Tag: LGBTQIA

  • ಸಲಿಂಗ ವಿವಾಹ ಕೇಸ್ – ಸಲಹಾ ಸಮಿತಿ ರಚಿಸುತ್ತೇವೆ ಎಂದ ಕೇಂದ್ರ ಸರ್ಕಾರ

    ಸಲಿಂಗ ವಿವಾಹ ಕೇಸ್ – ಸಲಹಾ ಸಮಿತಿ ರಚಿಸುತ್ತೇವೆ ಎಂದ ಕೇಂದ್ರ ಸರ್ಕಾರ

    ನವದೆಹಲಿ: ಸಲಿಂಗ ವಿವಾಹ (Same sex marriage) ಕುರಿತಾಗಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ (LGBTQIA) ಸಲಹೆಗಳನ್ನು ಪರಿಗಣಿಸಲು ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್‍ಗೆ (Supreme Court) ಕೇಂದ್ರ ಸರ್ಕಾರ (Central Government) ಬುಧವಾರ ತಿಳಿಸಿದೆ.

    ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಒಂದೇ ಲಿಂಗದ ವ್ಯಕ್ತಿಗಳೊಂದಿಗಿನ ಸಂಬಂಧದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆಯಲಾಗುವುದು. ಇದಕ್ಕಾಗಿ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗುತ್ತದೆ. ಇದರಿಂದ ಸಮುದಾಯದ ಎದುರಿಸುತ್ತಿರುವ ಸಮಸ್ಯೆಗಳನ್ನು ಕಲೆಹಾಕಲು ಅನುಕೂಲವಾಗುತ್ತದೆ ಎಂದು ಕೇಂದ್ರ ಹೇಳಿಕೊಂಡಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

    ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರದ ನಿರ್ಧಾರವನ್ನು ಪ್ರಕಟಿಸಿದರು.

    ಅರ್ಜಿದಾರರು ಸಲಿಂಗ ವಿವಾಹಗಳನ್ನು ಕಾನೂನಿನಡಿಯಲ್ಲಿ ತರುವಂತೆ ವಾದಿಸಿತ್ತು. ಆದರೆ ಈ ಅರ್ಜಿಗಳಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂಗೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ಕೇಂದ್ರವು, ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬದ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತ್ತು.

    ಏ.27 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದು ಶಾಸಕಾಂಗದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸುಪ್ರೀಂ ಹೇಳಿತ್ತು. ಸಲಿಂಗ ಸಂಬಂಧದಲ್ಲಿರುವ ಜನರು ಬಹಿಷ್ಕಾರಕ್ಕೊಳಗಾಗದಂತೆ ನೋಡಿಕೊಳ್ಳುವ ಪ್ರಾಮುಖ್ಯತೆಯನ್ನು ಸಿಜೆಐ ಮತ್ತಷ್ಟು ಒತ್ತಿ ಹೇಳಿದ್ದಾರೆ.

    ಮುಖ್ಯ ನ್ಯಾಯಮೂರ್ತಿ (Chief Justice of India) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಸಂವಿಧಾನಿಕ ಪೀಠ ದೇಶದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

  • ಸಲಿಂಗ ಮದುವೆ ಸಾಂವಿಧಾನಿಕ ಹಕ್ಕಿಗೆ ಸಂಬಂಧಿಸಿದೆ – ಸಾಂವಿಧಾನಿಕ ಪೀಠಕ್ಕೆ ಅರ್ಜಿ

    ಸಲಿಂಗ ಮದುವೆ ಸಾಂವಿಧಾನಿಕ ಹಕ್ಕಿಗೆ ಸಂಬಂಧಿಸಿದೆ – ಸಾಂವಿಧಾನಿಕ ಪೀಠಕ್ಕೆ ಅರ್ಜಿ

    ನವದೆಹಲಿ: ಸಲಿಂಗ ವಿವಾಹ ಸಾಂವಿಧಾನಿಕ ಸ್ವರೂಪದ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿದೆ ಆದ್ದರಿಂದ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠವು (Constitution Bench) ಇದರ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠ ಆದೇಶಿಸಿದೆ.

    supreme court same sex marriages

    ಸಲಿಂಗ ವಿವಾಹವನ್ನು ವಿರೋಧಿಸಿ ಕೇಂದ್ರ ಸರ್ಕಾರ (Government Of India) ಅಫಿಡವಿಟ್ ಸಲ್ಲಿಸಿದ ಬಳಿಕ ವಿಚಾರಣೆ ನಡೆಸಿದ ಪೀಠ, ಪ್ರಕರಣವು ಸ್ವಾಭಾವಿಕ ಸಾಂವಿಧಾನಿಕ ಅರ್ಹತೆಯ ಪ್ರಕಾರ ಮದುವೆಯಾಗುವ ಹಕ್ಕಿಗೆ ಸಂಬಂಧಿಸಿದೆ. ಸಂವಿಧಾನದ ಕಲಂ 145(3) ಅಡಿಯಲ್ಲಿ 5 ನ್ಯಾಯಾಧೀಶರ ಪೀಠ ಈ ಸಮಸ್ಯೆಯನ್ನು ಪರಿಹರಿಸಲಿದೆ. ಈ ಹಿನ್ನಲೆಯಲ್ಲಿ ಸಾಂವಿಧಾನಿಕ ಪೀಠದಲ್ಲಿ ಅರ್ಜಿ ಪ್ರಸ್ತಾಪಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

    ಹೈದರಾಬಾದ್ ಮೂಲದ ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್, ಪಾರ್ಥ್ ಫಿರೋಜ್ ಮೆಹ್ರೋತ್ರಾ ಮತ್ತು ಉದಯ್ ರಾಜ್ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ LGBTQIA+ ವ್ಯಕ್ತಿಗಳು ಸಮಾನತೆ, ಘನತೆ ಮತ್ತು ಗೌಪ್ಯತೆಯ ಹಕ್ಕನ್ನು ಇತರ ಎಲ್ಲಾ ನಾಗರಿಕರಂತೆಯೇ ಸಂವಿಧಾನವು ಖಾತರಿಪಡಿಸುತ್ತದೆ. ಸಲಿಂಗ ವಿವಾಹಗಳನ್ನ ಗುರುತಿಸದಿರುವುದು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಗುಣಮಟ್ಟದ ಹಕ್ಕು ಮತ್ತು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿದೆ.

    ಈ ವಾದವನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ ಸರ್ಕಾರ ಸಲಿಂಗ ಸಂಬಂಧ ಕಾನೂನುಬಾಹಿರವಲ್ಲದಿದ್ದರೂ, ಭಾರತೀಯ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆಯ ನಡುವೆ ಮದುವೆ ವ್ಯವಸ್ಥೆ ಹೊಂದಿದೆ. ಸಲಿಂಗ ವ್ಯಕ್ತಿಗಳು ಪಾಲುದಾರರಾಗಿ ಒಟ್ಟಿಗೆ ವಾಸಿಸುವುದು ಮತ್ತು ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕೌಟುಂಬಿಕ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.