ಬೆಂಗಳೂರು: ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕವೇ ಹೆಚ್ಚು ಪ್ರಚಲಿತದಲ್ಲಿರುವ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಯುವಮೋರ್ಚಾ ಉಪಾಧ್ಯಕ್ಷ ಭೀಮಾ ಶಂಕರ್ ಪಾಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ದೂರು ನೀಡಿದ್ದಾರೆ.
ಈ ಕುರಿತು ಯಡಿಯೂರಪ್ಪಗೆ ಪತ್ರ ಬರೆದ ಭೀಮಾ ಶಂಕರ್ ಪಾಟೀಲ್, ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಹಾಕಿ ಎಂದು ತಿಳಿಸಿದ್ದಾರೆ.
ಅನಂತ್ ಕುಮಾರ್ ಹೆಗ್ಡೆ ಅವರು ಕನ್ನಡ ಸಾಹಿತಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಸಚಿವರು ಕುವೆಂಪು ಅವರಿಗೂ ಅಪಮಾನ ಮಾಡಿದ್ದಾರೆ. ಮುಂದೆ ಕನ್ನಡ ಭಾಷೆ, ಸಾಹಿತಿಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ ನೀಡಿ ಎಂದು ಬಿಎಸ್‍ವೈ ಗೆ ಬರೆದ ಪತ್ರದದಲ್ಲಿ ಉಲ್ಲೇಖಿಸಿದ್ದಾರೆ.

ಮಾನ್ಯ ಸಚಿವರು ಬನವಾಸಿ ಕದಂಬ ನೆಲೆ ಬೀಡಾದ ಉತ್ತರ ಕನ್ನಡ ಜಿಲ್ಲೆ ಸಂಸದರು. ಆದರೆ ಕನ್ನಡ ಸಾಹಿತಿಗಳ ಕುರಿತು ತೀರಾ ಲಘುವಾಗಿ ಮಾತನಾಡಿರುವ ಸಚಿವ ಅನಂತ ಕುಮಾರ್ ಹೆಗ್ಡೆ ಅವರ ಕನ್ನಡ ಸಾಹಿತ್ಯ ವಿರೋಧಿ ನಡೆಯನ್ನು ಪಕ್ಷದ ಪದಾಧಿಕಾರಿಯಾಗಿ, ಸ್ವಾಭಿಮಾನಿ ಕನ್ನಡಿಗನಾಗಿ ತೀವ್ರವಾಗಿ ಖಂಡಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇತಿಹಾಸಕಾರರು ಬ್ರಿಟಿಷ್ ಮನಸ್ಥಿತಿಯವರು- ಅನಂತ್ ಕುಮಾರ್ ಹೆಗ್ಡೆ
ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಅಪಮಾನ ಮಾಡಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಇವರನ್ನು ಮಣ್ಣಿನ ಮಗ ಎಂದು ಕರೆಯಲು ಸಾಧ್ಯವಿಲ್ಲ. ಅಲ್ಲದೆ ಪಕ್ಷದ ಅನೇಕ ಮುಖಂಡರು ಹಿಂದುತ್ವದ ಪ್ರತಿಪಾದನೆ ರಭಸದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಇದರಿಂದ ಚುನಾವಣೆ ಸಂದರ್ಭದ ಸಮಯದಲ್ಲಿ ಸಚಿವರ ಹೇಳಿಕೆಗಳು ಪಕ್ಷದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದ್ದಾರೆ.

ಪದ್ಮಾವತ್ ಸಿನಿಮಾ ವಿಚಾರದಲ್ಲಿ ರಾಣಿ ಚೆನ್ನಮ್ಮ, ಒನಕೆ ಓಬವ್ವವರನ್ನು ಸಾಮಾಜಿಕ ಜಾಲತಾಣದಲ್ಲಿ ತೀರ ಕೆಟ್ಟದಾಗಿ ಅವಮಾನ ಮಾಡಲಾಗಿದೆ. ಅಲ್ಲದೇ ಈ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರು ನ್ಯಾಯಾಲಯದಿಂದ ನಿರೀಕ್ಷಿತ ಜಾಮೀನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕನ್ನಡ ವಿರೋಧಿ ಹೇಳಿಕೆ, ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಈ ಕೂಡಲೇ ಅವರು ಕ್ಷಮೆ ಕೋರುವಂತೆ ಸೂಚಿಸಬೇಕು ಎಂದು ಬಿಎಸ್‍ಬೈ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬುದ್ಧಿಜೀವಿಗಳು ಬರೆದ ಸಾಹಿತ್ಯಕ್ಕೆ ಅರ್ಥ, ತಲೆಬುಡ ಇರಲ್ಲ: ಅನಂತ್ ಕುಮಾರ್ ಹೆಗ್ಡೆ ಕಿಡಿ















































































