Tag: letter

  • ಅಭಿಮಾನಿಗಳಿಗೆ ಕನ್ನಡದಲ್ಲಿ ಪತ್ರ ಬರೆದು ಸ್ಪಷ್ಟನೆ ನೀಡಿದ ಹರಿಪ್ರಿಯಾ

    ಅಭಿಮಾನಿಗಳಿಗೆ ಕನ್ನಡದಲ್ಲಿ ಪತ್ರ ಬರೆದು ಸ್ಪಷ್ಟನೆ ನೀಡಿದ ಹರಿಪ್ರಿಯಾ

    ಬೆಂಗಳೂರು: ನಟಿ ಹರಿಪ್ರಿಯಾ ಅವರು ಅಭಿಮಾನಿಗಳಿಗೆ ಕನ್ನಡದಲ್ಲಿ ಒಂದು ಪತ್ರವನ್ನು ಬರೆದಿದ್ದು, ಈ ಮೂಲಕ ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಿದ್ದಾರೆ.

    ಅಭಿಮಾನಿಗಳು ಹರಿಪ್ರಿಯಾ ಅವರು ಮಾಡುವ ಪೋಸ್ಟಿಗೆ ಕನ್ನಡದಲ್ಲಿ ಬರೆಯಿರಿ ಎಂದು ಕಮೆಂಟ್ ಮೂಲಕ ಕೇಳುತ್ತಿದ್ದರು. ಹೀಗಾಗಿ ನಟಿ ಹರಿಪ್ರಿಯಾ ಅವರು ಅಭಿಮಾನಿಗಳಿಗೆ ತಾವು ಏಕೆ? ಕನ್ನಡದಲ್ಲಿ ಪೋಸ್ಟ್ ಮಾಡಲ್ಲ ಎಂಬುದನ್ನು ಪತ್ರದ ಮೂಲಕ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಎಲ್ಲರಿಗೂ ನಮಸ್ಕಾರ, ಈ ಪತ್ರದಲ್ಲಿ ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಬೇಕೆಂದುಕೊಂಡಿದ್ದೇನೆ.

    ನನಗೆ ಕನ್ನಡ ಮಾತಾಡಲು, ಬರೆಯಲು, ಓದಲು ತುಂಬಾ ಚೆನ್ನಾಗಿ ಬರುತ್ತದೆ. ಇದು ನನ್ನ ಬರಹ (ನನ್ನ ಅಕ್ಷರಗಳು ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ. ನನ್ನ ಬರವಣಿಗೆಗೆ ಹೆಚ್ಚುವರಿ ಅಂಕಗಳು ಗಳಿಸುತ್ತಿದ್ದೆ.) ಕನ್ನಡ ಭಾಷೆಯ ಮೇಲೆ ಅಪಾರ ಪ್ರೇಮ ನನಗಿದೆ. ತುಂಬು ಹೃದಯದ ಗೌರವವಿದೆ. ಹಾಗೆ ಕನ್ನಡಾಭಿಮಾನಿಗಳ ಮೇಲೆ ಸಾಕಷ್ಟು ಪ್ರೀತಿ, ನಂಬಿಕೆ, ವಿಶ್ವಾಸವಿದೆ. ಯಾವುದೇ ಉದ್ಯಮದ ಹಿನ್ನೆಲೆ ಇಲ್ಲದೆ ಬಂದವಳನ್ನು ನೀವು, ನನ್ನನ್ನು, ನನ್ನ ಕೆಲಸಗಳನ್ನು, ಇಷ್ಟಪಟ್ಟು, ಅಭಿಮಾನಿಸಿದ್ದೀರಿ, ಖಂಡಿತವಾಗಿಯೂ ನನ್ನ ಗೆಲುವಿನ ಪ್ರತಿ ಹೆಜ್ಜೆಯಲ್ಲೂ ನಿಮ್ಮೆಲ್ಲರ ಪಾಲು ದೊಡ್ಡದು ನನ್ನ ಅನಂತ ವಂದನೆಗಳು.

    ಕೆಲ ಅಭಿಮಾನಿಗಳು, ನಾನು ಮಾಡುವ ಪೋಸ್ಟ್ ಗಳಿಗೆ ಕಮೆಂಟ್ ಮಾಡುವಾಗ ಕನ್ನಡದಲ್ಲಿ ಬರೆಯಿರಿ ಎಂದು ಹೇಳುತ್ತಾರೆ. ನನ್ನ ಇನ್‍ಬಾಕ್ಸ್ ಗೆ ಕೂಡ ಕೆಲ ಸಂದೇಶಗಳು ಬರುತ್ತವೆ. ಆದರೆ ನಾನು ಇಂಗ್ಲಿಷ್‍ನಲ್ಲಿ ಯಾಕೆ ಪೋಸ್ಟ್ ಮಾಡುತ್ತೇನೆಂದರೆ, ನನಗೆ ಕನ್ನಡ ಅಭಿಮಾನಿಗಳ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನ ಅಭಿಮಾನಿಗಳು ಕೂಡ ಇದ್ದಾರೆ. ಪೋಸ್ಟ್ ಮಾಡುವ ಮೂಲಕ ಉದ್ದೇಶ ಎಲ್ಲರಿಗೂ ನಾನು ಹೇಳಲು ಹೊರಟಿರುವುದು ಮುಟ್ಟಲಿ, ಎಲ್ಲರಿಗೂ ಅರ್ಥವಾಗಲಿ ಎಂದು.

    ಹಾಗೆ ಫೋನಿನಲ್ಲಿ ಕನ್ನಡ ಬರೆಯುವಾಗ ಒತ್ತು, ದೀರ್ಘ ತಪ್ಪಾಗಿರುವುದು ಇತರರ ಪೋಸ್ಟ್ ಗಳಲ್ಲಿ ಗಮನಿಸಿದ್ದೇನೆ. ಹಾಗೆ ನಾವು ಎಲ್ಲೋ ಶೂಟಿಂಗ್ ಹಾಗೂ ಪ್ರಯಾಣ ಮಾಡುವಾಗ ದೀರ್ಘ ಕಾಲ ಟೈಪ್ ಮಾಡಲು ಸಮಯವಿರುವುದಿಲ್ಲ. ಈ ಎಲ್ಲಾ ಪ್ರಾಯೋಗಿಕ ಕಾರಣಗಳಿಂದ ನಾನು ಕನ್ನಡದಲ್ಲಿ ಪೋಸ್ಟ್ ಮಾಡಲು ಆಗುತ್ತಿಲ್ಲ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರೆಂದುಕೊಂಡಿದ್ದೇನೆ.

    ಸದಾ ನಿಮ್ಮ ಪ್ರೀತಿ, ಪ್ರೋತ್ಸಾಹ, ವಿಶ್ವಾಸ ಮತ್ತು ಆಶೀರ್ವಾದ ಇರಬೇಕು ಎಂದು ವಿನಂತಿಸುತ್ತೇನೆ.

    https://www.facebook.com/IamHariprriya/photos/rpp.616075428432436/3086024644770823/?type=3&theater

  • 10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

    – ಖಾಸಗಿ ಸಂಸ್ಥೆಯಲ್ಲಿ 10 ಗಂಟೆ ಕೆಲಸ
    – 10 ನಿಮಿಷ ತಡವಾದ್ರೂ ಅರ್ಧ ದಿನದ ಸಂಬಳ ಕಟ್

    ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ದಿನಕ್ಕೆ 10 ಗಂಟೆ ಕೆಲಸ ಮಾಡಬೇಕಾಗಿದೆ. ಒಂದು ವೇಳೆ 10 ನಿಮಿಷ ತಡವಾಗಿ ಹೋದರೆ ಅರ್ಧ ದಿನದ ಸ್ಯಾಲರಿ ಕಟ್ ಮಾಡಲಾಗುತ್ತದೆ. ಹಾಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಕಚೇರಿ ಸಮಯ 9.00ಕ್ಕೆ ಇದ್ದರೂ 8.30ಕ್ಕೆ ಹೋಗುತ್ತಾರೆ. ಆದರೆ ಸರ್ಕಾರಿ ನೌಕರರ ಸ್ಥಿತಿ ಹಾಗಲ್ಲ ಸಕಲ ಸವಲತ್ತು ಇರುವ ವಿಧಾನಸೌದಕ್ಕೆ ಸರಿಯಾದ ಸಮಯಕ್ಕೆ ಬರಲು ಸಾದ್ಯವೇ ಇಲ್ಲ ಎಂದು ಪತ್ರ ಬರೆದಿದ್ದಾರೆ.

    ನಮಗೆ 10 ಗಂಟೆಗೆ ಕಚೇರಿಗೆ ಬರಲು ಸಾಧ್ಯವೇ ಇಲ್ಲ ದಯವಿಟ್ಟು ರಿಯಾಯಿತಿ ಕೊಡಿ ಪ್ಲೀಸ್ ಎಂದು ಸರ್ಕಾರಿ ನೌಕರರು ಪತ್ರ ಬರೆಯುವ ಮೂಲಕ ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

    ದಿನಕ್ಕೆ 7.30 ಗಂಟೆ ಕೆಲಸ ಮಾಡಿ ನೌಕರರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿಯಿಂದ ನೆಮ್ಮದಿ ಹಾಳಾಗಿದೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಚೇರಿಗೆ ಬರುವುದು ದೊಡ್ಡ ಸವಾಲಾಗಿದೆ. ಈ ಎಲ್ಲ ಕಾರಣಗಳಿಂದ ನಮಗೆ ಕಚೇರಿಗೆ 10.10ರೊಳಗೆ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಮಯವನ್ನು ಚೇಂಜ್ ಮಾಡಿ ಎಂದು ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ.

    ಪತ್ರದಲ್ಲಿ ಏನಿದೆ?
    ಸರ್ಕಾರದ ಕಚೇರಿ ವೇಳೆ ಬೆಳಗ್ಗೆ 10.00ರಿಂದ ಸಂಜೆ 5.30 ಗಂಟೆಯಾಗಿದ್ದು, ನೌಕರರು ದಿನದಲ್ಲಿ 7.30 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಸಚಿವಾಲಯವು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರದ ದಟ್ಟಣೆಯು ಹೆಚ್ಚಾಗುತ್ತಿದೆ. ಹೀಗಾಗಿ ಕಚೇರಿ ಆರಂಭದ ವೇಳೆಗೆ ವಿಧಾನಸೌಧಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಅವರುಗಳ ಆರೋಗ್ಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

    ನೌಕರರು ಹಾಜರಾತಿಯನ್ನ ದಾಖಲಿಸುವ ಬಯೋಮೆಟ್ರಿಕ್ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೆ ಅಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಕೆಲವೊಮ್ಮೆ ಬಯೋಮೆಟ್ರಿಕ್ ಯಂತ್ರಗಳು ಸ್ಥಗಿತಗೊಂಡಿರುವುದು ಅಥವಾ ಹಾಜರಾತಿ ದಾಖಲಿಸಿದರೂ ಮಿಸ್‍ಫ್ಲ್ಯಾಷ್ ತೋರಿಸುವುದು ಕಂಡುಬರುತ್ತಿದೆ. ಬೆಂಗಳೂರಿನ ನಗರದ ವಿವಿಧ ಭಾಗಗಳಲ್ಲಿ ಕಾಮಗಾರಿ, ಮೇಲ್ ಸೇತುವೆಗಳು ಸೇರಿದಂತೆ ಹಲವಾರು ಕಾಮಗಾರಿಗಳಿಂದ ರಸ್ತೆ ಸಂಚಾರಿ ದಟ್ಟಣೆಯು ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ಕಚೇರಿಗೆ ತಲುಪುವುದು ಸವಾಲಿನ ಕೆಲಸವಾಗಿದೆ.

    ಈ ಮೇಲಿನ ಅಂಶಗಳನ್ನು ಪರಿಗಣಿಸಿ ಬೆಳಿಗ್ಗೆ 10.00 ರಿಂದ 10.30ರೊಳಗೆ ನೌಕರರು ಕಚೇರಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಆಗ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಾರೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒತ್ತಡದಲ್ಲಿ ಜೀವನ ನಡೆಸುತ್ತಿರುವ ನೌಕರರು ಸರ್ಕಾರಿ ಸೇವೆಯನ್ನು ಒತ್ತಡರಹಿತವಾಗಿ ಸಲ್ಲಿಸುವಂತೆ ಅನುವು ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದ್ದು, ಈ ಪತ್ರವನ್ನು ಕೆಫೆ ಕಾಫಿ ಡೇ(ಸಿಸಿಡಿ) ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಲು ನಿರ್ಧರಿಸಿದೆ.

    ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಯಿತು.ಈ ಸಭೆಯಲ್ಲಿ ಸಿದ್ಧಾರ್ಥ್ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಚರ್ಚೆ ನಡೆದಿದೆ.

    ಹಣಕಾಸು ವ್ಯವಹಾರ, ಲೆಕ್ಕ ಪರಿಶೋಧನೆ ಕಂಪನಿ ಇತರೇ ವಿಚಾರಗಳನ್ನು ತಿಳಿಸುವ ಪತ್ರದ ಸತ್ಯಾಸತ್ಯತೆ ಪರಿಶೀಲಿಸಿಲ್ಲ. ಸಿದ್ಧಾರ್ಥ್ ಅವರ ವೈಯಕ್ತಿಕ ಮಾಹಿತಿಗಳು ಇರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಗಂಭೀರವಾಗಿ ಸ್ವೀಕರಿಸಿದ್ದು ಕೂಲಂಕಷವಾಗಿ ತನಿಖೆ ಮಾಡಲು ನಿರ್ಧರಿಸಿದೆ ಎಂದು ಕಂಪನಿ ತಿಳಿಸಿದೆ.

    ಇಂದಿನ ಸಭೆಯಲ್ಲಿ ಎಸ್‍ವಿ ರಂಗನಾಥ್(ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ) ಅವರನ್ನು ಕಂಪನಿಯ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ನಿತಿನ್ ಬಾಗ್ಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಕಾನೂನು ಸಲಹೆಗಾರರನ್ನಾಗಿ ಸಿರಿಲ್ ಅಮರಚಂದ್ ಮಂಗ್ಲದಾಸ್ ಅವರನ್ನು ನೇಮಿಸಲಾಗಿದೆ. ಮುಂದಿನ ಸಭೆಯನ್ನು ಆಗಸ್ಟ್ 8 ರಂದು ನಡೆಸಲು ತೀರ್ಮಾನಿಸಲಾಗಿದೆ.

  • ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬಳ್ಳಾರಿ: ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ್ ಎಂದು ಬಳ್ಳಾರಿ ವಲಯದ ಐಜಿ ನಂಜುಂಡಸ್ವಾಮಿ ಅಗಲಿದ ಗೆಳೆಯನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಂತಾಪ ಸೂಚಿಸಿದ್ದಾರೆ.

    ಈ ಪತ್ರದಲ್ಲಿ ಸಿದ್ಧಾರ್ಥ್ ಅವರನ್ನು ಭೇಟಿಯಾದ ದಿನಗಳು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಅಪಾರವಾಗಿ ಹೇಳಿಕೊಂಡಿರುವ ನಂಜುಂಡಸ್ವಾಮಿ ತನ್ನ ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳವಂತಹ ವ್ಯಕ್ತಿಯಲ್ಲ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಪತ್ರದಲ್ಲೇನಿದೆ?
    ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇ ಅಂಗಡಿಯಲ್ಲಿ. ನನ್ನ ಗೆಳೆಯ ಶಶಿಕುಮಾರ್ ಮತ್ತು ನಾನು ಒಂದು ರಾತ್ರಿ ಊಟ ಮಾಡಿದ ನಂತರ ಕಾಫಿ ಡೇಗೆ ಹೋದಾಗ, ಆಗ ಅದೊಂದೆ ಕಾಫಿ ಡೇ ಆಗಿತ್ತು. ಶಶಿ ಮೋಹನ್ ನನಗೆ ಸಿದ್ಧಾರ್ಥ ಅವರನ್ನು ಪರಿಚಯ ಮಾಡಿಸಿದ.

    ನಾನು ಆಗ ತಾನೇ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಬೆಂಗಳೂರು ಜೀವನ ಹೊಸದಾಗಿತ್ತು. ಸಿದ್ಧಾರ್ಥ್ ಅಂದು ಕೆಫೆ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟೀ-ಶರ್ಟ್ ಧರಿಸಿದ್ದ. ಮೊದಲನೇ ಭೇಟಿಯಲ್ಲೇ ನಾವಿಬ್ಬರು ಬಹಳ ಮಾತನಾಡಿದ್ದೇವು. ಆಗ ಅವರ ಮಾವ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿರಲಿಲ್ಲ. ಸಿದ್ಧಾರ್ಥ್ ಹಳೆಯ ಗೆಳೆಯನಂತೆ ನನ್ನ ಜೊತೆ ತುಂಬಾ ಹೊತ್ತು ಖುಷಿಯಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಯ ಸರಪಣಿ (chain of restaurant) ಮಾಡುವುದಾಗಿ ಹೇಳುತ್ತಿದ್ದರು. ಸಿದ್ಧಾರ್ಥ್ ಅಂದು ಕಂಡಿದ್ದ ಕನಸುಗಳ ನನಸು ಮಾಡುತ್ತಲೇ ಸಾಗಿದವರು. ಅವರು ಪರಿಚಯವಾದ ಮೇಲೆ ನಾವು ತುಂಬಾ ಸಲ ಬೇರೆ-ಬೇರೆ ಕಡೆ ಭೇಟಿ ಆಗಿದ್ದೇನೆ.

    ಸಿದ್ಧಾರ್ಥ್ ಒಂದು ಬಾರಿ ಅವರ ಸ್ವಂತ ಊರಾದ ಚೇತನಹಳ್ಳಿಯಲ್ಲಿ ಒಂದು ಭವ್ಯವಾದ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಆಗ ನಾನು ಹಾಸನದಲ್ಲಿ ಎಸ್‍ಪಿ ಆಗಿದ್ದೆ. ಆಗ ಸನ್ಮಾನ್ಯ ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಸಿದ್ಧಾರ್ಥ ಅವರು ಉತ್ತಮ ರೀತಿಯಲ್ಲಿ ತಮ್ಮ ಎಲ್ಲಾ ಅತಿಥಿಗಳನ್ನು ಸತ್ಕರಿಸುತ್ತಿದ್ದರು. ನನಗೆ ತಮ್ಮ ಹಳೆಯ ಭವ್ಯವಾದ ಬ್ರಿಟಿಷ್ ಕಾಲದ ಮನೆಯನ್ನು ಸುತ್ತಾಡಿಸಿ ತೋರಿಸಿದರು. ಬ್ರಿಟಿಷ್ ಕಾಫಿ ತೋಟ ಸ್ವಾತಂತ್ರ್ಯ ನಂತರ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದರು.

    ಸಿದ್ಧಾರ್ಥ್ ಅವರಲ್ಲಿ ಅದಮ್ಯ ಸಾಹಸದ ಮನೋಭಾವನೆ ಇತ್ತು. ಅವರ ಕಂಡಾಗಲೆಲ್ಲ ನಾನು ಇವರರಂತೆ ಆಗಬೇಕು ನಾನು ತುಂಬಾ ಆಕ್ಟೀವ್ ಆಗಿ ಚೇತನ ಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ. ಅಂತಹ ವ್ಯಕ್ತಿ ನನ್ನ ಭಾಷಣ-ಬರಹಗಳ ಅಭಿಮಾನಿಯಾಗಿದ್ದರು. ಅವರ ತಂದೆ ಮತ್ತು ನಾನು ಒಂದು ಬಾರಿ ಪೂರ್ಣ ಪ್ರಜ್ಞಾ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ್ದೇವು. ನನ್ನ ಭಾಷಣ ಮುಗಿದ ಮೇಲೆ ಅವರ ತಂದೆ ನಿಮ್ಮ ಮಾತು ಕೇಳಿದರೆ ನಾನು ಒಮ್ಮೆ ದ.ರಾ ಬೇಂದ್ರೆ ಅವರ ಭಾಷಣ ಕೇಳಿದ್ದೆ ಅವರಂತೆ ನೀವು ಮಾತನಾಡುತ್ತೀರಿ. ನಮ್ಮ ಸಿದ್ಧಾರ್ಥ ನಿಮ್ಮ ಭಾಷಣಗಳ ಅಭಿಮಾನಿ ಎಂದಿದ್ದರು. ಆಗ ನಾನು ನಿಮ್ಮೊಡನೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಅದ್ದರಿಂದ ನನಗೆ ಒಳ್ಳೆಯ ಭಾಷಣ ಒಳ್ಳೆಯ ಮಾತುಗಾರರ ಕೇಳುವ ಭಾಗ್ಯ ಇವತ್ತು ನನಗಿದೆ ಎಂದಿದ್ದರು.

    ಸಿದ್ಧಾರ್ಥ್ ನಿಜವಾಗಿಯೂ ಬುದ್ಧನಾಗುವ ಮೊದಲು ಆ ಸಿದ್ಧಾರ್ಥನಂತೆ ಮಾನವೀಯತೆ ರಾಜಕಳೆಯಿಂದ ಬದುಕಿದ. ಆದರೆ ಇಂದು ಕಳೆಬರವಾಗಿದ್ದಾನೆ. ಈ ಸಿದ್ಧಾರ್ಥ ಬುದ್ಧನಾಗಲು ಹೊರಟ್ಟಿದ್ದ ಆತನಲ್ಲಿ ಈ ಪ್ರಪಂಚದ ಸಾವಿರಾರು ಸತ್ಯಗಳು ಉಳಿದು ಬಿಟ್ಟಿದ್ದವು. ಆತನು ಸಹ ಆ ಸತ್ಯಗಳನ್ನು ಈ ಪ್ರಪಂಚಕ್ಕೆ ತಿಳಿಸಲು ಹಪಹಪಿಸುತ್ತಿದ್ದ. ತನ್ನ ಅರಿವಿಗೆ ಬಂದ ಸತ್ಯಗಳ ತಿಳಿಸುವ ಮೊದಲೇ ಬುದ್ಧನಾಗುವ ದಾರಿಯಲ್ಲಿ ನಡೆದು ಬಿಟ್ಟ.

    ಆತನ ಮನದೊಳಗಿದ್ದ ಆ ಸತ್ಯಗಳೆಲ್ಲ ಹೊರಕ್ಕೆ ಬರಬೇಕು ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡುಹಿಡಿಯಲೇ ಬೇಕು ಯಾವ ವ್ಯಕ್ತಿ, ಸಂಘ, ಸಂಸ್ಥೆ, ಇಲಾಖೆಗಳಿಂದ ನೊಂದಿದ್ದ. ಆತ ಈ ನಿರ್ಧಾರ ತೆಗೆದುಕೊಳ್ಳಲು ಇದ್ದ ಕಾರಣ ಹೊರಬರಬೇಕಾಗಿದೆ. ನಮ್ಮ ಕಾಫಿ ಡೇ ಸಿದ್ಧಾರ್ಥ ಬುದ್ಧನಾಗಲೇ ಹೊರಟವನು. ತನ್ನ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡವನು. ಆತನೇ ಹೀಗಾದ ಎಂದರೆ ಆತನನ್ನು ನಂಬಿದ್ದವರಿಗೆ, ಆತನನ್ನು ಆದರ್ಶವಾಗಿ ಕಂಡವರಿಗೆ ನೋವಾಗಿದೆ. ಇದರ ಸಂಪೂರ್ಣ ತನಿಖೆ ಆಗಲಿ ಸತ್ಯ ಹೊರ ಬರಲಿ ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದಿಗೂ ಬುದ್ಧನೇ.

  • 2 ದಿನಗಳ ಹಿಂದೆಯಷ್ಟೇ ಪತ್ರ ಬರೆದಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ್ರಾ?

    2 ದಿನಗಳ ಹಿಂದೆಯಷ್ಟೇ ಪತ್ರ ಬರೆದಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ್ರಾ?

    ಬೆಂಗಳೂರು: ದಿಢೀರ್ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ತಮ್ಮ ಕಂಪನಿಯ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎರಡು ದಿನಗಳಷ್ಟೇ ಸಿದ್ಧಾರ್ಥ್ ಅವರು ಕಂಪನಿ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ತುಂಬಾ ನೋವಿನಿಂದ ಪತ್ರವನ್ನು ಬರೆದಿದ್ದಾರೆ.

    ಸಿದ್ಧಾರ್ಥ್ ಪತ್ರ:
    ನಾನು ಕಳೆದ 37 ವರ್ಷದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದೇನೆ. ಕಾಫಿ ಡೇ ಮೂಲಕ 30 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೆ ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಆದರೆ ನನ್ನ ಪರಿಶ್ರಮದ ಹೊರತಾಗಿಯೂ ಆ ಎರಡೂ ಕಂಪನಿಗಳು ಲಾಭದಲ್ಲಿ ನಡೆಯಲಿಲ್ಲ. ನನಗೆ ಅನೇಕ ಕಡೆಯಿಂದ ಒತ್ತಡ ಹೆಚ್ಚಾಗಿದ್ದು, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬರೆದಿದ್ದಾರೆ.

    ಕಂಪನಿಯಲ್ಲಿ ಷೇರು ಹೂಡಿದ್ದ ಖಾಸಗಿ ಪಾಟ್ನರ್ ಗಳು ತಮ್ಮ ಷೇರನ್ನು ವಾಪಸ್ ಕೊಡುವಂತೆ ಒತ್ತಾಯ ಹಾಕುತ್ತಿದ್ದಾರೆ. ಸ್ನೇಹಿತರೊಬ್ಬರ ಬಳಿ ನಾನು ದೊಡ್ಡ ಮಟ್ಟದಲ್ಲಿ ಸಾಲ ಮಾಡಿದ್ದೇನೆ. ಇತರೆ ಸಾಲಗಾರರ ಒತ್ತಡದಿಂದ ಇಂದು ನನಗೆ ಈ ಪರಿಸ್ಥಿತಿ ಬಂದಿದೆ. 6 ತಿಂಗಳ ಹಿಂದೆಯಷ್ಟೇ ಅಪಾರ ಪ್ರಮಾಣದಲ್ಲಿ ಸಾಲ ಪಡೆದಿದ್ದೇನೆ. ಸಾಲಗಾರರು ತುಂಬಾ ಕಿರುಕುಳ ಕೊಡುತ್ತಿದ್ದಾರೆ.

    ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಅವರು ಕಿರುಕುಳ ನೀಡುತ್ತಿದ್ದಾರೆ. ಪತ್ರದಲ್ಲಿ ಈ ಹಿಂದಿನ ಐಟಿಯ ಡಿಜಿ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದರು. ಈ ಮೂಲಕ ಮೈಂಡ್ ಟ್ರೀ ಮಾರಾಟದ ಡೀಲ್‍ಗೆ ಅಡ್ಡಿಯಾದರು. ಅದಾದ ಬಳಿಕ ಕಾಫಿ ಡೇ ಷೇರಿಗೂ ಐಟಿ ಕಣ್ಣು ಹಾಕಿತ್ತು. ನನಗೆ ಖಾಸಗಿ ಕಂಪನಿ ಕಿರುಕುಳ ನೀಡುತ್ತಿದೆ. ನಾನು ಸಾಕಷ್ಟು ಹೋರಾಟ ಮಾಡಿದೆ. ಆದರೆ ಅವರ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

    ನಾನು ಮೋಸ ಹೋದೆ. ನಮಗೆ ಕೆಲವರು ನಂಬಿಕೆ ದ್ರೋಹ ಮಾಡಿದ್ದಾರೆ. ನಾನು ಸಿಬ್ಬಂದಿಯ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಷೇರುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ನಾನು ಖಾಸಗಿಯಿಂದ ಸಾಲ ತೆಗೆದುಕೊಂಡಿದ್ದೆ. ನಾನು ಯಾರಿಗೂ ಮೋಸ ಮಾಡಬೇಕೆಂದು ಈ ಪತ್ರ ಬರೆಯುತ್ತಿಲ್ಲ. ಓರ್ವ ಉದ್ದಿಮೆದಾರನಾಗಿ ನಾನು ಸೋತಿದ್ದೇನೆ ಎಂದಿದ್ದಾರೆ.

    ನಾನು ನಿಮ್ಮ ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ, ಈ ಎಲ್ಲ ಉದ್ಯಮಗಳನ್ನು ನೀವು ಹೊಸ ಆಡಳಿತ ಮಂಡಳಿಯೊಂದಿಗೆ ಮುಂದುವರೆಸಿ. ಈಗ ಆಗಿರುವ ಎಲ್ಲ ತಪ್ಪುಗಳಿಗೂ ನಾನೇ ಹೊಣೆಯಾಗಿದ್ದು, ಪ್ರತಿಯೊಂದು ಹಣಕಾಸು ವ್ಯವಹಾರಕ್ಕೂ ನಾನೇ ಹೊಣೆ. ನನ್ನ ತಂಡ ಆಡಿಟರ್ಸ್ ಹಾಗೂ ಹಿರಿಯ ಆಡಳಿತ ಮಂಡಳಿಗೂ ಹಣಕಾಸು ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಬರೆದಿದ್ದಾರೆ.

    ನನ್ನ ಉದ್ದಿಮೆಯನ್ನು ಲಾಭದಾಯಕವಾಗಿ ಮಾಡಲು ಎಲ್ಲಾ ಬಾಗಿಲುಗಳು ಮುಚ್ಚಿವೆ. ಹೀಗಾಗಿ ನಾನು ಕಂಪನಿ ನಡೆಸುವುದರಲ್ಲಿ ವಿಫಲನಾದೆ. ಇದು ನನ್ನ ಪರಿಸ್ಥಿತಿಯಾಗಿದೆ. ಕೆಲವರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ ಎಂದು ಬರೆದಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿದಾಯ ಪತ್ರ ಬರೆದಿದ್ದಾರೆಯೋ ಎಂಬ ಅನುಮಾನ ಮೂಡಿದೆ.

    https://www.youtube.com/watch?v=uz6xiFzo-_Q

  • ಬ್ರದರ್ಸ್ ಆಟಕ್ಕೆ ಯಡಿಯೂರಪ್ಪ ಬ್ರೇಕ್

    ಬ್ರದರ್ಸ್ ಆಟಕ್ಕೆ ಯಡಿಯೂರಪ್ಪ ಬ್ರೇಕ್

    ಬೆಂಗಳೂರು: ರಾಜ್ಯಪಾಲರಿಗೆ ಸರ್ಕಾರ ರಚನೆ ಮಾಡಲು ಅನುಮತಿ ಕೋರಿ ಮನವಿ ಸಲ್ಲಿಸಿದ ಬೆನ್ನಲ್ಲೇ ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿರುವ ನಿಯೋಜಿತ ಸಿಎಂ ಬಿಎಸ್ ಯಡಿಯೂರಪ್ಪ ಅವರು, ತಮ್ಮ ಆಟವನ್ನು ಆರಂಭಿಸಿದ್ದಾರೆ.

    ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಿಎಸ್ ಯಡಿಯೂರಪ್ಪನವರು ಜುಲೈ ತಿಂಗಳಲ್ಲಿ ಅನುಮೋದನೆಗೊಂಡ ಎಲ್ಲಾ ಕಾಮಗಾರಿ, ವರ್ಗಾವಣೆಯನ್ನು ತಡೆ ನೀಡುವಂತೆ ಸೂಚನೆ ನೀಡಿದ್ದಾರೆ.

    ಇಂದು ಬೆಳಗ್ಗೆ ಮುಖ್ಯ ಕಾರ್ಯದರ್ಶಿಗಳು ನಿಯೋಜಿತ ಸಿಎಂ ಆಗಿರುವ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದರು. ಆ ಬಳಿಕ ಪತ್ರ ಬರೆದಿದ್ದಾರೆ. ಜುಲೈ ತಿಂಗಳಲ್ಲಿ ನಡೆಸಿರುವ ಹೊಸ ಯೋಜನೆಗಳು ಹಾಗೂ ವರ್ಗಾವಣೆ ಮಾಡುವ ಸಂಬಂಧಿಸಿದ ಪ್ರಸ್ತಾವಗಳ ಮೇಲೆ ಅನುಮೋದನೆಗೊಂಡಿರುವ, ಜಾರಿಯಾಗದೇ ಇರುವ ಆದೇಶಗಳನ್ನು ಮುಂದಿನ ಆದೇಶ ಬರುವವರೆಗೂ ಜಾರಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

    ಮೈತ್ರಿ ಸರ್ಕಾರದ ಸಂಖ್ಯಾಬಲ ಕಡಿಮೆ ಆಗುತ್ತಿದಂತೆ ದೋಸ್ತಿ ನಾಯಕರು ವರ್ಗಾವಣೆ ದಂಧೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಅಲ್ಲದೇ ಸರ್ಕಾರದ ಉರುಳುವ ಭಯದಿಂದಲೇ ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದರು. ಸದ್ಯ ಬಿಎಸ್‍ವೈ ಅವರ ನಡೆ ಜಿದ್ದಾ ಜಿದ್ದಿನ ರಾಜಕಾರಣಕ್ಕೆ ನಂದಿ ಹಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮೈತ್ರಿ ಸರ್ಕಾರ ಅಂತಿಮ ದಿನಗಳಲ್ಲಿ ಸಾಕಷ್ಟು ವರ್ಗಾವಣೆಗಳು ಜುಲೈ ತಿಂಗಳಿನಲ್ಲಿಯೇ ನಡೆದಿತ್ತು. ಅಲ್ಲದೇ ಇದೇ ಕ್ರಮದಲ್ಲಿ ದೋಸ್ತಿ ಸರ್ಕಾರ ದುಡ್ಡು ಮಾಡಲು ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಗಾವಣೆ ನಡೆದಿದೆ. ರೇವಣ್ಣ ಅವರ ಇಲಾಖೆಯಲ್ಲೇ ಅತಿ ಹೆಚ್ಚು ವರ್ಗಾವಣೆ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಬಿಜೆಪಿ ನಾಯಕರ ಆರೋಪದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಪತ್ರ ಬರೆದು ಎಲ್ಲ ಆದೇಶಗಳಿಗೆ ತಡೆ ನೀಡುವಂತೆ ಸೂಚಿಸಿದ್ದಾರೆ.

  • ಮಂಡ್ಯಕ್ಕೆ ನೀರು ಬಿಡಲು ಯಾರು ಕಾರಣ – ಚರ್ಚೆಗೆ ಕಾರಣವಾಯ್ತು ಸುಮಲತಾ ಬರೆದ ಸಾಲುಗಳು

    ಮಂಡ್ಯಕ್ಕೆ ನೀರು ಬಿಡಲು ಯಾರು ಕಾರಣ – ಚರ್ಚೆಗೆ ಕಾರಣವಾಯ್ತು ಸುಮಲತಾ ಬರೆದ ಸಾಲುಗಳು

    ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ರೈತರ ಬೆಳೆಗಳಿಗೆ ನೀರು ಬಿಡಿಸಿದ್ದು ಯಾರು? ಇಂತಹದ್ದೊಂದು ಹೊಸ ಚರ್ಚೆಗೆ ಸಂಸದೆ ಸುಮಲತಾ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳು ಕಾರಣವಾಗಿದೆ.

    ಸಂಸದೆ ಸುಮಲತಾ ಅವರು “ಕೇಂದ್ರದ ಜಲಾನಯನ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ನನ್ನ ಮನವಿ ಸ್ಪಂದಿಸಿ ನೀರನ್ನು ಮಂಡ್ಯ ನಾಲೆಗೆ ಹರಿಸಲು ಆದೇಶಿಸಿದ ನಿಮಗೆ ಮಂಡ್ಯ ರೈತರ ಪರವಾಗಿ ನನ್ನ ತುಂಬು ಹೃದಯದ ಅಭಿನಂದನೆಗಳು” ಎಂದು ತಮ್ಮ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅದಕ್ಕೆ ಸಂಬಂಧಿಸಿದ ಒಂದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

    ಸುಮಲತಾ ಜೂನ್ 20 ರಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್‍ಗೆ ಪತ್ರ ಬರೆದು ಮಂಡ್ಯ ಜಿಲ್ಲೆಗೆ ಕೆಆರ್‍ಎಸ್ ಅಣೆಕಟ್ಟೆಯಿಂದ 2 ಟಿಎಂಸಿ ನೀರು ಬಿಡಲು ಕೋರಿಕೊಂಡಿದ್ದರು. ಜೂನ್ 28 ರಂದು ಸುಮಲತಾ ಮನವಿಗೆ ಸಚಿವರಿಂದ ಪತ್ರದ ಮೂಲಕ ಉತ್ತರ ಬಂದಿತ್ತು. ಜುಲೈ 15 ರಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು. ಆ ಸಭೆಯಲ್ಲಿ ರೈತರ ಬೆಳೆಗಳಿಗೆ 10 ದಿನ ನಾಲೆ ಮೂಲಕ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಜುಲೈ 16ರ ಮಧ್ಯರಾತ್ರಿಯಿಂದ ರೈತರ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸಲಾಗಿತ್ತು.

    ಇದೀಗ ಕೇಂದ್ರ ಜಲಾನಯನ ಸಚಿವರಿಗೆ ಸುಮಲತಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಜಲಾನಯನ ಸಚಿವರಿಗೆ ನೀರು ಬಿಡಲು ಪತ್ರದ ಮೂಲಕ ತಾವು ಮನವಿ ಮಾಡಿದ್ದಕ್ಕೆ ಸಚಿವರು ಪ್ರತಿಕ್ರಿಯಿಸಿದ್ದ ಪತ್ರವನ್ನು ಸುಮಲತಾ ಅವರು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸುಮಲತಾ ಅವರ ಪತ್ರದ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ರೈತರಿಗೆ ನೀರು ಬಿಡಿಸಿದ ಕ್ರೆಡಿಟ್ ಪಡೆಯಲು ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ತೆರೆಮರೆ ಯತ್ನ ನಡೆಯುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.

    https://www.facebook.com/SumalathaAmbi/photos/a.570615780082318/647999459010616/?type=3&theater

    ಸುಮಲತಾ ಸಚಿವರಿಂದ ಪ್ರತ್ಯುತ್ತರ ಬಂದ ದಿನವೇ ಫೇಸ್‍ಬುಕ್‍ನಲ್ಲಿ ಪತ್ರ ಹಾಕಬಹುದಿತ್ತು. ಆದರೆ ನಾಲೆಗೆ ನೀರು ಬಿಟ್ಟ ನಂತರ ಈಗ ಫೇಸ್‍ಬುಕ್‍ಗೆ ಈ ಲೆಟರ್ ಹಾಕಿದ್ದಾರೆ. ಹಾಗಾದರೆ ರೈತರ ಬೆಳೆಗಳಿಗೆ ನೀರು ಬಿಡಿಸಿದ ಕ್ರೆಡಿಡ್ ಪಡೆಯಲು ಸಂಸದೆ ಸುಮಲತಾ ಮುಂದಾದರ ಎಂದು ಮಂಡ್ಯದಲ್ಲಿ ಚರ್ಚೆಯಾಗಿತ್ತದೆ. ಆದರೆ ಸುಮಲತಾ ಕಾರ್ಯಕ್ಕೆ ಫೇಸ್‍ಬುಕ್‍ನಲ್ಲಿ ಅವರ ಬೆಂಬಲಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

  • ಅತೃಪ್ತರ ಮನವೊಲಿಕೆಗೆ ಸಿಎಂ, ಡಿಕೆಶಿಯಿಂದ ರಾತ್ರಿಯಿಡೀ ಪ್ರಯತ್ನ

    ಅತೃಪ್ತರ ಮನವೊಲಿಕೆಗೆ ಸಿಎಂ, ಡಿಕೆಶಿಯಿಂದ ರಾತ್ರಿಯಿಡೀ ಪ್ರಯತ್ನ

    ಬೆಂಗಳೂರು: ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಅವರು ರಾತ್ರಿಯೆಲ್ಲಾ ಕಾರ್ಯಾಚರಣೆಗೆ ಇಳಿದಿದ್ದಾರೆ.

    ಸಿಎಂ ಹಾಗೂ ಡಿ.ಕೆ ಶಿವಕುಮಾರ್ ಅವರು ರಾತ್ರಿ ಅತೃಪ್ತರ ಮನೆಗೆ ಹೋಗಿ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ನಿಮ್ಮ ಯಜಮಾನರಿಗೆ ವಾಪಸ್ ಬಂದು ಬಿಡಲು ಹೇಳಿ. ಇಲ್ಲದೇ ಹೋದರೆ 6 ವರ್ಷಗಳ ಕಾಲ ಅವರು ಅನರ್ಹರಾಗುತ್ತಾರೆ. ಅವರು ಈಗ ಬರದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತೆ ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.

    ಡಿಕೆ ಶಿವಕುಮಾರ್ ಅವರು ಎಲ್ಲಾ ಅತೃಪ್ತ ಶಾಸಕರ ಕುಟುಂಬದವನ್ನು ಸಂಪರ್ಕಸಿದ್ದಾರೆ. ನಮ್ಮ ಕುಟುಂಬದವರನ್ನು ಭೇಟಿ ಆಗುತ್ತಿದ್ದಾರೆ ಎಂಬ ವಿಚಾರ ತಿಳಿದ ತಕ್ಷಣ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಪತ್ರ ರವಾನಿಸಿದ್ದಾರೆ.

     

    ಪತ್ರದಲ್ಲಿ ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸಬೇಕೆಂದು ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಇದರ ನಡುವೆ ನಮ್ಮ ಪಕ್ಷದ ಕಡೆಯಿಂದ ಅನರ್ಹತೆ ಅರ್ಜಿ ನಿಮ್ಮ ಬಳಿ ಬಂದಿದೆ ಅಂತ ಗೊತ್ತಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಅನರ್ಹತೆ ವಿಚಾರ ಸಂಬಂಧ ಪಕ್ಷದ ಕಡೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಆದರೆ ಇಂದು ನೀವು ಹಾಜರಾಗಿ ಎಂದು ನೋಟಿಸ್ ನೀಡಿದ್ದೀರಿ. ಕೆಲ ಅನಿವಾರ್ಯ ಕಾರಣಗಳಿಂದ ನಾವು ಹೊರಗಡೆ ಇದ್ದು ನಿಮ್ಮ ಪ್ರಶ್ನೆ ಉತ್ತರಿಸಲು ನಮಗೆ 4 ವಾರಗಳ ಸಮಯ ಬೇಕು ಎಂದು ಸ್ಪೀಕರ್ ಅವರಿಗೆ ಅತೃಪ್ತ ಶಾಸಕರು ಪತ್ರ ಬರೆದಿದ್ದಾರೆ.

  • ದೋಸ್ತಿ ಸರ್ಕಾರಕ್ಕೆ ವರದಾನವಾದ ರಾಜ್ಯಪಾಲರ ಪತ್ರ

    ದೋಸ್ತಿ ಸರ್ಕಾರಕ್ಕೆ ವರದಾನವಾದ ರಾಜ್ಯಪಾಲರ ಪತ್ರ

    ಬೆಂಗಳೂರು: ಇಂದು ಮಧ್ಯಾಹ್ನ 1.30 ರೊಳಗೆ ವಿಶ್ವಾಸ ಮತ ಸಾಬೀತು ಮಾಡಿ ಎಂದು ರಾಜ್ಯಪಾಲರು ಬರೆದ ಪತ್ರವೇ ಈಗ ದೋಸ್ತಿ ಸರ್ಕಾರಕ್ಕೆ ವರದಾನವಾಗಿದೆ.

    ಹೌದು. ವಿಶ್ವಾಸ ಮತಯಾಚನೆಯನ್ನು ಆದಷ್ಟು ಬೇಗ ಮಾಡಿಸಿ ಎಂದು ರಾಜ್ಯಪಾಲರು ಸಿಎಂಗೆ ಬರೆದ ಪತ್ರವೇ ಈಗ ದೋಸ್ತಿ ಸರ್ಕಾರಕ್ಕೆ ನೆರವಾಗಲಿದೆ. ಈ ಪತ್ರವನ್ನು ಇಟ್ಟುಕೊಂಡು ಸದನವನ್ನು ಮುಂದೂಡುವ ಬಗ್ಗೆ ಮೈತ್ರಿ ಸರ್ಕಾರ ತಂತ್ರ ಮಾಡಿದೆ.

    ರಾಜ್ಯಪಾಲರು ನೀಡಿರುವ ಪತ್ರದ ಆಧಾರದ ಮೇಲೆನೇ ಇಂದು ಮೈತ್ರಿ ಸರ್ಕಾರ ಸುಪ್ರೀಂ ಕೋರ್ಟಿಗೆ ಮೂರು ಅರ್ಜಿಯನ್ನು ಸಲ್ಲಿಕೆ ಮಾಡಿದೆ. ಈ ಅರ್ಜಿಯನ್ನು ಸಿಎಂ ಪರವಾಗಿ ರಾಜೀವ್ ಧವನ್ ಸಲ್ಲಿಸಿದ್ದು, ಅರ್ಜಿಯಲ್ಲಿ ವಿಪ್ ವಿಚಾರದಲ್ಲಿನ ಗೊಂದಲ ನಿವಾರಣೆ ಮಾಡುವಂತೆ ಉಲ್ಲೇಖಿಸಲಾಗಿದೆ. ಆದರೆ ಇಂದು ಸರ್ಕಾರ ಹಾಕಿದ ಅರ್ಜಿ ಕೋರ್ಟಿನಲ್ಲಿ ವಿಚಾರಣೆಗೆ ಬರುವುದು ಬಹುತೇಕ ಡೌಟ್. ಯಾಕೆಂದರೆ ಇಂದು ಶುಕ್ರವಾರವಾದ್ದರಿಂದ ಸುಪ್ರೀಂ ಕೋರ್ಟಿನಲ್ಲಿ ಕೆಲ ಮಹತ್ತರ ಅರ್ಜಿ ವಿಚಾರಣೆ ಮತ್ತು ಆದೇಶಗಳು ಮಾತ್ರ ಆಗುತ್ತವೆ.

    ಹಾಗಾಗಿ ಮೈತ್ರಿ ಸರ್ಕಾರ ಅರ್ಜಿ ಹಾಕಿದ ತಕ್ಷಣ ರಾಜ್ಯಪಾಲರ ಆದೇಶಕ್ಕೆ ಮಂಗಳವಾರದ ತನಕ ತಡೆಯಾಜ್ಞೆ ತರುವ ಸಾಧ್ಯತೆ ಇದೆ. ಈ ಮೂಲಕ ತಡೆಯಾಜ್ಞೆ ತಂದು ಅಲ್ಲಿವರೆಗೂ ಸದನ ಮುಂದೂಡುವ ತಂತ್ರವನ್ನು ದೋಸ್ತಿಗಳು ಮಾಡಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ಮಂಡನೆ ಮಾಡಿದ್ದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸ್ಪೀಕರ್ ಅವರಿಗೆ ರಾಜ್ಯಪಾಲರು ಖಡಕ್ ಸಂದೇಶ ನೀಡಿದ್ದಾರೆ.

    ಭೋಜನ ವಿರಾಮದ ವೇಳೆ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಸ್ಪೀಕರ್ ನಡೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರು ಅಧಿಕಾರಿಗಳಿಂದ ವರದಿ ಪಡೆದಿದ್ದರು. ವರದಿ ಪಡೆದ ಬಳಿಕ ಸ್ಪೀಕರ್ ಅವರಿಗೆ ಸೂಚನೆ ನೀಡಿರುವ ರಾಜ್ಯಪಾಲರು ಇಂದೇ ವಿಶ್ವಾಸಮತಯಾಚನೆಯನ್ನು ಮುಗಿಸಿ ಎಂದು ಸೂಚನೆ ನೀಡಿದ್ದಾರೆ. ರಾಜ್ಯಪಾಲರ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲಿ ಓದಿ ವಿವರಣೆ ನೀಡಿದ್ದು, ಸದನ ಸದಸ್ಯರ ಗಮನಕ್ಕೆ ತಂದಿದ್ದಾರೆ.

    ಇತ್ತ ರಾಜ್ಯಪಾಲರ ಪತ್ರಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, ಇಂದು ಸದನದಲ್ಲಿ ವಿಶ್ವಾಸಮತ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಾನೂನಿನ ಗೊಂದಲಗಳು ಆರಂಭವಾಗಿದೆ. ಆದ್ದರಿಂದ ಇದನ್ನು ಅಷ್ಟು ಬೇಗ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಚರ್ಚೆ ನಡೆಯಬೇಕಿದೆ ಎಂದು ಸ್ಪೀಕರ್ ಅವರಿಗೆ ತಿಳಿಸಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಅವರು, ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಈ ಬಗ್ಗೆ ನಾನು ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಎಂದರು.

    ಕಾಂಗ್ರೆಸ್ ಸದಸ್ಯರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಎಸ್ ಯಡಿಯೂರಪ್ಪ ಅವರು, ನಮಗೆ ಚರ್ಚೆ ನಡೆಸುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಚರ್ಚೆ ನಡೆಯಲಿ ಎಂದರು. ಆದರೆ ಇಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಲಿ. ಆಡಳಿತ ಪಕ್ಷದ ಎಲ್ಲಾ ನಾಯಕರಿಗೆ ಮಾತನಾಡಲು ಅವಕಾಶ ನೀಡಿ, ನಮಗೆ ಕೇವಲ 5 ನಿಮಿಷ ಅವಕಾಶ ನೀಡಿದರೆ ಸಾಕು ಒಬ್ಬರೋ ಇಬ್ಬರೋ ಮಾತನಾಡುತ್ತಾರೆ ಎಂದು ತಿಳಿಸಿದರು.

    ಈ ವೇಳೆ ಕೃಷ್ಣಬೈರೇಗೌಡರು ಮಾತನಾಡಿ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಸದಸ್ಯರು ಹಿಂದಿನ ಬಾಗಿಲಿನಿಂದ ಹೋಗಿ ರಾಜ್ಯಪಾಲರ ಮೂಲಕ ಸೂಚನೆ ತರುವುದಿಲ್ಲ ಸರಿಯಲ್ಲ. ಇಲ್ಲೇ ಚರ್ಚೆ ಮಾಡಬಹುದು ಎಂದಾಗ ಈಶ್ವರಪ್ಪ ಇಡಿ ರಾಜ್ಯದ ಜನತೆ ನೋಡುತ್ತಿದ್ದಾರೆ. ಹೀಗಾಗಿ ನಾವು ರಾಜ್ಯಪಾಲರಲ್ಲಿ ಹೋಗಿ ದೂರು ನೀಡಿದ್ದೇವೆ ಎಂದರು. ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ಇಲ್ಲಿ ಅನಾವಶ್ಯಕವಾಗಿ ರಾಜ್ಯಪಾಲರನ್ನು ಎಳೆ ತರುವುದು ಬೇಡ. ನಾವು ಹೋಗಿ ಮನವಿ ನೀಡಿದ್ದೇವೆ ಎಂದು ಬಿಜೆಪಿ ಸದಸ್ಯರೇ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಹೋಗದೇ ರಾಜ್ಯಪಾಲರು ಸೂಚನೆ ನೀಡಿದ್ದರೆ ಆಗ ಪ್ರಶ್ನಿಸಬಹುದಿತ್ತು. ದಯವಿಟ್ಟು ರಾಜ್ಯಪಾಲರನ್ನು ಈ ಚರ್ಚೆಗೆ ಎಳೆದು ತರಬೇಡಿ ಎಂದು ಮನವಿ ಮಾಡಿದರು.