Tag: living relationship

  • ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಸಾವು

    ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಸಾವು

    ಬೆಂಗಳೂರು: ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯೊಬ್ಬರು ಮಗುವಿಗೆ ಜನ್ಮ ನೀಡಿ ತೀವ್ರ ರಕ್ತಸ್ರಾವದಿಂದ ಸಾವಿಗೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಛತ್ತೀಸ್‌ಘಡದ ಸಮ್ಜನಮುಖಿ ಎಂಬ ಯುವತಿ ತನ್ನ ತಾಯಿ ಜೊತೆ ಬೆಂಗಳೂರಲ್ಲಿ ವಾಸವಾಗಿದ್ದಳು. ಎಲ್‌ಎಲ್‌ಎಮ್ ಪದವಿ ಕೂಡ ಮಾಡಿದ್ದರು. ಈ ನಡುವೆ ಯುವಕನೊಬ್ಬನ ಜೊತೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಆಕೆ ಗರ್ಭಿಣಿಯಾಗಿದ್ದಳು. ತುಂಬು ಗರ್ಭಿಣಿಯಾದ ಆಕೆ‌ ನಿನ್ನೆ ಮಗುವಿಗೆ ಜನ್ಮ ನೀಡಿ, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

    ವೈಯಾಲಿಕಾವಲ್‌ನಲ್ಲಿ ಕಳೆದ 2 ತಿಂಗಳಿಂದ ಮೃತ ಯುವತಿ ಹಾಗೂ ಆಕೆಯ ತಾಯಿ ವಾಸವಿದ್ದರು. ಹುಡುಗನ‌ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದದ್ದು ತಾಯಿಗೆ ಗೊತ್ತಿರಲಿಲ್ಲ. ಇಂದು ಬೆಳಗಿನ ಜಾವ 3 ಗಂಟೆಗೆ ರೂಮಿನಲ್ಲಿ ಶಬ್ದ ಬಂದಿದೆ. ಈ ವೇಳೆ ಮನೆಯಲ್ಲಿದ್ದ ಸಂಬಂಧಿ ರೂಮಿಗೆ ಹೋಗಿ ನೋಡಿದ್ದಾನೆ. ರೂಮಿನಲ್ಲಿ ಯುವತಿ ರಕ್ತಸ್ರಾವದಿಂದ ಹಾಸಿಗೆ ಮೇಲಿದ್ದಳು. ಮಗಳ ಪಕ್ಕ ತಾಯಿ ಕೂಡ ಕೂತಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದಾಗ ಬೇಡ ಎಂದಿದ್ದಳಂತೆ ತಾಯಿ. ಸ್ವಲ್ಪ ಸಮಯದ ನಂತರ ಹೆರಿಗೆಯಾಗಿದ್ದು, ಯುವತಿ ಸಾವನ್ನಪ್ಪಿದ್ದಳು. ಸದ್ಯ ತಾಯಿ ವಿರುದ್ಧವೇ ವೈಯಾಲಿಕಾವಲ್‌ ಠಾಣೆಗೆ‌ ಸಂಬಂಧಿ ದೂರು ನೀಡಿದ್ದಾರೆ.

    ಮಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ‌ ಸಾವು ಎಂದು ದೂರು ನೀಡಲಾಗಿದೆ. ಸದ್ಯ ದೂರು ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಹಸುಳೆಯನ್ನ ಮಕ್ಕಳ ಆರೈಕೆ‌ ಕೇಂದ್ರಕ್ಕೆ ನೀಡಿದ್ದಾರೆ.

  • ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗ್ಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

    ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗ್ಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

    ಬೆಂಗಳೂರು: ಮುಂಬೈ (Mumbai), ದೆಹಲಿಯಂತಹ (NewDelhi) ಮಹಾನಗರಗಳಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲೂ ಈಗ ಲಿವಿಂಗ್ ರಿಲೇಷನ್‌ಶಿಪ್ ಕೊಲೆ ಕೇಸ್‌ಗಳು (Living Relationship Murder Cases) ಹೆಚ್ಚಾಗಿ ದಾಖಲಾಗ್ತಿವೆ.

    ಲಿವಿಂಗ್ ರಿಲೇಷನ್‌ಶಿಪ್‌ನಲ್ಲೇ ಇರ್ತಾರೆ, ಜಗಳ ಮಾಡಿಕೊಂಡು ಕೊಲೆಯಾಗ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಕಳೆದ 8 ತಿಂಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಎಲ್ಲಾ ಕೇಸ್‌ನಲ್ಲೂ ಮಾರಕಾಸ್ತ್ರ ಬಳಕೆಯಾಗಿದ್ದು, ಭೀಕರವಾಗಿ ಕೊಲೆಯಾಗಿರುವುದು ಕಂಡುಬಂದಿದೆ.

    ಕೇಸ್ ನಂ.1:

    ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಯುವತಿ ಕೌಸರ್ ಹಾಗೂ ಆರೋಪಿ ನದೀಪ್ ಪಾಷ 4 ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಈ ವೇಳೆ ಹುಟ್ಟುಹಬ್ಬಕ್ಕೆ ಬೆಳ್ಳಿ ಚೈನ್ ತಂದುಕೊಡದಿದ್ದಕ್ಕೆ ಕೌಸರ್ ಜಗಳ ತೆಗೆದು, ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ನದೀಪ್ ಪಾಷಾ ಯುವತಿ ಕೌಸರ್‌ಳನ್ನ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ.

    ಕೇಸ್ ನಂ.2:

    ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದಕ್ಕೆ ಯುವತಿಯ ಪ್ರಿಯತಮ ಆತನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಕೆಲ ವರ್ಷಗಳಿಂದ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. ಆದ್ರೆ ಯುವತಿ ತನ್ನ ಸ್ನೇಹಿತ ಸುಲೇಮಾನ್ ಜೊತೆ ಸಲುಗೆಯಿಂದ ಇದ್ದಿದ್ದನ್ನು ನೋಡಿ ವಿಕ್ಟರ್, ಸುಲೇಮಾನ್‌ನನ್ನ ಭೀಕರವಾಗಿ ಕೊಲೆ ಮಾಡಿದ್ದ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

    ಕೇಸ್ ನಂ.3:

    ಮಾಜಿ ಪ್ರಿಯತಮೆಗೆ ಪದೇ ಪದೇ ಕರೆ ಮಾಡುತ್ತಿದ್ದಕ್ಕೆ ಆರೋಪಿ ಶ್ರೀಕಾಂತ್‌ನನ್ನು ಕೊಲೆ ಮಾಡಿದ್ದ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮಹಿಳೆಯೊಬ್ಬಳು ಮೊದಲು ಕೊಲೆಯಾದ ಶ್ರೀಕಾಂತ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ನಂತರ ಅವನೊಂದಿಗೆ ಜಗಳವಾಡಿಕೊಂಡು ಬೇರ್ಪಟ್ಟು, ಅರುಣ್ ಕುಮಾರ್ ಜೊತೆಗಿದ್ದಳು. ಆದ್ರೆ ಶ್ರೀಕಾಂತ್ ಪದೇ ಪದೇ ಮಹಿಳೆಗೆ ಕರೆ ಮಾಡ್ತಿದ್ದರಿಂದ ಅರುಣ್ ಶ್ರೀಕಾಂತ್‌ನನ್ನ ಕೊಲೆ ಮಾಡಿಸಿದ್ದ. ಸಿಸಿಬಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು.

    ಕೇಸ್ ನಂ.4:

    ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಪ್ರಿಯತಮೆಯನ್ನ ಕೊಲೆ ಮಾಡಿದ್ದ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಿಯತಮೆ ಸುನಿತಾ ಕೆಲ ವರ್ಷಗಳಿಂದ ಆರೋಪಿ ಪ್ರಿಯತಮ ಪ್ರಶಾಂತ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ಸುನಿತಾ ಲಿವಿಂಗ್ ಸಾಕು ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಶ್ರೀಕಾಂತ್ ಆಕೆಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದ.

    ಕೇಸ್ ನಂ.5:

    ತನ್ನ ಪ್ರಿಯತಮೆಯ ಮೇಲೆ ಅನುಮಾನಗೊಂಡು ರಾಡ್‌ನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ನೇಪಾಳ ಮೂಲದ ಕೃಷ್ಣಕುಮಾರಿ ಹಾಗೂ ಆರೋಪಿ ಸಂತೋಷ್ ಒಟ್ಟಿಗೇ ವಾಸಿಸುತ್ತಿದ್ದರು. ಆದ್ರೆ ಕೃಷ್ಣಕುಮಾರಿ ಮೇಲೆ ಅನುಮಾನಗೊಂಡಿದ್ದ ಸಂತೋಷ್ ಇದೇ ವಿಚಾರಕ್ಕೆ ಜಗಳ ತೆಗೆಯುತ್ತಿದ್ದ. ಕೊನೆಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿ ಸಂತೋಷ್ ರಾಡ್‌ನಿಂದ ಬಲವಾಗಿ ಹೊಡೆದು ಕೃಷ್ಣಕುಮಾರಿಯನ್ನ ಕೊಲೆ ಮಾಡಿದ್ದ.

    ಕೇಸ್ ನಂ.6:

    ಅರ್ಪಿತ್ ಎಂಬ ಯುವಕ ತನ್ನೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದ ಆಕಾಂಕ್ಷ ಯುವತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಘಟನೆ ಜೀವನ್ ಭೀಮನಗರದಲ್ಲಿ ನಡೆದಿತ್ತು.

    ಕೇಸ್ ನಂ.7:

    ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಅಯ್ಯಪ್ಪ ಎಂಬ ವ್ಯಕ್ತಿ ತನ್ನ ಪತ್ನಿಯ (ನಾಗರತ್ನ) ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿತ್ತು.

  • ಲಿವಿಂಗ್ ರಿಲೇಷನ್‍ಶಿಪ್ ಇಟ್ಕೊಂಡು ಕೈಕೊಟ್ಟ – ತಂಗಿಗೆ ಮೋಸ ಮಾಡಿದವನ ಕಾಲು ಮುರಿದ ಅಣ್ಣಂದಿರು

    ಲಿವಿಂಗ್ ರಿಲೇಷನ್‍ಶಿಪ್ ಇಟ್ಕೊಂಡು ಕೈಕೊಟ್ಟ – ತಂಗಿಗೆ ಮೋಸ ಮಾಡಿದವನ ಕಾಲು ಮುರಿದ ಅಣ್ಣಂದಿರು

    ಬೆಂಗಳೂರು: ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದು ತನ್ನ ತಂಗಿಗೆ ಮೋಸ ಮಾಡಿದ್ದಕ್ಕೆ ಸಹೋದರರು ಸೇರಿ ಯುವಕನ ಕಾಲು ಮುರಿದ ಘಟನೆ ಬೆಂಗಳೂರಿನ ಜೆಜೆಆರ್ ನಗರದಲ್ಲಿ ನಡೆದಿದೆ.

    ರಿಜ್ವಾನ್ ಷರೀಫ್(24) ಎರಡೂ ಕಾಲು ಕಳೆದುಕೊಂಡ ಯುವಕ. ರಿಜ್ವಾನ್ ಷರೀಫ್ ಯುವತಿಯೊಬ್ಬಳ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದನು. 15 ದಿನದ ನಂತರ ಯುವತಿ ಜೊತೆ ವಾಪಸ್ ಬಂದು ಈಕೆಯನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದನು.

    ಇದರಿಂದ ಸಿಟ್ಟಿಗೆದ್ದ ಯುವತಿ ಮೋಸ ಮಾಡಿದ ಯುವಕನ ಮೇಲೆ ರೇಪ್ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಳು. ಈ ನಡುವೆ ಯುವತಿಯ ಮನೆಯವರು ಆಕೆಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ ರಿಜ್ವಾನ್‍ನನ್ನು ಕರೆದು ಯುವತಿಯ ಸಹೋದರರು ಹಲ್ಲೆ ಮಾಡಿದ್ದಾರೆ.

    ಯುವತಿಯ ಅಣ್ಣಂದಿರು ರಿಜ್ವಾನ್‍ಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಕಾಲು ಮುರಿದಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ರಿಜ್ವಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಜೆಜೆಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.