿದರು.

    ಸಿಎಂ ಅವರು ಅಧಿಕಾರಕ್ಕೆ ಬರುವ ಮುನ್ನ ರೈತರ ಸಾಲಮನ್ನಾ ಬಗ್ಗೆ ಹೇಳಿದ್ದರು. ಅಲ್ಲದೇ ಮಹಿಳಾ ಸಂಘಗಳು ಹಾಗೂ ಖಾಸಗಿ ಸಾಲಮನ್ನಾವನ್ನು ಹೇಳಿದ್ದಾರೆ. ಆದರೆ ಮನುಷ್ಯನಿಗೆ ಅದರಲ್ಲೂ ನಮ್ಮಂತಹ ರಾಜಕೀಯ ವ್ಯಕ್ತಿಗಳಿಗೆ ಜಾಸ್ತಿ ಮರೆವು ಅದ್ದರಿಂದ ನಾವು ಮಾಧ್ಯಮಗಳ ಮೂಲಕ ನೆನಪು ಮಾಡುತ್ತೇವೆ. ಒಂದೊಮ್ಮೆ ಮಾಧ್ಯಮಗಳು ಈ ಕುರಿತು ನೆನಪು ಮಾಡಿದರೆ ಅವರ ಮೇಲು ಮುಖ್ಯಮಂತ್ರಿಗಳಿಗೆ ಸಿಟ್ಟು ಬರುತ್ತದೆ ಎಂದು ಆರೋಪಿಸಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಜಿ ವರದಿ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ. 36 ಸಾವಿರ ಕೋಟಿ ರೂಪಾಯಿ ಲೆಕ್ಕ ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಈ ವಿಚಾರವನ್ನ ಬೆಳಗಾವಿ ಅಧಿವೇಶನ ದಲ್ಲಿ ಪ್ರಬಲವಾಗಿ ಪ್ರಶ್ನಿಸಲಾಗುವುದು. ಸಿದ್ದರಾಮಯ್ಯನವರೇ ಸದಸಕ್ಕೆ ಗೈರು ಹಾಜರಾಗುತ್ತಿದ್ದಾರೆ. ಅವರಿಗೂ ಈ ಸರ್ಕಾರ ಬಹಳ ದಿನ ಉಳಿಯಬಾರದು ಎಂದು ಮನಸ್ಸಿನಲ್ಲಿ ಇದ್ದಂತಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲ ಮರುಪಾವತಿಸಿ ಎಂದು ಸಂದೇಶ ಬರ್ತಿದ್ದು, ಏನ್ ಮಾಡ್ಲಿ- ಸಿಎಂಗೆ ರೈತ ಪತ್ರ

    ಸಾಲ ಮರುಪಾವತಿಸಿ ಎಂದು ಸಂದೇಶ ಬರ್ತಿದ್ದು, ಏನ್ ಮಾಡ್ಲಿ- ಸಿಎಂಗೆ ರೈತ ಪತ್ರ

    ಕೊಪ್ಪಳ: ಸಾಲ ಮರುಪಾವತಿಗೆ ಮೊಬೈಲ್‍ಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮನನೊಂದ ಜಿಲ್ಲೆಯ ರೈತರೊಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

    ಯಮನೂರಪ್ಪ ಮೇಟಿ ಸಿಎಂಗೆ ಪತ್ರ ಬರೆದ ರೈತ. ಸಾಲ ಮರುಪಾವತಿಸಿ ಅಂತ ಸಂದೇಶ ಬರುತ್ತಿದ್ದು, ಏನ್ ಮಾಡೊಣ ಹೇಳಿ. ಹಲವು ವರ್ಷಗಳಿಂದ ಮಳೆಯಾಗಿಲ್ಲ, ಈಗ ನಮಗೆ ಸಾಲ ಮರುಪಾವತಿ ಮಾಡೋಕೆ ಆಗಲ್ಲ ಅಂತ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

    ಯಮನೂರಪ್ಪ ಕಳೆದ 1 ವರ್ಷದ ಹಿಂದೆ ಆಂಧ್ರ ಬ್ಯಾಂಕಿನಲ್ಲಿ 1 ಲಕ್ಷ 70 ಸಾವಿರ ಬೆಳೆ ಸಾಲ ಪಡೆದುಕೊಂಡಿದ್ದರು. ಇದೇ ತಿಂಗಳು 20ರೊಳಗೆ ಸಾಲ ಮರುಪಾವತಿ ಮಾಡಿ ನವೀಕರಣ ಮಾಡಿ ಎಂದು ಅವರ ಮೊಬೈಲ್ ಗೆ ಬ್ಯಾಂಕ್ ನಿಂದ ಸಂದೇಶ ಬಂದಿದೆ. ಇದರಿಂದ ಸ್ಯ ರೈತ ಕಂಗಾಲಾಗಿದ್ದಾರೆ.

    ಈ ಹಿಂದೆ ಹಾಸನದ ರೈತರು ತನಗೆ ದಯಾಮರಣ ನೀಡಿ ಅಂತ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಕೆರೆ ಕಟ್ಟೆಗೆ, ದನ ಕರುಗಳಗಳಿಗೆ ನೀರು ನೀಡಿ ಇಲ್ಲಾ ದಯಾಮರಣ ನೀಡಿ ಅಂತ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಪಂಚಾಯಿತಿ ವ್ಯಾಪ್ತಿಯ ರೈತರು ಈ ರೀತಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದರು. ರಾಜ್ಯದಲ್ಲಿ ಮಳೆಯಾಗ್ತಿದ್ರೂ ಇಲ್ಲಿನ ಜನ ಮಾತ್ರ ಬೆಳೆ ಬೆಳೆಯಲು ಆಗ್ತಿಲ್ಲ, ಈಗಾಗಿ ಬದಕಲು ಆಗದ ಸ್ಥಿತಿಯನ್ನು ತಲುಪಿದ್ದೇವೆ. ಈಗಲಾದ್ರೂ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ರೈತರು ಕೋರಿದ್ದರು.

    ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣವೂ ಕಡಿಮೆ ಆಗಿದ್ದು, ಅಂತರ್ಜಲ ಸಂಪೂರ್ಣ ಕುಸಿದಿದೆ. ಈ ಸಮಸ್ಯೆ ಕಳೆದ ಮೂರು ದಶಕಗಳಿಂದ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2009ರ ನಂತರದ ಬೆಳೆ ಸಾಲ ಮಾತ್ರ ಮನ್ನಾ- ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

    2009ರ ನಂತರದ ಬೆಳೆ ಸಾಲ ಮಾತ್ರ ಮನ್ನಾ- ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

    ಬೆಂಗಳೂರು: 2009ಕ್ಕಿಂತ ಹಿಂದಿನ ವರ್ಷಗಳಲ್ಲಿ ರೈತರು ಬ್ಯಾಂಕಿನಲ್ಲಿ ಪಡೆದ ಬೆಳೆ ಸಾಲಮನ್ನಾ ಮಾಡುವುದು ಕಷ್ಟ. ಹೀಗಾಗಿ ಅಂತಹ ಸಾಲಕ್ಕೆ ಸರ್ಕಾರ ಯಾವುದೇ ಜವಾಬ್ದಾರಿಯಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಿಎಂ, ಮಂಡ್ಯ ಜಿಲ್ಲೆಯ ರೈತ ಜವರೇಗೌಡ ಅವರು 2007ರಲ್ಲಿಯೇ ಬೆಳೆ ಸಾಲ ಪಡೆದಿದ್ದಾರೆ. ಇದರಿಂದಾಗಿ ಬ್ಯಾಂಕ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್ ಅವರಿಗೆ ನೋಟಿಸ್ ನೀಡಿದೆ. ಈ ಹಿಂದೆಯೂ ಅವರಿಗೆ ಕೋರ್ಟ್ ನಿಂದ ನೋಟಿಸ್ ಬಂದಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಯಾವ ಸಾಲಮನ್ನಾ?
    2009ರಿಂದ ಇಚೇಗಿನ ಬೆಳೆಸಾಲ ಮಾತ್ರ ಮನ್ನಾ ಆಗುತ್ತದೆ. ಹೊರತಾಗಿ ಟ್ರ್ಯಾಕ್ಟರ್, ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಕೃಷಿ ಸಂಬಂಧಿ ಸಾಲಗಳು ಮನ್ನಾ ಆಗುವುದಿಲ್ಲ. ಇದರ ಅನ್ವಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ 2 ಲಕ್ಷ ಸುಸ್ತಿ ಬೆಳೆ ಸಾಲಮನ್ನಾ ಹಾಗೂ ಚಾಲ್ತಿ ಸಾಲವಿರುವ ರೈತರ ಖಾತೆಗೆ 25 ಸಾವಿರ ರೂ. ಜಮೆ ಮಾಡಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ರೈತರ ಜಾಗೃತಿಗೆ ಕ್ರಮ:
    ಸಾಲಮನ್ನಾ ಕುರಿತು ರೈತರಲ್ಲಿ ಅನೇಕ ಗೊಂದಲಗಳಿವೆ. ಈ ಕುರಿತು ನಾನೊಬ್ಬನೇ ಮಾತನಾಡುತ್ತೇನೆ. ಏಕೆಂದರೆ ನಾನಷ್ಟೇ ಜವಾಬ್ದಾರಿ ಹೊತ್ತಿರುವೆ. ಎಲ್ಲ ಸರ್ಕಾರದ ಹಣೆ ಬರವೇ ಇಷ್ಟು ಅಂತಾ ಬೇಸರದಿಂದ ಮಾತು ಆರಂಭಿಸಿದ ಸಿಎಂ, ರೈತರಲ್ಲಿ ಜಾಗೃತಿ ಮೂಡಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಜೊತೆಗೆ ನಾಡ ಕಚೇರಿಯಲ್ಲಿ ಅರ್ಜಿಗಳನ್ನು ಪ್ರಾರಂಭಿಸಲಾಗುತ್ತದೆ. ಈ ಮೂಲಕ ರೈತರು ಯಾವ ರೀತಿಯ ಸಾಲ? ಯಾವ ವರ್ಷ? ಎಷ್ಟು ಹಣ ಪಡೆದಿದ್ದಾರೆ? ಎಂದು ಮಾಹಿತಿ ಪಡೆಯಲಾಗುತ್ತದೆ. ಬಳಿಕ ಅವರು ನೀಡಿದ ವಿವರಣೆ ನಮ್ಮ ಸರ್ಕಾರದ ಸಾಲಮನ್ನಾಕ್ಕೆ ಅನ್ವಯವಾಗುತ್ತದೆ ಇಲ್ಲವೋ ಅಂತಾ ನೋಡಿ, ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಸಾಲಮನ್ನಾ ನಿರ್ಧಾರದಿಂದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲಪಡೆದ ಒಟ್ಟು 22 ಲಕ್ಷ ರೈತರಿಗೆ ಅನುಕೂಲವಾಗುತ್ತದೆ. ಸಾಲಮನ್ನಾ ಫಲಾನುಭವಿ ರೈತರಿಗೆ ನಾನು ಪತ್ರ ಬರೆಯುವ ನಿರ್ಧಾರಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಕುರ್ಚಿ ಭದ್ರ ಮಾಡಿಕೊಳ್ಳೋಕೆ ಹೋಗಲ್ಲ: ಸಿಎಂ ಎಚ್‍ಡಿಕೆ

    ನಾನು ಕುರ್ಚಿ ಭದ್ರ ಮಾಡಿಕೊಳ್ಳೋಕೆ ಹೋಗಲ್ಲ: ಸಿಎಂ ಎಚ್‍ಡಿಕೆ

    ಬೆಂಗಳೂರು: ಇಂದು ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದೇನೆ. ಈ ಹಿಂದೆಯೂ ಆಕಸ್ಮಿಕವಾಗಿ ಸಿಎಂ ಆಗಿದ್ದೆ. ಮುಖ್ಯಮಂತ್ರಿಯಾಗಿ ಎಷ್ಟು ದಿನ ಇರುತ್ತೇನೆ ಎನ್ನುವುದು ಮುಖ್ಯವಲ್ಲ. ಸಿಎಂ ಕುರ್ಚಿಯಲ್ಲಿ ನಾನು ಎಷ್ಟು ದಿನ ಇರಬೇಕೆಂಬುದನ್ನು ಭಗವಂತ ನಿರ್ಧರಿಸುತ್ತಾನೆ. ಎಂದಿಗೂ ಸಹ ನಾನು ಕುಳಿತಿರುವ ಕುರ್ಚಿಯನ್ನು ಭದ್ರ ಮಾಡಿಕೊಳ್ಳೋಕೆ ಮುಂದಾಗುವುದಿಲ್ಲ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

    ನಗರದ ಉತ್ತರ ಹಳ್ಳಿಯಲ್ಲಿ ಸಮಾಜ ಸಂಪರ್ಕ ವೇದಿಕೆ ನಿರ್ಮಾಣ ಮಾಡಿರೋ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಸಿಎಂ, ಭಗವಂತ ಎಲ್ಲಿಯವರೆಗೂ ಮುಖ್ಯಮಂತ್ರಿ ಆಗಿ ಇರುವಂತೆ ಆಶೀರ್ವಾದ ಮಾಡುತ್ತಾನೋ ಅಲ್ಲಿಯವರೆಗೆ ಇರುತ್ತೇನೆ. ಕೆಲವರು ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನ ಮಾಡುತ್ತಿದ್ದು, ಇಂತಹ ರಾಜಕೀಯ ಬೆಳವಣಿಗೆಯ ಬಗ್ಗೆ ನಾನು ಎಂದಿಗೂ ತಲೆ ಕೆಡಿಸಿಕೊಳ್ಳಲ್ಲ. ಕಳೆದ 12 ವರ್ಷದಿಂದ ನಾನು ನೊಂದಿದ್ದೇನೆ. ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ರು.

    ಒಂದು ವರ್ಷ ಜೈಲು:
    ರೈತರು ಲೇವಾದೇವಿದಾರರ ಹತ್ತಿರ ಸಾಲ ಪಡೆದುಕೊಂಡಿದ್ರೆ, ಅವರ ಜೀವನವೆಲ್ಲಾ ಬಡ್ಡಿ ಕಟ್ಟೋದರಲ್ಲಿ ಅಂತ್ಯವಾಗುತ್ತಿದೆ. ರಾಜ್ಯದಲ್ಲಿ ಬಡ್ಡಿ ಕಟ್ಟುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ. ವರ್ಷಕ್ಕೆ 1 ಲಕ್ಷ 20 ಸಾವಿರಕ್ಕಿಂತಲೂ ಕಡಿಮೆ ವರಮಾನ ಹೊಂದಿರುವ ರೈತರಿಗೆ ಲೇವಾದೇವಿವಾರರು ಸಾಲ ಹಿಂದಿರುಗಿ ಕೊಡುವಂತೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ರೈತರಿಗೆ ಒತ್ತಡ ಹಾಕಿದ್ರೆ, ಆತನನ್ನು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ.

    ಈ ನಿರ್ಧಾರದಿಂದ ಸಾಲ ನೀಡಿದ ಕೆಲವರಿಗೆ ತೊಂದರೆ ಆಗಬಹುದು. ಆದ್ರೆ ರೈತರು ತಾವು ಪಡೆದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ಕಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದ್ರೂ ಶೇ. 80 ರಷ್ಟು ಅಸಲು ಹಣವನ್ನು ರೈತ ಬಾಂಧವರು ಪಾವತಿಸಿದ್ದಾರೆ. ಕುಮಾರಣ್ಣನ ಕೈಯಲ್ಲಿ ಏನೂ ಆಗಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ರು.

    ಮಾಜಿ ಸಿಎಂ ಹೇಳಿದ್ದೇನು?:
    ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಅಂತಾ ಎಲ್ಲರು ಒಂದಾಗಿದ್ದರು. ನನ್ನ ಆಡಳಿತದ ಅವಧಿಯಲ್ಲಿ ಎಲ್ಲ ಜಾತಿಯ ಬಡ ಜನರಿಗೆ ಸಹಾಯ ಮಾಡಿರುವೆ. ಹೀಗಾಗಿ ನನಗೆ ಜನರ ಆಶೀರ್ವಾದವಿದೆ, ಮತ್ತೆ ಮುಖ್ಯಮಂತ್ರಿ ಆಗುತ್ತೇನೆ. ಇಂದು ರಾಜಕೀಯ ಹಣ ಮತ್ತು ಜಾತಿಯ ಮೇಲೆ ನಡೆಯುತ್ತಿದ್ದು, ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಉತ್ತಮ ಕೆಲಸಗಳನ್ನು ಮಾಡುವವರನ್ನು ಜನರು ಗೆಲ್ಲಿಸಬೇಕಿದೆ. ನನ್ನ ಆಡಳಿತದ ಅವಧಿಯಲ್ಲಿ ಹಾಲು, ಅಕ್ಕಿ, ಪಶು ಭಾಗ್ಯ, ಶೂ ಭಾಗ್ಯ ನೀಡಿರುವೆ. ಇವು ಕೇವಲ ಒಂದು ಜಾತಿಗೆ ಸಿಮೀತವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರಕ್ಕೆ ಸಾಲಮನ್ನಾ ತಲೆನೋವು- ತಲೆಕೆಳಗಾದ ಸಿಎಂ ಎಚ್‍ಡಿಕೆ ಲೆಕ್ಕಾಚಾರ

    ಸಮ್ಮಿಶ್ರ ಸರ್ಕಾರಕ್ಕೆ ಸಾಲಮನ್ನಾ ತಲೆನೋವು- ತಲೆಕೆಳಗಾದ ಸಿಎಂ ಎಚ್‍ಡಿಕೆ ಲೆಕ್ಕಾಚಾರ

    ಬೆಂಗಳೂರು: ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಸಾಲಮನ್ನಾ ಮಾಡುವುದು ಸಿಎಂ ಕುಮಾರಸ್ವಾಮಿ ಅವರು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ರೈತರು ಈಗಾಗಲೇ ಸುಮಾರು 53 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ.

    ಹಾಗಾದ್ರೆ ಯಾವ್ಯಾವ ಬ್ಯಾಂಕ್‍ಗಳಲ್ಲಿ ರೈತರು ಎಷ್ಟು ಸಾಲ ಮಾಡಿದ್ದಾರೆ ಅಂತ ನೋಡೋದಾದ್ರೆ,
    * ಕೆನರಾ ಬ್ಯಾಂಕ್: 16,966 ಕೋಟಿ ರೂ.
    * ಕಾರ್ಪೋರೇಷನ್ ಬ್ಯಾಂಕ್: 3,176 ಕೋಟಿ ರೂ.
    * ಸಿಂಡೀಕೇಟ್ ಬ್ಯಾಂಕ್: 4,026 ಕೋಟಿ ರೂ.
    * ಎಸ್‍ಬಿಐ: 5,800 ಕೋಟಿ ರೂ.
    * ವಿಜಯ ಬ್ಯಾಂಕ್: 2,970 ಕೋಟಿ ರೂ.
    * ಕರ್ನಾಟಕ ಬ್ಯಾಂಕ್: 2,149 ಕೋಟಿ ರೂ.
    * ಐಡಿಬಿಐ ಬ್ಯಾಂಕ್: 3,439 ಕೋಟಿ ರೂ.
    * ಪ್ರಗತಿ ಕೃಷಿ ಗ್ರಾಮೀಣ ವಿಕಾಸ ಬ್ಯಾಂಕ್: 3,367 ಕೋಟಿ ರೂ.
    * ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್: 4,334 ಕೋಟಿ ರೂ.
    * ಅಪೆಕ್ಸ್ ಬ್ಯಾಂಕ್: 10,734 ಕೋಟಿ ರೂ.

    ಚುನಾವಣೆಗೂ ಮುಂಚೆ ತಾನು ಸಿಎಂ ಆಗಿ ಅಧಿಕಾರಕ್ಕೆ ಬಂದ ತಕ್ಷಣ ಮೊದಲು ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದರು. ಅಲ್ಲದೇ ಬಳಿಕ ಕರ್ನಾಟಕದ ಜನರಿಗೆ ನಾನು ವಂಚನೆ ಮಾಡುವುದಿಲ್ಲ. ಜನರ ಹೆಸರಿನಲ್ಲಿ ನಾನು ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದೇನೆ. ನಾನು ಬಹಳ ಸೂಕ್ಷ್ಮ ಜೀವಿ. ನನ್ನ ಮಾತನ್ನು ನಡೆಸಿಕೊಟ್ಟಿಲ್ಲ ಎಂದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಅಷ್ಟು ಮಾತ್ರವಲ್ಲ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಸಮ್ಮಿಶ್ರ ಸರ್ಕಾರಕ್ಕೆ ರೈತರ ಸಾಲಮನ್ನಾ ವಿಚಾರ ಕಗ್ಗಂಟಾಗಿದೆ.

  • ನಿಜಗುಣಾನಂದ ಸ್ವಾಮೀಜಿಯ ನಾಲಿಗೆ ಶುದ್ಧವಿಲ್ಲ: ಬಸವರಾಜದೇವರು ಸ್ವಾಮೀಜಿ ತಿರುಗೇಟು

    ನಿಜಗುಣಾನಂದ ಸ್ವಾಮೀಜಿಯ ನಾಲಿಗೆ ಶುದ್ಧವಿಲ್ಲ: ಬಸವರಾಜದೇವರು ಸ್ವಾಮೀಜಿ ತಿರುಗೇಟು

    ಬಾಗಲಕೋಟೆ: ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿಯವರ ನಾಲಿಗೆ ಶುದ್ಧವಿಲ್ಲ. ತಾವು ಉಣ್ಣುವ ಅನ್ನಕ್ಕೆ ಮಹಾದ್ರೋಹ ಮಾಡಿದ್ದಾರೆ ಎಂದು ರೇವಣಸಿದ್ಧೇಶ್ವರ ಮಠದ ಬಸವರಾಜು ಸ್ವಾಮೀಜಿ ವಾಟ್ಸಪ್ ಮೂಲಕ ತಿರುಗೇಟು ನೀಡಿದ್ದಾರೆ.

    ರಾಜ್ಯದಲ್ಲಿ ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಮೋಜು ಮಸ್ತಿಗಾಗಿ ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಇಡೀ ರೈತ ಸಮಾಜಕ್ಕೆ ನಿಜಗುಣಾನಂದ ಸ್ವಾಮೀಜಿಯವರಯ ಅವಮಾನ ಮಾಡಿದ್ದಾರೆ. ಆಚಾರಶೀಲರಾಗಿ, ಧಾರ್ಮಿಕ ಮುಖಂಡರಾಗಿ ಈ ರೀತಿ ಮಾತಾಡೋದು ಮಹಾಪರಾಧ ಆಗುತ್ತದೆ ಅಂದ್ರು.

    ಸಾಲಮನ್ನಾ ವಿಚಾರ ರಾಜ್ಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ರೈತರು, ಮಹಿಳೆಯರ, ಬಡವರ ಕಷ್ಟಗಳ ಬಗ್ಗೆ ಸ್ವಾಮೀಜಿಗಳಿಗೆ ಅರಿವು ಇರಬೇಕಾಗುತ್ತದೆ. ನಿಜಗುಣಾನಂದ ಶ್ರೀಗಳು ಬಸವಧರ್ಮೀಯರು ಆಗಿದ್ದು, ಅವರ ಹೇಳಿಕೆ ಬಸವಧರ್ಮಕ್ಕೆ ವಿರೋಧವಾದದ್ದು ಅಂತಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ನಿಜಗುಣಾನಂದ ಸ್ವಾಮೀಜಿ ಹೇಳಿದ್ದೇನು?:
    `ದೇವರು ಬಹಳ ಡೇಂಜರ್ ಅದಾನ. ನಾಲ್ಕು ಪ್ಯಾಂಟ್-ಶರ್ಟ್, 1 ರೊಟ್ಟಿ, ಒಂದಿಷ್ಟು ಲೋಟಾ ಹಾಲು, ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ ಎಲ್ಲಾ ದೇವರು ಕೊಟ್ಟಿದ್ದಾನೆ. 60 ವರ್ಷ ಆದ್ಮೇಲೆ ಶುಗರ್, ಬಿಪಿ ಬರುತ್ತೆ. ರೈತ ನಿನಗೆ ಸಾಲ ಯಾಕೆ ಬಂತು? ಇಸ್ಪೀಟ್ ಆಡೋದ್ರಿಂದ ಸಾಲ ಬಂತು, ವ್ಯಸನದಿಂದ ಸಾಲ ಬಂತು, ದೊಡ್ಡಸ್ಥನದಿಂದ ಸಾಲು ಬಂತು. ನಿನ್ನ ಸುಖಕ್ಕಾಗಿ ನೀನು ಸಾಲ ಮಾಡಿ ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡಲಿ. ಅಷ್ಟೆ ಅಲ್ಲದೆ, ದೇವರು ಎಲ್ಲಾ ಕಷ್ಟಕ್ಕೂ ಪರಿಹಾರ ಕೊಡುವುದಾದರೆ ರೈತರ ಸಾಲಮನ್ನಾಕ್ಕೂ ಪರಿಹಾರ ಕೊಡ್ಲಿ ನೋಡೋಣ. ಒಟ್ಟಿನಲ್ಲಿ ಹಿತಮಿತ ಜೀವನವಿರಲಿ ಎಂಬ ಸಲಹೆ ನೀಡಿ ಪರೋಕ್ಷವಾಗಿ ಸಾಲಮನ್ನಾವನ್ನು ವಿರೋಧಿಸಿದ್ದರು.

  • ಪರೋಕ್ಷವಾಗಿ ಸಾಲಮನ್ನಾ ವಿರೋಧಿಸಿದ ನಿಜಗುಣಾನಂದ ಸ್ವಾಮೀಜಿ!

    ಪರೋಕ್ಷವಾಗಿ ಸಾಲಮನ್ನಾ ವಿರೋಧಿಸಿದ ನಿಜಗುಣಾನಂದ ಸ್ವಾಮೀಜಿ!

    ಬಾಗಲಕೋಟೆ: ಬಾದಾಮಿಯಲ್ಲಿ ಭಾನುವಾರ ರಾತ್ರಿ ನಡೆದ ಮರಣವೇ ಮಹಾನವಮಿ ಎಂಬ ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ ಅವರು ಸರ್ಕಾರದಿಂದ ರೈತರ ಸಾಲಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಮುಂಡರಗಿ ಮಠಕ್ಕೆ ಸೇರಿರುವ ಸ್ವಾಮೀಜಿ ಸ್ಮಶಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, `ರೈತರು, ಕುಮಾರಸ್ವಾಮಿ ಸಾಲಮನ್ನಾ ಮಾಡಲಿ ಎಂದು ದೇವರ ಮುಂದೆ ಹೇಳೋದು, ದೇವರು ಕೇಳ್ತಾನೆ ಮಗನೇ ನಿನಗೆ ಸಾಲ ಮಾಡು ಅಂದೋರ್ ಯಾರು? ಅಂತ’ ಎಂದು ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    `ದೇವರು ಬಹಳ ಡೇಂಜರ್ ಅದಾನ. ನಾಲ್ಕು ಪ್ಯಾಂಟ್-ಶರ್ಟ್, 1 ರೊಟ್ಟಿ, ಒಂದಿಷ್ಟು ಲೋಟಾ ಹಾಲು, ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ ಎಲ್ಲಾ ದೇವರು ಕೊಟ್ಟಿದ್ದಾನೆ. 60 ವರ್ಷ ಆದ್ಮೇಲೆ ಶುಗರ್, ಬಿಪಿ ಬರುತ್ತೆ. ರೈತ ನಿನಗೆ ಸಾಲ ಯಾಕೆ ಬಂತು? ಇಸ್ಪೀಟ್ ಆಡೋದ್ರಿಂದ ಸಾಲ ಬಂತು, ವ್ಯಸನದಿಂದ ಸಾಲ ಬಂತು, ದೊಡ್ಡಸ್ಥನದಿಂದ ಸಾಲು ಬಂತು. ನಿನ್ನ ಸುಖಕ್ಕಾಗಿ ನೀನು ಸಾಲ ಮಾಡಿ ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡ್ಲಿ’ ಅಂತ ದೇವರು ಅಂತಾನೆ ಎಂದು ಹೇಳುವ ಮೂಲಕ ರೈತ ವರ್ಗವನ್ನು ಸ್ವಾಮೀಜಿ ಅವಮಾನಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಅಷ್ಟೆ ಅಲ್ಲದೆ, ದೇವರು ಎಲ್ಲಾ ಕಷ್ಟಕ್ಕೂ ಪರಿಹಾರ ಕೊಡುವುದಾದರೆ ರೈತರ ಸಾಲಮನ್ನಾಕ್ಕೂ ಪರಿಹಾರ ಕೊಡ್ಲಿ ನೋಡೋಣ. ಒಟ್ಟಿನಲ್ಲಿ ಹಿತಮಿತ ಜೀವನವಿರಲಿ ಎಂಬ ಸಲಹೆ ನೀಡಿ ಪರೋಕ್ಷವಾಗಿ ಸಾಲಮನ್ನಾವನ್ನು ವಿರೋಧಿಸಿದ್ದಾರೆ.

  • ರಾಜ್ಯದ ರೈತರ ಸಾಲಮನ್ನಾ: ಸಿಎಂಗೆ ಅಭಿನಂದನೆಗಳ ಸುರಿಮಳೆ

    ರಾಜ್ಯದ ರೈತರ ಸಾಲಮನ್ನಾ: ಸಿಎಂಗೆ ಅಭಿನಂದನೆಗಳ ಸುರಿಮಳೆ

    – ಸಿಹಿ ಹಂಚಿ ಸಿಎಂ ನಿವಾಸದೆದುರು ಸಂಭ್ರಮಾಚರಣೆ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸಭೆಯಲ್ಲಿ ರೈತರ ಸಾಲಮನ್ನಾ ಮಾಡುವ ಕುರಿತು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ಬೇರೆ ಬೇರೆ ಭಾಗಗಳಿಂದ ರೈತರು ಆಗಮಿಸಿ ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಕಾವೇರಿ ನಿವಾಸಕ್ಕೆ ಭೇಟಿ ನೀಡುತ್ತಿರೋ ರೈತರು, ಮತ್ತಷ್ಟು ಸಾಲಮನ್ನಾ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಅವರ ನಿವಾಸದ ಎದುರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯರಂತೆ ಪಂಚೆ ಶಲ್ಯ ಹಾಕಿಕೊಂಡು ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಸಿಎಂಗೆ ಬಸವಣ್ಣ ಮೂರ್ತಿ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.

    ರಾಜ್ಯ ಸರ್ಕಾರದಿಂದ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದ ಅಲ್ಪವಾಧಿ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. 2017ರ ಜೂನ್ 20ಕ್ಕೆ ಕೊನೆಗೊಂಡಂತೆ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಒಟ್ಟು 8165 ಕೋಟಿ ರೂ. ಅಲ್ಪವಾಧಿ ಸಾಲ ಮನ್ನಾವಾಗಲಿದ್ದು ಇದರಿಂದಾಗಿ 22 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದರು.

     

  • ರೈತರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ 50 ಸಾವಿರ ರೂ. ಸಾಲ ಮನ್ನಾ

    ರೈತರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ 50 ಸಾವಿರ ರೂ. ಸಾಲ ಮನ್ನಾ

    ಬೆಂಗಳೂರು: ರೈತರಿಗೆ ಗುಡ್‍ನ್ಯೂಸ್. ಕೊನೆಗೂ ಮುಖ್ಯಮಂತ್ರಿಗಳು ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ.

    ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದ ಅಲ್ಪವಾಧಿ 50 ಸಾವಿರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

    ಜೂನ್ 20ಕ್ಕೆ ಕೊನೆಗೊಂಡಂತೆ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಒಟ್ಟು 8165 ಕೋಟಿ ರೂ. ಅಲ್ಪವಾಧಿ ಸಾಲ ಮನ್ನಾವಾಗಲಿದ್ದು ಇದರಿಂದಾಗಿ 22 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ಅವರು ತಿಳಿಸಿದರು.

    ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವಂತೆ ಬಿಜೆಪಿ, ಜೆಡಿಎಸ್, ಮತ್ತು ರೈತರು ಪ್ರತಿಭಟನೆ ನಡೆಸಿದ್ದರು.