ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ನಿರೀಕ್ಷೆಯಂತೆ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಹಾಲಿ ಅಧಿಕಾರದಲ್ಲಿರುವ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‍ಎಸ್ ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲವೆನ್ನುವ ಚುನಾವಣೋತ್ತರ ಸಮೀಕ್ಷೆಗಳು ಸರಿಯಾಗಿವೆ.

ಟಿಆರ್‍ಎಸ್ ಮುನ್ನಡೆಗೆ ಕಾರಣಗಳೇನು?
– ರಾಷ್ಟ್ರೀಯ ಪಕ್ಷಗಳನ್ನು ಒಳಬಿಟ್ಟುಕೊಳ್ಳಲು ತೆಲಂಗಾಣ ಮತದಾರರು ಸಿದ್ಧರಿಲ್ಲ. ಹೀಗಾಗಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ.
– ಮತದಾರರ ಸಾಂಪ್ರದಾಯಿಕ ಮನಸ್ಥಿತಿಯ ಮೇಲೆ ಸ್ಥಳೀಯ ನಾಯಕರಾದ ಚಂದ್ರಶೇಖರ್ ರಾವ್ ಬಿಗಿಹಿಡಿತ ಹೊಂದಿರುವುದು.
– ಟಿಆರ್‍ಎಸ್ ಜೊತೆಗೆ ತನ್ನದು ಸ್ನೇಹಮಯ ಕದನ ಎಂದು ಬಿಜೆಪಿ ಹೇಳಿಕೊಂಡಿದ್ದು ಮಾತ್ರವಲ್ಲದೇ ಅದೇ ರೀತಿ ನಡೆದುಕೊಂಡಿತ್ತು. ಹೀಗಾಗಿ ಬಿಜೆಪಿ ತಾನಾಗಿಯೇ ಟಿಆರ್‍ಎಸ್ ಪರ ಪ್ರಚಾರ ಮಾಡಿದಂತಾಗಿತ್ತು.

– ಚುನಾವಣೆಗೂ ಮೊದಲೇ ಚಂದ್ರಬಾಬು ನಾಯ್ಡು ಪ್ರಭಾವ ಕಡಿಮೆ ಇದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ನಾಯ್ಡು ಜೊತೆ ಕಾಂಗ್ರೆಸ್ ಸೇರಿದರೆ ಲಾಭಕ್ಕಿಂತಲೂ ಕಾಂಗ್ರೆಸ್ಸಿಗೆ ನಷ್ಟವೇ ಹೆಚ್ಚು ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಶ್ಲೇಷಣೆ ನಿಜವಾಗಿದ್ದು ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರೂ ಕಡಿಮೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಟಿಡಿಎಸ್-ಕಾಂಗ್ರೆಸ್ ಮೈತ್ರಿ ಟಿಆರ್‍ಎಸ್ ಅನ್ನು ಮುಗಿಸುವಷ್ಟು ಬಲಿಷ್ಠವಾಗಿರಲಿಲ್ಲ.
– ಚಂದ್ರಶೇಖರ್ ರಾವ್ ಅವರಿಗೆ ಪ್ರತಿಪಕ್ಷದಲ್ಲಿ ಪ್ರತಿಸ್ಪರ್ಧಿಗಳು, ಸಿಎಂ ಅಭ್ಯರ್ಥಿಗಳು ಇರಲಿಲ್ಲ. ಜನಪ್ರಿಯವಾದ ಹಲವಾರು ಯೋಜನೆಗಳನ್ನು ಕೆಸಿ ರಾವ್ ಜಾರಿಗೆ ತಂದಿದ್ದರು. ಈ ಬಾರಿಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಏರಲಿದೆ ಎನ್ನುವ ಖಚಿತ ವಿಶ್ವಾಸದ ಹಿನ್ನೆಲೆಯಲ್ಲಿ ಚಂದ್ರಶೇಖರ್ ವಿಧಾನಸಭೆಯನ್ನು ವಿಸರ್ಜಿಸಿದ ತಂತ್ರ ಫಲ ನೀಡಿದೆ.
11.30ರ ವೇಳೆಗೆ ಟಿಆರ್‍ಎಸ್ 91 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಹಾಗೂ ಟಿಡಿಪಿ ಮೈತ್ರಿ ಕೂಟ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 03 ಹಾಗೂ ಎಐಎಂಎಂ 05 ಸ್ಥಾನಗಳಲ್ಲಿ ಮುನ್ನಡೆ ಹೊಂದಿವೆ.
2013ರಲ್ಲಿ ಏನಾಗಿತ್ತು?
2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಆರ್‍ಎಸ್ 63 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ 21, ಟಿಡಿಪಿ 15, ಬಿಜೆಪಿ 5 ಹಾಗೂ ಇತರೆ 7 ಸ್ಥಾನಗಳು ಬಂದಿದ್ದವು. ಒಟ್ಟು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನಗಳು ಅಗತ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv