Tag: liquor sales

  • ಡೋಂಟ್ ವರೀ, ಉಡುಪಿಯಲ್ಲಿ ಯಥೇಚ್ಛವಾಗಿ ಮದ್ಯ ಸ್ಟಾಕ್ ಇದೆ: ಅಬಕಾರಿ ಉಪ ಆಯುಕ್ತ ಅಭಯ

    ಡೋಂಟ್ ವರೀ, ಉಡುಪಿಯಲ್ಲಿ ಯಥೇಚ್ಛವಾಗಿ ಮದ್ಯ ಸ್ಟಾಕ್ ಇದೆ: ಅಬಕಾರಿ ಉಪ ಆಯುಕ್ತ ಅಭಯ

    ಉಡುಪಿ: ಜಿಲ್ಲೆಯಲ್ಲಿ ಯಥೇಚ್ಛ ಮದ್ಯ ಲಭ್ಯವಿದೆ. ಯಾರೂ ನೂಕುನುಗ್ಗಲು ಮಾಡಬೇಡಿ ಅಂತ ಉಡುಪಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಮದ್ಯ ಮಾರಾಟ ನಡೆಯಲಿದೆ. ಜಿಲ್ಲೆಯ 103 ವೈನ್ ಸ್ಟೋರ್ ಗಳಲ್ಲಿ ಮದ್ಯ ಲಭ್ಯವಿದೆ. ಈ ಪೈಕಿ 89 ವೈನ್ ಶಾಪ್ಸ್ , 14 ಎಂಎಸ್‍ಐಎಲ್ ಮಳಿಗೆಗಳಲ್ಲಿ ಮಾರಾಟ ನಡೆಯಲಿದೆ ಎಂದು ಹೇಳಿದರು.

    ಉಡುಪಿ ಜಿಲ್ಲೆಯಲ್ಲಿ ಯಥೇಚ್ಛ ಮದ್ಯ ಸ್ಟಾಕ್ ಇದೆ. ಯಾವುದೇ ಒತ್ತಡವಿಲ್ಲದೆ ಬಂದು ಮದ್ಯ ಖರಿದಿಸಿ. ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲ. ಖರೀದಿಸಿದ ಮದ್ಯವನ್ನು ಮನೆಗೆ ತೆಗೆದುಕೊಂಡು ಹೋಗಿ ಕುಡಿಯಬೇಕು. ಮದ್ಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಸಾಮಾಜಿಕ ಅಂತರ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಎಂದರು. ಮದ್ಯದಂಗಡಿಯ ಮುಂದೆ ನೂಕಾಟ -ತಳ್ಳಾಟ ಮಾಡಬೇಡಿ. ಸಮಾಜಿಕ ಅಂತರ ಕಾಪಾಡಿ ಎಂದರು.

    ಈ ನಡುವೆ ಬಹು ನಿರೀಕ್ಷಿತ ಮದ್ಯ ಮಾರಾಟ ನಾಳೆ ಆರಂಭವಾಗಲಿದೆ. ಉಡುಪಿಯಲ್ಲಿ ಕೊನೆಯ ಹಂತದ ತಯಾರಿ ನಡೆಯುತ್ತಿದೆ. ಪ್ರಮುಖ ವೈನ್ ಶಾಪ್ ಗಳಿಗೆ ಅಬಕಾರಿ ಅಧಿಕಾರಿಗಳು ಭೇಟಿ ಕೊಟ್ಟು ಸ್ಟಾಕ್ ಟ್ಯಾಲಿ ಮಾಡುತ್ತಿದ್ದಾರೆ. ನಾಳೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮದ ಬಗ್ಗೆ ತಾಕೀತು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಾಲ್ಕೇ ಗಂಟೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಇದೊಂದು ಪ್ರಾಯೋಗಿಕ ಆದೇಶವಾಗಿದ್ದು, ಜನ ಸ್ಪಂದನೆ ನೋಡಿ ಜಿಲ್ಲಾಡಳಿತ ಬದಲಾವಣೆಗಳನ್ನು ಮಾಡಬಹುದು ಎನ್ನಲಾಗಿದೆ.

  • ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು: ಶಾಸಕ ಎನ್.ಮಹೇಶ್

    ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು: ಶಾಸಕ ಎನ್.ಮಹೇಶ್

    ಚಾಮರಾಜನಗರ: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಈ ಮಧ್ಯೆ ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು. ಹಳ್ಳಿಗಳಿಗೆ ಒಂದು ಬಾರಿ ಭೇಟಿ ಕೊಟ್ಟು ನೋಡಿ, ಎಷ್ಟೋ ಜನ ಆರೋಗ್ಯ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಣ್ಣೆ ಹಾಕುವುದಿಲ್ಲ ಎಂದರೆ ಸತ್ತು ಹೋಗುತ್ತಾರೆ, ನರ ದೌರ್ಬಲ್ಯ ಬರುತ್ತೆ ಅಂತಾ ಹೇಳ್ತಿದೋರು ಕೂಡ ಆರಾಮವಾಗಿದ್ದಾರೆ. ಮದ್ಯ ಪ್ರಿಯರ ಆರೋಗ್ಯ ದೃಷ್ಟಿಯಿಂದ ಮದ್ಯ ಮಾರಾಟವನ್ನು ಎರಡು ತಿಂಗಳು ಮುಂದೆ ಹಾಕಿ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

    ಕಳ್ಳಭಟ್ಟಿ ದಂಧೆ ಹೆಚ್ಚಾಗಿದ್ದರೆ ಪೊಲೀಸರ ಮೂಲಕ ಬ್ರೇಕ್ ಹಾಕೋಣ. ಅದನ್ನು ಬಿಟ್ಟು ನೆಗಡಿ ಬಂತು ಎಂದು ಮೂಗು ಕತ್ತರಿಸಿಕೊಳ್ಳಲಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಮದ್ಯ ಮಾರಾಟಕ್ಕೆ ನಿಷೇಧವಿತ್ತು. ಎಣ್ಣೆ ಪ್ರಿಯರು, ರಾಜಕಾರಣಿಗಳು ಸಹ ಮದ್ಯದಂಗಡಿ ತೆರೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸೋಮವಾರದಿಂದ ಮದ್ಯ ಮಾರಾಟ ಕೂಡ ನಡೆಯಲಿದೆ. ಹೀಗಿರುವಾಗ ಶಾಸಕ ಎನ್ ಮಹೇಶ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  • ಮದ್ಯ ಮಾರಾಟದ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ

    ಮದ್ಯ ಮಾರಾಟದ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ

    -‘ತಬ್ಲಿಘಿಗಳು ಫ್ರಂಟ್ ಲೈನ್ ವಾರಿಯರ್ಸ್ ಅಲ್ಲ’

    ಚಿತ್ರದುರ್ಗ: ರಾಜ್ಯದಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಾಗಿದ್ದರೂ ಜನರ ಜೀವ ಉಳಿಸುವ ಉದ್ದೇಶದಿಂದ ಮದ್ಯ ಮಾರಾಟ ಆರಂಭಿಸಿಲ್ಲ. ಈ ವಿಚಾರದಲ್ಲಿ ಇಲ್ಲಿ ರಾಜಕಾರಣ ಸಲ್ಲದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಬಂದ್ ಬಳಿಕ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ದೆಹಲಿ ನಿಜಾಮುದ್ದೀನ್ ಸಭೆ ಬಳಿಕ ಮತ್ತೆ ಆತಂಕ ಸೃಷ್ಠಿ ಆಯಿತು. ಹೀಗಾಗಿ ತಬ್ಲಿಘಿ ಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಅಂತ ಕರೆಯಲ್ಲ. ಅಲ್ಲದೇ ಕೋವಿಡ್ ಹರಡದಂತೆ ಹಗಲಿರುಳು ಶ್ರಮಿಸುತ್ತಾ, ಅವರ ಕುಟುಂಬವನ್ನು ತೊರೆದು ಸೇವೆ ಮಾಡುತ್ತಿರುವ ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ನಿಜವಾದ ಫ್ರಂಟ್ ಲೈನ್ ವಾರಿಯರ್ಸ್ ಎಂದರು.

    ಇದೇ ವೇಳೆ ಮಂಡ್ಯದಲ್ಲಿ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿದ ಸಚಿವರು, ಕೊರೊನಾ ಜಾಗೃತಿಯಲ್ಲಿ ಮಾಧ್ಯಮಗಳ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ ಬರಲು ಪತ್ರಕರ್ತರು ಸಹ ಕಾರಣರಾಗಿದ್ದಾರೆಂದು ಶ್ಲಾಘಿಸಿದರು.

    ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಆಶಾ ಕಾರ್ಯಕರ್ತೆಯರು, ವೈದ್ಯರು ಹಾಗೂ ರಾಜಕಾರಣಿಗಳು ಕೂಡ ಪಕ್ಷಾತೀತವಾಗಿ ಕೊರೊನಾ ವಿರುದ್ಧದ ಸಮರಕ್ಕೆ ಸಿದ್ಧರಾಗಿದ್ದಾರೆ. ವೈದ್ಯರು, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ತಡೆಯಲು ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವಂತೆ ಕಾನೂನು ರೂಪಿಸಲಾಗಿದೆ ಎಂದರು.

  • 2 ಕೆಜಿ ರೇಷನ್ ಬೇಕಾದ್ರೆ ಕಡಿಮೆ ಕೊಡಿ, ಎಣ್ಣೆ ನಿಲ್ಲಿಸ್ಬೇಡಿ: ಕುಡುಕನ ಮನವಿ

    2 ಕೆಜಿ ರೇಷನ್ ಬೇಕಾದ್ರೆ ಕಡಿಮೆ ಕೊಡಿ, ಎಣ್ಣೆ ನಿಲ್ಲಿಸ್ಬೇಡಿ: ಕುಡುಕನ ಮನವಿ

    -ಎಣ್ಣೆಗೆ ಡಬಲ್ ಹಣ ನೀಡಿ ಬಡವರಾಗ್ತಿದ್ದೀವಿ
    -ಮುಖ್ಯಮಂತ್ರಿಗಳೇ ನಾವ್ ಬಡವರಾಗೋದನ್ನ ತಪ್ಪಿಸಿ

    ಯಾದಗಿರಿ: ಎರಡು ಕೆ.ಜಿ. ರೇಷನ್ ಬೇಕಾದ್ರೆ ಕಡಿಮೆ ಕೊಡಿ. ಆದ್ರೆ ಮದ್ಯ ಮಾರೋದನ್ನ ನಿಲ್ಲಿಸಬೇಡಿ ಎಂದು ಜಿಲ್ಲೆತ ಶಹಾಪುರ ತಾಲೂಕಿನ ಮೂಡಬೋಳ ಗ್ರಾಮದ ಕುಡುಕನೊಬ್ಬ ಸಿಎಂ ಬಳಿ ಮನವಿ ಮಾಡಿದ್ದಾನೆ.

    ಮಾನ್ಯ ಮುಖ್ಯಮಂತ್ರಿಗಳು ಲಾಕ್‍ಡೌನ್ ಘೋಷಿಸಿ ಒಳ್ಳೆಯದು ಮಾಡಿದ್ದೀರಿ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಮನೆಯಲ್ಲಿಯೇ ಉಳಿದುಕೊಂಡಿದ್ದೇವೆ. ಎರಡು ತಿಂಗಳ ಪಡಿತರವನ್ನು ನೀಡಿದ್ದೀರಿ. ಆದ್ರೆ ನೀವು ನಮ್ಮ ಕಷ್ಟವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮದ್ಯ ಮಾರಾಟ ಬಂದ್ ಆಗಿದ್ದರಿಂದ 100-200 ರೂ.ಗೆ ಸಿಗುವ ಬಾಟಲ್ ಗಳಿಗೆ 500 ರಿಂದ 600 ರೂ. ನೀಡಬೇಕಾಗಿದೆ. ಇಷ್ಟೊಂದು ಹಣ ನೀಡಿ ಮದ್ಯ ಖರೀದಿ ಮಾಡೋದರಿಂದ ಬಡವರಾಗುತ್ತಿದ್ದೇವೆ ಎಂದು ಕುಡುಕ ತನ್ನ ಅಳಲು ತೋಡಿಕೊಂಡಿದ್ದಾನೆ.

    ರಾತ್ರಿ-ಹಗಲು ಎನ್ನದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂಜೆ ವೇಳೆ ಒಂದು ಪೆಗ್ ಹಾಕಿದ್ರೆ ನಿದ್ದೆ ಬರುತ್ತೆ. ಎಣ್ಣೆ ಇಲ್ಲ ಅಂದ್ರೆ ನಮಗೆ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ನಾವು ಬಡವರಾಗೋದನ್ನ ತಪ್ಪಿಸಿ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ.

    ಸ್ಥಳೀಯ ಮಟ್ಟದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನ ಕಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿಯೂ ಆತ ಕಂಠಪೂರ್ತಿ ಕುಡಿದಿದ್ದಾನೆ. ಆತನಿಗೆ ಮದ್ಯ ಹೇಗೆ ಸಿಕ್ತು? ಶಹಪುರ ಪಟ್ಟಣದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗ್ತಿರೋದನ್ನ ಸಹ ಕುಡುಕ ಹೇಳಿದ್ದಾನೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

  • ಕೇಂದ್ರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ನಿರ್ಧಾರ: ಸಿಎಂ ಬಿಎಸ್‍ವೈ

    ಕೇಂದ್ರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ನಿರ್ಧಾರ: ಸಿಎಂ ಬಿಎಸ್‍ವೈ

    – ಪ್ರಧಾನಿ ಸೂಚನೆ ಬಳಿಕವಷ್ಟೇ ಲಾಕ್‍ಡೌನ್ ಸಡಿಲ
    – ಆನೆಕಲ್ಲು ಮಳೆಯಿಂದ ಆದ ಹಾನಿಗೆ ಪರಿಹಾರ
    – ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬಿಡಿಎ ಕಾರ್ನರ್ ಸೈಟ್ ಮಾರಾಟ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಬಳಿಕವಷ್ಟೇ ಲಾಕ್‍ಡೌನ್ ಸಡಿಲಗೊಳಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

    ಪ್ರಧಾನಿಗಳು ಸಲಹೆಗಳನ್ನು ನೀಡುತ್ತೇವೆ ಎಂದಿದ್ದಾರೆ. ಕೆಲ ರಾಜ್ಯಗಳಿಗೆ ಲಾಕ್‍ಡೌನ್ ಬಗ್ಗೆ ಅಲ್ಲಿನ ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸೂಚಿಸಿದ್ದಾರೆ ಎಂದು ಸಿಎಂ ತಿಳಿಸಿದರು. ಎಂಎಸ್‍ಐಎಲ್ ಮೂಲಕ ಮದ್ಯ ಮಾರಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾದಿಂದ ಮಾರ್ಗಸೂಚಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತೆ. ಕೇಂದ್ರ ಸರ್ಕಾರದಿಂದ ಇನ್ನು ಮಾರ್ಗಸೂಚಿ ಬಂದಿಲ್ಲ ಎಂದು ಹೇಳಿದರು.

    ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಬಿಡಿಎ ವ್ಯಾಪ್ತಿಯ ಕಾರ್ನರ್ ಸೈಟ್‍ಗಳ ಹರಾಜು ಹಾಕಲು ತೀರ್ಮಾನಿಸಿದ್ದೇವೆ. ಬಿಡಿಎ ಕಾರ್ನರ್ ಸೈಟ್ ಮಾರಾಟದಿಂದ 15 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಒಳ್ಳೆಯ ಬೆಲೆ ಬಂದ್ರೆ ಮಾತ್ರ ಮಾರಾಟ ಮಾಡುತ್ತೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

    ಅಲ್ಲದೇ ಮುಂದಿನ ವಾರದ ತನಕವೂ ಹಾಲು ವಿತರಣೆ ಮುಂದುವರಿಕೆ ಮಾಡಲಾಗುತ್ತದೆ. ಅನಧಿಕೃತ ಕಟ್ಟಡಗಳ ಬಗ್ಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸೂಚಿಸಲಾಗಿದೆ ಎಂದರು.

    ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಕಬ್ಬಿನ ಬಾಕಿ ಹಣ ಕೊಡಬೇಕು ಎಂದು ಸೂಚನೆ ಕೊಟ್ಟಿದ್ದೇವೆ. ಅಕಾಲಿಕ ಆನೆಕಲ್ಲು ಮಳೆಯಿಂದ ರಾಜ್ಯದ ಯಾವ ಯಾವ ಭಾಗದಲ್ಲಿ ಭತ್ತದ ಬೆಳೆಗೆ ಹಾನಿಯುಂಟಾಗಿದೆಯೋ ಅದಕ್ಕೆ ಆದಷ್ಟು ಬೇಗ ಪರಿಹಾರ ನೀಡುತ್ತೇವೆ. ಹಾಗೆಯೇ ಆನೆಕಲ್ಲು ಮಳೆಯಿಂದ ಹಾನಿಯಾದ ಬೇರೆ ಬೆಳೆಗಳಿಗೂ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದರು.

  • ನ್ಯೂ ಇಯರ್ ಪಾರ್ಟಿ ಕಿಕ್‍ಗೆ ಅಬಕಾರಿ ಇಲಾಖೆ ಕಿಲ ಕಿಲ

    ನ್ಯೂ ಇಯರ್ ಪಾರ್ಟಿ ಕಿಕ್‍ಗೆ ಅಬಕಾರಿ ಇಲಾಖೆ ಕಿಲ ಕಿಲ

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ಕಿಕ್ ಗೆ ಅಬಕಾರಿ ಇಲಾಖೆ ಫುಲ್ ಖುಷಿಯಾಗಿದೆ.

    ಕಳೆದ ಕೆಲವು ದಿನಗಳಿಂದ (ತಿಂಗಳಾಂತ್ಯ) ವ್ಯಾಪಾರ ಇಲ್ಲದೇ ಗೊಣಗುತ್ತಿದ್ದ ಮದ್ಯದ ಅಂಗಡಿಯವರು ಹೊಸ ವರ್ಷಕ್ಕೆ ಫುಲ್ ಕಿಲ ಕಿಲ ಆಗಿದ್ದಾರೆ. ಹೊಸ ವರ್ಷಕ್ಕೆ ನಾವಿದ್ದೇವೆ ಎಂದು ಕುಡುಕರು ಅಬಕಾರಿ ಇಲಾಖೆ ಸಖತ್ ಆದಾಯ ತಂದುಕೊಟ್ಟಿದ್ದಾರೆ. ಈ ಬಾರಿ ಹೊಸ ವರ್ಷದ ಪಾರ್ಟಿ ಮೂಡ್ ಅಬಕಾರಿ ಇಲಾಖೆಯ ಹಳೆ ದಾಖಲೆಗಳನ್ನು ಪೀಸ್ ಪೀಸ್ ಮಾಡಿದೆ. ಖಜಾನೆಯ ಚಿಂತೆಯಲ್ಲಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ರಾಜ್ಯಾದ್ಯಂತ ಈ ವರ್ಷ ಭರ್ತಿ ಶೇ.10ರಷ್ಟು ಮದ್ಯ ಮಾರಾಟ ಹೆಚ್ಚಳವಾದರೆ, ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಶೇ.15ರಷ್ಟು ಮಾರಾಟವಾಗಿದೆ. ಕಳೆದ ವರ್ಷ (2019) ಡಿಸೆಂಬರ್ 21 ರಿಂದ ಜನವರಿ 31 ರ ಮಧ್ಯರಾತ್ರಿಯವರೆಗೆ 481 ಕೋಟಿ ಆದಾಯ ಬಂದಿತ್ತು. ಈ ವರ್ಷ ಅಂದ್ರೆ ಹೊಸ ವರ್ಷಾಚರಣೆಗೆ ಬರೋಬ್ಬರಿ 597 ಕೋಟಿ ಆದಾಯ ಅಬಕಾರಿ ಖಜಾನೆಗೆ ಸೇರಿದೆ.

    ಕಳೆದ ವರ್ಷ ಶೇ.21.75 ಕೇಸಸ್ ಮದ್ಯ ಮರಾಟಾವಾದರೆ ಈ ವರ್ಷ ಶೇ.23.72 ಮದ್ಯ ಮಾರಾಟವಾಗಿದೆ. ವ್ಯಾಪಾರ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಅಬಕಾರಿ ಅಧಿಕಾರಿಗಳು ಈ ಬಾರಿ ಆದಾಯ ಹೆಚ್ಚಳ ನೋಡಿ ದಿಲ್ ಖುಷ್ ಆಗಿದ್ದಾರೆ.

  • ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ಬೆಂಗಳೂರು: ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಬೆಳಗ್ಗೆ 6 ಗಂಟೆಯಿAದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

    ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ. ನವೆಂಬರ್ 10 ರಂದು ಮುಸ್ಲಿಂ ರ ಹಬ್ಬ ಈದ್ ಮಿಲಾದ್ ಇರುವ ಕಾರಣ ಅಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆದೇಶದಲ್ಲಿ ಏನಿದೆ?
    ನ.10 ರಂದು ಬೆಂಗಳೂರು ನಗರಾದ್ಯಂತ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಪ್ರಯುಕ್ತ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ ಮೆರವಣಿಗಯಲ್ಲಿ ಸ್ಥಬ್ಧ ಚಿತ್ರಗಳು ಧ್ವನಿ ವರ್ಧಕಗಳನ್ನು ಉಪಯೋಗಿಸಿಕೊಂಡು, ಆಯುಧಗಳನ್ನು ಹಾಗೂ ಇನ್ನಿತರೆ ವಸ್ತುಗಳನ್ನು ಪ್ರದರ್ಶಿಸಿ ಕುಣಿಯುತ್ತಾ ರಸ್ತೆಗಳಲ್ಲಿ ವಾಹನಗಳಲ್ಲಿ ನಡಿಗೆಯಲ್ಲಿ ವೈಎಂಸಿಎ ಮೈದಾನ ಹಾಗೂ ನಗರದ ಇತರೆ ಮೈದಾನಗಳಲ್ಲಿ ನಡೆಯುವ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

    ಈ ಮೆರವಣಿಗೆಯಲ್ಲಿ ಹೆಚ್ಚಿನ ಜನರು ಭಾಗವಹಿಸಲಿದ್ದು, ಮೆರವಣಿಗೆ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕೃತ್ಯಗಳನ್ನೆಸಗಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವಿರುತ್ತದೆ. ಈದ್ ಮಿಲಾದ್ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಹಾಗೂ ಕಾನೂನು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮದ್ಯಪಾನ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಈ ನಿರ್ಧಾರ ಮಾಡಲಾಗಿದೆ ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಭಾರತೀಯದಂಡ ಪ್ರಕ್ರಿಯ ಸಂಹಿತೆ ಕಲಂ 144 ರ ಉಪ ಕಲಂ (1) ಮತ್ತು (3) ರ ಅನ್ವಯ ದಿನಾಂಕ 10.11.2019 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಬಾರ್‌ಗಳು, ವೈನ್ಸ್ಶಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ.

  • ಆಂಧ್ರದಲ್ಲಿ ಮದ್ಯ ಬ್ಯಾನ್ ಸಾಧ್ಯತೆ – ಯಾವ ರಾಜ್ಯಕ್ಕೆ ಎಷ್ಟು ಆದಾಯ ಬಂದಿದೆ?

    ಆಂಧ್ರದಲ್ಲಿ ಮದ್ಯ ಬ್ಯಾನ್ ಸಾಧ್ಯತೆ – ಯಾವ ರಾಜ್ಯಕ್ಕೆ ಎಷ್ಟು ಆದಾಯ ಬಂದಿದೆ?

    – ಮಹಿಳಾ ಮತದಾರರನ್ನು ಸೆಳೆಯಲು ಮದ್ಯ ಬ್ಯಾನ್
    – ಅಕ್ರಮವಾಗಿ ರಾಜ್ಯಗಳಿಗೆ ಬರುತ್ತಿದೆ ಮದ್ಯ

    ನವದೆಹಲಿ: ನೆರೆಯ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಈಗಾಗಲೇ ಆಂಧ್ರ ಸರ್ಕಾರ ಸುಮಾರು 3,500 ಖಾಸಗಿ ಮದ್ಯದಂಗಡಿಗಳ್ನು ತನ್ನ ಸ್ವಾದೀನಕ್ಕೆ ಪಡೆದುಕೊಂಡಿದೆ. ಹೀಗೆ ಹಂತ ಹಂತವಾಗಿ ಮದ್ಯದಂಗಡಿಗಳನ್ನು ಮುಚ್ಚಿಸುತ್ತಾ, ಮುಂದಿನ ವರ್ಷ ಆಂಧ್ರ ಪ್ರದೇಶವನ್ನು ಮದ್ಯ ನಿಷೇಧ ರಾಜ್ಯ ಎಂದು ಘೋಷಿಸಲು ಜಗನ್ ಮೋಹನ್ ರೆಡ್ಡಿ ಸಿದ್ಧತೆ ನಡೆಸಿಕೊಂಡಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮದ್ಯ ನಿಷೇಧ ಮಾಡಿದ್ದೇವೆ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ನೀಡಲಿದ್ದಾರೆ.

    ಸಂಪೂರ್ಣವಾಗಿ ನಿಷೇಧ ಮಾಡುವುದರಿಂದ ರಾಜ್ಯದಲ್ಲಿ ಶಾಂತಿ ನೆಲಸಲಿದೆ. ಹಾಗೆಯೇ ಅಪರಾಧ ಚಟುವಟಿಕೆಗಳು ಮತ್ತು ಕೌಟುಂಬಿಕ ಸಮಸ್ಯೆಗಳು ಕಡಿಮೆ ಆಗಿ ಸಮಾಜದಲ್ಲಿ ಶಾಂತಿ ನೆಲಸಲಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳುತ್ತಾರೆ. ಚುನಾವಣೆ ಪ್ರಚಾರದಲ್ಲಿ ಜಗನ್ ಮೋಹನ್ ರೆಡ್ಡಿ ಇದೇ ವಿಷಯವನ್ನು ಪ್ರಸ್ತಾಪಿಸಿ ಮಹಿಳೆಯರ ಬಳಿ ಮತ ಕೇಳಿದ್ದರು. ಮದ್ಯ ನಿಷೇಧಗೊಂಡಿರುವ ರಾಜ್ಯಗಳಲ್ಲಿ ಭಿನ್ನ ಭಿನ್ನ ಕಾನೂನುಗಳಿವೆ. ಅವುಗಳ ಪುಟ್ಟ ಸಮೀಕ್ಷೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    ಖಜಾನೆ ಮೇಲೆ ಭಾರೀ ಹೊಡೆತ: ಮದ್ಯ ಮಾರಾಟದಿಂದ ಸಂಗ್ರಹವಾಗುವ ತೆರಿಗೆಯೇ ರಾಜ್ಯದ ಬೊಕ್ಕಸಕ್ಕೆ ಮೂಲ ಆದಾಯವಾಗಿರುತ್ತದೆ. ಬಹುತೇಕ ರಾಜ್ಯಗಳಿಗೆ ಮದ್ಯದ ಆದಾಯ ನಾಲ್ಕನೇ ಸ್ಥಾನದಲ್ಲಿದೆ. ದಿಢೀರ್ ಆದೇಶಗಳಿಂದ ಸರ್ಕಾರ ತನ್ನ ಖರ್ಚುಗಳನ್ನು ತಗ್ಗಿಸಬೇಕಾಗುತ್ತದೆ. ಮುಂದಿನ ವರ್ಷಗಳಲ್ಲಿ ಜಿಎಸ್‍ಟಿ ಸಂಗ್ರಹ ಸ್ಥಿರವಾಗಿರೋದರ ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಲಭ್ಯವಾಗಬೇಕು. ಇಲ್ಲವಾದಲ್ಲಿ ಇದರ ನೇರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

    ಮದ್ಯ ನಿಷೇಧ ಪರೋಕ್ಷವಾಗಿ ರಾಜ್ಯದ ಪ್ರವಾಸೋದ್ಯಮಕ್ಕೆ ಸಣ್ಣ ಹೊಡೆತ ಬೀಳುವುದುಂಟು. ಹೆಚ್ಚಿನ ಪ್ರವಾಸಿಗರು ಮದ್ಯ ನಿಷೇಧಿತ ರಾಜ್ಯಗಳ ಪ್ರವಾಸಕ್ಕೆ ಹಿಂದೇಟು ಹಾಕುತ್ತಾರೆ. ಇದರಿಂದ ಪ್ರವಾಸಿ ಸ್ಥಳಗಳಲ್ಲಿ ಉದ್ಯೋಗ ಕಡಿತಗೊಳ್ಳುತ್ತವೆ. ಹಾಗಾಗಿ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು.

    ಮದ್ಯ ನಿಷೇಧಿತ ರಾಜ್ಯಗಳು:
    1. 1960 ಮೇನಲ್ಲಿ ಮೊದಲ ಬಾರಿಗೆ ಗುಜರಾತಿನಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಇಂದಿಗೂ ಇಲ್ಲಿ ಮದ್ಯ ನಿಷೇಧವಿದೆ.
    2. 1989ರಲ್ಲಿ ನಾಗಾಲ್ಯಾಂಡ್ ನಲ್ಲಿ ಮದ್ಯಪಾನ ಮತ್ತು ಮಾರಾಟಕ್ಕೆ ನಿಷೇಧವಿದೆ.
    3. 1991ರಲ್ಲಿ ಮಣಿಪುರದಲ್ಲಿ ಮದ್ಯ ನಿಷೇಧಿಸಲಾಗಿತ್ತು. ತದನಂತರ 2002ರಲ್ಲಿ ನಿಷೇಧವನ್ನು ತೆರವುಗೊಳಿಸಲಾಗಿದೆ.
    4. 1997ರಲ್ಲಿ ಮೀಜೋರಾಂನಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. 2014ರಲ್ಲಿ ನಿಷೇಧವನ್ನು ಹಿಂಪಡೆದು, 2019ರಲ್ಲಿ ಮತ್ತೆ ನಿಷೇಧ ಆದೇಶ ಹೊರಡಿಸಲಾಗಿದೆ.
    5. 1996ರಲ್ಲಿ ಹರ್ಯಾಣದಲ್ಲಿ ನಿಷೇಧ ವಿಧಿಸಿ, 1998ರಲ್ಲಿ ಆದೇಶವನ್ನು ಹಿಂಪಡೆಯಲಾಗಿದೆ.
    6. 1974ರಲ್ಲಿ ತಮಿಳುನಾಡಿನಲ್ಲಿ ಸಂಪೂರ್ಣ ಮದ್ಯದ ಮೇಲೆ ನಿಷೇಧ ವಿಧಿಸಲಾಗಿತ್ತು. ಆದ್ರೆ 1981ರಲ್ಲಿ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿತ್ತು.
    7. ಬಿಹಾರ ಸಿಎಂ ನಿತೀಶ್ ಕುಮಾರ್ 2016ರಿಂದ ಮದ್ಯ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
    8. ಕೇರಳದಲ್ಲಿ 2014ರಲ್ಲಿ ಮದ್ಯ ಮೇಲೆ ನಿಷೇಧ ವಿಧಿಸಿ ಮೂರು ವರ್ಷಗಳ ಬಳಿಕ ಅಂದ್ರೆ 2017ರಲ್ಲಿ ತೆರವುಗೊಳಿಸಲಾಗಿದೆ.
    9. 1992ರಲ್ಲಿ ಆಂಧ್ರದ ಟಿಡಿಪಿ ಸರ್ಕಾರ ಮದ್ಯವನ್ನು ನಿಷೇಧ ಮಾಡಿತ್ತು. ರಾಜ್ಯ ಬೊಕ್ಕಸಕ್ಕೆ ಹೊಡೆತ ಬಿದ್ದ ಕಾರಣ ನಾಲ್ಕು ವರ್ಷಗಳ ಬಳಿಕ ತನ್ನ ಆದೇಶವನ್ನು ಹಿಂಪಡೆಯಿತು. ಈಗ ಜಗನ್ ಮೋಹನ್ ರೆಡ್ಡಿ ಮದ್ಯ ಮುಕ್ತ ರಾಜ್ಯಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಕುಡುಕರ ಮುಕ್ತವಾಗುತ್ತಾ ರಾಜ್ಯ?
    ಗುಜರಾತ್, ನಾಗಾಲ್ಯಾಂಡ್ ಮತ್ತು ಬಿಹಾರ್ ಮದ್ಯ ಮುಕ್ತ ರಾಜ್ಯಗಳಾಗಿವೆ. ಆದರೆ ಈ ರಾಜ್ಯದ ಜನರು ಮದ್ಯ ಸೇವನೆಯನ್ನು ತೊರೆದಿಲ್ಲ. ಬದಲಾಗಿ ನೆರೆಯ ರಾಜ್ಯಗಳಿಂದ ಅಕ್ರಮವಾಗಿ ಮದ್ಯವನ್ನು ತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮದ್ಯ ನಿಷೇಧಗೊಳಿಸಿರುವ ಕಳೆದ ಆರು ತಿಂಗಳಿನಿಂದ ಮೀಜೋರಾಂ ಸರ್ಕಾರ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿದೆ. ಬಿಹಾರ, ಗುಜರಾತ್ ರಾಜ್ಯಗಳಂತೆ ಮೀಜೋರಾಂ ರಾಜ್ಯದಲ್ಲಿಯೂ ಅಕ್ರಮ ಮದ್ಯ ಮಾರಾಟ ಆರಂಭಗೊಂಡಿವೆ.

    2016ರಲ್ಲಿ ಮದ್ಯ ನಿಷೇಧ ಮಾಡಿರುವ ಬಿಹಾರಕ್ಕೆ ಪಕ್ಕದ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಿಂದ ಅಕ್ರಮವಾಗಿ ಮದ್ಯ ಬರುತ್ತಿದೆ. ಈ ಅಕ್ರಮ ದಂಧೆಯಲ್ಲಿ ರಾಜ್ಯದ ಗಡಿ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವಡೆ ಗ್ರಾಮಗಳಿಂದ ಗ್ರಾಮಕ್ಕೆ ಮದ್ಯ ರವಾನೆ ಆಗುತ್ತೆ ಎಂದು ವರದಿಯಾಗಿದೆ.

    ನಾಗಾಲ್ಯಾಂಡ್ ನಲ್ಲಿ ಮದ್ಯ ನಿಷೇಧಗೊಳಿಸಿದ ಬಳಿಕ ಅಸ್ಸಾಂನಿಂದ ಅಕ್ರಮ ಸರಬರಾಜು ಹೆಚ್ಚಾಯ್ತು. ಒಮ್ಮೆ ಈ ಕುರಿತು ಪ್ರತಿಕ್ರಿಯಿಸಿದ್ದ ಅಸ್ಸಾಂ ಸಿಎಂ, ಮದ್ಯ ನಿಷೇಧಗೊಂಡಿರುವ ನಾಗಾಲ್ಯಾಂಡ್ ಆಲ್ಕೋಹಾಲ್ ನಿಂದ ತುಂಬಿಕೊಂಡಿದೆ. ನಿಷೇಧ ಮಾಡುವುದರಿಂದ ಜನರಿಗೆ ಮದ್ಯ ಕುಡಿಯುವ ತುಡಿತ ಹೆಚ್ಚಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರು ಅಕ್ರಮದ ಹಾದಿ ತುಳಿಯುತ್ತಾರೆ. ಹಣದ ಆಸೆಗಾಗಿ ಪೊಲೀಸರು ಸೇರಿದಂತೆ ಅಧಿಕಾರಿಗಳು ಭ್ರಷ್ಟರಾಗುತ್ತಾರೆ ಎಂದಿದ್ದರು.

    ಮದ್ಯ ಮಾರಾಟದಿಂದ ಅತಿ ಹೆಚ್ಚು ಆದಾಯ ಪಡೆಯುವ ಮೊದಲ 10 ರಾಜ್ಯಗಳು (2015-16 ಅಂಕಿ ಅಂಶಗಳ ಪ್ರಕಾರ, ಕೋಟಿ ರೂ.ಗಳಲ್ಲಿ)
    1. ತಮಿಳುನಾಡು – 29,672
    2. ಹರ್ಯಾಣ – 19,703
    3. ಮಹಾರಾಷ್ಟ್ರ – 18,000
    4. ಕರ್ನಾಟಕ – 15,332
    5. ಉತ್ತರ ಪ್ರದೇಶ – 14,083
    6. ಆಂಧ್ರ ಪ್ರದೇಶ – 12,736
    7. ತೆಲಂಗಾಣ – 12,144
    8. ಮಧ್ಯ ಪ್ರದೇಶ – 7,926
    9. ರಾಜಸ್ಥಾನ – 5,585
    10. ಪಂಜಾಬ್ – 5,000
    ಇತ್ತೀಚಿನ ವರ್ಷಗಳಲ್ಲಿ ಮದ್ಯ ಮಾರಾಟ ಶೇ.38ರಷ್ಟು ಏರಿಕೆ ಕಂಡಿದೆ. 2010ರಿಂದ 2017ರ ಪ್ರತಿ ವಯಸ್ಕನ ಬಳಕೆ 4.3 ಲೀ.ನಿಂದ 5.9 ಲೀ.ನಷ್ಟು ಏರಿಕೆ ಕಂಡಿದೆ.

    ಕೇಂದ್ರ ಸರ್ಕಾರ ಏಪ್ರಿಲ್ 1958ರೊಳಗೆ ಭಾರತವನ್ನು ಮದ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಇಂದಿಗೂ ಈ ಗುರಿ ತಲುಪಲು ಯಾವ ಸರ್ಕಾರಗಳು ಮುಂದಾಗಿಲ್ಲ. ಸ್ವತಂತ್ರ ನಂತರ ಎರಡು ದಶಕಗಳವರೆಗೆ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿ ಮದ್ಯ ಮಾರಾಟ ಇರಲಿಲ್ಲ. 1967ರಿಂದ ಎಲ್ಲ ರಾಜ್ಯಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈ ನಡುವೆ ಕೆಲ ರಾಜ್ಯಗಳು ಬೊಕ್ಕಸಕ್ಕೆ ಹೊಡೆತ ಬಿದ್ದರೂ ಪರವಾಗಿಲ್ಲ ಎಂದು ಮದ್ಯ ನಿಷೇಧ ಮಾಡಿಕೊಂಡಿವೆ.

  • ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ!

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ!

    – ಏರಿಕೆಯಾಯ್ತು ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣ
    – ಅಬಕಾರಿ ಅಧಿಕಾರಿಗಳ ಪ್ರಾಮಾಣಿಕ ಶ್ರಮಕ್ಕೆ ಮೆಚ್ಚುಗೆ

    ಕಾರವಾರ: ಚುನಾವಣೆ ಬಂತೆಂದರೆ ಮತದಾರರನ್ನು ಓಲೈಸಲು ಹಣದ ಜೊತೆ ಮದ್ಯ ಸಹ ಮತದಾರರಿಗೆ ಸರಬರಾಜಾಗುತ್ತದೆ. ಅದರಲ್ಲೂ ಮದ್ಯ ಪ್ರಿಯರ ಮೆಚ್ಚಿನ ರಾಜ್ಯವಾದ ಗೋವಾಕ್ಕೆ ಅಂಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಗೆ ಗೋವಾದ ಅಗ್ಗದ ಮದ್ಯಗಳು ಎಗ್ಗಿಲ್ಲದೇ ಸರಬರಾಜಾಗುತ್ತದೆ.

    ಇದಕ್ಕಾಗಿ ಖಾಕಿಗಳನ್ನೊಳಗೊಂಡ ದೊಡ್ಡ ಜಾಲವೇ ವ್ಯವಸ್ಥಿತ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪವೂ ಇದೆ. ಆದರೆ ಈ ಬಾರಿ ಅಬಕಾರಿ ಅಧಿಕಾರಿಗಳ ಪ್ರಾಮಾಣಿಕ ಶ್ರಮ ಹಾಗೂ ಗಡಿ ಭಾಗದಿಂದ ಹಿಡಿದು ಜಿಲ್ಲೆ ಪ್ರತಿ ಪ್ರದೇಶದಲ್ಲಿನ ಕಾರ್ಯಾಚರಣೆ ಗೋವಾದ ಮದ್ಯದ ಅಮಲನ್ನು ಇಳಿಸಿದೆ.

    ಈ ಬಾರಿ ಜಿಲ್ಲಾ ಅಬಕಾರಿ ಇಲಾಖೆ ಮದ್ಯ ಸಾಗಾಟದಾರರ ಮೇಲೆ ಗಡಿಭಾಗದಲ್ಲಿ 24 ತಾಸುಗಳ ಕಣ್ಗಾವಲು ಜೊತೆಗೆ ಗೋವಾ ರಾಜ್ಯದ ಅಬಕಾರಿ ಇಲಾಖೆಯ ಸಿಬ್ಬಂದಿ ಜೊತೆಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯದ ಸಾಗಾಟಕ್ಕೆ ಕಡಿವಾಣ ಹಾಕಲು ಯತ್ನಿಸಿದೆ.

    ಜಿಲ್ಲೆಯಾದ್ಯಂತ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸಿದ ಫಲವಾಗಿ ಜಿಲ್ಲೆಯ ಮದ್ಯದ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಮದ್ಯದ ಮಾರಾಟ ಇಳಿಮುಖವಾಗಿದೆ. ಅನಧಿಕೃತವಾಗಿ ಸರಬರಾಜಾಗುತ್ತಿದ್ದ ಲಕ್ಷಾಂತರ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶ ವಶಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

    ಭರ್ಜರಿ ಭೇಟೆ:
    ಕರ್ನಾಟಕಕ್ಕಿಂತ ಅಗ್ಗದಲ್ಲಿ ಮದ್ಯ ಗೋವಾದಲ್ಲಿ ಸಿಗುವುದರಿಂದ ಗೋವಾದಿಂದ ಚುನಾವಣೆ ಸಂದರ್ಭದಲ್ಲಿ ಲಕ್ಷಾಂತರ ಮೌಲ್ಯದ ಮದ್ಯಗಳು ಕಾರವಾರಕ್ಕೆ ಕಳ್ಳ ದಾರಿಯಿಂದ ಸರಬರಾಜಾಗುತ್ತದೆ. ಆದರೆ ಅಬಕಾರಿ ಇಲಾಖೆಯು ಗಡಿಯಲ್ಲಿ 24 ಗಂಟೆಗಳ ಹದ್ದಿನ ಕಣ್ಣನ್ನು ಇಟ್ಟಿದ್ದು ಸಿ.ಸಿ ಕ್ಯಾಮರಾ ಸಹ ಅಳವಡಿಸಲಾಗಿದೆ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಈವರೆಗೆ ಬರೋಬ್ಬರಿ 630 ದಾಳಿ ನಡೆಸಿರುವ ಅಬಕಾರಿ ಇಲಾಖೆ 212 ಪ್ರಕರಣಗಳನ್ನು ದಾಖಲಿಸಿದೆ. 134 ಜನ ಆರೋಪಿಗಳನ್ನು ಬಂಧಿಸಿ ಇದರಲ್ಲಿ 80 ಗಂಭೀರ ಪ್ರಕರಣದಲ್ಲಿ 26 ಜನರನ್ನು ಜೈಲಿಗೆ ಕಳುಹಿಸಿದ್ದು, 134 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

    ಒಟ್ಟಾರೆ 4,140 ಸಾವಿರ ಲೀಟರ್ ಕರ್ನಾಟಕ ಮದ್ಯ, 1,443.78 ಲೀಟರ್ ಗೋವಾ ಮದ್ಯ, 19,254.78 ಲೀಟರ್ ಬಿಯರ್, 65 ಲೀಟರ್ ಗೋವಾ ಬಿಯರ್, 1,640 ಲೀಟರ್ ಬೆಲ್ಲದ ಹಾಗೂ ಗೇರು ಹಣ್ಣಿನ ಮದ್ಯ (ಸ್ಪಿರಿಟ್), 180 ಲೀಟರ್ ಕಳ್ಳಬಟ್ಟಿ ಹಾಗೂ ಮದ್ಯ ಸಾಗಾಟಕ್ಕೆ ಬಳಸಿದ್ದ 15 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳಲ್ಲಿ 53,97,743 ಲಕ್ಷ ರೂ. ಮದ್ಯದ ಬೆಲೆಯಾದರೆ 43,60,000 ರೂ. ವಾಹನದ ಬೆಲೆಯಾಗಿದೆ.

    ಇದಲ್ಲದೇ ಈ ಬಾರಿ ಅಬಕಾರಿ ಇಲಾಖೆಯ ಹದ್ದಿನ ಕಣ್ಣಿನಿಂದಾಗಿ ಮಾರಾಟಗಾರರು ಕೂಡ ಅಕ್ರಮವಾಗಿ ಜಿಲ್ಲೆಯ ಬೇರೆಡೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. ಇದಲ್ಲದೇ ಚುನಾವಣೆಗಾಗಿ ಅಧಿಕ ದಾಸ್ತಾನು ಸಹ ಮಾಡಲು ಇಲಾಖೆ ಅವಕಾಶವನ್ನು ಕೊಟ್ಟಿಲ್ಲ. ಈ ಕಾರಣದಿಂದ ಕಳೆದ ವಿಧಾನಸಭೆಯ ಸಂದರ್ಭಕ್ಕೆ ಹೋಲಿಸಿದಲ್ಲಿ 28,199 ಮದ್ಯದ ಕೇಸ್‍ಗಳ (ಮದ್ಯದ ಬಾಕ್ಸ್) ಮಾರಾಟ ಇಳಿಮುಖವಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಅಕ್ರಮ ಮದ್ಯ ಸಂಬಂಧ ದಾಖಲಾದ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದ್ದು ಇಲಾಖೆಯ ಕಟ್ಟು ನಿಟ್ಟಿನ ಕ್ರಮದಿಂದ ಇಳಿಕೆಯಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ. ಜಿಲ್ಲೆಯಾದ್ಯಂತ ಗೋವಾ ಮದ್ಯದ ಸಾಗಾಟ ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದ್ದು ಈ ಬಾರಿಯ ಅಬಕಾರಿ ಇಲಾಖೆಯ ಈ ಕಾರ್ಯಕ್ಕೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.