Tag: Light

  • ಮೊಬೈಲ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ವೈದ್ಯರು

    ಮೊಬೈಲ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ವೈದ್ಯರು

    ಹೈದರಾಬಾದ್: ಗರ್ಭಿಣಿಯೊಬ್ಬರಿಗೆ ವೈದ್ಯರು ಮೊಬೈಲ್ ಬೆಳಕಿನಲ್ಲಿ ಹೆರಿಗೆ ಮಾಡಿಸಿರುವ ಘಟನೆ ಆಂಧ್ರಪ್ರದೇಶದ ನರಸೀಪಟ್ಟಣಂನಲ್ಲಿರುವ ಎಸ್‍ಟಿಆರ್ ಆಸ್ಪತ್ರೆಯಲ್ಲಿ ನಡೆದಿದೆ.

    ನಡೆದಿದ್ದೇನು?: ಗರ್ಭಿಣಿಗೆ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಯಲ್ಲಿ ಕರೆಂಟ್ ಇರಲಿಲ್ಲ. ಇದರಿಂದ ಗರ್ಭಿಣಿ ಕಡೆಯವರಿಗೆ ಆತಂಕ ಎದುರಾಗಿತ್ತು. ಆದರೆ ಆಸ್ಪತ್ರೆಯ ನರ್ಸ್‍ಗಳು ಗರ್ಭಿಣಿಯ ಪತಿಗೆ ಎಷ್ಟು ಸಾಧ್ಯವೋ ಅಷ್ಟು ಮೊಬೈಲ್, ಕ್ಯಾಂಡಲ್ ಟಾರ್ಚ್‍ಲೈಟ್‍ಗಳನ್ನು ಅರೇಂಜ್ ಮಾಡಲು ಹೇಳಿದರು.

    ಕ್ಯಾಂಡಲ್ ಹಾಗೂ ಸಂಬಂಧಿಕರ ಮೊಬೈಲ್‍ಗಳನ್ನು ತಂದು ನರ್ಸ್‍ಗಳು ಕೈಗೆ ಕೊಟ್ಟರು. ಆ ಸೆಲ್‍ಫೋನ್‍ಗಳು, ಕ್ಯಾಂಡಲ್ ಬೆಳಕಿನಿಂದ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದೇವೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.

    ಆಸ್ಪತ್ರೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ರಾತ್ರಿಯಲ್ಲಿ ನಾನು ಟಾರ್ಚ್, ಮೊಬೈಲ್‍ಗಳ ವ್ಯವಸ್ಥೆ ಮಾಡಲು ಬಹಳ ಪರದಾಡಬೇಕಾಯಿತು. ಆಸ್ಪತ್ರೆಯಲ್ಲಿ ಇಷ್ಟು ರಾತ್ರಿ ವೇಳೆ ಆ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಬೇಕಾ? ಅಥವಾ ಆಸ್ಪತ್ರೆಯವರು ಅದಕ್ಕೆ ಮುಂಚಿತವಾಗಿ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕಾ? ಆ ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮಾತ್ರವಲ್ಲ. ಇತರ ಮಹಿಳೆಯರೂ ಇದ್ದರು. ಎಲ್ಲರೂ ನರಳುತ್ತಿದ್ದರು. ಅದನ್ನು ಕಂಡು ನನಗೆ ಹೆದರಿಕೆಯಾಗಿತ್ತು. ನನ್ನ ಹೆಂಡತಿ ಮತ್ತು ಮಗುವಿನ ಪ್ರಾಣದ ಬಗ್ಗೆ ನನಗೆ ಬಹಳ ಭಯವಾಗಿತ್ತು ಎಂದು ಆ ಗರ್ಭಿಣಿಯ ಪತಿ ಖಾಸಗಿ ವಾಹಿನಿ ಜೊತೆಗೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನದಿಗೆ ಹಾರಿ ಅರಣ್ಯಾಧಿಕಾರಿ ಆತ್ಮಹತ್ಯೆ? 

    ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ಘಟನೆ ವರದಿಯಾಗಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಆಂಧ್ರಪ್ರದೇಶದ ವಿದ್ಯುತ್ ಇಲಾಖೆಯು ಶೇ. 50ರಷ್ಟು ವಿದ್ಯುತ್ ಕಡಿತವನ್ನು ಘೋಷಿಸಿದೆ. ಆಂಧ್ರಪ್ರದೇಶವು ದಿನಕ್ಕೆ ಸುಮಾರು 5 ಲಕ್ಷ ಯೂನಿಟ್ ಕೊರತೆಯನ್ನು ಎದುರಿಸುತ್ತಿದೆ. ಇದು ಸುದೀರ್ಘ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಭುವನ ಸುಂದರಿ ಶ್ರೀದೇವಿ ಮಗಳು ಈಗ ಬ್ಯಾಕ್‍ಲೆಸ್ ಸುಂದರಿ 

    ಆಸ್ಪತ್ರೆಗೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಬೆಂಗಳೂರು: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿಯಲ್ಲಿ ಸಂಜೆಯ ವೇಳೆ ದಿಢೀರ್ ಬೆಳಕು ಮೂಡಿದ ವಿಚಾರ ಸಂಬಂಧ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದರೆ ನೋಡಿದವರು ನಮ್ಮ ಗ್ರಾಮದಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಬೆಳಕಿನ ಕುರಿತು ಚರ್ಚೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿಯೂ ಈ ರೀತಿಯಾಗಿ ಬೆಳಕು ಮೂಡುವ ಸಾಧ್ಯತೆಯಿದೆ ಎನ್ನುವ ಮಾತು ಈಗ ಕೇಳಿ ಬಂದಿದೆ.

    ನಡೆದಿದ್ದು ಏನು?
    ಕಳೆದ ವಾರದ ಪಾಂಡವಪುರ ಭಾಗದಲ್ಲಿ ಭಾರೀ ಸದ್ದು ಕೇಳಿತ್ತು. ಇದಾದ ಮೂರು ದಿನದಲ್ಲಿ ಹೆರಗನಹಳ್ಳಿಯಲ್ಲಿ ಸಂಜೆ 7:15ಕ್ಕೆ ದಿಢೀರ್ ಬೆಳಕು ಕಾಣಿಸಿದೆ. ಸುಮಾರು 5 ನಿಮಿಷಗಳ ಕಾಲ ಈ ಬೆಳಕು ಇತ್ತು. ಬೆಳಗಿನ ಜಾವ ಬೆಳಕು ಹೇಗೆ ಇರುತ್ತದೋ ಅದೇ ರೀತಿಯಾಗಿ ಸಂಜೆಯೂ ಕಾಣಿಸಿತ್ತು. ಈ ರೀತಿ ಆಗಿರುವುದು ಇದೇ ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಅಚ್ಚರಿಗೆ ಕಾರಣವಾದ ಈ ಘಟನೆ ನಿಜವಾಗಿಯೇ ನಡೆಯಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ  ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ. ಕಮಲಾ ಅವರನ್ನು ಸಂಪರ್ಕಿಸಿದ್ದು ಅವರು ಮಂಡ್ಯದ ಬೆಳಕನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.

    ವೈಜ್ಞಾನಿಕ ವಿಶ್ಲೇಷಣೆ ಏನು?
    ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮ ಬದುಕಿನೊಂದಿಗೆ ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಿದ್ಯಮಾನಗಳು. ಈ ಎರಡೂ ಘಟನೆಗಳು ಕ್ಷಿತಿಜದಂಚಿನಲ್ಲಿ ನಡೆಯುತ್ತಿರುತ್ತದೆ. ಇವೆರಡರೊಂದಿಗೆ ಬೆಸೆದಿರುವ ವಿದ್ಯಮಾನಗಳು ಮುಂಜಾನೆ ಮತ್ತು ಮುಸ್ಸಂಜೆ.

    ಸೂರ್ಯ ಕ್ಷಿತಿಜದಂಚಿನಲ್ಲಿ ಮರೆಯಾದ ನಂತರವೂ ಸುಮಾರು 18 ಡಿಗ್ರಿಗಳಷ್ಟು ಕೆಳಗಿಳಿಯುವ ತನಕ ಸೂರ್ಯನಿಂದ ಬೆಳಕು ಸ್ಪರ್ಷಕವಾಗಿ (Tangential) ಬರುತ್ತಿರುತ್ತದೆ. ಇದು ಸುಮಾರು 45 – 50 ನಿಮಿಷ ಬರುತ್ತಿರುತ್ತದೆ. ಈ ರೀತಿ ಬಂದ ಬೆಳಕು ನಿರ್ದಿಷ್ಟ ದಿಕ್ಕಿನಲ್ಲಿ ಮೋಡಗಳ ಮೇಲೆ ಬಿದ್ದಾಗ ಅಲ್ಲಿನ ವಾತಾವರಣವನ್ನನುಸರಿಸಿ ಪ್ರತಿಫಲಿತವಾಗುತ್ತದೆ. ಈ ಪ್ರತಿಫಲಿತ ಬೆಳಕು ಮಂಡ್ಯದ ಕೆಲ ಹಳ್ಳಿಗಳ ಮೇಲಾಗಿದೆ.

    ಭೂಮಿಯ ಮೇಲಿನ ವಿವಿಧ ಪ್ರದೇಶಗಳು ಅಲ್ಲಿನ ಸೂರ್ಯಾಸ್ತದ ಸಮಯ ಇತ್ಯಾದಿ ಅಂಶಗಳ ಆಧಾರದ ಮೇಲೆ ಇದನ್ನು ವಿವರಿಸಲಾಗುತ್ತದೆ. ಧ್ರುವ ಪ್ರದೇಶಗಳೆಡೆಗೆ ಸಾಗಿದಂತೆ ಈ ವಿದ್ಯಮಾನ ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನು ಉಲ್ಕೆಯ ಸಿದ್ಧಾಂತದ ಆಧಾರದ ಮೇಲೂ ವಿವರಣೆಗಳು ನಡೆಯುತ್ತಿವೆ. ಈ ಕಾರಣದಿಂದ ಮಂಡ್ಯದ ಗ್ರಾಮದಲ್ಲಿ ಬೆಳಕು ಕಾಣಿಸಿರಬಹುದು.  ಇನ್ನಿತರ ವಿವರಣೆಗಳಿಗೆ ಮುಂದೆ ಕಾಯೋಣ.

  • ಲೈಟ್ ಆಫ್ ಮಾಡದ್ದಕ್ಕೆ ಮಸೀದಿಗೆ ನುಗ್ಗಿ ಗಲಾಟೆ – 22 ಮಂದಿ ಬಂಧನ

    ಲೈಟ್ ಆಫ್ ಮಾಡದ್ದಕ್ಕೆ ಮಸೀದಿಗೆ ನುಗ್ಗಿ ಗಲಾಟೆ – 22 ಮಂದಿ ಬಂಧನ

    ಚಿಕ್ಕೋಡಿ: ನಿನ್ನೆ ರಾತ್ರಿ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರೂ ಲೈಟ್ ಆಫ್ ಮಾಡದ್ದಕ್ಕೆ ಮಸೀದಿಗೆ ನುಗ್ಗಿ ಗಲಾಟೆ ಮಾಡಿದ ಘಟನೆ ಯಮಕನಮರಡಿ ಹಾಗೂ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಲೈಟ್ ಆನ್ ಇದೆ ಎಂದು ಮಸೀದಿಗೆ ನುಗ್ಗಿ ಗಲಾಟೆ ಮಾಡಿದ್ದ 9 ಜನರ ಗುಂಪನ್ನ ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿ ಮಸೀದಿಯಲ್ಲಿ ಗಲಾಟೆ ಮಾಡಿದ 13 ಜನರ ಗುಂಪನ್ನ ಸದಲಗಾ ಪೊಲೀಸರು ಬಂಧಿಸಿದ್ದಾರೆ.

    ಮಸೀದಿಯಲ್ಲಿ ಗಲಾಟೆ ಮಾಡಿ ಶಾಂತಿ ಕದಡುವ ಯತ್ನ ನಡೆಸಿದ್ದ ದುಷ್ಕರ್ಮಿಗಳು ಅಂದರ್ ಆಗಿದ್ದು, ಪ್ರತ್ಯೇಕ 2 ಪ್ರಕರಣಗಳಲ್ಲಿ ಒಟ್ಟು 22 ಜನರನ್ನ ಪೊಲೀಸರು ಬಂಧಿಸಿದ್ದಾರೆ.

    ಪ್ರಧಾನಿ ಮೋದಿ ಕೊರೊನಾ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಹೀಗಾಗಿ ಭಾನುವಾರ ರಾತ್ರಿ 9 ಗಂಟೆಗೆ ಲೈಟ್ ಆಫ್ ಮಾಡಿ ದೀಪ/ ಕ್ಯಾಂಡಲ್ ಲೈಟ್/ ಮೊಬೈಲ್ ಟಾರ್ಚ್ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದ್ದರು. ಮೋದಿ ಜನರಲ್ಲಿ ಮನವಿ ಮಾಡಿದ್ದರೆಯೇ ಹೊರತು ಕಡ್ಡಾಯವಾಗಿ ಲೈಟ್ ಆಫ್ ಮಾಡಬೇಕೆಂದು ಸೂಚಿಸಿರಲಿಲ್ಲ.

  • ಪ್ರಧಾನಿ ಮೋದಿ ಕರೆಗೆ ಪಾಕಿಸ್ತಾನದಲ್ಲೂ ಬೆಳಗಿತು ದೀಪ

    ಪ್ರಧಾನಿ ಮೋದಿ ಕರೆಗೆ ಪಾಕಿಸ್ತಾನದಲ್ಲೂ ಬೆಳಗಿತು ದೀಪ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಮೂಡಿಸಿರುವ ಅಂಧಕಾರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಆಂದೋಲನದ ಬೆಳಕು ದೇಶಾದ್ಯಂತ ಅಷ್ಟೇ ಅಲ್ಲದೆ ಪಾಕಿಸ್ತಾನದಲ್ಲೂ ಪ್ರಕಾಶಿಸಿದೆ.

    ಪಾಕಿಸ್ತಾನದಲ್ಲಿರುವ ಭಾರತದ ರಾಯಬಾರ ಕಚೇರಿಯ ಸದಸ್ಯರು ದೀಪಗಳನ್ನು ಬೆಳಗಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟವನ್ನು ಗುರುತಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ 9 ಗಂಟೆಗೆ ಎಲ್ಲಾ ಮನೆಗಳ ದೀಪಗಳನ್ನು 9 ನಿಮಿಷಗಳ ಕಾಲ ಸ್ವಿಚ್ ಆಫ್ ಮಾಡಿ ಮತ್ತು ಮೇಣದ ಬತ್ತಿ, ದೀಪ ಅಥವಾ ಮೊಬೈಲ್‍ನ ಬ್ಯಾಟರಿ ದೀಪವನ್ನು ಬೆಳಗಿಸಬೇಕೆಂದು ಎಲ್ಲರಿಗೂ ಮನವಿ ಮಾಡಿದ್ದರು. ಅದರಂತೆ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆ, ವಿವಿಧ ಸಂಸದರು, ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ಕ್ರೀಡಾಪಟುಗಳು ಹಾಗೂ ಜನ ಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ತಮ್ಮ ನಿವಾಸದಲ್ಲಿ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮಣ್ಣಿನ ದೀಪವನ್ನು ಬೆಳಗಿಸಿದ್ದಾರೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ರಾತ್ರಿ 9 ಗಂಟೆಗೆ ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ಸಾಮೂಹಿಕ ಒಗ್ಗಟ್ಟು ಮತ್ತು ಸಕಾರಾತ್ಮಕತೆಯನ್ನು ಪ್ರದರ್ಶಿಸುವಲ್ಲಿ ನಾಗರಿಕರೊಂದಿಗೆ ಸೇರಿಕೊಂಡರು.

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ನಿವಾಸದಲ್ಲಿ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮಣ್ಣಿನ ದೀಪಗಳನ್ನು ಬೆಳಗಿಸಿದರು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಅರ್ಜುನ್ ರಾಂಪಾಲ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ರಜನಿಕಾಂತ್, ಆಲಿಯಾ ಭಟ್, ಕೃತಿ ಸನೋನ್ ಮತ್ತು ರವೀನಾ ಟಂಡನ್ ಸೇರಿದಂತೆ ಅನೇಕರು ತಮ್ಮ ಮನೆಗಳಲ್ಲಿ ಮೇಣದಬತ್ತಿಗಳನ್ನು ಹಚ್ಚಿದರು.

  • ಕೊರೊನಾ ತೊಲಗಿಸಲು ದೀಪ ಬೆಳಗೋಣ- ಜಾಗೃತಿ ಹಾಡು ಹೇಳಿದ ಖಾಸೀಂ ಅಲಿ

    ಕೊರೊನಾ ತೊಲಗಿಸಲು ದೀಪ ಬೆಳಗೋಣ- ಜಾಗೃತಿ ಹಾಡು ಹೇಳಿದ ಖಾಸೀಂ ಅಲಿ

    ಹಾವೇರಿ: ಕೊರೊನಾ ಕುರಿತು ಸಾಕಷ್ಟು ಜನ ಜಾಗೃತಿ ಗೀತೆಗಳನ್ನು ಹಾಡಿದ್ದು, ಇದೀಗ ಕನ್ನಡ ಕೋಗಿಲೆ ಖ್ಯಾತಿಯ ಖಾಸೀಂ ಅಲಿ ಸಹ ತಮ್ಮದೇ ಶೈಲಿಯಲ್ಲಿ ಹಾಡು ಹೇಳುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಕರೆ ನೀಡಿರುವ ದೀಪದ ಅಭಿಯಾನ ಬೆಂಬಲಿಸುವಂತೆ ಕರೆ ನೀಡಿದ್ದಾರೆ.’

    ಕೊರೊನಾ ವೈರಸ್‍ನ್ನು ಒಟ್ಟಾಗಿ ಎದುರಿಸುವ ಸಂದೇಶ ಸಾರಲು ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಿಸಲು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೀಪ ಬೆಳಗಿಸುವ ಕುರಿತು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರಳಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ಹಾಡು ಬರೆದಿದ್ದಾರೆ. ಶಿಕ್ಷಕ ನಿಂಗಪ್ಪ ಸಾಳಂಕಿ ಅವರು ಬರೆದಿರುವ ಹಾಡಿಗೆ ಕನ್ನಡ ಕೋಗಿಲೆ ಖ್ಯಾತಿಯ ಖಾಸೀಂ ಅಲಿ ಹಾಡಿದ್ದಾರೆ.

    ಬೆಳಗಲಿ, ಬೆಳಗಲಿ ಕೈಲಿ ದೀಪವು ತೊಲಗಲಿ, ತೊಲಗಲಿ ಕೆಟ್ಟ ರೋಗವು ಎಂದು ಖಾಸೀಂ ಹಾಡಿರುವ ಹಾಡು ಸಖತ್ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೊರೊನಾ ತೊಲಗಿಸಲು ದೀಪ ಬೆಳಗೋಣ ಎನ್ನುವ ಸಂದೇಶ ಸಾರುವ ಹಾಡನ್ನು ಶಿಕ್ಷಕ ನಿಂಗಪ್ಪ ಬರೆದಿದ್ದು, ಖಾಸೀಂ ಅಲಿ ತಮ್ಮದೇ ಧ್ವನಿಯಲ್ಲಿ ಹಾಡಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಕರೆ ನೀಡಿರುವ ದೀಪದ ಅಭಿಯಾನದಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ. ಈ ಹಾಡು ಫೇಸ್ಬುಕ್, ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

    ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಹವಾಮಾನ ಮತ್ತು ಸಮುದ್ರದ ವಾತಾವರಣದಲ್ಲಿ ಬದಲಾವಣೆಯಿಂದಾಗಿ ಸಮುದ್ರದಲ್ಲಿ ಸೃಷ್ಟಿಯ ವೈಚಿತ್ರಗಳು ನಡೆಯುತ್ತಿದೆ. ಕಾರವಾರದ ಗೋವಾ ಗಡಿಗೆ ಅಂಟಿಕೊಂಡಿರುವ ಮಾಜಾಳಿ ಕಡಲ ಬಳಿ ಅಲೆಗಳಲ್ಲಿ ಮಿಂಚಿನ ಬೆಳಕು ಕಾಣತೊಡಗಿದೆ.

    ರಾತ್ರಿ ವೇಳೆ ಬೆಳಕು ಗೋಚರವಾಗುತ್ತಿದ್ದು, ಮಾಜಾಳಿಯಿಂದ ಕಪ್ಪು ಮರಳಿನ ಸಮುದ್ರ ಎಂದೇ ಪ್ರಸಿದ್ಧವಾಗಿರುವ ತಿಳಮಾತಿ ಕಡಲತೀರದವರೆಗೂ ಆವರಿಸಿದೆ. ಕಳೆದ ಒಂದು ವಾರದಿಂದ ಸಮುದ್ರದಲ್ಲಿ ಈ ಬೆಳವಣಿಗೆ ಕಾರಣವಾಗುತ್ತಿದೆ. ಈ ಬದಲಾವಣೆಯನ್ನು ಧಾರವಾಡ ವಿಶ್ವವಿದ್ಯಾನಿಲಯದ ಕಡಲ ಜೀವಶಾಸ್ತ್ರಜ್ಞ  ಶಿವಕುಮಾರ್ ಹರಗಿರವರು ಗುರುತಿಸಿದ್ದಾರೆ.

    ಅಲೆಗಳಲ್ಲಿ ಬೆಳಕು ಮೂಡುತ್ತಿರಲು ಕಾರಣವೇನು?
    ಸಮುದ್ರದಲ್ಲಿ ಮಲೀನದಿಂದಾಗಿ ನಾಕ್ಟುಲುಕ ಸೆಂಟನೆಲ್ಸ್ (noctiluca seintillans)ಎಂಬ ಪಾಚಿ ಹೇರಳವಾಗಿ ಬೆಳೆದಿದೆ. ಇದು ರಾತ್ರಿ ವೇಳೆ ಸಮುದ್ರದಲ್ಲಿ ಮಿಂಚಿನಂತೆ ಕಾಣುತಿದ್ದು, ಬೆಳಕನ್ನು ಹೊರಸೂಸುತ್ತಿದೆ. ತನ್ನಲ್ಲಿ ಬೆಳಕನ್ನು ಸೂಸುವ ಶಕ್ತಿ ಹೊಂದಿರುವ ಇದು ಸಮುದ್ರಕ್ಕೆ ಸೇರುವ ತ್ಯಾಜ್ಯಗಳ ಖನಿಜಾಂಶದಿಂದ ಹೆಚ್ಚು ಬೆಳೆದಿದೆ. ಈ ಹಿಂದೆ 2011ರಲ್ಲಿ ಮಂಗಳೂರಿನಲ್ಲಿ, 2017ರಲ್ಲಿ ಉಡುಪಿ, ಕಾರವಾರದ ಕಡಲತೀರದ ಬಳಿ ಹೇರಳವಾಗಿ ಕಾಣಿಸಿಕೊಂಡಿದ್ದವು. ಇವು ಹೆಚ್ಚಾದಾಗ ಸಮುದ್ರ ಹಸಿರಿನಂತೆ ಕಂಗೊಳಿಸುತ್ತವೆ.

    ಮೀನುಗಾರಿಕೆಗೂ ಬೀರಲಿದೆ ಇದರ ಪರಿಣಾಮ!
    ಜಿಲ್ಲೆಯ ಮೀನುಗಾರರು ಈಗಾಗಲೇ ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದಾರೆ. ಈ ಸಸ್ಯಗಳು ಬೆಳೆದಿದ್ದರಿಂದ ಮೀನುಗಾರಿಕೆ ಮೇಲೂ ಪರಿಣಾಮ ಬೀರುವ ಜೊತೆಗೆ ಮಾರಕವಾಗಿದ್ದು, ಪರಿಸರದ ಅಸಮತೋಲನಕ್ಕೆ ಸಾಕ್ಷಿಯಾಗಿದೆ ಎಂಬುದು ಸಂಶೋಧನೆ ನಿರತ ಕಡಲ ಜೀವಶಾಸ್ತ್ರಜ್ಞ ಡಾ.ಶಿವಕುಮಾರ್ ಹರಗಿ ರವರ ಅಭಿಪ್ರಾಯವಾಗಿದೆ.

    ಈ ಪಾಚಿಗಳು ಬೆಳೆಯುವುದರಿಂದ ಮೀನುಗಳು ದೂರ ಹೋಗುತ್ತದೆ ಇದು ಮತ್ಸ್ಯ ಕ್ಷಾಮದ ಸೂಚನೆ. ಈ ಪಾಚಿ ಸಸ್ಯ ಆಕ್ಸಿಜನ್ ತೆಗೆದುಕೊಂಡು ಬೆಳಕನ್ನು ಹೊರಸೂಸುತ್ತದೆ. ದಕ್ಷಿಣ ಕರಾವಳಿಯಲ್ಲಿ ಹೆಚ್ಚು ಪತ್ತೆಯಾಗುತ್ತಿದೆ. ಆಹಾರ ಸಿಕ್ಕಾಗ ಅತಿಯಾಗಿ ಬೆಳೆಯುತ್ತದೆ. ತ್ಯಾಜ್ಯ ಹೆಚ್ಚು ಸಮುದ್ರ ಸೇರುವುದರಿಂದ ಇವು ಹೆಚ್ಚು ಬೆಳೆಯುತ್ತದೆ. ತ್ಯಾಜ್ಯದ ಖನಿಜಾಂಶ ಹಾಗೂ ಸೂರ್ಯನ ಬೆಳಕು ಇವುಗಳ ಆಹಾರ. ಪಶ್ಚಿಮ ಕರಾವಳಿಯಲ್ಲಿ ಆಗುತ್ತಿರುವ ಹೆಚ್ಚಿನ ಮಾಲಿನ್ಯ ಇವುಗಳ ಬೆಳವಣಿಗೆಗೆ ಕಾರಣವಾಗಿದೆ.

    ಸದ್ಯ ಕಾರವಾರದ ಸಮುದ್ರದಲ್ಲಿ ಈ ಪಾಚಿಗಳು ಎರಡು ಮೂರು ದಿನ ಉಳಿಯಬಹುದು. ಯಾಕೆಂದರೆ ಬೇಸಿಗೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಪಾಚಿ ಬೆಳೆಯುತ್ತಿದೆ. ಏಳು ದಿನ ಇವು ಬದುಕುತ್ತವೆ. ನಂತರ ಎರಡುಪಟ್ಟಾಗಿ ಬೆಳೆಯುತ್ತದೆ. ಇವುಗಳಲ್ಲಿ ರೆಡ್, ಗ್ರೀನ್ ಟೈಡ್ ಎಂಬ ಜಾತಿಯ ಪ್ರಭೇದ ಪಾಚಿಗಳಿವೆ. ಇವುಗಳು ಟಾಕ್ಸಿನ್ ಹೆಚ್ಚು ಉತ್ಪತ್ತಿ ಮಾಡುತ್ತದೆ. ಕೆಲವೊಮ್ಮೆ ಇವುಗಳು ಉಪಯುಕ್ತವಾದರೆ ಹಲವು ಬಾರಿ ಮಾರಕವಾಗಿ ಪರಿಣಮಿಸುತ್ತದೆ ಎಂಬುದು ಸಂಶೋಧಕರ ಮಾತು.

    ಮೀನುಗಾರರಲ್ಲಿ ಹುಟ್ಟಿದ ಭಯ?
    ಕಳೆದ ಹಲವು ದಿನದಿಂದ ಸಮುದ್ರದಲ್ಲಿ ಆಗುವ ಈ ಬೆಳವಣಿಗೆ ಮೀನುಗಾರರಲ್ಲಿ ಭಯ ಮೂಡಿಸಿದೆ. ಸ್ಥಳೀಯ ಮೀನುಗಾರರು ಹೇಳುವಂತೆ ಈ ರೀತಿ ಮಿಂಚುಗಳ ಬೆಳಕು ಬಂದರೆ ಸಮುದ್ರದಲ್ಲಿ ಮೀನುಗಳು ಬರುವುದಿಲ್ಲ ಎಂದಿದ್ದಾರೆ.

    ಸಂಶೋಧಕರು ಕೂಡ ಇದನ್ನು ಪುಷ್ಟಿಕರಿಸಿದ್ದು, ಸಮುದ್ರಕ್ಕೆ ಮಲೀನ ನೀರುಗಳು ಅತಿ ಹೆಚ್ಚು ಸೇರುತ್ತಿದೆ. ಇದರಿಂದಾಗಿ ಈ ಪಾಚಿಗಳು ಹೇರಳವಾಗಿ ಬೆಳೆಯಲು ಕಾರಣವಾಗಿದೆ. ಇದು ಸಮುದ್ರದ ವಾತಾವರಕ್ಕೆ ಪೂರಕವಾಗಿಲ್ಲ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎನ್ನುತ್ತಾರೆ. ಕಳೆದ ಒಂದು ವರ್ಷಗಳಿಂದ ಜಿಲ್ಲೆಯ ಕರಾವಳಿ ಭಾಗದ ಸಮುದ್ರ ಭಾಗದಲ್ಲಿ ನೈಸರ್ಗಿಕ ಬದಲಾವಣೆ ಹೆಚ್ಚಾಗುತ್ತಿದೆ.

  • ಹಬ್ಬದ ಮೊದ್ಲೇ ದೀಪಾವಳಿಯನ್ನು ಬರಮಾಡಿಕೊಂಡ ಬೆಂಗ್ಳೂರು ಮಂದಿ

    ಹಬ್ಬದ ಮೊದ್ಲೇ ದೀಪಾವಳಿಯನ್ನು ಬರಮಾಡಿಕೊಂಡ ಬೆಂಗ್ಳೂರು ಮಂದಿ

    ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಆದರೆ ಈಗಾಗಲೇ ಬೆಂಗಳೂರಿನವರು ದೀಪಾವಳಿ ಹಬ್ಬವನ್ನು ಬರಮಾಡಿಕೊಂಡಿದ್ದಾರೆ.

    ವೈಶಿಷ್ಟ್ಯಪೂರ್ಣ ದೀಪಾವಳಿ ಹಬ್ಬದ ಪ್ರಯುಕ್ತ ದೀಪಗಳ ಪ್ರದರ್ಶನವನ್ನು ಗರುಡಾ ಮಾಲ್ ಆಯೋಜಿಸಿದೆ. ಮಣ್ಣಿನ ಹಾಗೂ ಎಲೆಕ್ಟ್ರಿಕಲ್ ದೀಪಗಳಿಂದ ಝಗಮಗಿಸುವ ಮೈಸೂರು ಪ್ಯಾಲೆಸ್ ನ ರೇಪ್ಲಿಕಾವೂ ಎಲ್ಲರನ್ನೂ ಸ್ವಾಗತಿಸುತ್ತಿದೆ. 10 ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

    ದೀಪಾವಳಿ ಹಬ್ಬಕ್ಕೆ ಇಲ್ಲಿಗೆ ಶಾಪಿಂಗ್ ಬಂದ ಗ್ರಾಹಕರು, ಹಬ್ಬದ ವಾತಾವರಣ ನೋಡಿ ಫುಲ್ ಖುಷ್ ಆಗಿದ್ದು ಕಂಡು ಬಂತು. ಈ ರೀತಿಯ ಅಲಂಕಾರವನ್ನು ನಾವು ಎಲ್ಲಿಯೂ ನೋಡಲು ಸಾಧ್ಯವಿಲ್ಲ, ನಮಗೆ ತುಂಬಾ ಖುಷಿಯಾಗುತ್ತಿದೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದರು.

    ಸದ್ಯ ದೀಪಗಳ ಹಬ್ಬ ದೀಪಾವಳಿ ಬೆಂಗಳೂರಿನಲ್ಲಿ ಕಳೆಗಟ್ಟುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಮಿಳುನಾಡಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ರು ದರ್ಶನ್

    ತಮಿಳುನಾಡಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ರು ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶನಿವಾರ ತಮಿಳುನಾಡಿನ ತಿರುನಲ್ಲರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

    ಮಗ ವಿನೀಶ್ ಮತ್ತು ಕೆಲವು ಸ್ನೇಹಿತರ ಜೊತೆ ಜನಸಾಮಾನ್ಯರಂತೆ ದೇವಸ್ಥಾನಕ್ಕೆ ಭೇಟಿ ನೀಡಿದ ದರ್ಶನ್ ಭಕ್ತಿಯಿಂದ ಕಣ್ಮುಚ್ಚಿ ಕೈ ಮುಗಿದರು. ಕಡು ನೀಲಿ ವರ್ಣದ ಉಡುಪು ಧರಿಸಿ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್ ಹರಕೆ ತೀರಿಸಿದರು. ದೀಪದ ಎಣ್ಣೆಯ ತುಲಾಭಾರ ಹರಕೆ ಪೂರೈಸಿದರು.

    ವರ್ಷಕ್ಕೊಮ್ಮೆ ಆದರೂ ದರ್ಶನ್ ತಿರುನಲ್ಲರ್ ಶನಿ ದೇವಸ್ಥಾನಕ್ಕೆ ಭೇಟಿ ನೀಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಕಾರು ಅಪಘಾತದಲ್ಲಿ ಬಲಗೈಗೆ ಗಾಯವಾಗಿದ್ದ ಕಾರಣ ಇದೀಗ ವಿಶ್ರಾಂತಿಯಲ್ಲಿರುವ ದರ್ಶನ್ ಕೈ ಗಾಯದ ನಡುವೆಯೂ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು.

    ಇತ್ತೀಚೆಗೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ರಾಕ್‍ಲೈನ್ ವೆಂಕಟೇಶ್ ಅವರ ಜೊತೆ ಸೇರಿ ದರ್ಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆ ಪಾರಿವಾಳ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ್ದರು.

    ಮುರುಘಾಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರುತ್ತಿದ್ದಂತೆ ಮಠದ ಆನೆ ಬಗ್ಗೆ ವಿಚಾರಿಸಿದ್ದರು. ಅಲ್ಲದೇ ಆನೆಯ ಆರೋಗ್ಯದ ಬಗ್ಗೆಯೂ ವಿಚಾರಿಸಿ ತಿಂಡಿ ಏನು ಕೊಟ್ಟಿದ್ದೀರಿ ಎಂದು ಮಾವುತರಿಗೆ ಕೇಳಿದ್ದರು. ಅಷ್ಟೇ ಅಲ್ಲದೇ ಆನೆಯ ದಂತವನ್ನು ಕೈಯಿಂದ ಮುಟ್ಟಿ ನೋಡಿ ಚೆನ್ನಾಗಿದೆ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಗ್ರಾಮಸ್ಥರು!

    ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಗ್ರಾಮಸ್ಥರು!

    ಕಾರವಾರ: ಹಳ್ಳದಲ್ಲಿ ಎದೆ ಮಟ್ಟದ ನೀರು ಹರಿಯುತ್ತಿದ್ದರೂ, ಊರಿನ ಕತ್ತಲು ಓಡಿಸಲು ಮಳೆಯ ಆರ್ಭಟವನ್ನೂ ಲೆಕ್ಕಿಸದೇ ಗ್ರಾಮಸ್ಥರು ಜೀವದ ಹಂಗು ತೊರೆದು ತುಂಬಿ ಹರಿಯುತ್ತಿದ್ದ ಹೊಳೆಯ ನೀರಿನಲ್ಲೇ ಕಂಬವನ್ನು ಹೊತ್ತೊಯ್ದು ಗ್ರಾಮಕ್ಕೆ ಬೆಳಕು ತಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ನಡೆದಿದೆ.

    ಅಂಕೋಲ ತಾಲೂಕಿನ ಕಟ್ಟಿನಕಲು ಗ್ರಾಮದ ಕೋಟೇಪಾಲ್, ಕುಣಬೇರಕೇರಿ, ಬೇರೂಳ್ಳಿ, ಮತಿನಮತ್ತಿಯ ಸುತ್ತಮುತ್ತಲ ಗ್ರಾಮದಲ್ಲಿ ಕಳೆದ 8 ದಿನಗಳಿಂದ ಮಳೆಗೆ ಕಂಬದ ಮೇಲೆ ಮರ ಉರುಳಿ ವಿದ್ಯುತ್ ವ್ಯತ್ಯಯವಾಗಿತ್ತು. ಹೆಸ್ಕಾಂಗೆ ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಮಾತ್ರ ಸ್ಪಂದಿಸಲಿಲ್ಲ.

    8 ದಿನಗಳಿಂದ ಕತ್ತಲಲ್ಲಿದ್ದ ಜನರು ಹೆಸ್ಕಾಂ ಅಧಿಕಾರಿಗಳ ಧೋರಣೆಗೆ ಬೇಸತ್ತು ಊರ ಜನರೇ ಮುರಿದು ಹೋದ ಕಂಬಗಳನ್ನು ಹೊಸದಾಗಿ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ರಭಸವಾಗಿ ಎದೆ ಮಟ್ಟಕ್ಕೆ ಹರಿಯುತಿದ್ದ ಹಳ್ಳದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 63 ರಿಂದ ಮೂರು ಕಿ.ಮೀ ದೂರವಿರುವ ಹಿರಿಹಳ್ಳದ ಮೂಲಕ ಕಂಬಗಳನ್ನು ತಮ್ಮ ಗ್ರಾಮಕ್ಕೆ ಹೊತ್ತೂಯ್ದಿದಾರೆ.

    ಕಂಬಗಳು ಮುರಿದ ಜಾಗದಲ್ಲಿ ನೆಟ್ಟು ತಮ್ಮ ಗ್ರಾಮಗಳಿಗೆ ಬೆಳಕು ತಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಈ ಗ್ರಾಮ ಹಿರಿಹಳ್ಳದಿಂದಾಗಿ ದ್ವೀಪದಂತಾಗುತ್ತದೆ. ಹೀಗಾಗಿ ಈ ಗ್ರಾಮಕ್ಕೆ ಹಲವು ವರ್ಷಗಳಿಂದ ಸೇತುವೆ ಇಲ್ಲದೇ ಹಳ್ಳದಲ್ಲೇ ನಡೆದುಕೊಂಡು ಹೋಗುವ ಸ್ಥಿತಿಯಿದ್ದು ತಮಗೊಂದು ಸೇತುವೆಯಾಗಬೇಕೆಂಬುದು ಊರಿನ ಜನರು ಬಹಳ ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಕೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಎಳನೀರು ಹಾಗೂ ಗುಲಾಬಿ ಹೂಗಳ ಸಸಿಗಳನ್ನು ಮಾರಾಟ ಮಾಡುತ್ತಿರುವ ಈಕೆಯ ಹೆಸರು ಮಹಾದೇವಿ.

    ಮಳೆಗಾಲ ಬಂತೆಂದರೆ ಫಾರ್ಮ್ ನಲ್ಲಿ ಬೆಳೆದ ಬಗೆಬಗೆಯ ಹೂವಿನ ಗಿಡಗಳನ್ನು ಮಹಾದೇವಿಯವರು ದೂರದ ಊರುಗಳಾದ ಮಹಾರಾಷ್ಟ್ರದ ಕೋಲ್ಹಾಪುರ, ನಿಪ್ಪಾಣಿ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಹೀಗೆ ಅನೇಕ ಕಡೆ ತಮ್ಮದೇ ಟಾಟಾ ಏಸ್ ವಾಹನದ ಮೂಲಕ ಸಾಗಿಸಿ ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಎಳೆ ನೀರು ಮಾರಾಟ ಮಾಡುತ್ತಾರೆ. ನಿತ್ಯ ಡ್ರೈವ್ ಮಾಡಿಕೊಂಡು ಪಕ್ಕದ ಊರುಗಳಿಂದ ಎಳನೀರು ತಂದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರದ ಕಾರಣ ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡಲು ಒಂದು ಸೂರು ನಿರ್ಮಿಸಿಕೊಡಿ ಎನ್ನುತ್ತಿದ್ದಾರೆ ಮಹಾದೇವಿ.

    ಮಹಾದೇವಿಯವರು ತಮ್ಮ ಜೀವನದಲ್ಲಾದ ಕೆಡುಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿತ್ಯ ಕೂಲಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಾರೆ. ಜೊತೆಗೆ ಏಳನೀರು ಮಾರಿ ಬಂದ ದುಡ್ಡಲ್ಲಿ ಲೋನ್ ಮೂಲಕ ಒಂದು ವಾಹನ ಖರೀದಿಸಿ ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಇಬ್ಬರು ತಮ್ಮಂದಿರು ಮತ್ತು ಅಪ್ಪ-ಅಮ್ಮನನ್ನು ಸಾಕುವ ಹೊಣೆ ಹೊತ್ತಿರುವ ಮಹಾದೇವಿ ಟಾಟಾ ಏಸ್ ವಾಹನವನ್ನು ಲೀಲಾಜಾಲವಾಗಿ ಓಡಿಸುತ್ತಾರೆ. ಮದುವೆಯಾಗಿ ಕೆಲ ವರ್ಷಗಳ ನಂತರ ಗಂಡ ಬೇರೊಬ್ಬ ಹೆಂಗಸಿನ ಸಹವಾಸ ಮಾಡಿ ಮಹಾದೇವಿಯವರನ್ನ ಮನೆಯಿಂದ ಹೊರಹಾಕಿದ ನಂತರ ಮಹಾದೇವಿ ಧೃತಿಗೆಡದೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಮಾದರಿ ಅಂತಾರೆ ಸ್ಥಳೀಯರು.

    ಹುಟ್ಟುತ್ತಲೇ ಗಂಡು ಹೆಣ್ಣೆಂಬ ಬೇಧ-ಭಾವ ಮಾಡಿ ಅದೆಷ್ಟೋ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಜನರಿಗೆ ಮಹಾದೇವಿ ಗಂಡಿಗಿಂತ ನಾನು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಜೀವನ ಒಡ್ಡಿರುವ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿ ಮುನ್ನುಗ್ಗುತ್ತಿರುವ ಮಹಾದೇವಿಗೆ ಸಹಾಯ ಬೇಕಿದೆ.

    https://www.youtube.com/watch?v=TK7Qbe6tjD0