Tag: livestock

  • ವನ್ಯಜೀವಿಯಿಂದ ಹಾಡಿಯ ಜಾನುವಾರು ಮೃತಪಟ್ಟರೆ ಪರಿಹಾರ: ಈಶ್ವರ ಖಂಡ್ರೆ

    ವನ್ಯಜೀವಿಯಿಂದ ಹಾಡಿಯ ಜಾನುವಾರು ಮೃತಪಟ್ಟರೆ ಪರಿಹಾರ: ಈಶ್ವರ ಖಂಡ್ರೆ

    ಬೆಂಗಳೂರು: ರಾಜ್ಯದ ಕೆಲವು ಅರಣ್ಯದೊಳಗೆ ಹಾಡಿಗಳಿದ್ದು, ಇಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳು ಸಾಕಿರುವ ಜಾನುವಾರುಗಳು (Livestock) ವನ್ಯಜೀವಿಗಳಿಂದ ಮೃತಪಟ್ಟರೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದ್ದಾರೆ.

    ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳೆದ ಜೂನ್‌ನಲ್ಲಿ ಪ್ರತಿಕಾರಕ್ಕಾಗಿ ದನಕ್ಕೆ ಹಾಕಿದ್ದ ವಿಷದಿಂದ 5 ಹುಲಿಗಳು ಮೃತಪಟ್ಟಿದ್ದವು. ಈ ತಿಂಗಳ ಆದಿಯಲ್ಲೇ ಮತ್ತೊಂದು ಹುಲಿ ವಿಷಪ್ರಾಶನದಿಂದ ಮೃತಪಟ್ಟಿದೆ. ಹಾಡಿಯ ಜನರು ಹತಾಶರಾಗಿ, ಪ್ರತಿಕಾರಕ್ಕಾಗಿ ವಿಷ ಹಾಕುವುದನ್ನು ತಡೆಯಲು ಈ ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ರಾಜ್ಯ ಸರ್ಕಾರ – ಪರೀಕ್ಷಾ ಶುಲ್ಕ 710 ರೂ.ವರೆಗೆ ಹೆಚ್ಚಳ

    ಮುಖ್ಯಮಂತ್ರಿಗಳಿಗೆ ಹುಲಿ ಸಾವಿನ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅರಣ್ಯದೊಳಗಿನ ಹಾಡಿಯಲ್ಲಿರುವ ಜಾನುವಾರುಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪ್ರವಾಹದಲ್ಲಿ ಸಾವಿಗೀಡಾಗುವ ಜಾನುವಾರುಗಳಿಗೆ ನೀಡುವ ಪರಿಹಾರದ ಮೊತ್ತವನ್ನೇ ಈ ಜಾನುವಾರುಗಳಿಗೂ ನೀಡಲು ನಿರ್ಧರಿಸಲಾಗಿದ್ದು, ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ – ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

    ತಾವು ಸಾಕಿದ ಜಾನುವಾರುಗಳು ಮೃತಪಟ್ಟಾಗ ಸಹಜವಾಗಿಯೇ ಆಕ್ರೋಶಕ್ಕೆ ಒಳಗಾಗುತ್ತಾರೆ. ಆದರೆ ವನ್ಯಜೀವಿ ಹತ್ಯೆ ಅಪರಾಧವಾಗಿದ್ದು, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ. ಕಳೆದ 1ರಂದು ನಡೆದ ಹುಲಿ ಹತ್ಯೆಯ 4 ಶಂಕಿತರನ್ನು 48 ಗಂಟೆಯೊಳಗೆ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಈ ಕುಕೃತ್ಯದಲ್ಲಿ ಯಾರೇ ಎಸಗಿದ್ದರೂ ಅವರಿಗೆ ಕಾನೂನು ರೀತಿಯ ತಕ್ಕ ಶಿಕ್ಷೆ ಆಗುತ್ತದೆ. ತ್ವರಿತವಾಗಿ ಶಿಕ್ಷೆ ಆದರೆ ಅದು ಸ್ಪಷ್ಟ ಸಂದೇಶ ರವಾನಿಸುತ್ತದೆ. ಹೀಗಾಗಿ ತ್ವರಿತವಾಗಿ ಚಾರ್ಜ್ ಶೀಟ್ ಸಲ್ಲಿಸಲು ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಯಾದಗಿರಿ | ಸೆಕ್ಸ್‌ಗೆ ಒಪ್ಪದಿದ್ದಕ್ಕೆ ಪತ್ನಿಯ ಭೀಕರ ಕೊಲೆ – ಕೊಡಲಿಯೊಂದಿಗೆ ಪೊಲೀಸರಿಗೆ ಶರಣಾದ ಹಂತಕ

    ಒಂದೊಮ್ಮೆ ಹುಲಿ ಹತ್ಯೆ ತಡೆಯುವಲ್ಲಿ ಅರಣ್ಯ ಇಲಾಖೆಯ ಯಾವುದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರೆ, ಕರ್ತವ್ಯ ಲೋಪ ಆಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು. ಈಗಾಗಲೇ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವೀರಶೈವ-ಲಿಂಗಾಯತರು ಹಾಳಾದ್ರೆ ಇಡೀ ರಾಜ್ಯವೇ ಹಾಳಾಗುತ್ತೆ: ಈಶ್ವರ್‌ ಖಂಡ್ರೆ

  • ಜಾನುವಾರು ರಕ್ಷಣೆ ವೇಳೆ ಪೊಲೀಸರಿಗೆ ಬುರ್ಕಾಧಾರಿ ಮಹಿಳೆಯರಿಂದ ಅಡ್ಡಿ

    ಜಾನುವಾರು ರಕ್ಷಣೆ ವೇಳೆ ಪೊಲೀಸರಿಗೆ ಬುರ್ಕಾಧಾರಿ ಮಹಿಳೆಯರಿಂದ ಅಡ್ಡಿ

    ಚಿಕ್ಕಬಳ್ಳಾಪುರ: ಅಕ್ರಮವಾಗಿ ಕಟ್ಟಿ ಹಾಕಲಾಗಿದ್ದ ಜಾನುವಾರುಗಳ ರಕ್ಷಣೆ ವೇಳೆ ಪೊಲೀಸರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಲು ಯತ್ನಿಸಿ, ಅಡ್ಡಿಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ನಡೆದಿದೆ.

    ಗೋವ್ ಗ್ವಾನ್ ಫೌಂಡೇಶನ್ ದೂರಿನ ಮೇರೆಗೆ ಮಂಚೇನಹಳ್ಳಿ ಪಿಎಸ್‌ಐ ಹಾಗೂ ಕೆಲ ಸಿಬ್ಬಂದಿ ಅಕ್ರಮವಾಗಿ ಕೂಡಿ ಹಾಕಿದ್ದ ಗೋವುಗಳ ರಕ್ಷಣೆಗೆ ಮುಂದಾಗಿದ್ದರು. ಆದರೆ ಅಲ್ಲಿನ ಕೆಲ ಬುರ್ಕಾಧಾರಿ ಮಹಿಳೆಯರು ಅವರನ್ನು ಅಡ್ಡಿಪಡಿಸಿ, ಕಲ್ಲು ತೂರಾಟ ನಡೆಸಲು ಯತ್ನಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮಜಯಂತಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ

    ವಿಷಯ ತಿಳಿದ ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ ಕುಮಾರ್ ಹೆಚ್ಚುವರಿ ಪೊಲೀಸರನ್ನು ಕಳುಹಿಸಿ, ಜಾನುವಾರುಗಳ ರಕ್ಷಣೆ ಮಾಡಿದರು. 30 ಕ್ಕೂ ಹೆಚ್ಚು ಜಾನುವಾರುಗಳನ್ನು ಅಕ್ರಮವಾಗಿ ಒಂದೇ ಕಡೆ ಓಪನ್ ಶೆಡ್‌ನಲ್ಲಿ ಕೂಡಿ ಹಾಕಲಾಗಿದ್ದು, ಕ್ಯಾಂಟರ್‌ಗಳ ಮೂಲಕ ಜಾನುವಾರುಗಳನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ಇದನ್ನೂ ಓದಿ: ಗ್ರಾ. ಪಂ ಅಧ್ಯಕ್ಷೆ ಗಾದಿಗಾಗಿ ದೇವರ ಮೊರೆ – ಹರಕೆ ತೀರಿಸಲು ಹೆಲಿಕಾಪ್ಟರ್ ತಂದು ಪುಷ್ಪಾರ್ಚನೆ

    ಘಟನೆ ವೇಳೆ ನೂರಾರು ಜನ ಸ್ಥಳದಲ್ಲಿ ಜಮಾಯಿಸಿ, ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದರು. ಆದರೂ ಹರಸಾಹಸ ಪಟ್ಟ ಪೊಲೀಸರು ಸ್ಥಳೀಯ ಮುಖಂಡರಿಗೆ ಕಾನೂನು ಅರಿವು ಮೂಡಿಸಿ, ಜಾನುವಾರುಗಳ ರಕ್ಷಣೆ ಮಾಡಿದರು. ಈ ವೇಳೆ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆತಂಕದ ನಡುವೆ ಪೊಲೀಸರು ಜಾನುವಾರುಗಳನ್ನು ರಕ್ಷಿಸಿ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

  • ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜಾನುವಾರುಗಳ ಬಲಿ

    ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಜಾನುವಾರುಗಳ ಬಲಿ

    ಶಿವಮೊಗ್ಗ: ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ವಿಲೇವಾರಿಯಲ್ಲಿ ಮಹಾ ನಿರ್ಲಕ್ಷ್ಯವಾಗಿದ್ದು, ಇದರಿಂದಾಗಿ ಜಾನುವಾರುಗಳು ಬಲಿಯಾಗುತ್ತಿವೆ.

    ಶಿವಮೊಗ್ಗ ನಗರದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯಗಳನ್ನು ವಾಹನ ಚಾಲಕರು ಡಂಪಿಂಗ್ ಯಾರ್ಡ್ ಬದಲು, ತುಂಗಾ ಎಡದಂಡೆ ಕಾಲುವೆಯ ಅಕ್ಕಪಕ್ಕದ ಖಾಲಿ ಜಾಗದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಈ ಪರಿಣಾಮ ರಸ್ತೆ ಬದಿಯಲ್ಲಿ ಸುರಿದ ಘನತ್ಯಾಜ್ಯ ತಿಂದು ಅನುಪಿನಕಟ್ಟೆ ಗ್ರಾಮದ ಜಾನುವಾರುಗಳು ಸಾವನ್ನಪ್ಪಿದೆ. ಕಳೆದ ಎರಡು ದಿನದಲ್ಲಿ 5ಕ್ಕೂ ಹೆಚ್ಚು ಜಾನುವಾರುಗಳ ಸಾವು ಸಂಭವಿಸಿದೆ. ಇದನ್ನೂ ಓದಿ: ಅಪ್ಪು ಸರ್ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ: ಇಮ್ರಾನ್ ಸರ್ದಾರಿಯಾ

    ಅದು ಅಲ್ಲದೇ ಕಟ್ಟಡ ನಿರ್ಮಾಣದ ವೇಸ್ಟ್, ಕಲ್ಯಾಣ ಮಂಟಪದ ಘನತ್ಯಾಜ್ಯಗಳಿದ್ದು, ಅವುಗಳನ್ನು ರಸ್ತೆ ಬದಿಯಲ್ಲಿಯೇ ವಿಲೇವಾರಿ ಮಾಡುವುದರಿಂದ ಅದನ್ನು ತಿಂದ ಜಾನುವಾರುಗಳು ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲದೆ ಸಾಯುತ್ತಿವೆ. ಈ ಜಾನುವಾರುಗಳು ಅನುಪಿನಕಟ್ಟೆ ಗ್ರಾಮದ ಚಿತ್ರಾ ಪ್ರಕಾಶ್, ರತ್ನಮ್ಮ ಬೋರೆಗೌಡ ಅವರಿಗೆ ಸೇರಿದಂತೆ ಹಲವರಿಗೆ ಸೇರಿದೆ. ಕಳೆದ ಎರಡು ದಿನಗಳಿಂದ ಇವುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

    ಈ ಸಾವಿಗೆ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಅನುಪಿನಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಕೆರೆಗೆ ಉರುಳಿಬಿದ್ದ KSRTC ಬಸ್ – ತಪ್ಪಿದ ಮಹಾ ದುರಂತ

  • ಬಕ್ರೀದ್- ಜಾನುವಾರು ಅಕ್ರಮ ಸಾಗಣಿಕೆ ತಡೆಗೆ ಚೆಕ್ ಪೋಸ್ಟ್

    ಬಕ್ರೀದ್- ಜಾನುವಾರು ಅಕ್ರಮ ಸಾಗಣಿಕೆ ತಡೆಗೆ ಚೆಕ್ ಪೋಸ್ಟ್

    ಯಾದಗಿರಿ: ಬಕ್ರೀದ್ ಹಬ್ಬದ ಹಿನ್ನಲೆ ಜಾನುವಾರು ಅಕ್ರಮ ಸಾಗಣೆಕೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಡಳಿತ ಸಭಾಂಗಣದ ಕಚೇರಿಯಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

    ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಬಕ್ರೀದ್ ಹಬ್ಬ ಸಂದರ್ಭದಲ್ಲಿ ಮಸೀದಿಗಳಲ್ಲಿ 50 ಜನ ಸೇರುವ ಬದಲು, ಆಯಾ ಮಸೀದಿ ಸಾಮರ್ಥ್ಯದ ಶೇ.50ರಷ್ಟು ಮಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪರಿಷ್ಕೃತ ಅದೇಶ ಹೊರಡಿಸಿದೆ. ಅದೇ ರೀತಿ ಪರಸ್ಪರ 6 ಆಡಿ ಅಂತರ, ಮಾಸ್ಕ್ ಕಡ್ಡಾಯ ಮತ್ತಿತರ ಅಂಶಗಳನ್ನು ಪಾಲಿಸಬೇಕು. ಹಸ್ತಲಾಘವ, ಪರಸ್ಪರ ಆಲಿಂಗನ ಮತ್ತಿತರ ಪ್ರಕ್ರಿಯೆಗಳನ್ನು ನಿರ್ಬಂಧಿಸಬೇಕು ಎಂದು ಹೇಳಿದರು.

    ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮಾತನಾಡಿ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರನ್ವಯ ಯಾವುದೇ ರೀತಿಯ ಜಾನುವಾರುಗಳ ಹತ್ಯೆ ಮಾಡುವಂತಿಲ್ಲ ಎಂದು ಹೇಳಿದರು. ಜಾನುವಾರು ಅಕ್ರಮ ಸಾಗಣಿಕೆ ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ವತಿಯಿಂದ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು ಎಂದರು.

  • 35 ಕಿ.ಮೀ ಹಿಂದಕ್ಕೆ ಚಲಿಸಿದ ರೈಲು – ದೊಡ್ಡ ಅಪಘಾತದಿಂದ ಪ್ರಯಾಣಿಕರು ಪಾರು

    35 ಕಿ.ಮೀ ಹಿಂದಕ್ಕೆ ಚಲಿಸಿದ ರೈಲು – ದೊಡ್ಡ ಅಪಘಾತದಿಂದ ಪ್ರಯಾಣಿಕರು ಪಾರು

    ಡೆಹರಾಡೂನ್: ಮುಂದಕ್ಕೆ ಚಲಿಸಬೇಕಾಗಿದ್ದ ಶತಾಬ್ದಿ ಎಕ್ಸ್ ಪ್ರೆಸ್ ರೈಲು ತಾಂತ್ರಿಕ ದೋಷದಿಂದ ಹಿಂದಕ್ಕೆ ಚಲಿಸಿದ ಘಟನೆ ಉತ್ತರಾಖಂಡದಲ್ಲಿ ಬುಧವಾರ ನಡೆದಿದೆ.

    ದೆಹಲಿಯಿಂದ ತನಕಪುರಕ್ಕೆ ತೆರಳಲುತ್ತಿದ್ದ ಪೂರ್ಣಗಿರಿ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲು ತಾಂತ್ರಿಕ ದೋಷದಿಂದ 35ಕಿ.ಮೀ ಹಿಂದಕ್ಕೆ ಚಲಿಸಿದೆ. ಅದೃಷ್ಟವಶತ್ ಈ ಘಟನೆಯಿಂದ ಯಾವುದೇ ಅಪಘಾತ ಸಂಭವಿಸಿಲ್ಲ. ಅಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 60-70 ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಎಲ್ಲರು ಅನಾಹುತದಿಂದ ಪಾರಾಗಿದ್ದಾರೆ. ಸದ್ಯ ಪ್ರಯಾಣಿಕರೆಲ್ಲರನ್ನು ಸುರಕ್ಷಿತವಾಗಿ ಚಕ್ರಪುರಕ್ಕೆ ಕರೆದೊಯ್ದು ಬಸ್ ಮೂಲಕ ಕಳುಹಿಸಲಾಯಿತು.

    ಈ ಕುರಿತಂತೆ ಈಶಾನ್ಯ ರೈಲ್ವೆ, ಈ ಘಟನೆಯು 2021ರ ಮಾರ್ಚ್17ರಂದು ಖತಿಮಾ-ತನಕ್ಪುರ ವಿಭಾಗದಲ್ಲಿ ಜಾನುವಾರುಗಳು ರೈಲಿನ ಮಧ್ಯೆ ಓಡಿಹೋದ್ದರಿಂದ ಘಟನೆ ಸಂಭವಿಸಿದ್ದು, ರೈಲನ್ನು ಖತಿಮಾದಲ್ಲಿ ನಿಲ್ಲಿಸಲಾಯಿತು. ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ತನಕ್ಪುರಕ್ಕೆ ಕಳುಹಿಕೊಡಲಾಗಿದ್ದು, ನಂತರ ಲೊಕೊ ಪೈಲಟ್ ಮತ್ತು ಸಿಬ್ಬಂದಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಘಟನೆ ವಿಚಾರವಾಗಿ ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ ಸಿಂಗ್, ಪ್ರಾಣಿಗಳ ಜೀವ ಉಳಿಸಲು ತಕ್ಷಣ ಬ್ರೇಕ್ ಹಾಕಿದಾಗ ಮುಂದಕ್ಕೆ ಚಲಿಸುತ್ತಿದ್ದ ರೈಲು ತಾಂತ್ರಿಕ ದೋಷದಿಂದ ವಿರುದ್ಧ ದಿಕ್ಕಿಗೆ ಚಲಿಸಿದೆ. ಹೀಗಾಗಿ ಚಕರ್‍ಪುರದಲ್ಲಿ ರೈಲನ್ನು ನಿಲ್ಲಿಸಲಾಯಿತು ಎಂದು ಹೇಳಿದ್ದಾರೆ.

    https://youtu.be/4x6T3wfhqzM

    ಇದು ಉತ್ತರಾಖಂಡದಲ್ಲಿ ಈ ವಾರ ಸಂಭವಿಸಿದ 2ನೇ ಘಟನೆಯಾಗಿದ್ದು, ಶನಿವಾರ ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಈ ವೇಳೆ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಗಳಾಗಲಿಲ್ಲ.

  • ಕಂಟೈನ್ಮೆಂಟ್‍ ವಲಯದಲ್ಲಿರುವ ಜಾನುವಾರುಗಳಿಗೆ ಮೇವು ವಿತರಿಸಿದ ಪೊಲೀಸರು

    ಕಂಟೈನ್ಮೆಂಟ್‍ ವಲಯದಲ್ಲಿರುವ ಜಾನುವಾರುಗಳಿಗೆ ಮೇವು ವಿತರಿಸಿದ ಪೊಲೀಸರು

    ಚಾಮರಾಜನಗರ: ಸೀಲ್‍ಡೌನ್ ಪ್ರದೇಶಲ್ಲಿನ ನಿವಾಸಿಯೊಬ್ಬರ ಜಾನುವಾರುಗಳಿಗೆ ಮೇವು ಇಲ್ಲ ಎಂಬ ಸುದ್ದಿ ತಿಳಿದ ಚಾಮರಾಜನಗರ ಜಿಲ್ಲಾ ಪೊಲೀಸರು ಮೇವು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

    ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಸಿದ್ದಪ್ಪ ಎಂಬುವವರು ಕಂಟೈನ್ಮೆಂಟ್ ಜೋನ್‍ನಲ್ಲಿರುವ ಕಾರಣ ಜಾನುವಾರುಗಳಿಗೆ ಮೇವು ಒದಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂಬಂಧ ಲೋಕೇಶ್‌ ಎಂಬುವವರು ಜಿಲ್ಲಾ ಪೊಲೀಸರಿಗೆ ವಿಚಾರ ತಿಳಿಸಿದ್ದರು. ವಿಚಾರ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂತೇಮರಳ್ಳಿಯ ಪೊಲೀಸರಿಗೆ ಮೇವು ತಲುಪಿಸುವಂತೆ ಸೂಚಿಸಿದ್ದರು.

    ಮೇಲಾಧಿಕಾರಿ ಸೂಚನೆಯ ಬೆನ್ನಲ್ಲೇ ಸಂತೇಮರಳ್ಳಿ ಠಾಣೆಯ ಪೊಲೀಸರು ಮಧ್ಯರಾತ್ರಿಯೆ ಕಂಟೈನ್ಮೆಂಟ್ ನಿವಾಸಿಯ ಜಾನುವಾರುಗಳಿಗೆ ಮೇವನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈಗ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂಕ ಪ್ರಾಣಿಗಳ ರೋಧನೆಗೆ ತಹಶೀಲ್ದಾರ್ ಸ್ಪಂದನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂಕ ಪ್ರಾಣಿಗಳ ರೋಧನೆಗೆ ತಹಶೀಲ್ದಾರ್ ಸ್ಪಂದನೆ

    – ಹಾಲು ಖರೀದಿಸುವಂತೆ ಒಕ್ಕೂಟಕ್ಕೆ ಮನವಿ

    ನೆಲಮಂಗಲ: ಕೊರೊನಾ ಸೋಂಕಿತೆಯ ಸಾವಿನಿಂದ, ಆಕೆಯ ಸಂಪರ್ಕದಲ್ಲಿ ಇದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಅವರ ಜಾನುವಾರುಗಳು ಆಹಾರವಿಲ್ಲದೇ ಪರಾದಡುವಂತೆ ಆಗಿತ್ತು. ಈಗ ಈ ಜಾನುವಾರುಗಳ ನೆರವಿಗೆ ತಾಲೂಕಾಡಳಿತ ಬಂದಿದೆ.

    ಕೊರೊನಾ ಹಬ್ಬುವ ಭಯದಿಂದ ಯಾರೂ ಕ್ವಾರಂಟೈನ್ ಅದವರ ಮನೆಯ ಬಳಿ ಹೋಗಿಲ್ಲ. ಹೀಗಾಗಿ ಅವರ ದನ-ಕಾರುಗಳು ಹಾಗೂ ಮೇಕೆಗಳು ಆಹಾರವಿಲ್ಲದೇ ಮೂಕ ರೋಧನೆ ಅನುಭವಿಸುತ್ತಿದ್ದವು. ಈ ಬಗ್ಗೆ ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಗೆ ಈಗ ಸ್ಪಂದನೆ ಸಿಕ್ಕಿದ್ದು, ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಅವುಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದಾರೆ.

    ಜಾನುವಾರುಗಳ ನರವಿಗೆ ಬಂದ ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್, ತಮ್ಮ ಅಧಿಕಾರಿಗಳನ್ನು ಗ್ರಾಮಕ್ಕೆ ಕಳಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಬೆಂಗಳೂರು ಹಾಲು ಉತ್ಪಾದಕ ಒಕ್ಕೂಟದ ಜೊತೆಗೆ ಮಾತನಾಡಿ ಈ ಹಸುಗಳ ಹಾಲನ್ನು ಖರೀದಿ ಮಾಡುವಂತೆ ಮನವಿಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.

    ಕ್ವಾರಂಟೈನ್ ಆದ ಮನೆಯ ಜಾನುವಾರುಗಳನ್ನು ನೋಡುವವರಿಲ್ಲದೆ ಕಂಗೆಟ್ಟ ಮೂಕಪ್ರಾಣಿಗಳ ರೋಧನೆ ಮುಗಿಲುಮುಟ್ಟಿತ್ತು. ಪ್ರತಿದಿನ ಸುಮಾರು 60 ಲೀಟರ್ ಹಾಲು ನೀಡುತ್ತಿದ್ದ ಗೋವುಗಳ ಹಾಲು ವ್ಯರ್ಥವಾಗುತ್ತಿತ್ತು. ಕೊರೊನಾ ಬರುತ್ತೆ ಎಂದು ಗ್ರಾಮಸ್ಥರು ಅವರ ಮನೆಯ ಕಡೆ ಹೋಗುತ್ತಿಲ್ಲ. ಸ್ಥಳೀಯ ಹಾಲಿನ ಡೈರಿಯಲ್ಲಿ ಹಾಲನ್ನು ಖರೀದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಜೊತೆಗೆ ಊರಿನ ಗ್ರಾಮಸ್ಥರು ನೆರವಿಗೆ ಬರುವಂತೆ ತಾಲೂಕಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.

  • ಕೊರೊನಾ ಸೋಂಕಿತೆಯ ಸಂಪರ್ಕ, ಜನ ಕ್ವಾರಂಟೈನ್- ಜಾನುವಾರುಗಳ ಮೂಕ ರೋಧನೆ

    ಕೊರೊನಾ ಸೋಂಕಿತೆಯ ಸಂಪರ್ಕ, ಜನ ಕ್ವಾರಂಟೈನ್- ಜಾನುವಾರುಗಳ ಮೂಕ ರೋಧನೆ

    ನೆಲಮಂಗಲ: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಕೆಲ ಗ್ರಾಮಸ್ಥರು ಮತ್ತು ಸಂಬಂಧಿಕರನ್ನು ಸೇರಿ 12 ಜನರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಅಲ್ಲಿನ ಗ್ರಾಮದ ಜಾನುವಾರುಗಳು ಆಹಾರವಿಲ್ಲದೇ ಮೂಕ ರೋಧನೆ ಅನುಭವಿಸುತ್ತಿವೆ.

    ಕ್ವಾರಂಟೈನ್ ಆದ ಮನೆಯ ಜಾನುವಾರುಗಳನ್ನು ನೋಡುವವರಿಲ್ಲದೆ ಕಂಗೆಟ್ಟ ಮೂಕಪ್ರಾಣಿಗಳ ರೋಧನೆ ಮುಗಿಲುಮುಟ್ಟಿದೆ. ಪ್ರತಿದಿನ ಸುಮಾರು 60 ಲೀಟರ್ ಹಾಲು ನೀಡುತ್ತಿದ್ದ ಗೋವುಗಳ ಹಾಲು ವ್ಯರ್ಥವಾಗುತ್ತಿದೆ. ಕೊರೊನಾ ಬರುತ್ತೆ ಎಂದು ಗ್ರಾಮಸ್ಥರು ಅವರ ಮನೆಯ ಕಡೆ ಹೋಗುತ್ತಿಲ್ಲ. ಸ್ಥಳೀಯ ಹಾಲಿನ ಡೈರಿಯಲ್ಲಿ ಹಾಲನ್ನು ಖರೀದಿಸುತ್ತಿಲ್ಲ. ಜೊತೆಗೆ ಹಾಲನ್ನು ಪಡೆಯಲು ಸಹ ಹಾಲಿನ ಡೈರಿಯವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

    ಹೀಗಾಗಿ ಕೂಡಲೇ ತಾಲೂಕು ಆಡಳಿತ ಮೂಕ ಪ್ರಾಣಿಗಳ ನೆರವಿಗೆ ಬರುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಈ ಗ್ರಾಮದ ಸಮಸ್ಯೆ ಬಗ್ಗೆ ವಿಡಿಯೋ ಮಾಡಿದ ಅದೇ ಗ್ರಾಮದ ಭಾನುಪ್ರಕಾಶ್ ನೆಲಮಂಗಲ ತಾಲೂಕು ಆಡಳಿತಕ್ಕೆ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

  • ರೈತರ ಜಾನುವಾರುಗಳಿಗೆ ಮೇವು, 1 ಮೂಟೆ ಬೂಸ ವಿತರಿಸಿದ ಅಧ್ಯಕ್ಷ ಮಲ್ಲಯ್ಯ

    ರೈತರ ಜಾನುವಾರುಗಳಿಗೆ ಮೇವು, 1 ಮೂಟೆ ಬೂಸ ವಿತರಿಸಿದ ಅಧ್ಯಕ್ಷ ಮಲ್ಲಯ್ಯ

    – ಲಾಕ್‍ಡೌನ್ ವೇಳೆ ಜಾನುವಾರುಗಳ ನೋವಿಗೆ ಸ್ಪಂದಿನೆ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಆಗಿ ಒಂದು ತಿಂಗಳು ಕಳೆಯುತ್ತಿದ್ದು, ಸಾಕಷ್ಟು ಜನರು ಬಡ ಹಾಗೂ ಕೂಲಿ ಕಾರ್ಮಿಕರ ನೆರವಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಆದರೆ ಇಲ್ಲೊಬ್ಬ ವ್ಯಕ್ತಿ ರೈತನ ಜೀವನಾಧಾರವಾಗಿರುವ ಜಾನುವಾರುಗಳ ನೋವಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

    ನೆಲಮಂಗಲದ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಮಲ್ಲಯ್ಯ ಜಾನುವಾರುಗಳಿಗೆ ಮೇವು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ರೈಲ್ವೆ ಗೊಲ್ಲಹಳ್ಳಿ ಗ್ರಾಮದಲ್ಲಿ ಹೈನುಗಾರಿಕೆ ಆಧಾರಿತ ಕುಟುಂಬಗಳ ಕೃಷಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಹಸುಗಳಿಗೆ ಹಸಿ ಮೇವು ಮತ್ತು ಪ್ರತಿಯೊಬ್ಬರಿಗೂ 1 ಮೂಟೆ ಬೂಸವನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.

    ತೋಟದಲ್ಲಿ ಕೃಷಿಕ ಬೆಳೆದಿದ್ದ ಹಸಿರು ಮೇವನ್ನ ಖರೀದಿ ಮಾಡಿ, ರೈತರಿಂದಲೇ ಕಟಾವು ಮಾಡಿಸಿ ಹಳ್ಳಿಯ ಎಲ್ಲಾ ರೈತರಿಗೆ ಹಂಚಿದ್ದಾರೆ. ಅಲ್ಲದೇ ನಗರದಲ್ಲಿ ಜಾನುವಾರುಗಳ ಬೂಸವನ್ನ ಖರೀದಿ ಮಾಡಿ ಮಲ್ಲಯ್ಯ ರೈತರಿಗೆ ವಿತರಣೆ ಮಾಡಿ ಮಾನವೀಯತೆಯನ್ನ ಮೆರೆದಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಲ್ಲಯ್ಯ, ಸಾಕಷ್ಟು ಜನರು ಮಾನವೀಯತೆಯಿಂದ ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಊಟ, ದಿನಸಿಯನ್ನ ವಿತರಣೆ ಮಾಡುತ್ತಿದ್ದಾರೆ. ಆದರೆ ರೈತರ ಜಾನುವಾರುಗಳು ಸಹ ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಳಜಿಯಂತೆ ನಾವು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೊನಾ ಲಾಕ್‍ಡೌನ್ ವೇಳೆ ಮೇವು ನೀಡಿದ್ದೇವೆ ಎಂದರು.

    ನನ್ನ ಕುಟುಂಬ ಹಾಗೂ ಸ್ನೇಹಿತರು ಕೂಡ ಕೈಜೋಡಿಸಿ ಅವರ ಸಹಕಾರದಿಂದ ರೈತರಿಗೆ ಅನುಕೂಲ ಮಾಡಿದ್ದೇವೆ. ಲಾಕ್‍ಡೌನ್ ಮುಗಿಯುವವರೆಗೂ ಹಾಗೂ ಮುಂದೆ ಸಮಾಜ ಸೇವೆಯಲ್ಲಿ ತೊಡಗಿ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾನು ಮತ್ತೆ ನಮ್ಮ ಗೆಳೆಯರು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

  • ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ಹುಬ್ಬಳ್ಳಿ: ಇತ್ತೀಚೆಗಷ್ಟೇ ಸಂಭವಿಸಿದ ನೆರೆ ಪ್ರವಾಹದಿಂದ ರೈತರು ತತ್ತರಿಸಿದ್ದಾರೆ. ಆ ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರು ಲಂಚ ಕೇಳುತ್ತಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಂಚಬಾಕ ಪಶು ವೈದ್ಯ ಡಾ. ನಿಂಗಪ್ಪ ಮಾಯಾಗೋಳ್ ಕೈ ತುಂಬಾ ಸರ್ಕಾರಿ ಸಂಬಳ ಬರುತ್ತಿದ್ದರೂ ರೈತರು ಹಣ ಕೊಡದಿದ್ದರೆ ಜಾನುವಾರುಗಳಿಗೆ ಚಿಕಿತ್ಸೆಯನ್ನೇ ನೀಡುತ್ತಿಲ್ಲ. ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದರೆ ಇನ್ನೂರು ಮುನ್ನೂರರಿಂದ ಸಾವಿರ ಸಾವಿರ ರೂಪಾಯಿವರೆಗೂ ಲಂಚ ಕೊಡುವಂತೆ ಕೇಳುತ್ತಿದ್ದಾರೆ.

    ಇತ್ತೀಚೆಗಷ್ಟೇ ಸಂಭವಿಸಿದ ನೆರೆಪ್ರವಾಹದಿಂದ ತತ್ತರಿಸಿ ಹೋಗಿರುವ ರೈತರ ಗೋಳು ಒಂದೆಡೆಯಾದರೆ ಧನದಾಹಿ ಪಶು ವೈದ್ಯ ಡಾ. ನಿಂಗಪ್ಪ ವೈದ್ಯನ ಲಂಚದಾಹದಿಂದ ಕುಂದಗೋಳ ತಾಲೂಕಿನ ರೈತರು ಬೇಸತ್ತು ಹೋಗಿದ್ದಾರೆ. ಮಾನವೀಯತೆಯನ್ನೇ ಮರೆತ ಈ ಲಂಚಬಾಕ ವೈದ್ಯ ರಾಜಾರೋಷವಾಗಿ ರೈತರಿಂದ ಹಣ ತೆಗೆದುಕೊಳ್ಳುವ ಸಂಪೂರ್ಣ ವೀಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕೆಂದರೆ ಈ ಪಶು ವೈದ್ಯರಿಗೆ ಲಂಚ ನೀಡಲೇಬೇಕು.

    ಪ್ರತಿ ತಿಂಗಳು ಈ ಪಶು ವೈದ್ಯರಿಗೆ ಸರ್ಕಾರದಿಂದ ಸರಿಯಾಗಿ ಸಂಬಳ ಬರುತ್ತಿದ್ದರೂ ಪಶುಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಇಲ್ಲಿನ ರೈತರ ಜೀವವನ್ನೇ ಹಿಂಡುತ್ತಿದ್ದಾರೆ. ತಾಲೂಕಿನಾದ್ಯಂತ 60 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಜಾನುವಾರುಗಳನ್ನ ರೈತರು ಸಾಕಿದ್ದಾರೆ. ಆದರೆ ಆ ಜಾನುವಾರುಗಳಿಗೆ ಅನಾರೋಗ್ಯ ಎದುರಾದರೆ ಈ ವೈದ್ಯರು ಚಿಕಿತ್ಸೆ ನೀಡಬೇಕಾದರೆ ನೂರರಿಂದ ಸಾವಿರದವರೆಗೆ ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡಲು ಬರುತ್ತಾರೆ. ಹೀಗಾಗಿ ಈ ಭಾಗದ ರೈತರು ವೈದ್ಯರ ಈ ನಡೆಗೆ ಬೇಸತ್ತಿದ್ದು, ತಮ್ಮ ನೋವನ್ನು ಯಾರಿಗೂ ಹೇಳಿಕೊಳ್ಳದೆ ಒದ್ದಾಡುತ್ತಿದ್ದಾರೆ.