Tag: legislators

  • ಸಿದ್ದರಾಮಯ್ಯ ಟಾರ್ಗೆಟನ್ನು ಬಳ್ಳಾರಿ ಶಾಸಕರು ರೀಚ್ ಮಾಡಿದ್ರಾ? ಯಾವ ಶಾಸಕರ ಕ್ಷೇತ್ರದಲ್ಲಿ ಎಷ್ಟು ಲೀಡ್?

    ಸಿದ್ದರಾಮಯ್ಯ ಟಾರ್ಗೆಟನ್ನು ಬಳ್ಳಾರಿ ಶಾಸಕರು ರೀಚ್ ಮಾಡಿದ್ರಾ? ಯಾವ ಶಾಸಕರ ಕ್ಷೇತ್ರದಲ್ಲಿ ಎಷ್ಟು ಲೀಡ್?

    ಬಳ್ಳಾರಿ: ಲೋಕಸಭಾ ಉಪಚುನಾವಣೆಗೂ ಮುನ್ನ ಬಳ್ಳಾರಿ ಶಾಸಕರ ಸಭೆ ನಡೆಸಿ ಚುನಾವಣೆಯಲ್ಲಿ ಪ್ರತಿ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನೀಡಿದ್ದ ಟಾರ್ಗೆಟನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಉಗ್ರಪ್ಪ ಭಾರೀ ಅಂತರದಿಂದ ಗೆದ್ದಿದ್ದಾರೆ.

    ಉಗ್ರಪ್ಪ ಅವರ ಗೆಲುವು ತಮ್ಮ ಸ್ವಕ್ಷೇತ್ರದಲ್ಲಿ ಶ್ರೀರಾಮುಲು ಅವರಿಗೆ ಭಾರೀ ಮುಖಭಂಗಕ್ಕೆ ಕಾರಣವಾಗಿದೆ. ಆದರೆ ಇದರ ಹಿಂದೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೀಡಿದ ಗುರಿಯೇ ಪ್ರಮುಖವಾಗಿ ಕೆಲಸ ಮಾಡಿದೆ ಎನ್ನಲಾಗಿದೆ. ಚುನಾವಣೆ ಮತ ಎಣಿಕೆಯ ಕೊನೆಯ 18 ಸುತ್ತಿನ ಮುಕ್ತಾಯ ಬಳಿಕ ಉಗ್ರಪ್ಪ 6,28,163 ಮತ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾ 3,84,892 ಮತ ಪಡೆದಿದ್ದಾರೆ. ಈ ಮೂಲಕ ಉಗ್ರಪ್ಪ ಅವರು 2,43,271 ಮತಗಳ ಭಾರೀ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಇತ್ತ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ 13,704 ಮತ ಪಡೆದರೆ, 12,403 ಮಂದಿ ನೋಟಾ ಮತ ಚಲಾಯಿಸಿದ್ದಾರೆ.

    ಬಳ್ಳಾರಿಯ 7 ವಿಧಾನ ಸಭಾ ಕ್ಷೇತ್ರಗಳಲ್ಲಿ 10,47,619 ಮತದಾರರು ಇದ್ದು, ಇದರಲ್ಲಿ ಯಾವ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳು ಲಭಿಸಿದೆ ಎಂದು ನೋಡುವುದಾದರೇ, ಸಂಡೂರು ಶಾಸಕ ಟಿ ತುಕರಾಂ ಅವರ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ 85,140 ಮತಗಳು ಹಾಗೂ ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರ ಕ್ಷೇತ್ರದಲ್ಲಿ 84,446 ಮತಗಳನ್ನು ಕಾಂಗ್ರೆಸ್ ಪಡೆದಿದೆ.

    ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಎನ್. ನಾಗೇಂದ್ರ ಅವರ ಕ್ಷೇತ್ರದಲ್ಲಿ 83,918 ಮತ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಕ್ಷೇತ್ರದಲ್ಲಿ 83,364 ಮತ ಲಭಿಸಿದೆ. ವಿಜಯನಗರ (ಹೊಸಪೇಟೆ) ಶಾಸಕ ಅನಂದ್ ಸಿಂಗ್ ಕ್ಷೇತ್ರದಲ್ಲಿ 82,832, ಎನ್ ನಾಗೇಂದ್ರ ಶಾಸಕರಾಗಿರುವ ಬಳ್ಳಾರಿ ನಗರ ಕ್ಷೇತ್ರದಲ್ಲಿ 72,288, ಹೂವಿನಹಡಗಲಿ ಕ್ಷೇತ್ರದ ಶಾಸಕ ಪರಮೇಶ್ವರ್ ನಾಯ್ಕ್ ಕ್ಷೇತ್ರದಲ್ಲಿ 70,598 ಹಾಗೂ ಬಿಜೆಪಿ ಶಾಸಕರಾಗಿರುವ ಎನ್‍ವೈ ಗೋಪಾಲ ಕೃಷ್ಣ ಅವರ ಕೂಡ್ಲಿಗಿ ಕ್ಷೇತ್ರದಲ್ಲಿ 65,557 ಮತ ಲಭಿಸಿದೆ. ಸಿದ್ದರಾಮಯ್ಯ ಅವರು ಕೊಟ್ಟ ಪರೀಕ್ಷೆಯಲ್ಲಿ ಸಂಡೂರು ಶಾಸಕ ತುಕಾರಾಂ ಅತಿ ಹೆಚ್ಚು ಲೀಡ್ ಕೊಡಿಸಿದ್ದು, ಎರಡನೇ ಸ್ಥಾನದಲ್ಲಿ ಕಂಪ್ಲಿ ಶಾಸಕ ಗಣೇಶ್, ಮೂರನೇ ಸ್ಥಾನದಲ್ಲಿ ಬಳ್ಳಾರಿ ಶಾಸಕ ನಾಗೇಂದ್ರ, ನಾಲ್ಕನೇಯ ಸ್ಥಾನದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಐದನೇ ಸ್ಥಾನದಲ್ಲಿ ಹೂವಿನಹಡಗಲಿ ಶಾಸಕ ಪರಮೇಶ್ವರ್ ನಾಯಕ್ ಹಾಗೂ 6ನೇ ಸ್ಥಾನದಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಇದ್ದಾರೆ.

    ಇತ್ತ ಬಿಜೆಪಿಗೆ ವಿಜಯನಗರ (ಹೊಸಪೇಟೆ)ದಲ್ಲಿ 53,372 ಮತ, ಹಗರಿಬೊಮ್ಮನಹಳ್ಳಿಯಲ್ಲಿ 53,102 ಮತ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ 50,663 ಮತ, ಕಂಪ್ಲಿಯಲ್ಲಿ 50,018, ಬಳ್ಳಾರಿ ನಗರದಲ್ಲಿ 48,565, ಸಂಡೂರಿನಲ್ಲಿ 46,465, ಕೂಡ್ಲಿಗಿ ಕ್ಷೇತ್ರದಲ್ಲಿ 43,528 ಮತ ಹಾಗೂ ಹೂವಿನಹಡಗಲಿ 39,179 ಮತಗಳನ್ನು ಬಿಜೆಪಿ ಪಡೆದಿದೆ.

    ಉಪಚುನಾವಣೆಯ ಬಳಿಕ ಸಮ್ಮಿಶ್ರದ ಸಂಪುಟ ವಿಸ್ತರಣೆಗೆ ಮಾಡುತ್ತೇವೆ ಎಂದು ಕಾಂಗ್ರೆಸ್ ತಮ್ಮ ಶಾಸಕರಿಗೆ ಸ್ಪಷ್ಟನೆ ನೀಡಿತ್ತು. ಈ ವೇಳೆ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಎಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿ 30 ಸಾವಿರ ಮತಗಳ ಲೀಡ್ ತಂದುಕೊಡಬೇಕು. ಸಂಪುಟ ವಿಸ್ತರಣೆ ವೇಳೆ ಹೆಚ್ಚು ಲೀಡ್ ತಂದುಕೊಡುವ ಶಾಸಕರನ್ನು ಪರಿಗಣಿಸುತ್ತೇವೆ ಎಂದು ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಆಶ್ವಾಸನೆ ನೀಡಿದ್ದರು. ಅಲ್ಲದೇ ಯಾವ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬರುತ್ತದೆ ಅಂತಹ ಕ್ಷೇತ್ರದ ಶಾಸಕರನ್ನು ಪರಿಗಣಿಸುವುದಿಲ್ಲ ನೇರವಾಗಿಯೇ ಹೇಳಿದ್ದರು. ಸದ್ಯ ಸಿದ್ದರಾಮಯ್ಯ ನೀಡಿದ ಟಾರ್ಗೆಟನ್ನು ಎಲ್ಲಾ ಶಾಸಕರು ಪೂರ್ಣಗೊಳಿಸಿದ್ದು ಯಾರಿಗೆ ಸಚಿವ ಸ್ಥಾನ ಲಭಿಸಲಿದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.

    2014ರ ಚುನಾವಣೆಯಲ್ಲಿ ಶ್ರೀರಾಮುಲು 85,144 ಮತಗಳ ಅಂತರದಿಂದ ಗೆದ್ದಿದ್ದರು. ಶ್ರೀರಾಮುಲು ಅವರಿಗೆ 5,34,406 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ಸಿನ ಎನ್‍ವೈ ಹನುಮಂತಪ್ಪ ಅವರಿಗೆ 4,49,262 ಮತಗಳು ಬಿದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತದ ಮಹಿಳೆಯರನ್ನು ಬಿಜೆಪಿ ಶಾಸಕರಿಂದ ರಕ್ಷಿಸಬೇಕಿದೆ: ರಾಹುಲ್ ಗಾಂಧಿ

    ಭಾರತದ ಮಹಿಳೆಯರನ್ನು ಬಿಜೆಪಿ ಶಾಸಕರಿಂದ ರಕ್ಷಿಸಬೇಕಿದೆ: ರಾಹುಲ್ ಗಾಂಧಿ

    ನವದೆಹಲಿ: ಭಾರತ ಮಾತೆಯ ಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ರಕ್ಷಿಸಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ನವ ದೆಹಲಿಯಲ್ಲಿ ಕಾಂಗ್ರೆಸ್ ಮಹಿಳಾ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ರಾಹುಲ್ ಗಾಂಧಿ ಎನ್‍ಡಿಎ ಸರ್ಕಾರದ ವಾಗ್ದಾಳಿ ನಡೆಸಿದರು. ಸದ್ಯ ಬಿಜೆಪಿ ಶಾಸಕರಿಂದಲೇ ನಾವು ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯನ್ನು ಆರಂಭಿಸಬೇಕಿದೆ. ಇದೂವರೆಗೂ ಈ ಯೋಜನೆಗೆ ಓರ್ವ ರಾಯಭಾರಿಯನ್ನು ನೇಮಿಸಲು ಕೇಂದ್ರ ವಿಫಲವಾಗಿದ್ದು, ಒಂದು ಜಿಲ್ಲೆಗೆ ಕೇವಲ 40 ಲಕ್ಷ ರೂ. ಅನುದಾನವನ್ನು ಮಾತ್ರ ಮೀಸಲಿರಿಸಿದೆ ಎಂದು ದೂರಿದರು.

    ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಬಿಲ್ ಜಾರಿಗೆ ತರಲು ಸಂಪೂರ್ಣ ಬೆಂಬಲ ನೀಡುತ್ತಿದ್ದರೂ ಸರ್ಕಾರ ಮಹಿಳೆ ಸಮಾನತೆಯ ಕಾಯ್ದೆಯನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ. ದೇಶವನ್ನು ಕೇವಲ ಪುರುಷರೇ ಮುನ್ನಡೆಸಬೇಕು ಎಂಬುವುದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ದಾಂತವಾಗಿದೆ ಎಂದು ಆರೋಪಿಸಿದರು.

    ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿ ಬಂತು. ಎಲ್ಲ ವಿಚಾರಗಳ ಬಗ್ಗೆ ಮಾತನಾಡುವ ಪ್ರಧಾನಿಗಳು ಮಾತ್ರ ಈ ವಿಷಯದಲ್ಲಿ ಮೌನವಾಗಿದ್ದಾರೆ. ಸದ್ಯ ಭಾರತದಲ್ಲಿಯ ಮಹಿಳೆಯರಲ್ಲಿ ಅಭದ್ರತೆ ಕಾಡುತ್ತಿದೆ. ಈ ಹಿಂದೆ 70 ವರ್ಷದಲ್ಲಿ ಎಂದೂ ಈ ರೀತಿಯ ಭಯ ಮೂಡಿರಲಿಲ್ಲ. ಆದ್ರೆ ಎನ್‍ಡಿಎ ಸರ್ಕಾರದ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ದೇಶದ ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ತಮ್ಮ ನಾಯಕರೇ ಹೆಚ್ಚೆಂದು ಬಾರಿನಲ್ಲಿ ಗಲಾಟೆ- ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಅಂತ್ಯ!

    ತಮ್ಮ ನಾಯಕರೇ ಹೆಚ್ಚೆಂದು ಬಾರಿನಲ್ಲಿ ಗಲಾಟೆ- ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಅಂತ್ಯ!

    ಮಂಡ್ಯ: ತಮ್ಮ ನಾಯಕರೇ ಗ್ರೇಟ್ ಎಂದು ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ನಡೆದ ಗಲಾಟೆ ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಕೊನೆಯಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಗೊಬ್ಬರಗಾಲ ಗ್ರಾಮದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಬೆಂಬಲಿಗ 28 ವರ್ಷದ ನಾಗೇಂದ್ರ ಆತ್ಮಹತ್ಯೆಗೆ ಶರಣಾದ ಯುವಕ. ಭಾನುವಾರ ರಾತ್ರಿ ಅರಕೆರೆ ಗ್ರಾಮದ ಬಾರಿನಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಬೆಂಬಲಿಗ ಯುವಕರ ಗುಂಪಿನ ನಡುವೆ ತಮ್ಮ ನಾಯಕರೇ ಗ್ರೇಟ್ ಎಂದು ಗಲಾಟೆಯಾಗಿದೆ. ಈ ವೇಳೆ ಶಾಸಕರ ಬೆಂಬಲಿಗರು ನಾಗೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ನಾಗೇಂದ್ರನ ಸ್ವಗ್ರಾಮ ಗೊಬ್ಬರಗಾಲ ಗ್ರಾಮಕ್ಕೆ ತೆರಳಿ ಮತ್ತೆ ಆತನ ಎದುರು ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದ ಮಾಜಿ ಶಾಸಕ ಬೆಂಬಲಿಗ ಗ್ರಾಮದ ಕೆರೆಯ ಬಳಿ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬಿಜೆಪಿ 20 ಶಾಸಕರು ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ: ಈಶ್ವರ್ ಖಂಡ್ರೆ

    ಬಿಜೆಪಿ 20 ಶಾಸಕರು ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ: ಈಶ್ವರ್ ಖಂಡ್ರೆ

    ಬೀದರ್: ಬಿಜೆಪಿಯ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. ಕೆಪಿಸಿಸಿ ಕಾರ್ಯಾದ್ಯಕ್ಷರಾದ ನಂತರ ಮೊದಲ ಬಾರಿಗೆ ಬೀದರ್ ಜಿಲ್ಲೆಗೆ ಆಗಮಿಸಿದ ವೇಳೆ ಈಶ್ವರ್ ಖಂಡ್ರೆ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕುರಿ ನೀಡಿ ಅದ್ಧೂರಿ ಸ್ವಾಗತ ನೀಡಲಾಯಿತು.

    ನಮ್ಮ ಯಾವ ಶಾಸಕರು ಕಾಂಗ್ರೆಸ್ ತೊರೆಯುದಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಭದ್ರವಾಗಿದ್ದು, ನಮ್ಮ ಶಾಸಕರು ಪಕ್ಷ ತೊರೆಯವ ಪ್ರಶ್ನೆಯೇ ಇಲ್ಲ. ಈಗಾಗಲೇ ಬಿಜೆಪಿ ಶಾಸಕರು ನಮ್ಮನ್ನು ಸಂಪರ್ಕಿಸುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

    ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಈಶ್ವರ್ ಖಂಡ್ರೆ ರಾಜ್ಯ ಪ್ರವಾಸದಲ್ಲಿದ್ದಾರೆ. ಹುಬ್ಬಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ 2018ರ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಸರಿಯಾಗಿ ಮನೆ ಮನೆಗೆ ತಲುಪಿಸಲು ಆಗಲಿಲ್ಲ. ಹೀಗಾಗಿ ನಾವು ಸೋಲಬೇಕಾಯಿತು. ಪಕ್ಷವನ್ನು ಬೇರು ಮಟ್ಟದಿಂದ ಭದ್ರಗೊಳಿಸಲು ಪ್ರವಾಸ ಕೈಗೊಂಡಿದ್ದೇನೆ ಎಂದು ಈಶ್ವರ್ ಖಂಡ್ರೆ ಹೇಳಿದ್ದರು.

    ಈ ಮೊದಲು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಕೆಲ ಶಾಸಕರು ಮತ್ತು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಎಲ್ಲರೂ ಕಾಂಗ್ರೆಸ್ ಸೇರುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಪಕ್ಷದ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರು.

  • ಸೋತ ಬಳಿಕ ಕಚೇರಿ ಖಾಲಿ ಮಾಡೋವಾಗ ಟಾಯ್ಲೆಟ್‍ನ್ನು ಕಿತ್ಕೊಂಡು ಹೋದ ಮಾಜಿ ಶಾಸಕ

    ಸೋತ ಬಳಿಕ ಕಚೇರಿ ಖಾಲಿ ಮಾಡೋವಾಗ ಟಾಯ್ಲೆಟ್‍ನ್ನು ಕಿತ್ಕೊಂಡು ಹೋದ ಮಾಜಿ ಶಾಸಕ

    ಕಾರವಾರ: ಮಾಜಿ ಶಾಸಕ ತಮ್ಮ ಕಚೇರಿಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಟಾಯ್ಲೆಟ್ ಸಮೇತ ಖಾಲಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕಿ ರೂಪಾಲಿ ನಾಯ್ಕರಿಗೆ ಮಾತ್ರ ತಮ್ಮ ಕಚೇರಿಯನ್ನ ಪಡೆಯುವುದು ಇದೀಗ ಹರಸಾಹಸದ ಕೆಲಸವಾಗಿದೆ. ಈ ಹಿಂದೆ ಕಾರವಾರ ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕರಿಗೆ ಕಚೇರಿಯನ್ನ ತೆರೆಯಲಾಗಿತ್ತು. ಕಳೆದ ಬಾರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸತೀಶ್ ಸೈಲ್‍ನ್ನ ಕಟ್ಟಡವನ್ನು ಬಳಸಿಕೊಂಡಿದ್ದು ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕಚೇರಿಯನ್ನ ತೆರವು ಮಾಡಿದ್ದರು. ಇನ್ನು ತೆರವು ಮಾಡುವ ಸಂದರ್ಭದಲ್ಲಿ ಕೇವಲ ಪಿಠೋಪಕರಣವನ್ನು ಮಾತ್ರ ತೆಗೆದು ಕೊಂಡುಹೋಗದೇ ಶೌಚಾಲಯಕ್ಕೆ ಅಳವಡಿಸಿದ್ದ ಪೈಪ್, ಟಾಯ್ಲೆಟ್, ಕಚೇರಿಗೆ ಬಳಸುತ್ತಿದ್ದ ಬಲ್ಪಗಳು ಸೇರಿದಂತೆ ಹಲವು ವಸ್ತುಗಳನ್ನ ಮಾಜಿ ಶಾಸಕರ ಕಡೆಯವರು ಕಿತ್ತುಕೊಂಡು ತೆರಳಿದ್ದಾರೆ.

    ಶಾಸಕರಾಗಿ ಆಯ್ಕೆಯಾದ ನಂತರ ಸರ್ಕಾರ ಆಯಾ ಕ್ಷೇತ್ರದಲ್ಲಿ ಶಾಸಕರಿಗೆ ಕಚೇರಿಗೆ ಅವಕಾಶವನ್ನ ಮಾಡಿಕೊಡುತ್ತದೆ. ಜನಸಾಮಾನ್ಯರಿಗೆ ಶಾಸಕರು ಕಚೇರಿಯಲ್ಲಿ ಸಿಗಲು, ಸರ್ಕಾರದ ಯೋಜನೆಗಳನ್ನ ಜನರಿಗೆ ತಿಳಿಸಲು ಸೇರಿದಂತೆ ಹತ್ತಾರು ಉದ್ದೇಶಕ್ಕೆ ಸರ್ಕಾರವೇ ಕಚೇರಿಗೆ ಅವಕಾಶವನ್ನ ಮಾಡಿಕೊಡಲಾಗುತ್ತದೆ. ಇನ್ನು ಆಯಾ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಆವರಣದಲ್ಲಿ ಕಚೇರಿಯನ್ನ ತೆರೆಯಲು ಅವಕಾಶವಿದ್ದು, ಸ್ಥಳೀಯ ಸಂಸ್ಥೆಯವರೇ ಶಾಸಕರ ಕಚೇರಿಗೆ ಸ್ಥಳಾವಕಾಶವನ್ನ ಕೊಡಬೇಕಾಗಿದೆ. ರಾಜ್ಯದ ಬಹುತೇಕ ಶಾಸಕರು ತಮ್ಮ ತಮ್ಮ ಕಚೇರಿಯನ್ನ ಪ್ರಾರಂಭಿಸಿದ್ದಾರೆ.

    ಈ ಹಿಂದೆ ಇದ್ದ ಶಾಸಕರು ಕಚೇರಿ ಖಾಲಿ ಮಾಡುವ ನೆಪದಲ್ಲಿ ಕಚೇರಿಯಲ್ಲಿನ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೋದರೆ, ಇತ್ತ ಕಚೇರಿಯಲ್ಲಿನ ಅವ್ಯವಸ್ಥೆ ಬಹಿರಂಗವಾಗುತ್ತಿದ್ದಂತೆ ತಾಲೂಕು ಪಂಚಾಯತ್ ಸದಸ್ಯರುಗಳು ಕಚೇರಿ ಕೊಡುವ ಬಗ್ಗೆಯೇ ವಿರೋಧಕ್ಕೆ ಇಳಿದಿದ್ದು, ಬಾಡಿಗೆ ನೀಡುವಂತೆ ಠರಾವು ಮಾಡಿದ್ದಾರೆ. ಈ ಬಗ್ಗೆ ಕೆಲವರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರು ತಮ್ಮ ಸಭೆಯಲ್ಲಿ ಶಾಸಕರಿಗೆ ಯಾಕೆ ಕಚೇರಿ ಕೊಡಬೇಕು. ತಮ್ಮ ಕಚೇರಿಯನ್ನ ತಾಲೂಕು ಪಂಚಾಯತ್ ಆವರಣದಲ್ಲಿ ಪಡೆದರೆ ಅದಕ್ಕೆ ಶಾಸಕರು ಬಾಡಿಗೆಯನ್ನ ಕಟ್ಟಲಿ ಎಂದು ಸದಸ್ಯರು ಠರಾವನ್ನ ಸಹ ಹೊರಡಿಸಿದ್ದಾರೆ. ಇವೆಲ್ಲಾ ಘಟನೆಯಿಂದ ಬೇಸತ್ತಿರುವ ಶಾಸಕಿ ಈ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಶಾಸಕರ ಕಛೇರಿ ಅವ್ಯವಸ್ಥೆಯಿಂದ ಕೂಡಿರುವುದರಿಂದ ಶಾಸಕಿ ರೂಪಾಲಿ ನಾಯ್ಕ ಬಿಜೆಪಿ ಕಚೇರಿಯಲ್ಲಿಯೇ ಸದ್ಯ ತಮ್ಮ ಕಚೇರಿಯನ್ನ ತೆರೆದಿದ್ದಾರೆ. ಈ ಎಲ್ಲ ಬೆಳವಣಿಗೆಯಾದ ನಂತರ ಕಚೇರಿಯನ್ನ ಸರಿಪಡಿಸುವ ಕಾರ್ಯ ಮಾಡಿದ್ದಾದರೂ ಇನ್ನೂ ಕಚೇರಿಯನ್ನ ಶಾಸಕರಿಗೆ ಬಿಟ್ಟುಕೊಟ್ಟಿಲ್ಲ. ಇವರನ್ನು ಭೇಟಿಯಾಗಬೇಕಾದ ಸಾರ್ವಜನಿಕರು ಬಿಜೆಪಿ ಕಚೇರಿಗೆ ಬಂದು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಾಲೂಕು ಪಂಚಾಯಿತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರ ಬಳಿ ಕೇಳಿದರೆ ಹಿಂದಿನ ಶಾಸಕರು ತಮ್ಮ ಸ್ವಂತ ಖರ್ಚಿನಿಂದ ತಂದ ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಪೈಪ್ ಗಳನ್ನ, ಟಾಯ್ಲೆಟ್, ವಿದ್ಯುತ್ ಬಲ್ಪಗಳನ್ನು ಕೀಳುವಾಗ ಅವರಿಗೆ ಕರೆಮಾಡಿ ತಿಳಿಸಿದ್ದು, ಆಗ ಕೆಲಸಕ್ಕೆ ಬಂದವರು ಈ ರೀತಿ ಮಾಡಿದ್ದಾರೆ. ಸದ್ಯ ಕಚೇರಿಯನ್ನ ಶಾಸಕರಿಗೆ ನೀಡಿ ಸರಿಪಡಿಸಿಕೊಳ್ಳಲು ತಿಳಿಸಿದ್ದು, ಶಾಸಕರಿಗೆ ಕಚೇರಿ ನೀಡುವಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್ ಕುಮಾರ್ ಹೇಳಿದ್ದಾರೆ.

  • ಸಭೆ ವೇಳೆ ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಬ್ಯುಸಿಯಾದ ಅಧಿಕಾರಿ

    ಸಭೆ ವೇಳೆ ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಬ್ಯುಸಿಯಾದ ಅಧಿಕಾರಿ

    ಚಿತ್ರದುರ್ಗ: ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಯು ದುರ್ವತನೆ ತೋರಿದ್ದು, ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಅಧಿಕಾರಿ ಬ್ಯುಸಿಯಾಗಿದ್ದ ಘಟನೆ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಿಗಧಿ ಮಾಡಲಾಗಿತ್ತು. ಆದರೆ ಈ ವೇಳೆ ಚಿತ್ರದುರ್ಗ ಜಿಲ್ಲಾ ಪಶು ಸಂಗೋಪನಾ ಇಲಾಖೆ ಅಧಿಕಾರಿ ರಾಜಪ್ಪ ಈ ರೀತಿ ದುರ್ವತನೆ ತೋರಿದ್ದಾರೆ. ಸಭೆಯಲ್ಲಿ ಅಧಿಕಾರಿಗಳು ಅಭಿವೃದ್ಧಿ ಪರಿಶೀಲನೆಯಲ್ಲಿ ತೊಡಗಿದ್ದರೆ ರಾಜಪ್ಪ ಅವರು ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಬ್ಯುಸಿಯಾಗಿದ್ದರು.

    ಶಾಸಕ ಗೈರು: ಪ್ರಮುಖವಾಗಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಪರಿಶೀಲನೆ ಸಭೆಯನ್ನು ಸಂಸದ ಬಿ.ಎನ್.ಚಂದ್ರಪ್ಪ ನೇತೃತ್ವದಲ್ಲಿ ಕರೆಯಲಾಗಿತ್ತು. ಈ ಸಭೆ ಜಿಲ್ಲೆಯ ಎಲ್ಲಾ ಶಾಸಕರು ಆಗಮಿಸುವುದು ಕಡ್ಡಾಯವಾಗಿದ್ದರು. ಈ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮೊಳಕಲ್ಮೂರು ಶಾಸಕ ಶ್ರೀರಾಮುಲು, ಹೊಸದುರ್ಗ ಶಾಸಕ ಶೇಖರ್ ಸಭೆಗೆ ಗೈರು ಹಾಜರಾಗಿದ್ದರು. ಅಲ್ಲದೇ ಎಂಎಲ್‍ಸಿ ಗಳಾದ ರಘು ಆಚಾರ್, ವೈ ಎ ನಾರಾಯಣ ಸ್ವಾಮಿ ಸಭೆ ಹಾಜರಾಗದೇ ನಿರ್ಲಕ್ಷ್ಯ ಮೆರೆದಿದ್ದಾರೆ.

    https://www.youtube.com/watch?v=vZX67yMNpv4

  • ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಿದ್ದರಾಮಯ್ಯ ತವರೂರಿನಲ್ಲಿ ಕೈ-ತೆನೆ ಬೆಂಬಲಿಗರ ನಡುವೆ ಜಟಾಪಟಿ

    ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಿದ್ದರಾಮಯ್ಯ ತವರೂರಿನಲ್ಲಿ ಕೈ-ತೆನೆ ಬೆಂಬಲಿಗರ ನಡುವೆ ಜಟಾಪಟಿ

    ಮೈಸೂರು: ಜೆಡಿಎಸ್ – ಕಾಂಗ್ರೆಸ್ ನಡುವೆ ದೋಸ್ತಿ ಮೂಡಿ ಸರಕಾರವೇನೋ ರಚನೆ ಆಗಿದೆ. ಆದರೆ ತಳ ಮಟ್ಟದ ಸಂಘಟನೆಯಲ್ಲಿ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ದೋಸ್ತಿಯ ಮಾತಿರಲಿ ಕನಿಷ್ಟ ಪಕ್ಷದ ಸೌಹಾರ್ದತೆಯೂ ಮೂಡಿಲ್ಲ ಎಂಬುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಸಾಕ್ಷಿ ಸಿಕ್ಕಿದೆ.

    ಪಿರಿಯಾಪಟ್ಟಣದ ಬೆಳ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಮಹದೇವು ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ಕೆ. ವೆಂಕಟೇಶ್ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ರಸ್ತೆಯ ಶಂಕು ಸ್ಥಾಪನೆ ವಿಚಾರವಾಗಿ ಈ ಜಟಾಜಟಿ ನಡೆದಿದೆ.

    ಶಂಕುಸ್ಥಾಪನೆಯಾಗಿದ್ದ ಕಾಮಗಾರಿಗೆ ಶಾಸಕ ಮಹದೇವು ಮತ್ತೆ ಚಾಲನೆ ಮಾಡಲು ಮುಂದಾಗಿದ್ದಾರೆ ಎಂದು ಸಮಾರಂಭಕ್ಕೆ ಮಾಜಿ ಶಾಸಕ ವೆಂಕಟೇಶ್ ಬೆಂಬಲಿಗರು ಅಡ್ಡಿ ಪಡಿಸಿದರು. ಮಾಜಿ ಶಾಸಕರ ಬೆಂಬಲಿಗರು ಶಾಸಕ ಮಹದೇವ್ ಗೆ ತೀವ್ರವಾಗಿ ತರಾಟೆ ತೆಗೆದು ಕೊಂಡು ಗದ್ದಲ ನಡೆಸಿದ್ದಾರೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ಕೂಡ ನಡೆದಿದ್ದು, ಮಾಜಿ ಶಾಸಕರ ಬೆಂಬಲಿಗರ ಮನವೊಲಿಸಲು ಶಾಸಕರ ಕೈಯಲ್ಲಿ ಆಗದೆ ಕೆಲ ಕಾಲ ಮೌನವಾಗಿಯೇ ಕುಳಿತು ಬಿಟ್ಟದ್ದಾರೆ.

    ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=lNxXuLGhwcU

  • ಮಂಗಳವಾರ ರಾತ್ರಿಯಿಂದ ಹೋಟೆಲ್ ಕಡೆ ತಲೆ ಹಾಕದ ಡಿಕೆ ಬ್ರದರ್ಸ್!

    ಮಂಗಳವಾರ ರಾತ್ರಿಯಿಂದ ಹೋಟೆಲ್ ಕಡೆ ತಲೆ ಹಾಕದ ಡಿಕೆ ಬ್ರದರ್ಸ್!

    ಬೆಂಗಳೂರು: ಹೊಸ ಸರ್ಕಾರದ ರಚನೆ ಮುನ್ನವೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಸಮ್ಮಿಶ್ರ ಸರ್ಕಾರದ ಡಿಸಿಎಂ ಹುದ್ದೆ ಸಿಗದ ಕಾರಣ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಹೈಕಮಾಂಡ್ ವಿರುದ್ಧ ಸಮಾಧಾನಗೊಂಡಿದ್ದಾರೆ.

    ಆಪರೇಷನ್ ಕಮಲ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿಟ್ಟು ರಕ್ಷಿಸಿದ್ದ ಡಿಕೆ ಶಿವಕುಮಾರ್, ಪಕ್ಷ ಸಂಕಷ್ಟದಲ್ಲಿದ್ದ ಹಲವು ಸಂದರ್ಭದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದರು. ಇಷ್ಟು ದಿನ ಜವಾಬ್ದಾರಿ ಹೊತ್ತಿದ್ದ ಡಿಕೆ ಬ್ರದರ್ಸ್ ಸದ್ಯ ಶಾಸಕರು ತಂಗಿದ್ದ ಹೋಟೆಲ್ ಕಡೆ ಮುಖ ಮಾಡದೇ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

    ನಿನ್ನೆ ರಾತ್ರಿಯಿಂದ ಡಿಕೆ ಬ್ರದರ್ಸ್ ಹೋಟೆಲ್ ನತ್ತ ಮುಖ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿ ಎಚ್‍ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆಗಮಿಸುತ್ತಿದ್ದರೂ ಶಾಸಕರು ತಂಗಿರುವ ಹಿಲ್ಟನ್ ಹೊಟೇಲ್ ನಲ್ಲಿ ಇಬ್ಬರು ಕಾಣಿಸಿಕೊಂಡಿಲ್ಲ.

    ಸರ್ಕಾರ ರಚನೆ ವೇಳೆ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದರು. ಆದರೆ ಹೈಕಮಾಂಡ್ ಡಿಸಿಎಂ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ನೇಮಕ ಮಾಡಿ ಅಂತಿಮಗೊಳಿಸಿದ್ದರಿಂದ ಯಾವ ಜವಾಬ್ದಾರಿ ಸಹ ಬೇಡ ಎಂದು ಶಾಸಕರೊಂದಿಗೆ ಹಾಗೂ ಹಿರಿಯ ಮುಖಂಡರೊಂದಿಗೆ ರೇಗಾಡಿ ಹೊಟೇಲ್ ನಿಂದ ತೆರಳಿದ್ದರು ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಅರಂಭದಿಂದಲೂ ಆಪರೇಷನ್ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ಸನ್ನು ರಕ್ಷಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದರು. ಬಿಜೆಪಿ ಕೈ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಸರ್ಕಾರ ವಾಪಸ್ ಪಡೆದ ಬಳಿಕ ಇಲ್ಲೂ ಶಾಸಕರನ್ನು ಸೆಳೆಯಬಹುದು ಎನ್ನುವ ಭೀತಿಯಿಂದ ಎಲ್ಲರನ್ನೂ ಹೈದರಾಬಾದ್‍ಗೆ ಡಿಕೆಶಿ ಕರೆದುಕೊಂಡು ಹೋಗಿದ್ದರು.

    ಈ ನಡುವೆ ಕರ್ನಾಟಕ ರಾಜಕೀಯದಲ್ಲಿ ನಡೆದ ಸಂಪೂರ್ಣ ಬೆಳವಣಿಗೆಯಲ್ಲೂ ಡಿಕೆಶಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಅಲ್ಲದೇ ಬಿಎಸ್‍ವೈ ಪ್ರಮಾಣ ಸ್ವೀಕರ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಹುಡುಕಾಟ ನಡೆದಿತ್ತು. ಹೋಟೆಲ್ ನಲ್ಲಿ ಪತ್ತೆಯಾದ ವಿಚಾರ ತಿಳಿದ ಡಿಕೆಶಿ ಅಂದು ಸುಮಾರು ಒಂದು ಗಂಟೆ ವಿಧಾನಸೌಧದ ಹೊರಗಡೆಯೇ ಶಾಸಕರಿಗೆ ಕಾದಿದ್ದರು. ಪ್ರತಾಪ್ ಗೌಡ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅವರ ಶರ್ಟ್ ಕಿಸೆಗೆ ಡಿಕೆಶಿ ವಿಪ್ ಹಾಕಿದ್ದರು. ಬಳ್ಳಾರಿಯ ವಿಜಯನಗರ ಶಾಸಕರ ಆನಂದ್ ಸಿಂಗ್ ಅವರನ್ನು ಡಿಕೆಶಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು.

    ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಹೈ ಕಮಾಂಡ್ ಗೆ ಮೆಚ್ಚುಗೆ ಆಗಿತ್ತು. ಹೀಗಾಗಿ ಡಿಕೆಶಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಿಂದ ಕೇಳಿಬಂದಿತ್ತು.