Tag: letter

  • ಸುದ್ದಿಗೋಷ್ಠಿಗೂ ಮುನ್ನ ದೇವೇಗೌಡ್ರಿಗೆ ವಿಶ್ವನಾಥ್ ಪತ್ರ!

    ಸುದ್ದಿಗೋಷ್ಠಿಗೂ ಮುನ್ನ ದೇವೇಗೌಡ್ರಿಗೆ ವಿಶ್ವನಾಥ್ ಪತ್ರ!

    ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮಾಜಿ ಪ್ರಧಾನಿ ದೇವೇಗೌಡರಿಗೆ ಪತ್ರ ಬರೆದಿದ್ದಾರೆ.

    ಸುದ್ದಿಗೋಷ್ಠಿಗೂ ಮುನ್ನ ಮಾಜಿ ಪ್ರಧಾನಿಗೆ ಬರೆದ ಪತ್ರದಲ್ಲಿ ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ ಹುಣಸೂರು ಕ್ಷೇತ್ರದ ಜನರಿಗೆ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ತಾವು ನನ್ನಲ್ಲಿ ವಿಶ್ವಾಸವಿಟ್ಟು ಜನತಾದಳ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದು, ನನ್ನ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದೇ ನಾನು ಭಾವಿಸಿದ್ದೇನೆ. ಸ್ವಾಭಿಮಾನದ ಸಂಕೇತವಾಗಿ ನನ್ನ ಮಾತೃ ಪಕ್ಷ ಕಾಂಗ್ರೆಸ್‍ನಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿ ಆಚೆ ಬಂದು ನಿಂತಾಗ, ನನ್ನ ಅಭಿಲಾಷೆಯಂತೆ ನನಗೆ ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪುನರ್ ಜನ್ಮಕ್ಕೆ ಆಶೀರ್ವಾದಿಸಿದ್ದೀರಿ. ಅದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ.

    ಅಸಂಗತ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಯಿತು. ಸಾಲಮನ್ನಾದಂತಹ ಬೃಹತ್ ಯೋಜನೆಯನ್ನು ಹೆಗಲ ಮೇಲೆ ಹೊತ್ತ ಮುಖ್ಯಮಂತ್ರಿ ಆಡಳಿತದ ಅಭದ್ರತೆಯ ಸಂಕಷ್ಟದಲ್ಲೂ ಜನರ ನಡುವೆ ನಮ್ಮ ಕುಮಾರಣ್ಣ ಎಂಬ ಭಾವನಾತ್ಮಕ ಸಂಪ್ರೀತಿಯಲ್ಲಿದ್ದರು.

    ಒಂದರೆಡು ಇಲಾಖೆಗಳನ್ನು ಬಿಟ್ಟರೆ ನಿರೀಕ್ಷಿಸಿದ ಸಾಧನೆಗಳು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಪಕ್ಷದ ಅಧ್ಯಕ್ಷನಾಗಿ ನನಗೆ ನಿರಾಶೆಯಾಗಿದೆ ಎನ್ನಲು ಸಂಕಟವಾದರೂ ಹೇಳುವುದು ಅನಿವಾರ್ಯವಾಗಿದೆ. ಆದರೂ ಸಿಎಂ ಕುಮಾರಸ್ವಾಮಿ ಅವರು ತಮ್ಮ ಅನಾರೋಗ್ಯದ ಮತ್ತು ಮಿತ್ರರ ಕಿರುಕುಳದ ನಡುವೆಯೂ ಎಲ್ಲರ ವಿಶ್ವಾಸದಿಂದ ಶಕ್ತಿ ಮೀರಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂತ್ರಿಗಳಾದವರು, ಶಾಸಕರು ಪಕ್ಷದ ಮಟ್ಟಿಗೆ ಅಷ್ಟೊಂದು ಆಸಕ್ತಿಯನ್ನು ಹೊಂದಿರುವುದಿಲ್ಲ. ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು. ಆದರೆ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ.

    ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಡ ಸಮನ್ವಯ ಸಮಿತಿ ಕೇವಲ ನಾಮಕಾವಸ್ಥೆ ಸಮನ್ವಯ ಸಮಿತಿ ಆಯಿತೇ ಹೊರತು, ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಫಲವಾಗಲೇ ಇಲ್ಲ. ಸಮನ್ವಯ ಸಮಿತಿ ಸುಲಲಿತವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಈವರೆಗೂ ರೂಪಿಸಲು ಸಾಧ್ಯವಾಗಿಲ್ಲ. ಸಮನ್ವಯ ಸಮಿತಿಯಲ್ಲಿ ಜಾತ್ಯಾತೀತ ಜನತಾದಳದ ಅಧ್ಯಕ್ಷನಾದ ನನಗೆ ಅವಕಾಶವನ್ನೇ ನೀಡಲಿಲ್ಲ.

    ಸಮನ್ವಯ ಸಮಿತಿ ಸಿದ್ದರಾಮಯ್ಯನವರ ಕೈಗೊಂಬೆಯಂತೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಠಿಯಾಯಿತೇ ಹೊರತು, ಸೌಹಾರ್ದಯುತ ವಾತಾವರಣದಲ್ಲಿ ನಿರಾತಂಕವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ನಡೆಯಲೇ ಇಲ್ಲ. ಇಂತಹ ಸಂದರ್ಭದಲ್ಲಿ ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ ಹುಣಸೂರು ಕ್ಷೇತ್ರದ ಜನರಿಗೆ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ವಿನಮ್ರವಾಗಿ ಕೋರುತ್ತೇನೆ ಎಂದು ಪತ್ರದಲ್ಲಿ ವಿಶ್ವನಾಥ್ ಅವರು ಉಲ್ಲೇಖಿಸಿದ್ದಾರೆ.

  • ಯೋಧ ಪತಿಗಾಗಿ 19 ವರ್ಷ ಶಬರಿಯಂತೆ ಕಾಯ್ದ ಪತ್ನಿ!

    ಯೋಧ ಪತಿಗಾಗಿ 19 ವರ್ಷ ಶಬರಿಯಂತೆ ಕಾಯ್ದ ಪತ್ನಿ!

    ಮಡಿಕೇರಿ: ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.

    ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ. 1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಸೇನೆಯವರು ಮೊದಲು ಉತ್ತಯ್ಯ ಮಿಸ್ಸಿಂಗ್ ಎಂದು, ನಂತರ ಅವರು ನಿಧನರಾಗಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಸಾಕ್ಷಿ ಕೊಡಿ ಎಂದು ಪಾರ್ವತಿ ಇದುವರೆಗೂ ಪತಿಗಾಗಿ ಕಾಯುತ್ತಿದ್ದಾರೆ.

    ಆಗಸ್ಟ್ 1999ರಂದು, ಉತ್ತರಪ್ರದೇಶದಲ್ಲಿ ಸ್ನಿಗ್ನಲ್ ಬೆಟಾಲಿಯನ್‍ನಲ್ಲಿ ಲಾನ್ಸ್ ನಾಯಕ್ ಆಗಿದ್ದ ಉತ್ತಯ್ಯ ಮನೆಗೆ ಬಂದಿದ್ದರು. 20 ದಿನ ಇದ್ದು ಗರ್ಭಿಣಿ ಪತ್ನಿಗೆ ದೇಶ ಸೇವೆ ಮುಗಿಸಿ ಬೇಗ ಹಿಂದಿರುಗಿ ಬರುತ್ತೇನೆ ಎಂದು ಹೇಳಿ ಅಲಹಾಬಾದ್‍ನ ತನ್ನ ಯುನಿಟ್‍ಗೆ ವಾಪಾಸ್ ಹೋಗಿದ್ದರು. ಬಳಿಕ ನವೆಂಬರ್ 21ರಂದು ಪತ್ನಿಗೆ ಕರೆ ಮಾಡಿ ಹುಷಾರಿಲ್ಲ ಎಂದು ಹೇಳಿದ್ದರು. ಅದೇ ಕಡೆಯ ಕರೆ, ಆ ನಂತರ ಮತ್ತೆ ಕರೆಯೇ ಬರದಿರೋದ್ರಿಂದ ಆತಂಕಕ್ಕೀಡಾದ ಕುಟುಂಬಕ್ಕೆ ಡಿಸೆಂಬರ್ 4ಕ್ಕೆ ಒಂದು ಟೆಲಿಗ್ರಾಂ ಬಂತು. ಕಡೆಗೂ ಪತಿಯಿಂದ ಟೆಲಿಗ್ರಾಂ ಬಂತು ಎಂದುಕೊಂಡಿದ್ದ ಪತ್ನಿಗೆ ದೊಡ್ಡ ಆಘಾತವೇ ಕಾದಿತ್ತು.

    ಆ ಟೆಲಿಗ್ರಾಂನಲ್ಲಿ ಉತ್ತಯ್ಯ ಸೈನ್ಯದ ಯುನಿಟ್‍ನಲ್ಲಿಲ್ಲ ಊರಲ್ಲಿದ್ರೆ ಕಳುಹಿಸಿಕೊಡಿ ಎಂದು ಬರೆಯಲಾಗಿತ್ತು. ಆ ಸುದ್ದಿ ಕೇಳಿ ಶಾಕ್‍ಗೆ ಒಳಗಾದ ಯೋಧ ಉತ್ತಯ್ಯನ ಗರ್ಭಿಣಿ ಪತ್ನಿಗೆ ಡೆಲಿವರಿಯಾಗಿ ಮಗು ಕೂಡ ಸಾವನ್ನಪ್ಪಿತ್ತು. ದಿನ ಕಳೆದಂತೆ ಸುಧಾರಿಸಿಕೊಂಡು ಪತಿಗಾಗಿ ಹುಡುಕಾಟ ನಡೆಸಿ ಸೈನ್ಯದ ಯುನಿಟ್‍ಗೂ ಹೋಗಿ ಬಂದರೂ ಪತಿಯ ಸುಳಿವೇ ಸಿಗಲಿಲ್ಲ. ಕಡೆಗೆ ಸೇನೆ ಜೂನ್ 14ಕ್ಕೆ ಉತ್ತಯ್ಯ ನಿಧನರಾಗಿದ್ದಾರೆ ಎಂದು ಪತ್ರ ಕಳುಹಿಸಿದ್ದರು.

    ಪತ್ರ ಕಳುಹಿಸಿದ ನಂತರ 2010ರಿಂದ ಯೋಧನ ಪತ್ನಿಗೆ ಪಿಂಚಣಿ ಕೊಡುವುದಕ್ಕೆ ಶುರು ಮಾಡಿದ ಸರ್ಕಾರ ಮೃತದೇಹವಾಗಲಿ, ಎಲ್ಲಿ, ಹೇಗೆ ನಿಧನರಾದರು ಎಂದಾಗಲೀ ಯೋಧನ ಕುಟುಂಬಕ್ಕೆ ಮಾಹಿತಿಯೇ ಕೊಟ್ಟಿಲ್ಲ. ಹೀಗಾದರೆ ಹೇಗೆ ಸೈನ್ಯ ನಂಬಿ ಯೋಧರನ್ನಾಗಿ ದೇಶ ಸೇವೆಗೆ ನಮ್ಮವರನ್ನು ಕಳುಹಿಸೋದು ಎಂದು ಪಾರ್ವತಿ ಹಿತೈಷಿಗಳು ಪ್ರಶ್ನಿಸುತ್ತಿದ್ದಾರೆ.

  • ಯುವಕನ ಮನವಿಗೆ ಪ್ರಧಾನಿ ಸ್ಪಂದನೆ- ವಿದ್ಯುತ್ ಸಂಪರ್ಕ ಕಾರ್ಯ ಆರಂಭ

    ಯುವಕನ ಮನವಿಗೆ ಪ್ರಧಾನಿ ಸ್ಪಂದನೆ- ವಿದ್ಯುತ್ ಸಂಪರ್ಕ ಕಾರ್ಯ ಆರಂಭ

    ರಾಯಚೂರು: ಯುವಕನ ಮನವಿಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಬೆಳಕನ್ನೆ ಕಾಣದ ಜಿಲ್ಲೆಯ ದೊಡ್ಡಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

    ಲಿಂಗಸುಗೂರಿನ ಗಲಗಿನ ದೊಡ್ಡಿ, ಕಾಳಪ್ಪನ ದೊಡ್ಡಿ ಹಾಗೂ ಗುಳೆದರ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ದೇವರಬುಪೂರು ಗ್ರಾಮದ ಯುವಕ ಅಮರೇಶ್ ಪ್ರಧಾನಿಗೆ ಟ್ವೀಟ್ ಮಾಡಿದ್ದರು. ಯುವಕನ ಟ್ವೀಟ್‍ಗೆ ಸ್ಪಂದಿಸಿ ಮೂರು ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶ ನೀಡಿದ್ದಾರೆ.

    2018 ಸೆಪ್ಟೆಂಬರ್ 15 ರಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟರ್ ಅಕೌಂಟ್ ಗೆ ಮಾಡಿದ ಅಮರೇಶ್ ಟ್ವೀಟ್ ಗೆ ಅಕ್ಟೋಬರ್ 1 ರಂದು ಕೇಂದ್ರ ಗ್ರಾಮೀಣ ವಿದ್ಯುದ್ದೀಕರಣ ನಿಗಮದಿಂದ ಸ್ಪಂದನೆ ಬಂದಿತ್ತು. ಯುವಕ ತಾನು ಮೋದಿ ಅವರಿಗೆ ಟ್ವೀಟ್ ಮಾಡಿದ ವಿಷಯವನ್ನು ವಿದ್ಯುತ್ ಸಂಪರ್ಕ ಕಾರ್ಯ ಆರಂಭಗೊಂಡಾಗ ಎಲ್ಲರ ಬಳಿ ಹೇಳಿಕೊಂಡಿದ್ದಾರೆ.

    ಸದ್ಯ ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಾರ್ಯ ಆರಂಭಿಸಿದ್ದು, ಕೇಂದ್ರ ಸರಕಾರದ ಸೌಭಾಗ್ಯ ಯೋಜನೆ ಅಡಿಯಲ್ಲಿ ಮೀಟರ್ ಅಳವಡಿಕೆ ಕಾರ್ಯ ಆರಂಭವಾಗಿದೆ. ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು ವಿದ್ಯುತ್ ತಂತಿ ಎಳೆಯಲಾಗಿದೆ. ಈಗ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾರ್ಯ ನಡೆದಿದೆ.

  • ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

    ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

    ಬೆಂಗಳೂರು: ನಾನು ಖಾಕಿಯಲ್ಲಿ ಪ್ರತಿ ಕ್ಷಣ ಜೀವಿಸಿದ್ದೇನೆ ಎಂದು ಡಿಸಿಪಿ ಅಣ್ಣಾಮಲೈ ಅವರು ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    ಅಣ್ಣಾಮಲೈ ಅವರು ತಮ್ಮ ವೈಯಕ್ತಿಕ ಜೀವನದ ಕಾರಣಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಅಭಿಮಾನಿಗಳು ರಾಜೀನಾಮೆ ನೀಡದಂತೆ ಕೇಳಿಕೊಂಡಿದ್ದರು. ಈಗ ಅಣ್ಣಾಮಲೈ ಪತ್ರ ಬರೆಯುವ ಮೂಲಕ ಅಭಿಮಾನಿಗಳು ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಅಣ್ಣಾಮಲೈ ಬಗ್ಗೆ ಗೊತ್ತಿರದ ಸಂಗತಿ ಇಲ್ಲಿದೆ

    ಪತ್ರದಲ್ಲಿ ಏನಿದೆ?
    ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ನನ್ನ ರಾಜೀನಾಮೆ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಇಂದು ಅಂದರೆ ಮೇ 28ರಂದು ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳಲೂ ಸ್ವಲ್ಪ ಸಮಯ ಬೇಕಾಗುತ್ತದೆ. ನನ್ನ ಸುತ್ತ ಹರಿದಾಡುವ ಮಾತುಗಳ ಬಗ್ಗೆ ನಾನು ಸ್ಪಷ್ಟನೆ ನೀಡುತ್ತೇನೆ. ನಾನು 6 ತಿಂಗಳಿನಿಂದ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ. ಇದನ್ನೂ ಓದಿ:  ಡಾಕ್ಟರ್ ಆದ್ರು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ

    ನಾನು ನನ್ನ ಸಹದ್ಯೋಗಿಗಳ ಜೊತೆ ಕಳೆದ ಸುಂದರವಾದ ಕ್ಷಣಗಳು ಖಾಕಿ ನನಗೆ ಎಂದಿಗೂ ಮರೆಯಲು ಬಿಡುವುದಿಲ್ಲ. ಪೊಲೀಸ್ ಅಧಿಕಾರಿಯ ಕೆಲಸ ದೇವರಿಗೆ ಹತ್ತಿರವಾದ ಕೆಲಸ ಎಂದು ನಾನು ನಂಬಿದ್ದೇನೆ. ಹೆಚ್ಚು ಒತ್ತಡ ಇರುವ ಕೆಲಸಗಳು ತನ್ನದೇ ಆದ ಕಡಿಮೆ ಸಮಯದಲ್ಲಿ ಬರುತ್ತದೆ. ನಾನು ಸಾಕಷ್ಟು ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನಾನು ಕಷ್ಟದಲ್ಲಿದ್ದಾಗ ನನಗೆ ಜನರು ಸಹಾಯ ಮಾಡಿದ್ದರು. ಆದರೆ ಅವರಿಗೆ ಕಷ್ಟದ ಸಮಯ ಬಂದಾಗ ನನಗೆ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ:  ಚುನಾವಣೆಯ ಹೀರೋಗಳನ್ನು ಪರಿಚಯಿಸಿದ ಡಿಸಿಪಿ ಅಣ್ಣಾಮಲೈ

    ಕಳೆದ ವರ್ಷ ನಾನು ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಿದ್ದಾಗ ನನ್ನ ಜೀವನದಲ್ಲಿ ನನ್ನ ಆದ್ಯತೆಗಳನ್ನು ಉತ್ತಮಗೊಳಿಸಲು ಸಹಾಯ ಮಾಡಿತ್ತು. ಮಧುಕರ್ ಶೆಟ್ಟಿ ಸರ್ ಸಾವು ನನಗೆ ನನ್ನ ಜೀವನದ ಬಗ್ಗೆ ಯೋಚಿಸಲು ಸಹಾಯ ಮಾಡಿತ್ತು. ಎಲ್ಲ ಒಳ್ಳೆಯ ಕ್ಷಣಗಳು ಮುಗಿಯುತ್ತಾ ಬಂದಿದೆ. ಖಾಕಿ ಸಮಯ ಇಲ್ಲಿಗೆ ಕೊನೆ ಆಗುತ್ತದೆ ಎಂದು ನಿರ್ಧರಿಸಿದ್ದೇನೆ. ಲೋಕಸಭಾ ಚುನಾವಣೆ ನಂತರ ರಾಜೀನಾಮೆ ನೀಡಲು ನಿರ್ಧರಿಸಿದೆ. ಚುನಾವಣೆ ಸಮಯದಲ್ಲಿ ನನ್ನ ರಾಜೀನಾಮೆಯಿಂದ ಸರ್ಕಾರಕ್ಕೆ ಅನಾನುಕೂಲವಾಗಬಾರದು ಎನ್ನುವ ಕಾರಣಕ್ಕೆ ಈಗ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆಯಿಂದ ಯಾರಿಗಾದರೂ ನೋವಾದರೆ ಕ್ಷಮೆ ಕೇಳುತ್ತೇನೆ. ಇದು ನನಗೆ ಹಾಗೂ ನನ್ನ ಬೆಸ್ಟ್ ಫ್ರೆಂಡ್ ಅಂದರೆ ನನ್ನ ಪತ್ನಿಗೆ ಭಾವನಾತ್ಮಕವಾದ ಸಮಯ. ಇದನ್ನೂ ಓದಿ: ವೃದ್ಧಾಶ್ರಮದ ವಯೋವೃದ್ಧರ ಆಸೆಯನ್ನು ಎಸ್‍ಪಿ ಅಣ್ಣಾಮಲೈ ನೆರವೇರಿಸಿದ್ರು: ವಿಡಿಯೋ ನೋಡಿ

    ಮುಂದೇನು?
    ಸದ್ಯಕ್ಕೆ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ನನ್ನ ಜೀವನದಲ್ಲಿ ಕಳೆದುಕೊಂಡ ಪುಟ್ಟ ಪುಟ್ಟ ಕ್ಷಣಗಳನ್ನು ಎಂಜಾಯ್ ಮಾಡುತ್ತೇನೆ. ನನ್ನ ಮಗ ಈಗ ಬೇಗ ಬೆಳೆಯುತ್ತಿದ್ದಾನೆ. ನಾನು ಈಗ ಅವನಿಗೆ ಒಳ್ಳೆಯ ತಂದೆ ಆಗಬೇಕು. ಅವನು ಬೆಳೆಯುವ ಪ್ರತಿ ಕ್ಷಣ ಅವನಿಗೆ ನನ್ನ ಸಮಯ ಬೇಕು. ನಾನು ನನ್ನ ಮನೆಗೆ ಹಿಂತಿರುಗಿ ಕೃಷಿ ಕೆಲಸ ಮಾಡುತ್ತೇನೆ. ಅಲ್ಲದೆ ನನ್ನ ಕುರಿಗಳು ನನ್ನ ಮಾತುಗಳನ್ನು ಕೇಳುತ್ತದೆಯೋ ಎಂಬುದನ್ನು ನೋಡುತ್ತೇನೆ. ಏಕೆಂದರೆ ನಾನು ಈಗ ಪೊಲೀಸ್ ಅಧಿಕಾರಿ ಅಲ್ಲ. ಇದನ್ನೂ ಓದಿ:  ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!

    ಕಾರ್ಕಳ, ಉಡುಪಿ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ನನ್ನ ಜೊತೆ ನ್ಯಾಯಕ್ಕಾಗಿ ಹೋರಾಡಿದ ಪ್ರತಿಯೊಬ್ಬ ಅದ್ಭುತ ವ್ಯಕ್ತಿಯನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಹಿರಿಯ ಅಧಿಕಾರಿಗಳು ಕಲಿಸಿ ಕೊಟ್ಟ ಮಾರ್ಗದರ್ಶನ ಹಾಗೂ ನನಗಿಂತ ಸ್ಮಾರ್ಟ್ ಆದ ಜೂನಿಯರ್ ಅಧಿಕಾರಿಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನನ್ನ ಪೇದೆಗಳನ್ನು ಸಹ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಅವರಿಗಾಗಿ ಜೀವಿಸಿದ್ದೇನೆ ಹಾಗೂ ಅವರಿಗೆ ಅರ್ಹತೆ ಇರುವ ಉತ್ತಮ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಇದನ್ನೂ ಓದಿ:   ಪ್ರವಾಸಿಗರ ಕೆಟ್ಟುನಿಂತ ವಾಹನ ರಿಪೇರಿಗಾಗಿ ಕೈಯಲ್ಲಿ ಸ್ಪ್ಯಾನರ್ ಹಿಡಿದ ಎಸ್‍ಪಿ ಅಣ್ಣಾಮಲೈ

    ನಾನು ಘನತೆಯಿಂದ ಹಾಗೂ ಹೆಮ್ಮೆಯಿಂದ ನನ್ನ ಸೇವೆಯನ್ನು ಸಲ್ಲಿಸಿದ್ದೇನೆ ಎಂದುಕೊಳ್ಳುತ್ತೇನೆ. ಯಾವುದೇ ಸಮಯದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಒಂದು ಮಾತು ಸತ್ಯ ನಾನು ನಿಮ್ಮನ್ನು ಹಾಗೂ ಮುಖ್ಯವಾಗಿ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.

  • ಪ್ರಜ್ವಲ್ ರೇವಣ್ಣನ ಅತಂಕವನ್ನು ದೂರ ಮಾಡಿದ ಡಿಸಿ ಪತ್ರ

    ಪ್ರಜ್ವಲ್ ರೇವಣ್ಣನ ಅತಂಕವನ್ನು ದೂರ ಮಾಡಿದ ಡಿಸಿ ಪತ್ರ

    ಹಾಸನ: ಚುನಾವಣಾ ಆಯೋಗಕ್ಕೆ ಹಾಸನ ಡಿಸಿ ಬರೆದ ಪತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಅಪೂರ್ಣ ಅಫಿಡವಿಟ್ ಸಲ್ಲಿಕೆ ಆರೋಪ ಪ್ರಕರಣದಲ್ಲಿ ಪಾರಾಗಿದ್ದಾರೆ.

    ಬಿಜೆಪಿ ಅಭ್ಯರ್ಥಿ ಎ. ಮಂಜು ಅವರು ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆಯ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಇದರ ಬಗ್ಗೆ ತನಿಖೆ ಆಗಬೇಕು ಎಂದು ಚುನಾವಣೆ ಅಯೋಗಕ್ಕೆ ದೂರು ನೀಡಿದ್ದರು.

    ಈ ದೂರಿನ ಅನ್ವಯ ಪ್ರಜಾ ಪ್ರಾತಿನಿಧ್ಯ ಕಾಯಿದೆ 1951 ಕಲಂ 125ಚಿ ಪ್ರಕಾರ ಕ್ರಮ ಕೈಗೊಳ್ಳುವಂತೆ ಚುನಾವಣೆ ಆಯೋಗ ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಪತ್ರ ಬರೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ಉತ್ತರ ನೀಡಿರುವ ಡಿಸಿ ಚುನಾವಣಾ ಆಯೋಗದ ನಿರ್ದೇಶನಗಳನ್ನೇ ಉಲ್ಲೇಖಿಸಿ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಫಿಡವಿಟ್‍ನಲ್ಲಿ ತಪ್ಪು ಮಾಹಿತಿ ಬಗ್ಗೆ ಚುನಾವಣಾ ಅಧಿಕಾರಿ ನೇರ ಕ್ರಮ ಅಸಾಧ್ಯ. ಈ ಬಗ್ಗೆ ದೂರುದಾರರೇ ಸೂಕ್ತ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು ಎಂದು ಮರು ಪತ್ರ ಬರೆದಿದ್ದಾರೆ.

    ಅರೋಪವೇನು?
    ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಪ್ರಜ್ವಲ್ ರೇವಣ್ಣ ಅವರು ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಅವರು 7 ಕೋಟಿಗೂ ಹೆಚ್ಚು ಆದಾಯ ತೋರಿಸಿದ್ದಾರೆ. ಆದರೆ ಕೇವಲ ಮೂರು ಕೋಟಿಯಷ್ಟು ಆದಾಯದ ಮೂಲ ತೋರಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು 23 ಲಕ್ಷ ಪ್ರಜ್ವಲ್‍ಗೆ ಸಾಲ ನೀಡಿರೋದಾಗಿ ಹೇಳಿದ್ದಾರೆ. ಆದರೆ ಪ್ರಜ್ವಲ್ ಅಫಿಡವಿಟ್‍ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಎ. ಮಂಜು ಆರೋಪಿಸಿದ್ದರು.

  • ಸ್ಮಶಾನವಾಸಿಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಮನಕಲಕುವ ಪತ್ರ

    ಸ್ಮಶಾನವಾಸಿಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಮನಕಲಕುವ ಪತ್ರ

    ಬೆಂಗಳೂರು: ಮಂಡ್ಯ ಅಖಾಡದಲ್ಲಿ ದೂಳೆಬ್ಬಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಫ್ಯಾನ್ಸ್‍ಗಳಿಗೆ ಸಣ್ಣದೊಂದು ನಿರೀಕ್ಷೆ ಹುಟ್ಟಿಸಿದ್ದಾರೆ. ಈಗ ದಚ್ಚು ಫ್ಯಾನ್ಸ್ ಕಣ್ಣಿಗೆ ಕೇವಲ ಸಿನಿಸ್ಟಾರ್ ಅಲ್ಲ. ಸಮಸ್ಯೆಗೆ ಸ್ಪಂದಿಸುವ ಆಪ್ತರಕ್ಷಕನಾಗ್ತಾರೆ ಅನ್ನುವ ಭರವಸೆ ಇಟ್ಟುಕೊಂಡ ಹಾಗೆ ಕಾಣುತ್ತೆ. ಮಂಡ್ಯದಲ್ಲಿ ಜನರ ಅಭಿವೃದ್ಧಿಯ ಬಗ್ಗೆ ಮಾತಾನಾಡಿದ ದರ್ಶನ್ ಅವರ ಮೇಲೆ ಬೆಂಗಳೂರಿನ ಸ್ಮಶಾನದ ಕೆಲಸಗಾರ ಭರವಸೆ ಇಟ್ಟಿದ್ದಾರೆ.

    ಬೆಂಗಳೂರಿನ ಅಂಥೋನಿ ಸ್ವಾಮಿ ಕಳೆದ 20 ವರ್ಷಗಳಿಂದ ಹೆಣ ಸುಡುವ ಕಾಯಕ ಮಾಡುತ್ತಿದ್ದಾರೆ. ಕಲ್ಲಳ್ಳಿ ಸ್ಮಶಾನದಲ್ಲಿ ಹೆಣ ಸುಡುವ ಕಾಯಕದಲ್ಲಿ ಇಡೀ ಕುಟುಂಬ ತೊಡಗಿಕೊಂಡಿದೆ. ಆದರೆ ಇವರಿಗೆ ಬಿಬಿಎಂಪಿ ನಿಗದಿ ಪಡಿಸಿದ 1 ಸಾವಿರ ವೇತನವನ್ನು ಕಳೆದ ಎಂಟು ವರ್ಷಗಳಿಂದ ನೀಡಿಲ್ಲ. ಸಹಾಯಧನ ನೀಡಿ ಎಂದು ಎಲ್ಲಾ ಅಧಿಕಾರಿಗಳಿಗೆ, ಸಚಿವರುಗಳಿಗೆ ನೀಡಿದರೂ ಪ್ರಯೋಜನವಾಗಿಲ್ಲ. ಆಗ ಅಂಥೋನಿಗೆ ದರ್ಶನ್ ಅವರು ನೆನಪಾಗಿದ್ದಾರೆ.

    ಅಂಥೋನಿ ಸ್ವಾಮಿಗೆ ಡಿಬಾಸ್ ಹೊಸ ಪರಿಚಯವೇನಲ್ಲ. ಈ ಹಿಂದೆ ದರ್ಶನ್ ತಮ್ಮ ಸಂಬಂಧಿಕರ ಶವ ಸುಡಲು ಇಲ್ಲಿ ಬಂದಾಗ ಆಂಥೋನಿಯವರನ್ನು ಮಾತಾನಾಡಿಸಿದ್ದರು. ಅಷ್ಟೇ ಅಲ್ಲ ಅವರು ಉಚಿತವಾಗಿ ಶವ ಸುಡುವ ಕೆಲಸವನ್ನು ನೋಡಿ ದುಡ್ಡು ಕೊಟ್ಟಿದ್ದರು. ಈಗ ಅಂಥೋನಿಗೆ ಸಂಬಳ ಸಿಗುತ್ತಿಲ್ಲ. ಮಂಡ್ಯದಲ್ಲಿ ರಾಜಕೀಯ ಮುಖಂಡರ ಚಳಿ ಬಿಡಿಸಿದ ದರ್ಶನ್‍ಗೆ ತನ್ನ ಮಗಳ ಕೈಯಲ್ಲಿ ಪತ್ರ ಬರೆದಿರುವ ಅಂಥೋನಿ ನನ್ನ ಸಂಬಳವನ್ನು ಹೇಗಾದ್ರೂ ಮಾಡಿ ಕೊಡಿಸಿ ಎಂದು ದರ್ಶನ್‍ಗೆ ಮನವಿ ಮಾಡಲಿದ್ದಾರೆ.

    ಪತ್ರದಲ್ಲಿ ಏನಿದೆ?
    ನಾನು 30 ವರ್ಷದಿಂದ ಕಲ್ಲಳ್ಳಿ ಸ್ಮಶಾನದಲ್ಲಿ ವಿದ್ಯುತ್ ಚಿತಗಾರ ಕೆಲಸವನ್ನು ಮಾಡಿಕೊಂಡಿದ್ದೇನೆ. ಇಲ್ಲಿ ಕೆಲಸ ಮಾಡುವವರೆಲ್ಲರಿಗೂ ನಿಮ್ಮ ಮೇಲೆ ಅಪಾರ ಗೌರವವಿದೆ. ಆದರೆ ಅವರ ಮನೆಗಳಲ್ಲಿಯೂ ಸಹ ಪರಿಸ್ಥಿತಿ ಸರಿಯಿಲ್ಲ. ಅವರೆಲ್ಲರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಈ ಸ್ಮಶಾನದಲ್ಲಿ ಕೆಲಸ ಮಾಡಿ ಬಾಡಿಗೆ ಮತ್ತು ಕುಟುಂಬವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಮತ್ತು ಇಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಸಹ ಬಹಳ ಕಷ್ಟವಾಗಿದೆ.

    ಅವರಲ್ಲಿ ಒಬ್ಬನ ಮಗು ಅಂಗವೈಕಲ್ಯಕ್ಕೆ ತುತ್ತಾಗಿದೆ. ಆ ಮಗುವಿಗೆ ಚಿಕಿತ್ಸೆ ನೀಡಲು ಬಹಳ ಕಷ್ಟವಾಗಿದೆ. ಎಷ್ಟೋ ರಾಜಕಾರಣಿಗಳಿಗೆ ಮತ್ತು ಬಿಬಿಎಂಪಿಯವರಿಗೂ ತಿಳಿಸಿದ್ದೇನೆ. ಆದರೆ ಯಾವ ಪ್ರಯೋಜನವಾಗಿಲ್ಲ. ನಿಮ್ಮ ಸೇವಾ ಮನೋಭಾವ ನೋಡಿ ನಿಮ್ಮನ್ನು ಕೇಳಿದರೆ ಏನಾದರೂ ಸಹಾಯವಾಗಬಹುದು ಎಂಬ ನಂಬಿಕೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ಹಸ್ತದಲ್ಲಾದ ಸಹಾಯವನ್ನು ಮಾಡಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

    ದರ್ಶನ್ ತನಗೆ ಸಹಾಯ ಮಾಡೇ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿರುವ ಅಂಥೋನಿ ಭಾನುವಾರ ಅವರ ಮನೆ ಬಳಿ ಹೋಗಿ ಪತ್ರ ನೀಡಲಿದ್ದಾರೆ. ದರ್ಶನ್ ಒಂದು ಮಾತು ಹೇಳಿದರೆ ಅಧಿಕಾರಿಗಳು ಕೇಳುತ್ತಾರೆ ಎಂದು ಅಂಥೋನಿ ನಂಬಿಕೆ ಇಟ್ಟಿದ್ದಾರೆ.

  • ಪಿಸಿ ಮೋಹನ್ ಪರ ಪ್ರಚಾರ ನಡೆಸೋದು ಯಾಕೆ: ಉತ್ತರ ಕೊಟ್ಟ ನಟ ದರ್ಶನ್

    ಪಿಸಿ ಮೋಹನ್ ಪರ ಪ್ರಚಾರ ನಡೆಸೋದು ಯಾಕೆ: ಉತ್ತರ ಕೊಟ್ಟ ನಟ ದರ್ಶನ್

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಭರ್ಜರಿ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಪ್ರಚಾರಕ್ಕಿಳಿದಿದ್ದಾರೆ. ಇದೇ ವೇಳೆ ನಾನು ಎಂಪಿ, ಎಂಎಲ್‍ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ ಎಂದು ಹೇಳಿದ್ದಾರೆ.

    ಸಿವಿ ರಾಮನ್ ನಗರದಲ್ಲಿ ಪ್ರಚಾರ ಮಾಡುವ ವೇಳೆ ಮಾಧ್ಯಮಗಳ ಮಾತನಾಡಿದ ದರ್ಶನ್, “ನಾನು ಮೊದಲನೇ ಬಾರಿಗೆ ಪಿಸಿ ಮೋಹನ್ ಪರ ಪ್ರಚಾರ ಮಾಡುತ್ತಿಲ್ಲ. ಪಿಸಿ ಮೋಹನ್ ನನಗೆ 15 ವರ್ಷದಿಂದ ಸ್ನೇಹಿತರು. ನಾನು ಈ ಹಿಂದೆ ಕೂಡ ಪ್ರಚಾರ ಮಾಡಿದ್ದೆ. ಈಗ ಕೂಡ ಪ್ರಚಾರ ಮಾಡುತ್ತಿದ್ದೇನೆ. ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ. ನಾನು ವ್ಯಕ್ತಿ ನೋಡಿ ಪ್ರಚಾರಕ್ಕೆ ಹೋಗುತ್ತೇನೆ” ಎಂದು ಹೇಳಿದ್ದಾರೆ.

    ನಾನು ಎಂಪಿ, ಎಂಎಲ್‍ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ. ಏಕೆಂದರೆ ನಮ್ಮ ಮನೆಗೆ ಹಾರ್ಟ್ ಆಪರೇಶನ್, ಬೇರೆ ಆಪರೇಶನ್‍ಗೆ ಹಣ ನೀಡಿ ಎಂದು ಜನರು ಕೇಳಿಕೊಂಡು ಬರುತ್ತಾರೆ. ಆಗ ಎಂಪಿ, ಎಂಎಲ್‍ಎ ಅವರಿಂದ ಪತ್ರ ಬಯಸುತ್ತೇನೆ. ಅವರ ಪತ್ರದಿಂದ ಆಸ್ಪತ್ರೆಗಳು ವೈದ್ಯಕೀಯ ಶುಲ್ಕವನ್ನು ಸ್ವಲ್ಪ ಕಡಿಮೆ ಮಾಡಿ ಚಿಕಿತ್ಸೆ ನೀಡುತ್ತವೆ. ಆಪರೇಶನ್‍ಗೆ ಒಂದು ಲಕ್ಷ ರೂ. ಇದ್ದರೆ, ಪತ್ರ ನೋಡಿ 30 ಸಾವಿರ ಕಡಿಮೆ ಮಾಡುತ್ತಾರೆ. ಉಳಿದ ಹಣವನ್ನು ನಾನು ನೀಡಿ ರೋಗಿಗಳಿಗೆ ಸಹಾಯ ಮಾಡುತ್ತೇನೆ” ಎಂದರು.

    ಮಂಗಳವಾರ ನಾನು ಮಂಡ್ಯಕ್ಕೆ ಹೋಗುತ್ತೇನೆ. ಜನರು ಎಳೆದಾಡುವಾಗ ಕೈ ಸ್ವಲ್ಪ ನೋವಾಗಿದೆ. ಬೆಂಗಳೂರಿನಲ್ಲಿ ಸದ್ಯ ಪಿಸಿ ಮೋಹನ್ ಬಿಟ್ಟರೆ ಯಾರ ಪರವಾಗಿ ಪ್ರಚಾರ ಮಾಡುವುದಿಲ್ಲ. ಮತ್ತೆ 13ರಂದು ನಾನು ಪಿಸಿ ಮೋಹನ್ ಪರ ಪ್ರಚಾರಕ್ಕೆ ಬರುತ್ತೇನೆ ಎಂದು ದರ್ಶನ್ ತಿಳಿಸಿದರು.

    ಇಂದು ಸಂಜೆ ಮತ್ತೆ ದರ್ಶನ್ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಶಾಂತಿನಗರ ಬಸ್ ಸ್ಟ್ಯಾಂಡ್‍ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಪಿಸಿ ಮೋಹನ್ ಪರ ದರ್ಶನ್ ಜೊತೆ ಸಂಸದ ರಾಜೀವ್ ಚಂದ್ರಶೇಖರ್, ನಟಿ ತಾರಾ ಅನುರಾಧ ಭಾಗಿಯಾಗಲಿದ್ದಾರೆ.

  • ಪ್ರಚಾರಕ್ಕೆ ಮಕ್ಕಳನ್ನು ಬಳಸುವಂತಿಲ್ಲ – ಚುನಾವಣಾ ಆಯೋಗಕ್ಕೆ ಮಕ್ಕಳ ಆಯೋಗದಿಂದ ಪತ್ರ

    ಪ್ರಚಾರಕ್ಕೆ ಮಕ್ಕಳನ್ನು ಬಳಸುವಂತಿಲ್ಲ – ಚುನಾವಣಾ ಆಯೋಗಕ್ಕೆ ಮಕ್ಕಳ ಆಯೋಗದಿಂದ ಪತ್ರ

    ಬೆಂಗಳೂರು: ಬೇಸಿಗೆ ರಜೆ ಎಂದು ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸುವಂತಿಲ್ಲ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಚುನಾವಣಾ ಆಯೋಗಕ್ಕೆ ಮಕ್ಕಳ ಆಯೋಗ ಪತ್ರ ಬರೆದಿದೆ.

    ಚುನಾವಣಾ ಸಂದರ್ಭದಲ್ಲಿ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಈಗ ಮಕ್ಕಳಿಗೆ ಬೇಸಿಗೆ ರಜೆಯೂ ಇದೆ. ಆದರಿಂದ ಮಕ್ಕಳನ್ನು ಪ್ರಚಾರಕ್ಕೆ ಬಳಸುತ್ತಿರೋದು ಕಂಡುಬಂದರೆ ದೂರು ದಾಖಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಕ್ಕಳ ಬಳಕೆ ಕಂಡು ಬಂದರೆ ಮಕ್ಕಳ ಆಯೋಗದ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ಪಕ್ಷದವರು ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ ಮಾಡುತ್ತಿರುವ ಹಿನ್ನಲೆ ಆಯೋಗಕ್ಕೆ ಪತ್ರ ಬರೆಯಲಾಗಿದೆ.

    ಪತ್ರದಲ್ಲಿ ಏನಿದೆ?
    ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ 2005ರ ಸೆಕ್ಷನ್ 13ರ ಅನ್ವಯ ದೂರುಗಳನ್ನು ವಿಚಾರಣೆಗೊಳಪಡಿಸುವ ಮತ್ತು ಸೆಕ್ಷನ್ 14ರ ಅಡಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಂತೆ ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿರುತ್ತದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳನ್ನು ಆಯೋಗವು ಸ್ವ-ಪ್ರೇರಣೆಯಿಂದ (ಸುಮೊಟೋ) ದೂರು ದಾಖಲಿಸಿ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ.

    ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳಿಗೆ ಬೇಸಿಗೆಯ ನಿಮಿತ್ತ ಶಾಲೆಗಳಿಗೆ ರಜೆ ಘೋಷಿಸಿರುವುದರಿಂದ ಈ ಮಕ್ಕಳನ್ನು ವಿವಿಧ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಕ್ಕಳನ್ನು ಈ ರೀತಿಯ ಚುನಾವಣಾ ಪ್ರಚಾರದಲ್ಲಿ ದುಡಿಸಿಕೊಳ್ಳುವುದು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ.

    ಈ ಬಗ್ಗೆ ತಾವುಗಳು ವೈಯಕ್ತಿಕ ಗಮನ ಹರಿಸಿ, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ/ ಚುನಾವಣಾ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ಮಕ್ಕಳಿಂದ ದುಡಿಮೆಯನ್ನು ಮಾಡಿಸುವಂತಿಲ್ಲ ಹಾಗೂ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ನಿರ್ದೇಶನ ನೀಡುವಂತೆ ಈ ಮೂಲಕ ತಮ್ಮನ್ನು ಕೋರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  • ‘ಕೆಜಿಎಫ್’ ಸಿನಿಮಾ ನೋಡ್ಬೇಕು – ಕರೆಂಟ್ ಕಟ್ ಮಾಡಿದ್ರೆ ಕಚೇರಿಗೆ ಬಾಂಬ್ : ಮೆಸ್ಕಾಂಗೆ ಪತ್ರ

    ‘ಕೆಜಿಎಫ್’ ಸಿನಿಮಾ ನೋಡ್ಬೇಕು – ಕರೆಂಟ್ ಕಟ್ ಮಾಡಿದ್ರೆ ಕಚೇರಿಗೆ ಬಾಂಬ್ : ಮೆಸ್ಕಾಂಗೆ ಪತ್ರ

    ಬೆಂಗಳೂರು: ಶನಿವಾರ ದೇಶಾದ್ಯಂತ ಹವಾ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆಂಟ್ ತೆಗೆದರೆ ಕಚೇರಿಗೆ ಬಾಂಬ್ ಹಾಕುತ್ತೇವೆ ಹುಷಾರ್ ಎಂದು ಭದ್ರಾವತಿಯ ಮೆಸ್ಕಾಂಗೆ ಪತ್ರವೊಂದು ಬಂದಿದೆ.

    ಟಿವಿಯಲ್ಲಿ ಪ್ರಸಾರವಾಗುವ ಕೆಜಿಎಫ್ ಸಿನಿಮಾ ನೋಡಲು ಯಾವುದೇ ತೊಂದರೆಯಾಗಬಾರದೆಂದು ಭದ್ರಾವತಿ ಮೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತರೊಬ್ಬರ ಹೆಸರಿನಲ್ಲಿ ಪತ್ರ ಬಂದಿದೆ. ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಪತ್ರದಲ್ಲಿ ಏನಿದೆ?
    ಈ ಮೂಲಕ ಕೆಇಬಿ ಮೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಸುವುದೆನೆಂದರೆ ಶನಿವಾರ ಭದ್ರಾವತಿಯಲ್ಲಿ ಕರೆಂಟ್ ಏನಾದರೂ ತೆಗೆದರೆ ನೀವು ಇರಲ್ಲ, ನಿಮ್ಮ ಕಚೇರಿನೂ ಇರಲ್ಲ. ಸುಟ್ಟು ಭಸ್ಮ ಮಾಡುತ್ತೇವೆ. ಹಾಗೇ ಶನಿವಾರ ಸಂಜೆ ಯಶ್ ನಟಿಸಿರುವ ಕೆಜಿಎಫ್ ಚಲನಚಿತ್ರ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಎಚ್.ಡಿ. ಕುಮಾರಸ್ವಾಮಿ, ಅಪ್ಪಾಜಿ ಇವರ ಕುಮ್ಮಕ್ಕಿನಿಂದ ಕರೆಂಟ್ ತೆಗೆದರೆ ನಿಮ್ಮ ಆಫಿಸ್‍ಗೆ ಸರಿಯಾದ ಬಾಂಬ್ ಹಾಕುತ್ತೇವೆ.

    ಸೋಮವಾರ ನಿಖಿಲ್ ನಾಮಿನೇಷನ್ ದಿನ 24 ಗಂಟೆ ವಿದ್ಯುತ್ ಪೂರೈಕೆ ಮಾಡಿ ಎಂದು ಸಿಎಂ ಕುಮಾರಸ್ವಮಿ ಚೆಸ್ಕಾಂಗೆ ಸೂಚನೆ ಕೊಟ್ಟಿದ್ದರು. ಅಲ್ಲದೇ ಸುಮಲತಾ ನಾಮಿನೇಷನ್ ದಿನ ಮಂಡ್ಯದಲ್ಲಿ ಕೇಬಲ್ ಕಟ್ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

  • ಅಧಿಕಾರ ಮುಖ್ಯವಲ್ಲ, ನಂಬಿದ ಕಾರ್ಯಕರ್ತರು ಮುಖ್ಯ: ಡಿಸಿಎಂಗೆ ಪತ್ರ

    ಅಧಿಕಾರ ಮುಖ್ಯವಲ್ಲ, ನಂಬಿದ ಕಾರ್ಯಕರ್ತರು ಮುಖ್ಯ: ಡಿಸಿಎಂಗೆ ಪತ್ರ

    ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿಸಿಎಂಗೆ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮಿ ನಾರಾಯಣ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ಮಾನ್ಯ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ. ಪರಮೇಶ್ವರ್ ರವರಿಗೆ ನಮ್ಮ ಜನರ ನಾಡಿ ಮಿಡಿತವನ್ನು ತಮ್ಮ ಅವಗಾನೆಗೆ ತಿಳಿಸುವೆ. ಮಾನ್ಯರೇ, ತಮಗೆ ರಾಜಕೀಯ ಅನುಭವ ಹಾಗೂ ಸತತ 7 ವರ್ಷಗಳ ಕಾಲ ರಾಜಾಧ್ಯಕ್ಷರಾಗಿ ಅಪಾರ ಅನುಭವ ಹೊಂದಿದ್ದೀರಿ. ತುಮಕೂರು ಲೋಕಸಭಾ ಸ್ಥಾನ ಹಾಲಿ ಸಂಸದರಿಗೆ ನೀಡದಿರುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಇಡೀ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ತಾವು ಪಕ್ಷದ ಮೇಲೆ ಮುನಿಸು ಎಂಬ ಮಾಧ್ಯಮ ವರದಿ ನಗೆ ಪಾಟೀಲಗುವ ಹಂತದಲ್ಲಿ ಬಂದಿದೆ.

    ತಾವು ಉಪ ಮುಖ್ಯಮಂತ್ರಿಗಳಾಗಿ ಸರ್ಕಾರದ ಭಾಗಿಗಳಾಗಿ ಹೈಕಮಾಂಡ್‍ಗೆ ತುಂಬಾ ಹತ್ತಿರಾಗಿದ್ದೀರಿ. ತಾವು ನಿರ್ವಹಿಸುವ ಜಿಲ್ಲೆಗೆ ಲೋಕಸಭಾ ಸೀಟು ಕೊಡಿಸಲು ಸಾಧ್ಯವಾಗಲಿಲ್ಲ ಎಂದರೆ ನಗೆಪಾಟಲು ಆಗುವ ಸಾಧ್ಯತೆಗಳು ಜಾಸ್ತಿಯಾಗಿದೆ. ಆದ ಕಾರಣ ತಕ್ಷಣವೇ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ಕರೆದು ಮುಂದಿನ ನಿರ್ಣಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಅಧಿಕಾರ ಮುಖ್ಯವಲ್ಲ ಕೇವಲ ಮುಂದಿನ ಎರಡು ತಿಂಗಳಲ್ಲಿ ನಿಮ್ಮ ಅಧಿಕಾರ ಇರುತ್ತೋ ಇಲ್ಲವೋ ತಿಳಿಯದು, ನಂಬಿದ ಜಿಲ್ಲೆಯ ಜನರಿಗೆ ಕಾರ್ಯಕರ್ತರಿಗೆ ಆಗಿರುವ ಅವಮಾನ ಅಷ್ಟಿಷ್ಟಲ್ಲ. ಇದಕ್ಕೆ ತಾವೇ ಉತ್ತರ ಕೊಡಬೇಕಾಗುತ್ತದೆ.

    ಈಗಲೂ ಕಾಲ ಮಿಂಚಿಲ್ಲ ತಡ ಮಾಡದೇ ಮಾನ್ಯ ಸಂಸದರಾದ ಮುದ್ದ ಹನುಮೇಗೌಡರಿಗೆ ಸೀಟು ಕೊಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಇಲ್ಲದಿದ್ದರೆ ಮುಂದಿನ ರಾಜಕೀಯ ಭವಿಷ್ಯ ಕತ್ತಲಾದೀತು. ಉಪ ಮುಖ್ಯಮಂತ್ರಿಗಳ ಸ್ಥಾನ ಮುಖ್ಯವಲ್ಲ ನಂಬಿದ ಕಾರ್ಯಕರ್ತರು ಮುಖ್ಯ ಎಂಬುದು ಮರೆಯಬೇಡಿ. ಮುಂದೆ ನುಗ್ಗಿ ನಿಮ್ಮ ಜೊತೆ ಸದಾ ನಾವಿದ್ದೇವೆ. ನನಗೆ ರಾಜಕಾರಣದ ಕುತಂತ್ರದ ಅರಿವಿದೆ. ಆದರೆ ನಾನು ಮಾತನಾಡುವ ಹಾಗಿಲ್ಲ. ಪಕ್ಷದ ಪ್ರಾಮಣಿಕ ಕಾರ್ಯಕರ್ತನಾಗಿ ಮುಂದಿನ ರಾಜಕೀಯ ಸೂಚನೆ ತಿಳಿಸಿರುವೆ.

    ತಾವು ತುಂಬಾ ಬಿಡುವು ಇಲ್ಲದಿರುವ ಹಾಗೂ ಅನೇಕ ಬಾರಿ ತಮ್ಮ ಮನೆಗೆ ಹಾಗೂ ಕಛೇರಿಗೆ ಬಂದರೂ ಭೇಟಿ ಮಾಡಲು ಸಾಧ್ಯವಾಗದಿರುವ ಕಾರಣ ಈ ಮೂಲಕ ತಮಗೆ ವಿನಂತಿಸುವೆ. ದಿಟ್ಟ ಹೆಜ್ಜೆ ಇಡಿ. ಧನ್ಯವಾದಗಳು. ಎಂ.ಡಿ.ಲಕ್ಷ್ಮಿನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು, ಅಧ್ಯಕ್ಷರು ಹಿಂದುಳಿದ ವರ್ಗಗಳ ವಿಭಾಗ. ಪ್ರದೇಶ ಕಾಂಗ್ರೆಸ್ ಸಮಿತಿ. ಕರ್ನಾಟಕ ಅಧ್ಯಕ್ಷರು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.