Tag: letter

  • ಭದ್ರತೆ ಕೋರಿ ಕರ್ನಾಟಕ ಡಿಜಿಗೆ ಪತ್ರ ಬರೆದ ಮಧ್ಯಪ್ರದೇಶದ ‘ಕೈ’ ಶಾಸಕರು

    ಭದ್ರತೆ ಕೋರಿ ಕರ್ನಾಟಕ ಡಿಜಿಗೆ ಪತ್ರ ಬರೆದ ಮಧ್ಯಪ್ರದೇಶದ ‘ಕೈ’ ಶಾಸಕರು

    ಬೆಂಗಳೂರು: ಭದ್ರತೆ ಕೋರಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪ್ರತ ಬರೆದಿದ್ದಾರೆ.

    ಬೆಂಗಳೂರಿನ ಹೊರವಲದಲ್ಲಿರುವ ಪ್ರೆಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟಿನಲ್ಲಿ ಮಧ್ಯಪ್ರದೇಶದ ಒಟ್ಟು 19 ಮಂದಿ ಶಾಸಕರು ವಾಸ್ತವ್ಯ ಹೂಡಿದ್ದೇವೆ. ನಮಗೆ ಸೂಕ್ತ ಭದ್ರತೆ ಒದಗಿಸಿ ಎಂದು 19 ಕಾಂಗ್ರೆಸ್ ಶಾಸಕರು ಕೇಳಿಕೊಂಡು, ಸಹಿ ಮಾಡಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬದಂದೇ ‘ಕೈ’ಗೆ ರಾಜೀನಾಮೆ – ಮೋದಿ ಸಂಪುಟದಲ್ಲಿ ಸಿಂಧಿಯಾ ಮಂತ್ರಿ?

    ಪ್ರಮುಖವಾದ ಕೆಲಸದ ಮೇಲೆ ಕರ್ನಾಟಕ್ಕೆ ಬಂದು ಬೆಂಗಳೂರಿನ ಹೋರವಲದ ರೆಸಾರ್ಟಿನಲ್ಲಿ ತಂಗಿದ್ದೇವೆ. ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡುವಂತೆ ಶಾಸಕರು ಪತ್ರ ಬರೆದಿದ್ದರು. ಮಧ್ಯಪ್ರದೇಶದ ಶಾಸಕರ ಪತ್ರ ಪೊಲೀಸ್ ಮಹಾನಿರ್ದೇಶಕರ ಕಚೇರಿ ತಲುಪುತ್ತಿದ್ದಂತೆ ನಂದಿ ಹಿಲ್ಸ್ ತಪ್ಪನಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ಸುತ್ತಮುತ್ತು ದೊಡ್ಡ ಮಟ್ಟದಲ್ಲಿ ಭದ್ರತೆ ನೀಡಲಾಗಿದೆ.

    ಡಿವೈಎಸ್‍ಪಿ ರಂಗಪ್ಪ ಪಂಪಾಪತಿ ಅವರ ನೇತೃತ್ವದಲ್ಲಿ ರೆಸಾರ್ಟಿನ ಸುತ್ತಮುತ್ತ ಭದ್ರತೆ ಮಾಡಿಕೊಳ್ಳಲಾಗಿದೆ. ಶಾಸಕರ ಭದ್ರತೆಗೆ ನಾಲ್ಕು ಕೆಎಸ್‌ಆರ್‌ಪಿ ಹಾಗೂ 50ಕ್ಕೂ ಹೆಚ್ಚು ಸ್ಥಳೀಯ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮುಂಭಾಗದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿದ್ದಾರೆ.

  • ಬೆಂಗ್ಳೂರಿನಲ್ಲಿ ಮತ್ತೊಂದು ಕೊರೊನಾ ಕೇಸ್ – ಶಾಲೆಗೆ ರಜೆ ಘೋಷಣೆ

    ಬೆಂಗ್ಳೂರಿನಲ್ಲಿ ಮತ್ತೊಂದು ಕೊರೊನಾ ಕೇಸ್ – ಶಾಲೆಗೆ ರಜೆ ಘೋಷಣೆ

    – ವಿದ್ಯಾರ್ಥಿನಿಯ ತಾಯಿಯಿಂದ ಶಾಲೆಗೆ ಪತ್ರ
    – ಭಯಗೊಂಡು ರಜೆ ಘೋಷಿಸಿದ ಶಾಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

    ನಗರದ ವೈಟ್‍ಫೀಲ್ಡ್ ನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯ ತಂದೆಗೆ ಕೊರೊನಾ ಸೋಂಕು ತಗುಲಿದೆ ಎಂದು ಶಂಕಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ವಿದ್ಯಾರ್ಥಿನಿಯ ತಾಯಿ ಶಾಲಾ ಆಡಳಿತ ಮಂಡಳಿಗೆ ಪತ್ರ ಬರೆಯುವ ಮೂಲಕ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮೂರರ ಕಂದಮ್ಮಗೆ ಕೊರೊನಾ ವೈರಸ್

    ನನ್ನ ಪತಿಗೆ ಕೊರೊನಾ ಸೋಂಕು ಶಂಕೆ ಇದೆ. ಹೀಗಾಗಿ ನಾನು ಮಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ವಿದ್ಯಾರ್ಥಿನಿಯ ತಾಯಿ ಇಮೇಲ್ ಮೂಲಕ ತಿಳಿಸಿದ್ದಾರೆ. ಇಮೇಲ್ ನೋಡಿ ಭಯಗೊಂಡ ಶಾಲಾ ಆಡಳಿತ ಮಂಡಳಿ ತರಾತುರಿಯಲ್ಲಿ ಪೋಷಕರಿಗೆ ನೋಟಿಸ್ ಜಾರಿ ಮಾಡಿ ರಜೆ ಘೋಷಿಸಿದೆ.

    ನಮ್ಮ ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯ ಪೋಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಇದೆ. ಹೀಗಾಗಿ ರಜೆ ಘೋಷಣೆ ಮಾಡುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ಎಲ್ಲಾ ಪೋಷಕರಿಗೂ ಪತ್ರ ಬರೆದಿದೆ. ಇದನ್ನು ತಿಳಿದ ಆರೋಗ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    ಆರೋಗ್ಯಾಧಿಕಾರಿಗಳು ಶಾಲೆಗೆ ತೆರಳಿ ಮುಂಜಾಗೃತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಇಲ್ಲದೆ ಕೊರೊನಾ ಪಾಸಿಟಿವ್ ಎಂದು ಪೋಷಕರಿಗೆ ಭಯಪಡಿಸಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಗ್ಯ ಇಲಾಖೆ ಕ್ರಮಕ್ಕೆ ಸಜ್ಜಾಗಿದೆ.

    ಸದ್ಯ ಆರೋಗ್ಯಾಧಿಕಾರಿಗಳು ವೈಟ್‍ಫೀಲ್ಡ್ ನ ಸೋಂಕು ಶಂಕೆಯ ವ್ಯಕ್ತಿಯ ಅಪಾರ್ಟ್‍ಮೆಂಟ್‍ಗೂ ಭೇಟಿ ನೀಡಿ ಅಲ್ಲೂ ಕೂಡ ಸ್ಕ್ರೀನಿಂಗ್ ನಡೆಸಿದ್ದಾರೆ. ಎರಡನೇ ಬಾರಿಗೆ ದೃಢಪಡಿಸಿಕೊಳ್ಳಲು ಸೋಂಕು ಶಂಕೆಯ ವ್ಯಕ್ತಿಯ ರಕ್ತಮಾದರಿಯನ್ನು ಪುಣೆಗೆ ಕಳುಹಿಸಲಾಗಿದೆ.

    ಆರೋಗ್ಯ ಇಲಾಖೆ ಶಾಲೆಯ ವಿರುದ್ಧ ಕ್ರಮಕ್ಕೆ ಸಜ್ಜಾಗಿದ್ದು, ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿದೆ. ಸದ್ಯ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ.

  • ಅನುಮತಿ ಕೇಳಿದ ಬಿಬಿಎಂಪಿ ಆಯುಕ್ತನಿಗೆ ಸರ್ಕಾರದಿಂದ ಮುಖಭಂಗ

    ಅನುಮತಿ ಕೇಳಿದ ಬಿಬಿಎಂಪಿ ಆಯುಕ್ತನಿಗೆ ಸರ್ಕಾರದಿಂದ ಮುಖಭಂಗ

    ಬೆಂಗಳೂರು: 10 ಕೋಟಿ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರವನ್ನ ಬಿಬಿಎಂಪಿ ಆಯುಕ್ತ ಸರ್ಕಾರದ ಬಳಿ ಕೇಳಿದ್ದಾರೆ. ಆದರೆ ಸರ್ಕಾರ ನಯವಾಗಿಯೇ ಈ ಬೇಡಿಕೆ ತಿರಸ್ಕರಿಸಿ ಮುಖಭಂಗ ಮಾಡಿದೆ.

    ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪ್ರಕಾರ ಒಂದು ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಕಮಿಷನರ್ ಗೆ ಇದೆ. 1 ಕೋಟಿಯಿಂದ 3 ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಸ್ಥಾಯಿ ಸಮಿತಿಗಳಿಗೆ ಇದೆ. 3 ಯಿಂದ 10 ಕೋಟಿವರೆಗಿನ ಕಾಮಗಾರಿಗಳಿಗೆ ಕೌನ್ಸಿಲ್ ಅನುಮೋದನೆ ನೀಡುತ್ತದೆ. ಆದರೆ ಬಿಬಿಎಂಪಿ ಕಮಿಷನರ್ ಇದೆಲ್ಲವನ್ನ ಬೀಟ್ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದರು.

    10 ಕೋಟಿವರೆಗಿನ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರ ತಮಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದಿಂದ ಆಯುಕ್ತರಿಗೆ ಮುಖಭಂಗ ಮಾಡಿ ಕೌನ್ಸಿಲ್‍ನಿಂದ ಅನುಮೋದನೆ ಪಡೆದುಕೊಂಡು ಪತ್ರ ಬರೆಯುವಂತೆ ಸೂಚನೆ ಸಿಕ್ಕಿದೆ.

  • ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ತನ್ವೀರ್ ಸೇಠ್

    ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ತನ್ವೀರ್ ಸೇಠ್

    ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವದರ ಮೂಲಕ ಮಾಜಿ ಸಚಿವ ತನ್ವೀರ್ ಸೇಠ್ ಅವರು ಅಸಮಾಧಾನ ಹೊರಹಾಕಿದ್ದಾರೆ.

    ಇತ್ತೀಚೆಗೆ ಅವರ ಮೇಲೆ ನಡೆದ ಹಲ್ಲೆ ವಿಚಾರವಾಗಿ ಗೃಹ ಸಚಿವರಿಗೆ ಪತ್ರ ಬರೆದ ತನ್ವೀರ್ ಸೇಠ್, ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಅನ್ನೋದು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

    ನನ್ನ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಸೂಕ್ತವಾಗಿ ತನಿಖೆ ನಡೆಯುತ್ತಿಲ್ಲ. ಈ ಪ್ರಕರಣದವನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ ಉದ್ದೇಶವನ್ನು ಪತ್ತೆ ಮಾಡಬೇಕು. ಇದರ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಿ ನನಗೆ ನ್ಯಾಯ ಒದಗಿಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಯಿಗೆ ತನ್ವೀರ್ ಸೇಠ್ ಪತ್ರ ಬರೆದು ಮನವಿ ಮಾಡಿದ್ದಾರೆ. ಇದನ್ನು ಓದಿ: ತನ್ವೀರ್ ರೀತಿಯಲ್ಲೇ ಖಾದರ್ ಹತ್ಯೆಗೆ ಸಂಘಟನೆಯಿಂದ ಸ್ಕೆಚ್

    ಕಳೆದ ವರ್ಷದ ನವೆಂಬರ್ 18ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು. ಘಟನೆಯಲ್ಲಿ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ತನ್ವೀರ್ ಸೇಠ್ ಜೀವನ್ಮರಣ ಹೋರಾಟ ಆರಂಭಿಸಿದ್ದರು. ಹಲ್ಲೆಯ ನಂತರ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾದ ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆದಿದ್ದರು. ಬಳಿಕ ಭಾರತಕ್ಕೆ ವಾಪಸ್ ಬಂದಿದ್ದರು.

    ಈ ಹಿಂದೆ ಈ ವಿಚಾರವಾಗಿ ಮಾತನಾಡಿದ್ದ ಅವರು, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಅನಿರೀಕ್ಷಿತ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಇದೆಲ್ಲವು ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಇದನ್ನು ಪೊಲೀಸರು ಜನರಿಗೆ ತಿಳಿಸಬೇಕು ಎಂದಿದ್ದರು.

  • SSLC ಪರೀಕ್ಷೆ ಕಡೆ ಗಮನ ಹರಿಸಿ ಡಿಸಿಗಳಿಗೆ ಸುರೇಶ್ ಕುಮಾರ್ ಪತ್ರ

    SSLC ಪರೀಕ್ಷೆ ಕಡೆ ಗಮನ ಹರಿಸಿ ಡಿಸಿಗಳಿಗೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದೆ, ಆತಂಕವಿಲ್ಲದೆ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿವೆ. ಡಿಸಿಗಳು, ಪೊಲೀಸ್ ಇಲಾಖೆ, ಪಿಯುಸಿ ಬೋರ್ಡ್ ಪರೀಕ್ಷೆಗೆ ಅಗತ್ಯ ಕ್ರಮ ತೆಗೆದುಕೊಂಡು ಪರೀಕ್ಷೆ ಯಶಸ್ವಿಯಾಗಿ ನಡೆಸುತ್ತಿದೆ. ಪಿಯುಸಿ ಎಕ್ಸಾಂ ಮುಗಿದ ಕೂಡಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಹೀಗಾಗಿ ಪಿಯುಸಿ ಎಕ್ಸಾಂ ನಷ್ಟೆ ಪಾರದರ್ಶಕವಾಗಿ, ಸುಗಮವಾಗಿ ನಡೆಸಲು ಕೆಲಸ ಮಾಡುವಂತೆ ಎಲ್ಲಾ ಡಿಸಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.

    ಯಾವುದೇ ಗೊಂದಲ, ಅಕ್ರಮ ಇಲ್ಲದೆ ಪರೀಕ್ಷೆ ನಸೆಸಲು ಡಿಸಿಗಳ ಸಹಕಾರ ಮುಖ್ಯ ಹೀಗಾಗಿ ಸಚಿವರೇ ಎಲ್ಲಾ ಡಿಸಿಗಳಿಗೂ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪರೀಕ್ಷೆಗಳು ಸುಲಲಿತವಾಗಿ ಹಾಗೂ ಮುಕ್ತ ವಾತಾವರಣದಲ್ಲಿ ನಡೆಯವಂತೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಇದಕ್ಕೆ ಪೊಲೀಸ್ ಇಲಾಖೆ, ಖಜಾನೆ, ಇಂಟಲಿಜೆನ್ಸ್ ಸೇರಿದಂತೆ ಎಲ್ಲ ಇಲಾಖೆಗಳೂ ಸಹಕರಿಸಿದ್ದು, ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಪರೀಕ್ಷೆಗಳು ಸುಸೂತ್ರವಾಗಿ ನಿರ್ವಹಣೆಯಾಗಬೇಕಾದ ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ಆಶಯಗಳು ಸಾಕಾರಗೊಳ್ಳಬೇಕಾದರೆ ಜಿಲ್ಲಾಧಿಕಾರಿಗಳ ಜವಾಬ್ದಾರಿ ಹಿರಿದಾಗಿದ್ದು, ಈ ಕುರಿತಂತೆ ಪರೀಕ್ಷಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಅಧಿಕಾರಿ/ಸಿಬ್ಬಂದಿ ಅತಿ ಜಾಗರೂಕತೆಯಿಂದ ಮತ್ತು ಹೆಚ್ಚಿನ ಜವಾಬ್ದಾರಿಯಿಂದ ತೊಡಗಿಸಿಕೊಂಡು ಪರೀಕ್ಷಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

    ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಇಡುವ ಖಜಾನೆಗೆ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ 15 ನಿಮಿಷ ಸಮಯ ನೀಡಲಾಗಿದೆ. ಪರೀಕ್ಷಾ ಅಕ್ರಮ ತಡೆಗೆ ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಾಗೃತ ದಳಗಳ ರಚನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಟ್ಟಿಂಗ್ ಸ್ಕ್ಯಾಡ್ ಇರಲಿದ್ದಾರೆ. ಪ್ರಶ್ನೆ ಪತ್ರಿಕೆ ರವಾನೆ ಮಾಡೋ ವಾಹನಕ್ಕೆ ಜಿಪಿಎಸ್ ಅಳವಡಿಕೆ ಮಾಡುವ ಕಾರ್ಯ ನಡೆಯುತ್ತಿದೆ.

  • ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಚಾಮರಾಜನಗರ: ರಾಜ್ಯದ ಅರಣ್ಯ ಪ್ರದೇಶಗಳಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸುವ ಕಾರ್ಯಾಚರಣೆಗೆ ಸಹಕರಿಸಲು ವಾಯುಸೇನೆ ಸಿದ್ಧವಾಗಿದೆ. ಈ ಕುರಿತು ವಾಯುಸೇನೆಯ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಏರ್ ಮಾರ್ಷಲ್ ಟಿ.ಡಿ. ಜೋಸೆಫ್ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಗೆ ಪತ್ರ ಬರೆದಿದ್ದಾರೆ.

    ದುರ್ಗಮ ಅರಣ್ಯ ಸೇರಿದಂತೆ ಕ್ಲಿಷ್ಟಕರ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ಅರಣ್ಯ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವುದು ಕಷ್ಟವಾಗಲಿದೆ. ಅಂತಹ ಸಂದರ್ಭದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಿಕೊಡುವಂತೆ ಹಾಗೂ ಸದಾ ಸನ್ನದ್ಧವಾಗಿ ಇರಿಸುವಂತೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯದರ್ಶಿಗಳಿಗೆ ಅರಣ್ಯ ಇಲಾಖೆ ವಿನಂತಿಸಿತ್ತು.

    ಈ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವುದಕ್ಕೆ ಸಹಕಾರ ಕೋರಿ ಮುಖ್ಯಕಾರ್ಯದರ್ಶಿಗಳು ವಾಯುಸೇನೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ವಾಯುಸೇನೆ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದಾ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಹೊತ್ತಿ ಉರಿದಿತ್ತು. ನಾಲ್ಕು ಸಾವಿರ ಹೆಕ್ಟೆರ್‍ಕ್ಕೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ದೊಡ್ಡ ಪ್ರಾಣಿಗಳು ಬೆಂಕಿಯಿಂದ ಬಚಾವಾದರೂ ಅಪರೂಪದ ಸರಿಸೃಪಗಳು ಸುಟ್ಟು ಭಸ್ಮವಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಕೊನೆಗೆ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಬೆಂಕಿಗೆ ನಂದಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ಬಂಡೀಪುರದದಲ್ಲಿ ಈ ಬಾರಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದರೂ ಹರಡದಂತೆ ಬೆಂಕಿ ರೇಖೆ ನಿರ್ಮಾಣ, ಬೆಂಕಿ ಬೀಳದಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಟರ್ ಸ್ಪ್ರೇ ಮಾಡಿ ಹಸಿರು ಚಿಗುರುವಂತೆ ಮಾಡುವುದು, ಬೆಂಕಿ ಬಿದ್ದ ತಕ್ಷಣ ಅಧಿಕಾರಿಗಳ ಮೊಬೈಲ್‍ಗಳಿಗೆ ಎಚ್ಚರಿಕಾ ಸಂದೇಶ ರವಾನೆ, ಅರಣ್ಯ ಸಿಬ್ಬಂದಿಯ ನಿರಂತರ ಗಸ್ತು ಹೀಗೆ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

  • ಜೀವನದ ಮೊದಲ ಪತ್ರ ಕಂಡು ಸಂತಸಗೊಂಡ ಶೈನ್

    ಜೀವನದ ಮೊದಲ ಪತ್ರ ಕಂಡು ಸಂತಸಗೊಂಡ ಶೈನ್

    ಬೆಂಗಳೂರು: ಬಿಗ್ ಬಾಸ್-7ರ ವಿಜೇತ ಶೈನ್ ಶೆಟ್ಟಿ ತಮ್ಮ ಜೀವನದ ಮೊದಲ ಪತ್ರವನ್ನು ಕಂಡು ಖುಷಿಯಾಗಿದ್ದಾರೆ.

    ಶೈನ್ ತಮ್ಮ ಇನ್‍ಸ್ಟಾದಲ್ಲಿ ಪತ್ರಗಳಿರುವ ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಅಭಿಮಾನಿ ಒಬ್ಬರು ಬರೆದ ನನ್ನ ಜೀವನದ ಮೊದಲನೇ ಪತ್ರ. ಅಂದು ಬಿಗ್ ಬಾಸ್ ಮನೆಗೆ ನನ್ನ ತಾಯಿ ಬರೆದ ಪತ್ರ ಎಷ್ಟು ಸಂತೋಷ ತಂದಿದೆಯೊ, ಇಂದು ನೀವು ಬರೆದ ಪತ್ರವೂ ಅಷ್ಟೇ ಸಂತಸ ತಂದಿದೆ. ಬರೆದ ತಮಗೂ, ವಿಳಾಸ ಸರಿ ಇಲ್ಲದಿದ್ದರೂ ಪತ್ರ ತಲುಪಿಸಿದ ಪೋಸ್ಟ್ ಮಾಸ್ಟರ್ ಮೇಡಂಗೂ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಇತ್ತೀಚೆಗೆ ಶೈನ್ ಭಾರತದ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರ ಜೊತೆ ಕಾಲಕಳೆದಿದ್ದರು. ಈ ಬಗ್ಗೆ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಶೈನ್, “ನಾನು ಅನಿಲ್ ಕುಂಬ್ಳೆ ಸರ್ ಮನೆಗೆ ಭೇಟಿ ನೀಡಿದ್ದೆ. ವಾವ್ ಚೇತನಾ ಕುಂಬ್ಳೆ ಅವರು ಒಳ್ಳೆಯ ಆತಿಥ್ಯ ನೀಡಿದರು. ಕುಂಬ್ಳೆಯವರ ಜೊತೆ ಒಂದು ಒಳ್ಳೆಯ ಸಂಜೆಯನ್ನು ಕಳೆದ ನಾನು ಧನ್ಯ. ನಮ್ಮ ದೇಶದ ಹೆಮ್ಮ ಅನಿಲ್ ಕುಂಬ್ಳೆ ಅವರು ತುಂಬ ಸರಳ ವ್ಯಕ್ತಿ” ಎಂದು ಬರೆದುಕೊಂಡಿದ್ದರು.

    ಸ್ವತಃ ಅನಿಲ್ ಕುಂಬ್ಳೆ ಅವರೇ ಶೈನ್ ಅವರಿಗೆ ಫೋನ್ ಮಾಡಿ ಆಹ್ವಾನ ನೀಡಿದ್ದರು ಎಂದು ಹೇಳಲಾಗುತ್ತಿದೆ. ಕುಂಬ್ಳೆ ಅವರ ಕುಟುಂಬ ಶೈನ್ ಶೆಟ್ಟಿ ಅವರ ಅಭಿಮಾನಿಗಳಾಗಿದ್ದು, ಅವರನ್ನು ಮಾತನಾಡಿಸಬೇಕು ಎಂದಿದ್ದರಂತೆ. ಆ ಕಾರಣಕ್ಕೆ ಕುಂಬ್ಳೆ ಅವರು ಶೈನ್ ಅವರಿಗೆ ಕಾಲ್ ಮಾಡಿ ಆಹ್ವಾನ ನೀಡಿದ್ದು, ಕುಂಬ್ಳೆ ಅವರ ಆಹ್ವಾನದ ಮೇರೆಗೆ ಶೈನ್ ಅವರ ಮನೆಗೆ ಹೋಗಿ ಬಂದಿದ್ದರು.

    ಕೆಲವು ದಿನಗಳ ಹಿಂದೆ ಶೈನ್ ಅವರು ಬಿಗ್‍ಬಾಸ್‍ನಲ್ಲಿ ಸಹಸ್ಪರ್ಧಿಯಗಿದ್ದ ದೀಪಿಕಾ ದಾಸ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು. ದೀಪಿಕಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಗ್ ಬಾಸ್ ಮನೆಯ ಜೈ ಜಗದೀಶ್, ಅವರ ಪತ್ನಿ ವಿಜಯಲಕ್ಷ್ಮಿ, ಸುಜಾತ, ಶೈನ್ ಶೆಟ್ಟಿ, ಚಂದನ್ ಆಚಾರ್, ಕಿಶನ್, ವಾಸುಕಿ, ಚಂದನಾ, ಹರೀಶ್ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಬಿಗ್‍ಬಾಸ್ ನಂತರ ದೀಪಿಕಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರೂ ಮತ್ತೆ ಒಟ್ಟಾಗಿ ಸೇರಿ ಸಖತ್ ಆಗಿ ಎಂಜಾಯ್ ಮಾಡಿದ್ದರು.

  • ಪ್ರತಾಪ್ ಸಿಂಹಗೆ ಕೊಡಗಿನ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್

    ಪ್ರತಾಪ್ ಸಿಂಹಗೆ ಕೊಡಗಿನ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್

    ಮಡಿಕೇರಿ: ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಪರಿಸರದ ಮೇಲೆ ನಡೆಯುತ್ತಿರುವ ಶೋಷಣೆ, ಅದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೊಡಗಿನ ಪುಟಾಣಿಯೊಬ್ಬಳು ಸಂಸದ ಪ್ರತಾಪ್ ಸಿಂಹ ಅವರಿಗೆ ಬರೆದಿರುವ ಭಾವನಾತ್ಮಕ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಪತ್ರಕ್ಕೆ ಪ್ರತಾಪ್ ಸಿಂಹ ಕೂಡ ಉತ್ತರ ಕೊಟ್ಟಿದ್ದು, ಬಾಲಕಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2005ರ ತನಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇರಲಿಲ್ಲ. ಆದರೂ ಕೊಡಗಿನವರು ಚೆನ್ನಾಗಿಯೇ ಇದ್ದರು. ಆದರೆ ನಂತರ ಬಂದಿರುವ ಯೋಜನೆಗಳು ನಮ್ಮನ್ನು ಕೊಲ್ಲುತ್ತಿವೆ ಎನ್ನುವ ಅರ್ಥದಲ್ಲಿ ಪತ್ರ ಬರೆಯಲಾಗಿದೆ. ನೀವು ಒಬ್ಬ ಮಗಳ ತಂದೆ, ನಾನು ಒಬ್ಬ ತಂದೆಯ ಮಗಳು ಎನ್ನುತ್ತಾ ರಾಷ್ಟ್ರೀಯ ಹೆದ್ದಾರಿ ಕೊಡಗಿಗೆ ಬರುವುದರಿಂದ ಜಿಲ್ಲೆಯ ಪರಿಸರಕ್ಕೆ ಮಾರಕವಾಗುತ್ತದೆಯೇ ಹೊರತು ಇಲ್ಲಿನವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾಳೆ.

    ಯಾರ್ಯಾರು? ಯಾವ್ಯಾವ? ರೀತಿಯಲ್ಲಿ ಜಿಲ್ಲೆಗೆ ಮಾರಕವಾಗಲಿದ್ದಾರೆ ಎನ್ನುವುದನ್ನೂ ಬಾಲಕಿ ವಿವರಿಸಿದ್ದಾಳೆ. ಶೇ. 18ರಷ್ಟು ಮಂದಿ ಪ್ರವಾಸಿಗರಿಗೋಸ್ಕರ ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಅರಣ್ಯ ನಾಶ ಆಗುತ್ತಿದೆ. ಜಿಲ್ಲೆಯ ಮಳೆಯ ಪ್ರಮಾಣ ಕುಸಿತಕ್ಕೆ ಕಾರಣವಾಗುತ್ತಿದೆ. ವಾರ್ಷಿಕ ಸರಾಸರಿ 220 ಇಂಚು ಮಳೆಯಾಗುತ್ತಿದ್ದಲ್ಲಿ ಈಗ 170 ಇಂಚು ಮಳೆಯಾಗುತ್ತಿದೆ. ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಅಪರೂಪದ ಪ್ರಾಣಿ, ಪಕ್ಷಿಗಳು ಕಣ್ಮರೆಯಾಗುತ್ತಿದೆ ಎಂದು ಬಾಲಕಿ ಪತ್ರದಲ್ಲಿ ಹೇಳಿದ್ದಾಳೆ.

    ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಗಳು ಕಂಡುಬರುತ್ತಿದೆ. ಕೊಡಗು ಪ್ಲಾಸ್ಟಿಕ್‍ಮಯ ಆಗುತ್ತಿದೆ ಎಂದು ಆತಂಕ ತೋಡಿಕೊಂಡಿದ್ದಾಳೆ. ಜಿಲ್ಲೆಯ ಶೇ. 82ರಷ್ಟು ಮಂದಿ ಪಶ್ಚಿಮಘಟ್ಟದ ಕಾಡು, ಕಾವೇರಿ ನದಿಯನ್ನು ರಕ್ಷಿಸುವ ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ.

    ಬಾಲಕಿಯ ಮನವಿಗೆ ಪ್ರತಾಪ್ ಸಿಂಹ ಹೇಳಿದ್ದೇನು?
    ಬಾಲಕಿಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಅವರು, ನನ್ನ ಪ್ರೀತಿಯ ರಾಜ್‍ಕುಮಾರಿ ನೀನು ಈ ದೇಶದ ಭವಿಷ್ಯ. ಜನಪ್ರತಿನಿಧಿಯಾಗಿ ನಿನ್ನ ಭವಿಷ್ಯವನ್ನು ರಕ್ಷಿಸುವುದು ನನ್ನ ಕರ್ತವ್ಯ. ನಾನು ಈ ಬಗ್ಗೆ ವಿವರಣೆಯನ್ನು ನೀಡುತ್ತೇನೆ. ಆದರೆ ಸದ್ಯ ಸಂಸತ್ ಹಾಗೂ ಕೆಲ ಯೋಜನೆಗಳ ಕೆಲಸದಲ್ಲಿ ಬ್ಯುಸಿ ಇದ್ದೇನೆ. ನನಗೆ ಪ್ರತಿಕ್ರಿಯಿಸಲು ಒಂದೆರೆಡು ದಿನ ಸಮಯ ಕೊಡು. ಫೇಸ್‍ಬುಕ್ ಲೈವ್ ಬಂದು ಉತ್ತರಿಸಲಾ ಅಥವಾ ಬರವಣೆಗೆ ರೂಪದಲ್ಲಿ ಪ್ರತಿಕ್ರಿಯಿಸಲಾ ಎಂದು ಬರೆದು ಬಾಲಕಿ ಪತ್ರ ಹಿಡಿದು ನಿಂತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

  • ಮಾಧ್ಯಮಗಳ ಮೇಲಿನ ನಿಷೇಧ ವಾಪಸ್ ಪಡೆಯಲು ಪ್ರಿಯಾಂಕ್ ಖರ್ಗೆ ಮನವಿ

    ಮಾಧ್ಯಮಗಳ ಮೇಲಿನ ನಿಷೇಧ ವಾಪಸ್ ಪಡೆಯಲು ಪ್ರಿಯಾಂಕ್ ಖರ್ಗೆ ಮನವಿ

    ಕಲಬುರಗಿ: ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗ ಎಂದು ಪರಿಗಣಿಸಲ್ಪಡುವ ಮಾಧ್ಯಮವನ್ನು ಪ್ರಸ್ತುತ ನಡೆಯುತ್ತಿರುವ ಕಲಾಪಕ್ಕೆ ನಿರ್ಬಂಧಿಸುವುದು ಸಮಂಜಸವಾದ ಕ್ರಮವಲ್ಲ. ಹಾಗಾಗಿ ಈ ಕೂಡಲೇ ನಿರ್ಬಂಧವನ್ನು ವಾಪಸ್ ಪಡೆಯುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ಸಂವಿಧಾನದ ಆಶಯದ ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚಿಸಲು ನಿರ್ಧರಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಆದರೆ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗವಾದ ಮಾಧ್ಯಮದ (ಎಲೆಕ್ಟ್ರಾನಿಕ್ ಹಾಗೂ ಪ್ರಿಂಟ್) ಪ್ರತಿನಿಧಿಗಳಿಗೆ ಕಲಾಪದ ಒಳಗಡೆ ಪ್ರವೇಶ ನಿರ್ಬಂಧಿಸಿರುವ ಕ್ರಮ ಸರಿಯಾದುದದಲ್ಲ.

    ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಕಲಾಪದಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳನ್ನು ಚರ್ಚಿಸುವ ಹಾಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಜನರು ತಿಳಿದುಕೊಳ್ಳಬೇಕು. ಅದು ಕೇವಲ ಮಾಧ್ಯಮಗಳಿಂದ ಸಾಧ್ಯ. ಹಾಗಾಗಿ ಮಾಧ್ಯಮಗಳಿಗೆ ನಿರ್ಬಂಧಿಸಿದರೆ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಜೊತೆಗೆ ಜನರಿಗೆ ಕಲಾಪಗಳ ಮಾಹಿತಿ ದೊರಕದಂತೆ ತಡೆದಂತಾಗುತ್ತದೆ. ಹಾಗಾಗಿ ಮಾಧ್ಯಮಗಳಿಗೆ ವರದಿ ಮಾಡಲು ಅವಕಾಶ ನೀಡಬೇಕೆಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಅನಾಮಧೇಯ ಪತ್ರಕ್ಕೆ ಯಡಿಯೂರಪ್ಪ ಆಪ್ತರಿಂದ ಮೆಗಾ ಟಾಂಗ್

    ಅನಾಮಧೇಯ ಪತ್ರಕ್ಕೆ ಯಡಿಯೂರಪ್ಪ ಆಪ್ತರಿಂದ ಮೆಗಾ ಟಾಂಗ್

    ಬೆಂಗಳೂರು: ಅನಾಮಧೇಯ ಪತ್ರಕ್ಕೆ ಯಡಿಯೂರಪ್ಪ ಆಪ್ತರು ಮೆಗಾ ಟಾಂಗ್ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಆಪ್ತ ತಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾಗೆ ರಹಸ್ಯವಾಗಿ ಪತ್ರ ರವಾನಿಸಿದೆ ಎಂದು ತಿಳಿದು ಬಂದಿದೆ.

    ರಾಜ್ಯ ಬಿಜೆಪಿಯಲ್ಲಿ ಮಂಗಳವಾರ ಮಹತ್ವದ ಬೆಳವಣಿಗೆ ನಡೆದಿದೆ. ಯಡಿಯೂರಪ್ಪ ನಂತರದ ನಾಯಕ ಯಾರು ಹೇಳಿ ಎಂದು ಅನಾಮಧೇಯ ಪತ್ರ ಬಂದಿತ್ತು. ಯಡಿಯೂರಪ್ಪ ವಿರುದ್ಧದ ಅನಾಮಧೇಯ ಪತ್ರಕ್ಕೆ ಬಿಎಸ್‍ವೈ ಟೀಂ ಎರಡು ಪುಟಗಳ ರಹಸ್ಯ ಪತ್ರ ಬರೆದು ಹೈಕಮಾಂಡ್‍ಗೆ ರವಾನಿಸುವ ಮೂಲಕ ಕೌಂಟರ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ರಹಸ್ಯ ಪತ್ರದ ಸಾರಾಂಶ ಏನು?
    ಯಡಿಯೂರಪ್ಪಗೆ ವಯಸ್ಸಾಗಿದೆ, ಆಡಳಿತ ನಡೆಸಲು ಆಗುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಇದನ್ನು ಸೃಷ್ಟಿಸಿರಬಹುದು. ಅನಾಮಧೇಯ ಪತ್ರದ ಮೂಲಕ ಅಪಪ್ರಚಾರ ಮಾಡಿದವರ ಬಗ್ಗೆ ಪಕ್ಷ ಎಚ್ಚರಿಕೆ ಕೊಡಬೇಕು. ಮುಖ್ಯಮಂತ್ರಿ ಆಗುವ ಮೊದಲು ಇಲ್ಲದಿದ್ದ ವಯಸ್ಸು ಈಗ ಎಲ್ಲಿಂದ ಬರುತ್ತೆ? ವಿಶೇಷ ಪ್ರಕರಣ ಎಂದೇ ಯಡಿಯೂರಪ್ಪ ಸಿಎಂ ಆಗಿದ್ದು ಎನ್ನುವ ಅರಿವು ಎಲ್ಲರಿಗೂ ಇದೆ. ಹೀಗಿರುವಾಗ ಪದೇ ಪದೇ ಗೊಂದಲ ಸೃಷ್ಟಿಸುವ ಕೆಲಸ ಆಗುತ್ತಿದೆ. ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನನ್ನು ಹೆಸರಿಸಲಿ. ಯಡಿಯೂರಪ್ಪ ನಂತರದ ನಾಯಕತ್ವ ಯಾರದ್ದು ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ. ಯಡಿಯೂರಪ್ಪ ಕೆಳಗಿಳಿದರೆ ಈ ನಾಯಕ ಮುಂದುವರಿಸುತ್ತಾನೆ ಎನ್ನುವ ವಿಶ್ವಾಸವೇ ಪಕ್ಷದಲ್ಲಿ ಇಲ್ಲ. ಇನ್ನು ಯಡಿಯೂರಪ್ಪಗೆ ವಯಸ್ಸಾಗಿರಬಹುದು, ಆದ್ರೆ ಅನಾರೋಗ್ಯ ಇಲ್ಲ. ಪಕ್ಷಕ್ಕೆ ನೀಡಿದ ಕೊಡುಗೆಯನ್ನೇ ಪರಿಗಣಿಸಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರನ್ನು ಕೇಂದ್ರ ಸರ್ಕಾರದ ಸಂಪುಟದಲ್ಲಿ ಉಳಿಸಿಕೊಂಡಿದ್ದನ್ನು ಗಮನಕ್ಕೆ ತರುತ್ತೇವೆ. ಯಡಿಯೂರಪ್ಪ ಮತ್ತೊಂದು ಅವಧಿಗೆ ಆಸೆಯನ್ನು ಪಟ್ಟಿಲ್ಲ. ಹೀಗಿರುವಾಗ ಪೂರ್ಣಾವಧಿ ತನಕ ಸಿಎಂ ಆಗಿ ಕೆಲಸ ಮಾಡಲು ಹೈಕಮಾಂಡ್ ಬೆಂಬಲ ಕೊಡಬೇಕು. ಅನಾಮಧೇಯ ಪತ್ರ ಸೃಷ್ಟಿಸುವ ವಿರೋಧಿಗಳಿಗೆ ಸಂದೇಶ ರವಾನಿಸಿ. ಇಲ್ಲದಿದ್ದರೆ ಪಕ್ಷ, ಸರ್ಕಾರ ಎರಡಕ್ಕೂ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.