Tag: Liva Miss Diva -2020

  • ರೈತರೇ ದೇಶದ ಬೆನ್ನೆಲುಬು, ಅವರಿಗೆ ಬೆಂಗಾವಲಾಗಿ ನಿಲ್ಬೇಕು- ಸಂದರ್ಶನದಲ್ಲಿ ಆಡ್ಲಿನ್ ಮನದ ಮಾತು

    ರೈತರೇ ದೇಶದ ಬೆನ್ನೆಲುಬು, ಅವರಿಗೆ ಬೆಂಗಾವಲಾಗಿ ನಿಲ್ಬೇಕು- ಸಂದರ್ಶನದಲ್ಲಿ ಆಡ್ಲಿನ್ ಮನದ ಮಾತು

    – ಉಡುಪಿ ಗಡ್‍ಬಡ್, ಫಿಶ್ ಫ್ರೈ ಇಷ್ಟ

    ಉಡುಪಿ: ಲಿವಾ ಮಿಸ್ ದಿವಾ 2020 ಗೆದ್ದ ಆಡ್ಲಿನ್ ಕ್ಯಾಸ್ಟಲಿನೋ ಹುಟ್ಟೂರು ಉಡುಪಿಗೆ ಬಂದಿದ್ದಾರೆ. ಕುಟುಂಬದ ಜೊತೆ ಬ್ಯೂಟಿ ಕಂಟೆಸ್ಟ್ ಗೆದ್ದ ಖುಷಿ ಹಂಚಿಕೊಂಡಿದ್ದು, ಪಬ್ಲಿಕ್ ಟಿವಿ ಜೊತೆ ಆಡ್ಲಿನ್ ಮಾತನಾಡಿದ್ದಾರೆ.

    ಬ್ಯೂಟಿ ಕಂಟೆಸ್ಟ್‌ನಲ್ಲಿ ಆಡ್ಲಿನ್ ಕಲಿತ ಪಾಠ ಏನು?
    ಬ್ಯೂಟಿ ಕಂಟೆಸ್ಟ್‌ನಲ್ಲಿ ನಾನು ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ. ಪ್ರತಿ ಹಂತದ ಸೋಲು ಮತ್ತು ಗೆಲುವುಗಳ ಎರಡೆರಡು ಪಾಠಗಳನ್ನು ಕಲಿಸುತ್ತದೆ. ನಾನು ಏನು ಎನ್ನುವುದನ್ನು ತೆರೆದುಕೊಳ್ಳಲು ಈ ಬ್ಯೂಟಿ ಕಂಟೆಸ್ಟೆಂಟ್ ಸಹಕಾರ ಆಯಿತು.

    ಶಿಕ್ಷಣ ಮತ್ತು ಲೈಫ್ ಸ್ಟೋರಿ ಹೇಳ್ತಿರಾ ಆಡ್ಲಿನ್..
    ಕುವೈಟ್‍ನ ಇಂಡಿಯನ್ ಸೆಂಟ್ರಲ್ ಸ್ಕೂಲ್‍ನಲ್ಲಿ ನನ್ನ ಶಿಕ್ಷಣ ಆರಂಭವಾಯಿತು. ಪಿಯುಸಿ ಶಿಕ್ಷಣಕ್ಕೆ ಸೈಂಟ್ ಕ್ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆಯ್ಕೆ ಮಾಡಿದೆ. ಹಾಗಾಗಿ ಭಾರತಕ್ಕೆ ಬಂದೆ. ವಿಜ್ಞಾನ ವಿಷಯದಲ್ಲಿ ಬೆಸೆಂಟ್ ಕಾಲೇಜಿನಲ್ಲಿ ನಾನು ಪದವಿಯನ್ನು ಮುಗಿಸಿದ್ದೇನೆ.

    ಕುವೈಟ್ ಸೇರಿದ್ಮೇಲೆ ಇಂಡಿಯಾ ಜೊತೆ ಹೇಗೆ ಸಂಪರ್ಕ ಇಟ್ಕೊಂಡ್ರಿ?
    ನಾನು ಕುವೈಟ್‍ನಲ್ಲಿ ಇದ್ದಾಗ ರಜೆಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೆ. ಉಡುಪಿಯಂತಹ ಸುಂದರ ನಗರವನ್ನು ನಾನು ನನ್ನ ಜೀವನದಲ್ಲಿ ಎಲ್ಲೂ ಕಂಡಿಲ್ಲ. ನನ್ನೂರಿಗೆ ಬಂದಾಗ ಸಂಬಂಧಿಕರು, ಆಪ್ತರು ಪರಿಚಯ ಇಲ್ಲದವರು ಕೂಡ ನನ್ನನ್ನು ಬರಮಾಡಿಕೊಂಡಿದ್ದಾರೆ. ಇಷ್ಟು ದೊಡ್ಡ ಸ್ವಾಗತ ಸಿಗುತ್ತದೆ ಎಂದು ನಾನು ಅಂದುಕೊಂಡಿಲ್ಲ.

    ದೇಶ ಬಿಟ್ಟರೂ ಭಾಷೆ, ಸಂಸ್ಕೃತಿ ಬಿಟ್ಟಿಲ್ವಂತೆ.. ಹೌದಾ ಆಡ್ಲಿನ್?
    ದೇವರ ಪೂಜೆ ಮತ್ತು ಆರಾಧನೆ ಭಾರತೀಯ ಸಂಸ್ಕೃತಿ. ಏನೇ ಒಳ್ಳೆಯ ಕಾರ್ಯಗಳನ್ನು ಮಾಡುವ ಮುನ್ನ ನಾವು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇಲ್ಲಿ ಬಂದು ಪೂಜೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ನನ್ನ ಈ ಸಾಧನೆಗೆ ನನ್ನ ಕುಟುಂಬದವರ ಪ್ರಾರ್ಥನೆ ಮತ್ತು ಭಗವಂತನ ಆಶೀರ್ವಾದ ಎಂಬುದರಲ್ಲಿ ಎರಡು ಮಾತಿಲ್ಲ . ಪೂಜೆ ಪ್ರಾರ್ಥನೆ ಎಲ್ಲವೂ ಕೊಂಕಣಿ ಭಾಷೆಯಲ್ಲೇ ಎಂಬುದು ಖುಷಿ.

    ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿರೋದು ಸ್ಪರ್ಧೆಯ ಗಿಮಿಕ್ ಅಲ್ಲ ತಾನೆ?
    ಗಿಮಿಕ್ ಮಾಡಿ ಗೆದ್ದು ನನಗೇನು ಆಗಬೇಕಾಗಿಲ್ಲ. ರೈತರೇ ಈ ದೇಶದ ಬೆನ್ನೆಲುಬು. ಅವರಿಗೆ ನಾವೆಲ್ಲಾ ಬೆಂಗಾವಲಾಗಿ ನಿಲ್ಲುವ ಅವಶ್ಯಕತೆ ಇದೆ. ನನ್ನ ಈ ಪ್ಲಾಟ್ ಫಾರ್ಮನ್ನು ಇದೇ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತೇನೆ. ರೈತ ಮಹಿಳೆಯರಿಗೆ ಎಲ್ಲರೂ ಆದ್ಯತೆ ಮತ್ತು ಪ್ರೋತ್ಸಾಹವನ್ನು ಕೊಡಬೇಕು. ರೈತ ಮಹಿಳೆಯರ ಸಬಲೀಕರಣದಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯ.

    ಮಿಸ್ ಯುನಿವರ್ಸ್ ಗೆಲ್ಲುವ ಕನಸಿದ್ಯಾ? ಫಿಲಂ ಫೀಲ್ಡಿಗೆ ಎಂಟ್ರಿಯಾ?
    ದೇಶದ ನೂರಾ ಮೂವತ್ತು ಕೋಟಿ ಜನರು ಮಿಸ್ ಯೂನಿವರ್ಸ್ ಕಿರೀಟವನ್ನು ಭಾರತ ಗೆಲ್ಲಬೇಕೆಂಬ ಹಂಬಲದಲ್ಲಿದ್ದಾರೆ. ಇಪ್ಪತ್ತು ವರ್ಷದ ಹಿಂದೆ ಲಾರಾ ದತ್ತ ಮೇಡಂ ಅವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಶೇಕಡ ನೂರಕ್ಕೆ ಇನ್ನೂರರಷ್ಟು ನನ್ನನ್ನು ನಾನು ಕೊಟ್ಟುಕೊಳ್ಳುತ್ತೇನೆ. ಛಲ ಮತ್ತು ಆತ್ಮ ವಿಶ್ವಾಸ ನನ್ನ ಒಳಗೆ ಇದೆ. ಕರಾವಳಿ ಭಾಗದಿಂದ ಸಾಕಷ್ಟು ಮಂದಿ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರುಗಳು ಈ ಭಾಗದಿಂದ ಕೇಳಿ ಬರುತ್ತವೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಇವರೆಲ್ಲ ನನ್ನ ರೋಲ್ ಮಾಡೆಲ್‍ಗಳು .

    ಉಡುಪಿ ಅಂತ ಹೇಳಿದ ಕೂಡಲೇ ಏನು ನೆನಪಾಗುತ್ತೆ?
    ಉಡುಪಿ ಅಂದ ಕೂಡ್ಲೆ ನನ್ನ ಮತ್ತು ನನ್ನ ದೊಡ್ಡಪ್ಪನ ಮನೆ ನೆನಪಾಗುತ್ತದೆ. ಉಡುಪಿಗೆ ಬಂದಾಗಲೆಲ್ಲ ಚರ್ಚ್‍ಗಳಿಗೆ ಭೇಟಿ ಕೊಡೋದು ನನ್ನ ಇಷ್ಟದ ವಿಷಯಗಳು. ಗಡ್ ಬಡ್ ಐಸ್ಕ್ರೀಂ ನನಗೆ ಇಷ್ಟ. ಉಡುಪಿಗೆ ಬಂದಾಗ ನಾನು ಗಡ್ ಬಡ್ ತಿನ್ನೋದನ್ನು ಯಾವತ್ತೂ ಮರೆತಿಲ್ಲ. ನನ್ನ ದೊಡ್ಡಮ್ಮ ಅಂದರೆ ಅಮ್ಮನ ಅಕ್ಕ ಮಾಡುವ ಮೀನು ಗಸಿ ಅಂದರೆ ನನಗೆ ಬಹಳ ಇಷ್ಟ. ನಾನು ಕುವೈಟ್ ನಲ್ಲಿದ್ದಾಗ ಮೇನ್ ಸಿಕ್ಕರೂ ನಾನು ಮೀನು ತಿಂತಾ ಇರಲಿಲ್ಲ. ಆದರೆ ದೊಡ್ಡಮ್ಮ ಮಾಡಿದ ಮೀನಿನ ಖಾದ್ಯಗಳನ್ನು ನಾನು ಬಿಡೋದೇ ಇಲ್ಲ.

    ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಬೇಕು
    ನೀವು ಮೊದಲು ನಿಮ್ಮ ಮೇಲೆ ನಂಬಿಕೆ ಇಡಿ. ಆತ್ಮವಿಶ್ವಾಸ ಇಡಿ. ನೀವು ಏನು ಸಾಧನೆ ಮಾಡಬೇಕು ಅನ್ನೋದನ್ನು ನಿಮ್ಮ ತಂದೆ ತಾಯಿ ನಿಮ್ಮ ಆಪ್ತರು ನಿರ್ಧರಿಸುವುದಲ್ಲ. ನಿಮ್ಮ ಒಳಗೆ ನಿಮಗೆ ಏನು ಅನ್ನಿಸುತ್ತದೆ ಅದನ್ನು ಬೆನ್ನತ್ತಿ ಹೋಗಿ. ಹಾರ್ಡ್ ವರ್ಕ್ ಇಲ್ಲದೆ ಏನು ಮಾಡಲು ಸಾಧ್ಯ ಇಲ್ಲ.

    ನನಗೆ ಯಾರೂ ಫ್ಯಾನ್ಸ್ ಇಲ್ಲ. ನನ್ನನ್ನು ಇಷ್ಟಪಡುವವರು ಎಲ್ಲರೂ ನನ್ನ ಫ್ಯಾಮಿಲಿ. ಬ್ಯೂಟಿ ಕಾಂಟೆಸ್ಟ್ ಸಂದರ್ಭದಲ್ಲಿ ಪ್ರೀತಿ ಮತ್ತು ಪ್ರೋತ್ಸಾಹ ಕೊಟ್ಟಿದ್ದೀರಿ. ಕೇವಲ ಭಾರತ ಅಲ್ಲ ಶ್ರೀಲಂಕಾ, ಕೊಲಂಬಿಯಾ, ಫಿಲಿಫೈನ್ಸ್ ದೇಶಗಳಿಂದಲೂ ನನಗೆ ಸಪೋರ್ಟ್ ಸಿಕ್ಕಿದೆ. ದೂರದ ಕೆನಡಾ ದೇಶದವರು ಕೂಡ ನನ್ನನ್ನು ಬೆಂಬಲಿಸಿದ್ದಾರೆ.

    ದೀಪಕ್ ಜೈನ್

  • ನನ್ನೂರಿನ ಕೋಮು ಸಾಮರಸ್ಯ ವಿಶ್ವಕ್ಕೆ ಮಾದರಿ: ಆಡ್ಲಿನ್ ಕ್ಯಾಸ್ಟಲಿನೋ

    ನನ್ನೂರಿನ ಕೋಮು ಸಾಮರಸ್ಯ ವಿಶ್ವಕ್ಕೆ ಮಾದರಿ: ಆಡ್ಲಿನ್ ಕ್ಯಾಸ್ಟಲಿನೋ

    ಉಡುಪಿ: ಲಿವಾ ಮಿಸ್ ದಿವಾ 2020 ವಿನ್ನರ್ ಆಡ್ಲಿನ್ ಕ್ಯಾಸ್ಟಲಿನೋ ಅವರನ್ನು ಉಡುಪಿಯ ಉದ್ಯಾವರ ಚರ್ಚ್ ನಲ್ಲಿ ಸನ್ಮಾನ ಮಾಡಲಾಗಿದೆ. ಸನ್ಮಾನ ಸ್ವೀಕರಿಸಿದ ಆಡ್ಲಿನ್ ಕೋಮು ಸಾಮರಸ್ಯದ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಕ್ಯಾಸ್ಟಲಿನೋ ಮನೆ ವ್ಯಾಪ್ತಿಯ ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಗೆ ಅವರನ್ನು ಬರಮಾಡಿಕೊಳ್ಳಲಾಯಿತು. ಚರ್ಚಿನ ಆಡಳಿತ ಮಂಡಳಿ, ಐಸಿವೈಎಂ ಸಂಘಟನೆ ಮತ್ತು ಸ್ಥಳೀಯರಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಆಡ್ಲಿನ್‍ಗೆ ವಜ್ರ ಕಿರೀಟವನ್ನು ಮತ್ತೆ ತೊಡಿಸಿ ಸನ್ಮಾನ ಮಾಡಲಾಯಿತು. ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉದ್ಯಾವರ ಚರ್ಚ್ ಧರ್ಮಗುರುಗಳು ಸ್ಥಳೀಯ ಸಂಸ್ಥೆಗಳ ಮುಖಂಡರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ಬಳಿಕ ಮಾತನಾಡಿದ ಆಡ್ಲಿನ್, ಹುಟ್ಟೂರಿನಲ್ಲಿ ಅದರಲ್ಲೂ ಚರ್ಚ್ ನಲ್ಲಿ ನನಗೆ ಸಿಗುತ್ತಿರುವ ಮೊದಲ ಸನ್ಮಾನ ಸ್ವೀಕರಿಸಿ ಮನಸ್ಸಿಗೆ ಬಹಳ ಖುಷಿಯಾಗಿದೆ. ಕೋಮು ಸಾಮರಸ್ಯದ ಕುರಿತು ನಾನು ವೇದಿಕೆಯಲ್ಲಿ ಮಾತನಾಡಿದಾಗ ಎಲ್ಲರೂ ನನ್ನನ್ನು ಅಭಿನಂದಿಸಿದರು. ನಿಜವಾಗಿ ಕೋಮು ಸಾಮರಸ್ಯದ ಬಗ್ಗೆ ನನಗೆ ಮಾತನಾಡಲು ಪ್ರೇರಣೆ ಸಿಕ್ಕಿದ್ದು ನನ್ನ ಹುಟ್ಟೂರು ಉಡುಪಿಯಿಂದ ಎಂಬುದು ನನಗೆ ಬಹಳ ಹೆಮ್ಮೆ. ಅದೇ ಕೋಮು ಸಾಮರಸ್ಯ ಇಂದಿನ ವೇದಿಕೆಯಲ್ಲಿ ಕೂಡ ನಾನು ಕಾಣುತ್ತಿದ್ದೇನೆ ಎಂದರು.

    ವಿಶ್ವಸುಂದರಿ ವೇದಿಕೆಯಲ್ಲಿ ನಾನು ನಿಂತಾಗ ನನ್ನ ಊರು, ನನ್ನ ರಾಜ್ಯ, ನನ್ನ ದೇಶವನ್ನು ನನ್ನ ಮನಸ್ಸಿಗೆ ನಾನು ತಂದುಕೊಳ್ಳುತ್ತೇನೆ. ನನ್ನ ಊರು ಉದ್ಯಾವರದ ಪ್ರೀತಿ ಆತ್ಮವಿಶ್ವಾಸ ಮತ್ತು ಆಶೀರ್ವಾದವನ್ನು ಕುವೈಟ್ ಗೆ ಕೊಂಡೊಯ್ಯಲಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉನ್ನತ ಸ್ಥಾನದಲ್ಲಿದೆ. ಕಳೆದ ಬಾರಿಯ ಫಲಿತಾಂಶದಲ್ಲಿ ಕೂಡ ಉಡುಪಿ ನಂಬರ್ ಒನ್ ಸ್ಥಾನದಲ್ಲಿತ್ತು. ಕರಾವಳಿ ಭಾಗದಿಂದ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಗೂ ಅನೇಕ ಕಲಾವಿದರನ್ನು ಕಳುಹಿಸಿಕೊಡಲಾಗಿದೆ. ನಮ್ಮ ಊರಿನವರಾದ ಆಡ್ಲಿನ್ ನಮ್ಮ ಕ್ಷೇತ್ರದವರು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.

  • ಮಿಸ್ ಯೂನಿವರ್ಸ್‍ಗೆ ಆಯ್ಕೆ – ಹುಟ್ಟೂರು ಉಡುಪಿಯಲ್ಲಿ ಆಡ್ಲಿನ್‍ಗೆ ಅದ್ಧೂರಿ ಸ್ವಾಗತ

    ಮಿಸ್ ಯೂನಿವರ್ಸ್‍ಗೆ ಆಯ್ಕೆ – ಹುಟ್ಟೂರು ಉಡುಪಿಯಲ್ಲಿ ಆಡ್ಲಿನ್‍ಗೆ ಅದ್ಧೂರಿ ಸ್ವಾಗತ

    ಉಡುಪಿ: ಲಿವಾ ಮಿಸ್ ದಿವಾ-2020 ಗೆದ್ದ ಉಡುಪಿ ಮೂಲದ ಆಡ್ಲಿನ್ ಕ್ಯಾಸ್ಟಲಿನೋ ತನ್ನ ಹುಟ್ಟೂರು ಉಡುಪಿಗೆ ಆಗಮಿಸಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿರುವ ಆಡ್ಲಿನ್‍ಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

    ಉಡುಪಿಯ ಉದ್ಯಾವರ ಕೊರಂಗ್ರಪಾಡಿಯ ಮನೆಗೆ ಆಗಮಿಸಿದ ಆಡ್ಲಿನ್, ಕುಟುಂಬಸ್ಥರ ಜೊತೆ ಸಂತೋಷದಿಂದ ಬೆರೆತರು. ಸಂಬಂಧಿಕರ ಜೊತೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ದೊಡ್ಡಪ್ಪನ ಮನೆಯಲ್ಲಿ ಅಯ್ದ ಕುಟುಂಬಿಕರಿಂದ ವಿಶೇಷ ಪ್ರಾರ್ಥನೆ ನಡೆಯಿತು. ಗೆಲುವಿಗೆ ಏಸುವಿನ ಆಶೀರ್ವಾದವೇ ಕಾರಣ ಎಂದು ಪ್ರಾರ್ಥನೆ ವೇಳೆ ಆಡ್ಲಿನ್ ಕುಟುಂಬದ ಹಿರಿಯರು ತಿಳಿಸಿದರು.

    ಆಡ್ಲಿನ್ ಕ್ಯಾಸ್ಟಲಿನೊ ಕುವೈಟ್‍ನಲ್ಲಿ ಹುಟ್ಟಿ ಬೆಳೆದಿದ್ದರೂ ಕೊಂಕಣಿ ಭಾಷೆಯ ಮೂಲಕವೇ ದೇವರ ಪೂಜೆ, ಪ್ರಾರ್ಥನೆ ಮಾಡುತ್ತಾರೆ. ಮನೆಯಲ್ಲಿ ಬೈಬಲ್‍ನ ಚರಣಗಳನ್ನು ಪಠಣ ಮಾಡಿದರು. ಸುಮಾರು 10 ನಿಮಿಷ ಏಸು ಮತ್ತು ಮೇರಿಯ ವಿಶೇಷ ಪ್ರಾರ್ಥನೆ ನೆರವೇರಿತು.

    ನೆರೆಕರೆಯ ಹಿಂದೂಗಳು ಆಗಮಿಸಿ ಆಡ್ಲಿನ್ ಕ್ಯಾಸ್ಟಲಿನೋ ಅವರಿಗೆ ಆರತಿ ಎತ್ತಿ, ದೃಷ್ಟಿ ತೆಗೆದರು. ಉಡುಪಿಯ ಶಂಕರಪುರ ಮಲ್ಲಿಗೆ ಹೂವು ಕೊಟ್ಟು ಆಶೀರ್ವಾದ ಮಾಡಿದರು. ಉದ್ಯಾವರ ಚರ್ಚ್ ವ್ಯಾಪ್ತಿಯ ಐಸಿವೈಎಂ ಸಂಘಟನೆಯವರು ಆಡ್ಲಿನ್ ಕ್ಯಾಸ್ಟಲಿನೋ ಅವರನ್ನು ತೆರೆದ ಜೀಪ್‍ನಲ್ಲಿ ಮೆರವಣಿಗೆ ಮಾಡಿದರು. ಸುಮಾರು ಮೂರು ಕಿ.ಮೀ. ಮೆರವಣಿಗೆ ಉದ್ದಕ್ಕೂ ಆಡ್ಲಿನ್ ಪರಿಚಯಸ್ಥರು ಹಾಗೂ ಸಂಬಂಧಿಕರತ್ತ ಕೈ ಬೀಸಿದರು.

    ಕಂಬಳದ ಕೋಣ, ಕರಾವಳಿ ಚೆಂಡೆ, ರಂಗಿನ ಕೊಡೆ ಹಿಡಿದು ಚರ್ಚ್ ವರೆಗೆ ಮೆರವಣಿಗೆ ಮಾಡಲಾಯಿತು. ನೂರಾರು ವಾಹನಗಳು, ಆಪ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಉದ್ಯಾವರ ನಗರದಾದ್ಯಂತ ಆಡ್ಲಿನ್ ಕ್ಯಾಸ್ಟಲಿನೋ ಅವರ ಕಟೌಟ್ ಗಳು ರಾರಾಜಿಸುತ್ತಿದ್ದವು.

    ಲಿವಾ ಮಿಸ್ ದಿವಾ 2020 ಎಂಟನೇ ಆವೃತ್ತಿ ಮುಂಬೈನ ಅಂಧೇರಿಯಲ್ಲಿ ನಡೆದಿತ್ತು. ಇದರಲ್ಲಿ ಜಯಗಳಿಸುವ ಮೂಲಕ ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಈ ಬಾರಿಯ ಮಿಸ್ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. 20 ಮಂದಿ ಹೆಸರಾಂತ ಮಾಡೆಲ್‍ಗಳು ಪಾಲ್ಗೊಂಡಿದ್ದ ಕಣದಲ್ಲಿ ಕಳೆದ ಬಾರಿಯ ಚಾಂಪಿಯನ್ ವರ್ತಿಕಾ ಸಿಂಗ್ ವಿಜಯಿಯೆಂದು ಘೋಷಣೆಯಾದ ಬಳಿಕ ಆಡ್ಲಿನ್‍ಗೆ ಕಿರೀಟ ತೊಡಿಸಿದರು. ವರ್ತಿಕಾ ಸಿಂಗ್ 2019ರ ಸಾಲಿನ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದರು.

    ಫೆ.22ರಂದು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಈ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬಾಲಿವುಡ್ ನಟರಾದ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ಡಿಸೈನರ್ ಗಳಾದ ಶಿವನ್ ಮತ್ತು ನರೇಶ್, ಮಿಸ್ ಸುಪ್ರಾ ನ್ಯಾಷನಲ್ 2014 ಆಶಾ ಭಟ್, ಮಿಸ್ ಯೂನಿವರ್ಸ್ ಶ್ರೀಲಂಕಾ 2006 ಜಾಕ್ವೇಲಿನ್ ಫೆರ್ನಾಂಡಿಸ್, ಡಿಸೈನರ್ ನಿಕಿಲ್ ಮೆಹ್ರಾ, ಗ್ಯಾವಿನ್ ಮಿಗೆಲ್ ತೀರ್ಪುಗಾರರ ತಂಡದಲ್ಲಿದ್ದರು.

    ನಟಿ ಮಲೈಕಾ ಅರೋರಾ ಫೈನಲ್ ಸ್ಪರ್ಧೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಆವಿತ್ರಿ ಚೌಧರಿ ಮಿಸ್ ದಿವಾ 2020 ಆಗಿ ಆಯ್ಕೆಯಾಗಿದ್ದು, ಮಿಸ್ ಸುಪ್ರನ್ಯಾಷನಲ್ 2020 ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. 2019ರಲ್ಲಿ ಶೆಫಾಲಿ ಸೂದ್ ಸುಪ್ರನ್ಯಾಷನಲ್ ಇಂಡಿಯಾ ಆಗಿ ಮೂಡಿ ಬಂದಿದ್ದರು. ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಸೇರಿದಂತೆ ಕಳೆದೆರಡು ವರ್ಷದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಜಯ ಗಳಿಸಿದ್ದ ಮಾಡೆಲ್‍ಗಳು ಪರಸ್ಪರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯ ಸುತ್ತಿನಲ್ಲಿ ಆಡ್ಲಿನ್ ಅವರನ್ನು ವಿಜಯಿಯೆಂದು ಘೋಷಿಸಲಾಯಿತು. ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.