Tag: Lithium

  • ರಾಜಸ್ಥಾನದಲ್ಲಿ ಬೃಹತ್ ಲಿಥಿಯಂ ನಿಕ್ಷೇಪ ಪತ್ತೆ – ಇದಕ್ಕಿದೆ ಭಾರತದ 80% ಬೇಡಿಕೆ ಪೂರೈಸುವ ಸಾಮರ್ಥ್ಯ

    ರಾಜಸ್ಥಾನದಲ್ಲಿ ಬೃಹತ್ ಲಿಥಿಯಂ ನಿಕ್ಷೇಪ ಪತ್ತೆ – ಇದಕ್ಕಿದೆ ಭಾರತದ 80% ಬೇಡಿಕೆ ಪೂರೈಸುವ ಸಾಮರ್ಥ್ಯ

    ಜೈಪುರ: ಇತ್ತೀಚೆಗಷ್ಟೇ ಭಾರತದಲ್ಲಿ (India) ಮೊದಲ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಲಿಥಿಯಂ (Lithium) ನಿಕ್ಷೇಪ ಪತ್ತೆಯಾಗಿತ್ತು. ಇದೀಗ 3 ತಿಂಗಳ ಬಳಿಕ ರಾಜಸ್ಥಾನದಲ್ಲಿ (Rajasthan) ಭಾರೀ ಪ್ರಮಾಣದ ಲಿಥಿಯಂ ಪತ್ತೆಯಾಗಿದ್ದು, ಇದಕ್ಕೆ ಭಾರತದ 80% ದಷ್ಟು ಬೇಡಿಯನ್ನು ಪೂರೈಸುವ ಸಾಮರ್ಥ್ಯವಿದೆ ಎನ್ನಲಾಗಿದೆ.

    ರಾಜಸ್ಥಾನದ ನಗೌರ್ ಜಿಲ್ಲೆಯ ದೇಗಾನಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಿಥಿಯಂನ ಗಣನೀಯ ಪ್ರಮಾಣದ ನಿಕ್ಷೇಪಗಳನ್ನು ಗುರುತಿಸಿರುವುದಾಗಿ ರಾಜಸ್ಥಾನದ ಸರ್ಕಾರಿ ಅಧಿಕಾರಿಗಳು ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ತಿಳಿಸಿದೆ.

    ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 59 ದಶಲಕ್ಷ ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಗಿತ್ತು. ಆದರೀಗ ರಾಜಸ್ಥಾನದಲ್ಲಿ ಪತ್ತೆಯಾಗಿರುವ ನಿಕ್ಷೇಪ ಅತ್ಯಂತ ದೊಡ್ಡ ಪ್ರಮಾಣದ್ದಾಗಿದ್ದು, ಇದು ದೇಶದಲ್ಲಿಯೇ ಬೇಡಿಕೆಯ ಹಾಗೂ ಅವಶ್ಯಕತೆಯ ಸುಮಾರು 80% ದಷ್ಟು ಪೂರೈಕೆ ಮಾಡಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲಿಥಿಯಂ ಹಗುರ ಹಾಗೂ ಮೃದುವಾದ ಲೋಹವಾಗಿದೆ. ಇದು ರಾಸಾಯನಿಯಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದನ್ನು ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

    ಪ್ರಸ್ತುತ ಭಾರತ ಲಿಥಿಯಂನಂತಹ ಖನಿಜಗಳಾದ ನಿಕಲ್, ಕೋಬಾಲ್ಟ್ಗಳ ಆಮದುಗಳ ಮೇಲೆ ಅವಲಂಬಿತವಾಗಿದೆ. ಈ ಪ್ರಮುಖ ಖನಿಜಗಳ ಪೂರೈಕೆಯನ್ನು ಭಾರತ ಬಲಪಡಿಸಲು ಪ್ರಯತ್ನಿಸುತ್ತಿದ್ದು, ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ವಿಸ್ತರಿಸುವ ಯೋಜನೆಯನ್ನು ಹೆಚ್ಚಿಸಲು ಮುಂದಾಗಿದೆ. ಇದನ್ನೂ ಓದಿ: ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ಸದ್ಯ ವಿಶ್ವದಲ್ಲಿ ಲಿಥಿಯಂ ಉತ್ಪಾದನೆ ಆಸ್ಟ್ರೇಲಿಯಾದಲ್ಲಿ 47% ಇದ್ದು, ಚಿಲಿಯಲ್ಲಿ 30% ಇದೆ. ಚೀನಾದಲ್ಲಿ 15% ಇದೆ. ಖನಿಜ ಸಂಸ್ಕರಣೆ ಚೀನಾದಲ್ಲಿ 56% ಮಾಡಲಾಗುತ್ತಿದ್ದು, ಚಿಲಿಯಲ್ಲಿ 29% ಹಾಗೂ ಅರ್ಜೆಂಟೀನಾದಲ್ಲಿ 10% ನಷ್ಟು ಮಾಡಲಾಗುತ್ತದೆ. ಇದನ್ನೂ ಓದಿ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಮೀನುಗಾರರ ರಕ್ಷಣೆ

  • ದೇಶದಲ್ಲೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ

    ದೇಶದಲ್ಲೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ

    ಶ್ರೀನಗರ: ದೇಶದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) 59 ದಶಲಕ್ಷ ಟನ್ ಲಿಥಿಯಮ್ (Lithium) ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಲಿಥಿಯಮ್ ಹಗುರವಾದ ಲೋಹವಾಗಿದ್ದು, ಇದನ್ನು ಇ.ವಿ (ವಿದ್ಯುತ್ ಚಾಲಿತ ವಾಹನ) ಬ್ಯಾಟರಿಗಳ (EV batteries) ತಯಾರಿಕೆಗೆ ಬಳಸಲಾಗುತ್ತದೆ. ಇದನ್ನೂ ಓದಿ: Turkey, Syria Earthquakeː ವರ್ಲ್ಡ್ ಬ್ಯಾಂಕ್‌ನಿಂದ 1.78 ಬಿಲಿಯನ್ ಡಾಲರ್ ನೆರವು ಘೋಷಣೆ

    ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ (GSI) ನಡೆಸಿದ ಸಂಶೋಧನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ 59 ಲಕ್ಷ ಟನ್‌ಗಳಷ್ಟು ಲಿಥಿಯಮ್ ನಿಕ್ಷೇಪವಿರುವುದು ಕಂಡುಬಂದಿದೆ. ಲಿಥಿಯಮ್ ಹಾಗೂ ಚಿನ್ನ ಸೇರಿದಂತೆ 51 ಖನಿಜ ಬ್ಲಾಕ್‌ಗಳನ್ನ ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗಣಿ ಸಚಿವಾಲಯ (Ministry Of Mines) ಗುರುವಾರ ತಿಳಿಸಿದೆ.

    ಪತ್ತೆಹಚ್ಚಲಾದ 51 ಖನಿಜ ಬ್ಲಾಕ್‌ಗಳಲ್ಲಿ 5 ಬ್ಲಾಕ್‌ಗಳು ಚಿನ್ನ (Gold), ಇತರ ಬ್ಲಾಕ್‌ಗಳು ಪೊಟ್ಯಾಶ್, ಮಾಲಿಬ್ಡಿನಮ್, ಮೂಲ ಲೋಹ ಸರಕುಗಳಿಗೆ ಸಂಬಂಧಿಸಿವೆ. ಇವು ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಆಂಧ್ರಪ್ರದೇಶ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಸೇರಿ 11 ರಾಜ್ಯಗಳಲ್ಲಿ ಹರಡಿಕೊಂಡಿವೆ ಎಂದು ಸಚಿವಾಲಯ ಹೇಳಿದೆ.

    ತಾಂತ್ರಿಕ ಕ್ಷೇತ್ರಕ್ಕೆ ನಿರ್ಣಾಯಕ ಖನಿಜ ಪೂರೈಕೆಯನ್ನು ಬಲಪಡಿಸಲು, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಲಿಥಿಯಮ್ ಸೇರಿದಂತೆ ಖನಿಜಗಳನ್ನು ಪಡೆಯಲು ಸರ್ಕಾರವು ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗಣಿ ಸಚಿವಾಲಯ ಹೇಳಿತ್ತು. ಈ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆಯಾಗಿರುವುದು ಆಶಾದಾಯಕ ಬೆಳವಣಿಗೆ ಎನಿಸಿದೆ.

    ಪ್ರಸ್ತುತ ಭಾರತವು ಲಿಥಿಯಮ್, ನಿಕ್ಕಲ್ ಮತ್ತು ಕೋಬಾಲ್ಟ್‌ನಂತಹ ಅನೇಕ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ. 7,897 ದಶಲಕ್ಷ ಟನ್‌ನಷ್ಟಿರುವ ಕಲ್ಲಿದ್ದಲು ಮತ್ತು ಲಿಗ್ನೈಟ್‌ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ವರದಿಗಳನ್ನ ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಫೆ. 21ರಿಂದ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ಯಾತ್ರೆಯ ಮೂರನೇ ಟ್ರಿಪ್‌

    ನವದೆಹಲಿಯಲ್ಲಿ ನಡೆದ 62ನೇ ಕೇಂದ್ರ ಭೂಗರ್ಭಶಾಸ್ತ್ರ ಪ್ರೋಗ್ರಾಮಿಂಗ್ ಬೋರ್ಡ್‌ನ ಸಭೆಯಲ್ಲಿ ಮಾತನಾಡಿದ ಗಣಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್, ಮೊಬೈಲ್ ಫೋನ್ ಆಗಿರಲಿ ಅಥವಾ ಸೋಲಾರ್ ಪ್ಯಾನಲ್ ಆಗಿರಲಿ ಎಲ್ಲದಕ್ಕೂ ಖನಿಜ ಬೇಕಾಗುತ್ತವೆ. ಸ್ವಾವಲಂಬಿಯಾಗಲು ದೇಶವು ನಿರ್ಣಾಯಕ ಖನಿಜಗಳನ್ನ ಕಂಡುಹಿಡಿಯುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ. ಚಿನ್ನದ ಆಮದು ಕಡಿಮೆಯಾದರೆ ನಾವು ಸ್ವಾವಲಂಬಿ ಆಗುತ್ತೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ಮಂಡ್ಯ: ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವ ಬೆನ್ನಲ್ಲೆ ಇದೀಗ ಮತ್ತೊಂದು ಅಮೂಲ್ಯವಾದ ಖನಿಜ ಸಂಪನ್ಮೂಲ ಇದೆ ಎಂದು ಹೇಳಲಾಗುತ್ತಿದೆ.

    ಸದ್ಯ ಕೆಲವು ದಿನಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಹಾಗೂ ಮರಳಗಾಲ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ವಾಹನ ತಯಾರಿಕೆಗೆ ಬೇಕಾದ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಅತ್ಯಮೂಲ್ಯವಾದ ಖನಿಜ ಸಂಪತ್ತಾದ ಚಿನ್ನದ ನಿಕ್ಷೇಪ ಇರುವುದು ಬೆಳಕಿಗೆ ಬಂದಿದೆ. ಅದೂ ಸಹ ಶ್ರೀರಂಗಪಟ್ಟಣ ತಾಲೂಕಿನಲ್ಲೇ ಇದೆ ಎನ್ನಲಾಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

    ಬ್ರಿಟಿಷ್ ಕಾಲದಲ್ಲೇ ಸಂಶೋಧನೆ:
    ಇಷ್ಟು ದಿನ ಜನರು ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಮಾತಾನಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಈ ಅರಣ್ಯ ಪ್ರದೇಶವನ್ನು ಬಂಗಾರದ ಗುಡ್ಡ ಅಂತಾನೇ ಕರೆಯುತ್ತಿದ್ದರು. ಇದೀಗ ಈ ಅರಣ್ಯ ಪ್ರದೇಶದಲ್ಲಿ ಮೂರು ಗುಹೆಗಳು ಪತ್ತೆಯಾಗಿವೆ. ಅವು ಕೂಡ ಬ್ರಿಟಿಷ್ ಕಾಲದಲ್ಲಿ ಕೊರೆಯಲಾಗಿರುವ ಗುಹೆಗಳಾಗಿದ್ದು, ಈ ಗುಹೆಗಳನ್ನು ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಲು ಕೊರೆಯಲಾಗಿದೆ ಎನ್ನಲಾಗುತ್ತಿದೆ. ಬ್ರಿಟಿಷ್ ವಿಜ್ಞಾನಿಗಳು 1882ರಿಂದ 1913ರವರೆಗೆ ಈ ಸ್ಥಳದಲ್ಲಿ ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಸಂಶೋಧನೆ ಬಗ್ಗೆ ಮಂಡ್ಯ ಗೆಜೆಟ್‍ನಲ್ಲೂ ಸಹ ಉಲ್ಲೇಖ ಆಗಿರುವುದು ಗಮನಾರ್ಹವಾಗಿದೆ.

    ಬಂಗಾರದ ಗುಡ್ಡ:
    ಇಂದಿಗೂ ಸಹ ಹುಂಜನಕೆರೆ ಅರಣ್ಯ ಪ್ರದೇಶವನ್ನು ಜನರು ಬಂಗಾರದ ಗುಡ್ಡ ಎಂದೇ ಕರೆಯುತ್ತಾರೆ. ಇಲ್ಲಿ ಚಿನ್ನಕ್ಕಾಗಿ ನಡೆದ ಸಂಶೋಧನೆಯಿಂದಾಗಿ ಜನರು ಅಂದಿನಿಂದ ಇಂದಿನವರೆಗೂ ಇಲ್ಲಿ ಅಪಾರ ಪ್ರಮಾಣದ ಚಿನ್ನ ಇದೆ ಎನ್ನುವ ಕಾರಣಕ್ಕೆ ಬಂಗಾರದ ಗುಡ್ಡ ಎನ್ನುತ್ತಾರೆ. ಈ ಪ್ರದೇಶದ ನಕಾಶೆಯಲ್ಲೂ ಸಹ ಬಂಗಾರದ ಗಣಿ ಎಂದೇ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಂದು ಬ್ರಿಟಿಷ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪಳೆಯುಳಿಕೆಗಳು ಇಂದಿಗೂ ಸಹ ಇರುವುದು ಅಚ್ಚರಿಯಾಗಿದೆ. ಸದ್ಯ ಇಲ್ಲಿರುವ ಮೂರು ಗುಹೆಗಳು ಮುಚ್ಚಿಕೊಂಡಿದ್ದು, ಗುಹೆಗಳ ಸ್ವಲ್ಪ ಭಾಗ ಮಾತ್ರ ಕಾಣಲು ಸಿಗುತ್ತಿದೆ.

    ಮಂಡ್ಯ ಇಷ್ಟು ದಿನ ಸಕ್ಕರೆ ನಗರಿ ಎಂದು ಕರೆಯಲ್ಪಡುತ್ತಿತ್ತು. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆ ಬೆನ್ನಲ್ಲೆ ಚಿನ್ನದ ನಿಕ್ಷೇಪದ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಈ ಚಿನ್ನದ ನಿಕ್ಷೇಪದ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ಇಲ್ಲಿ ಚಿನ್ನ ಇರುವುದು ನಿಜನಾ? ಇದ್ದರು ಸಹ ಎಷ್ಟು ಪ್ರಮಾಣದಲ್ಲಿ ಇದೆ? ಹಾಗೂ ದೇಶಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತೆ ಎನ್ನುವುದನ್ನ ಪತ್ತೆ ಮಾಡಬೇಕಿದೆ.

  • ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

    ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

    – ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ನಿಕ್ಷೇಪ
    – ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ವಿಜ್ಞಾನಿಯಿಂದ ಲೇಖನ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪೆಟ್ರೋಲ್, ಡಿಸೇಲ್ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಇದಕ್ಕಾಗಿಯೇ ಬಜೆಟ್‍ನಲ್ಲಿ ನೂರಾರು ಕೋಟಿಯನ್ನು ಮೀಸಲಿಟ್ಟಿದೆ. ಇಂತಹ ಸಂಧರ್ಭದಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಅತ್ಯಗತ್ಯವಾದ ಲೀಥಿಯಂ ಲೋಹ ಪತ್ತೆಯಾಗಿದ್ದು, ಭಾರೀ ಸಂಚಲನ ಉಂಟುಮಾಡಿದೆ.

    ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ತಯಾರಿಸಲು ಅತ್ಯವಶ್ಯಕವಾದ ಲೀಥಿಯಂ ಲೋಹ ಭಾರತದಲ್ಲೇ ಪತ್ತೆಯಾಗಿದೆ ಎಂದು ಬ್ಯಾಟರಿ ತಂತ್ರಜ್ಞಾನ ಸಂಶೋಧಕ, ಭಾರತೀಯ ವಿಜ್ಞಾನ ಕೇಂದ್ರದ ಗೌರವ ಪ್ರಾಧ್ಯಾಪಕರಾದ ಎನ್.ಮುನಿಚಂದ್ರಯ್ಯ ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಬಹಿರಂಗಪಡಿಸಿದ್ದಾರೆ.

    ‘ಕರೆಂಟ್ ಸೈನ್ಸ್’ ಲೇಖನದ ಪ್ರಕಾರ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ನಿಕ್ಷೇಪ ಪತ್ತೆಯಾಗಿದೆ. ಅಲ್ಲಾಪಟ್ಟಣ-ಮರಳಗಾಲ ಗ್ರಾಮಗಳು ಈ ಪ್ರದೇಶಕ್ಕೆ ಹೊಂದಿಕೊಂಡಿವೆ. ಇನ್ನೂ ಇಡೀ ದೇಶದಲ್ಲಿ ಸಿಗದ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆಯಾಗಿರುವುದು ಇದೀಗ ಬಾರಿ ಸಂಚಲನ ಮೂಡಿಸಿದೆ. 2017ನೇ ಸಾಲಿನಲ್ಲಿ 384 ದಶಲಕ್ಷ ಲೀಥಿಯಂ ಬ್ಯಾಟರಿಗಳನ್ನು ಇತರೆ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿತ್ತು. 2019ರಲ್ಲಿ ಅದರ ಪ್ರಮಾಣ 1.2 ಶತಕೋಟಿಗೆ ಏರಿಕೆಯಾಗಿತ್ತು. ಆದ್ರೆ ಇದೀಗ ಭಾರತದಲ್ಲೇ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದರಿಂದ ದೇಶದ ವಾಣಿಜ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ.

    ಪತ್ರಿಕೆ ವರದಿ ಪ್ರಕಾರ ಅಲ್ಲಾಪಟ್ಟಣ-ಮರಳಗಾಲ ವ್ಯಾಪ್ತಿಯಲ್ಲಿ 14,100 ಟನ್‍ಗಳಷ್ಟು ಲೀಥಿಯಂ ಸಿಗುವ ಸಾಧ್ಯತೆ ಇದೆ. ಆದರೆ ಚಿಲಿ, ಆಸ್ಟ್ರೇಲಿಯಾ, ಪೋರ್ಚುಗಲ್ ದೇಶಗಳಲ್ಲಿ ಸಿಗುವಂತೆ ಇಲ್ಲಿ ಸಿಗಲಾರದು ಎಂದು ಉಲ್ಲೇಖಿಸಲಾಗಿದೆ. ಚಿಲಿಯಲ್ಲಿ 8.6 ಮಿಲಿಯನ್ ಟನ್, ಆಸ್ಟ್ರೇಲಿಯಾದಲ್ಲಿ 2.8 ಮಿಲಿಯನ್ ಟನ್, ಅರ್ಜೆಂಟೀನಾದಲ್ಲಿ 1.7ಮಿಲಿಯನ್ ಟನ್, ಪೋರ್ಚುಗಲ್‍ನಲ್ಲಿ ವಾರ್ಷಿಕವಾಗಿ 60 ಸಾವಿರ ಟನ್‍ಗಳಷ್ಟು ಈ ಲೋಹ ಸಿಗುತ್ತದೆ. ಮಂಡ್ಯದಲ್ಲಿ ಪತ್ತೆಯಾಗಿರುವ ಪ್ರದೇಶದಲ್ಲಿ 14,100 ಟನ್‍ಗಳಷ್ಟೇ ಲೀಥಿಯಂ ಸಿಗುವ ಸಾಧ್ಯತೆಗಳಿದ್ದು, ಲೀಥಿಯಂ ಉತ್ಪಾದಿಸುವ ದೇಶಗಳಿಗೆ ಹೋಲಿಸಿದ್ರೆ ತೀರಾ ಕಡಿಮೆ ಎಂದು ಹೇಳಲಾಗಿದೆ.

    ಮರಳಗಾಲ-ಅಲ್ಲಾಪಟ್ಟಣ ವ್ಯಾಪ್ತಿಯಲ್ಲಿ ಕಳೆದೆರಡು ದಶಕಗಳಿಂದ ಭಾರತ ಸರ್ಕಾರದ ಅಣು ಖನಿಜ ಸಂಶೋಧನಾ ಘಟಕದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಆರಂಭದಲ್ಲಿ ಈ ಪ್ರದೇಶದಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಸುದ್ದಿಯಾಗಿತ್ತು. ಸಂಶೋಧನೆ ಮುಂದುವರಿದಂತೆ ಇಲ್ಲಿ ಕಾಗೆ ಬಂಗಾರ ಸಿಗಲಾರಂಭಿಸಿತ್ತಾದ್ರು, ಇದೀಗ ಲೀಥಿಯಂ ನಿಕ್ಷೇಪ ಪತ್ತೆಯಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಅಣು ಖನಿಜ ವಿಜ್ಞಾನಿಗಳನ್ನ ವಿಚಾರಿಸಿದಾಗ. ಲೀಥಿಯಂ ಪತ್ತೆಯಾಗಿರುವುದು ನಿಜ. ಲೋಹ ಪ್ರಮಾಣ ಕಡಿಮೆಯಿದ್ದು ಇಷ್ಟೇ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುವುದಿಲ್ಲ. ಇನ್ನಷ್ಟು ದಿನಗಳಕಾಲ ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎನ್ನುತ್ತಾರೆ.

    ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಪ್ರದೇಶದಲ್ಲಿ ಸರ್ಕಾರದಿಂದ ಬಂದ ರೈತರ ಜಮೀನುಗಳಿವೆ. ಮಾಲೀಕರ ಅನುಮತಿ ಪಡೆಯದೇ ಭೂಮಿಯನ್ನು ಅಗೆಯಲಾಗುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ. ಒಟ್ಟಾರೆ ಭಾರತದಲ್ಲೇ ಅಪರೂಪದ ಲೋಹ ಲೀಥಿಯಂ ಪತ್ತೆಯಾದ ವಿಚಾರ ವಿಜ್ಞಾನಿಗಳಿಗೆ ಸಂತಸ ತರಿಸಿದ್ದು. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದು ಖಚಿತ ಮಾಹಿತಿ ಹೊರಬೀಳಬೇಕಿದೆ.