Tag: legislators

  • ಶಾಸಕರಿಂದ ರೆಸಾರ್ಟಿನಲ್ಲಿ ಮೋಜಿನಾಟ – ಇತ್ತ ನೀರಿಗಾಗಿ ಮತದಾರರು ಹೋರಾಟ

    ಶಾಸಕರಿಂದ ರೆಸಾರ್ಟಿನಲ್ಲಿ ಮೋಜಿನಾಟ – ಇತ್ತ ನೀರಿಗಾಗಿ ಮತದಾರರು ಹೋರಾಟ

    ಬಳ್ಳಾರಿ: ರಾಜ್ಯದ ಜನ ಪ್ರತಿನಿಧಿಗಳು ರೆಸಾರ್ಟ್ ಗಳಲ್ಲಿ ಮೋಜ-ಮಸ್ತಿ ಮಾಡುತ್ತಿದ್ದಾರೆ. ಆದರೆ ಇತ್ತ ಇವರಿಗೆ ಮತ ಹಾಕಿ ವಿಧಾನ ಸೌಧಕ್ಕೆ ಕಳಿಸಿದ ಜನರು ಮಾತ್ರ ಕನಿಷ್ಠ ಕುಡಿಯುವ ನೀರಿಗೂ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ.

    ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿ, ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಕುಡಿಯುವ ನೀರು ಸಹ ಪೂರೈಕೆ ಮಾಡಲು ಸಾಧ್ಯವಾಗದ ಜನಪ್ರತಿನಿಧಿಗಳು ಯಾಕೆ ನಮಗೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಸತತ ಎರಡು ವರ್ಷಗಳ ಕಾಲದಿಂದ ನಮಗೆ ಈ ಸಮಸ್ಯೆ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಹೀಗೆ ಮುಂದುವರಿದರೇ, ನಮ್ಮ ಗತಿ ಏನು ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ನಮಗೆ ಕೂಡಲೇ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

  • ಶ್ರೀಮಂತ್ ಪಾಟೀಲ್ ಮನೆಯಿಂದ ಮಾಹಿತಿ ಪಡೆಯಿರಿ: ಸ್ಪೀಕರ್ ಸೂಚನೆ

    ಶ್ರೀಮಂತ್ ಪಾಟೀಲ್ ಮನೆಯಿಂದ ಮಾಹಿತಿ ಪಡೆಯಿರಿ: ಸ್ಪೀಕರ್ ಸೂಚನೆ

    ಬೆಂಗಳೂರು: ಶ್ರೀಮಂತ್ ಪಾಟೀಲ್ ನಾಪತ್ತೆ ಪ್ರಕರಣ ಸಂಬಂಧ ಗೃಹ ಇಲಾಖೆಗೆ ಪತ್ನಿಯ ಹಾಗೂ ಮನೆಯವರಿಂದ ಮಾಹಿತಿ ತರಿಸಿಕೊಳ್ಳುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಶ್ರೀಮಂತ್ ಪಾಟೀಲ್ ಅವರು ಹೃದಯದ ಸಮಸ್ಯೆ ಇರುವ ಕಾರಣ ಸದನಕ್ಕೆ ಆಗಮಿಸುವುದಿಲ್ಲ ಎಂದು ಬೆಳಗ್ಗೆ ಪತ್ರದ ಮೂಲಕ ಸ್ಪೀಕರ್‍ಗೆ ತಿಳಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲೇ ಹೈಟೆಕ್ ಆಸ್ಪತ್ರೆಗಳಿದ್ದವು, ಚೆನ್ನೈ, ಮುಂಬೈಗೆ ಓಡಾಡುವ ಅಗತ್ಯವೇನಿತ್ತು ಎಂದು ಸ್ಪೀಕರ್ ಸದನದಲ್ಲಿ ಪ್ರಶ್ನಿಸಿದ್ದಾರೆ.

    ವಿಮಾನ ಪ್ರಯಾಣದ ಟಿಕೆಟ್ ಸಹ ಸಿಕ್ಕಿದೆ. ಶ್ರೀಮಂತ್ ಪಾಟೀಲ್ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಬಿಜೆಪಿಯವರೇ ಅವರನ್ನು ಅಪಹರಿಸಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರು ಇದೇ ವೇಳೆ ಹರಿಹಾಯ್ದರು.

    ಈ ಆರೋಪವನ್ನು ಪುರಸ್ಕರಿಸಿದ ಸ್ಪೀಕರ್ ಗಂಭೀರ ಆರೋಗ್ಯ ಸಮಸ್ಯೆಗಳು ಇದ್ದರೆ ಮಾತ್ರ ಪತ್ರ ಬರೆದು ತಿಳಿಸಿ ಹೋಗಬಹುದು. ಆದರೆ ಶ್ರೀಮಂತ ಪಾಟೀಲ್ ಅವರು ನಿನ್ನೆಯಿಂದಲೂ ಆರಾಮವಾಗಿಯೇ ಇದ್ದರು ಎಂದು ಆಡಳಿತ ಪಕ್ಷದ ನಾಯಕರು ತಿಳಿಸುತ್ತಿದ್ದಾರೆ. ಬೆಳಗ್ಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಉಲ್ಬಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಈ ವಿಚಾರದ ಬಗ್ಗೆ ಸ್ಪಷ್ಟನೆ ತಿಳಿಯಬೇಕು, ಶ್ರೀಮಂತ್ ಪಾಟೀಲ್ ನಾಪತ್ತೆ ಕುರಿತು ಪತ್ನಿ ಹಾಗೂ ಮನೆಯವರಿಂದ ಮಾಹಿತಿ ಪಡೆದು, ನಾಳೆಯೇ ವರದಿ ತರಿಸಿಕೊಳ್ಳುವಂತೆ ಗೃಹ ಇಲಾಖೆಗೆ ಸ್ಪೀಕರ್ ಸೂಚಿಸಿದರು.

  • ನಿಂಬೆ ಹಣ್ಣು ರೇವಣ್ಣನ ವಾಮಾಚಾರ ಸಫಲವಾಗಲ್ಲ: ರೇಣುಕಾಚಾರ್ಯ

    ನಿಂಬೆ ಹಣ್ಣು ರೇವಣ್ಣನ ವಾಮಾಚಾರ ಸಫಲವಾಗಲ್ಲ: ರೇಣುಕಾಚಾರ್ಯ

    ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದು, ನಿಂಬೆ ಹಣ್ಣು ರೇವಣ್ಣ ವಾಮಾಚಾರಕ್ಕೆ ಮುಂದಾಗಿದ್ದಾರೆ. ಅವರ ವಾಮಾಚಾರ ಸಫಲವಾಗುವುದಿಲ್ಲ ಎಂದು ಶಾಸಕ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

    ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯದ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಒಟ್ಟಿಗಿದ್ದೇವೆ, ರಿವರ್ಸ್ ಆಪರೇಷನ್ ಭಯ ಇಲ್ಲ. ನಮಗೆಲ್ಲ ಸಂಸ್ಕೃತಿ, ಸಂಸ್ಕಾರ ಇದೆ. ಮುಖ್ಯಮಂತ್ರಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಸಿಎಂ ಕೀಳು ಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ. ರಿವರ್ಸ್ ಆಪರೇಷನ್ ನಡೆಯಲ್ಲ. ಗೌರವದಿಂದ ಸಿಎಂ ಅವರು ರಾಜೀನಾಮೆ ನೀಡಿ ಹೋಗಬೇಕು. ನಿಂಬೆ ಹಣ್ಣು ರೇವಣ್ಣ ವಾಮಾಚಾರ ಮಾಡಿಸುತ್ತಿದ್ದು, ರೇವಣ್ಣ ಅವರ ವಾಮಾಚಾರ ಸಫಲ ಆಗುವುದಿಲ್ಲ. ರೇವಣ್ಣ ಅವರ ವಾಮಾಚಾರದಿಂದಲೇ ದೇವೇಗೌಡರು ಹಾಸನ ಬಿಟ್ಟು ಬರುವಂತಾಯಿತು ಎಂದು ಗುಡುಗಿದರು.

    ಎಷ್ಟು ದಿನ ರೆಸಾರ್ಟ್ ವಾಸ್ತವ್ಯ ಎಂದು ನಮ್ಮ ನಾಯಕರು ತೀರ್ಮಾನಿಸುತ್ತಾರೆ. ಸೋಮವಾರದವರೆಗೋ ಇಲ್ಲವೆ ಬುಧವಾರದವರೆಗೋ ಎಂಬುದನ್ನು ಯಡಿಯೂರಪ್ಪನವರು ನಿರ್ಧರಿಸುತ್ತಾರೆ. ನಾವು ಯಾರೂ ಕ್ಷೇತ್ರವನ್ನು ನಿರ್ಲಕ್ಷಿಸಿಲ್ಲ. ಸೋಮವಾರ ಇಲ್ಲಿಂದಲೇ ಒಟ್ಟಿಗೆ ಸದನಕ್ಕೆ ಹೋಗುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

    ಇದೇ ವೇಳೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಪಕ್ಷ ಬಿಡಲ್ಲ. 99ರಲ್ಲಿ ನಾನು ರಾಜಕೀಯಕ್ಕೆ ಸೇರಿದ್ದು, ಆಗಿನಿಂದಲೂ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆ ಎಂದು ತಿಳಿಸಿದರು.

    ಶಿರಗುಪ್ಪ ಶಾಸಕ ಸೋಮಲಿಂಗಪ್ಪ ಮಾತನಾಡಿ, ನನ್ನ ಹೆಸರು ರಿವರ್ಸ್ ಆಪರೇಷನ್‍ನಲ್ಲಿ ಕೇಳಿ ಬರುತ್ತಿದ್ದು ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಒಂದು ತಿಂಗಳಿಂದಲೂ ನನ್ನ ಹೆಸರು ಕೇಳಿ ಬರುತ್ತಿದೆ. ಆದರೆ, ನನಗೆ ಯಾರೂ ಕರೆ ಮಾಡಿಲ್ಲ. ನಾನು ಪಕ್ಷ ಬಿಟ್ಟು ಹೋಗಲ್ಲ. ಯಡಿಯೂರಪ್ಪನವರು ಕೆಜೆಪಿ ಪಕ್ಷ ಕಟ್ಟಿದಾಗಲೂ ನಾನು ಅವರ ಜೊತೆ ಹೋಗಲಿಲ್ಲ. ನಾನು ವಿದ್ಯಾರ್ಥಿ ದೆಸೆಯಿಂದಲೂ ಬಿಜೆಪಿಯಲ್ಲಿದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ. ಯಾರೋ ಕಿತಾಪತಿ ಮಾಡಿ ನನ್ನ ಹೆಸರು ತೇಲಿ ಬಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

  • ಅತೃಪ್ತರ ವಿರುದ್ಧ 400 ಕೈ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್​ಗೆ ದೂರು

    ಅತೃಪ್ತರ ವಿರುದ್ಧ 400 ಕೈ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್​ಗೆ ದೂರು

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಅತೃಪ್ತ ಶಾಸಕರ ವಿರುದ್ಧ 400 ಕಾಂಗ್ರೆಸ್ ಕಾರ್ಯಕರ್ತರು ಸುಪ್ರೀಂ ಕೋರ್ಟ್​ಗೆ ದೂರು ಸಲ್ಲಿಸಿದ್ದಾರೆ.

    ಕಾಂಗ್ರೆಸ್ ನಾಯಕ ಅನಿಲ್ ಚಾಕು ಅವರ ನೇತೃತ್ವದಲ್ಲಿ 400 ಜನ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ದೂರನ್ನು ನೀಡಿದ್ದಾರೆ. ಈ ಮೂಲಕ ಅತೃಪ್ತ ಶಾಸಕರ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಶಾಸಕರು ರಾಜೀನಾಮೆ ಕೊಟ್ಟಿರುವ ಕಾರಣದಿಂದಲೇ ಅನರ್ಹತೆ ಮಾಡಿ. ಶಾಸಕರು ಖರೀದಿಗೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ. ಅತೃಪ್ತ ಶಾಸಕರು ಒತ್ತಡಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು ಸಲ್ಲಿಸಿರುವ ಅರ್ಜಿಯನ್ನು ವಜಾಮಾಡುವಂತೆ ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಿದ್ದಾರೆ.

    ಕಾಂಗ್ರೆಸ್ ಕಾರ್ಯಕರ್ತರ ದೂರನ್ನು ಸ್ವೀಕರಿಸದ ಸುಪ್ರೀಂ ಕೋರ್ಟ್ ಮಧ್ಯಂತರ ಅರ್ಜಿಯನ್ನು ಸಲ್ಲಿಸಲು ಸೂಚನೆ ನೀಡಿದೆ.

  • ಸರ್ಕಾರ ಬೀಳಲ್ಲ, ಮುಖ್ಯಮಂತ್ರಿ ಬದಲಾಗುತ್ತಾರೆ: ಕೈ ಶಾಸಕ ರಾಮಪ್ಪ

    ಸರ್ಕಾರ ಬೀಳಲ್ಲ, ಮುಖ್ಯಮಂತ್ರಿ ಬದಲಾಗುತ್ತಾರೆ: ಕೈ ಶಾಸಕ ರಾಮಪ್ಪ

    ದಾವಣಗೆರೆ: ಸರ್ಕಾರ ಸೇಫ್ ಆಗಿರುತ್ತದೆ. ಆದರೆ ಮುಖ್ಯಮಂತ್ರಿ ಮಾತ್ರ ಬದಲಾಗುತ್ತಾರೆ ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಮತ್ತೊಮ್ಮೆ ತಮ್ಮ ಡೈಲಾಗ್ ಹೇಳಿದ್ದಾರೆ.

    ಶಾಸಕರ ರಾಜೀನಾಮೆ ಕುರಿತು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಗಬಹುದು. ಆದರೆ, ಮೈತ್ರಿ ಸರ್ಕಾರಕ್ಕೆ ಏನೂ ತೊಂದರೆಯಾಗುವುದಿಲ್ಲ. ಈ ಬಾರಿ ಮುಖ್ಯಮಂತ್ರಿ ಬದಲಾಗುವ ಸಂಭವವಿದ್ದು, ಯಾರಾಗುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ. ಇದನ್ನು ಹೈ ಕಮಾಂಡ್ ತೀರ್ಮಾನಿಸಲಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ತಿಳಿಸಿದರು.

    ಬಿಜೆಪಿಯವರು ಸಾಕಷ್ಟು ಬಾರಿ ಕರೆದಿರುವುದು ನಿಜ, ಇಂದು ಬೆಳಗ್ಗೆಯೂ ಸಹ ಕರೆ ಮಾಡಿದ್ದರು. ಆದರೆ, ನಾನು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತ ಯಾವ ಪಕ್ಷಕ್ಕೂ ಬರುವುದಿಲ್ಲ ಎಂದು ಹೇಳಿದ್ದೇನೆ. ನಮ್ಮನ್ನು ನಂಬಿ ಪಕ್ಷ ಎರಡು ಬಾರಿ ಬಿ-ಫಾರಂ ನೀಡಿದೆ. ಅಲ್ಲದೆ, 64 ಸಾವಿರ ಜನ ನನಗೆ ಮತ ಹಾಕಿದ್ದಾರೆ. ಅವರ ಋಣ ತೀರಿಸಬೇಕು. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಬಿಜೆಪಿಯವರಿಗೆ ತಿಳಿಸಿದ್ದೇನೆ. ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗಿ ಪ್ರಕೃತಿ ಚಿಕಿತ್ಸೆ ಮುಗಿಸಿಕೊಂಡು ಬಂದಿದ್ದೇನೆ. ನಾಯಕರ ಸೂಚನೆಗೆ ಮೇರೆಗೆ ಇದೀಗ ಬೆಂಗಳೂರಿಗೆ ಹೊರಟಿದ್ದೇನೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳು ಬದಲಾವಣೆಯಾಗುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಭಾನುವಾರ ರಾಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದರು. ಬಿಜೆಪಿಯವರು ನನ್ನ ಹಿಂದೆ ಬಿದ್ದಿದ್ದಾರೆ. ಈಗಾಗಲೇ ನಾನು ಪಕ್ಷ ತೊರೆಯಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದೇನೆ. ನಾನು ಪಕ್ಷ ತೊರೆಯಲು ಸಿದ್ಧ ಎಂದರೆ ಹಣ ನೀಡಲು ತಯಾರಾಗಿದ್ದಾರೆ. ಆದರೆ, ನಾನು ಪಕ್ಷ ಬಿಡುವ ವಿಷಯವೇ ಬರಲ್ಲ. ನಗರಸಭೆ ಸದಸ್ಯನಾಗಿದ್ದ ನನ್ನನ್ನು ಅಧ್ಯಕ್ಷ, ಶಾಸಕನಾಗಿ ಮತದಾರರು ಆಯ್ಕೆ ಮಾಡಿದ್ದಾರೆ. ಬೇರೆ ಪಕ್ಷಕ್ಕೆ ಹೋದ್ರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ ಎಂದು ಹೇಳಿದ್ದರು.

  • ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಕೋಲಾರ: ಎತ್ತಿನ ಹೊಳೆ ನೀರಿನ ಯೋಜನೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

    ಇಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೂ ಮಂಗಳೂರು ಹಾಗೂ ಧರ್ಮಸ್ಥಳದಲ್ಲಿ ಇರುವ ನೀರಿನ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಎತ್ತಿನ ಹೊಳೆ ಯೋಜನೆ ವೇಗವಾಗಿ ಸಾಗುತ್ತಿದ್ದು, ಜೂ.12 ರಂದು ಬಯಲುಸೀಮೆಯ ಎಲ್ಲಾ ಶಾಸಕರು ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ. ಮಂಗಳೂರಲ್ಲಿ ನೀರಿನ ಸಮಸ್ಯೆಗೂ ಎತ್ತಿನ ಹೊಳೆಗೂ ಸಂಬಂಧವಿಲ್ಲ ಕೆಲವರು ಬೇಕಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಮಾಡುವರು ನಮ್ಮ ವಿರೋಧಿಗಳಲ್ಲ. ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅವರಿಗೆ ನಮ್ಮ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದೆಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಕಾಶದಿಂದ ಬೀಳುವ ನೀರು ಪಶ್ಚಿಮಘಟ್ಟಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುತಿತ್ತು. 65 ವರ್ಷಗಳ ಇತಿಹಾಸದ ಅಂಕಿ ಅಂಶಗಳ ಪ್ರಕಾರ ಸಕಲೇಶಪುರದ ಕೆಂಪುಹೊಳೆ, ವಾಟೆ ಹೊಳೆ, ಹೊಸ ಹೊಳೆ ಸೇರಿದಂತೆ 7 ಹೊಳೆಗಳಿದ್ದು, ಇಲ್ಲಿ ಸುಮಾರು 400 ರಿಂದ 450 ಟಿಎಂಸಿ ನೀರು ಹರಿದು ಪ್ರತಿ ವರ್ಷ ಅರಬ್ಬಿ ಸಮುದ್ರ ಸೇರುತ್ತಿದೆ. ಇಲ್ಲಿ ಸಣ್ಣದಾದ ಗೋಡೆಯನ್ನು ನಿರ್ಮಿಸಿ 24 ಟಿಎಂಸಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸುವುದೇ ಎತ್ತಿನಹೊಳೆ ಯೋಜನೆ ಉದ್ದೇಶ ಎಂದರು.

    ಈ ವಿಚಾರದ ಬಗ್ಗೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಶಾಸಕರುಗಳಿಗೆ ಚಿಕ್ಕ ಆಕ್ಷೇಪವಿತ್ತು. ಅದನ್ನು ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

  • 2 ದಿನದಲ್ಲಿ ಮಂತ್ರಿ ಸೇರಿ 5 ಶಾಸಕರು ರಾಜೀನಾಮೆ?

    2 ದಿನದಲ್ಲಿ ಮಂತ್ರಿ ಸೇರಿ 5 ಶಾಸಕರು ರಾಜೀನಾಮೆ?

    ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ದೋಸ್ತಿ ಸರ್ಕಾರಕ್ಕೆ ಸೋಲಿನ ಆತಂಕ ಶುರುವಾಗಿದೆ. ಇತ್ತ ಮೈತ್ರಿ ಸೋಲಿನ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್‍ನ ಐವರು ಶಾಸಕರು ಮತ್ತು ಸಚಿವರೊಬ್ಬರು ಹೋಗಲು ರೆಡಿ ಇದ್ದಾರೆ ಎಂದು ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿದೆ.

    ಇನ್ನೂ ಎರಡು ದಿನದಲ್ಲಿ ಮಂತ್ರಿ ಸೇರಿ 5 ಶಾಸಕರು ರಾಜೀನಾಮೆಗೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಜೆಪಿ ಪಾಳಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ನಾಯಕರನ್ನ ಆರು ಮಂದಿ ಶಾಸಕರು ಸಂಪರ್ಕ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಶುಕ್ರವಾರ ರಾತ್ರಿಯೇ ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಇಂದು ಅಥವಾ ನಾಳೆ ರಾಜೀನಾಮೆ ಪರ್ವ ಸಾಧ್ಯತೆ ಇದೆ. ಇದರಿಂದ ರಾಜ್ಯ ಬಿಜೆಪಿ ವಲಯದಲ್ಲಿ ರಾಜೀನಾಮೆ ಚರ್ಚೆ ಶುರುವಾಗಿದೆ.

    ಬಿಜೆಪಿ ಸಂಪರ್ಕದಲ್ಲಿರೋರು ಯಾರು?
    ಹೊಸಕೋಟೆ ಶಾಸಕ, ಸಚಿವ, ಎಂ.ಟಿ.ಬಿ.ನಾಗರಾಜ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಮತ್ತು ಬೇಲೂರು ಶಾಸಕ ಲಿಂಗೇಶ್ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ.

  • ಕೈ ಅತೃಪ್ತ ಶಾಸಕರನ್ನ ಸೆಳೆಯಲು ಫೀಲ್ಡ್ ಗಿಳಿದ್ರಾ ರಮೇಶ್ ಜಾರಕಿಹೊಳಿ?

    ಕೈ ಅತೃಪ್ತ ಶಾಸಕರನ್ನ ಸೆಳೆಯಲು ಫೀಲ್ಡ್ ಗಿಳಿದ್ರಾ ರಮೇಶ್ ಜಾರಕಿಹೊಳಿ?

    ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಶುರುವಾಗಿದ್ದು, ಕಾಂಗ್ರೆಸ್ ಅತೃಪ್ತ ಶಾಸಕರನ್ನು ಸೆಳೆಯಲು ಮತ್ತೆ ರಮೇಶ್ ಜಾರಕಿಹೊಳಿ ಫೀಲ್ಡ್ ಗಿಳಿದಿದ್ದಾರ ಎಂಬ ಮಾತು ಕೇಳಿ ಬರುತ್ತಿದೆ.

    ಇಂದು ಕಾಂಗ್ರೆಸ್ ಅತೃಪ್ತ ಶಾಸಕರೊಂದಿಗೆ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಮಾತುಕತೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ರಮೇಶ್ ಜಾರಕಿಹೊಳಿ ಬಳಿ 9 ಕಾಂಗ್ರೆಸ್ ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಪ್ರಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಇದೀಗ ಮತ್ತೆ ರಮೇಶ್ ಜಾರಕಿಹೊಳಿ ಅತೃಪ್ತ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ.

    ಇದಕ್ಕೂ ಮುನ್ನ ಯಡಿಯೂರಪ್ಪ ಅವರು ಅತೃಪ್ತ ಶಾಸಕರ ಕೈಯಿಂದ ಮೊದಲು ರಾಜೀನಾಮೆ ಕೊಡಿಸಿ ಆಮೇಲೆ ನಮ್ಮ ಬಳಿ ಬಂದು ಮಾತನಾಡಿ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಅವರು ಶಾಸಕರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಹಾಲಿ ಮತ್ತು ಮಾಜಿ ಕಾಂಗ್ರೆಸ್ ಶಾಸಕರೇ ರಮೇಶ್ ಜಾರಕಿಹೊಳಿಗೆ ಫೋನ್ ಮಾಡಿ ಸಭೆ ಸೇರಿ ಮಾತನಾಡೋಣ ಎಂದು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂಕಿ ಅಂಶದ ಪ್ರಕಾರ ಬೆಳಗಾವಿಯಲ್ಲಿಯೇ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಅತೃಪ್ತ ಶಾಕರಿದ್ದಾರೆ. ಇಂದು ಸಂಜೆ ಸುಮಾರು 5 ಗಂಟೆಗೆ ಸಭೆ ಸೇರಿ ಚರ್ಚೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

    ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

    ಕೋಲಾರ: ಏಳು ಬಾರಿ ಕೋಲಾರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಸಂಸದ ಕೆಎಚ್ ಮುನಿಯಪ್ಪ ಅವರಿಗೆ ಈ ಬಾರಿ ಸ್ವಪಕ್ಷಿಯ ಶಾಸಕರೇ ಟಿಕೆಟ್ ನೀಡದಂತೆ ಬಂಡಾಯ ಹೂಡಿದ್ದಾರೆ. ಜಿಲ್ಲೆಯ ನಾಲ್ಕು ಜನ ಕಾಂಗ್ರೆಸ್ ಶಾಸಕರು, ಸ್ವಾತಂತ್ರ್ಯ ಅಭ್ಯರ್ಥಿ ಸೇರಿದಂತೆ ಹಲವು ಮುಖಂಡರು ಹಾಲಿ ಸಂಸದ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ದೆಹಲಿ ಹೈಕಮಾಂಡ್‍ಗೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದಂತೆ ಜಿಲ್ಲೆಯ ರಾಜಕಾರಣ ರಂಗೇರಿದ್ದು, ಮುನಿಯಪ್ಪ ಅವರ ವಿರೋಧಿ ಬಣದ ಜಿಲ್ಲೆಯ ನಾಯಕರು ಪಕ್ಷಾತೀತವಾಗಿ ಒಂದಾಗಿದ್ದಾರೆ. ಅಲ್ಲದೇ ಅವರಿಗೆ ಟಿಕೆಟ್ ತಪ್ಪಿಸಲು ಸ್ವಪಕ್ಷಿಯವರೇ ಅಖಾಡಕ್ಕೆ ಇಳಿದಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

    ವಿಶೇಷತೆ ಎಂದರೆ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಶಿಢ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮುಳಬಾಗಲು ಪಕ್ಷೇತರ ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮುನಿಯಪ್ಪಗೆ ಬಿಸಿ ತುಪ್ಪವಾಗ ಪರಿಣಮಿಸಿದ್ದಾರೆ. ಈಗಾಗಲೇ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಾರಿ ಕೆ.ಎಚ್ ಮುನಿಯಪ್ಪಗೆ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ವಿರೋಧ ಇರುವುದರಿಂದ ಇವರ ಬದಲಿಗೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕೋಲಾರದಿಂದ ಟಿಕೆಟ್ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಸಮ್ಮಿಶ್ರ ಸರ್ಕಾರ ಮೈತ್ರಿ ಧರ್ಮದಂತೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಗಿದ್ದು, ಹಾಲಿ ಸಂಸದರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಎಂದಿನಂತೆ ಹೈಕಮಾಂಡ್‍ನಿಂದ ತಮ್ಮ ಹೆಸರು ಶಿಫಾರಸ್ಸು ಮಾಡಿಕೊಂಡು ಬಂದು ತಮ್ಮ ವಿರೋಧಿಗಳಿಗೆ ಟಾಂಗ್ ಕೊಡಲು ಸಂಸದರು ದೆಹಲಿ ಸೇರಿದಂತೆ ಬೆಂಗಳೂರಿನಲ್ಲಿ ಠಿಕ್ಕಾಣಿ ಹೂಡಿದ್ದಾರೆ.

    ಇತ್ತ ಸಂಸದರ ವಿರುದ್ಧ ಕ್ಷೇತ್ರದಲ್ಲಿ ಸೇರಿದಂತೆ ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಕೆ.ಹೆಚ್ ಹಠಾವೋ ಕೋಲಾರ ಬಚಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ ಮುಖಂಡರು ಇತ್ತೀಚಿಗೆ ಪರೋಕ್ಷವಾಗಿ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಮುನಿಯಪ್ಪರ ರಾಜಕೀಯ ವಿರೋಧಿಗಳನ್ನು ಒಟ್ಟುಗೂಡಿಸಿ ಬಹಿರಂಗವಾಗಿ ವಿರೋಧಿ ಬಣ ತಯಾರಿ ನಡೆಸಿತ್ತು. ಆದರೆ ಎಲ್ಲೂ ವಿರೋಧಿ ನಾಯಕರ ವಿರುದ್ಧ ಮಾತನಾಡದ ಮುನಿಯಪ್ಪ ತಮ್ಮದೇ ಶೈಲಿಯಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೆಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣೆ ಬಂದಾಗ ಇವೆಲ್ಲಾ ಸಹಜ, ಅವರು ಯಾರು ಕೂಡ ನಮ್ಮ ವಿರೋಧಿಗಳಲ್ಲ ಎಂದು ಮೃದು ಮಾತನಾಡಿದ್ದಾರೆ. ಕಳೆದ ಏಳು ಚುನಾವಣೆಗಳಲ್ಲಿ ವಿರೋಧಿಗಳನ್ನು ಕಟ್ಟಿ ಹಾಕಿ, ಭಿನ್ನಾಭಿಪ್ರಾಯ, ಬಂಡಾಯ, ಹೋರಾಟಗಳ ಶಮನ ಮಾಡುವ ತಂತ್ರಗಳಲ್ಲಿಂದಲೇ ಜಯಗಳಿಸಿರುವ ಮುನಿಯಪ್ಪ ಅವರಿಗೆ ಇದು ಸಾಮಾನ್ಯ ಎಂಬಂತೆ ಆಗಿದೆ. ಆದರೆ ಬಾರಿ ಸ್ವಪಕ್ಷಿಯರೇ ಆಗಿರುವ ಬಂಡಾಯ ಶಾಸಕರನ್ನು ಹೇಗೆ ನಿಭಾಯಿಸುತ್ತಾರೆ ಎಂಬುವುದು ಮಾತ್ರ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೆಲ ಶಾಸಕರಿಗೆ ಬಿಜೆಪಿ ದುಡ್ಡು ಕೊಟ್ಟಿರುವುದು ಸತ್ಯ: ಸಿದ್ದರಾಮಯ್ಯ

    ಕೆಲ ಶಾಸಕರಿಗೆ ಬಿಜೆಪಿ ದುಡ್ಡು ಕೊಟ್ಟಿರುವುದು ಸತ್ಯ: ಸಿದ್ದರಾಮಯ್ಯ

    – ಕೊನೆಗೂ ಬಿಜೆಪಿ ಆಫರ್ ಒಪ್ಪಿಕೊಂಡದ್ರ ಕೈ ಶಾಸಕರು?

    ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲ ಚಾಲ್ತಿಯಲ್ಲಿರುವುದು ಸತ್ಯವಾಗಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ನಮ್ಮ ಶಾಸಕರಿಗೆ 30 ಕೋಟಿ ರೂ. ಆಫರ್ ನೀಡಿದ್ದು, ಕೆಲ ಶಾಸಕರಿಗೆ ಹಣ ಕೊಟ್ಟಿದ್ದಾರೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಸದನ ಮುಂದೂಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಆರೋಪ ಮಾಡಿದೆ. ಹಾಗಾದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲಿ. ಅದನ್ನು ಬಿಟ್ಟು ಸದನದಲ್ಲಿ ಗಲಾಟೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಸರ್ಕಾರ ಉರುಳಿಸಲು ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಆಫರ್ ನೀಡಿದೆ. ಆದರೆ ಆಪರೇಷನ್ ಕಮಲ ಫೇಲ್ ಆಗಿದೆ. ಹೀಗಾಗಿ ಸದನದಲ್ಲಿ ಧರಣಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಸದನದ ಆರಂಭದ ದಿನವೇ ರಾಜ್ಯಪಾಲರ ಭಾಷಣದ ಅಡ್ಡಿ ಪಡಿಸಿದ್ದಾರೆ. ಬಹುಮತ ಇಲ್ಲ ಎಂದು ಘೋಷಣೆ ಕೂಗಿದ್ದಾರೆ. ಸಮ್ಮಿಶ್ರ ಸರ್ಕಾರ ಆರಂಭವಾದ ಸಮಯದಿಂದ ಸರ್ಕಾರ ಉರುಳಿಸುವ ಪ್ರಯತ್ನ ಮಾಡಿರುವ ಬಿಜೆಪಿ ಈಗ ಸದನ ನಡೆಯದಂತೆ ಮಾಡಿದೆ. ಶಾಸಕರಿಗೆ ಆಫರ್ ಕೊಟ್ಟು ಕೆಲ ಶಾಸಕರಿಗೆ ಹಣವನ್ನು ಸಂದಾಯ ಮಾಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಹಣ ನೀಡಿದ ಬಿಜೆಪಿ ನಾಯಕರ ಸ್ಥಿತಿ ಸದ್ಯ ಇಂಗು ತಿಂದ ಮಂಗನಂತೆ ಆಗಿದೆ ಎಂದು ವ್ಯಂಗ್ಯವಾಡಿದರು.

    ಇದೇ ವೇಳೆ ತಾನೂ ಆಶಾವಾದಿ ಎಂದು ಕರೆದುಕೊಂಡ ಸಿದ್ದರಾಮಯ್ಯ ಅವರು, ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದ್ದು, ಪಕ್ಷದ ಸಭೆಗೆ ಎಲ್ಲರೂ ಹಾಜರಾಗುವ ವಿಶ್ವಾಸವಿದೆ. ಒಂದೊಮ್ಮೆ ಸಭೆಗೆ ಶಾಸಕರು ಗೈರು ಹಾಜರಿ ಆದರೆ ಶಿಸ್ತು ಕ್ರಮದ ತೀರ್ಮಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

    ಇಷ್ಟು ದಿನ ಬಿಜೆಪಿ ನಾಯಕರು ಆಫರ್ ಮಾಡಿದ್ದಾರೆ ಎಂದು ಕೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ನಮ್ಮ ಶಾಸಕರಿಗೆ ಹಣ ಸಂದಾಯ ಆಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಶಾಸಕರ ಹೆಸರನ್ನು ರಿವೀಲ್ ಮಾಡುವಂತೆ ಪ್ರಶ್ನಿಸಿದ ಮಾಧ್ಯಮಗಳಿಗೆ ಉತ್ತರಿಸಲು ನಿರಾಕರಿಸಿದ ಸಿದ್ದರಾಮಯ್ಯ ಅವರು, ನಾನು ಯಾಕೆ ಶಾಸಕರ ಹೆಸರು ಹೇಳಬೇಕು. ಸಮಯದ ಬಂದಾಗ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ. ಬಿಜೆಪಿ ನಾಯಕರು ಡೋಂಗಿಗಳು ಎಂದು ಹೇಳಿ ವಿಷಯಾಂತರ ಮಾಡಿ ಮುಂದೆ ನಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv