Tag: Lingasugur

  • ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಕಾರು ಅಪಘಾತ

    ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಕಾರು ಅಪಘಾತ

    ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್ (Karemma Nayak) ಕಾರು ಅಪಘಾತವಾಗಿರುವ ಘಟನೆ ಲಿಂಗಸುಗೂರು ತಾಲೂಕಿನ ಗುರಗುಂಟಾ ಪಟ್ಟಣದಲ್ಲಿ ನಡೆದಿದೆ.

    ದೇವದುರ್ಗದಿಂದ ಹುಬ್ಬಳ್ಳಿಗೆ ಹೊರಟಿದ್ದ ವೇಳೆ ಅಪಘಾತವಾಗಿದೆ. ಶಾಸಕಿಗೆ ಸಣ್ಣಪುಟ್ಟ ಒಳಪೆಟ್ಟು ಬಿದ್ದಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ತಮ್ಮದೇ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಹುಬ್ಬಳ್ಳಿಗೆ ಮೂರು ಕಾರುಗಳು ಹೊರಟಿದ್ದವು. ಮೂರು ಕಾರುಗಳ ಪೈಕಿ ನಡುವಿನ ಕಾರಿನಲ್ಲಿ ಶಾಸಕಿ ಇದ್ದರು. ತಮ್ಮದೇ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.

  • ರಾಯಚೂರು | ಭಾರೀ ಮಳೆಗೆ ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಾಯ

    ರಾಯಚೂರು | ಭಾರೀ ಮಳೆಗೆ ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಾಯ

    – ಮೈಸೂರಿನಲ್ಲಿ ಮನೆ ಗೋಡೆ ಕುಸಿತ

    ಮೈಸೂರು/ರಾಯಚೂರು: ರಾಯಚೂರು(Raichur) ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು ನಾನಾ ಅವಾಂತರ ಸೃಷ್ಟಿಸಿದೆ. ಲಿಂಗಸುಗೂರು(Lingasugur) ತಾಲೂಕಿನ ಪರಾಂಪುರ ತಾಂಡಾದಲ್ಲಿ ಗಾಳಿಗೆ ಟಿನ್ ಶೆಡ್ ಮನೆ ಕುಸಿದು ಬಿದ್ದು ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.

    ಟಿನ್ ಹಾರಿ ಹೋಗದಂತೆ ಇಟ್ಟಿದ್ದ ಸಿಮೆಂಟ್ ಇಟ್ಟಿಗೆಗಳು ಮೈ ಮೇಲೆ ಬಿದ್ದು ಗಾಯಗಳಾಗಿವೆ. ಪರಾಂಪುರ ತಾಂಡಾದ ನಾರಾಯಣ ಎಂಬುವರ ಟಿನ್ ಶೆಡ್ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ನಾರಾಯಣ ಮತ್ತವರ ಮಗ ಉಮೇಶ್ ಹಾಗೂ ಮೊಮ್ಮಗ ಸಂದೀಪ್‌ಗೆ ಗಾಯಗಳಾಗಿವೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಪುನರಾರಂಭಕ್ಕೆ ಸಂಸದ ಕಾರಜೋಳ ಆಗ್ರಹ

    ಗಾಯಾಳುಗಳನ್ನ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದೆ. ಇದನ್ನೂ ಓದಿ: Bengauru Rains Photo Gallery – ಮತ್ತೆ ಮಳೆಯಾಗಿದೆ…!

    ಮೈಸೂರಿನ ಹಲವೆಡೆ ಧಾರಾಕಾರ ಮಳೆ:
    ಇನ್ನೂ ಮೈಸೂರಿನ(Mysuru) ಹಲವೆಡೆ ಧಾರಾಕಾರ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಜಿಲ್ಲೆಯ ಹುಣಸೂರು(Hunasuru) ತಾಲೂಕು ಕೊಳಘಟ್ಟ ಗ್ರಾಮದ ಕರಗಮ್ಮ ಎಂಬುವವರಿಗೆ ಸೇರಿದ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. ಮಧ್ಯರಾತ್ರಿ ಮನೆಯವರು ಮಲಗಿದ್ದ ವೇಳೆ ಗೋಡೆ ಕುಸಿದಿದ್ದು, ಕೂಡಲೇ ಮನೆಯವರು ಹೊರಬಂದಿದ್ದಾರೆ. ಹೊರ ಬರುತ್ತಿದ್ದಂತೆ ಮನೆಯ ಮೇಲ್ಛಾವಣಿಯೂ ಕುಸಿದಿದೆ. ಸದ್ಯ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದು, ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

  • ರಾಯಚೂರು | ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ರಾಯಚೂರು | ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ರಾಯಚೂರು: ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಕವಿತಾಳ ಗ್ರಾಮದ ಬಳಿ ನಡೆದಿದೆ.

    ಮೃತ ಬೈಕ್ ಸವಾರನನ್ನು ದೇವತಗಲ್ ಗ್ರಾಮದ ನಿವಾಸಿ ರಂಗನಾಥ ನಾಯಕ (35) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಇಂದು ರೈತರ ಪ್ರತಿಭಟನೆ: ದೆಹಲಿ–ನೋಯ್ಡಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

    ಲಿಂಗಸುಗೂರು-ಕವಿತಾಳ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಲಿಂಗಸುಗೂರು ಮೂಲಕ ರಾಯಚೂರಿಗೆ ಬರುತ್ತಿದ್ದ ಬಾದಾಮಿ ಘಟಕಕ್ಕೆ ಸೇರಿದ ವಾಯುವ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಸದ್ಯ ಈ ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗುರ್ಜಾಪುರ ಗ್ರಾಮಸ್ಥರಲ್ಲಿ ಹೆಚ್ಚಿದ ಮೊಸಳೆ ಆತಂಕ:
    ಇನ್ನೂ ಮತ್ತೊಂದು ಘಟನೆಯಲ್ಲಿ ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿಯ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಮೊಸಳೆ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

    ಕೃಷ್ಣಾ ನದಿಯಲ್ಲಿ (Krishna River) ನೀರು ಕಡಿಮೆಯಾದ ಪರಿಣಾಮ ಮೊಸಳೆ ಕಾಟ ಹೆಚ್ಚಾಗಿದ್ದು, ಜನರಲ್ಲಿ ಆತಂಕದ ವಾತಾವರಣ ಶುರುವಾಗಿದೆ. ರಸ್ತೆ ಮೇಲೆ ಬೃಹದಾಕಾರದ ಮೊಸಳೆ ಓಡಾಡುವ ವಿಡಿಯೋ ಒಂದು ವೈರಲ್ ಆಗಿದ್ದು, ಗ್ರಾಮಸ್ಥರು ರಾತ್ರಿ ಒಬ್ಬರೇ ಒಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಾಗ್ಗೆ ಗುರ್ಜಾಪುರ, ಕಾಡ್ಲೂರು ಗ್ರಾಮಸ್ಥರಿಗೆ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು, ಗುರ್ಜಾಪುರ ಬ್ಯಾರೇಜ್ ಸೇತುವೆ ಮೇಲೆ ಓಡಾಡಲು ಬೈಕ್ ಸವಾರರು ಹೆದರಿದ್ದಾರೆ. ರಾತ್ರಿಯಾದರೆ ಗ್ರಾಮಸ್ಥರಲ್ಲಿ ಮೊಸಳೆ ಆತಂಕ ಹೆಚ್ಚಾಗುತ್ತಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ – ಟ್ರಾಫಿಕ್ ಜಾಮ್, ಕಿಲೋ ಮೀಟರ್‌ಗಟ್ಟಲೇ ನಿಂತ ವಾಹನಗಳು

  • ಲಿಂಗಸುಗೂರು; ಮಧ್ಯರಾತ್ರಿ ಸುರಿದ ಭಾರೀ ಮಳೆ – 60 ಮನೆಗಳಿಗೆ ನುಗ್ಗಿದ ನೀರು

    ಲಿಂಗಸುಗೂರು; ಮಧ್ಯರಾತ್ರಿ ಸುರಿದ ಭಾರೀ ಮಳೆ – 60 ಮನೆಗಳಿಗೆ ನುಗ್ಗಿದ ನೀರು

    ರಾಯಚೂರು: ಲಿಂಗಸುಗೂರು (Lingasugur) ಪಟ್ಟಣದಲ್ಲಿ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ (Rain) ಪಟ್ಟಣದ ಪಿಂಚಣಿಪುರ ಓಣಿಯಲ್ಲಿ 60 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

    ಮಧ್ಯರಾತ್ರಿ ಜನ ನಿದ್ರೆಗೆ ಜಾರಿದ್ದ ವೇಳೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿದ್ದು, ಮನೆಯಿಂದ ನೀರು ಹೊರಹಾಕಲು ಜನ ಪರದಾಡಿದ್ದಾರೆ. ಮಳೆ ನೀರಿಂದ ಮನೆಗಳಲ್ಲಿನ ಬಹುತೇಕ ವಸ್ತುಗಳು ಹಾನಿಗೊಳಗಾಗಿವೆ. ಇಷ್ಟೇ ಅಲ್ಲದೇ ರಸ್ತೆಗಳ ಮೇಲೂ ನೀರು ಹರಿಯುತ್ತಿದ್ದು ಜನ ಓಡಾಡಲು ತೀವ್ರ ಹರಸಾಹಸ ಪಡುತ್ತಿದ್ದಾರೆ.

    ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ತಡೆಗೋಡೆಯಿಂದ ಮಳೆ ನೀರು ಮುಂದೆ ಹೋಗದೆ ಮನೆಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ತಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಬೊಲೆರೊದಲ್ಲಿ 15 ಗೋವುಗಳ ಸಾಗಾಟ – ಹಿಂದೂ ಕಾರ್ಯಕರ್ತರಿಂದ ಚಾಲಕನಿಗೆ ತರಾಟೆ

    ಬೊಲೆರೊದಲ್ಲಿ 15 ಗೋವುಗಳ ಸಾಗಾಟ – ಹಿಂದೂ ಕಾರ್ಯಕರ್ತರಿಂದ ಚಾಲಕನಿಗೆ ತರಾಟೆ

    ರಾಯಚೂರು: ಒಂದೇ ಬೊಲೆರೊ (Bolero) ವಾಹನದಲ್ಲಿ 15 ಗೋವುಗಳನ್ನು ಸಾಗಾಟ (Cattle Transportation) ಮಾಡುತ್ತಿದ್ದು, ಹಿಂದೂ ಕಾರ್ಯಕರ್ತರು (Hindu Activists) ವಾಹನ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ರಾಯಚೂರಿನ (Raichur) ಲಿಂಗಸುಗೂರಿನ (Lingasugur) ಗುರಗುಂಟಾದಲ್ಲಿ ನಡೆದಿದೆ.

    ಒಂದರ ಮೇಲೆ ಒಂದು ಹಸುಗಳನ್ನು (Cow) ಹಾಕಿ ಚಿತ್ರಹಿಂಸೆ ನೀಡಿ ಸಾಗಾಣಿಕೆ ಮಾಡಿರುವುದಾಗಿ ಆರೋಪಿಸಿ ಹಿಂದೂ ಕಾರ್ಯಕರ್ತರು ವಾಹನ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುರಪೂರು, ಯಾದಗಿರಿ ಹಾಗೂ ಕಲಬುರಗಿಯಿಂದ ನಿರಂತರ ಗೋವುಗಳ ಸಾಗಾಟ ನಡೆಯುತ್ತಿದ್ದು, ಗೋವುಗಳಿಗೆ ಚಿತ್ರಹಿಂಸೆ ನೀಡಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎದೆ, ತಲೆ ಭಾಗಕ್ಕೆ ತುಳಿದ ಆನೆ- ಪಶ್ಚಿಮ ಬಂಗಾಳದ ಕಾರ್ಮಿಕ ಸಾವು

    ರಾತ್ರೋರಾತ್ರಿ ಕಾನೂನು ವಿರುದ್ಧವಾಗಿ ಸಾಗಾಣಿಕೆ ಮಾಡಿರುವುದಾಗಿ ಆರೋಪಿಸಿದ್ದು, ಹಟ್ಟಿ ಠಾಣೆ ಪೊಲೀಸರು ವಾಹನ ಜಪ್ತಿ ಮಾಡಿ ಗೋವುಗಳನ್ನು ರಕ್ಷಿಸಿದ್ದಾರೆ. ಇನ್ನು ಬೊಲೆರೊ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದು, ಪ್ರಕರಣ ಇನ್ನೂ ದಾಖಲಾಗಿಲ್ಲ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಆಸ್ಪತ್ರೆಯಿಂದ ಮಗು ಕದ್ದು ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್ – ಪೊಲೀಸರ ಕಾರ್ಯಕ್ಕೆ ಸಿಎಂ ಮೆಚ್ಚುಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪನ

    ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪನ

    ರಾಯಚೂರು: ಜಿಲ್ಲೆಯ ಲಿಂಗಸುಗೂರು (Lingasugur) ತಾಲೂಕಿನ ಹಟ್ಟಿ ಚಿನ್ನದ ಗಣಿ (Hutti Gold Mines) ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಕಂಪನ ದಾಖಲಾಗಿದೆ.

    ಅಕ್ಟೋಬರ್ 23 ರಂದು ಬೆಳ್ಳಂಬೆಳಗ್ಗೆ 2:51 ರ ವೇಳೆ ಭೂಮಿ ಕಂಪಿಸಿದೆ ಎಂದು ರಾಜ್ಯ ವಿಪತ್ತು ಮೇಲ್ವಿಚಾರಣಾ ಕೇಂದ್ರ ದೃಢಪಡಿಸಿದೆ. ಹಟ್ಟಿ, ನಿಲೋಗಲ್, ವೀರಾಪುರ, ಗೆಜ್ಜಲಗಟ್ಟಾ ಗ್ರಾಮ ವ್ಯಾಪ್ತಿಯಲ್ಲಿ ಭೂಕಂಪನವಾಗಿದ್ದು, ಈ ಲಘು ಭೂಕಂಪನದಿಂದ ಸದ್ಯ ಯಾವುದೇ ಅಪಾಯವಾಗಿಲ್ಲ. ಗ್ರಾಮಸ್ಥರ ಅನುಭವಕ್ಕೂ ಬಾರದ ಲಘು ಭೂಕಂಪನ (Earthquake) ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

    ಇನ್ನೂ ಭೂಕಂಪದ ಕಾರಣ ಕುರಿತು ತನಿಖೆ ನಡೆದಿದೆ. ಕಲ್ಲುಗಳ ಸ್ಫೋಟದಿಂದಲೂ ಭೂಕಂಪನ ಸಾಧ್ಯತೆಯಿರುತ್ತದೆ. ತನಿಖೆ ಬಳಿಕ ಭೂಕಂಪಿಸಿರುವ ಬಗ್ಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ

    ಆಯುಧಪೂಜೆ ದಿನ ಭೂಮಿ ಕಂಪಿಸಿದೆ. ದೇಶದ ಏಕೈಕ ಜೀವಂತ ಚಿನ್ನದ ಗಣಿ ಹಟ್ಟಿಯಲ್ಲಿ ತುಂಬಾ ಆಳದಲ್ಲಿ ಅಂಡರ್ ಗ್ರೌಂಡ್ ಮೈನಿಂಗ್ ನಡೆಯುತ್ತಿರುವುದರಿಂದ ಈ ಭೂಕಂಪನ ಹಟ್ಟಿ ಹಾಗೂ ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಮೆರಗು ನೀಡಲಿವೆ 49 ವಿಶೇಷ ಸ್ತಬ್ಧ ಚಿತ್ರಗಳು – ಯಾವ್ಯಾವ ಜಿಲ್ಲೆಯಿಂದ ಏನೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಡಿಯುವ ನೀರಿನ ಪೈಪ್‌ಗೆ ಸೇರಿದ ಚರಂಡಿ ನೀರು – ಒಂದು ವಾರದಲ್ಲಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ಕುಡಿಯುವ ನೀರಿನ ಪೈಪ್‌ಗೆ ಸೇರಿದ ಚರಂಡಿ ನೀರು – ಒಂದು ವಾರದಲ್ಲಿ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ರಾಯಚೂರು: ಕಲುಷಿತ ನೀರು (Contaminated Water) ಕುಡಿದು ಕಳೆದ ಒಂದು ವಾರದಿಂದ 50ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasugur) ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ನಡೆದಿದೆ.

    ಆಗಸ್ಟ್ 5ರಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಕುಡಿಯುವ ನೀರಿನ ಪೈಪ್‌ಗೆ ಚರಂಡಿ ನೀರು (Sewage Water) ಸೇರಿದ ಪರಿಣಾಮ ಘಟನೆ ನಡೆದಿದೆ. ಫುಡ್ ಪಾಯಿಸನ್ (Food Poison) ಎಂದುಕೊಂಡು ಗ್ರಾಮದಲ್ಲೇ ಚಿಕಿತ್ಸೆ ಪಡೆದಿದ್ದ ಜನ ವಾಂತಿ, ಭೇದಿ, ಮೈಕೈ ನೋವಿನಿಂದ ಬಳಲುತ್ತಿದ್ದಾರೆ. ಲಿಂಗಸುಗೂರು ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ 20 ಜನ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ತಾನು ಸಾಕಿದ ಗುಂಡಾಗಳಿಂದ ನನ್ನ ಹತ್ಯೆಗೆ ಸಂಚು: ಭಗವಂತ ಖೂಬಾ ವಿರುದ್ಧ ಪ್ರಭು ಚವ್ಹಾಣ್ ಗಂಭೀರ ಆರೋಪ

    ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಅಸ್ವಸ್ಥಗೊಂಡ ಗ್ರಾಮಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ, ಅದು ಕಿರುಬ ಬೆಕ್ಕು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್‍ವೈ

    ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್‍ವೈ

    ರಾಯಚೂರು: ಸಿದ್ದರಾಮಯ್ಯ (Siddaramaiah) ಕಾರಿನ ಮೆಟ್ಟಿಲಿನಿಂದ ಕುಸಿದು ಬಿದ್ದ ವಿಚಾರವಾಗಿ ಟೀಕಿಸುವುದು ಸರಿಯಲ್ಲ, ಅವರು ಆರೋಗ್ಯದಲ್ಲಿ ಚೇತರಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  (B.S Yediyurappa) ಹೇಳಿದ್ದಾರೆ.

    ಲಿಂಗಸೂಗೂರಿನಲ್ಲಿ (Lingasugur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ವಿಚಾರಗಳನ್ನು ಇಟ್ಟುಕೊಂಡು ವ್ಯಕ್ತಿಗಳನ್ನು ಟೀಕಿಸುವುದು ಸರಿಯಾದ ನಡೆಯಲ್ಲ. ಸಿದ್ದರಾಮಯ್ಯ ಅವರು ಸುಧಾರಿಸಿಕೊಳ್ಳಲಿ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಕಾಳಿಂಗ ಸರ್ಪ – ಸುಧಾಕರ್

    ಸಿದ್ದರಾಮಯ್ಯ ಅವರ ಲಿಂಗಾಯತ ಸಮಾಜ ಬಿ.ಎಲ್.ಸಂತೋಷರನ್ನ ವಿರೋಧಿಸುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನಾದರೂ ಹೇಳಲಿ. ಇಡೀ ಲಿಂಗಾಯತ (Lingayat) ಸಮಾಜ ಬಿಜೆಪಿಯ ಜೊತೆಗೆ ಇದೆ. ವಿರೇಂದ್ರ ಪಾಟೀಲ್ ಅವರಿಗೆ ಅಪಮಾನ ಮಾಡಿರುವ ಕಾಂಗ್ರೆಸ್‍ಗೆ ವೀರಶೈವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.

    85 ರಿಂದ 90 ಭಾಗ ವೀರಶೈವರು ನಮ್ಮ ಪರವಾಗಿದ್ದಾರೆ. ಎಲ್ಲಾ ಕಡೆಗಳಲ್ಲೂ ವೀರಶೈವ ಸಮಾಜದ ಮುಖಂಡರಿಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯ: ಯಡಿಯೂರಪ್ಪ ಕಿಡಿ

  • ಬೆಂಗ್ಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವು- ಭಯಭೀತರಾಗಿರುವ ಗ್ರಾಮಸ್ಥರು

    ಬೆಂಗ್ಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವು- ಭಯಭೀತರಾಗಿರುವ ಗ್ರಾಮಸ್ಥರು

    ರಾಯಚೂರು: ಬೆಂಗಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವನ್ನಪ್ಪಿದ ಹಿನ್ನೆಲೆ ಮೃತ ವ್ಯಕ್ತಿಯ ಮನೆ ಹತ್ತಿರ ಸುಳಿಯಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹೆದರಿಕೊಂಡಿರುವ ಘಟನೆ ಲಿಂಗಸೂಗೂರು ತಾಲೂಕಿನ ರೋಡಲಬಂಡಾ ಗ್ರಾಮದಲ್ಲಿ ನಡೆದಿದೆ.

    ಮಲ್ಲಪ್ಪ ತಳವಾರ (54) ಇಂದು ಮಧ್ಯಾಹ್ನ ಬೆಂಗಳೂರಿನಿಂದ ದೇವದುರ್ಗದ ಸೋಮನಮರಡಿ ಗ್ರಾಮದಲ್ಲಿ ತನ್ನ ಮಗಳ ಮನೆಗೆ ಬಂದಿದ್ದರು. ಬಳಿಕ ತನ್ನ ಊರಾದ ಲಿಂಗಸುಗೂರಿನ ರೋಡಲಬಂಡಾಗೆ ಬಂದು ಎರಡು ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ವ್ಯಕ್ತಿ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾನೆಂದು ಭಾವಿಸಿರುವ ಗ್ರಾಮಸ್ಥರು ಭಯಗೊಂಡಿದ್ದಾರೆ.

    ಮೃತ ದೇಹದ ಬಳಿ ಹೋಗಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹಿಂದೇಟು ಹಾಕಿದರು. ಮೃತ ದೇಹವನ್ನು ದೂರದಿಂದಲೇ ವೀಕ್ಷಣೆ ಮಾಡಿದರು. ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಲಿಂಗಸೂಗೂರು ತಾಲೂಕಾ ವೈದ್ಯಾಧಿಕಾರಿ ಡಾ.ನಂದಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವ್ಯಕ್ತಿಯ ಸಾವಿನ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ತಾಲೂಕು ವೈದ್ಯಾಧಿಕಾರಿ, ಲಿಂಗಸುಗೂರು ತಹಶೀಲ್ದಾರ್ ಗ್ರಾಮದಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ. ಜೊತೆಗೆ ಮಲ್ಲಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಕುಟುಂಬಸ್ಥರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.