Tag: letter

  • ದುರ್ಗಾ ದೇವಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ ಡಿಕೆಶಿ

    ದುರ್ಗಾ ದೇವಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ ಡಿಕೆಶಿ

    ಯಾದಗಿರಿ: ಇಡಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಹಿನ್ನೆಲೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ದುರ್ಗಾ ದೇವಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

    ದೇವಸ್ಥಾನ ಅರ್ಚಕ ಮಹಾದೇವಪ್ಪ ಅವರು ಬೆಂಗಳೂರಿಗೆ ಬಂದು ಡಿಕೆಶಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅರ್ಚಕರ ಕೈಯಲ್ಲಿ ಡಿಕೆಶಿ ಕೃತಜ್ಞತಾ ಪತ್ರ ನೀಡಿದ್ದರು. ಈಗ ದೇವಸ್ಥಾನಕ್ಕೆ ಬರಲು ಆಗುವುದಿಲ್ಲ. ಮುಂದಿನ ವರ್ಷದ ದೇವಿಯ ಜಾತ್ರೆಗೆ ಖಂಡಿತ ಬರುತ್ತೆನೆಂದು ಅರ್ಚಕರಿಗೆ ಮಾತು ಕೊಟ್ಟಿದ್ದಾರಂತೆ. ಡಿಕೆಶಿ ಪತ್ರ ನಿನ್ನೆ ತಲುಪಿದ ಹಿನ್ನೆಲೆ ಪತ್ರದೊಂದಿಗೆ ದೇವಿಗೆ ನಿನ್ನೆ ತಡ ರಾತ್ರಿ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಡಿಕೆಶಿ ಅಭಿಮಾನಿಗಳು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಚನ್ನಾರೆಡ್ಡಿ ತುನ್ನೂರ ಪೂಜೆಯಲ್ಲಿ ಭಾಗಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಒಳಿತಾಗಲೆಂದು ದೇವಿಯಲ್ಲಿ ಬೇಡಿಕೊಂಡಿದ್ದಾರೆ.

    ಬಹಳ ವರ್ಷಗಳಿಂದಲೂ ಈ ದೇವಿಯ ಪರಮ ಭಕ್ತರಾಗಿರುವ ಡಿಕೆಶಿ, ಈ ಹಿಂದೆ ತಮಗೆ ಸಂಕಷ್ಟ ಎದುರಾದಾಗ ಈ ದೇವಸ್ಥಾನ ಅರ್ಚಕರಿಂದ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದರು.

  • ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ

    ನಿಮ್ಮನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇವೆ – ಕೇರಳ ಸಿಎಂಗೆ ಮಾವೋವಾದಿಗಳಿಂದ ಪತ್ರ

    ತಿರುವನಂತಪುರಂ: ತಮ್ಮ ಗುಂಪಿನ ಕೆಲ ನಕ್ಸಲರನ್ನು ಕೊಂದಿದ್ದಕ್ಕೆ ಕೇರಳದ ಸಿಎಂ ಪಿಣರಾಯಿ ವಿಜಯನ್‍ಗೆ ಮಾವೋವಾದಿಗಳು ಜೀವ ಬೆದರಿಕೆ ಪತ್ರ ರವಾನಿಸಿದ್ದಾರೆ.

    ಕೆಳೆದ ಅಕ್ಟೋಬರ್ ತಿಂಗಳಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಗಾಲಿ ಕಾಡುಗಳಲ್ಲಿ ಮಾವೋವಾದಿಗಳು ಮತ್ತು ಕೇರಳ ವಿಶೇಷ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಮೃತಪಟ್ಟಿದ್ದರು. ಈ ಸಾವಿನ ಪ್ರತೀಕಾರವನ್ನು ತೀರಿಸಿಕೊಳ್ಳಲು ಮುಖ್ಯಮಂತ್ರಿ ಅವರನ್ನು ಕೊಲ್ಲುತ್ತೇವೆ ಎಂದು ಪತ್ರ ಬರೆಯಲಾಗಿದೆ.

    ಈ ಪತ್ರವನ್ನು ಕೇರಳದ ವಡಕಾರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಹತ್ಯೆಗೀಡಾದ ಮಾವೋವಾದಿಗಳಿಗೆ ಬಂದ ಪರಿಸ್ಥಿತಿಯನ್ನೇ ಸಿಎಂ ವಿಜಯನ್ ಮುಂದೆ ಎದುರಿಸಬೇಕಾಗುತ್ತದೆ ಎಂದು ನಕ್ಸಲರ ತಂಡದ ಕಬಿನಿಡಾಲ್ ಕ್ರಿಯಾ ಸಮಿತಿಯ ಉಪಾಧ್ಯಕ್ಷ ಬೇಡರ್ ಮೂಸಾ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ. ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಒಳಗೊಂಡಂತೆ ಕಳೆದ ತಿಂಗಳು ದಟ್ಟ ಕಾಡುಗಳಲ್ಲಿ ತಮ್ಮ ನಾಲ್ವರು ಸ್ನೇಹಿತರು ಸಾವನ್ನಪ್ಪಿದ ನಂತರ ಮಾವೋವಾದಿಗಳು ವಿಜಯನ್ ಸರ್ಕಾರದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

    2016 ರಲ್ಲಿ ಪಿಣರಾಯಿ ವಿಜಯನ್ ಕೇರಳ ಸಿಎಂ ಆದ ನಂತರ ಕೇರಳ ರಾಜ್ಯದಲ್ಲಿ ಏಳು ಮಾವೋವಾದಿಗಳನ್ನು ತಟಸ್ಥಗೊಳಿಸಲಾಗಿದೆ. ಆದ್ದರಿಂದ ಮಲಯಾಳಂ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ ಕೇರಳ ಸಿಎಂ ತಮ್ಮ ಏಳು ಮಂದಿ ಸ್ನೇಹಿತರ ಹತ್ಯೆಗೆ ಸೂಕ್ತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇವರ ಜೊತೆಗೆ ಜನರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೆರಂಬರ ಸಬ್ ಇನ್ಸ್‍ಪೆಕ್ಟರ್ ಹರೀಶ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

    ಅಕ್ಟೋಬರ್ 28 ರಂದು ಬೆಳಗ್ಗೆ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ನಾಲ್ವರು ಮಾವೋವಾದಿಗಳು ಹತರಾಗಿದ್ದರು. ಕೇರಳದ ಥಂಡರ್ ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ನಾಲ್ವರನ್ನು ಹತ್ಯೆ ಮಾಡಿತ್ತು.

    ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಮಾವೋವಾದಿಗಳು ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದರು. ಈ ವೇಳೆ ಪಾಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ. 2014 ರಿಂದ 2017ರವರೆಗೆ ಕೇರಳದಲ್ಲಿ ಮಾವೋವಾದಿಗಳ ವಿರುದ್ಧ 23 ವಿವಿಧ ಕೇಸ್‍ಗಳು ದಾಖಲಾಗಿತ್ತು.

  • ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುವಂತೆ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.

    ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆದಿರುವ ವಾಡಿಯಾ, ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದಕ್ಕೆ ಬಿಸಿಸಿಐ ನಡೆಯನ್ನು ಶ್ಲಾಘಿಸಿದ್ದಾರೆ. ಈ ವೇಳೆ 2020 ರ ಐಪಿಎಲ್ ಆವೃತ್ತಿಯ ಪ್ರತಿ ಪಂದ್ಯಕ್ಕೂ ಮುನ್ನ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದಾರೆ.

    ಸಾಮಾನ್ಯವಾಗಿ ಅಂತಾರಾಷ್ಟೀಯ ಮಟ್ಟದ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುತ್ತಾರೆ. ಆದರೆ ಐಪಿಎಲ್ ಕೂಡ ವಿಶ್ವದ ನಂಬರ್ ಒನ್ ಕ್ರಿಕೆಟ್ ಲೀಗ್ ಆಗಿದೆ. ಆದ್ದರಿಂದ ಐಪಿಎಲ್ ಪ್ರತಿ ಪಂದ್ಯದ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಹಾಡಿಸಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಿದ್ದು ಅತ್ಯುತ್ತಮ ನಡೆ. ಸಮಾರಂಭಕ್ಕೆ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಬದಲು ಪಂದ್ಯ ಮತ್ತು ಕ್ರೀಡಾ ಕೂಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ.

    ನಾನು ಈ ವಿಚಾರವಾಗಿ ಈ ಮುಂಚೆಯೇ ಬಿಸಿಸಿಐಗೆ ಪತ್ರ ಬರೆದಿದ್ದೆ. ಆದರೆ ಈಗ ನೇರವಾಗಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿಗೆ ಪತ್ರ ಬರೆದಿದ್ದೇನೆ. ರಾಷ್ಟ್ರಗೀತೆಯನ್ನು ನಮ್ಮ ದೇಶದಲ್ಲಿ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಮತ್ತು ಪ್ರೊ-ಕಬ್ಬಡಿ ಲೀಗ್ ಪಂದ್ಯಗಳ ಆರಂಭಕ್ಕೂ ಮುನ್ನ ಹಾಡಿಸುತ್ತಾರೆ. ಹೊರ ದೇಶಗಳಲ್ಲೂ ಕೂಡ ಈ ವಿಧಾನ ಜಾರಿಯಲ್ಲಿದೆ. ಆದ್ದರಿಂದ ಐಪಿಎಲ್ ಲೀಗ್‍ನಲ್ಲೂ ಈ ವಿಧಾನ ಜಾರಿಗೆ ತರಬೇಕು ಎಂದು ವಾಡಿಯಾ ಮನವಿ ಮಾಡಿದ್ದಾರೆ.

    ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಭಾರತೀಯ ಕ್ರಿಕೆಟ್‍ನಲ್ಲಿ ಹಲವಾರು ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ಪ್ರತಿ ಐಪಿಎಲ್ ಆವೃತ್ತಿ ಆರಂಭದ ಸಮಯದಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆ ಆಗುತಿತ್ತು. ಈ ಉದ್ಘಾಟನಾ ಸಮಾರಂಭಕ್ಕೆ ಸೌರವ್ ಗಂಗೂಲಿ ಬ್ರೇಕ್ ಹಾಕಿದ್ದಾರೆ. ಇಲ್ಲಿಯವರೆಗೆ ಬಿಸಿಸಿಐ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರಲಿಲ್ಲ. ಗಂಗೂಲಿ ಅಧ್ಯಕ್ಷರಾದ ಬಳಿಕ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಮೊದಲ ಹಗಲು ರಾತ್ರಿ ಪಂದ್ಯ ಬಾಂಗ್ಲಾ ವಿರುದ್ಧ ನ.22 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ನಾನು ಮಹಾರಾಷ್ಟ್ರ ಸಿಎಂ ಆಗುತ್ತೇನೆ – ರಾಜ್ಯಪಾಲರಿಗೆ ಪತ್ರ ಬರೆದ ರೈತ

    ನಾನು ಮಹಾರಾಷ್ಟ್ರ ಸಿಎಂ ಆಗುತ್ತೇನೆ – ರಾಜ್ಯಪಾಲರಿಗೆ ಪತ್ರ ಬರೆದ ರೈತ

    ಮುಂಬೈ: ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗುತ್ತೇನೆ ಎಂದು ರೈತರೊಬ್ಬರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರಿಗೆ ಪತ್ರ ಬರೆದಿದ್ದಾರೆ.

    ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟ ಬಹುಮತ ಪಡೆದಿದೆ. ಆದರೆ ಈ ಎರಡು ಪಕ್ಷದಲ್ಲೂ ಸಿಎಂ ಗಾದಿಗೆ ಜಟಾಪಟಿ ನಡೆಯುತ್ತಿದ್ದು, ಅವರ ಒಳಜಗಳ ಮುಗಿಯುವ ತನಕ ನಾನೇ ಸಿಎಂ ಆಗುತ್ತೇನೆ ಎಂದು ರೈತರೊಬ್ಬರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

    ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೇಜ್ ತಾಲೂಕಿನ ವಡಮೌಳಿ ಎಂಬ ಗ್ರಾಮದ ಶ್ರೀಕಂಠ ವಿಷ್ಣು ಗಡಲೆ ರಾಜ್ಯಪಾಲರಿಗೆ ಪತ್ರ ಬರೆದ ರೈತ. ಮೈತ್ರಿಪಕ್ಷಗಳು ಸಿಎಂ ಗಾದಿಗೆ ಕಿತ್ತಾಟ ನಡೆಸುತ್ತಿವೆ. ಅವರು ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡುವರೆಗೂ ನಾನು ಸಿಎಂ ಆಗುತ್ತೇನೆ ಎಂದು ಪತ್ರ ಬರೆದು ಬೀಡ್ ಜಿಲ್ಲೆಯ ಜಿಲ್ಲಾಧಿಕಾರಿಗೆ ನೀಡಿ ಇದನ್ನು ರಾಜ್ಯಪಾಲರಿಗೆ ತಲುಪಿಸುವಂತೆ ಕೋರಿದ್ದಾರೆ.

    ಪತ್ರದಲ್ಲೇನಿದೆ?
    ರಾಜ್ಯದಲ್ಲಿ ಇತ್ತೀಚಿಗೆ ವಿಧಾನಸಭೆ ಚುನಾವಣೆ ನಡೆದಿದ್ದು, ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ಜಯಗೊಳಿಸಿದೆ. ಆದರೆ ಈ ಎರಡು ಪಕ್ಷಗಳ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಜಟಾಪಟಿ ಆರಂಭವಾಗಿದೆ. ರಾಜ್ಯದಲ್ಲಿ ಪ್ರಕೃತಿ ವಿಕೋಪ, ತೀವ್ರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟ ಸಮಯದಲ್ಲಿ ಮಿತ್ರಪಕ್ಷಗಳು ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿವೆ. ಆದ್ದರಿಂದ ನೀವು ನನಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಬರೆಯಲಾಗಿದೆ.

    ಇದರ ಜೊತೆ ನಾನು ಸಿಎಂ ಆದರೆ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಅವರಿಗೆ ನ್ಯಾಯ ಕೊಡಿಸುತ್ತೇನೆ. ಹಾಗಾಗಿ ನನಗೆ ಸಿಎಂ ಸ್ಥಾನ ನೀಡಬೇಕು ಎಂದು ಬರೆದಿದ್ದಾರೆ. ನಮ್ಮ ಪತ್ರವನ್ನು ಗಣನೆಗೆ ತೆಗೆದುಕೊಳ್ಳದೇ ಇದ್ದರೆ, ನಾನು ಇದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

    ವಿಧಾನಸಭೆ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಜೊತೆಗೆ ಮಿತ್ರಪಕ್ಷ ಶಿವಸೇನೆ 50:50ರ ಸೂತ್ರಕ್ಕೆ ಪಟ್ಟು ಹಿಡಿದಿದೆ. ಎರಡೂವರೆ ವರ್ಷ ಸಿಎಂ ಗಾದಿ ಮತ್ತು ಸಚಿವ ಸಂಪುಟದಲ್ಲಿ ಶೇ.50 ಖಾತೆಗಳಿಗೆ ಅದು ಪಟ್ಟು ಹಿಡಿದಿದ್ದು, ಇದಕ್ಕೆ ಬಿಜೆಪಿ ಒಪ್ಪಿಲ್ಲದ ಕಾರಣ ಸರ್ಕಾರ ರಚನೆ ಕಗ್ಗಂಟಾಗಿ ಉಳಿದಿದೆ.

  • ಬಾಲಕಿಯ ಪತ್ರಕ್ಕೆ ಡಿಸಿಎಂ ಕಾರಜೋಳ ಪ್ರತಿಕ್ರಿಯೆ

    ಬಾಲಕಿಯ ಪತ್ರಕ್ಕೆ ಡಿಸಿಎಂ ಕಾರಜೋಳ ಪ್ರತಿಕ್ರಿಯೆ

    ಬಾಗಲಕೋಟೆ: ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಬಾಲಕಿ ರಸ್ತೆ ಸಮಸ್ಯೆಯನ್ನು ಸರಿಪಡಿಸಿ ಎಂದು ಡಿಸಿಎಂ ಕಾರಜೋಳ ಹಾಗೂ ಜನಪ್ರತಿನಿಧಿಗಳಿಗೆ ತರಾಟೆಗೆ ತೆಗೆದುಕೊಂಡ ವಿಚಾರವಾಗಿ ಇಂದು ಡಿಸಿಎಂ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲಕಿ ಪತ್ರದಲ್ಲಿ ತಿಳಿಸಿರುವ ವಿಚಾರ ರಸ್ತೆ ಸಮಸ್ಯೆಯದಲ್ಲ, ಅದು ರೈತರಿಬ್ಬರ ನಡುವಿನ ಜಗಳದ ಸಮಸ್ಯೆಯಾಗಿದೆ. ಹಳ್ಳಿಗಳಲ್ಲಿ ಹೊಲಕ್ಕೆ ತೆರಳುವ ವಹಿವಾಟದ ದಾರಿಯಾಗಿದೆ. ಆ ವಹಿವಾಟದ ದಾರಿಯಲ್ಲಿ ಎದುರು-ಬದುರು ಇರುವ ಜಮೀನು ಮಾಲೀಕರ ಜಾಗದ ಸಮಸ್ಯೆ. ಈ ಜಗಳ ಕನಿಷ್ಠ 10 ವರ್ಷಗಳಿಂದ ನಡೆಯುತ್ತಿದ್ದು, ಈಗಲೂ ಜಮೀನು ಮಾಲೀಕರು ಸಮ್ಮತಿ ಸೂಚಿಸಿದರೆ ನಾಳೆಯೇ ರಸ್ತೆ ಮಾಡಿಸುವೆ ಎಂದರು.

    ಸಣ್ಣ ಮಗುವನ್ನು ಕರೆ ತಂದು ಪತ್ರ ಬರೆದುಕೊಟ್ಟು ಓದಿಸಿದ್ದಾರೆ. ಆದರೆ ಈ ಮಾಹಿತಿ ಸಿಕ್ಕ ಕೂಡಲೇ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ತಾಲೂಕು, ಜಿಲ್ಲಾಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರಿಂದ ಮಾಹಿತಿ ಪಡೆದಿದ್ದಾರೆ. ಸುಮ್ಮನೆ ಈ ವಿಚಾರದಲ್ಲಿ ಯಾರೋ ರಾಜಕೀಯ ಮಾಡಿದ್ದಾರೆ ಅಷ್ಟೇ. ನಾಳೆ ನಾನು ಮಾಧ್ಯಮಗಳನ್ನು ಕರೆದುಕೊಂಡು ಅಲ್ಲಿಗೆ ಹೋಗಿ, ಅಲ್ಲಿಯ ಪರಿಸ್ಥಿತಿ ತೋರಿಸುತ್ತೇನೆ. ಮಾಧ್ಯಮಗಳು ಸ್ವತಂತ್ರ್ಯವಾಗಿದ್ದು, ಆದರೆ ಸುದ್ದಿಯ ಸತ್ಯಾ ಸತ್ಯತೆ ತಿಳಿದು ವರದಿ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.

  • ಯಾರೋ ಬಾಲಕಿ ಮೂಲಕ ಪತ್ರ ಓದಿಸಿ, ವಿಡಿಯೋ ಮಾಡಿದ್ದಾರೆ: ಕಾರಜೋಳ

    ಯಾರೋ ಬಾಲಕಿ ಮೂಲಕ ಪತ್ರ ಓದಿಸಿ, ವಿಡಿಯೋ ಮಾಡಿದ್ದಾರೆ: ಕಾರಜೋಳ

    ಬೆಂಗಳೂರು: ಯಾರೋ ಬಾಲಕಿ ಮೂಲಕ ಪತ್ರ ಓದಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಅಲ್ಲಿ ಯಾವುದೇ ರೀತಿಯ ಪ್ರವಾಹ ಉಂಟಾಗಿಲ್ಲ. ರಸ್ತೆಯಲ್ಲಿ ನೀರು ನಿಂತಿದೆಯಷ್ಟೇ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

    ಸಂತ್ರಸ್ತ ಬಾಲಕಿ ಪತ್ರ ಓದುವ ಮೂಲಕ ಪರಿಹಾರಕ್ಕೆ ಮನವಿ ಮಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಮುಧೋಳ ತಾಲೂಕಿನ ರನ್ನ ಬೆಳಗಲಿ ಪ್ರವಾಹಕ್ಕೆ ಒಳಗಾಗಿಲ್ಲ, ಅದು ಕೋಡಿಹಾಳ ರಸ್ತೆ ರೈತರ ಹೊಲಗಳಿಗೆ ಹಾಗೂ ಸಣ್ಣ ಜನ ವಸತಿ ಇರುವ ಜಾಗಕ್ಕೆ ಹೋಗುವ ರಸ್ತೆ. ಅಲ್ಲಿ ಕೇವಲ ಮಳೆ ನೀರು ನಿಂತಿದೆ, ಪ್ರವಾಹ ಉಂಟಾಗಿಲ್ಲ. ಯಾರೋ ಒಬ್ಬರು ಈ ಪತ್ರವನ್ನು ಮಗುವಿನ ಕಡೆಯಿಂದ ಓದಿಸಿದ್ದಾರೆ. ಅಲ್ಲದೆ ಅದು ಪಿಡಬ್ಲ್ಯೂಡಿ ರಸ್ತೆಯಲ್ಲ ಪಟ್ಟಣ ಪಂಚಾಯಿತಿಗೆ ಸೇರಿದ ರಸ್ತೆ. ನಾನು ನಾಳೆ ಕ್ಷೇತ್ರಕ್ಕೆ ಹೊರಟಿದ್ದೇನೆ. ನೀವು ಬರುವುದಾದರೆ ಬೆಳಗಲಿಗೇ ಬನ್ನಿ. ನೀವೇ ಬಂದು ಬೆಳಗಲಿಯಲ್ಲಿ ನೋಡಿ, ಅಲ್ಲಿ ಸಮಸ್ಯೆ ಆಗಿಲ್ಲ ಎಂದರು.

    ಈ ರಸ್ತೆಯನ್ನು ರಿಪೇರಿ ಮಾಡಲು ಸಹ ಸೂಚಿಸುತ್ತೇನೆ. ಈಗ ಮಳೆ ಇರುವುದರಿಂದ ಸಾಧ್ಯವಾಗಿಲ್ಲ. ಮಳೆ ನಿಂತ ನಂತರ ರಸ್ತೆ ರಿಪೇರಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

    ಇಡೀ ರಾಜ್ಯದಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾಗಿರುವ ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಣ್ಣಿನ ಮನೆಗಳು ಹೆಚ್ಚಿವೆ. ಹೀಗಾಗಿ ಮನೆಗಳು ಬೀಳುತ್ತಿವೆ. ಮಳೆ ನಿಂತ ಮೇಲೆ ಸರ್ವೇ ನಡೆಸಿ, ಮನೆ ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ. ಹಿಂದೆಂದೂ ಕಂಡರಿಯದ ಪ್ರವಾಹ ಸಂಭವಿಸಿದೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು, ಸಂಕಷ್ಟದಲ್ಲಿರುವವರ ಜನರ ಪರಿಹಾರಕ್ಕೆ ನೆರವಾಗಬೇಕು. ಈ ವಿಚಾರ ರಾಜಕೀಯಕ್ಕೆ ಬಳಕೆ ಮಾಡೋದು ಬೇಡ. ಇಡೀ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಯಾಗಿದೆ, ಸರ್ಕಾರ ರಚನೆಯಾದಾಗಿನಿಂದ ನಾವೂ ಅದೇ ಕೆಲಸದಲ್ಲಿದ್ದೇವೆ ಎಂದರು.

    ಬಾಗಲಕೋಟೆಯಲ್ಲಿ 195 ಹಳ್ಳಿಗಳಿಗೆ ಪರಿಹಾರ ಕೊಟ್ಟಿದ್ದೇವೆ. ಹಲವು ಸಲ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ. ಯಾರೋ ರಾಜಕೀಯ ಮಾಡುವವರು ಶಾಸಕರು ಎಲ್ಲಿ ಎಂದು ಕೇಳುತ್ತಿದ್ದಾರೆ. ನಾನು ಕ್ಷೇತ್ರದಲ್ಲೇ ಇದ್ದೇನೆ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು.

  • ಪ್ರವಾಹ ನೀರಲ್ಲಿ ನಿಂತು ಪತ್ರ ಓದಿ ಕಾರಜೋಳರ ವಿರುದ್ಧ ಬಾಲಕಿಯ ಆಕ್ರೋಶ

    ಪ್ರವಾಹ ನೀರಲ್ಲಿ ನಿಂತು ಪತ್ರ ಓದಿ ಕಾರಜೋಳರ ವಿರುದ್ಧ ಬಾಲಕಿಯ ಆಕ್ರೋಶ

    – ಒಂದು ರಸ್ತೆಯನ್ನು ಮಾಡದ ನೀವೆಂಥ ಜನಪ್ರತಿನಿಧಿಗಳು?
    – ಭಾರೀ ಚರ್ಚೆಗೆ ಗ್ರಾಸವಾಯ್ತು ವಿಡಿಯೋ

    ಬಾಗಲಕೋಟೆ: ಪ್ರವಾಹದ ನೀರಲ್ಲಿ ನಿಂತು ಪತ್ರದ ಮೂಲಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಬಾಲಕಿಯೊಬ್ಬಳು ಸವಾಲು ಹಾಕಿದ್ದಾಳೆ.

    ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಬಾಲಕಿ ಅನ್ನಪೂರ್ಣ ಈ ಪತ್ರವನ್ನು ನೀರಿನಲ್ಲಿಯೇ ನಿಂತುಕೊಂಡು ಓದಿದ್ದಾಳೆ. ನಮ್ಮ ಗ್ರಾಮದ ರಸ್ತೆ ಜಲಾವೃತವಾಗಿವೆ. ಮೂರು ದಿನದಿಂದ ನೀರು ಹರಿದು ಬರುತ್ತಿದೆ. ಯಾರೂ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನೀವು ನಿಜವಾಗಿಯೂ ಜನಸೇವೆ ಮಾಡಲು ಪ್ರಮಾಣ ಮಾಡಿದ್ದರೆ ಹೀಗ್ಯಾಕೆ ಆಗುತಿತ್ತು. ಒಂದು ರಸ್ತೆಯನ್ನೂ ಮಾಡದಿದ್ದರೆ ನೀವ್ಯಾಕೆ ಜನಪ್ರತಿನಿಧಿಗಳಾಗಬೇಕು ಎಂದು ಬಾಲಕಿ ತರಾಟೆಗೆ ತೆಗೆದುಕೊಂಡಿದ್ದಾಳೆ.

    ಬಾಲಕಿ ಪತ್ರ ಓದುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಮುಧೋಳ ರೈತರು, ಸಂತ್ರಸ್ತರು ಸಂಕಷ್ಟದಲ್ಲಿದ್ದರೆ, ಡಿಸಿಎಂ ಗೋವಿಂದ ಕಾರಜೋಳ ಬೆಂಗಳೂರಿನಲ್ಲಿದ್ದಾರೆ. ಮುಧೋಳ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಜನರು ಘಟಪ್ರಭಾ ನದಿಯ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಮುಧೋಳ ತಾಲೂಕಿನಲ್ಲಿ 210 ಮನೆಗಳು ನೆಲಸಮವಾಗಿವೆ.

    ಅಪಾರ ಪ್ರಮಾಣದ ಕಬ್ಬು, ಅರಿಶಿನ, ಈರುಳ್ಳಿ ಬೆಳೆಗಳು ಜಲಾವೃತವಾಗಿ ಹಾನಿಯಾಗಿವೆ. ಇದೀಗ ಮತ್ತೆ ಪ್ರವಾಹದಿಂದ ರೈತರು, ಸಂತ್ರಸ್ತರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಧೋಳ ತಾಲೂಕಿನಲ್ಲೇ ಅತೀ ಹೆಚ್ಚು ಮಳೆ ಹಾನಿಯಾಗಿದ್ದರೂ ಸಹ ಸ್ವಕ್ಷೇತ್ರದತ್ತ ಡಿಸಿಎಂ ಗೋವಿಂದ ಕಾರಜೋಳ ತಿರುಗಿಯೂ ನೋಡದ್ದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಬಾಲಕಿ ಹೇಳಿದ್ದೇನು?
    ರನ್ನ ಬೆಳಗಲಿ ಪಟ್ಟಣದ ಮುಖ್ಯ ಅಧಿಕಾರಿಗಳು ಹಾಗೂ ಮುಧೋಳ ತಾಲೂಕಿನ ಹಾಲಿ ಶಾಸಕರಿಗೆ ಹಾಗೂ ಬೆಳಗಲಿ ಪಟ್ಟಣದ ಪಂಚಾಯ್ತಿ ಅಧಿಕಾರಿಗಳು, ಚೇರ್ಮನ್ ಹಾಗೂ ಸದಸ್ಯರು, 17ನೇ ವಾರ್ಡ್ ಸದಸ್ಯರಿಗೆ ತಿಳಿಸುವುದೇನೆಂದರೆ ನಮ್ಮ ಬೀದಿ, ರಸ್ತೆ ಜಲಾವೃತವಾಗಿದೆ. ಬೆಳಗಲಿಯಿಂದ ಚಿಮ್ಮಡ ರಸ್ತೆ ಹಾಳಾಗಿದೆ. 3 ದಿನಗಳಿಂದ ನೀರು ಸತತವಾಗಿ ಹರಿದು ಬರುತ್ತಿದೆ. ಯಾರೂ ಕೂಡ ಈ ರಸ್ತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನೀವು ನಿಜವಾಗಲು ಜನ ಸೇವೆ ಮಾಡಲು ಪ್ರಮಾಣ ಮಾಡಿದ್ದರೆ, ನೀವು ರಾಜಕಾರಣಿಗಳಾಗಿದ್ದರೆ ಒಂದು ರಸ್ತೆ ಕೂಡ ಮಾಡಲು ಆಗದವರು ನೀವ್ಯಾಕೆ ಯಾಕೆ ಜನಪ್ರತಿನಿಧಿಯಾಗಬೇಕು? ದಯವಿಟ್ಟು ಇದನ್ನ ಎಲ್ಲರಿಗೂ ಶೇರ್ ಮಾಡಿ, ಎಂಎಲ್‍ಎ ಅವರಿಗೆ ತಲುಪುವ ತನಕ ಶೇರ್ ಮಾಡಿ.

  • ಬಿಗ್ ಬಾಸ್ ನಿಷೇಧಿಸುವಂತೆ ಬಿಜೆಪಿ ಶಾಸಕನಿಂದ ಕೇಂದ್ರ ಸಚಿವರಿಗೆ ಪತ್ರ

    ಬಿಗ್ ಬಾಸ್ ನಿಷೇಧಿಸುವಂತೆ ಬಿಜೆಪಿ ಶಾಸಕನಿಂದ ಕೇಂದ್ರ ಸಚಿವರಿಗೆ ಪತ್ರ

    ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿಯ ಬಿಗ್ ಬಾಸ್‍ನ 13ನೇ ಆವೃತ್ತಿಯ ಪ್ರಸಾರಕ್ಕೆ ತಡೆ ನೀಡಬೇಕೆಂದು ಬಿಜೆಪಿಯ ಗಾಜಿಯಾಬಾದ್ ಶಾಸಕ ನಂದ ಕಿಶೋರ್ ಗುಜ್ಜಾರ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.

    ಬಿಗ್ ಬಾಸ್ ಪ್ರದರ್ಶನವು ಅಶ್ಲೀಲತೆಯಿಂದ ಕೂಡಿದೆ, ಅಶ್ಲೀಲತೆಯನ್ನು ಉತ್ತೇಜಿಸುತ್ತದೆ. ಇದು ಕುಟುಂಬ ವೀಕ್ಷಣೆಗೆ ಅನರ್ಹವಾಗಿದೆ. ಅಲ್ಲದೆ ನಮ್ಮ ದೇಶದ ಸಾಂಸ್ಕೃತಿಕಕ ನೀತಿಗೆ ವಿರುದ್ಧವಾಗಿದೆ ಮತ್ತು ಹೆಚ್ಚು ಆಕ್ಷೇಪಾರ್ಹ ದೃಶ್ಯಗಳಿಂದ ಕೂಡಿದೆ. ವಿವಿಧ ಸಮುದಾಯಗಳ ಜೋಡಿಗಳನ್ನು ಬೆಡ್ ಪಾರ್ಟ್‍ನರ್ ಗಳನ್ನಾಗಿ ಮಾಡಲಾಗುತ್ತಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಬಿಜೆಪಿ ಶಾಸಕರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

    ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದು ಹೋಗಿರುವ ಭಾರತದ ವೈಭವವನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಇಂತಹ ಪ್ರದರ್ಶನಗಳು ದೇಶದ ಸಾಂಸ್ಕೃತಿಯನ್ನು ಕೆಣಕುತ್ತಿವೆ ಎಂದು ಕಿಡಿಕಾರಿದ್ದಾರೆ.

    ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಹಾಗೂ ಪ್ರದರ್ಶನಗಳನ್ನು ತಡೆಗಟ್ಟುವ ಸಲುವಾಗಿ ದೂರದರ್ಶನದಲ್ಲಿ ಯಾವುದೇ ವಿಷಯವನ್ನು ಪ್ರಸಾರ ಮಾಡಲು ಸೆನ್ಸಾರ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಮಕ್ಕಳು ಹಾಗೂ ಅಪ್ರಾಪ್ತ ವಯಸ್ಕರು ದೂರದರ್ಶನ ವೀಕ್ಷಿಸುತ್ತಾರೆ. ವಯಸ್ಕರ ವಿಷಯಗಳಿಂದ ಕೂಡಿದ ಇಂತಹ ಪ್ರದರ್ಶನಗಳಿಗೆ ಸಹಜವಾಗಿಯೇ ಆಕರ್ಷಣೆಗೊಳಗಾಗುತ್ತಾರೆ. ಮನೆಯಲ್ಲಿ ನೋಡುವುದನ್ನು ತಡೆದರೂ ಇದೀಗ ಇಂಟರ್ ನೆಟ್‍ನಲ್ಲಿ ನೋಡಬಹುದಾಗಿದೆ. ಹೀಗಾಗಿ ಇದು ಅಪ್ರಾಪ್ತ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದ್ದಾರೆ.

    ಈ ಹಿಂದೆ ಬ್ರಾಹ್ಮಣ ಮಹಾಸಭಾ ಸಹ ತಕ್ಷಣದಿಂದ ಈ ರಿಯಾಲಿಟಿ ಶೋ ನಿಷೇಧ ಮಾಡುವಂತೆ ದೂರು ನೀಡಿತ್ತು. ಈ ಕುರಿತು ಘಾಜಿಯಾಬಾದ್ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿತ್ತು. ಅಲ್ಲದೆ ಉತ್ತರ ಪ್ರದೇಶ ನವ ನಿರ್ಮಾಣ ಸೇನೆಯ ಅಧ್ಯಕ್ಷ ಅಮಿತ್ ಜಾನಿ ಸಹ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಗ್ ಬಾಸ್‍ನ 13ನೇ ಆವೃತ್ತಿಯ ಪ್ರಸಾರ ನಿಲ್ಲಿಸುವವರೆಗೆ ಯಾವುದೇ ಆಹಾರ ಧಾನ್ಯ ತಿನ್ನುವುದಿಲ್ಲ ಎಂದು ಘೋಷಿಸಿದ್ದಾರೆ.

    ಅಶ್ಲೀಲತೆಯನ್ನು ಉತ್ತೇಜಿಸುವ ಮತ್ತು ಯುವಕರನ್ನು ದಾರಿ ತಪ್ಪಿಸುವ ಪ್ರದರ್ಶನವನ್ನು ನಿಷೇಧಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ನಾನು ಊಟ ಮಾಡುವುದಿಲ್ಲ ಕೇವಲ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಬದುಕುತ್ತೇನೆ. ರಾಷ್ಟ್ರೀಯ ಮಟ್ಟದ ದೂರದರ್ಶನದಲ್ಲಿ ಹಾಸಿಗೆ ಹಂಚಿಕೊಳ್ಳುವ ಯುವ ಜೋಡಿಗಳನ್ನು ತೋರಿಸುವುದು ಸ್ವೀಕಾರಾರ್ಹವಲ್ಲ. ಆರ್‍ಎಸ್‍ಎಸ್ ಇದನ್ನು ಗಮನಿಸದಿರುವುದು ಆಘಾತದ ವಿಷಯವಾಗಿದೆ ಎಂದು ಹೇಳಿದ್ದಾರೆ.

    ಇದು ಬಿಗ್ ಬಾಸ್ ರಿಯಾಲಿಟಿ ಶೋನ 13ನೇ ಆವೃತ್ತಿಯಾಗಿದ್ದು, ಹೆಚ್ಚು ಜನಪ್ರಿಯವಾಗಿದೆ. ಅಲ್ಲದೆ ಈ ರಿಯಾಲಿಟಿ ಶೋ ಸಾಮಾನ್ಯರನ್ನು ಸಹ ಸೆಲೆಬ್ರಿಟಿಗಳನ್ನಾಗಿ ಮಾಡಿದೆ ಎಂಬ ಹೆಗ್ಗಳಿಕೆ ಪಡೆದಿದೆ.

  • ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಗೆ ಪತ್ರ – ಪರಮೇಶ್ವರ್ ಸ್ಪಷ್ಟನೆ

    ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಗೆ ಪತ್ರ – ಪರಮೇಶ್ವರ್ ಸ್ಪಷ್ಟನೆ

    ಬೆಂಗಳೂರು: ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಮಧುಗಿರಿ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

    ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು ಆಡಳಿತಾತ್ಮಕ ದೃಷ್ಟಿಯಿಂದ ಮಧುಗಿರಿಯನ್ನ ತುಮಕೂರು ಜಿಲ್ಲೆಯಿಂದ ಪ್ರತ್ಯೇಕ ಜಿಲ್ಲೆ ಮಾಡಿ ಅಂತ ಪತ್ರ ಬರೆದಿದ್ದೇನೆ. ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಜಿಲ್ಲೆಗಳ ರೀತಿ ಪ್ರತ್ಯೇಕ ಮಾಡುವಂತೆ ಮನವಿ ಮಾಡಿದ್ದೇನೆ. ಪಾವಗಡದಿಂದ ತುಮಕೂರಿಗೆ ಬರಲು ದೂರವಾಗುತ್ತದೆ. ಈಗಾಗಲೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯಾಗಿದೆ. ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡುವುದಾದರೆ ನಮ್ಮ ಜಿಲ್ಲೆಯನ್ನು ಪರಿಗಣಿಸಿ ಎಂದು ಮನವಿ ಮಾಡಿದ್ದೇನೆ ಎಂದರು.

    ಯಾವುದೇ ರಾಜಕೀಯ ದುರುದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಲವು ತಾಲೂಕುಗಳನ್ನು ಮಾಡಿದ್ವಿ. ಹೊಸಬರು ಬಂದಾಗ ಹೊಸ ತಾಲೂಕುಗಳ ಸಂಖ್ಯೆ ಜಾಸ್ತಿ ಮಾಡೋದು ಜಿಲ್ಲೆಗಳನ್ನು ಮಾಡೋದು ಸಾಮಾನ್ಯವಾಗಿದೆ. ಸರ್ಕಾರ ಎಲ್ಲವನ್ನೂ ನೋಡಿ ಮಾಡುತ್ತೆ. ನಾನು ಡಿಸಿಎಂ ಆಗಿದ್ದಾಗ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿ ಬಂದಿರಲಿಲ್ಲ. ಬಂದಿದರೆ ಅವತ್ತೆ ಕ್ಯಾಬಿನೆಟ್ ತೀರ್ಮಾನ ಮಾಡುತ್ತಿದ್ದೇವು ಎಂದು ತಿಳಿಸಿದರು.

    ವಿಜಯನಗರ ಜಿಲ್ಲೆ ಮಾಡಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೇರೆ ಜಿಲ್ಲೆಗಳ ಬಗ್ಗೆ ಮಾತನಾಡುವುದಿಲ್ಲ. ಸ್ಥಳೀಯ ಶಾಸಕರು, ಸಂಸದರು ಆ ಬಗ್ಗೆ ತೀರ್ಮಾನ ಮಾಡ್ತಾರೆ. ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಪ್ರತ್ಯೇಕ ಜಿಲ್ಲೆ ಕೇಳುತ್ತಾರೆ. ಜಿಲ್ಲೆ ಮತ್ತು ತಾಲೂಕು ಮಾಡಿದರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕೆಲಸ ಎಂದು ಹೇಳಿದರು.

    ನೆರೆಗೆ ಪರಿಹಾರ ಕೊಡದ ಪ್ರಧಾನಿ ಮೋದಿ ವಿರುದ್ಧ ಮಾಜಿ ಡಿಸಿಎಂ ಪರಮೇಶ್ವರ್ ಕಿಡಿಕಾರಿದ್ದಾರೆ. ಮೋದಿ ಮತ್ತು ಅಮಿತ್ ಶಾ ಯಾಕೆ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕಿತ್ತು. ಯಡಿಯೂರಪ್ಪ ಮಾತಿಗೂ ಅವರು ಗೌರವ ಕೊಡ್ತಿಲ್ಲ. ಬಿಜೆಪಿ ಅವರನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನಿಸುತ್ತೆ ಅಂತ ಲೇವಡಿ ಮಾಡಿದ್ರು. ರಾಜ್ಯದಲ್ಲಿ ನೆರೆ ಇದ್ದು, ಸೂಕ್ತ ಪರಿಹಾರವನ್ನ ಕೇಂದ್ರ ಇದೂವರೆಗೂ ನೀಡಿಲ್ಲ. ಆದರೆ ಬಿಹಾರಕ್ಕೆ ಪರಿಹಾರ ನೀಡ್ತಾರೆ ಎಂದು ಕಿಡಿಕಾರಿದರು.

  • ಅರುಣ್ ಜೇಟ್ಲಿ ಪಿಂಚಣಿ ಹಣ ಬಡ ನೌಕರರಿಗೆ – ಪತ್ನಿಯಿಂದ ಮಹತ್ವದ ನಿರ್ಧಾರ

    ಅರುಣ್ ಜೇಟ್ಲಿ ಪಿಂಚಣಿ ಹಣ ಬಡ ನೌಕರರಿಗೆ – ಪತ್ನಿಯಿಂದ ಮಹತ್ವದ ನಿರ್ಧಾರ

    ನವದೆಹಲಿ: ಮಾಜಿ ಹಣಕಾಸು ಸಚಿವರಾದ ದಿವಂಗತ ಅರುಣ್ ಜೇಟ್ಲಿ ಅವರಿಗೆ ಬರುವ ಪಿಂಚಣಿ ಹಣವನ್ನು ಬಡ ನೌಕರರಿಗೆ ನೀಡಿ ಎಂದು ಅವರ ಪತ್ನಿ ಉಪರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

    ಈ ವಿಚಾರವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಪತ್ರ ಬರೆದಿರುವ ಅರುಣ್ ಜೇಟ್ಲಿ ಅವರ ಪತ್ನಿ ಸಂಗೀತಾ ಜೇಟ್ಲಿ ಅವರು, ನನ್ನ ಪತಿಗೆ ಬರಬೇಕಾದ ಪಿಂಚಣಿ ಹಣವನ್ನು ರಾಜ್ಯ ಸಭೆಯ ನಾಲ್ಕನೇ ದರ್ಜೆಯ ನೌಕರಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ನನ್ನ ಪತಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಸಂಸ್ಥೆಯ ಅತ್ಯಂತ ನಿರ್ಗತಿಕ ಬಡ ನೌಕರರಿಗೆ ಅವರ ಪಿಂಚಣಿ ಹಣವನ್ನು ನೀಡಬೇಕು ಎಂದು ನಾನು ವಿನಮ್ರ ವಿನಂತಿ ಮಾಡುತ್ತೇನೆ. ಅರುಣ್ ಜೇಟ್ಲಿ ಅವರು ಅಸೆಯೂ ಕೂಡ ಇದೇ ಆಗಿತ್ತು ಎಂದು ಸಂಗೀತಾ ಜೇಟ್ಲಿ ಅವರು ಪತ್ರ ಬರೆದಿದ್ದಾರೆ. ಇದರ ಜೊತೆಗೆ ಈ ಪತ್ರದ ಪ್ರತಿಯೊಂದನ್ನು ಪ್ರಧಾನಿ ಮೋದಿ ಅವರಿಗೂ ಕಳುಹಿಸಲಾಗಿದೆ.

    ಎಷ್ಟು ಪಿಂಚಣಿ ಬರುತಿತ್ತು?
    ಸಂಸತ್ತಿನ ಸದಸ್ಯರ ಸಂಬಳ ಮತ್ತು ಭತ್ಯೆ ಕಾಯ್ದೆಯ ಪ್ರಕಾರ ಮಾಜಿ ಸಂಸದರಿಗೆ ಕನಿಷ್ಠ ಪಿಂಚಣಿ ತಿಂಗಳಿಗೆ 20,000 ರೂ. ಮತ್ತು ಪ್ರತಿ ವರ್ಷಕ್ಕೆ ತಿಂಗಳಿಗೆ 1,500 ರೂ.ಗಳ ಹೆಚ್ಚುವರಿ ಪಿಂಚಣಿ ಬರುತ್ತದೆ. ಅರುಣ್ ಜೇಟ್ಲಿ ಅವರು 1999 ರಿಂದ ರಾಜ್ಯಸಭೆಯ ಸದಸ್ಯರಾಗಿದ್ದರಿಂದ ಅವರಿಗೆ ತಿಂಗಳಿಗೆ 22,500 ರೂ. ಪಿಂಚಣಿ ಬರುತಿತ್ತು. ಹೀಗಾಗಿ ಎರಡನ್ನೂ ಕೂಡಿಸಿದರೆ ಹತ್ತಿರ ಹತ್ತಿರ 50 ಸಾವಿರ ರೂ. ಹಣ ಪಿಂಚಣಿಯಾಗಿ ಬರುತಿತ್ತು.

    ಸಂಸದರು ಮತಪಟ್ಟರೆ ಪಿಂಚಣಿಯ ಅರ್ಧ ಹಣ ಸಂಗಾತಿ ಅಥವಾ ಕುಟುಂಬದ ಸದಸ್ಯರಿಗೆ ನೀಡಲಾಗುತ್ತದೆ. ಹೀಗಾಗಿ ಅರುಣ್ ಜೇಟ್ಲಿಯ ಕುಟುಂಬಕ್ಕೆ ತಿಂಗಳಿಗೆ ಅಂದಾಜು 25 ಸಾವಿರ ರೂ. ಅಥವಾ ವರ್ಷಕ್ಕೆ 3 ಲಕ್ಷ ರೂ. ಪಿಂಚಣಿ ಬರುತಿತ್ತು.


    ವೃತಿಪರ ವಕೀಲರಾಗಿದ್ದ ಅರುಣ್ ಜೇಟ್ಲಿ ಅವರು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನಲ್ಲಿ ವಾದಮಾಡಿದ್ದಾರೆ. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಹಣಕಾಸು ಸೇರಿದಂತೆ ಕೇಂದ್ರದ ಪ್ರಮುಖ ಖಾತೆಯನ್ನು ನಿರ್ವಹಿಸಿದ್ದರು. ಸಂಸತ್ತಿನ ಮೇಲ್ಮನೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ಅನಾರೋಗ್ಯದ ಕಾರಣದಿಂದ ಈ ಸಲ ಸಂಪುಟಕ್ಕೆ ಸೇರಿಸಿಕೊಳ್ಳದಂತೆ ಜೇಟ್ಲಿ ಅವರು ಸಂಪುಟ ರಚನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.

    ಎರಡನೇ ಬಾರಿ ಮೋದಿ ಅಧಿಕಾರಕ್ಕೆ ಏರುತ್ತಿದ್ದಂತೆ ಅರುಣ್ ಜೇಟ್ಲಿ ಅವರು ಜೂನ್ ಮೊದಲ ವಾರದಲ್ಲಿ ಸರ್ಕಾರಿ ನಿವಾಸ ತೆರವುಗೊಳಿಸಿ, ದಕ್ಷಿಣ ದೆಹಲಿಯಲ್ಲಿನ ಸ್ವಂತ ಮನೆಗೆ ತೆರಳಿರುವ ಕ್ರಮ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಸರ್ಕಾರಿ ಬಂಗಲೆ ತೆರವುಗೊಳಿಸಿದ್ದಲ್ಲದೆ ತಮಗೆ ನೀಡಲಾಗಿದ್ದ ಸರಕಾರಿ ಕಾರನ್ನೂ ಮರಳಿಸಿ ಭದ್ರತಾ ಸಿಬ್ಬಂದಿಯನ್ನೂ ಕಡಿತ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

    ಅಧಿಕೃತ ನಿವಾಸಕ್ಕೆ ತರಿಸಲಾಗುತ್ತಿದ್ದ 25 ದಿನಪತ್ರಿಕೆಗಳನ್ನು ನಿಲ್ಲಿಸುವಂತೆ ಹಾಗೂ ನೀರು, ವಿದ್ಯುತ್ ಬಿಲ್ ಸೇರಿದಂತೆ ಎಲ್ಲ ಬಿಲ್‍ಗಳನ್ನೂ ಚುಕ್ತಾ ಮಾಡುವಂತೆ ತಮ್ಮ ಖಾಸಗಿ ಸಿಬ್ಬಂದಿಗೆ ಸೂಚನೆ ನೀಡಿದ್ದರು.

    ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ 30 ದಿನಗಳ ಒಳಗೆ ಮಾಜಿ ಸಚಿವರು ಸರಕಾರಿ ಬಂಗಲೆ ತೆರವುಗೊಳಿಸಬೇಕು. ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿದ್ದ ಜೇಟ್ಲಿಯವರು, ಮೂರು ವಾರ ಕಾಲವಕಾಶ ಇದ್ದರೂ ಸರ್ಕಾರಿ ಬಂಗಲೆಯಿಂದ ಹೊರ ನಡೆದಿದ್ದರು. ಅವರ ಈ ನಡೆಯನ್ನು ಬಿಜೆಪಿಯ ಹಿರಿಯ ನಾಯಕರು ಹಾಗೂ ವಕೀಲರು ಶ್ಲಾಘಿಸಿದ್ದರು.

    ವಿತ್ತ ಮಾಂತ್ರಿಕ ಎಂದೇ ಹೆಸರಾಗಿದ್ದ ಅರುಣ್ ಜೇಟ್ಲಿ ಅವರು ಆಗಸ್ಟ್ 24 ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಲ್ಲಿ ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ಮೃತಪಟ್ಟಿದ್ದರು. ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 23ರಂದು ಏಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದರು. ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು.