Tag: letter

  • ಮಾಲಾಶ್ರೀಗೆ ಪತ್ರ ಬರೆದು ಸಾಂತ್ವನ ತಿಳಿಸಿದ ನಟಿ ಶ್ರುತಿ

    ಮಾಲಾಶ್ರೀಗೆ ಪತ್ರ ಬರೆದು ಸಾಂತ್ವನ ತಿಳಿಸಿದ ನಟಿ ಶ್ರುತಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಸೋಮವಾರ ಕೊರೊನಾದಿಂದ ಸಾವನ್ನಪ್ಪಿದರು. ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಮಾಲಾಶ್ರೀಗೆ ನಟಿ ಶ್ರುತಿ ಸಾಮಾಜಿಕ ಜಾಲತಾಣದ ಮೂಲಕ ಭಾವುಕ ಪತ್ರ ಬರೆದು ಸಾಂತ್ವಾನ ಹೇಳಿದ್ದಾರೆ.

    ‘ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಕ್ರೂರ ಪರಿಸ್ಥಿತಿಗೆ ನನ್ನದೊಂದು ದಿಕ್ಕಾರ.’

    ಮಾಲಾ ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ. ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ, ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ. ನೀವು ಹುಟ್ಟು ಹೋರಾಟಗಾರ್ತಿ. ಅದು ನನ್ನ ಕಣ್ಣಾರೆ ನೋಡಿದ್ದೇನೆ.’

    ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ. ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು, ಕೇವಲ ದೇವರ ವರದಿಂದ ಅಲ್ಲಾ ತ್ಯಾಗ, ಸಹನೆ, ಪ್ರೀತಿಯಿಂದ, ಒಳ್ಳೆ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ.’ ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರೂ ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ ಒಂದು ಫೋನ್ ಕಾಲ್ ಸಾಕು ಎಂದು ಪತ್ರ ಬರೆದಿದ್ದಾರೆ.

     

    View this post on Instagram

     

    A post shared by Shruthi (@shruthi__krishnaa)

    ಜೊತೆಗೆ ಕಾಮೆಂಟ್ ಸೆಕ್ಷನ್‍ನಲ್ಲಿ ಎಲ್ಲರಲ್ಲಿಯೂ ಒಂದು ಕಳಕಳಿಯ ಮನವಿ ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಹಾಗೂ ಸೆಲೆಬ್ರೆಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಾಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ.

  • ಮಗಳ ಪತ್ರ ಓದಿ ಕಣ್ಣೀರಿಟ್ಟು ಕಿರುಚಾಡಿದ್ರು ಚಕ್ರವರ್ತಿ

    ಮಗಳ ಪತ್ರ ಓದಿ ಕಣ್ಣೀರಿಟ್ಟು ಕಿರುಚಾಡಿದ್ರು ಚಕ್ರವರ್ತಿ

    ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಎಷ್ಟು ನೇರವಾಗಿ ಮಾತನಾಡುತ್ತಾರೋ ಅಷ್ಟೇ ನಿಷ್ಠೂರವಾದಿ, ಹಾಗೇ ಅಷ್ಟೇ ಬೇಗ ಭಾವುಕರಾಗುತ್ತಾರೆ. ಟಾಸ್ಕ್‍ನಲ್ಲಿ ಗೆದ್ದ ಸ್ಪರ್ಧಿಗಳಿಗೆ ಮನೆಯಿಂದ ಪತ್ರಗಳು ಬರುತ್ತವೆ. ಆದರೆ ಮಗಳಿಂದ ಬಂದಿರುವ ಪತ್ರವನ್ನು ಓದಿದ ಚಕ್ರವರ್ತಿ ಕಣ್ಣೀರು ಹಾಕಿ ಕಿರುಚಾಡಿದ್ದಾರೆ.

    ಬಿಗ್ ಬಾಸ್‍ನಲ್ಲಿ ನೀಡಿದ್ದ ಟಾಸ್ಕ್ ಗೆದ್ದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಗಳು ಚುಕ್ಕಿ ಬರೆದಿರುವ ಪತ್ರ ಓದುವ ಅವಕಾಶ ಸಿಕ್ಕಿದೆ. ಮಗಳ ಪತ್ರವನ್ನು ಓದಿ ಚಕ್ರವರ್ತಿ ಅವರು ಭಾವುಕರಾಗಿ ಕಿರುಚಾಡಿದ್ದಾರೆ. ಮನೆಯವರೆಲ್ಲರೂ ಚಕ್ರವರ್ತಿಗೆ ಸಮಾಧಾನ ಹೇಳಿದ್ದಾರೆ. ಕೆಲವರು ಅವರ ಮನೆಯಮಂದಿಯನ್ನು ನೆನೆದು ಕಣ್ಣಿರು ಹಾಕಿದ್ದಾರೆ.

    ಹಾಯ್ ಅಪ್ಪಾ, ನಾನು ನಿನ್ನ ಪ್ರತಿನಿತ್ಯ ಟಿವಿಯಲ್ಲಿ ನೋಡುತ್ತಿದ್ದೇನೆ. ನಿನ್ನ ಮಾತಿನ ಕಿಚ್ಚು ಆ ಮನೆಯಲ್ಲಿ ಮೌನದ ಪತಾಕೆಯನ್ನು ಹಾರಿಸಿದೆ. ಪ್ರತಿ ಪಾತ್ರದ ನಾಟಕ ಬೇರೆ. ಆ ಪಾತ್ರದ ಕಥೆಯನ್ನು ಬದಲಾಯಿಸುವ ಶಕ್ತಿ ನಿನಗೆ ಇದೆ. ನಾನು ನೀನು ಕಳೆದಿರುವ ಸಮಯ ತುಂಬ ಕಡಿಮೆ. ನಾನು ನಿನ್ನ ತುಂಬ ಮಿಸ್ ಮಾಡಿಕೊಳ್ತಿದ್ದೀನಿ. ಹೀಗೆ ಅಪ್ಪನ ಜೊತೆಗೆ ಕಳೆದಿರುವ ಕೆಲವು ಕ್ಷಣಗಳನ್ನು ನೆನೆಪಿಸಿಕೊಂಡು ಬರೆದು ನಿನ್ನ ಮುದ್ದಿನ ಮಗಳು ಚುಕ್ಕಿ ಎಂದು ಚಕ್ರವರ್ತಿ ಚಂದ್ರಚೂಡ್ ಮಗಳು ಬರೆದಿದ್ದಾರೆ. ಚಕ್ರವರ್ತಿಗೆ ಮಗಳಿಂದ ಪತ್ರಬಂದಿರುವುದ ಅತ್ಯಂತ ಸಂತೋಷವನ್ನು ತಂದಿದೆ.

    ಚಕ್ರವರ್ತಿ ಅವರು ಆಗಾಗ ನಾನು ಜೀವನದಲ್ಲಿ ಸೋತಿದ್ದೇನೆ ಎಂದು ತಮ್ಮ ವೈಯಕ್ತಿಕ ವಿಚಾರಗಳ ಕುರಿತಾಗಿ ಹೇಳುತ್ತಿರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಸುಖ, ದುಖಃ ನೋವುಗಳಿರುತ್ತವೆ. ಬಿಗ್‍ಬಾಸ್ ಸಮಯಕ್ಕೆ ತಕ್ಕಂತೆ ಒಂದೊಂದಾಗಿ ಹೊರಗೆ ತೆಗೆದು ಮನಸ್ಸಿನ ಭಾರವನ್ನು ಹಗುರ ಮಾಡುತ್ತಿರುವುದಂತೂ ಖಂಡಿತಾ ಹೌದು.

  • ಕಲ್ಲೇಟಿಗೆ ಡ್ರೈವರ್ ಬಲಿ – ಕುಟುಂಬಕ್ಕೆ 30 ಲಕ್ಷ ಪರಿಹಾರ, ಒಬ್ಬರಿಗೆ ಉದ್ಯೋಗ

    ಕಲ್ಲೇಟಿಗೆ ಡ್ರೈವರ್ ಬಲಿ – ಕುಟುಂಬಕ್ಕೆ 30 ಲಕ್ಷ ಪರಿಹಾರ, ಒಬ್ಬರಿಗೆ ಉದ್ಯೋಗ

    – ಪತ್ರದ ಮೂಲಕ ಸಂತಾಪ ಸೂಚಿಸಿದ ಲಕ್ಷ್ಮಣ ಸವದಿ
    – ಇಂದು ರಾಜ್ಯದಲ್ಲಿ 5,300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ

    ಬೆಂಗಳೂರು: ಕಳೆದ ಕೆಲದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇದೀಗ ಹಿಂಸೆಗೆ ತಿರುಗಿದೆ. ಬಾಗಲಕೋಟೆಯಲ್ಲಿ ಸಾರಿಗೆ ನೌಕರ ಬಸ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದಾಗಿ ಬಸ್ ಚಾಲಕ ಮೃತಪಟ್ಟಿದ್ದರು. ಬಸ್ ಚಾಲಕ ಮೃತ ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರು ಆದ ಲಕ್ಷ್ಮಣ ಸವದಿ ಅವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ.

    ಮೃತಪಟ್ಟ ಸಾರಿಗೆ ಸಂಸ್ಥೆಯ ಬಸ್ ಚಾಲಕರಾದ ಅವಟಿ ಅವರಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಮತ್ತು ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡುವುದಾಗಿ ಪತ್ರದ ಮೂಲಕ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಸಾರ್ವಜನಿಕರ ಹಿತದೃಷ್ಟಿಯಿಂದ ಇಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಷ್ಠಾವಂತ ಚಾಲಕರಾದ ಅವಟಿ ಅವರು ಜಮಖಂಡಿಯ ಸಮೀಪದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ತೀವ್ರ ಹಿಂಸಾಕೃತ್ಯ ಎಸಗಿದ ಪರಿಣಾಮವಾಗಿ ಅವರು ಮೃತಪಟ್ಟಿರುವುದು ತೀವ್ರ ದು:ಖದಾಯಕ ಸಂಗತಿಯಾಗಿದೆ. ಮೃತರ ಆತ್ಮಕ್ಕೆ ನಾನು ಶಾಂತಿ ಕೋರುತ್ತೇನೆ ಮತ್ತು ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳನ್ನು ತಿಳಿಸಬಯಸುತ್ತೇನೆ.

    ಈ ದುರ್ಘಟನೆಯ ವರದಿ ಬಂದ ತಕ್ಷಣವೇ ಮೃತರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಲು ಹಾಗೂ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡಲು ಸೂಚಿಸಿದ್ದೇನೆ.

    ಶಾಂತಿಯುತವಾಗಿ ಮುಷ್ಕರ ನಡೆಸುತ್ತೇವೆ ಎಂದು ಮುಷ್ಕರ ನಿರತರು ಹೇಳುತ್ತಲೇ ತಮ್ಮ ಸಹೋದ್ಯೋಗಿಯ ಜೀವವನ್ನೇ ಬಲಿ ತೆಗೆದುಕೊಂಡಿರುವುದು ತೀವ್ರ ಖಂಡನೀಯವಾಗಿದೆ. ತಾವೂ ಕೆಲಸ ಮಾಡುವುದಿಲ್ಲ, ಇತರ ನಿಷ್ಠಾವಂತರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂಬ ಪ್ರತಿಭಟನಾಕಾರರ ಧೋರಣೆ ಎಷ್ಟರ ಮಟ್ಟಿಗೆ ಸರಿ? ಈ ರೀತಿ ಹಿಂಸಾಕೃತ್ಯ ನಡೆಸುವವರನ್ನು ಸರ್ಕಾರವು ಎಂದಿಗೂ ಕ್ಷಮಿಸುವುದಿಲ್ಲ. ಈ ರೀತಿಯ ದುಷ್ಕೃತ್ಯ ನಡೆಸಿದರೆ ಕರ್ತವ್ಯಕ್ಕೆ ಹಾಜರಾಗುವ ನೌಕರರನ್ನು ವಿಚಲಿತಗೊಳಿಸಬಹುದು ಎಂದು ಕೆಲವರು ಹವಣಿಸಿದ್ದರೆ ಅದು ಯಶಸ್ವಿಯಾಗುವುದಿಲ್ಲ. ಏಕೆಂದರೆ ಈಗಾಗಲೇ ಮುಷ್ಕರ ನಿರತರ ಹಠಮಾರಿ ಧೋರಣೆ ಅನೇಕರಿಗೆ ಅರ್ಥವಾಗಿದೆ.

    5,300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ
    ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ 10 ದಿನಗಳಲ್ಲಿ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಬಸ್ಸುಗಳ ಸೇವೆ ಸಿಗದೆ ಪರಿತಪಿಸುವಂತಾಗಿರುವುದು ದುರ್ದೈವದ ಸಂಗತಿಯಾಗಿದೆ. ಆದರೆ ನಮ್ಮ ಕರೆಗೆ ಓಗುಟ್ಟು ಅನೇಕ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಇಂದು 5,300ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿರುವುದಕ್ಕೆ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ನನ್ನ ಹಾರ್ದಿಕ ಅಭಿನಂದನೆಗಳು.

    ನಾನು ಈಗಾಗಲೇ ತಿಳಿಸಿದಂತೆ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ನಂತರ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಆದರೂ ಸಾರಿಗೆ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವಂಥ ವಿಪರ್ಯಾಸದ ಕ್ರಮಕ್ಕೆ ಕೆಲವರು ಪ್ರಚೋದನೆ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಎದುರಾಗಿದೆ. ಅಷ್ಟೇಅಲ್ಲ ಸಾರಿಗೆ ನಿಗಮಗಳಿಗೆ ಬರಬೇಕಾಗಿದ್ದ ಆದಾಯ ಸ್ಥಗಿತಗೊಂಡು ಈವರೆಗೆ ಸುಮಾರು 187 ಕೋಟಿ ರೂ. ಗಿಂತಲೂ ಹೆಚ್ಚು ಮೊತ್ತದ ಹಾನಿಯಾಗಿದೆ. ಈ ರೀತಿಯ ಬೆಳವಣಿಗೆಗಳಿಂದ ಸಾರಿಗೆ ನಿಗಮಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

    ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಾರ್ವಜನಿಕ ಸೇವೆಗೆ ಮುಂದಾಗಿದ್ದ ಬಸ್ಸುಗಳ ಪೈಕಿ ಕೆಲವು ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟ ಮತ್ತು ಹಿಂಸಾಚಾರಗಳಿಂದಾಗಿ ಈವರೆಗೆ ಒಟ್ಟು 80 ಬಸ್ಸುಗಳು ಜಖಂಗೊಂಡಿದ್ದು, ಸಾರಿಗೆ ನಿಗಮಗಳಿಗೆ ಮತ್ತಷ್ಟು ಆರ್ಥಿಕ ಹಾನಿ ಹೆಚ್ಚುವಂತಾಗಿದೆ. ಇದರಿಂದ ಪರೋಕ್ಷವಾಗಿ ನಮ್ಮ ನಿಗಮಗಳ ನೌಕರರ ಮಿತ್ರರಿಗೇ ನಷ್ಟವಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಈ ರೀತಿಯ ಹಿಂಸಾಚಾರಗಳಿಂದ ಯಾವ ಪುರುಷಾರ್ಥವನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮುಷ್ಕರ ನಿರತರು ಅರಿತುಕೊಳ್ಳಬೇಕು.

    ಶಾಂತಿ ಮತ್ತು ಸಹನೆಯ ಧೋರಣೆಯನ್ನು ನಮ್ಮ ಸರ್ಕಾರ ತಳೆದಿದ್ದು, ಇದನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಮುಂದಾಗಬಾರದು. ಒಂದು ವೇಳೆ ಅಹಿತಕರ ಘಟನೆಯಂಥ ಕೃತ್ಯಗಳಿಗೆ ಮುಂದಾದರೆ ಅವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ನಮ್ಮ ನೌಕರ ಬಾಂಧವರು ಸ್ವಯಂಪ್ರೇರಿತರಾಗಿ ಕೆಲಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ತಡೆಯುವ, ಬೆದರಿಸುವ ಮತ್ತು ಅವರ ಮೇಲೆ ಹಲ್ಲೆ ನಡೆಸುವ ಪ್ರಯತ್ನಗಳು ಹಲವು ಕಡೆ ನಡೆದಿವೆ. ಈ ರೀತಿಯ ದುಂಡಾವರ್ತನೆ ನಡೆಸುವವರು ಯಾರೇ ಆಗಿರಲಿ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.


    ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ
    ಸಾರಿಗೆ ನೌಕರರ ಬೇಡಿಕೆ ಬಗ್ಗೆ ಪ್ರಸಿದ್ಧ ಸಿನಿಮಾ ನಟರಾದ ಶ್ರೀ ಯಶ್ ಅವರೂ ಸೇರಿದಂತೆ ಕೆಲವರು ನನ್ನೊಂದಿಗೆ ಚರ್ಚಿಸಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ನನಗೂ ಸಹಾನುಭೂತಿಯಿದೆ. ಆದರೆ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಮ್ಮ ನೌಕರ ಬಂಧುಗಳು ಕರ್ತವ್ಯಕ್ಕೆ ಹಾಜರಾಗಿ ಮುಷ್ಕರ ಸ್ಥಗಿತಗೊಳಿಸಿದರೆ ಮತ್ತೆ ಮಾತುಕತೆ ಪ್ರಕ್ರಿಯೆ ಮುಂದುವರೆದು ನೌಕರರಿಗೇ ಹೆಚ್ಚಿನ ಅನುಕೂಲವಾಗುತ್ತದೆ. ಆದರೆ ಕೆಲವು ಪಟ್ಟಭದ್ರರ ಚಿತಾವಣೆಯಿಂದ ಇದು ಕೈಗೂಡುತ್ತಿಲ್ಲ.

    ಇನ್ನಾದರೂ ಸರ್ಕಾರದ ಸಕಾರಾತ್ಮಕ ಮನಸ್ಸನ್ನು ಅರ್ಥಮಾಡಿಕೊಂಡು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮತ್ತೊಮ್ಮೆ ನಮ್ಮ ನೌಕರ ವರ್ಗದವರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಎಂದು ಪತ್ರದಲ್ಲಿ ತಿಳಿಸಿದ್ದಾರೆ.

  • ಮನೆಯವರ ಪತ್ರ ಓದಿ ಕಣ್ಣೀರಿಟ್ಟ ದಿವ್ಯಾ ಸುರೇಶ್!

    ಮನೆಯವರ ಪತ್ರ ಓದಿ ಕಣ್ಣೀರಿಟ್ಟ ದಿವ್ಯಾ ಸುರೇಶ್!

    ಹಾಸ್ಟೆಲ್‍ನಲ್ಲಿದ್ದಾಗ ಎಲ್ಲರೂ ಮನೆಯವರ ಸಂಪರ್ಕಕ್ಕೆ ಚಡಪಡಿಸುತ್ತಾರೆ. ಅಂದಹಾಗೇ ಇದೀಗ ಬಿಗ್ ಬಾಸ್ ಮನೆಯಲ್ಲಿ ಕೂಡ ಹಾಸ್ಟೆಲ್ ಸದಸ್ಯರ ಮನೆಯವರು ಪತ್ರಗಳನ್ನು ಕಳುಹಿಸಿದ್ದಾರೆ. ಆದರೆ ಸದಸ್ಯರು ತಮಗೆ ಬಂದಿರುವ ಪತ್ರಗಳನ್ನು ಓದಲು ಬಿಗ್‍ಬಾಸ್ ನೀಡುವ ಟಾಸ್ಕ್‌ನಲ್ಲಿ ಗೆಲ್ಲಬೇಕು. ಆಗ ಮಾತ್ರ ಗೆಲ್ಲುವ ಸದಸ್ಯರಿಗೆ ಮಾತ್ರ ಪತ್ರ ಓದುವ ಅವಕಾಶ ಸಿಗುತ್ತದೆ ಎಂದು ಸೂಚಿಸಿದ್ದರು.

    ಅದರಂತೆ ಬಿಗ್‍ಬಾಸ್ ನಿನ್ನೆ ಗೋಲಿ ಚಮಚ ಟಾಸ್ಕ್ ನೀಡಿದ್ದರು. ಇದರಲ್ಲಿ ಶಮಂತ್ ಹಾಗೂ ದಿವ್ಯಾ ಸುರೇಶ್ ಭಾಗವಹಿಸಿದ್ದರು. ಕೊನೆಯಲ್ಲಿ ಈ ಟಾಸ್ಕ್‍ನಲ್ಲಿ ದಿವ್ಯಾ ಸುರೇಶ್ ಗೆದ್ದು ಪತ್ರವನ್ನು ಪಡೆಯುತ್ತಾರೆ. ನಂತರ ಗಾರ್ಡನ್ ಏರಿಯಾದಲ್ಲಿ ಏಕಾಂಗಿಯಾಗಿ ಕುಳಿತು ಪತ್ರ ಓದಿದ ದಿವ್ಯಾ ಸುರೇಶ್, ಮನೆಯವರನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಬಳಿಕ ಬೆಡ್ ರೂ ಏರಿಯಾಗೆ ಹೋಗಿ ಪತ್ರವನ್ನು ಮತ್ತೊಮ್ಮೆ ಓದಿ ಅಳುತ್ತಾ ಕೊನೆಯಲ್ಲಿ ಲೆಟರ್ ಕಳುಹಿಸಿ ಕೊಟ್ಟಿದ್ದಕ್ಕೆ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದರು.

    ಇದಾದ ನಂತರ ಕಿಚನ್ ಏರಿಯಾ ಬಳಿ ದಿವ್ಯಾ ಸುರೇಶ್ ಹೋದಾಗ ಮನೆಯವರು ಏನಂತಾ ಹೇಳಿದ್ದಾರೆ ಎಂದು ರಘು, ದಿವ್ಯಾ ಉರುಡುಗ, ಶುಭ ಕೇಳಿದಾಗ, ನಮ್ಮ ಮನೆಯವರು ತುಂಬಾ ಖುಷಿಪಟ್ಟಿದ್ದಾರೆ. ನಿನ್ನನ್ನು ಫಿನಾಲೆಯಲ್ಲಿ ನೋಡಲು ಬರುತ್ತೇವೆ ಎಂದಿದ್ದಾರೆ. ಅಲ್ಲದೆ ನಮ್ಮ ಅಮ್ಮ ಡೂಡೂ ಬಗ್ಗೆ ನೀನು ಯೋಚಿಸಬೇಡ. ನೀನು ಎಷ್ಟು ಸ್ಟ್ರಾಂಗ್ ಅಂತ ನಿನಗೆ ಗೊತ್ತು ಯಾಕೆ ಅಳುತ್ತೀಯಾ, ಅಳಬೇಡ. ಗ್ರೂಪ್ ಟಾಸ್ಕ್ ಇದ್ದಾಗ ನೀನು ಯಾವ ಟೀಂನಲ್ಲಿ ಇರುತ್ತೀಯಾ ಆ ಟೀಂನಲ್ಲಿ ತುಂಬಾ ಹೋಪ್ಸ್ ಇರುತ್ತದೆ. ಅದನ್ನು ನೀನು ಹಾಗೆಯೇ ನಿಭಾಯಿಸಿಕೊಂಡು ಹೋಗು. ಚೆನ್ನಾಗಿ ಆಡುತ್ತೀಯಾ ಚೆನ್ನಾಗಿ ಆಡಿಕೊಂಡು ಹೋಗು ಎಂದಿದ್ದಾರೆ.

    ಮನೆಯಲ್ಲಿ ಚಿಕನ್ ಮಾಡಿದಾಗ ಮಿಥುನ್ ದಿವ್ಯಾ ಮಾಡಿದಂತೆ ನೀನು ಮಾಡುವುದೇ ಇಲ್ಲ ಎಂದು ಬೈಯ್ಯುತ್ತಿರುತ್ತಾನೆ. ಚಿಕನ್ ಮಾಡಿದಾಗಲೆಲ್ಲಾ ನಿನ್ನನ್ನು ಜ್ಞಾಪಿಸಿಕೊಳ್ಳುತ್ತಿರುತ್ತೇವೆ. ನೀನು ಮಲ್ಲಿಗೆ ಹೂ ಮುಡಿದುಕೊಂಡಿದ್ದಾಗ ಎಲ್ಲರೂ ತುಂಬಾ ಜಾಸ್ತಿ ನಕ್ಕಿದ್ದೇವೆ. ವೀಕೆಂಡ್‍ನಲ್ಲಿ ನೀನು ಕಲ್ರ್ಸ್ ಮಾಡುತ್ತೀಯಾಲ್ಲ ಯಾವಾಗಲೂ ಕಲ್ರ್ಸ್ ಮಾಡು ತುಂಬಾ ಮುದ್ದಾಗಿ ಕಾಣಿಸುತ್ತೀಯಾ. ಜೊತೆಗೆ ಸಾರಿಯಲ್ಲಿ ನೀನು ತುಂಬಾನೇ ಚೆನ್ನಾಗಿ ಕಾಣಿಸುತ್ತೀಯಾ ಹಾಗಾಗಿ ಸಾರಿ ಹಾಕು ಎಂದು ಬರೆದಿದ್ದಾರೆ ಎನ್ನುತ್ತಾ ಸಂತಸ ವ್ಯಕ್ತಪಡಿಸಿದರು.

  • ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ – ಸಾರಿಗೆ ನೌಕರರ ಪತ್ರಕ್ಕೆ ಯಶ್ ಉತ್ತರ

    ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ – ಸಾರಿಗೆ ನೌಕರರ ಪತ್ರಕ್ಕೆ ಯಶ್ ಉತ್ತರ

    ಬೆಂಗಳೂರು: ತಮ್ಮನ್ನು ಬೆಂಬಲಿಸುವಂತೆ ಸಾರಿಗೆ ನೌಕರರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬರೆದ ಪತ್ರಕ್ಕೆ ಇದೀಗ ನಟ ಉತ್ತರ ನೀಡಿದ್ದಾರೆ.

    ಈ ಸಂಬಂಧ ಪತ್ರ ಬರೆದಿರುವ ಯಶ್, ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿವೆ. ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯವಿರಬಹುದು. ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು. ಓವರ್ ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು ಎಂದು ಹೇಳಿದ್ದಾರೆ.

    ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು, ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿವೆ. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ. ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದರು.

    ಸಮಾಧಾನದ ವಿಷಯ ಅಂದ್ರೆ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಅರಿವು ಮತ್ತು ಕಳಕಳಿ ಇದೆ. ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದಾರೆ. ಇದು ನನಗೆ ಮತ್ತಷ್ಟು ಖುಷಿ ಕೊಟ್ಟಿದೆ ಎಂದು ಭರವಸೆ ನೀಡಿದರು.

    ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ ಎಂದು ಯಶ್ ಅವರು ಸಾರಿಗೆ ನೌಕರರಿಗೆ ಪರಿಸ್ಥಿತಿ ಮನವರಿಕೆ ಮಾಡಿದರು.

    ಪತ್ರ:

    ರವರಿಗೆ,
    ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಪ್ರೀತಿಯ ಸಾರಿಗೆ ಸಂಸ್ಥೆ ನೌಕರರ ಕುಟುಂಬಕ್ಕೆ ನಿಮ್ಮ ಯಶ್ ಮಾಡುವ ನಮಸ್ಕಾರಗಳು. ಇಂದು ನಿಮ್ಮ ಯಶ್ ಏನೇ ಆಗಿರಬಹುದು. ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ.

    ಮನೆಯಲ್ಲಿ ನಾನು ತಡ ಮಾಡಿದ್ರೆ ದಿನಾಲೂ ನನ್ನ ಬಸ್ಸಿನಲ್ಲಿಯೇ ಬರೋ ಪ್ರಯಾಣಿಕರಿಗೆ ಟ್ರೈನ್ ಮಿಸ್ ಆಗುತ್ತೇನೋ.. ಆಫೀಸ್ ಗೆ ಲೇಟ್ ಆಗುತ್ತೇನೋ..ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ. ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ…ಕರ್ತವ್ಯ ನಿಷ್ಠೆ ಮೆರೆವ ಸಾವಿರಾರು ಸಾರಿಗೆ ನೌಕರರುಗಳ ದಿನಚರಿ ಹೀಗೆ ಇರುತ್ತೆ..

    ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿವೆ… ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯ ವಿರಬಹುದು.. ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು.. ಓವರ್ ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು. ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು. ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿವೆ.

    ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಸಮಾಧಾನದ ವಿಷಯ ಅಂದ್ರೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ, ಜೊತೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದು ಮತ್ತಷ್ಟು ಖುಷಿ ಕೊಡು…

    ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ.

    ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ.

    ವಂದನೆಗಳೊಂದಿಗೆ
    ನಿಮ್ಮ ಪ್ರೀತಿಯ
    ಯಶ್

  • ದಿವ್ಯಾಗೆ ಅರವಿಂದ್ ಬರೆದ  ಲೆಟರ್‌ಗಳಲ್ಲೇನಿದೆ ಗೊತ್ತಾ?

    ದಿವ್ಯಾಗೆ ಅರವಿಂದ್ ಬರೆದ ಲೆಟರ್‌ಗಳಲ್ಲೇನಿದೆ ಗೊತ್ತಾ?

    ಬಿಗ್‍ಬಾಸ್ ಬಾಯ್ಸ್ ಹಾಸ್ಟೆಲ್‍ನ ಹುಡುಗರು, ಗರ್ಲ್ ಹಾಸ್ಟೆಲ್ ಹುಡುಗಿಯರಿಗೆ ಪತ್ರಗಳನ್ನು ಬರೆದು ನೀಡಬೇಕು ಹಾಗೂ ಹುಡುಗಿಯರು ಅದನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಟಾಸ್ಕ್ ನೀಡಿದ್ದರು. ಅದರಂತೆ ಬಿಗ್‍ಬಾಸ್ ಮನೆಯ ಎಲ್ಲ ಬಾಯ್ಸ್ ಕದ್ದುಮುಚ್ಚಿ ಹುಡುಗಿಯರಿಗೆಲ್ಲಾ ಲೆಟರ್ ಪಾಸ್ ಮಾಡುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ವಿಶೇಷವೆನಪ್ಪಾ ಅಂದರೆ ಅರವಿಂದ್ ದಿವ್ಯಾ ಉರುಡುಗಗೆ ಮಾತ್ರ ತಮ್ಮ ಎಲ್ಲ ಲೆಟರ್‌ಗಳನ್ನು ಬರೆದಿದ್ದಾರೆ.

    ನಿನ್ನೆ ಅರವಿಂದ್ ಲೆಟರ್ ಬರೆದು, ರಂಗೋಲಿ ಹಾಕುತ್ತಿದ್ದ ದಿವ್ಯಾ ಉರುಡುಗಗೆ ನೀಡುತ್ತಾರೆ. ಬಳಿಕ ಅದನ್ನು ಕ್ಯಾಮೆರಾ ಮುಂದೆ ದಿವ್ಯಾ, ಪ್ರೀತಿಯ ಕೆ, ಮೊದಲನೇ ದಿನ ನನ್ನ ನಿನ್ನ ಚಿಕ್ಕ ಇಂಟ್ರೋಡಕ್ಷನ್‍ನಲ್ಲಿ ನೀನು ಏನೋ ಹೇಳಲು ಬಂದು, ಹೇಳದೇ ಹೋದ ರೀತಿ, ಈಗ ನಾವು ಇರುವ ಕ್ಲೋಸ್‍ನೆಸ್ ಗೆ ತುಂಬಾನೇ ವ್ಯತ್ಯಾಸ ಇದೆ. ಈ ಮನೆಯಲ್ಲಿ ನನ್ನ ಮೊದಲನೆಯ ಸಪೋರ್ಟರ್, ಶುಭ ಹಾರೈಸುವ ಒಳ್ಳೆಯ ಗೆಳತಿ ನೀನು ಪ್ರೀತಿ ಇರಲಿ ಅರವಿಂದ್ ಕೆಪಿ ಎಂದು ಮೊದಲನೇ ಲೆಟರ್ ಓದುತ್ತಾರೆ.

    ಬಳಿಕ ಮತ್ತೊಂದು ಲೆಟರ್‌ನಲ್ಲಿ ಪ್ರೀತಿಯ ಕೆ, ಈ ಬಿಗ್‍ಬಾಸ್ ಮನೆಯ ಪಯಣ ನಿನ್ನ ಗೆಳೆತನದಿಂದ ಇನ್ನಷ್ಟು ಮಜಾ ಹಾಗೂ ಸಂತೋಷಕರವಾಗಿದೆ. ನಿನ್ನ ಪ್ರೆಸೆನ್ಸ್ ಇರುವುದರಿಂದ  ಟಾಸ್ಕ್‌ಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಸಾಗುತ್ತಿದೆ. ನಿನ್ನ ಎಲ್ಲ ವಿಚಾರಗಳು ನನಗೆ ಇಷ್ಟ, ನೀನು ನಗುವಾಗ ತುಂಬಾನೇ ಇಷ್ಟ. ಪ್ರೀತಿ ಇರಲಿ ಅರವಿಂದ್ ಕೆ.ಪಿ. ಎಂದು ಬರೆದಿದ್ದಾರೆ. ಇದನ್ನು ಓದಿದ ದಿವ್ಯಾ ಸೋ ಕ್ಯೂಟ್ ಎಂದು ಪ್ರತಿಕ್ರಿಯಿಸುತ್ತಾರೆ.

    ಇದಾದ ನಂತರ ಗಾರ್ಡನ್ ಏರಿಯಾ ಕ್ಯಾಮೆರಾ ಬಳಿ ದಿವ್ಯಾ ಅರವಿಂದ್ ಬರೆದ ಇನ್ನೊಂದು ಲೆಟರ್ ಓದುತ್ತಾರೆ. ಪ್ರೀತಿಯ ಕೆ ನನ್ನ ಲೋವೆಸ್ಟ್ ಪಾಯಿಂಟ್‍ನಲ್ಲಿ ನನ್ನೊಂದಿಗೆ ನಿಂತು ನಡೆಸುವ ಸಪೋರ್ಟ್ ತುಂಬಾನೇ ಶ್ರೇಷ್ಠವಾದದ್ದು, ಬೇರೆ ಯಾವ ಸಂದರ್ಭದಲ್ಲಿಯೂ ಅಷ್ಟು ಬೇಜಾರು ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್ ನನ್ನ ನಿರ್ಣಯವನ್ನು ತಪ್ಪು ಎಂದು ಭಾವಿಸಿದ್ದರು. ಆಗ ನನಗೆ ನೀನು, ನಿನಗೆ ನಾನು ಸಮಾಧಾನ ಹೇಳಿಕೊಂಡು ಕಳೆದಿರುವ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿ ಇರಲಿ ಅರವಿಂದ್ ಕೆ.ಪಿ ಎಂದು ಓದುತ್ತಾರೆ. ಈ ವೇಳೆ ದಿವ್ಯಾ ಪತ್ರ ಓದುವಾಗ ಮನೆಯ ಇತರ ಸದಸ್ಯರು ಸಹಾಯ ಮಾಡುವ ಮೂಲಕ ಸಾಥ್ ನೀಡಿದ್ದಾರೆ.

    ಮಧ್ಯರಾತ್ರಿ ಲಿವಿಂಗ್ ಏರಿಯಾದಲ್ಲಿ ಕ್ಯಾಮೆರಾ ಮುಂದೆ ಅರವಿಂದ್ ಲೆಟರ್ ಬರೆದುಕೊಡುತ್ತಾರೆ. ಈ ವೇಳೆ ದಿವ್ಯಾ, ಪ್ರೀತಿಯ ಕೆ ನೀನು ನಗುತ್ತೀಯಾ ಹೃದಯದಿಂದ ನನಗೆ ಕೇಳುತ್ತದೆ. ಬಹಳ ದೂರದಿಂದ ನಿನ್ನ ಕಣ್ಣುಗಳು ಹೇಳುತ್ತಿದೆ ಮಾತೊಂದ.. ಬೇಗ ಓದು ಗಾರ್ಡನ್ ಏರಿಯಾಗೆ ವಾರ್ಡನ್ ಬರುವ ಮುನ್ನ. ಪ್ರೀತಿ ಇರಲಿ ಅರವಿಂದ್ ಕೆ ಪಿ ಎಂದು ಹಾಸ್ಯವಾಗಿರುವ ಲೆಟರ್ ಓದಿ ಜೋರಾಗಿ ನಗುತ್ತಾರೆ.

    ಒಟ್ಟಾರೆ ಅರವಿಂದ್ ದಿವ್ಯಾಗೆ ಬರೆದಿರುವ ಇಂಟ್ರೆಸ್ಟಿಂಗ್ ಲೆಟರ್‌ನಲ್ಲಿ ಅವರಿಬ್ಬರ ಇರುವ ಪ್ರೀತಿ ಭಾವನೆಗಳು ಎದ್ದು ಕಾಣಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

  • ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಸಿಡಿ ಯುವತಿ

    ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಸಿಡಿ ಯುವತಿ

    ಬೆಂಗಳೂರು: ಸಿಡಿ ಪ್ರಕರಣ ಕ್ಷಣದಿಂದ ಕ್ಷಣಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಸದ್ಯ ಯುವತಿ ರಕ್ಷಣೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಯುವತಿ ಬರೆದಿರುವ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಪ್ರಕರಣದಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್‍ಐಟಿ ತನಿಖೆ ನಡೆಯಬೇಕು ಎಂದು ಬರೆದಿರುವ ಪತ್ರವನ್ನ ಭಾನುವಾರವೇ ಮೇಲ್ ಮೂಲಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ರವಾನಿಸಲಾಗಿದೆ.

    ಇಂದು ಸಂತ್ರಸ್ತ ಯುವತಿ ವಿಚಾರಣೆ ಹಾಜರೋಗುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ನ್ಯಾಯಧೀಶರ ಸಮಯ ನೋಡಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 20ಕ್ಕೂ ಹೆಚ್ಚು ಹಿರಿಯ ವಕೀಲರ ಟೀಂ ಸಿದ್ಧತೆ ಮಾಡಿಕೊಂಡಿದೆ. ಸಂತ್ರಸ್ತ ಯುವತಿಗೆ ಆತ್ಮಸ್ಥೈರ್ಯ ತುಂಬಲು ಈ ವಕೀಲರ ತಂಡ ತಯಾರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ರಮೇಶ್ ಜಾರಕಿಹೊಳಿ ನಿವಾಸಕ್ಕೆ ಕಬ್ಬನ್ ಪಾರ್ಕ್ ಕ್ರೈಂ ಪೊಲೀಸರು ನೋಟಿಸ್ ನೀಡಿದ್ದು, ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಂಟರ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ.

  • ಪಕ್ಕದ್ಮನೆ ಮಹಿಳೆಯ ಕಿರಿಕಿರಿ ತಪ್ಪಿಸು, ಪಿಯುಸಿ ಪಾಸ್ ಮಾಡು – ದೇವಿಗೆ ಪತ್ರ ಬರೆದ ಭಕ್ತರು

    ಪಕ್ಕದ್ಮನೆ ಮಹಿಳೆಯ ಕಿರಿಕಿರಿ ತಪ್ಪಿಸು, ಪಿಯುಸಿ ಪಾಸ್ ಮಾಡು – ದೇವಿಗೆ ಪತ್ರ ಬರೆದ ಭಕ್ತರು

    – ಹುಂಡಿಯಲ್ಲಿ ಭಕ್ತರ ವಿಚಿತ್ರ ಬೇಡಿಕೆಗಳ ಪತ್ರಗಳು ಪತ್ತೆ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾದೇವಿ ಮಠದ ಹುಂಡಿಯಲ್ಲಿ ಅಮ್ಮಾ ಪಿಯುಸಿ ಪಾಸ್ ಮಾಡಿಸು, ಸರಾಯಿ ಸವಾಲ್ ಕೊಡಿಸು, ಎಂಬ ವಿಚಿತ್ರ ಪ್ರಾರ್ಥನೆಯನ್ನು ಕೋರಿ ದೇವರಿಗೆ ಬರೆದಿರುವ ಪತ್ರಗಳು ಪತ್ತೆಯಾಗಿವೆ.

    ಅಂಬಾದೇವಿಯ ಹುಂಡಿಯಲ್ಲಿ ಭಕ್ತರ ವಿಚಿತ್ರ ಕೊರಿಕೆಗಳ ಪತ್ರಗಳು ಪತ್ತೆಯಾಗಿವೆ. ಐತಿಹಾಸಿಕ ಪ್ರಸಿದ್ಧ ದೇವಾಲಯದ ಹುಂಡಿಯಲ್ಲಿ ಭಕ್ತರು ತಮ್ಮ ಪ್ರಾರ್ಥನೆ ಜೊತೆ ನಾನಾ ವಿಲಕ್ಷಣ ಬೇಡಿಕೆಗಳ ಪತ್ರಗಳನ್ನ ಬರೆದು ಹಾಕಿದ್ದಾರೆ. ಈ ಬಾರಿಯ ಜಾತ್ರೆಯ ಹಿನ್ನೆಲೆ ಸಂಗ್ರಹವಾದ ಕಾಣಿಕೆ ಹಣ ಎಣಿಕೆ ವೇಳೆ ಪತ್ರಗಳು ಪತ್ತೆಯಾಗಿವೆ.

    ಅಮ್ಮಾ ಪಿಯುಸಿ ಪಾಸ್ ಮಾಡಿಸು, ಸರಾಯಿ ಸವಾಲ್ ಕೊಡಿಸು, ಕಿರಿಕಿರಿ ಕೊಡುವವರಿಗೆ ದೊಡ್ಡ ಕಾಯಿಲೆ ಬರುವಂತೆ ಮಾಡು, ಅವರನ್ನ ಯಾರೂ ಮುಟ್ಟದಂತ ದೊಡ್ಡ ರೋಗ ಕೊಡು, ಪಕ್ಕದ ಮನೆಯ ಮಹಿಳೆಯರ ಕಿರಿಕಿರಿ ತಪ್ಪಿಸು, ಮನೆ ಕಟ್ಟೊ ಶಕ್ತಿ ಕೊಡು, ಬ್ಯಾಂಕ್‍ನಲ್ಲಿ ಉದ್ಯೋಗ ಕೊಡಿಸು, ಪ್ರೇಮ ವಿಚಾರಗಳು ಸೇರಿದಂತೆ ಹಲವು ಪತ್ರಗಳು ಪತ್ತೆಯಾಗಿವೆ.

    ಜಾತ್ರೆಯ ಸಮಯದಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಲೆಕ್ಕಾಚಾರ ಹಾಕುವ ಸಮದಲ್ಲಿ ಪತ್ರಗಳು ಸಿಕ್ಕಿವೆ. ಹುಂಡಿಯಲ್ಲಿ ಈ ಬಾರಿ ಒಟ್ಟು 38 ಲಕ್ಷ ರೂಪಾಯಿ ನಗದು ಕಾಣಿಕೆ ಸಂಗ್ರಹವಾಗಿದೆ.

  • ಸಾರಾಯಿ ಚಟದಿಂದ ನನ್ನನ್ನು ಬಿಡಿಸು – ಆಂಜನೇಯನಿಗೆ ಭಕ್ತರ ವಿಚಿತ್ರ ಪತ್ರಗಳು

    ಸಾರಾಯಿ ಚಟದಿಂದ ನನ್ನನ್ನು ಬಿಡಿಸು – ಆಂಜನೇಯನಿಗೆ ಭಕ್ತರ ವಿಚಿತ್ರ ಪತ್ರಗಳು

    ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರು ಆಂಜನೇಯ ದೇಗುಲದಲ್ಲಿ ಹುಂಡಿ ಹಣ ಎಣಿಕೆ ಮಾಡುತ್ತಿದ್ದ ವೇಳೆ ಹುಂಡಿಯಲ್ಲಿ ಹಣದ ಜೊತೆ ಭಕ್ತರು ಆಂಜನೇಯನಿಗೆ ಬರೆದ ಪತ್ರಗಳು ಲಭ್ಯವಾಗಿವೆ.

     

    “ಸಾರಾಯಿ ಕುಡಿಯುತ್ತೇನೆ, ಇಸ್ಪೀಟು, ಜೂಜು ಆಡುತ್ತೇನೆ”. ಈ ದುಶ್ಚಟ ಬಿಡಿಸು ಎಂದು ಭಕ್ತನೊರ್ವ ಪತ್ರ ಬರೆದಿದ್ದಾನೆ. ಜೊತೆಗೆ ಇನ್ನೋರ್ವ ಭಕ್ತ ಬಾಳೇಶ ಎಂಬ ಯುವಕ ನನ್ನ ಶರ್ಟ್ ಮೇಲೆ ‘ಒಂದು ಸಿಂಹ’ ‘ಒಂದು ಸ್ಟಾರ್’ ಬರುವ ಹಾಗೇ (ಐಪಿಎಸ್) ಮಾಡಪ್ಪ ಎಂದು ಬೇಡಿಕೊಂಡಿದ್ದಾನೆ. ಒಂದು ವರ್ಷದಲ್ಲಿ ಸರ್ಕಾರಿ ನೌಕರಿ ಸಿಕ್ಕರೆ ಎರಡನೇ ಸಂಬಳ ನಿನಗೆ ಮೀಸಲು, ಅಲ್ಲದೆ ನಡೆದುಕೊಂಡು ಬಂದು ಹರಕೆ ತೀರುಸುತ್ತೇನೆ ಎಂದು ಪತ್ರ ಬರೆದಿದ್ದಾನೆ. ಇದೇ ರೀತಿ ಅನೇಕ ವಿಚಿತ್ರ ಪತ್ರಗಳು ಆಂಜನೇಯ ಕೃಪೆಗಾಗಿ ಹುಂಡಿಯಲ್ಲಿ ಸಿಕ್ಕಿವೆ.

    ಹುಂಡಿಯಲ್ಲಿ ಹಾಕಿದ ಹಣ ಏಣಿಕೆ ನಡೆಸಿದ ಅಧಿಕಾರಿಗಳಿಗೆ ಈ ವರ್ಷ 25 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಕೊರೊನಾ, ಲಾಕ್‍ಡೌನ್ ಮಧ್ಯೆಯು ಒಳ್ಳೆಯ ದೇಣಿಗೆ ಸಂಗ್ರಹವಾಗಿದೆ. ಉಪವಿಭಾಗಾಧಿಕಾರಿ ಬಲರಾಮ್ ರಾಠೋಡ, ನಿಡಗುಂದಿ ತಹಶಿಲ್ದಾರ್ ಶಿವಲಿಂಗಪ್ರಭು ವಾಲಿ ಸಮ್ಮುಖದಲ್ಲಿ ಹುಂಡಿಯ ಹಣ ಏಣಿಕೆ ಕಾರ್ಯ ನಡೆಸಲಾಗಿದೆ.

  • ಗಂಡ ವಾಪಸ್ ಬರಲೆಂದು ಮಹಿಳೆಯರಿಂದ ದೇವರಿಗೆ ಪತ್ರ

    ಗಂಡ ವಾಪಸ್ ಬರಲೆಂದು ಮಹಿಳೆಯರಿಂದ ದೇವರಿಗೆ ಪತ್ರ

    ಚಾಮರಾಜನಗರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯರಿಬ್ಬರು ದೇವರಿಗೆ ಪತ್ರ ಬರೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.

    ಈ ಪತ್ರಗಳು ನಾರಾಯಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಪತ್ತೆಯಾಗಿದೆ. ಪತ್ರದಲ್ಲಿ ಮಹಿಳೆಯರು ತಮ್ಮನ್ನು ಬಿಟ್ಟು ಹೋಗಿರುವ ಗಂಡಂದಿರು ಮನೆಗೆ ವಾಪಸ್ ಬರಬೇಕು. ನಾವು ಹೇಳಿದಂತೆ ಕೇಳಬೇಕು ಎಂಬ ಒಕ್ಕಣೆಯುಳ್ಳ ಎರಡು ಪತ್ರಗಳನ್ನು ಹುಂಡಿಗೆ ಹಾಕಿದ್ದಾರೆ.

    ಪತ್ರದಲ್ಲಿ, ನನ್ನ ಗಂಡ ಜಗಳವಾಡಿಕೊಂಡು ನನ್ನನ್ನು ಬಿಟ್ಟು ಹೋಗಿದ್ದಾನೆ. ಅವನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡಲು ಕಳುಹಿಸು. ನಾನು ಹೇಳಿದಂತೆ ನನ್ನ ಗಂಡ ಕೇಳಬೇಕು. ಇಲ್ಲದಿದ್ದರೆ ಅದಕ್ಕೆ ನೀನೆ ಹೊಣೆ ಎಂದು ಸಹ ಪತ್ರಗಳಲ್ಲಿ ಬರೆಯಲಾಗಿದೆ.

    ಸಂಸಾರದ ಕಲಹ ನಿವಾರಿಸುವಂತೆ ಪತ್ರದ ಮೂಲಕ ದೇವರ ಮೊರೆ ಹೋಗಿರುವ ಮಹಿಳೆಯರು ಪತ್ರದಲ್ಲಿ ತಮ್ಮ ಹೆಸರು ಮತ್ತು ವಿಳಾಸ ನಮೂದಿಸಿಲ್ಲ. ಸದ್ಯ ಈ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.