Tag: letter

  • ಸ್ಪೀಕರ್ ಬಳಿ ಕಾಲಾವಕಾಶ ಕೇಳಿದ ರೋಷನ್ ಬೇಗ್

    ಸ್ಪೀಕರ್ ಬಳಿ ಕಾಲಾವಕಾಶ ಕೇಳಿದ ರೋಷನ್ ಬೇಗ್

    ಬೆಂಗಳೂರು: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿ ಮಾಜಿ ಸಚಿವ ರೋಷನ್ ಬೇಗ್, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

    ರೋಷನ್ ಬೇಗ್ ಅವರು ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ 4:30 ಗಂಟೆಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮೂರು ದಿನ ಬಿಟ್ಟು ವಿಚಾರಣೆಗೆ ದಿನಾಂಕ ನಿಗದಿ ಮಾಡಿ ಎಂದು ಸ್ಪೀಕರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಪತ್ರವನ್ನು ತಮ್ಮ ಆಪ್ತರ ಬಳಿ ಕೊಟ್ಟು ಸ್ಪೀಕರ್ ಕಚೇರಿಗೆ ಕಳುಹಿಸಿದ್ದಾರೆ.

    ಪಕ್ಷ ವಿರೋಧಿ ಚಟುವಟಿಕೆಯಿಂದ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ಸಿನಿಂದ ವಜಾ ಮಾಡಲಾಗಿತ್ತು. ಈ ಬೆನ್ನಲ್ಲೇ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಯಿತು. ಹೀಗಾಗಿ ರೋಷನ್ ಬೇಗ್ ಅವರು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಅತೃಪ್ತ ಶಾಸಕರಿಗೆ ವಕೀಲ ರೋಹ್ಟಗಿ ಅಭಯ

    ಅತೃಪ್ತ ಶಾಸಕರಿಗೆ ವಕೀಲ ರೋಹ್ಟಗಿ ಅಭಯ

    ಬೆಂಗಳೂರು: ಸುಪ್ರೀಂಕೋರ್ಟ್ ಅಂಗಳದಲ್ಲಿ ಪ್ರಕರಣ ಇರುವುದರಿಂದ ನೀವು ಯಾವುದಕ್ಕೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ, ಅತೃಪ್ತ ಶಾಸಕರಿಗೆ ಅಭಯ ನೀಡಿದ್ದಾರೆ.

    ಕಾಂಗ್ರೆಸ್ ಜುಲೈ 11ರಂದು ಕೊಟ್ಟಿರುವ ವಿಪ್ ನಿಮಗೆ ಅನ್ವಯ ಆಗುದಿಲ್ಲ. ಅಷ್ಟೇ ಅಲ್ಲದೆ ಮಂಗಳವಾರದವರೆಗೂ ಸ್ಪೀಕರ್ ಕ್ರಮಕೈಗೊಳ್ಳಲು ಬರುವುದಿಲ್ಲ. ಸುಪ್ರೀಂಕೋರ್ಟ್ ಆದೇಶ ಕೇವಲ ಅನರ್ಹತೆ ಬಗ್ಗೆ ಮಾತ್ರ ಸಿಮೀತವಾಗಿರಲ್ಲ ಎಂದು ರೋಹ್ಟಗಿ ಅವರು, ಪತ್ರ ಬರೆದು ವಕೀಲರ ಮೂಲಕ ರೆಬಲ್ ಶಾಸಕರಿಗೆ ತಲುಪಿಸಿದ್ದಾರೆಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿ, ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಮಂಗಳವಾರದವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ನೀವು ಅನರ್ಹತೆ ಭಯದಿಂದ ಇರುವುದು ಅಗತ್ಯವಿಲ್ಲ. ವಿಪ್ ನೀಡಿರುವ ಬಗ್ಗೆ ವಿಚಾರಣೆ ವೇಳೆ ಉಲ್ಲೇಖಿಸಿದ್ದೇನೆ. ವಿಪ್ ಉಲ್ಲಂಘನೆ ಬಗ್ಗೆಯೂ ಭಯ ಪಡಬೇಕಿಲ್ಲ. ಅನರ್ಹತೆ ನಿರ್ದಿಷ್ಟ ವಿಚಾರದ ಕುರಿತು ವಿಚಾರಣೆ ನಡೆಯುತ್ತಿಲ್ಲ ಅಂತ ರೋಹ್ಟಗಿ ತಿಳಿಸಿದ್ದಾರೆ ಎಂದು ಕೇಳಿಬಂದಿದೆ.

    ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಭಯದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಹೀಗಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರ ಮೂಲಕ ರೆಬಲ್ ಶಾಸಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು ರೊಹ್ಟಗಿ ಅಸ್ತ್ರವನ್ನು ಪ್ರಯೋಗಿಸಿ ಶಾಸಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

  • ಹುಟ್ಟುಹಬ್ಬಕ್ಕೆ ಪತ್ನಿ, ಪುಟ್ಟ ಮಗನಿಂದ ಸಿಕ್ತು ಪತ್ರ – ಸಂತಸಪಟ್ಟ ರಿಷಬ್

    ಹುಟ್ಟುಹಬ್ಬಕ್ಕೆ ಪತ್ನಿ, ಪುಟ್ಟ ಮಗನಿಂದ ಸಿಕ್ತು ಪತ್ರ – ಸಂತಸಪಟ್ಟ ರಿಷಬ್

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಜುಲೈ 7ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಿಷಬ್ ಹುಟ್ಟುಹಬ್ಬದ ಪ್ರಯುಕ್ತ ಅವರ ಪತ್ನಿ ಹಾಗೂ ಮಗ ಒಂದು ಪತ್ರವನ್ನು ನೀಡಿದ್ದು, ಆ ಪತ್ರವನ್ನು ಅವರು ಮಂಗಳವಾರ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿಕೊಂಡಿದ್ದಾರೆ.

    ರಿಷಬ್ ಶೆಟ್ಟಿ ತಮ್ಮ ಟ್ವಿಟ್ಟರಿನಲ್ಲಿ ಎರಡು ಟ್ವೀಟ್‍ಗಳನ್ನು ಮಾಡಿದ್ದಾರೆ. ಒಂದು ಟ್ವೀಟ್‍ನಲ್ಲಿ ಕೇಕ್, ಪತ್ನಿ ಪ್ರಗತಿ ಹಾಗೂ ಮಗನ ಜೊತೆಯಿರುವ ಫೋಟೋ ಹಂಚಿಕೊಂಡರೆ, ಮತ್ತೊಂದು ಟ್ವೀಟ್‍ನಲ್ಲಿ ಮಗನ ಹೆಜ್ಜೆ ಗುರುತು ಹಾಗೂ ಪತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಫೋಟೋದಲ್ಲಿ ರಿಷಬ್ ತಮ್ಮ ಮಗನ ಮುಖವನ್ನು ರಿವೀಲ್ ಮಾಡಿಲ್ಲ.

    ಟ್ವೀಟ್‍ನಲ್ಲಿ ಏನಿದೆ?
    ರಿಷಬ್ ತಮ್ಮ ಮೊದಲನೇ ಟ್ವೀಟ್‍ನಲ್ಲಿ, “ಹುಟ್ಟುಹಬ್ಬದ ಸಂಭ್ರಮಕ್ಕೆ `ಚೆರ್ರಿ ಆನ್ ದಿ ಕೇಕ್’ ಎಂಬಂತೆ, ಮಗನಿಗೆ ಮೂರು ತಿಂಗಳು ತುಂಬಿದ ಸಂತಸವು ಜೊತೆಯಾಗಿದೆ. ಈ ಹುಟ್ಟುಹಬ್ಬಕ್ಕೆ ತುಟಿಯರಳಿಸಿ ನಗುವ, ಈ ಮುದ್ದು ಕಂದನನ್ನು ಉಡುಗೊರೆಯಾಗಿ ಕೊಟ್ಟ ಪ್ರಗತಿ, ಅವನ ಪಾದಗಳ ಗುರುತಿನ ಜೊತೆಗೆ, ಅವನೇ ಸಹಿ ಮಾಡಿದ ಈ ಮುದ್ದಾದ ಪತ್ರವನ್ನೂ ನೀಡಿದ್ದಾಳೆ ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ, “ಇದಕ್ಕಿಂತ ಹೆಚ್ಚಿನ ಖುಷಿಯನ್ನು ಜಗತ್ತಿನ ಮತ್ಯಾವ ಉಡುಗೊರೆಗಳೂ ನೀಡಲು ಸಾಧ್ಯವಿಲ್ಲ. ಮುಂದೆ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮನೆಯ ತುಂಬಾ ಓಡಾಡುವ ಕ್ಷಣಗಳಿಗಾಗಿ ಕಾತರದಿಂದ ಕಾಯುತ್ತಾ, ಈ ದಿನದ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

    ನಟ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಏಪ್ರಿಲ್ 7ರಂದು ಗಂಡು ಮಗು ಜನಿಸಿತ್ತು. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡಿ, ”Yes?? it’s a Hero” ಎಂದು ಬರೆದ ಹುಡುಗನ ಎಮೋಜಿ ಹಾಕಿದ್ದರು. ರಿಷಬ್ ಶೆಟ್ಟಿ ಅವರು ಫ್ರೆಬವರಿ 9 ರಂದು 2017 ರಲ್ಲಿ ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು.

  • ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗುತ್ತಾ 36 ಪತ್ರಗಳು

    ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗುತ್ತಾ 36 ಪತ್ರಗಳು

    ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಮೈತ್ರಿ ಸರ್ಕಾರದ ಈ ಸ್ಥಿತಿಗೆ ಆ 36 ಪತ್ರಗಳು ಒಂದು ಕಾರಣ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ ಒಟ್ಟು 36 ಪತ್ರಗಳನ್ನು ಸಿಎಂಗೆ ಬರೆದಿದ್ದರು. ಇಷ್ಟು ಪತ್ರ ಬರೆದಿದ್ದರೂ ಒಂದು ಪತ್ರವನ್ನು ಸಿಎಂ ಗಂಭೀರವಾಗಿ ಪರಿಗಣಿಸಿಯೇ ಇಲ್ಲವಂತೆ. ಈ ಕಾರಣಕ್ಕೆ ಅಸಮಾಧಾನಗೊಂಡಿದ್ದ ಎಚ್.ವಿಶ್ವನಾಥ್ ಲೋಕಸಭಾ ಚುನಾವಣೆಯ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

    ರಾಜೀನಾಮೆ ನೀಡಿದ ಬಳಿಕವೂ ಸಿಎಂ ಪತ್ರಕ್ಕೆ ಸ್ಪಂದಿಸಬಹುದು ಎನ್ನುವ ನಿರೀಕ್ಷೆಯನ್ನು ವಿಶ್ವನಾಥ್ ಇಟ್ಟುಕೊಂಡಿದ್ದರು. ಇಷ್ಟಾದರೂ ಸಿಎಂ ವಿಶ್ವನಾಥ್ ಅವರ ಪತ್ರಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಈ ಅವಮಾನವೇ ‘ಹಳ್ಳಿ ಹಕ್ಕಿ’ಯ ಆಕ್ರೋಶಕ್ಕೆ ಕಾರಣವಾಗಿ, ಈ ಸಿಟ್ಟು ಸ್ಫೋಟಗೊಂಡು ಈಗ ಸರ್ಕಾರವನ್ನು ಕುಕ್ಕಿ ಬೀಳಿಸುವ ಹಂತಕ್ಕೆ ತಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

    ಎಚ್.ವಿಶ್ವನಾಥ್ ಅವರು ಕ್ಷೇತ್ರದ ಸಮಸ್ಯೆ, ಕೆಲ ವರ್ಗಾವಣೆ ಪತ್ರಗಳನ್ನು ಕೊಟ್ಟಿದ್ದರು. ಸಿಎಂ ಆಗಲಿ, ಅವರ ಆಪ್ತ ಸಹಾಯಕರಾಗಲಿ, ಅಧಿಕಾರಿಗಳಾಗಲಿ ಈ ಪತ್ರಗಳಿಗೆ ಕ್ಯಾರೇ ಅಂದಿರಲಿಲ್ಲ. ಇದರಿಂದ ಬೇಸರಗೊಂಡ ಹಿರಿಯ ನಾಯಕ ಎಚ್.ವಿಶ್ವನಾಥ್, ಸಿಎಂ ವಿರುದ್ಧ ಬಂಡೇಳಲು ವೇದಿಕೆ ನಿರ್ಮಿಸಿ ಈಗ ಬಹಿರಂಗವಾಗಿಯೇ ಸಮರ ಸಾರಿದ್ದಾರೆ.

    ಜೆಡಿಎಸ್‍ನ ಮೂವರು ಶಾಸಕರಿಗೆ ಧೈರ್ಯತುಂಬಿ ಪಕ್ಷ ಬಿಡುವಂತೆ ಸೂಚಿಸಿದ್ದಾರೆ. ಟೀಂನಲ್ಲಿದ್ದ ಮೂವರ ಪೈಕಿ ಸದಸ್ಯ ಇಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಓರ್ವ ಶಾಸಕ ಮಾತ್ರ ರಾಜೀನಾಮೆ ಲಿಸ್ಟ್‍ನಿಂದ ಹೊರಗೆ ಇದ್ದಾರೆ.

    ಅತೃಪ್ತ ಶಾಸಕರ ನೇತೃತ್ವವನ್ನು ವಿಶ್ವನಾಥ್ ವಹಿಸಿಕೊಂಡಿದ್ದು ಶನಿವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ನಮ್ಮ ರಾಜೀನಾಮೆಗೆ ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಹೇಳಿದ್ದರು.

    ಕ್ಷಿಪ್ರ ಬೆಳವಣಿಗೆಗೆ ಸರ್ಕಾರ ನಡೆಸುವವರೇ ಕಾರಣ. ಸಮ್ಮಿಶ್ರ ಸರ್ಕಾರ ಜನರ ಆಶೋತ್ತರಗಳನ್ನು ಅರ್ಥೈಸಿಕೊಂಡು ಎರಡು ಪಕ್ಷದ ಶಾಸಕರನ್ನು ಒಂದಾಗಿ ಕರೆದುಕೊಂಡು ಹೋಗಲು ವಿಫಲವಾಗಿದೆ. ಸರ್ಕಾರ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಎಲ್ಲರ ಸಲಹೆ ತೆಗೆದುಕೊಂಡು ಹೋಗಲು ವಿಫಲವಾಗಿದೆ. ಪ್ರಮುಖವಾಗಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಸತ್ತು ಹೋಗಿದೆ. ಇದೂ ಸರ್ಕಾರ ನಡೆಗೆ ಬಹುಮುಖ್ಯ ಉದಾಹರಣೆಯಾಗಿದೆ. ಇಂತಹ ಹಲವು ಕಾರ್ಯಗಳು ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ. ಸರ್ಕಾರ ನಡೆಸುವವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪ ಮಾಡದೇ ಟೀಕಿಸಿದ್ದರು.

  • ಕಲಾಂರ ಜನ್ಮದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಬಿಜೆಪಿ ನಾಯಕನ ಮನವಿ

    ಕಲಾಂರ ಜನ್ಮದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಬಿಜೆಪಿ ನಾಯಕನ ಮನವಿ

    ನವದೆಹಲಿ: ಮಾಜಿ ರಾಷ್ಟ್ರಪತಿ, ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸಲು ಮಾಜಿ ರಾಜ್ಯಸಭಾ ಸಂಸದ ಮತ್ತು ಬಿಜೆಪಿ ಮುಖಂಡ ಆನಂದ್ ಭಾಸ್ಕರ್ ರಾಪೋಲು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಅಕ್ಟೋಬರ್ 15 ರಂದು ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್ ಅವರಿಗೆ ಆನಂದ್ ಭಾಸ್ಕರ್ ರಾಪೋಲು ಪತ್ರ ಬರೆದು ಮನವಿ ಮಾಡಿದ್ದಾರೆ. ಈಗಾಗಲೇ ವಿಶ್ವಸಂಸ್ಥೆ ಕಲಾಂರ ಹುಟ್ಟುಹಬ್ಬದ ದಿನವನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿದೆ. ಹೀಗಾಗಿ ದೇಶಾದ್ಯಂತ ವಿದ್ಯಾರ್ಥಿ ದಿನಾಚರಣೆಯಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಪ್ರಸ್ತಾಪಿಸಿದ್ದಾರೆ.

    ಜೂನ್ 21ರಂದು ಇದೇ ರಾಷ್ಟ್ರವು ವಿಶ್ವ ಯೋಗ ದಿನಾಚರಣೆ ಮತ್ತು ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಆಚರಿಸುವಂತೆಯೇ, ಕಲಾಂ ಅವರ ಜನ್ಮದಿನವನ್ನು ಅದೇ ಉತ್ಸಾಹದಿಂದ ವಿಶ್ವ ವಿದ್ಯಾರ್ಥಿ ದಿನವನ್ನಾಗಿ ಆಚರಿಸಬೇಕೆಂದು ಆನಂದ್ ಭಾಸ್ಕರ್ ಒತ್ತಾಯಿಸಿದ್ದಾರೆ.

    ಅಕ್ಟೋಬರ್ 15 ರಂದು ರಾಷ್ಟ್ರೀಯ ವಿದ್ಯಾರ್ಥಿ ದಿನವೆಂದು ಘೋಷಿಸಬೇಕು. ಹಾಗೆಯೇ ಎಲ್ಲಾ ಹಂತದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತವಾಗಿ ಈ ದಿನವನ್ನು ಆಚರಿಸುವಂತೆ ಸೂಚಿಸಲು ನಾನು ಪ್ರಾರ್ಥಿಸುತ್ತೇನೆ. ಇದರಿಂದಾಗಿ ಕ್ಷಿಪಣಿ ವ್ಯಕ್ತಿ ಕನಸು ಕಂಡಂತೆ, ನೀವು ಈ ದಿನವನ್ನು ನಮ್ಮ ವಿದ್ಯಾರ್ಥಿಗಳ ಮನಸ್ಸನ್ನು ಬೆಳಗಿಸುವ ಕ್ಷಣವನ್ನಾಗಿ ಬಳಸಿಕೊಳ್ಳಬಹುದು ಎಂದು ಆನಂದ್ ಭಾಸ್ಕರ್ ಅವರು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿ ಮನವಿ ಮಾಡಿಕೊಂಡಿದ್ದಾರೆ.

  • ಗಿರೀಶ್ ಕಾರ್ನಾಡ್ ಬರೆದ ಪತ್ರ ಬಹಿರಂಗ ಪಡಿಸಿದ ಪ್ರಕಾಶ್ ರಾಜ್

    ಗಿರೀಶ್ ಕಾರ್ನಾಡ್ ಬರೆದ ಪತ್ರ ಬಹಿರಂಗ ಪಡಿಸಿದ ಪ್ರಕಾಶ್ ರಾಜ್

    ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುಭಾಷ ನಟ ಪ್ರಕಾಶ್ ರಾಜ್ ತಮಗೆ ಗಿರೀಶ್ ಕಾರ್ನಾಡ್ ಅವರು ಬರೆದ ಪತ್ರವನ್ನು ಬಹಿರಂಗಗೊಳಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

    ಪ್ರಕಾಶ್ ರಾಜ್ ಅವರ 50ನೇ ಹುಟ್ಟುಹಬ್ಬಕ್ಕೆ ಗಿರೀಶ್ ಕಾರ್ನಾಡ್ ಅವರು ಪ್ರೀತಿಯಿಂದ ಪತ್ರ ಬರೆದು ಶುಭಕೋರಿದ್ದರು. ಆ ಪತ್ರದ ಪ್ರತಿಯನ್ನು ಇಂದು ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ನೆನೆದು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಗಿರೀಶ್ ಕಾರ್ನಾಡ್ ಒಬ್ಬ ಒಳ್ಳೆಯ ಮನುಷ್ಯರಾಗಿದ್ದರು – ಹ್ಯಾಟ್ರಿಕ್ ಹೀರೋ

    ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ. ನೀವು ಸಮೃದ್ಧವಾದ, ಸೂರ್ತಿದಾಯಕ ಜೀವನವನ್ನು ನಡೆಸಿದ್ದಕ್ಕೆ ಗಿರೀಶ್ ಕಾರ್ನಾಡ್ ಜಿ ನಿಮಗೆ ಧನ್ಯವಾದಗಳು. ನಿಮ್ಮ ಜೊತೆ ನಾನು ಕಳೆದ ಪ್ರತಿ ಕ್ಷಣವೂ ಜೀವಂತಾವಾಗಿದೆ. ನಿಮ್ಮನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ನನ್ನ ಜೀವನದಲ್ಲಿ ನಿಮ್ಮ ಆದರ್ಶ ಸದಾ ಪಾಲಿಸುತ್ತೇನೆ ಎಂದು ಬರೆದು ಅವರು ಬರೆದ ಪತ್ರವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಒಂದೇ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ವಿ: ಕಾರ್ನಾಡ್‍ರನ್ನ ನೆನೆದ ಪಾಪು

    ಪತ್ರದಲ್ಲಿ ಏನಿದೆ?
    ಪ್ರೀತಿಯ ಪ್ರಕಾಶ್ ರಾಜ್, ನಿಮಗೆ ಇಂದು ಐವತ್ತು ತುಂಬಿತೇ? ನಂಬಲಾಗುತ್ತಿಲ್ಲ. ಐವತ್ತು ತಲುಪುವುದು ಕಠಿಣ ಮಾತಲ್ಲ ನಿಜ, ಆರೋಗ್ಯವಾಗಿದ್ದರೆ ಯಾರಾದರೂ ಆ ಅಂಕಿಯನ್ನು ಮುಟ್ಟಬಹುದು. ಆದರೆ ನೀವು ಮಾತ್ರ ಈ ಐವತ್ತರಲ್ಲಿ ಎಷ್ಟೇಲ್ಲಾ ಯಶಸ್ಸನ್ನು, ಪ್ರತಿಭೆಯನ್ನು ತುಂಬಿದ್ದೀರಿ! ನೀವು ದಿನೇದಿನೇ ಬೆಳೆಯುತ್ತ ಭಾರತದುದ್ದಕ್ಕೂ ರೆಂಬೆ-ಕೊಂಬೆಗಳನ್ನು ಚಾಚುತ್ತಿರುವುದನ್ನ ನಿಮ್ಮ ಮಿತ್ರರಾದ ನಾವು ದೂರದಿಂದ ನೋಡಿ ನಲಿದಿದ್ದೇವೆ, ಹೆಮ್ಮೆಯಿಂದ ಬೀಗಿದ್ದೇವೆ.

    ಹೀಗೆಯೇ ಮತ್ತು ಎತ್ತರ ಬೆಳೆಯುತ್ತಿರಿ, ಬೆಳಗುತ್ತಿರಿ. ಬೆಳಗುತ್ತಲೇ ನೂರನ್ನು ದಾಟಿ ಹೋಗಿರಿ. ನಿಮ್ಮ ಗಿರೀಶ್ ಕಾರ್ನಾಡ್ ಎಂದು ಪತ್ರ ಬರೆದು ಶುಭಕೋರಿದ್ದರು.

    ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ವಿದ್ಯುತ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಕನ್ನಡಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಕೆಲವೇ ಗಣ್ಯರಲ್ಲಿ ಕಾರ್ನಾಡ್ ಒಬ್ಬರು: ಚಂಪಾ

    ಸಂಜೆ ಮೇಲೆ ಬೈಯಪ್ಪನಹಳ್ಳಿಯಲ್ಲಿರುವ ಕಲ್ಲಪಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಸಚಿವರು, ಗಣ್ಯರು ಯಾರು ಬರುವುದು ಬೇಡ. ಸಾರ್ವಜನಿಕ ದರ್ಶನ ಇರುವುದಿಲ್ಲ. ಯಾವುದೇ ವಿಧಿ ವಿಧಾನ ಇರುವುದಿಲ್ಲ ಎಂದು ನಿರ್ದೇಶಕ ಕೆ.ಎಂ ಚೈತನ್ಯ ತಿಳಿಸಿದ್ದಾರೆ.

    ಮಧ್ಯಾಹ್ನ ನಾವು ಅಂತ್ಯ ಸಂಸ್ಕಾರದ ಸಮಯದ ನಿಗದಿ ಮಾಡುತ್ತೇವೆ. ಅಪಾರ್ಟ್ ಮೆಂಟ್ ಬಳಿ, ಸಾರ್ವಜನಿಕರು ರಾಜಕಾರಣಿಗಳು ಬರುವುದು ಬೇಡ ಎಂದು ಪತ್ನಿ ಸರಸ್ವತಿ ಕಾರ್ನಾಡ್ ಮನವಿ ಮಾಡಿಕೊಂಡಿದ್ದಾರೆ.

  • ಜೈಲಿನಿಂದ್ಲೇ ಪೋಷಕರಿಗೆ ಪತ್ರ ಬರೆದ ವರ್ಷಿಣಿ

    ಜೈಲಿನಿಂದ್ಲೇ ಪೋಷಕರಿಗೆ ಪತ್ರ ಬರೆದ ವರ್ಷಿಣಿ

    ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ಕೇಸಿನಲ್ಲಿ ಜೈಲು ಶಿಕ್ಷೆಯಲ್ಲಿರುವ ವರ್ಷಿಣಿ ತಮ್ಮ ತಂದೆ-ತಾಯಿಗೆ ಪತ್ರವೊಂದನ್ನು ಬರೆದಿದ್ದಾಳೆ.

    ವರ್ಷಿಣಿಗೆ ತಾನು ಮಾಡಿದ್ದ ತಪ್ಪಿನ ಬಗ್ಗೆ ಜ್ಞಾನೋದಯವಾದಂತಿದೆ. ಪತ್ರದಲ್ಲಿ ಪೋಷಕರಲ್ಲಿ ವರ್ಷಿಣಿ ಕ್ಷಮೆ ಕೇಳಿದ್ದಾಳೆ. ಜೂನ್ 4 ರಂದು ಆರೋಪಿ ವರ್ಷಿಣಿಯ ಹುಟ್ಟು ಹಬ್ಬವಿತ್ತು. ಅದೇ ದಿನ ವರ್ಷಿಣಿ ಜೈಲಿನಿಂದ ಪೋಷಕರಿಗೆ ಪತ್ರ ಬರೆದಿದ್ದಾಳೆ. ತನ್ನ ತಾಯಿ ಪದ್ಮ ಜೈಲಿಗೆ ಮಗಳನ್ನ ನೋಡಿಕೊಂಡು ಬರುವುದಕ್ಕೆ ಹೋದಾಗ ತಾಯಿ ಕೈಯಲ್ಲಿ ಪತ್ರ ಕಳಿಸಿಕೊಟ್ಟಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

    ಪತ್ರದಲ್ಲಿ ಏನಿದೆ?
    ಐ ಲವ್ ಯೂ ಅಪ್ಪ, ಅಮ್ಮ Sorry..sorry.sorry… ಹಲೋ ಮಮ್ಮಿ ಡ್ಯಾಡಿ ಎಲ್ಲರೂ ಹೇಗಿದ್ದೀರಾ. ನನಗೆ ಜೈಲಿನಲ್ಲಿರುವುದಕ್ಕೆ ಹಿಂಸೆ ಆಗುತ್ತಿದೆ. ಅಮ್ಮ-ಅಪ್ಪ ನೀವೆಲ್ಲ ತುಂಬಾನೇ ಒಳ್ಳೆಯವರು, ನಾನು ಕೆಟ್ಟವಳು. ನಾನು ಕೆಟ್ಟ ಹುಡುಗಿ, ನನ್ನಿಂದ ನಿಮಗೆ ತುಂಬಾ ತೊಂದರೆಯಾಗಿದೆ. ನನ್ನನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗಿ. ಜೈಲಿನಲ್ಲಿ ಇರುವುದಕ್ಕೆ ರೋದನೆ ಆಗುತ್ತಿದೆ. ಈ ರೀತಿ ಮನಶಾಂತಿ ಬೇಕೆಂದು ಪೋಷಕರ ಬಳಿ ಆರೋಪಿ ವರ್ಷಿಣಿ ತನ್ನ ಅಳಲನ್ನ ತೋಡಿಕೊಂಡಿದ್ದಾಳೆ. ಇದನ್ನೂ ಓದಿ: ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

    ವರ್ಷಿಣಿ ವಿರುದ್ಧ ಪೊಲೀಸರು ಕೋಕಾ ಆ್ಯಕ್ಟ್ ಕೂಡ ಜಾರಿ ಮಾಡಿದ್ದಾರೆ. ಕೊಕಾ ಆ್ಯಕ್ಟ್ ಭೇದಿಸಿಕೊಂಡು ಹೊರಗಡೆ ಬರುವುದಕ್ಕೆ ಆರೋಪಿ ವರ್ಷಿಣಿಗೆ ವರ್ಷಗಳೇ ಕಳೆದು ಹೋಗುತ್ತದೆ. ಹಾಗಾಗಿ ವರ್ಷಿಣಿಗೆ ಲಕ್ಷ್ಮಣನ ಕೊಲೆ ಕೇಸ್ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ಜೈಲಿನಿಂದ ಪತ್ರ ಬರೆದು ತನ್ನ ಅಳಲನ್ನ ತೋಡಿಕೊಂಡಿದ್ದಾಳೆ.

  • ಮೈತ್ರಿ ಸರ್ಕಾರದಲ್ಲಿ ಲೆಟರ್ ಪಾಲಿಟಿಕ್ಸ್ – ಕೈ ಹಿರಿಯ ನಾಯಕರಿಂದ ಪತ್ರ ಸಮರ

    ಮೈತ್ರಿ ಸರ್ಕಾರದಲ್ಲಿ ಲೆಟರ್ ಪಾಲಿಟಿಕ್ಸ್ – ಕೈ ಹಿರಿಯ ನಾಯಕರಿಂದ ಪತ್ರ ಸಮರ

    ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಸಂಬಂಧ ಸರ್ಕಾರದ ನಿಲುವು ಖಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎಚ್‍ಕೆ ಪಾಟೀಲ್ ಪತ್ರದ ಮೇಲೆ ಪತ್ರ ಬರೆದಿದ್ದರು. ಇದೀಗ ಕುಡಿಯುವ ನೀರಿನ ವಿಚಾರವಾಗಿ ಮತ್ತೊಂದು ಪತ್ರ ಬರೆದಿದ್ದಾರೆ.

    ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರನ್ನು ಕಡಿಮೆ ದರದಲ್ಲಿ ನೀಡಬೇಕು ಎಂದು ಸಿಎಂ ಕುಮಾರಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸದ್ಯ ಸರ್ಕಾರ ಪ್ರತಿ ಲೀಟರ್ ನೀರಿಗೆ 10 ಪೈಸೆ ನಿಗದಿ ಮಾಡಿದೆ. ಅದನ್ನು 25 ಪೈಸೆಗೆ ಹೆಚ್ಚಿಸಲು ಮುಂದಾಗಿರುವುದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧ ಎಂದು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ನಡುವೆ ಮತ್ತೊಬ್ಬ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರು ಕೂಡ ಪತ್ರ ಸಮರ ಶುರು ಮಾಡಿಕೊಂಡಿದ್ದಾರೆ. ಬಿಬಿಎಂಪಿ ಕಸದ ಗುತ್ತಿಗೆ ವಿಚಾರದಲ್ಲಿ ಟಿಪಿಎಸ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆ ಕಳೆದ 7 ವರ್ಷದಲ್ಲಿ 246 ಕೋಟಿ ರೂ. ಅವ್ಯವಹಾರ ನಡೆಸಿದೆ. ಕಸದ ಗುತ್ತಿಗೆ ಪಡೆದು ಬೋಗಸ್ ಬಿಲ್ ಸೃಷ್ಟಿಸಿ ನೂರಾರು ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಪಾಲಿಕೆ ಎಂಜಿನಿಯರ್ಸ್ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಕೂಡಲೇ ತನಿಖೆ ನಡೆಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

  • ಎಲ್ಲ ಸಮಸ್ಯೆ ಕುರಿತು ಮಾತುಕತೆಗೆ ಪಾಕ್ ಸಿದ್ಧ – ಮೋದಿಗೆ ಇಮ್ರಾನ್ ಖಾನ್ ಪತ್ರ

    ಎಲ್ಲ ಸಮಸ್ಯೆ ಕುರಿತು ಮಾತುಕತೆಗೆ ಪಾಕ್ ಸಿದ್ಧ – ಮೋದಿಗೆ ಇಮ್ರಾನ್ ಖಾನ್ ಪತ್ರ

    ನವದೆಹಲಿ: ಭಾರತದ ಜೊತೆಗೆ ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲಾ ವಿವಾದದ ಬಗ್ಗೆ ಮಾತುಕತೆ ನಡೆಸಲು ಪಾಕ್ ಸಿದ್ಧ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

    ಕಿರ್ಗಿಸ್ತಾನದ ಬೆಶ್ಕೆಕ್‍ನಲ್ಲಿ ಜೂನ್ 13 ಮತ್ತು 14 ರಂದು ಶಾಂಘೈ ಸಹಕಾರ ಸಂಸ್ಥೆ (ಎಸ್‍ಸಿಒ) ಶೃಂಗ ಸಭೆ ನಡೆಯಲಿದ್ದು, ಈ ವೇಳೆ ಪಾಕ್ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ಇಮ್ರಾನ್ ಖಾನ್ ಪತ್ರ ಬರೆದಿದ್ದಾರೆ.

    ಮೂಲಗಳ ಪ್ರಕಾರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿದ್ದಕ್ಕೆ ಬರೆದ ಅಭಿನಂದನಾ ಪತ್ರದಲ್ಲಿ, ಎರಡು ದೇಶಗಳು ಬಡತನದಿಂದ ಮುಕ್ತಿಯಗಬೇಕು ಎಂದರೆ ನಾವು ಪರಸ್ಪರ ಮಾತುಕತೆ ನಡೆಸುವುದೊಂದೆ ಪರಿಹಾರ. ಪ್ರಾದೇಶಿಕ ಅಭಿವೃದ್ಧಿಗಾಗಿ ಎರಡು ದೇಶಗಳು ಒಟ್ಟಿಗೆ ಕೆಲಸ ಮಾಡುವುದು ಮುಖ್ಯ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವೇ ಇರುವ ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಶಾಂತಿಯುತ ಮಾತುಕತೆಯನ್ನು ಪಾಕಿಸ್ತಾನ ಬಯಸುತ್ತದೆ. ನಾವು ಜನರ ಸುಧಾರಣೆಗೋಸ್ಕರ ಭಾರತದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಇಮ್ರಾನ್ ಖಾನ್ ಅವರು ಹೇಳಿದ್ದಾರೆ.

    ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್‍ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ವಾಯುಸೇನೆ ಬಾಂಬ್ ದಾಳಿ ನಡೆಸಿದ ಬಳಿಕ ಎರಡು ದೇಶಗಳ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿತ್ತು.

    ಮೋದಿ ಅವರು ಭಾರತ ದೇಶಾದ್ಯಂತ ಪ್ರಚಂಡ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಬಳಿಕ ಮೋದಿ ಅವರನ್ನು ಅಭಿನಂದಿಸಿದ್ದ ಇಮ್ರಾನ್ ಖಾನ್ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಭಾರತದ ಜೊತೆ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

  • ತಂದೆಯ ಕೆಲಸ ಮರಳಿ ಕೊಡಿ- ಪ್ರಧಾನಿಗೆ ಬಾಲಕನಿಂದ 37ನೇ ಪತ್ರ

    ತಂದೆಯ ಕೆಲಸ ಮರಳಿ ಕೊಡಿ- ಪ್ರಧಾನಿಗೆ ಬಾಲಕನಿಂದ 37ನೇ ಪತ್ರ

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.

    ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ(ಯುಪಿಎಸ್‍ಇ)ಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ತಂದೆ ಕೆಲಸ ಕಳೆದುಕೊಂಡಿದ್ದರಿಂದ ನಮ್ಮ ಕುಟುಂಬದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಾಲಕ ಪತ್ರದಲ್ಲಿ ತಿಳಿಸಿದ್ದಾನೆ. ಜೊತೆಗೆ ತನ್ನ ತಂದೆಗೆ ಕೆಲಸವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ತಮ್ಮ ತಂದೆಯನ್ನು ಯುಪಿಎಸ್‍ಇ ಕೆಲಸದಿಂದ ಬಲವಂತವಾಗಿ ಕಳುಹಿಸಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ.

    13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

    ಬಾಲಕ ಪತ್ರದಲ್ಲಿ ನಾನು “ಮೋದಿ ಹೈ ತೊ ಮಮ್ಕಿನ್ ಹೈ”(ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಘೋಷಣೆಯನ್ನು ಕೇಳಿದ್ದೇನೆ. ಹಾಗಾಗಿ ನಿಮಗೆ ಪತ್ರ ಬರೆಯುತ್ತಿದ್ದೇನೆ. ದಯವಿಟ್ಟು ಒಂದು ಸಾರಿ ನನ್ನ ಮನವಿಯನ್ನು ಕೇಳಿ ಮತ್ತು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

    ಕಾರಣ ಇಲ್ಲದೆ ಕೆಲ ಜನರು ಸೇರಿ ನನ್ನ ತಂದೆಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಹಾಗಾಗಿ ನನ್ನ ತಂದೆಗೆ ಸಹಾಯ ಮಾಡುವಂತೆ ನಾನು ಮೋದಿಯ ಬಳಿ ಕೋರಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಜೊತೆಗೆ ನನ್ನ ತಂದೆಗೆ ಅನ್ಯಾಯ ಮಾಡಿದವರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಬಾಲಕ ಒತ್ತಾಯಿಸಿದ್ದಾನೆ.