Tag: Lingayat Religion Issue

  • ಡಿಕೆಶಿ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಎಂ.ಬಿ.ಪಾಟೀಲ್

    ಡಿಕೆಶಿ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಎಂ.ಬಿ.ಪಾಟೀಲ್

    ವಿಜಯಪುರ: ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಷ್ಟೇ. ಸರ್ಕಾರ ಹಾಗೂ ಇಲಾಖೆ ವಿಷಯದಲ್ಲಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟ್ ಗೆಲ್ಲುವುದರ ಕಡೆ ಗಮನಹರಿಸಿದ್ದೇವೆ. ಚುನಾವಣೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಸುದ್ದಿಗೋಷ್ಠಿ ಮಾಡಿ ಹೆಚಿನ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದರು. ಇದನ್ನು ಓದಿ: ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ

    ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮೇಲೆ ನನ್ನ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದರೆ ವಿಷಾದಿಸುತ್ತೇನೆ. ಎಲುಬು ಇಲ್ಲದ ನಾಲಿಗೆ ಎಂದು ಬಾಯಿಗೆ ಬಂದಿದ್ದನ್ನು ಶಾಸಕರು ಮಾತನಾಡಬಾರದು. ಚಿಲ್ಲರೆ ಮಾತುಗಳನ್ನು ಆಡಬಾರದು. ಹಾಗೇ ಮಾತನಾಡಿದರೆ ಜನರು ನಮ್ಮ ಹಿಡಿತದಲ್ಲಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

  • ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ

    ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ

    ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಚಾರವಾಗಿ ಮಾತನಾಡಿದ್ದ ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಏನು ಅಧಿಕಾರವಿದೆ? ಕ್ಷಮೆ ಕೇಳಲು ಅವರು ಯಾರು? ಅವರಿಗೂ ಲಿಂಗಾಯತ ಧರ್ಮಕ್ಕೂ ಏನು ಸಂಬಂಧ? ಅವರೇನು ಕೆಪಿಸಿಸಿ ಅಧ್ಯಕ್ಷರೇ? ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಸಮುದಾಯದಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ ಎಂದು ಗುಡುಗಿದರು.

    ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ನಾನು ಚುನಾವಣೆಯಲ್ಲಿ ಬಳಸಿಕೊಂಡಿಲ್ಲ. 2018ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಹೇಳಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ಯಾಕೆ ಈ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ? ಈ ವಿಚಾರವಾಗಿ ಈಗ ಮಾತನಾಡಿ ಪಕ್ಷಕ್ಕೆ ಮುಜುಗುರ ಉಂಟು ಮಾಡುವುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಸುದ್ದಿಗೋಷ್ಠಿ ಕರೆದು ಸರಿಯಾದ ಉತ್ತರ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿ.ಕೆ.ಶಿವಕುಮಾರ್ ವಿರುದ್ಧ ಪಕ್ಷದ ನಾಯಕರಿಗೆ, ಹೈಕಮಾಂಡಿಗೆ ದೂರು ನೀಡುತ್ತೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇನೆ. ಸಚಿವರು ಈ ಹಿಂದೆಯೂ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಪ್ರತ್ಯೇಕ ಲಿಂಗಾಯದ ಧರ್ಮದ ವಿಚಾರವಾಗಿ ಕ್ಷಮೆ ಕೇಳಿದ್ದರು. ಇದನ್ನು ಬಳ್ಳಾರಿಯಲ್ಲಿ ಪುನರುಚ್ಛರಿಸಿದ್ದಾರೆ. ಹೀಗೆ ಹೇಳಿಕೆ ನೀಡುವುದ ಹಿಂದೆ ಹಿಡನ್ ಅಜೆಂಡಾ ಇದೆ. ಅಷ್ಟೇ ಅಲ್ಲದೆ ಮೂರು ಬಲವಾದ ಕಾರಣಗಳಿವೆ. ಅದನ್ನು ಚುನಾವಣೆ ಬಳಿಕ ಬಹಿರಂಗ ಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿ.ಕೆ.ಶಿವಕುಮಾರ್ ಹೇಳಿದ್ದೇನು?:
    ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಸೋಮವಾರ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದ್ದರು.

    ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.