Tag: Lieutenant General

  • ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ

    ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಯೋಧ ಬಿ.ಎಸ್.ರಾಜು ಭಾನುವಾರ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

    ಮನೋಜ್ ನರವಣೆಯವರು ಸೇನೆಯ ಮುಖ್ಯಸ್ಥರಾಗಿ ನೇಮಕವಾದ ಬೆನ್ನಲ್ಲೇ ಅವರಿಂದ ತೆರವಾದ ಸ್ಥಾನವನ್ನು ಕನ್ನಡಿಗ ಬಿ.ಎಸ್.ರಾಜು ತುಂಬುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ರಾಜು ಅವರ ಸ್ವಗ್ರಾಮ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

    ಬಿ.ಎಸ್.ರಾಜು ಪ್ರಪಂಚದ ಮೂರನೇ ಶಕ್ತಿಯುತ ಸೇನೆಯಾಗಿರುವ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗುತ್ತಿರುವುದಕ್ಕೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಂದ, ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮೂರಿನ ಹುಡುಗ ಸೇನೆಯ ಎರಡನೇ ಅತ್ಯುನ್ನತ ಸ್ಥಾನವನ್ನು ಅಲಂಕರಿಸುತ್ತಿರುವುದಕ್ಕೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜು ಅವರಿಗೆ ಜಯಘೋಷ ಕೂಗಿ, ನಮ್ಮೂರಿನ ಹುಡುಗ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.

    1963ರಲ್ಲಿ ಬಿ.ಎಸ್.ಸೋಮಶೇಖರ್, ವಿಮಲಾ ದಂಪತಿಯ ಪುತ್ರನಾಗಿ ಜನಿಸಿದ ರಾಜು ಬಾಲ್ಯದಲ್ಲೇ ಸೈನ್ಯದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಹೀಗಾಗಿ 5ನೇ ತರಗತಿಯಲ್ಲಿ ವಿಜಯಪುರದ ಸೈನಿಕ ಶಾಲೆಗೆ ಸೇರಿ, ಸೈನಿಕನಾಗುವ ಕನಸು ಕಂಡರು. ಬಳಿಕ 1984ರಲ್ಲಿ ಸೇನೆಗೆ ಸೇರಿದ ರಾಜು, ಸೇನೆಯ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿದ್ದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೇನೆ ಗೆಲ್ಲಲು ಕರುನಾಡಿನ ಯೋಧನ ಪಾತ್ರವೂ ಬಹು ದೊಡ್ದದು. ಆ ಬಳಿಕ ಶತ್ರು ದೇಶದ ಮೇಲೆ ನಡೆಯುತ್ತಿದ್ದ ಕಾಳಗದಲ್ಲೂ ಕನ್ನಡಿಗನ ಮಾರ್ಗದರ್ಶನದ ಹೆಮ್ಮೆ ಸೈನಿಕರಿಗಿತ್ತು. ಇದನ್ನೂ ಓದಿ: ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ

    ಇತ್ತೀಚೆಗೆ ಉರಿ ಪ್ರದೇಶದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‌ನಲ್ಲೂ ರಾಜುರವರ ಬುದ್ದಿವಂತಿಕೆ ಕೆಲಸ ಮಾಡಿತ್ತು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಸೇನೆಯ ಅತ್ಯುನ್ನತ ಹುದ್ದೆ ಅಲಂಕರಿಸುತ್ತಿರುವ ಕನ್ನಡಿಗರ ಹೆಮ್ಮೆಯ ಬಿ.ಎಸ್.ರಾಜು ಅವರ ದೇಶ ಕಾಯುವ ಅತ್ತುನ್ನತ ಕಾಯಕದಲ್ಲೂ ಜಯಕಂಡು ಮತ್ತಷ್ಟು ಗೌರವ-ಕೀರ್ತಿ ಸಂಪಾದಿಸಲಿ ಎನ್ನುವುದು ಕನ್ನಡಿಗರ ಆಸೆ, ಹಾರೈಕೆಯಾಗಿದೆ.