Tag: license

  • ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಹಾವೇರಿ: ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹಾವೇರಿ ನಗರಸಭಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಆರೋಗ್ಯದ ದೃಷ್ಟಿಯಿಂದ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಆರೋಗ್ಯ, ವೈದ್ಯಕೀಯ, ಗೃಹ ಈ ಇಲಾಖೆಗಳದ್ದಷ್ಟೇ ಕೆಲಸ ಎಂದು ಭಾವಿಸದೆ ಜನರು ಈ ಬಗ್ಗೆ ಸ್ವಯಂಪ್ರೇರಿತರಾಗಿ ಜಾಗೃತರಾಗುವುದು ಮುಖ್ಯ ಎಂದು ಕರೆ ನೀಡಿದರು.

    ಖಾಸಗಿ ವೈದ್ಯರು ಮೆಡಿಕಲ್ ಶಾಪ್, ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಸರ್ಕಾರದ ನೊಟೀಸ್‍ಗೂ ಬೆಲೆಕೊಡದೆ ಯಾರಾದರೂ ವೈದ್ಯರು ಆಸ್ಪತ್ರೆ ತೆರೆಯದೇ ಇದ್ದಲ್ಲಿ ಅಂತಹ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಡಿ. ನಮ್ಮ ನಮ್ಮ ಮನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವ-ದಿಗ್ಬಂಧನ ಹಾಕಿಕೊಳ್ಳುವ ಮೂಲಕ ನಮ್ಮ ಹಾಗೂ ನಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಬದ್ಧರಾಗಿದ್ದು, ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು. ಅನಾವಶ್ಯಕ ಮನೆಯಿಂದ ಹೊರಬರಬೇಡಿ, ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ಅತಿ ಅವಶ್ಯಕ ವಸ್ತುಗಳಾದ ದಿನಸಿ, ತರಕಾರಿ, ಹಣ್ಣು-ಹಂಪಲುಗಳನ್ನು ವಾರ್ಡ್ ವಾರು ತಳ್ಳುವಗಾಡಿಯ ಮೂಲಕ ಮಾರಲು ಅನುಕೂಲ ಮಾಡಿಕೊಡಲಾಗಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.

    ಬಿ.ಸಿ.ಪಾಟೀಲ್ ಇಂದು ಜಿಲ್ಲೆಯ ಹಿರೇಕೆರೂರು ನಗರ, ರಾಣೆಬೆನ್ನೂರು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ, ಹಾವೇರಿ ಎಪಿಎಂಸಿ ಸೇರಿದಂತೆ ಹಲವೆಡೆ ಭೇಟಿ ನೀಡಿದ್ದರು. ಅಲ್ಲದೇ ಕೊರೊನಾ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ್, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಉಪಸ್ಥಿತರಿದ್ದರು.

  • ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿದ್ರೆ ಹುಷಾರ್!

    ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿದ್ರೆ ಹುಷಾರ್!

    ಮೈಸೂರು: ಈರುಳ್ಳಿ ಬೆಲೆ ದುಬಾರಿ ಆಗಿರುವ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಈರುಳ್ಳಿ ಮಾರಾಟಕ್ಕೆ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿದ್ದು, ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡುವವರ ವಿರುದ್ಧ ಕ್ರಮ ತೆಗದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಮೈಸೂರು ಜಿಲ್ಲಾಧಿಕಾರಿಗಳು ಈರುಳ್ಳಿ ಮಾರಾಟಕ್ಕೆ ಲೈಸನ್ಸ್ ಪಡೆಯುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ. ಅಗತ್ಯ ವಸ್ತುಗಳ ಪರವಾನಗಿಗೆ ಆದೇಶ 1986ರ(ತಿದ್ದುಪಡಿ 2019) ಪ್ರಕಾರ, ನಗರದಲ್ಲಿ ಈರುಳ್ಳಿ ವ್ಯಾಪಾರಿಗಳು ಜಿಲ್ಲಾಧಿಕಾರಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯ. ತಾಲೂಕಿನಲ್ಲಿನ ಮಾರಾಟಗಾರರು ಆಯಾ ತಾಲೂಕಿನ ತಹಶಿಲ್ದಾರರ್‍ರಿಂದ ಲೈಸೆನ್ಸ್ ಪಡೆದು ಈರುಳ್ಳಿ ಮಾರಾಟ ಮಾಡಬೇಕು ಎಂದು ಆದೇಶಿಸಲಾಗಿದೆ.

    ಸರ್ಕಾರದ ಆದೇಶದಂತೆ ಈರುಳ್ಳಿ ಸಗಟು ವ್ಯಾಪಾರಿಗಳು 250 ಕ್ವಿಂಟಾಲ್ ದಾಸ್ತಾನು ಮಾಡಬೇಕು. ಚಿಲ್ಲರೆ ವ್ಯಾಪಾರಿಗಳು 50 ಕ್ವಿಂಟಾಲ್ ದಾಸ್ತಾನು ಮಾಡಬೇಕು. ಲೈಸೆನ್ಸ್ ಇಲ್ಲದೆ ಅದಕ್ಕಿಂತ ಹೆಚ್ಚಿನ ಈರುಳ್ಳಿ ದಾಸ್ತಾನು ಮಾಡಿದರೆ, ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಈ ಆದೇಶದಿಂದ ಈರುಳ್ಳಿಗೆ ಅಕ್ರಮ ದಾಸ್ತಾನು ಮಾಡಿಕೊಂಡವರಲ್ಲಿ ಆತಂಕ ಸೃಷ್ಟಿಯಾಗಿದೆ. ಇಂದಿನಿಂದ ಈರುಳ್ಳಿ ಅಂಗಡಿಗಳ ಮೇಲೂ ಆಹಾರ ಇಲಾಖೆ ಪರಿಶೀಲನೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಪರವಾನಿಗೆ ಇಲ್ಲದೆ ರಸ್ತೆಗಿಳಿದ 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳು ವಶ

    ಪರವಾನಿಗೆ ಇಲ್ಲದೆ ರಸ್ತೆಗಿಳಿದ 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳು ವಶ

    ಶಿವಮೊಗ್ಗ: ಪರವಾನಿಗೆ ಇಲ್ಲದೆ ರಸ್ತೆಗಿಳಿದಿದ್ದ 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳನ್ನು ಜಿಲ್ಲೆಯ ದೊಡ್ಡಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರಸ್ತೆಯಲ್ಲಿ ಓಡಾಡುವಾಗ ಅಂಬುಲೆನ್ಸ್ ಸೈರನ್ ಕೇಳಿದರೆ ಸಾಕು ಜನ ಗಾಬರಿಯಿಂದ ದಾರಿ ಬಿಡುತ್ತಾರೆ. ಆದರೆ ಜನರ ಜೀವ ಉಳಿಸುವ ಅಂಬುಲೆನ್ಸ್‌ಗಳು ಇಂದು ಪರವಾನಿಗೆ(ಲೈಸೆನ್ಸ್) ಇಲ್ಲದೆ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಶಿವಮೊಗ್ಗದಲ್ಲಿ ಸಂಚರಿಸುವ ಬಹುತೇಕ ಖಾಸಗಿ ಅಂಬುಲೆನ್ಸ್‌ಗಳಿಗೆ ಹಾಗೂ ಅದರ ಚಾಲಕರಿಗೆ ಪರವಾನಗಿಯೇ ಇಲ್ಲ.

    ಇದನ್ನು ಮನಗಂಡ ಪೊಲೀಸರು ಇಂದು ಖಾಸಗಿ ಅಂಬುಲೆನ್ಸ್‌ಗಳ ಲೈಸನ್ಸ್‌ಗಳನ್ನು ಪರಿಶೀಲನೆ ನಡೆಸಿದಾಗ, ಸುಮಾರು 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳು ಯಾವುದೇ ಪರವಾನಿಗೆ ಇಲ್ಲದೆ ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ. ವಾಹನದ ಜೊತೆಗೆ ಅದರ ಚಾಲಕರ ಬಳಿಯೂ ಲೈಸನ್ಸ್ ಇಲ್ಲದಿರುವುದು ತಿಳಿದಿದೆ.

    ಈ ಹಿಂದೆ ದೊಡ್ಡಪೇಟೆ ಪೊಲೀಸರಿಗೆ ಸಾರ್ವಜನಿಕರಿಂದ ಈ ಬಗ್ಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದಾಗ ಪೊಲೀಸರಿಗೆ ಖಾಸಗಿ ಅಂಬುಲೆನ್ಸ್‌ಗಳ ಪರವಾನಗಿ ಇಲ್ಲದಿರುವುದರ ಜೊತೆಗೆ ವಾಹನ ನಂಬರ್ ಸಹ ಸರಿಯಾಗಿಲ್ಲ ಎಂಬುದು ತಿಳಿದಿದೆ. ಅಷ್ಟೇ ಅಲ್ಲದೆ ಇವುಗಳನ್ನು ಚಲಾಯಿಸುವ ಚಾಲಕರು ಕೂಡ ರೋಗಿಗಳೂಂದಿಗೆ ಸರಿಯಾಗಿ ವರ್ತಿಸದಿರುವ ವಿಚಾರವೂ ಗೊತ್ತಾಗಿದೆ.

    ಆದ್ದರಿಂದ ಪೊಲೀಸರು ಸುಮಾರು 24ಕ್ಕೂ ಅಧಿಕ ಖಾಸಗಿ ಅಂಬುಲೆನ್ಸ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆದಾಯಕ್ಕಾಗಿ ಹೊಸ ಮದ್ಯದ ಅಂಗಡಿಯ ಮೇಲೆ ಸರ್ಕಾರದ ಕಣ್ಣು!- ಚಿಲ್ಲರೆ ಅಂಗಡಿಯೇ ಯಾಕೆ?

    ಆದಾಯಕ್ಕಾಗಿ ಹೊಸ ಮದ್ಯದ ಅಂಗಡಿಯ ಮೇಲೆ ಸರ್ಕಾರದ ಕಣ್ಣು!- ಚಿಲ್ಲರೆ ಅಂಗಡಿಯೇ ಯಾಕೆ?

    ಬೆಂಗಳೂರು: ರೈತರ ಸಾಲ ಮನ್ನಾ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಿರುವ ರಾಜ್ಯ ಸರ್ಕಾರ, ತಮ್ಮ ಜನಪ್ರಿಯ ಯೋಜನೆಗಳಿಗೆ ಹಣ ಹೊಂದಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು ಈಗ ಮದ್ಯದ ಅಂಗಡಿಯ ಮೇಲೆ ಕಣ್ಣು ಹಾಕಿದೆ.

    ಹೌದು. ಹೊಸ ಚಿಲ್ಲರೆ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಮೂಲಕ ಖಜಾನೆ ತುಂಬಿಸಲು ಸಿದ್ಧತೆ ನಡೆಸಿದೆ. ಜನಸಂಖ್ಯೆಗೆ ಅನುಗುಣವಾಗಿ ಹೊಸ ಮದ್ಯದ ಅಂಗಡಿಗಳನ್ನು ಆರಂಭಿಸಲು ಪ್ಲಾನ್ ಮಾಡಿದೆ.

    ಈ ಪ್ಲಾನ್ ಜಾರಿಗಾಗಿ ಪ್ರತಿ ತಾಲೂಕಿಗೆ ಎಷ್ಟು ಚಿಲ್ಲರೆ ಮದ್ಯದಂಡಿಗಳು ಬೇಕಿವೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ, ಪ್ರಸ್ತಾವನೆ ಸಲ್ಲಿಸುವಂತೆ ಅಬಕಾರಿ ಆಯುಕ್ತರು ಕೆಳ ಹಂತದ ಅಧಿಕಾರಿಗಳಿಗೆ ಸೆ.22ರಂದು ಪತ್ರ ಬರೆದಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆ ಸಮೀಕ್ಷೆ ಶುರು ಮಾಡಿದೆ. ಆದರೆ ಈ ಬಗ್ಗೆ ಏನು ಗೊತ್ತೇ ಇಲ್ಲ ಎನ್ನುವಂತೆ ಸಿಎಂ ಕುಮಾರಸ್ವಾಮಿ, ಅಬಕಾರಿ ಇಲಾಖೆ ನನ್ನ ಬಳಿಯೇ ಇದೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಕೊನೆಯದಾಗಿ ಹೊಸ ಮದ್ಯದಂಗಡಿಗಳಿಗೆ 1992ರಲ್ಲಿ ಪರವನಾಗಿ ನೀಡಿದ್ದು, 1991ರ ಜನಗಣತಿ ಆಧಾರದ ಮೇಲೆ ರಾಜ್ಯದಲ್ಲಿ 3901 ಚಿಲ್ಲರೆ ಮದ್ಯದಂಗಡಿ ಇದೆ. 2011ರ ಜನಗಣತಿ ಪ್ರಕಾರ ರಾಜ್ಯಕ್ಕೆ ಇನ್ನೂ ಸುಮಾರು 1750ಕ್ಕೂ ಹೆಚ್ಚು ಮದ್ಯದಂಗಡಿ ಅಗತ್ಯವಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ ಹೊಸ ಅಬಕಾರಿ ಲೈಸೆನ್ಸ್ ನೀಡಲು ಚಿಂತನೆ ನಡೆಸಿತ್ತು. ಈ ಸಂದರ್ಭದಲ್ಲಿ ಸಮಾಜದ ನಾನಾ ವರ್ಗದಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಮದ್ಯ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದ್ದು, ಬಿಯರ್ ಮಾರಾಟ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗುತ್ತಿದೆ.

    ಚಿಲ್ಲರೆ ಅಂಗಡಿಯೇ ಯಾಕೆ?
    ಅಬಕಾರಿ ವಲಯದಲ್ಲಿ ಚಿಲ್ಲರೆ ಅಂಗಡಿಗಳಿಗೆ (ಸಿಎಲ್-2) ಜನ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕ್ಲಬ್‍ಗಳು (ಸಿಎಲ್ 4), ಸ್ಟಾರ್ ಹೋಟೆಲ್ (ಸಿಎಲ್ 6ಎ), ಹೋಟೆಲ್-ವಸತಿ ಗೃಹಗಳು (ಸಿಎಲ್ 7), ಮಿಲಿಟರಿ ಕ್ಯಾಂಟೀನ್ (ಸಿಎಲ್ 8), ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್ 9), ಎಂಎಸ್‍ಐಎಲ್ ಮಳಿಗೆಗಳು (ಸಿಎಲ್ 11ಸಿ) ಪೈಕಿ ಜನರನ್ನು ಹೆಚ್ಚು ಆಕರ್ಷಿಸುವುದು ಚಿಲ್ಲರೆ ಅಂಗಡಿ. ಈ ಕಾರಣಕ್ಕೆ ಸರ್ಕಾರ ಚಿಲ್ಲರೆ ಅಂಗಡಿಗಳನ್ನು ಹೆಚ್ಚಳ ಮಾಡಿ ಖಜಾನೆ ತುಂಬಿಸುವ ಪ್ಲಾನ್ ಮಾಡಿದೆ.

    ಹೊಸ ಮದ್ಯದ ಅಂಗಡಿ ಆರಂಭಿಸಲು ಸರ್ಕಾರ ಮುಂದಾಗಿರುವುದು ಸರಿಯೇ? ನಿಮ್ಮ ಅಭಿಪ್ರಾಯವನ್ನು ತಿಳಿಸಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಇನ್ನೆರಡು ದಿನಗಳಲ್ಲಿ ಬೆಂಗ್ಳೂರಿನ 3,500 ಬಾರ್ ಬಂದ್?

    ಇನ್ನೆರಡು ದಿನಗಳಲ್ಲಿ ಬೆಂಗ್ಳೂರಿನ 3,500 ಬಾರ್ ಬಂದ್?

    ಬೆಂಗಳೂರು: ಇನ್ನೆರಡು ದಿನದಲ್ಲಿ ಲೈಸೆನ್ಸ್ ನವೀಕರಣಗೊಳ್ಳದೇ ಇದ್ದರೆ ಬೆಂಗಳೂರಿನ ಮೂರುವರೆ ಸಾವಿರ ಬಾರ್ ಗಳು ಬಂದ್ ಆಗಲಿದೆ.

    ಹಿಂದಿನ ಅಬಕಾರಿ ಆಯುಕ್ತ ಮೌನೀಶ್ ಮೌದ್ಗಿಲ್ ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆನ್ ಲೈನ್ ನಲ್ಲಿ ಲೈಸೆನ್ಸ್ ನವೀಕರಣಕ್ಕೆ ಚಾಲನೆ ಕೊಟ್ಟಿದ್ದರು. ಆದರೆ ಲೈಸೆನ್ಸ್ ರಿನಿವಲ್ ಪ್ರಕ್ರಿಯೆ ಶುರುವಾಗುವಾಗಲೇ ಮೌನೀಶ್ ವರ್ಗಾವಣೆಯಾದರು. ಈಗ ಆನ್‍ಲೈನ್ ಲೈಸೆನ್ಸ್ ಗೂ ಸಮ್ಮಿಶ್ರ ಸರ್ಕಾರ ಎಳ್ಳು ನೀರು ಬಿಟ್ಟಾಂತಾಗಿದೆ.

    ಬೆಂಗಳೂರಿನಲ್ಲಿ ಆನ್ ಲೈನ್ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತವಾಗಿದೆ. ಆದ್ದರಿಂದ ಅಬಕಾರಿ ಇಲಾಖೆ ಬಾರ್ ಗಳಿಗೆ ಈ ಶನಿವಾರದವರೆಗೆ ಸುತ್ತೋಲೆಯ ಮೂಲಕ ತಾತ್ಕಾಲಿಕ ಲೈಸೆನ್ಸ್ ಕಳಿಸಿದೆ. ಆದರೆ ಈ ತಾತ್ಕಾಲಿಕ ಲೈಸೆನ್ಸ್ ಶನಿವಾರಕ್ಕೆ ಕೊನೆಯಾಗಲಿದೆ. ಲೈಸೆನ್ಸ್ ಇಲ್ಲದೇ ಮದ್ಯ ಖರೀದಿ ಮಾಡುವ ಹಾಗಿಲ್ಲ. ಇನ್ನೆರಡು ದಿನದಲ್ಲಿ ಲೈಸೆನ್ಸ್ ನೀಡದೆ ಇದ್ದರೆ ಬೆಂಗಳೂರಿನ ಮೂರುವರೆ ಸಾವಿರ ಬಾರ್ ಗಳು ಬಂದ್ ಆಗಲಿದೆ.

    ಇಲಾಖೆ ಅಧಿಕಾರಿಗಳು ಬಾರ್ ಗಳಿಗೆ ಲೈಸೆನ್ಸ್ ನವೀಕರಣಕ್ಕಾಗಿ ಸತಾಯಿಸುತ್ತಿದ್ದಾರೆ. ಇದರಿಂದ ಬಾರ್ ಮಾಲೀಕರು ಗೊಂದಲಕ್ಕೀಡಾಗಿದ್ದು, ಸರ್ಕಾರದ ಈ ಎಡವಟ್ಟಿನಿಂದ ತೊಂದರೆಯಾಗುತ್ತಿದೆ ಅಂತ ಬಾರ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಪ್ರಸಾದ ವಿನಿಯೋಗಕ್ಕೆ ಲೈಸೆನ್ಸ್, ದೇವರ ಪ್ರಸಾದ ಲ್ಯಾಬ್ ಪರೀಕ್ಷೆಗೆ ಒಳಪಡ್ಬೇಕು- ಆಹಾರ ಸುರಕ್ಷತೆ ಇಲಾಖೆ ನೋಟಿಸ್

    ಪ್ರಸಾದ ವಿನಿಯೋಗಕ್ಕೆ ಲೈಸೆನ್ಸ್, ದೇವರ ಪ್ರಸಾದ ಲ್ಯಾಬ್ ಪರೀಕ್ಷೆಗೆ ಒಳಪಡ್ಬೇಕು- ಆಹಾರ ಸುರಕ್ಷತೆ ಇಲಾಖೆ ನೋಟಿಸ್

    ಬೆಂಗಳೂರು: ಇನ್ಮುಂದೆ ಸಿಕ್ಕ ಸಿಕ್ಕಿದ್ದನ್ನೆಲ್ಲಾ ಪ್ರಸಾದ ಅಂತ ಹಂಚೋ ಹಾಗಿಲ್ಲ. ಯಾಕಂದ್ರೆ ಆಹಾರ ಸುರಕ್ಷತಾ ಇಲಾಖೆ ಹೊಸದೊಂದು ನಿಯಮ ಜಾರಿ ಮಾಡಿದೆ.

    ಮುಜುರಾಯಿ ಇಲಾಖೆ ದೇಗುಲ ಸೇರಿದಂತೆ ರಾಜ್ಯದ ಎಲ್ಲಾ ದೇಗುಲಗಳಿಗೆ, ಚರ್ಚ್ ಹಾಗೂ ಮಸೀದಿಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಪ್ರಸಾದ ವಿನಿಯೋಗಕ್ಕೆ ಲೈಸನ್ಸ್ ಪಡೆಯುವಂತೆ ಸೂಚಿಸಿದೆ.

    ಭಕ್ತರಿಗೆ ಪ್ರಸಾದ ರೂಪದಲ್ಲಿ ಯಾವುದೇ ಆಹಾರ ಪದಾರ್ಥ ನೀಡಿದ್ರೂ ಅದನ್ನು ಆಹಾರ ಸುರಕ್ಷತೆ ಇಲಾಖೆಯ ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸಬೇಕೆಂದು ಹೇಳಿದೆ. ದೇಗುಲದಲ್ಲಿ ವಿತರಣೆ ಮಾಡುವ ಪ್ರಸಾದದಲ್ಲಿ ಗುಣಮಟ್ಟ ಕಾಪಾಡುವುದಿಲ್ಲ ಅಂತಾ ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರೋದಾಗಿ ಅಧಿಕಾರಿಗಳು ಹೇಳಿದ್ದಾರೆ.

    ಮೂರು ಬಾರಿ ನೋಟಿಸ್ ನೀಡಿದ ನಂತರವೂ ಲೈಸೆನ್ಸ್ ಪಡೆಯದೇ, ಪ್ರಸಾದ ಪರೀಕ್ಷೆಗೆ ಒಳಪಡಿಸದೇ ವಿತರಣೆ ಮಾಡಿದ್ರೆ ದಂಡ ವಿಧಿಸಲು ಆಹಾರ ಇಲಾಖೆ ನಿರ್ಧರಿಸಿದೆ.

  • ಧಾರವಾಡ ಜಿಲ್ಲೆಯಲ್ಲಿ 1400 ಜನ್ರ ಬಳಿಯಿದೆ ಗನ್‍ಗಳು!

    ಧಾರವಾಡ ಜಿಲ್ಲೆಯಲ್ಲಿ 1400 ಜನ್ರ ಬಳಿಯಿದೆ ಗನ್‍ಗಳು!

    ಧಾರವಾಡ: ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಬರೊಬ್ಬರಿ 1400 ಜನರು ಅಧಿಕೃತ ಗನ್‍ಗಳನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1400 ಜನರು ಗನ್ ಲೈಸನ್ಸ್ ಹೊಂದಿದ್ದಾರೆ ಎಂದು ನಂಬಲೇ ಬೇಕಾಗಿದೆ.

    ಗನ್ ಹೊಂದಿದವರನ್ನು ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಬಳಿ ಇರುವ ವೆಪನ್ ತಂದು ಪರಿಶೀಲನೆ ಮಾಡಿಸಿಕೊಂಡು ಹೋಗಲು ಸೂಚನೆ ನೀಡಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ ಮೀನಾ, ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಲೈಸನ್ಸ್ ಇರುವ ವೆಪನ್ ಹಾಗೂ ಗುಂಡುಗಳನ್ನ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದಾರೆ. ಇನ್ನು ಗುಂಡು ಹಾರಿಸಿದ್ದರೆ ಅದು ಯಾವ ಉದ್ದೇಶಕ್ಕೆ ಹಾರಿದ್ದು ಎಂಬ ಕಾರಣ ನೀಡಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ತಂದು ತೋರಿಸದೇ ಇದ್ದಲ್ಲಿ ಕ್ರಮ ಖಂಡಿತ ಎಂಬ ಸಂದೇಶ ಕೊಟ್ಟಿದ್ದಾರೆ.

    ನಗರದಲ್ಲಿ ಕಳೆದ ವರ್ಷ ಹಿರಿಯ ಸಾಹಿತಿ ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯನ್ನ ಗುಂಡಿಕ್ಕಿ ಮಾಡಲಾಗಿತ್ತು. ಅಲ್ಲದೇ ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಅವರ ಹತ್ಯೆಯಾಯಿತು. ಜಿ.ಪಂ. ಸದಸ್ಯ ಯೋಗಿಶಗೌಡನ ಹಂತಕರನ್ನು ಹೊಡೆಯಲು ಸಂಚು ರೂಪಿಸಿದ್ದವರನ್ನು ಬಂಧಿಸಿದ ಪೊಲೀಸರು ಅವರನ್ನ ಜೈಲಿಗೆ ಅಟ್ಟಿದ್ದಾರೆ.

    ಸದ್ಯ ಜಿಲ್ಲೆಯ 5 ತಾಲೂಕುಗಳಲ್ಲಿ ಕಲಘಟಗಿ ಹಾಗೂ ಧಾರವಾಡ ತಾಲೂಕಿನಲ್ಲಿ ಹೆಚ್ಚಿನ ಗನ್ ಹೊಂದಿದವರು ಇದ್ದಾರೆ. ಕಲಘಟಗಿಯಲ್ಲಿ ಅರಣ್ಯ ಇರುವುದರಿಂದ ಅಲ್ಲಿ ಜನರು ಗನ್ ಹೊಂದಿದ್ದರೆ, ಧಾರವಾಡ ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶದ ಗಣ್ಯ ವ್ಯಕ್ತಿಗಳು ಹೆಚ್ಚಿನ ಗನ್ ಹೊಂದಿದವರಾಗಿದ್ದಾರೆ.