Tag: loan close

  • ರಾಜ್ಯ ಸರ್ಕಾರದಿಂದ ಬುಧವಾರ ರೈತರ ಸಾಲ ಸಂಪೂರ್ಣ ಮನ್ನಾ?

    ರಾಜ್ಯ ಸರ್ಕಾರದಿಂದ ಬುಧವಾರ ರೈತರ ಸಾಲ ಸಂಪೂರ್ಣ ಮನ್ನಾ?

    ಬೆಂಗಳೂರು:  ಚುನಾವಣೆ ವೇಳೆ ನೀಡಿದ ಭರವಸೆಯಂತೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬುಧವಾರ ರೈತರ ಸಾಲವನ್ನು ಮನ್ನಾ ಮಾಡುವ ಸಾಧ್ಯತೆಯಿದೆ.

    ರೈತರ ಸಾಲಮನ್ನಾ ಮಾಡದಿದ್ದಕ್ಕೆ ಸಿಟ್ಟುಗೊಂಡ ಬಿಜೆಪಿ ಸೋಮವಾರ ರಾಜ್ಯಾದ್ಯಂತ ಬಂದ್ ಗೆ ಕರೆಕೊಟ್ಟಿತ್ತು, ಆದ್ರೆ ಕೆಲವೆಡೆ ಬಂದ್ ಗೆ ಬೆಂಬಲ ವ್ಯಕ್ತವಾದ್ರೆ, ಇನ್ನು ಕೆಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕುಮಾರಸ್ವಾಮಿಯವರಿಗೆ ಸಾಲಮನ್ನಾ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರು ಈಗಾಗಲೇ ಸಾಲ ಮನ್ನಾ ಅಗತ್ಯತೆ ಬಗ್ಗೆ ಕೈ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಕುಮಾರಸ್ವಾಮಿ ಮಂಡಿಸಿದ ಸಾಲ ಮನ್ನಾ ವಾದಕ್ಕೆ ಕಾಂಗ್ರೆಸ್‍ನಿಂದ ತಾತ್ವಿಕ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದ್ದು, ಇಂದು ಹಣಕಾಸು ಸಚಿವಾಲಯದ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಸಾಲಮನ್ನಾ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಚರ್ಚೆ ನಡೆಸಲಿದ್ದಾರೆ. ಬಳಿಕ ನಾಳೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

    ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ, ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಆದ್ರೂ ರಾಜ್ಯಪಾಲರ ಅನುಮತಿ ಪಡೆದು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಲದೇ ರೈತರ ಸಾಲಮನ್ನಾ ಮಾಡುವುದಾಗಿ ಕೂಡ ಘೋಷಣೆ ಮಾಡಿದ್ದರು. ಆದ್ರೆ ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮರುದಿನವೇ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿತ್ತು. ವಿಧಾನಸಭಾ ಕಲಾಪದಲ್ಲಿ ಬಹುಮತ ಸಾಬೀತು ಮಾಡದೇ ಬಿಎಸ್‍ವೈ ಸದನದಿಂದ ಹೊರಟು ರಾಜ್ಯಪಾಲರ ಬಳಿ ತೆರಳಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.

    ಬಳಿಕ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ರು. ಅಲ್ಲದೇ ಬಹುಮತ ಸಾಬೀತು ಪಡಿಸಿ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ವಿರುದ್ಧ ಕೆಂಡಾಮಂಡಲರಾದ್ರು. ಮುಖ್ಯಮಂತ್ರಿಯ ಬಳಿಕ ಬಿಎಸ್ ಯಡಿಯೂರಪ್ಪ ಅವರು ಕಲಾಪದಲ್ಲಿ ಮಾತನಾಡಿ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಲ್ಲದೇ ಇಂದು ಸಂಜೆಯೊಳಗೆ ರೈತರ ಸಾಲಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಬಂದ್ ಮಾಡಲಾಗುವುದು ಅಂತ ಹೇಳಿ ಸಭಾ ತ್ಯಾಗ ಮಾಡಿದ್ದರು.

  • ಸಿಎಂ ಎಚ್‍ಡಿಕೆ ವಿರುದ್ಧ ಸಿಡಿದ ಶಾಸಕ ಸಿಟಿ ರವಿ

    ಸಿಎಂ ಎಚ್‍ಡಿಕೆ ವಿರುದ್ಧ ಸಿಡಿದ ಶಾಸಕ ಸಿಟಿ ರವಿ

    ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಶಾಸಕ ಸಿಟಿ ರವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ

    ಸಾಲ ಮನ್ನ ಮಾಡಬೇಕೆಂದು ಬಿಜೆಪಿ ಕರೆ ನೀಡಿದ್ದ ಬಂದ್‍ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ಸಿನ ಮುಲಾಜಿನಲ್ಲಿ ಇದ್ದೇನೆ ಅನ್ನೋದಾದ್ರೆ, ಅವರು ಖರ್ಚು ಮಾಡುತ್ತಿರುವ ಹಣ ದೇವೇಗೌಡರ ಮನೆಯದ್ದೂ ಅಲ್ಲ, ಸೋನಿಯಾ ಗಾಂಧಿ ಮನೆಯದ್ದೂ ಅಲ್ಲ. ಆರೂವರೆ ಕೋಟಿ ಜನರ ತೆರಿಗೆ ಹಣ. ಜನರ ಹಣವನ್ನ ಖರ್ಚು ಮಾಡಿದ ಮೇಲೆ ರೈತರ ಸಾಲವನ್ನ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಕುಮಾರಸ್ವಾಮಿಗೆ ರೈತರು ಒಂದು ತಿಂಗಳ ಸಮಯ ನೀಡಲು ಸಿದ್ಧರಿದ್ರು. ಆದ್ರೆ, ಅವ್ರು ನಿಯೋಜಿತ ಸಿಎಂ ಆಗಿದ್ದಾಗ್ಲೆ, ನನಗೆ ಜನಾದೇಶ ನೀಡಿಲ್ಲ. ನಾನು ಜನರ ಮುಲಾಜಿನಲ್ಲಿ ಇಲ್ಲ. ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಎಂದು ಮಾತಿನ ವರಸೆ ಚೆಂಜ್ ಮಾಡಿದ್ರಿಂದಾಗಿ, ಅವರು ಕೊಟ್ಟ ಮಾತನ್ನ ಮಾರೆಯಬಾರದು. ರೈತರಿಗೆ ಅನ್ಯಾಯವಾಗಬಾರದೆಂದು ಈ ಪ್ರತಿಭಟನೆ ಎಂದ್ರು.

    ಒಂದು ವಾರದಲ್ಲಿ ಸಾಲ ಮನ್ನಾ ಮಾಡದಿದ್ರೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಕುತ್ತಿಗೆ ಪಟ್ಟು ಹಿಡಿದು, ಜುಟ್ಟು ಹಿಡಿದಾಗ್ಲಿ ಸಾಲ ಮನ್ನ ಮಾಡ್ಸೋ ಕೆಲಸ ಮಾಡ್ತಾರೆಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

  • ನಾಳೆ ಕರ್ನಾಟಕ ಬಂದ್- ಬೆಂಗ್ಳೂರು ನಗರ ಪೊಲೀಸ್ ಆಯುಕ್ತರಿಂದ ಖಡಕ್ ಎಚ್ಚರಿಕೆ

    ನಾಳೆ ಕರ್ನಾಟಕ ಬಂದ್- ಬೆಂಗ್ಳೂರು ನಗರ ಪೊಲೀಸ್ ಆಯುಕ್ತರಿಂದ ಖಡಕ್ ಎಚ್ಚರಿಕೆ

    ಬೆಂಗಳೂರು: ರೈತರ ಸಾಲಮನ್ನಾ ಕುರಿತಂತೆ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನಾಳೆ ಯಾವುದೇ ಬಂದ್ ಗೆ ಅವಕಾಶವಿಲ್ಲ. ಒಂದು ವೇಳೆ ಬಂದ್ ಗೆ ಮುಂದಾದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಬಂದ್ ಮಾಡುವವರಿಗೆ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಂದು ಸಂಜೆಯೊಳಗಡೆ ಸಾಲಮನ್ನಾ ಆಗದಿದ್ರೆ ಬಿಜೆಪಿಯಿಂದ ಸೋಮವಾರ ಕರ್ನಾಟಕ ಬಂದ್

    ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಬಂದ್ ಮಾಡದಂತೆ ಮನವಿ ಮಾಡಲಾಗಿದ್ದು, ನಗರದ ಎಲ್ಲಾ ಡಿಸಿಪಿಗಳಿಗೆ ಬಂದ್ ಮಾಡುವವರ ವಿರುದ್ಧ ಸೂಕ್ತ ಕ್ರಮ ವಹಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ಫಿಲಂ ಚೇಂಬರ್ ನಿಂದ ಬೆಂಬಲವಿಲ್ಲ: ನಾಳೆ ನಡೆಯಲಿರುವ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಕಾರ ಇಲ್ಲ. ಎಂದಿನಂತೆ ಚಲನಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಇಲ್ಲ. ಸ್ವಯಂ ಪ್ರೇರಿತರಾಗಿ ಯಾರಾದರೂ ಬೆಂಬಲ ಸೂಚಿಸಿದರೆ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಅಂತ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಂದ್ ಎನ್ನುವುದಕ್ಕಿಂತ ರೈತರೇ ಬಂದ್ ಮಾಡ್ತಾರೆ- ಬಿಎಸ್‍ವೈ

    ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶುಕ್ರವಾರ ಬಹುಮತ ಸಾಬೀತುಪಡಿಸಿದ್ದು, ಈ ಮೊದಲು ನಡೆದ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಅಂದೇ ಸಂಜೆಯೊಳಗೆ ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿದ್ರು. ಒಂದು ವೇಳೆ ರೈತರ ಸಾಲಮನ್ನಾ ಮಾಡದಿದ್ದಲ್ಲಿ ಸೋಮವಾರ ಕರ್ನಾಟಕ ಬಂದ್ ಮಾಡುವುದಾಗಿ ಹೇಳಿ ತಮ್ಮ ಮುಖಂಡರೊಂದಿಗೆ ಸಭಾತ್ಯಾಗ ಮಾಡಿದ್ದರು. ಇದನ್ನೂ ಓದಿ: ಸಾಲ ಮನ್ನಾ ಮಾಡುತ್ತೇವೆ ಅಂತಾ ಹೇಳಲಿ ಬಂದ್ ಹಿಂಪಡೆಯುತ್ತೇವೆ: ಕೆ.ಎಸ್.ಈಶ್ವರಪ್ಪ

  • ಬಹುಮತ ಸಾಬೀತು ಬಳಿಕ ಸಾಲಮನ್ನಾ ಸಂಕಟ- ಅಧಿಕಾರಿಗಳೊಂದಿಗೆ ಸಿಎಂ ಎಚ್‍ಡಿಕೆ ಸಭೆ

    ಬಹುಮತ ಸಾಬೀತು ಬಳಿಕ ಸಾಲಮನ್ನಾ ಸಂಕಟ- ಅಧಿಕಾರಿಗಳೊಂದಿಗೆ ಸಿಎಂ ಎಚ್‍ಡಿಕೆ ಸಭೆ

    – ಇತ್ತ ಬಿಜೆಪಿ ಪ್ರತಿಭಟನೆಗೆ ನಿರ್ಧಾರ

    ಬೆಂಗಳೂರು: ಈಗಾಗಲೇ ವಿಶ್ವಾಸಮತ ಯಾಚಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಕುಮಾರಸ್ವಾಮಿಗೆ ಸಾಲಮನ್ನಾ ಸಂಕಟ ಎದುರಾಗಿದೆ. ಈ ಬಗ್ಗೆ ಶುಕ್ರವಾರ ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ರು.

    ಈ ವೇಳೆ ಅಧಿಕಾರಿಗಳು ಸಾಲಮನ್ನಾಗೆ ಇರುವ ಎಲ್ಲಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜ್ಯದ ಆರ್ಥಿಕ ಸ್ಥಿತಿ ಹೀನಾಯವಾಗಿಲ್ಲ. ಹಾಗಾಗಿ ಸಾಲಮನ್ನಾ ಘೋಷಣೆ ಕುರಿತು ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಸದ್ಯದಲ್ಲೇ ಎಚ್‍ಡಿಕೆ ನಿರ್ಧಾರ ಕೈಗೊಳ್ಳವ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯಡಿಯೂರಪ್ಪರ ಮಾನಸಿಕ ಅಸ್ಥಿರತೆಯ ಭಾಷಣ ನೋಡಿ ಅಯ್ಯೋ ಅನ್ನಿಸಿತು: ಹೆಚ್‍ಡಿಕೆ

    ರೈತರ ಸಾಲಮನ್ನಾ ವಿಚಾರವಾಗಿ ಬಿಜೆಪಿಯೂ ಹೋರಾಟಕ್ಕೆ ಮುಂದಾಗಿದೆ. ನಿನ್ನೆ ಸದನದಲ್ಲಿ ಗುಡುಗಿದ್ದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಸೋಮವಾರದಿಂದ ಹೋರಾಟದ ಅಖಾಡಕ್ಕೆ ಇಳಿಯಲಿದ್ದಾರೆ. ರೈತರ ಸಾಲಮನ್ನಾಗೆ ಆಗ್ರಹಿಸಿ, ಪ್ರತಿಭಟನೆ ತೀವ್ರಗೊಳಿಸಲು ಬಿಜೆಪಿ ನಿರ್ಧರಿಸಿದೆ.

    ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಇರೋದ್ರಿಂದ ಬೆಂಗಳೂರು ನಗರ ಹೊರತುಪಡಿಸಿ, ಸೋಮವಾರ ಕರ್ನಾಟಕದ ಉಳಿದೆಡೆಗಳಲ್ಲಿ ಬಿಜೆಪಿ ಸ್ವಯಂಪ್ರೇರಿತ ಬಂದ್‍ಗೆ ಕರೆ ನೀಡಲಿದೆ. ಈ ನಡುವೆ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ನಿರ್ಧರಿಸಿದ್ದು, ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಜನರ ಸ್ವಯಂ ಪ್ರೇರಿತ ಬಂದ್‍ಗೆ ಬಿಜೆಪಿ ಬೆಂಬಲ ನೀಡುತ್ತಿದೆ : ಸಿಟಿ ರವಿ