Tag: Life Jothe Ondu Selfie

  • ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಪ್ರಜ್ವಲ್ ದೇವರಾಜ್ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ, ಅದರ ಕಥೆಯ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ಇದರ ಕಥೆ, ತಮ್ಮ ಪಾತ್ರದಿಂದ ಕಾಡಿಸಿಕೊಂಡೇ ನಟಿಸಿದ್ದ ಪ್ರಜ್ವಲ್ ಈ ಚಿತ್ರದ ಕಥೆಯ ಆಚೀಚೆಗಿನ ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.

    ನಿರ್ದೇಶಕ ದಿನಕರ್ ತೂಗುದೀಪ ಅವರ ಮಡದಿ ಮಾನಸಾ ಬರೆದ ಈ ಕಥೆಯನ್ನು ಆರಂಭಿಕವಾಗಿ ಕೇಳಿದಾಗಲೇ ಅದರ ಬಗ್ಗೆ ತಮ್ಮ ಪಾತ್ರದ ಬಗ್ಗೆ ಪ್ರಭಾವಿತನಾಗಿದ್ದಾಗಿ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಇಡೀ ಕಥೆ ಎಲ್ಲರ ಬದುಕುಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಖಭಾವಿಸುವಂತಿದೆ. ಪ್ರತೀ ಪ್ರೇಕ್ಷಕರೆದೆಯಲ್ಲಿ, ಪ್ರತೀ ಪಾತ್ರಗಳೂ ಶಾಶ್ವತವಾಗೊಂದು ಛಾಯೆಯನ್ನು ಉಳಿಸುವಂತಿವೆ. ಎಲ್ಲ ಸಂಕಟಗಳ ಆಯಸ್ಸು ಕಡಿಮೆ ಎಂಬ ಸೂತ್ರದಡಿಯಲ್ಲಿ ಹೊಸಾ ಭರವಸೆಯೊಂದನ್ನು ತುಂಬಿ ಕಳಿಸುವಂತಿವೆ ಎಂಬುದು ಪ್ರಜ್ವಲ್ ಅನಿಸಿಕೆ.

    ಅಂದಹಾಗೆ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವುದಕ್ಕೂ ಕಡಿಮೆ ಇಲ್ಲದಿದ್ದರೂ ಎಂಥಾದ್ದೋ ಕೊರತೆ, ಕೊರೆತಗಳ ನಡುವೆ ಕಂಗಾಲಾದ ಪಾತ್ರವದು. ಇಡೀ ಚಿತ್ರದ ಜೀವಾಳವಾಗಿರೋ ಆ ಪಾತ್ರದ ಅಸಲೀಯತ್ತೇನೆಂಬುದು ಬಿಡುಗಡೆಯ ನಂತರ ಗೊತ್ತಾಗಲಿದೆಯಾದರೂ, ಆ ಪಾತ್ರದ ಪ್ರಭಾವ ದೊಡ್ಡದೆಂಬುದು ಈಗಾಗಲೇ ಜಾಹೀರಾಗಿದೆ.

    ಪ್ರಜ್ವಲ್ ದೇವರಾಜ್ ನಿರ್ದೇಶಕ ತೂಗುದೀಪ ದಿನಕರ್ ಅವರ ಫ್ಯಾಮಿಲಿ ಫ್ರೆಂಡ್. ಪ್ರಜ್ವಲ್ ರನ್ನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರೋ ದಿನಕರ್ ಅವರ ಸಿನಿಮಾ ಬೆಳವಣಿಗೆಗಳನ್ನೂ ಗಮನಿಸುತ್ತಲೇ ಇದ್ದರು. ಅದ್ಭುತ ಎನರ್ಜಿ ಇರೋ ಪ್ರಜ್ವಲ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ದಿನಕರ್ ಅವರಿಗೂ ಇತ್ತು. ಅದು ಪ್ರಜ್ವಲ್ ಅವರದ್ದೂ ಆಗಿತ್ತು. ಕಾಲವೇ ಅದಕ್ಕೆ ವೇದಿಕೆ ಸಿದ್ಧಪಡಿಸಿದೆ. ಪ್ರಜ್ವಲ್‍ಗಾಗಿ ಒಂದು ಪಾತ್ರವೂ ಸೃಷ್ಟಿಯಾಗಿದೆ. ಇಂಥಾ ಕಾಲಾಂತರಗಳ ಕನಸಿನಂತೆ ಮೂಡಿ ಬಂದಿರೋ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ವಾರದೊಪ್ಪತ್ತಿನಲ್ಲೇ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಫ್ ಜೊತೆ ಒಂದ್ ಸೆಲ್ಫಿ – ಕಥೆ ಹುಟ್ಟಿದ್ದ ಬಗ್ಗೆ ದಿನಕರ್ ಹೇಳಿದ ಇಂಟರೆಸ್ಟಿಂಗ್ ಕಥೆ!

    ಲೈಫ್ ಜೊತೆ ಒಂದ್ ಸೆಲ್ಫಿ – ಕಥೆ ಹುಟ್ಟಿದ್ದ ಬಗ್ಗೆ ದಿನಕರ್ ಹೇಳಿದ ಇಂಟರೆಸ್ಟಿಂಗ್ ಕಥೆ!

    ಸಾರಥಿಯಂಥಾ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ದಿನಕರ್ ತೂಗುದೀಪ ಅವರ ನಿರ್ದೇಶನದ ನಾಲ್ಕನೇ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಲವ್ಲಿ ಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಕಥೆ ಏನೆಂಬ ಬಗ್ಗೆ ಎಲ್ಲೆಡೆ ಕುತೂಹಲ ಹರಡಿಕೊಂಡಿದೆ. ಇದೇ ಹೊತ್ತಿನಲ್ಲಿ ಈ ಚಿತ್ರದ ಕಥೆ ಹುಟ್ಟಿದ ಮಜವಾದ ಕಥೆಯ ಬಗ್ಗೆ ದಿನಕರ್ ಅವರು ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ!

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕೆ ಕಥೆ ಬರೆದಿದ್ದು ದಿನಕರ್ ಅವರ ಮಡದಿ ಮಾನಸಾ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ದಿನಕರ್ ಎಲ್ಲ ರೀತಿಯಿಂದಲೂ ತಮ್ಮನ್ನು ಕಾಡಿ ಕೈ ಹಿಡಿದೆಬ್ಬಿಸೋ ಕಥೆಯೊಂದು ಸಿಗದ ಹೊರತಾಗಿ ನಿರ್ದೇಶನಕ್ಕಿಳಿಯುವವರಲ್ಲ. ಒಂದು ದೊಡ್ಡ ಗ್ಯಾಪಿನಲ್ಲಿ ಅಂಥಾದದ್ದೊಂದು ನಿರೀಕ್ಷೆ ಹೊಂದಿದ್ದ ದಿನಕರ್ ಅವರಿಗೆ ಮಾನಸಾ ಈ ಚಿತ್ರದ ಕಥೆಯ ಎಳೆಯೊಂದನ್ನು ಹೇಳಿದ್ದು ಈಗ್ಗೆ ಒಂದೂವರೆ ವರ್ಷಗಳ ಹಿಂದೆ!

    ಈ ಕಥಾ ಎಳೆ ಕೇಳಿದಾಕ್ಷಣ ಏನೋ ಛಳುಕು ಮೂಡಿದಂತಾಗಿ ತಕ್ಷಣವೇ ಅವರು ಮಾನಸಾರ ಜೊತೆ ಸೇರಿ ಕಥೆಗೊಂದು ರೂಪ ಕೊಡಲಾರಂಭಿಸಿದ್ದರು. ಅಖಂಡ ಆರೇಳು ತಿಂಗಳು ಕಳೆದ ನಂತರ ಕಥೆಗೊಂದು ಸ್ಪಷ್ಟವಾದ ರೂಪ ಬಂದಿತ್ತು. ಆ ನಂತರ ಮತ್ತೆ ಆರು ತಿಂಗಳು ಪಟ್ಟಾಗಿ ಕೂತ ದಿನಕರ್ ಅವರೇ ಸ್ಕ್ರೀನ್ ಪ್ಲೇ ರಚಿಸಿದ್ದರು. ಮಾನಸಾ ಕೂಡಾ ಅದಕ್ಕೆ ಸಹಕರಿಸಿದ್ದರು. ಹೀಗೆ ಸ್ಕ್ರೀನ್ ಪ್ಲೇ ರೆಡಿಯಾದಾಕ್ಷಣವೇ ನಿರ್ಮಾಪಕರನ್ನು ಭೇಟಿಯಾದಾಗ ಅವರು ಈ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಳ್ಳಲು ತೆಗೆದುಕೊಂಡಿದ್ದು ಕೇವಲ ಎರಡು ನಿಮಿಷವಂತೆ!

    ಆ ನಂತರದಲ್ಲಿ ಚಿತ್ರೀಕರಣ ಶುರು ಮಾಡಿದಾಗಲೂ ಚಿತ್ರದುದ್ದಕ್ಕೂ ಕಥೆ ಬರೆದ ಮಾನಸಾ ಸಾಥ್ ನೀಡಿದ್ದಾರೆ. ತಮ್ಮ ಕಥೆ ದೃಶ್ಯವಾಗೋದನ್ನು ಥ್ರಿಲ್ ಆಗುತ್ತಲೇ ಕಣ್ತುಂಬಿಕೊಂಡಿದ್ದಾರೆ. ಕಡೆಗೆ ಎಡಿಟಿಂಗ್ ಎಲ್ಲ ಆದ ನಂತರ ನೋಡಿ ಹಿರಿ ಹಿರಿ ಹಿಗ್ಗಿದ್ದಾರಂತೆ. ಒಟ್ಟಾರೆಯಾಗಿ ಈ ಚಿತ್ರದ ಉದ್ದಕ್ಕೂ ದಿನಕರ್ ಅವರ ಮಡದಿ ಮಾನಸಾ ಪ್ರಮುಖ ಪಾತ್ರ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ನಟನೆಯ ಲೈಫ್ ಜೊತೆ ಒಂದು ಸೆಲ್ಫಿ ಆಡಿಯೋ ಲಾಂಚ್

    ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ನಟನೆಯ ಲೈಫ್ ಜೊತೆ ಒಂದು ಸೆಲ್ಫಿ ಆಡಿಯೋ ಲಾಂಚ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಾರಥಿ ಎಂಬ ಚಿತ್ರದ ಮೂಲಕ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದ್ದವರು ತೂಗುದೀಪ ದಿನಕರ್. ಆನಂತರ ಡೈರೆಕ್ಷನ್ ಕೆಲಸದಿಂದ ಸ್ವಲ್ಪ ವಿರಾಮ ಪಡೆದಿದ್ದ ದಿನಕರ್ ಚಕ್ರವರ್ತಿ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ದಿನಕರ್ ಪೂರ್ತಿ ನಟನೆಯಲ್ಲೇ ತೊಡಗಿಸಿಕೊಳ್ಳುತ್ತಾರೆ ಅನ್ನೋ ಮಾತು ಕೇಳಿಬರುತ್ತಿತ್ತು.

    ಆದರೆ ಜನರ ಮಾತನ್ನು ಸುಳ್ಳು ಮಾಡುವಂತೆ ದಿನಕರ್ ಮತ್ತೆ ನಿರ್ದೇಶನಕ್ಕೆ ಇಳಿದು ‘ಲೈಫ್ ಜೊತೆ ಒಂದು ಸೆಲ್ಫೀ’ ಅನ್ನೋ ಆಕರ್ಷಕ ಶೀರ್ಷಿಕೆಯ ಸಿನಿಮಾವನ್ನು ಶುರು ಮಾಡಿದ್ದರು. ಈ ಚಿತ್ರ ಯಾವಾಗ ಶುರುವಾಯಿತು, ಯಾವಾಗ ಮುಗಿಯಿತು ಅನ್ನೋದೂ ತಿಳಿಯದಂತೆ ಸೈಲೆಂಟಾಗಿ ಸಿನಿಮಾ ಚಿತ್ರೀಕರಣ ಪೂರೈಸಿ ಸಿದ್ಧಗೊಂಡಿದೆ. ಮೊನ್ನೆ ದಿನ ‘ಲೈಫ್ ಜೊತೆ ಒಂದು ಸೆಲ್ಫೀ’ ಚಿತ್ರದ ಹಾಡುಗಳನ್ನು ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ.

    ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಲಿದೆ. ಅಂದಹಾಗೆ, ಈ ಸಿನಿಮಾಗೆ ದಿನಕರ್ ಅವರ ಪತ್ನಿ ಮಾನಸಾ ದಿನಕರ್ ಕಥೆ ಬರೆದಿದ್ದಾರೆ.

    ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ಯುವಕರ ಮನಸ್ಸಿಗೆ ಹತ್ತಿರಾಗುವ ಕಥೆ ಹೊಂದಿದೆಯಂತೆ. ಸಾಧು ಕೋಕಿಲಾ ಮಾಮೂಲಿ ಪಾತ್ರಕ್ಕಿಂತಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರಂತೆ. ಚೆಂದದ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿರೋದರಿಂದ ಲೈಫ್ ಜೊತೆ ಒಂದ್ ಸೆಲ್ಫಿ ಬಗೆಗಿನ ಕುತೂಹಲದ ಕಾವು ಹೆಚ್ಚಾಗಲಿರೋದಂತೂ ಸತ್ಯ.