ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸುಧೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ.
ಎರಡು ಪುಟಗಳ ಪತ್ರದಲ್ಲಿ, ಪಕ್ಷ ಸಂಘಟನೆಗೆ ಶ್ರಮವಹಿಸುವಂತೆ ಹೆಚ್‍ಡಿಡಿ ಮನವಿ ಮಾಡಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಗಳೇ ಸಿಎಂ ಆಗಿದ್ದರೂ ಕಾರ್ಯಕರ್ತರಿಗೆ ಏನೂ ಮಾಡಲು ಆಗಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹೀಗಂತ ಪಕ್ಷದಿಂದ ಯಾರು ದೂರ ಉಳಿಯಬೇಡಿ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದಲೇ ಬೂತ್ ಮಟ್ಟದಿಂದ ಕೆಲಸ ಪ್ರಾರಂಭ ಮಾಡಿ ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಪಕ್ಷದ ಸಭೆ ಮಾಡಲು ಆಗುತ್ತಿಲ್ಲ. ಹೀಗಾಗಿ ವಿಧಾನಸಭೆ ಕ್ಷೇತ್ರದ ಮಟ್ಟದಲ್ಲಿ ನೀವೇ ಕಾರ್ಯಕ್ರಮಗಳನ್ನು ರೂಪಿಸಿ. ಬಿಜೆಪಿ ಸರ್ಕಾರದ ವಿರೋಧಿ ನೀತಿಗಳನ್ನ ಜನರಿಗೆ ತಿಳಿಸಿ. ಗ್ರಾಮ, ಜಿಲ್ಲೆ, ವಾರ್ಡ್ ಮಟ್ಟದಿಂದ ಪಕ್ಷದ ಸಂಘಟನೆ ಮಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಜನರನ್ನು ಸೇರಿಸದೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಂಘಟನೆ ಮಾಡಿ. ಸರ್ಕಾರದ ಭೂ ಕಾಯ್ದೆ, ಎಪಿಎಂಸಿ ಕಾಯ್ದೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ. ಕೇಂದ್ರ ಸರ್ಕಾರದ ಸಂವಿಧಾನ ವಿರೋಧ ನೀತಿಗಳನ್ನ ಜನರಿಗೆ ಮನವರಿಕೆ ಮಾಡಿಸಿ. ಕೊರೊನಾ ನೆಪದಲ್ಲಿ ಪಠ್ಯ ಕಡಿತ ಮಾಡಲು ಮುಂದಾಗುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನ ಕೈಬಿಡುತ್ತಿದೆ. ಈ ವಿಚಾರಗಳನ್ನ ಜನರಿಗೆ ಮನದಟ್ಟು ಮಾಡಿ. ಜನರ ಮಧ್ಯೆ ಇದ್ದು ಪಕ್ಷ ಸಂಘಟನೆ ಮಾಡಿ ಎಂದು ಪತ್ರದಲ್ಲಿ ತಮ್ಮ ನಾಯಕರು ಹಾಗೂ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಮನವರಿಕೆ ಮಾಡಿದ್ದಾರೆ.
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರು ಅಗಲಿ ಇಂದಿಗೆ 11 ದಿನ ಕಳೆದಿದೆ. ಹೀಗಾಗಿ ಸರ್ಜಾ ಕುಟುಂಬದವರು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ಪೂಜೆ ಸಲ್ಲಿಸಿದರು. ಅಗಲಿದ ಕುಟುಂಬದ ಕುಡಿಯನ್ನ ನೆನೆದು ದುಃಖದಿಂದ ವಿಧಿ ವಿಧಾನಗಳನ್ನ ಪೂರೈಸಿದರು.
ಚಿರುನಾ ಮರೆಯೋಕೆ ಆಗದೇ ಮನದಾಳದ ಮಾತುಗಳನ್ನು ಓಲೆಯ ಮೂಲಕ ನಟ ಅರ್ಜುನ್ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅರ್ಜುನ್ ಸರ್ಜಾ ಚಿರುವಿಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ. ಮೇಘನಾ ಮಡಿಲಲ್ಲಿ ಮಗುವಾಗಿ ಮತ್ತೆ ಚಿರು ಹುಟ್ಟಿ ಬರಬೇಕು ಎಂದು ಕುಟುಂಬದರು ಭಾನವಾತ್ಮಕವಾಗಿ ಚಿರುವಿನ ಬಗ್ಗೆ ಮಾತನಾಡಿದರು.
ಮನೆ ಮಗನಿಗೆ ಮನವಿ:
ನಿನ್ನ ಮನಸ್ಸಿಗೆ ಯಾರಾದರೂ ಬೇಜಾರು ಮಾಡಿದ್ರೆ, ನೀನು ಕೋಪ ಮಾಡಿಕೊಂಡು ಸ್ವಲ್ಪ ಮಾತಾಡಿದ್ರು, ನಮ್ಮನ್ನು ಬೈಕೊಂಡಿದ್ರು, ನಮಗೆ ಹೇಳದೆ ಯಾವುದಾದರೂ ಊರಿಗೆ ಹೋಗಿ ಬಂದಿದ್ರು ಪರವಾಗಿರುತ್ತಿರಲಿಲ್ಲ. ಆದರೆ ವಾಪಸ್ಸೇ ಬರಕ್ಕಾಗದಿರೋ ಅಂತ ಊರಿಗೆ ಹೋಗಿ ನಮಗೆಲ್ಲಾ ಅಂತ ಶಿಕ್ಷೆ ಕೊಟ್ಟಿದಿಯಲ್ಲಪ್ಪ.
ಕಣ್ಣು ಮುಚ್ಚಿದರೂ ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ. ಸರಿ ಸ್ವಲ್ಪ ದಿನ ಆದ ಮೇಲೆ ಮರೆತು ಬಿಡುತ್ತಾರೆ ಎಂತ ನೀನು ತಿಳಿದುಕೊಂಡರೆ ಅದು ಸುಳ್ಳು. ನಮ್ಮೆಲ್ಲರಿಗೂ ಇದು ದೊಡ್ಡ ಗಾಯ. ಆರದೆ ಇರುವ ಅಂತ ಗಾಯ. ಯಾವಾಗಲೂ ನಮ್ಮ ಮನಸಲ್ಲಿ, ಹೃದಯದಲ್ಲೇ ಇರುತ್ತೀಯ ಕಂದ.
ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ಟರು. ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ.
ಚಿರು…ಈ ನೋವನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡಬೇಕು ಅಂತ ಎಲ್ಲರು ಹೇಳುತ್ತಾರೆ. ಆದರೆ ಅದು ನಿನ್ನ ಕೈಯಲ್ಲೇ ಇದೆ. ಹೇಗೆ ಅಂದರೆ, ದಯವಿಟ್ಟು ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದು ಬಿಡು ಕಂದ. ಆ ಮಗು ನಗುವಿನಲ್ಲೇ ನಿನ್ನ ನೀಡುತ್ತೀವಿ.
ನಾವೆಲ್ಲರೂ ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಆದರೆ ನಿನ್ನ ತುಂಬಾ ಪ್ರೀತಿಸುತ್ತೇವೆ ಎಂದು ಅರ್ಜುನ್ ಸರ್ಜಾ ಇಡೀ ಕುಟುಂಬದ ಪರವಾಗಿ ಪತ್ರದ ಮೂಲಕ ಚಿರುವಿಗೆ ನಮನ ಸಲ್ಲಿಸಿದ್ದಾರೆ. ಈ ಓಲೆಯನ್ನು ಧ್ರುವ ಸರ್ಜಾರ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “Anna Love you forever” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಜೂನ್ 7 ರಂದು ಭಾನುವಾರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಜೂನ್ 8 ರಂದು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ಚಿರಂಜೀವಿ ಮಣ್ಣಲ್ಲಿ ಮಣ್ಣಾಗಿದ್ದಾರೆ.
ತಿರುವನಂತಪುರಂ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನವನ್ನು ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಮರಳಿ ಪಡೆದುಕೊಂಡಿರುವ ಅಚ್ಚರಿ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ನೆಲ್ಲಿಕುನ್ನು ನಿವಾಸಿ ಬಸಾರಿಯಾ 20 ವರ್ಷಗಳ ಹಿಂದೆ ತಮ್ಮ ಚಿನ್ನವನ್ನು ಕಳೆದುಕೊಂಡಿದ್ದರು. 20 ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ವಿವಾಹ ಕಾರ್ಯಕ್ರಮದ ವೇಳೆ ಬಸಾರಿಯಾ ತಮ್ಮ ಚಿನ್ನದ ಸೊಂಟದ ಪಟ್ಟಿಯ ಒಂದು ಭಾಗವನ್ನು ಕಳೆದುಕೊಂಡಿದ್ದರು. ಸೊಂಟದ ಪಟ್ಟಿ ಸುಮಾರು 28 ಗ್ರಾಂ ನಷ್ಟು ತೂಕವಿತ್ತು. ಅದರಲ್ಲಿ ಸುಮಾರು 12 ಗ್ರಾಂ ನಷ್ಟು ತೂಕವಿದ್ದ ಒಂದು ಭಾಗವನ್ನು ಕಳೆದುಕೊಂಡಿದ್ದರು. ಚಿನ್ನ ಸಿಕ್ಕಿದ್ದ ವ್ಯಕ್ತಿ 20 ವರ್ಷಗಳ ನಂತರ ಅದರ ಬದಲಿಗೆ ಎರಡು ಚಿನ್ನದ ನಾಣ್ಯಗಳನ್ನು ಹಿಂದಿರುಗಿಸಿ, ಕ್ಷಮೆ ಕೇಳಿದ್ದಾರೆ.
ಮಂಗಳವಾರ ಬಸಾರಿಯಾ ಇಫ್ತಾರ್‌ಗೆ ತಯಾರಿ ನಡೆಸುತ್ತಿದ್ದಾಗ, ಹೆಲ್ಮೆಟ್ ಧರಿಸಿದ್ದ ಯುವಕನೊಬ್ಬ ಆಹಾರ ಪದಾರ್ಥಗಳಿದ್ದ ದೊಡ್ಡದಾದ ಪ್ಕಾಕ್ ತೆಗೆದುಕೊಂಡು ಬಂದು ನೀಡಿದ್ದನು. ಕಾಸರಗೋಡಿನಲ್ಲಿ ಇಫ್ತಾರ್ ಆಹಾರವನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಮಹಿಳೆ ಹೆಲ್ಮೆಟ್ ಧರಿಸಿದ್ದ ಯುವಕನನ್ನು ಯಾರು ನೀನು ಎಂದು ಕೇಳಿದ್ದರು. ಆಗ ಯುವಕ, ನಾನು ಕೇವಲ ಡೆಲಿವರಿ ಹುಡುಗ ಅಷ್ಟೆ. ಬೇರೆ ವ್ಯಕ್ತಿ ಇದನ್ನು ಕಳುಹಿಸಿದ್ದಾರೆ ಎಂದು ಉತ್ತರಿಸಿದ. ಅಷ್ಟರಲ್ಲಿ ಮಹಿಳೆ ಪ್ರಾರ್ಥನೆ ಮಾಡಲು ಹೋಗದರು. ಇತ್ತ ಯುವಕ ಕೂಡ ಹೊರಟುಹೋದ.
ಆಹಾರ ಪ್ಯಾಕ್ ಓಪನ್ ಮಾಡಿದಾಗ ಅದರಲ್ಲಿ ಸಣ್ಣ ಬಾಕ್ಸ್ ನಲ್ಲಿ ಎರಡು ಚಿನ್ನದ ನಾಣ್ಯಗಳಿತ್ತು. ಜೊತೆಗೆ ಒಂದು ಪತ್ರ ಕೂಡ ಇತ್ತು. ಅದರಲ್ಲಿ, “ನೀವು 20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಚಿನ್ನ ನನಗೆ ಸಿಕ್ಕಿತ್ತು. ಅದನ್ನು ನಿಮಗೆ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಈಗ ಅದರ ಬದಲಿಗೆ ನಾಣ್ಯಗಳನ್ನು ನೀಡುತ್ತಿದ್ದೇನೆ. ದಯವಿಟ್ಟು ಈ ನಾಣ್ಯಗಳನ್ನು ಸ್ವೀಕರಿಸಿ ನನ್ನನ್ನು ಕ್ಷಮಿಸಿ” ಎಂದು ಬರೆದಿತ್ತು.
ಅಚ್ಚರಿಯಾದ ಬಸಾರಿಯಾ ಪತ್ರ ಮತ್ತು ಚಿನ್ನದ ನಾಣ್ಯವನ್ನು ಶಾರ್ಜಾದಲ್ಲಿ ಪಾದರಕ್ಷೆಗಳ ಅಂಗಡಿ ನಡೆಸುತ್ತಿದ್ದ ತನ್ನ ಪತಿ ಇಬ್ರಾಹಿಂ ತೈವಾಲಪ್ಪಿಲ್‍ಗೆ ವಾಟ್ಸಪ್ ಮೂಲಕ ತಿಳಿಸಿದ್ದಾರೆ. ಇದನ್ನು ನೋಡಿದ ಪತಿ 20 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಚಿನ್ನದ ನಾಣ್ಯಗಳ ಕಳುಹಿಸಿದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ.
– ಹನುಮಂತನನ್ನ ಉಲ್ಲೇಖಿಸಿ ಪತ್ರ ಬರೆದ ಜೈರ್ ಬೋಲ್ಸನಾರೊ
– ಯೂಟರ್ನ್ ಹೊಡೆದು ಮೋದಿ ‘ಗ್ರೇಟ್’ ಎಂದ ಟ್ರಂಪ್
ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮಾಯಣದಲ್ಲಿ ಬರುವ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಮನವಿ ಮಾಡಿದ್ದಾರೆ.
ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತಿಗೆ ಅನುಮತಿ ಮುಂದಾದ ಭಾರತದ ನಿರ್ಧಾರವನ್ನು ರಾಮಾಯಣದ ಪೌರಾಣಿಕ ಕಥೆಗೆ ಹೋಲಿಕೆ ಮಾಡಿದ್ದಾರೆ.
ಲಂಕಾದಲ್ಲಿ ನಡೆದ ಯುದ್ಧದಲ್ಲಿ ಭಗವಾನ್ ಶ್ರೀರಾಮನ ಸಹೋದರ ಲಕ್ಷ್ಮಣ ಭಾರೀ ಗಾಯಗೊಂಡಿದ್ದ. ಆಗ ಲಕ್ಷ್ಮಣನಿಗೆ ಚಿಕಿತ್ಸೆ ನೀಡಲು ಗಿಡಮೂಲಿಕೆ ಬೇಕಾಗಿದ್ದರಿಂದ ರಾಮನ ಪರಮಭಕ್ತ ಹನುಮಂತ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಬರುತ್ತಾನೆ. ಈ ಪ್ರಸಂಗವನ್ನು ನೆನೆದು ಜೈರ್ ಬೋಲ್ಸನಾರೊ ಸಂಜೀವಿನಿ ಪರ್ವತವನ್ನು ಉಲ್ಲೇಖಿಸಿ ಮಾತ್ರೆ ನೀಡುವಂತೆ ಕೇಳಿಕೊಂಡಿದ್ದಾರೆ.
ಕೊರೊನಾ ವೈರಸ್‍ನಿಂದ ಕಂಗೆಟ್ಟಿರುವ ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ರಫ್ತು ಮಾಡಲು ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರದ ಹಿನ್ನೆಲೆಯಲ್ಲಿ ಬೋಲ್ಸನಾರೊ ಅವರು ಪತ್ರವನ್ನು ಬರೆದಿದ್ದಾರೆ.
ಭಗವಾನ್ ರಾಮನ ಸಹೋದರ ಲಕ್ಷ್ಮಣನ ಜೀವವನ್ನು ಉಳಿಸಲು ಹನುಮಂತ ಹಿಮಾಲಯದಿಂದ ಸಂಜೀವಿನಿ ತಂದ. ಯೇಸು ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಗುಣಪಡಿಸಿದನು ಹಾಗೂ ಬಾರ್ಟಿಮಿಯುಗೆ ಕಣ್ಣು ಕಾಣುವಂತೆ ಮಾಡಿದ. ಅಂತೆ ಜಗತ್ತಿನ ಎಲ್ಲಾ ಜನರ ಸಲುವಾಗಿ ಭಾರತ ಮತ್ತು ಬ್ರೆಜಿಲ್ ಈ ಜಾಗತಿಕ ಬಿಕ್ಕಟ್ಟನ್ನು ನಿವಾರಿಸಲು ಶ್ರಮಿಸುತ್ತಿವೆ ಎಂದು ಬೋಲ್ಸನಾರೊ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಮೆರಿಕ ಏಪ್ರಿಲ್ 6ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್‍ಗಳಿಗೆ ಬೇಡಿಕೆ ಇಟ್ಟಿತ್ತು. ಅಮೆರಿಕ ಸೇರಿದಂತೆ ಕೊರೊನಾ ಬಾಧಿತ ರಾಷ್ಟ್ರಗಳಿಗೆ ಮಾನವೀಯತೆ ದೃಷ್ಟಿಯಲ್ಲಿ ಆ್ಯಂಟಿ ಮಲೇರಿಯಾ (ಹೈಡ್ರೋಕ್ಸಿಕ್ಲೋರೋಕ್ವೀನ್) ಔಷಧಿ ರಫ್ತು ಮಾಡುವುದಾಗಿ ಭಾರತ ಹೇಳಿದೆ. 26 ಜೆನರಿಕ್ ಔಷಧಿಗಳ ರಫ್ತಿಗೆ ಕಳೆದ ತಿಂಗಳಷ್ಟೇ ಭಾರತ ನಿರ್ಬಂಧ ಹೇರಿತ್ತು. ಆದರೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆ್ಯಂಟಿ ಮಲೇರಿಯಾ ಔಷಧಿಯನ್ನು ತ್ವರಿತವಾಗಿ ರಫ್ತು ಮಾಡುವಂತೆ ಅಮೆರಿಕ ಕೇಳಿತ್ತು.
ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು, ಒಂದು ವೇಳೆ ಆ್ಯಂಟಿ ಮಲೇರಿಯಾ ಔಷಧಿಯನ್ನು ರಫ್ತು ಮಾಡದಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಸಿದ್ದರು. ಇದಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗಿದೆ. ದೇಶವೊಂದರ ವಿರುದ್ಧ ಇಂಥ ಬೆದರಿಕೆ ನೋಡಿಯೇ ಇಲ್ಲ ಅಂತ ಕಾಂಗ್ರೆಸ್‍ನ ಶಶಿತರೂರ್ ಮಂಗಳವಾರ ಟ್ವೀಟ್ ಮಾಡಿದ್ದರು.
ಆದರೆ ಈಗ ಟ್ರಂಪ್ ತಮ್ಮ ಹೇಳಿಕೆ ಪರಿಣಾಮ ಅರಿತು ಯೂಟರ್ನ್ ಹೊಡೆದಿದ್ದಾರೆ. ”ನಾನು ಲಕ್ಷಾಂತರ ರೂ. ಮೌಲ್ಯದ ಪ್ರಮಾಣದಲ್ಲಿ ಔಷಧಿ ಖರೀದಿಸಿದೆ. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ವೇಗ ಭಾರತದಿಂದ ರಫ್ತು ಆಗುತ್ತದೆ. ಅವರು ಗ್ರೇಟ್, ನಿಜವಾಗಿಯೂ ಒಳ್ಳೆಯವರಾಗಿದ್ದಾರೆ. ಔಷಧಿ ಭಾರತಕ್ಕೆ ಬೇಕಾಗಿರುವುದರಿಂದಲೇ ರಫ್ತಿನ ಮೇಲೆ ನಿರ್ಬಂಧ ಹೇರಿದ್ದರು. ಆದರೆ ಈಗ ಅವರಿಂದ ಸಾಕಷ್ಟು ಒಳ್ಳೆಯ ಸಂಗತಿಗಳು ಬರುತ್ತಿವೆ” ಎಂದು ಟ್ರಂಪ್ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.
ಬಹಳಷ್ಟು ಜನರು ಭಾರತದ ಸಹಾಯವನ್ನು ನೋಡುತ್ತಿದ್ದಾರೆ, ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಕೆಟ್ಟ ಕಥೆಗಳನ್ನು ಕೇಳುವುದಿಲ್ಲ. ಭಾರತಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಕೊರೊನಾ ಮೇಲೆ ಪರಿಣಾಮ ಬೀರುತ್ತಾ?
ಅಮೆರಿಕದಲ್ಲಿ 3.60 ಲಕ್ಷ ಮಂದಿಗೆ ಕೊರೊನಾ ಬಂದಿದ್ದು ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾಗೆ ಸಧ್ಯಕ್ಕೆ ಯಾವುದೇ ಔಷಧಿ ಇಲ್ಲ. ಹೀಗಾಗಿ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಎನ್ನವ ಪ್ರಶ್ನೆ ಏಳುವುದು ಸಹಜ. ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.
ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.
ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.
ಅಧ್ಯಯನ ಹೇಳಿದ್ದು ಏನು?
ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.
ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.
ಟ್ರಂಪ್ ಹೇಳಿದ್ದು ಏನು?
ಇಂದಿನ ತುರ್ತು ಪರಿಸ್ಥಿತಿಯಲ್ಲಿ ಲ್ಯಾಬ್‍ನಲ್ಲಿ ಕೊರೊನಾಗೆ ಔಷಧಿ ಕಂಡು ಹುಡುಕುವುದು ಬಹಳ ಸವಾಲಿನ ಕೆಲಸ. ಹೀಗಿರುವಾಗ ಅಮೆರಿಕನ್ನರ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಎರಡು ಮೆಡಿಕಲ್ ಇತಿಹಾಸದಲ್ಲಿ ಗೇಮ್ ಚೇಂಜರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಾನು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.
ನವದೆಹಲಿ: ದೇಶಾದ್ಯಂತ ಹದ್ದು ಮೀರುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರ ಸಲಹೆ ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆಯಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಬೆನ್ನಲ್ಲೇ, ಇವತ್ತು ಪ್ರಧಾನಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದರ ಶೇ.30ರಷ್ಟು ಸಂಬಳ ಕಡಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದ ಆರ್ಥಿಕ ಕ್ರೋಢೀಕರಣಕ್ಕಾಗಿ ಐದು ಸಲಹೆ ನೀಡಿದ್ದಾರೆ.
ಪ್ರಧಾನಿಗೆ ಸೋನಿಯಾ ‘ಪಂಚ’ ಸಲಹೆ: ಸಲಹೆ 1: 20 ಸಾವಿರ ಕೋಟಿಗಳ ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸಿ. (900ರಿಂದ 1200 ಸಂಸದರ ಆಸನದ ಸಾಮಥ್ರ್ಯದ ಹೊಸ ಸಂಸತ್ ಭವನ ನಿರ್ಮಾಣ. ಎಲ್ಲಾ ಇಲಾಖೆಗಳಿಗೆ ಸಾಮಾನ್ಯ ಸಚಿವಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾಗೇಟ್‍ವರೆಗೆ 3 ಕಿ.ಮೀ. ದೂರದ ರಾಜಪಥ ನಿರ್ಮಿಸುವ ಯೋಜನೆ. 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಆಗಸ್ಟ್ 2022ರ ವೇಳೆಗೆ ನಿರ್ಮಿಸಲು ಉದ್ದೇಶಿಸಲಾಗಿದೆ.)
Congress President and CPP Chairperson Smt. Sonia Gandhi writes to PM Modi suggesting various measures to fight the COVID-19 pandemic. pic.twitter.com/77MzCYiokl
ಸಲಹೆ 2: ಬಜೆಟ್‍ನಲ್ಲಿ ಘೋಷಿಸಿರೋ ಖರ್ಚನ್ನು ಶೇಕಡಾ 30ರಷ್ಟು ಅನುಪಾತದಲ್ಲಿ ಕಡಿತಗೊಳಿಸಿ. (ಸಂಬಳ, ಪಿಂಚಣಿ ಮತ್ತು ಕೇಂದ್ರ ವಲಯದ ಯೋಜನೆಗಳನ್ನು ಹೊರತುಪಡಿಸಿ – ಇದನ್ನು ವಲಸಿಗರಿಗರು, ಅಸಂಘಟಿತ ವರ್ಗದ ಅನುಕೂಲಕ್ಕೆ ಬಳಸಿ.)
ಸಲಹೆ 3: ಕೇಂದ್ರ, ರಾಜ್ಯ ಸರ್ಕಾರಗಳ ಎಲ್ಲಾ ವಿದೇಶಿ ಪ್ರವಾಸಕ್ಕೆ ಬ್ರೇಕ್ ಹಾಕಿ. (ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ಅಧಿಕಾರಿಗಳದ್ದು… ಕಳೆದ 5 ವರ್ಷದಲ್ಲಿ ಪಿಎಂ, ಸಚಿವರ ಪ್ರವಾಸಕ್ಕೆ 393 ಕೋಟಿ ಖರ್ಚಾಗಿದೆ.)
ಸಲಹೆ 4: ಕೊರೊನಾ ಹೊರತುಪಡಿಸಿದ ಜಾಹೀರಾತಿಗೆ 2 ವರ್ಷ ನಿಯಂತ್ರಣ ಇರಲಿ (ಟಿವಿ, ಪ್ರಿಂಟ್ ಮತ್ತು ಆನ್‍ಲೈನ್ ಮೇಲೆ ಸಂಪೂರ್ಣ ನಿಷೇಧ ಹೇರಿ)
ಸಲಹೆ 5: ಪಿಎಂ ಕೇರ್ಸ್‍ಗೆ ಬರ್ತಿರೋ ಹಣವನ್ನು `ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ’ಗೆ ವರ್ಗಾಯಿಸಿ. (ಹಣಕಾಸು ಹಂಚಿಕೆಗೆ ಎರಡು ಪ್ರತ್ಯೇಕ ವ್ಯವಸ್ಥೆ ಬೇಡ. ದಕ್ಷತೆ, ಪಾರದರ್ಶಕತೆಗೆ ನಿಧಿ ಸಾಕು. ಪ್ರಧಾನಿ ಪರಿಹಾರದಲ್ಲಿ ಈಗಾಗಲೇ 3,800 ಕೋಟಿ ಇದೆ ಅದನ್ನು ಬಳಸಿ. ಕೊರೋನಾ ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ.)
ಬೆಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದೇಶವೇ ಲಾಕ್‍ಡೌನ್ ಆಗಿದೆ. ಒಂದೆಡೆ ಜನ ಸಾಮಾನ್ಯರು ದಿನ ಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಮದ್ಯ ಸಿಗದೇ ಕುಡುಕರ ಕಷ್ಟ ತಾರಕ್ಕಕ್ಕೇರಿದೆ.
ಲಾಕ್‍ಡೌನ್‍ನಿಂದ ಮದ್ಯ ಮಾರಾಟ ಸ್ಥಗಿತಗೊಂಡಿರುವ ಕಾರಣಕ್ಕೆ ಸದ್ಯ ರಾಜ್ಯದಲ್ಲಿ ಕುಡುಕರಿಗೆ ಎಣ್ಣೆ ಸಿಗದೆ ಹುಚ್ಚರಂತಾಗಿದ್ದಾರಂತೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಾಗೂ ಅಬಕಾರಿ ಸಚಿವರಿಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ವಿ. ಮಂಜುನಾಥ್ ಎಂಬಾತ ಪತ್ರ ಬರೆದಿದ್ದಾನೆ. ಸದ್ಯ ಸರ್ಕಾರದ ತೀರ್ಮಾನದಿಂದ ಮದ್ಯ ಪ್ರಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಯವಿಟ್ಟು ಮದ್ಯದಂಗಡಿ ತೆರೆಯಿರಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಮದ್ಯ ಖರೀದಿ ಮಾಡ್ತೇವೆ ಎಂದು ಕುಡುಕ ಗೋಗರೆದಿದ್ದಾನೆ.
ರಾಜ್ಯದಲ್ಲಿ ಆರೂವರೆ ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ಮೂರು ಮುಕ್ಕಾಲು ಕೋಟಿ ಜನರು ಮದ್ಯ ಪ್ರಿಯರಿದ್ದಾರೆ. ಬೆಳಗ್ಗೆ 9ರಿಂದ 12ರವರೆಗೆ ಎಂಎಸ್‍ಐಎಲ್ ಹೋಲ್‍ಸೇಲ್ ಮದ್ಯದ ಅಂಗಡಿ ಓಪನ್ ಮಾಡಿ ಖರೀದಿಗೆ ಅವಕಾಶ ಕೊಡಬೇಕು. ನಾವು 6 ಅಡಿ ದೂರದಲ್ಲಿ ನಿಂತು ಎಣ್ಣೆ ಖರೀದಿ ಮಾಡ್ತೀವಿ. ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರಿಗೆ ದಯವಿಟ್ಟು ನಮ್ಮ ಮನವಿಗೆ ಸಹಕರಿಸಬೇಕು ಎಂದು ವಾಟ್ಸಪ್ ನಲ್ಲಿ ಪತ್ರ ಬರೆದು ಕುಡುಕ ಕೋರಿಕೊಂಡಿದ್ದಾನೆ.
ವಿಜಯಪುರ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆ ಜನರ ಸಂಕಷ್ಟಕ್ಕೆ ಸಹಯ ಮಾಡಲು ರಾಜ್ಯ ಸರ್ಕಾರದ ಮನವಿ ಮಾಡಿದೆ. ಪ್ರಕೃತಿ ವಿಕೋಪ ನಿಧಿಗೆ ಧನ ಸಹಾಯ ಮಾಡಲು ಸೂಚಿಸಿದೆ. ಇದಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಂದಿಸಿದ್ದಾರೆ.
ಕೊರೊನಾ ಎಮರ್ಜೆನ್ಸಿಗೆ ತಮ್ಮ ತಿಂಗಳ ವೇತನವನ್ನ ಸರ್ಕಾರಕ್ಕೆ ನೀಡಲು ಯತ್ನಾಳ್ ನಿರ್ಧರಿಸಿದ್ದಾರೆ. ತಮ್ಮ ಮೂರು ತಿಂಗಳ ವೇತನವನ್ನ ಪ್ರಕೃತಿ ವಿಕೋಪ ನಿಧಿಗೆ ಪಡೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಯತ್ನಾಳ್ ಪತ್ರ ಬರೆದಿದ್ದಾರೆ.
ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯಕವಾಗಲಿ. ಕೊರೊನಾದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಈ ಸಮಯದಲ್ಲಿ ನಾವು ಆರ್ಥಿಕವಾಗಿ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕಿದೆ. ಅದಕ್ಕೆ ನನ್ನ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಪಡೆಯಬೇಕೆಂದು ಪತ್ರದಲ್ಲಿ ಯತ್ನಾಳ್ ಮನವಿ ಮಾಡಿಕೊಂಡಿದ್ದಾರೆ. ಸಿಎಂಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಯತ್ನಾಳ್ ಹಂಚಿಕೊಂಡಿದ್ದಾರೆ.
ಮಂಡ್ಯ: ಕೆಇಬಿ ನೌಕರರಿಗೆ ಕೊರೊನಾ ವೈರಸ್ ಭೀತಿ ಎದುರಾಗಿದ್ದು, ಹಳ್ಳಿಗಳಲ್ಲಿ ನಮ್ಮ ನೌಕರರು ಕೆಲಸ ಮಾಡಲು ಹೆದುರುತ್ತಿದ್ದಾರೆ. ಕೆಬಿಪಿಯ ಜೆಇ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಮೇಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇಂತಹದೊಂದು ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯ ಕೆಇಬಿಯ ಜೆಇ ಕೃಷ್ಣೇಗೌಡ ಅವರ ಹೆಸರಿನಲ್ಲಿ ಕೆಇಬಿಯ ಮೇಲಾಧಿಕಾರಿಗೆ ಕೊರೊನಾ ವೈರಸ್ ಶಂಕೆಯ ಕುರಿತು ಭಯ ವ್ಯಕ್ತ ಪಡಿಸಿ ಪತ್ರ ಬರೆದಿದ್ದಾರೆ.
ಕಿಕ್ಕೇರಿ ಭಾಗದಲ್ಲಿ ಅನೇಕರು ಮುಂಬೈನಿಂದ ಬಂದಿದ್ದಾರೆ ಹಾಗೂ ಕೇರಳ ಭಾಗದಿಂದಲೂ ಸಾಕಷ್ಟು ಜನರು ಬರುತ್ತಾರೆ. ಹೀಗಾಗಿ ಹಳ್ಳಿಗಳಲ್ಲಿ ಕೊರೊನಾ ವೈರಸ್ ಇದೆ ಎಂಬ ಕಾರಣಕ್ಕಾಗಿ ನಮ್ಮ ಸಿಬ್ನಂದಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಇದಲ್ಲದೇ ನಮ್ಮ ಇಲಾಖೆ ಇಬ್ಬರು ಸಿಬ್ಬಂದಿಗೆ ಕೊರೊನಾ ವೈರಸ್ ಇರುವ ಶಂಕೆಯೂ ಸಹ ಇದೆ. ಹೀಗಾಗಿ ಅವರನ್ನು ನಾವು ಮನೆಯಿಂದ ಹೊರ ಬಾರದಂತೆ ತಿಳಿಸಿದ್ದೇವೆ ಎಂದು ಕಿಡಿಗೇಡಿಗಳು ಪತ್ರ ಬರೆದಿದ್ದಾರೆ.
ಇದು ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ. ಈ ಬಗ್ಗೆ ಕ್ರಮ ಜರುಗಿಸುವುದಾಗಿ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
– ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗೆ ಧನ್ಯವಾದ
– ಈಗ ಮತ್ತೆ ನಮಗೆ ಆತ್ಮವಿಶ್ವಾಸ ಮೂಡಿದೆ
ಬೆಂಗಳೂರು: ಇಡೀ ಜಗತ್ತೇ ಕೊರೊನಾ ವೈರಸ್‍ಗೆ ಸಿಲುಕಿ ಒದ್ದಾಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಆಗಿದೆ. ಆದರೆ ಈ ಹೊತ್ತಲ್ಲಿ ಕರ್ನಾಟಕದ ಮಂದಿಗೆ ಸಿಹಿಸುದ್ದಿ ಸಿಕ್ಕಿದೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಬೆಂಗಳೂರಿನ ಕುಟುಂಬ ಕೊರೊನಾ ಜಯಿಸಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಸತತ 10 ದಿನಗಳ ಚಿಕಿತ್ಸೆ ಪಡೆದ ಟೆಕ್ಕಿ ಕುಟುಂಬ ಕೊರೊನಾ ಸೋಂಕಿನಿಂದ ಪಾರಾಗಿದೆ. ತಮ್ಮ ಇಡೀ ಕುಟುಂಬವನ್ನು ಕೊರೊನಾದಿಂದ ಪಾರು ಮಾಡಿದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರಿಗೆ, ನರ್ಸ್‌ಗಳಿಗೆ ಸಿಬ್ಬಂದಿಗೆ ಟೆಕ್ಕಿ ಪತ್ನಿ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಮತ್ತೊಂದು ಪಾಸಿಟಿವ್ – ದುಬೈನಿಂದ ಬಂದ ಬೆಂಗ್ಳೂರಿನ ಮಹಿಳೆಗೆ ಕೊರೊನಾ
ಪತ್ರದಲ್ಲಿ ಏನಿದೆ?
ನಾನು ಮತ್ತು ನನ್ನ ಕುಟುಂಬ ಕೊರೊನಾ ಸೋಂಕಿತರಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದ್ವಿ. ಅಂದಿನಿಂದ ನಮ್ಮನ್ನು ಐಸೋಲೇಷನ್‍ನಲ್ಲಿ ಇಟ್ಟಿದ್ದರು. ಅಂದಿನಿಂದ ನಮಗೆ ಸರ್ಕಾರಿ ಸೌಲಭ್ಯದೊಂದಿಗೆ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ನಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು. ನಮಗೆ ಈ ರೋಗದ ಭೀತಿಯಿಂದ ಹೊರಬರಲು ನೆರವಾದರು.
ಕೊರೊನಾ ವೈರಸ್ ಎಂಬುದು ಜನರನ್ನು ಭಯಬೀತರಾಗಿ ಮಾಡಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ವೈದ್ಯರು ಪ್ರಬುದ್ಧವಾಗಿ, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನನ್ನ ಪತಿಗೆ ಕೊರೊನಾ ಲಕ್ಷಣಗಳು ಕಾಣಿಸಿದಾಗ ನಾನೇ ಸ್ವತಃ ಅಂಬುಲೆನ್ಸ್‌ಗೆ ಕರೆ ಮಾಡಿ ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಈ ವೇಳೆ ನಾವು ಯಾವುದೇ ಸಾರ್ವಜನಿಕರು, ಸಾರ್ವಜನಿಕ ಮತ್ತು ಖಾಸಗಿ ವಾಹನಕ್ಕೆ ತೊಂದರೆ ಮಾಡಲಿಲ್ಲ.
ಆಗ ವೈದ್ಯರು, ನರ್ಸ್ ಮತ್ತು ಇತರ ಎಲ್ಲ ಸಹಾಯಕ ಸಿಬ್ಬಂದಿ ನಮ್ಮ ಬಳಿ ಬಂದರು. ನಂತರ ಸ್ಕ್ರೀನಿಂಗ್ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿದರು. ವರದಿಯಲ್ಲಿ ನಮಗೆ ಪಾಸಿಟಿವ್ ಬಂದ ಬಳಿಕ ನಮ್ಮನ್ನು ಐಸೋಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಿದರು. ವಾರ್ಡ್‍ನಲ್ಲಿ ಶುಚಿತ್ವದೊಂದಿಗೆ ನಮಗೆ ಬೇಕಾದ ಅಗತ್ಯತೆಗಳನ್ನು ನೋಡಿಕೊಂಡರು.
ನಮಗೆ ಕೊರೊನಾ ಪಾಸಿಟಿವ್ ಬಂದ ಮೇಲೆ ನಾವು ಸಂಪರ್ಕದಲ್ಲಿದ್ದವರಿಗೂ ಸಹ ಕ್ವಾರಂಟೇನ್ ಮಾಡಲಾಯಿತು. ನನ್ನ ಪತಿಯ ಕಂಪನಿ, ಸಹೋದ್ಯೋಗಿಗಳು, ನನ್ನ ಮಗುವಿನ ಶಾಲೆ, ಸ್ನೇಹಿತರು, ಕ್ಲಾಸ್‍ಮೆಟ್ಸ್, ನನ್ನ ಸ್ನೇಹಿತರು, ನೆರೆಹೊರೆಯವರು, ಅಪಾರ್ಟ್ ಮೆಂಟ್‍ನಲ್ಲಿದ್ದವರ ಮೇಲೆ ತುಂಬಾ ಅಚ್ಚುಕಟ್ಟಾಗಿ ನಿಗಾ ವಹಿಸಲಾಯಿತು.
ಆರೋಗ್ಯಾಧಿಕಾರಿಗಳು ನಮ್ಮ ಗುರುತು ಹೊರಗೆ ಗೊತ್ತಾಗದಂತೆ ನೋಡಿಕೊಂಡರು. ಯಾವುದೇ ಮಾಧ್ಯಮದವರು ಸಂಪರ್ಕಿಸಲು ಬಿಡಲಿಲ್ಲ. ನಮಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದಾರೆ. ಇದು ನಮ್ಮಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಿದೆ. ನಮಗೆ ಅತ್ಯುತ್ತಮವಾದ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ವರ್ಗದವರ ತಾಳ್ಮೆ, ಕ್ರಮಬದ್ಧ ಚಿಕಿತ್ಸೆ, ಚಿಕಿತ್ಸೆ ನೀಡಿದ ಪರಿ ನೋಡಿ ನಮ್ಮಲ್ಲಿ ಭವಿಷ್ಯದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚು ಮಾಡಿತು.
ನಮ್ಮನ್ನು ಚೆನ್ನಾಗಿ ನೋಡಿಕೊಂಡ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಸರ್ಕಾರ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ನಮ್ಮೆಲ್ಲರನ್ನೂ ಸುರಕ್ಷಿತವಾಗಿಡಲು ಎಲ್ಲರೂ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಚೀನಾ, ಇಟಲಿ, ಇರಾನಿನಲ್ಲಿ ನಾವಿಲ್ಲ, ನಾವು ಭಾರತದಲ್ಲಿ ಇದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನಮ್ಮನ್ನು ಕೊರೊನಾ ಸೋಂಕಿನಿಂದ ಪಾರು ಮಾಡಲು ಅವರು ಪಟ್ಟ ಶ್ರಮ ಪ್ರಶಂಸನೀಯ. ನಮ್ಮ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಪತ್ರದಲ್ಲಿ ಬರೆದು ತಿಳಿಸಿದ್ದಾರೆ.
ಟೆಕ್ಕಿ ಮಾರ್ಚ್ 1ರಂದು ನ್ಯೂಯಾರ್ಕ್-ದುಬೈ ಮೂಲಕ ಬೆಂಗಳೂರಿಗೆ ಬಂದಿದ್ದ. ಮಾರ್ಚ್ 8ರಂದು ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಕೂಡಲೇ ಆತನನ್ನು ಮತ್ತು ಆತನ ಪತ್ನಿ ಮತ್ತು ಪುತ್ರಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 20 ತಜ್ಞ ವೈದ್ಯರು, 60 ದಾದಿಯರು ಹಗಲಿರುಳೆನ್ನದೇ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ.
ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಏಪ್ರಿಲ್ 3ರಂದು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ನಡೆಯಬೇಕಿದ್ದ ಪದ್ಮ ಪುರಸ್ಕಾರ ಪ್ರದಾನ ಕಾರ್ಯಕ್ರಮ ಅರ್ನಿದಿಷ್ಟವಾಧಿಗೆ ಮುಂದೂಡಿಕೆಯಾಗಿದೆ.
ಭಾರತದಲ್ಲಿ ಸೊಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಈ ತಿರ್ಮಾನ ತೆಗೆದುಕೊಂಡಿದ್ದು, ಮುಂದಿನ ದಿನಾಂಕ ನಿಗದಿ ಆಗುವರೆಗೂ ಕಾರ್ಯಕ್ರಮ ಮುಂದೂಡಿಕೆಯಾಗಿದೆ ಎಂದು ತನ್ನ ಪತ್ರದಲ್ಲಿ ತಿಳಿಸಿದೆ.
2019ರ ಗಣರಾಜೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಒಟ್ಟು ಏಳು ಗಣ್ಯರಿಗೆ ಪದ್ಮವಿಭೂಷಣ, 16 ಮಂದಿಗೆ ಪದ್ಮಭೂಷಣ, 118 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಕರ್ನಾಟಕದ ತುಳಸಿಗೌಡ, ಹರೆಕಲ ಹಾಜಬ್ಬ, ಎಂಪಿ ಗಣೇಶ್, ಕೆ.ವಿ ಸಂಪತ್ ಕುಮಾರ್, ಜಯಲಕ್ಷ್ಮಿ, ಉದ್ಯಮಿ ವಿಜಯ್ ಸಂಕೇಶ್ವರ್, ಬೆಂಗಳೂರು ಗಂಗಾಧರ್, ಭರತ್ ಗೋಯಂಕಾಗೆ ಪದ್ಮ ಶ್ರೀ, ಪೇಜಾವರ ಶ್ರೀಗಳಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.