Tag: liquor Prohibition

  • ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮಧ್ಯೆ ಹೊಂದಾಣಿಕೆ ಇಲ್ಲ- ಸಚಿವ ಕೋಟ

    ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮಧ್ಯೆ ಹೊಂದಾಣಿಕೆ ಇಲ್ಲ- ಸಚಿವ ಕೋಟ

    ಉಡುಪಿ: ಅನರ್ಹ ಶಾಸಕರ ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೇವೇಗೌಡರು ರಾಷ್ಟ್ರದ ಹಿರಿಯ ರಾಜಕಾರಣಿ. ಬಿಜೆಪಿ ಅವರನ್ನು ಬಹಳ ಗೌರವಿಸುತ್ತದೆ. ಅವರ ಮಗ ಕುಮಾರಸ್ವಾಮಿಯವರಿಗೆ ಅದೇ ಗೌರವ ನಮ್ಮಿಂದ ಸಿಗುತ್ತದೆ. ಆದರೆ ಉಪಚುನಾವಣೆಯಲ್ಲಿ ನಮ್ಮ ನಡುವೆ ಹೊಂದಾಣಿಕೆ ಇಲ್ಲ. ಸರಕಾರ ಉಳಿಸಲು ಜೆಡಿಎಸ್ ಸಹಾನುಭೂತಿ ತೋರಿಸಿದೆ ಅದಕ್ಕೆ ಧನ್ಯವಾದಗಳು. ಎಲ್ಲ 15 ಕ್ಷೇತ್ರದಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ, ಅತ್ಯಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಿದ್ದರಾಮಯ್ಯ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಟೀಕೆ ಮಾಡುವುದೇ ಸಿದ್ದರಾಮಯ್ಯನವರ ಕೆಲಸ. ನಾವು ಹೇಳಿದಂತೆ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದೇವೆ. ಟಿಪ್ಪು ಪಠ್ಯ ರದ್ದು ಅದರ ಮುಂದುವರಿದ ಭಾಗ. ಈಗಿನ ತಲೆಮಾರಿಗೆ ಟಿಪ್ಪು ನ್ಯೂನತೆ ಕಂಡಿದೆ. ಮಡಿಕೇರಿ ಶಾಸಕರೊಬ್ಬರು ಟಿಪ್ಪು ಪಠ್ಯ ರದ್ದು ಮಾಡಲು ಮನವಿ ಮಾಡಿದ್ದರು. ಅವರ ಮನವಿ ಪರಿಶೀಲಿಸುವುದಾಗಿ ಶಿಕ್ಷಣ ಸಚಿವರು ಹಾಗೂ ಸಿಎಂ ಭರವಸೆ ನೀಡಿದ್ದಾರೆ ಎಂದರು.

    ಈಗ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಸ್ವಪಕ್ಷೀಯರನ್ನು ಬಿಟ್ಟು ತಾಳ್ಮೆ ಕಳೆದುಕೊಂಡು ಮಾತನಾಡುವ ಅವರ ಮುನ್ನುಗ್ಗುವ ಗುಣವನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದರು.

    ದೇವರ ಹೆಸರಿನ ಮದ್ಯದಂಗಡಿಗಳಿಗೆ ಮರು ನಾಮಕರಣ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯದಂಗಡಿಗೆ ದೇವರ ಹೆಸರು ಇಡುವುದು ಆಭಾಸವಾಗುತ್ತದೆ. ಹೀಗಾಗಿ ಬಾರ್, ವೈನ್ ಶಾಪ್ ಗಳಿಗೆ ದೇವರ ಹೆಸರಿಗೆ ಜನರಿಂದ ವಿರೋಧ ಬಂದಿದೆ. ನಾನು ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಒಂದು ಟಿಪ್ಪಣಿ ಕಳುಹಿಸಿದ್ದೇನೆ. ಸಾರ್ವಜನಿಕರಿಂದ ಬಂದಿರುವ ಅಭಿಪ್ರಾಯಕ್ಕೆ ಅಧಿಕಾರಿಗಳಿಂದ ಕಡತ ಸಿದ್ಧಪಡಿಸಲು ಸೂಚಿಸಿದ್ದೇನೆ. ಅಬಕಾರಿ ಮತ್ತು ಕಾನೂನು ಇಲಾಖೆ ಜೊತೆ ಚರ್ಚೆ ಮಾಡಲು ಸೂಚನೆ ನೀಡಿದ್ದೇನೆ. ಈ ಕುರಿತು ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಇದೆ. ಸಾರ್ವಜನಿಕ ಅಭಿಪ್ರಾಯಕ್ಕೂ ಅವಕಾಶ ಇದೆ. ಅಭಾಸ ಹೆಸರು ಬದಲಿಸುವ ಚಿಂತನೆ ಮುಜರಾಯಿ ಇಲಾಖೆ ಮುಂದಿದೆ ಎಂದರು.

    ಬಾರ್ ಒಳಗೆ ದೇವರ ಫೋಟೋ ಇಡಬೇಡಿ ಎಂದಿಲ್ಲ. ದೇವರ ಹೆಸರಿರುವವರು ಕುಡಿಯಬಹುದಾ ಎಂದು ನೀವು ಪ್ರಶ್ನೆ ಮಾಡಬಹುದು? ದೇವರ ಹೆಸರು ಇರುವವರು ಮದ್ಯದಂಗಡಿಯಿಂದ ವಾಪಾಸ್ ಕಳುಹಿಸಬೇಕು ಎಂಬ ಅಭಿಪ್ರಾಯ ಇದೆ. ಸರಕಾರ ಈ ವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅಬಕಾರಿ, ಕಾನೂನು ಇಲಾಖೆ ಒಪ್ಪದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಬಿಜೆಪಿಯಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಲ್ಲ, ಹೈಕಮಾಂಡ್ ನಿಂದ ರಾಜ್ಯ ಸರಕಾರದ ಸಾಧನೆ ಕುರಿತು ಪರಾಮರ್ಶೆ ನಡೆಸುತ್ತಿದೆ. ರಾಜ್ಯ ಸರಕಾರದ ನೂರು ದಿನದ ಸಾಧನೆ ಜನತೆ ಮುಂದಿಟ್ಟಿದ್ದೇವೆ. ನೆರೆಯ ವಾತಾವರಣವನ್ನು ನಿಭಾಯಿಸಿದ್ದೇವೆ. ಕೇಂದ್ರ ಸರಕಾರ ಸಹ ನಮ್ಮ ಕೆಲಸವನ್ನು ಗಮನಿಸುತ್ತದೆ. ನೀವು ಎಷ್ಟು ಕೆಲಸ ಮಾಡಿದ್ದೀರಿ ಎಮದು ಕೇಳಿದರೆ ತಪ್ಪೇನು? ಹೈಕಮಾಂಡ್ ಸಮೀಕ್ಷೆ ಮಾಡಿದ್ದರೆ ತಪ್ಪೇನು? ನಮ್ಮನ್ನು ಗಮನಿಸುತ್ತಿದ್ದರೆ ನಾವು ಚೆನ್ನಾಗಿ ಕೆಲಸ ಮಾಡಬಹುದು. ಪಾಸು- ಫೇಲಿನ ಪಟ್ಟಿ ನಮ್ಮಲ್ಲಿಲ್ಲ, ಫೇಲ್ ಆಗುವ ವಿದ್ಯಾರ್ಥಿಗಳು ನಮ್ಮಲ್ಲಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನಿಮ್ಮ ಬೆಂಬಲ ಇದ್ದರೆ ಮದ್ಯ ನಿಷೇಧಕ್ಕೆ ಧ್ವನಿ ಎತ್ತುತ್ತೇನೆ- ಸಿ.ಟಿ.ರವಿ

    ನಿಮ್ಮ ಬೆಂಬಲ ಇದ್ದರೆ ಮದ್ಯ ನಿಷೇಧಕ್ಕೆ ಧ್ವನಿ ಎತ್ತುತ್ತೇನೆ- ಸಿ.ಟಿ.ರವಿ

    ಚಿತ್ರದುರ್ಗ: ಮದ್ಯ ನಿಷೇಧದ ಕುರಿತು ಸದನ ಹೊರಗೂ ಹಾಗೂ ಒಳಗೆ ಧ್ವನಿ ಎತ್ತುತ್ತೇನೆ. ಆದರೆ ನಮ್ಮ ಬೆಂಬಲಕ್ಕೆ ನೀವು ನಿಲ್ಲುತ್ತೀರಾ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

    ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ತರಳುಬಾಳು ಗುರುಪೀಠದ ಬಯಲು ರಂಗ ಮಂದಿರದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ರವಿ ಮಾತನಾಡಿದರು. ಎಲ್ಲರೂ ಒಟ್ಟಾಗಿ ಧ್ವನಿ ಎತ್ತಿದರೆ ಸರ್ಕಾರವೂ ಅನೈತಿಕ ಆದಾಯವನ್ನು ಬಯಸುವುದಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಮದ್ಯ ನಿಷೇಧದ ಬಗ್ಗೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮದ್ಯ ನಿಷೇಧಕ್ಕೆ ಸಿಎಂ ಬಿಎಸ್‍ವೈ ಚಿಂತನೆ – ಸಂಸದ ಬಸವರಾಜು

    ನೀವು ಬೆಂಬಲ ನೀಡುವುದಾದರೆ, ನಾನು ಸಹ ಸಂಪುಟದ ಒಳಗೆ ಹಾಗೂ ಹೊರಗೆ ಮದ್ಯಪಾನ ನಿಷೇಧದ ಪರ ಧ್ವನಿ ಎತ್ತುತ್ತೇನೆ. ಅಲ್ಲದೆ ಇಂದಿನ ಪರಿಸ್ಥಿತಿಯಲ್ಲಿ ಮದ್ಯಪಾನ ನಿಷೇಧ ಮಾಡಬೇಕಾದ ಅಗತ್ಯವಿದೆ. ಗಾಂಧೀಜಿಯವರ 150ನೇ ಜನ್ಮ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ನಾವುಗಳು ಅವರ ಹಾದಿಯಲ್ಲಿ ನಡೆಯೋಣ. ಹೀಗಾಗಿ ಕೇವಲ ಮಾತಿಗೆ ಸೀಮಿತರಾಗಿ ಮದ್ಯ ನಿಷೇಧದ ಬಗ್ಗೆ ಮಾತನಾಡದೇ ನಿಷೇಧಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

    ಅನೈತಿಕ ಮೂಲದ ಆದಾಯವನ್ನು ವ್ಯಕ್ತಿಯೂ ಹೊಂದಬಾರದು, ಸರ್ಕಾರವೂ ಹೊಂದಬಾರದು. ಮತಕ್ಕಾಗಿ ರಾಜಕೀಯ ಮಾಡುವವರು ನಾವಲ್ಲ. ಸಿದ್ಧಾಂತದ ಹಿನ್ನೆಲೆ ನಾವು ರಾಜಕೀಯಕ್ಕೆ ಬಂದಿದ್ದೇವೆ. ಹೀಗಾಗಿ ಕೆಲವೊಮ್ಮೆ ನಿಷ್ಠುರವಾಗಿ ಮಾತನಾಡುತ್ತೇವೆ. ರಾಜಕಾರಣಕ್ಕಾಗಿ ಸಿದ್ಧಾಂತ ಹಿಡಿದಿಲ್ಲ, ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇವೆ. ಮದ್ಯ ನಿಷೇಧದ ಕುರಿತು ಖಂಡಿತ ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು.