Tag: Liquor Policy

  • ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

    ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

    ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ  ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಕಳೆದ ತಿಂಗಳು ಬಂಧನಕ್ಕೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಾಮಾನ್ಯ ಜಾಮೀನು (Bail) ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗುರುವಾರ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಾಧೀಶರಾದ ನಿಯಯ್ ಬಿಂದು ಎರಡು ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ಆಲಿಸಿ ಇಂದು ಜಾಮೀನು ಮಂಜೂರು ಮಾಡಿದರು.

    ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಜಾಮೀನು ಬಾಂಡ್‌ಗೆ ಸಹಿ ಹಾಕಲು 48 ಗಂಟೆಗಳ ಕಾಲಾವಕಾಶ ನೀಡುವಂತೆ ಇಡಿ ಮನವಿ ಮಾಡಿತ್ತು. ಈ ಮನವಿಯನ್ನು ತಿರಸ್ಕರಿಸಿದ ಕೋರ್ಟ್‌ ಶುಕ್ರವಾರ 1 ಲಕ್ಷ ರೂ. ಬಾಂಡ್ ಸಲ್ಲಿಕೆಗೆ ಕೇಜ್ರಿವಾಲ್ ಪರ ವಕೀಲರಿಗೆ ಸೂಚನೆ ನೀಡಿತು. ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ಮುಗಿದರೆ ಕೇಜ್ರಿವಾಲ್‌ ನಾಳೆ ಜೈಲಿನಿಂದ ಹೊರ ಬರುವ ಸಾಧ್ಯತೆಯಿದೆ.

    ವಿಚಾರಣೆ ವೇಳೆ ವಾದ ಮಂಡಿಸಿದ ಇಡಿ ಪರ ವಕೀಲ ಎಎಸ್‌ಜಿ ಎಸ್‌ವಿ ರಾಜು, 2021-22ರ ದೆಹಲಿ ಮದ್ಯ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷಗಳನ್ನು ಮಾಡಲು ಕಿಕ್‌ಬ್ಯಾಕ್ ಪಡೆಯಲಾಗಿದೆ. ಈ ಹಣವನ್ನು ಗೋವಾ ಚುನಾವಣೆಗೆ ಬಳಸಿದೆ. ಇದಕ್ಕೆ ಪೂರಕವಾದ ಎಲ್ಲಾ ಸಾಕ್ಷಿಗಳು ಇಡಿ ಬಳಿ ಇದೆ. ಗೋವಾದಲ್ಲಿ ಅರವಿಂದ್ ಕೇಜ್ರಿವಾಲ್ ತಂಗಿದ್ದ ಹೋಟೆಲ್ ಬಾಡಿಗೆ ಒಂದು ಲಕ್ಷ ರೂಪಾಯಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬರು ಪಾವತಿಸಿದ್ದಾರೆ. ಅವರು ಕಿಕ್‌ಬ್ಯಾಕ್ ರೂಪದಲ್ಲಿ ಬಂದ ಸುಮಾರು 40 ಕೋಟಿ ರೂ. ಪಡೆದುಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಷ್ಟು ಸಾಕ್ಷಿಗಳಿದೆ ಎಂದು ತಿಳಿಸಿದರು.

     

    ಇಡಿ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ. ತಮ್ಮ ತನಿಖೆಯಲ್ಲಿ ಅಸಮರ್ಪಕ ದಾಖಲೆಗಳನ್ನು ಇಟ್ಟುಕೊಂಡಿದೆ. ಕಿಕ್‌ಬ್ಯಾಕ್ ರೂಪದಲ್ಲಿ ಪಡೆದ ಹಣ ಫೋಟೋಗಳು ಲಭ್ಯವಿದೆ. ಇದೇ ಹಣವನ್ನು ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿದೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೊಬೈಲ್ ಪಾಸ್‌ವರ್ಡ್ ನೀಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಪ್ರತಿಕೂಲವಾದ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅವರು ತಮ್ಮ ಫೋನ್ ಪಾಸ್‌ವರ್ಡ್ ಹೇಳಿದರೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಹೇಳಿದರು.

    ಕೇಜ್ರಿವಾಲ್ ಅವರು ವೈಯಕ್ತಿಕವಾಗಿ ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೂ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಬಹುದು. ಅವರು ನೇರವಾಗಿ ಅಪರಾಧ ಮಾಡದೇ ಇರಬಹುದು. ಆದರೆ ಎಎಪಿ ಪಕ್ಷದ ವ್ಯವಹಾರಗಳಿಗೆ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ಎಎಪಿ ಅಪರಾಧದಲ್ಲಿ ತಪ್ಪಿತಸ್ಥರಾಗಿದ್ದರೆ ಸೆಕ್ಷನ್ 70 ಪಿಎಂಎಲ್‌ಎ ಪ್ರಕಾರ ಅವರು ತಪ್ಪಿತಸ್ಥರಾಗುತ್ತಾರೆ ಎಂದು ಎಸ್‌ವಿ ರಾಜು ವಾದಿಸಿದರು.

    ಇಡಿ ಆರೋಪಕ್ಕೆ ಅರವಿಂದ್ ಕೇಜ್ರಿವಾಲ್ ಪರ ವಕೀಲ ವಿಕ್ರಮ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದರು. ಇಡಿ ಒಂದು ಸ್ವತಂತ್ರ ಸಂಸ್ಥೆಯೇ ಅಥವಾ ಕೆಲವು ರಾಜಕೀಯ ಯಜಮಾನರ ಕೈಯಲ್ಲಿ ಆಟವಾಡುತ್ತಿದೆಯೇ? ಇಡಿ ಊಹೆಯ ಆಧಾರದ ಮೇಲೆ ತನ್ನ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅವರು ಇನ್ನೂ ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ ಅದು ಅಂತ್ಯವಿಲ್ಲದ ತನಿಖೆಯಾಗುತ್ತದೆ. ಆಪ್‌ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ಅದಕ್ಕಾಗಿಯೇ ಪಕ್ಷವು ಮಾಡಿದ ಪ್ರತಿಯೊಂದಕ್ಕೂ ಜವಾಬ್ದಾರಾಗುತ್ತಾರೆ ಎಂದು ಅವರು ಹೇಳುತ್ತಾರೆ. ಇದು ಊಹಾಪೋಹಗಳು, ಪೂರ್ವಾಗ್ರಹ. ಸಾಕ್ಷಿ ಇಲ್ಲದೇ 100 ಕೋಟಿ ಲಂಚ ಸ್ವೀಕರಿಸಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ ಎಂದು ಚೌಧರಿ ವಾದಿಸಿದರು. ಕೇಜ್ರಿವಾಲ್ ಅವರನ್ನು ವಿಶೇಷ ವ್ಯಕ್ತಿ ಎಂದು ಪರಿಗಣಿಸಬೇಡಿ. ಅವರು ವಿಶೇಷ ವ್ಯಕ್ತಿ ಎಂದು ಪರಿಗಣಿಸಲು ಬಯಸುವುದಿಲ್ಲ. ಆದರೆ ದಯವಿಟ್ಟು ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ ಎಂದು ಮನವಿ ಮಾಡಿದರು.

    ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್‌ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.  ಜೂನ್‌ 2 ರಂದು ಕೇಜ್ರಿವಾಲ್‌ ಮರಳಿ ದೆಹಲಿಯ  ತಿಹಾರ್‌ ಜೈಲಿಗೆ ಹೋಗಿದ್ದರು.

  • ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಚಂಡೀಗಢ: ಕಚೇರಿ, ಸಾರ್ವಜನಿಕ ಸ್ಥಳ ಹೀಗೆ ಕೆಲವೆಡೆ ಮದ್ಯಪಾನ ಮಾಡೋದು ನಿಷೇಧ. ಆದರೆ ಹರ್ಯಾಣದ (Haryana) ಸರ್ಕಾರ ಎಣ್ಣೆ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಕಾರ್ಪೊರೇಟ್ ಕಚೇರಿಯಲ್ಲಿ (Corporate Office) ಕೆಲಸ ಮಾಡುತ್ತ ಸಹೋದ್ಯೋಗಿಗಳೊಂದಿಗೆ ಮದ್ಯಪಾನ ಮಾಡಬಹುದಾದಂತಹ ಹೊಸ ನಿಯಮವನ್ನು ಸರ್ಕಾರ ತಂದಿದೆ.

    ಹರಿಯಾಣ ಮದ್ಯ ನೀತಿಯ (Haryana Liquor Policy) ಪ್ರಕಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದಂತೆ ಜೂನ್ 12 ರಿಂದ ರಾಜ್ಯಾದ್ಯಂತ ದೊಡ್ಡ ಕಾರ್ಪೊರೇಟ್ ಕಚೇರಿಗಳಲ್ಲಿ ಕಡಿಮೆ ಕಂಟೆಂಟ್ ಆಲ್ಕೋಹಾಲ್ (Alcohol) ಪಾನೀಯಗಳಾದ ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ ಪಾನೀಯಗಳನ್ನು ಸೇವಿಸಲು ಸರ್ಕಾರ ಅನುಮತಿ ನೀಡುತ್ತಿದೆ.

    ಹರಿಯಾಣ ಮದ್ಯ ನೀತಿಯ ಈ ಹೊಸ ನಿಯಮವನ್ನು ಮೇ 9 ರಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್ (Beer) ಹಾಗೂ ವೈನ್‌ನಂತಹ (Wine) ಪಾನೀಯಗಳನ್ನು ಸೇವಿಸಬಹುದು. ಒಂದು ಲಕ್ಷ ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಒಂದೇ ಆವರಣದೊಳಗೆ ಮದ್ಯಪಾನಕ್ಕೆ ಅನುಮತಿ ನೀಡಲಾಗುತ್ತಿದೆ.

    ಇದರರ್ಥ ನೀವು ದೊಡ್ಡ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ ಕಚೇರಿಯ ಆವರಣದಲ್ಲಿ ಬಿಯರ್ ಅಥವಾ ವೈನ್ ಕುಡಿಯಬಹುದು. ಇವುಗಳನ್ನು ಕಚೇರಿಯಲ್ಲಿಯೇ ನೀಡಬೇಕು ಎಂದೇನಿಲ್ಲ. ನೀವು ಸ್ವಂತವಾಗಿಯೂ ಖರೀದಿಸಿ ಕಚೇರಿಯಲ್ಲಿ ಸೇವನೆ ಮಾಡಬಹುದು. ಇದನ್ನೂ ಓದಿ: ಆಟೋ ರಿಕ್ಷಾ, ಖಾಸಗಿ ಬಸ್ ಡಿಕ್ಕಿ – 6 ಮಹಿಳೆಯರು ಸಾವು, ನಾಲ್ವರಿಗೆ ಗಾಯ

    ಹರಿಯಾಣ ಮದ್ಯ ನೀತಿಯ ಪ್ರಕಾರ ಕಾರ್ಪೊರೇಟ್ ಕಚೇರಿಗಳು ಎಲ್-10ಎಫ್ ಮದ್ಯದ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಬಿಯರ್ ಮತ್ತು ವೈನ್‌ನಂತಹ ಕಡಿಮೆ ಆಲ್ಕೋಹಾಲ್ ಅಂಶದ ಪಾನೀಯಗಳನ್ನು ಸೇವಿಸಲು ಅನುವು ಮಾಡಿಕೊಡುತ್ತದೆ. ಕ್ಯಾಂಟೀನ್ ಅಥವಾ ಉಪಾಹಾರ ಗೃಹದ ಕನಿಷ್ಠ ವಿಸ್ತೀರ್ಣವು 2,000 ಚದರ ಅಡಿಗಳಿಗಿಂತ ಕಡಿಮೆಯಿಲ್ಲದಿದ್ದರೆ ಕಾರ್ಪೊರೇಟ್ ಕಚೇರಿ ಪರವಾನಗಿ ಪಡೆಯಬಹುದು. ಪರವಾನಿಗೆ ಪಡೆಯುವ ಕಚೇರಿ 3 ಲಕ್ಷ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ – ಇಬ್ಬರಿಗೆ ತೀವ್ರ ಗಾಯ