Tag: Legislative Assembly

  • ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ತಿರುವನಂತಪುರಂ: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯದ ಶಾಸಕರಿಗೆ ಸುಂದರ, ಸುರಕ್ಷಿತ ಸ್ಥಳಗಳ ನೀಡುವುದಾಗಿ ಆಫರ್ ನೀಡಿದೆ.

    ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿರುವ ಕೇರಳ ಪ್ರವಾಸೋದ್ಯಮ, ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳ ಬಳಿಕ ನಾವು ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ, ಸುರಕ್ಷಿತ ಹಾಗೂ ಸುಂದರ ರೆಸಾರ್ಟ್ ಗೆ ಬನ್ನಿ ಎಂದು ಟ್ವೀಟ್ ಮಾಡಿದೆ.

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ನಡೆಯಬಹುದು ಎನ್ನುವ ಊಹೆಯ ಮೇರೆಗೆ ಕೇರಳ ಪ್ರವಾಸೋದ್ಯಮ ಇಲಾಖೆ ಫಲಿತಾಂಶ ಪ್ರಕಟವಾದ ಮೇ 15 ರ ಸಂಜೆ 5.48ಕ್ಕೆ ಟ್ವೀಟ್ ಮಾಡಿತ್ತು. ಕೇರಳ ಪ್ರವಾಸೋದ್ಯಮದ ಪೋಸ್ಟ್ ಅನ್ನು ಸಚಿವ ಸುರೇಂದ್ರನ್ ಶೇರ್ ಮಾಡಿದ್ದರು ಆದ್ರೆ  ಬಳಿಕ ಇಲಾಖೆ ಆಫರ್ ನೀಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

    ಈ ಟ್ವೀಟ್‍ಗೆ ಹಲವಾರು ಕಮೆಂಟ್ ಗಳು ಬಂದಿತ್ತು. ಪ್ರವಾಸೋದ್ಯಮವನ್ನು ಪ್ರಚಾರ ಮಾಡುವುದು ಹೇಗೆ ಎನ್ನುವುದು ಕೇರಳವನ್ನು ನೋಡಿ ಕಲಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ಬೆಸ್ಟ್ ಎಡ್ಮಿನ್ ಈ ರೀತಿ ಟ್ರೋಲ್ ಮಾಡಿದ್ದನ್ನು ಇದೂವರೆಗೂ ನಾವು ನೋಡಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ಕರ್ನಾಟಕ ರಾಜ್ಯಪಾಲ ವಜುಬಾಯಿವಾಲ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿ 15 ದಿನಗಳ ಕಾಲಾವಕಾಶ ನೀಡಿದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕ ರಕ್ಷಣೆಗೆ ರೆಸಾರ್ಟ್ ಗಳ ಮೇರೆ ಹೋಗಲು ನಿರ್ಧರಿಸಿದ್ದಾರೆ. ಕೇರಳ ಅಲೆಪ್ಪಿಯಲ್ಲಿರುವ ರೆಸಾರ್ಟ್ ಒಂದರಲ್ಲಿ ಕರ್ನಾಟಕದ ಶಾಸಕರಿಗಾಗಿ 120 ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರು ಗೈರು

    ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರು ಗೈರು

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, 13 ಮಂದಿ ಶಾಸಕರು ಗೈರು ಹಾಜರಿ ಹಾಕಿದ್ದಾರೆ.

    66 ಜನ ಶಾಸಕರ ಹಾಜರಾತಿಯಲ್ಲಿ ಸಭೆ ಆರಂಭಗೊಂಡಿದೆ. ಶಾಸಕರು ಯಾಕೆ ಆಗಮಿಸಿಲ್ಲ ಎಂದು ಕೇಳಿದ್ದಕ್ಕೆ ದೇಶಪಾಂಡೆ, ನಿನ್ನೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಅವರೆಲ್ಲ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ತಡವಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

    ಗೈರು ಹಾಜರಿ ಹಾಕಿರುವ ಶಾಸಕರು:
    ಗಣೇಶ್ ಹುಕ್ಕೇರಿ(ಚಿಕ್ಕೋಡಿ ಸದಲಗ), ಆನಂದ ಸಿಂಗ್(ವಿಜಯನಗರ), ನಾಗೇಂದ್ರ(ಕೂಡ್ಲಿಗಿ), ಭೀಮಾನಾಯಕ್(ಹಗರಿ ಬೊಮ್ಮನಹಳ್ಳಿ) ಜಮೀರ್ ಅಹಮ್ಮದ್(ಚಾಮರಾಜಪೇಟೆ), ಅಖಂಡ ಶ್ರೀನಿವಾಸಮೂರ್ತಿ(ಪುಲಿಕೇಶಿ ನಗರ), ತುಕಾರಾಂ(ಸಂಡೂರು), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಶಿವಾನಂದ ಪಾಟೀಲ್(ಬಸವನಬಾಗೇವಾಡಿ), ಯಶವಂತ ರಾಯಗೌಡ(ಇಂಡಿ), ರಾಜೇಗೌಡ(ಶೃಂಗೇರಿ), ಸತೀಶ್ ಜಾರಕಿಹೊಳಿ(ಯಮಕನಮರಡಿ), ರಮೇಶ್ ಜಾರಕಿಹೊಳಿ(ಗೋಕಾಕ್), ಬಸವನಗೌಡ ದದ್ದಲ(ರಾಯಚೂರು ಗ್ರಾಮಾಂತರ), ದುರ್ಗಪ್ಪ ಹೂಲಗೇರಿ(ಲಿಂಗಸಗೂರು).

  • ಬಿಜೆಪಿ ವಿರುದ್ಧದ ನನ್ನ ಹೋರಾಟ ನಿರಂತರ: ಜಿಗ್ನೇಶ್ ಮೇವಾನಿ

    ಬಿಜೆಪಿ ವಿರುದ್ಧದ ನನ್ನ ಹೋರಾಟ ನಿರಂತರ: ಜಿಗ್ನೇಶ್ ಮೇವಾನಿ

    ಚಿಕ್ಕಮಗಳೂರು: 2018ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರೆಸುತ್ತೇನೆಂದು ದಲಿತರ ಪರ ಹೋರಾಟಗಾರ, ಗುಜರಾತ್ ಈ ಬಾರಿ ಆಯ್ಕೆಯಾದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.

    ಚಿಕ್ಕಮಗಳೂರಿನ ಕೋಮು ಸೌಹಾರ್ದ ವೇದಿಕೆಯ 15ನೇ ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ, ನನ್ನ ಹೋರಾಟ ದಲಿತ ಹಾಗೂ ಕೆಳಹಂತದ ಜನರ ಪರವಾಗಿರುತ್ತದೆ. ಕರ್ನಾಟಕದಲ್ಲಿ ನನಗೆ ಗೌರಿಲಂಕೇಶ್ ಸೇರಿದಂತೆ ಬಹಳಷ್ಟು ಹೋರಾಟಗಾರರ ಪರಿಚಯವಿತ್ತು, ನಮ್ಮ ಹೋರಾಟ ದಬ್ಬಾಳಿಕೆ ಹಾಗೂ ಕೋಮುವಾದ ಮಾಡುತ್ತಿರುವವರ ವಿರುದ್ಧವಾಗಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಕರ್ನಾಟಕ ಹಾಗೂ ಕೇರಳಲ್ಲಿರುವವರು ನನಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದಾರೆ. ಇಂದು ನಾವು ಇಲ್ಲಿ ಕೋಮು ಸೌಹಾರ್ದ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಾಗೆಯೇ 2018ರ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲೂ ಚರ್ಚೆ ನಡೆಸಲಾಗಿದೆ. ಗುಜರಾತ್ ನಲ್ಲಿರುವ ನನ್ನ ಸ್ವಕ್ಷೇತ್ರದಲ್ಲೂ ಹಲವು ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯಗಳು ನಮಗೆ ಬೆಂಬಲ ನೀಡಿದ್ದವು. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇನೆ. ಆದರೆ ಯಾವ ಪಕ್ಷ ಪರ ಸಹ ಚುನಾವಣಾ ಪ್ರಚಾರ ಕೈಗೊಳ್ಳುವುದಿಲ್ಲ. ಕೋಮುವಾದಿ ಶಕ್ತಿಗಳ ವಿರುದ್ಧ ಸ್ವತಂತ್ರವಾಗಿ ಸ್ಪರ್ಧೆ ನಡೆಸುವವರ ಪರ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

    ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಸಂವಿಧಾನ ವಿರೋಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಘ ಪರಿವಾರ ಹಾಗೂ ಬಿಜೆಪಿಯವರಿಗೆ ಮಧ್ಯವರ್ತಿ ರೀತಿಯಲ್ಲಿ ಕೋಮುವಾದ ಸೃಷ್ಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಿಜೆಪಿಯವರೂ ಕೂಡಾ ಇದೇ ಕೆಲಸದಲ್ಲಿ ತೊಡಗಿದ್ದಾರೆ. ನಾವು ಕರ್ನಾಟಕದಲ್ಲಿ ಸಮಾನತೆ, ಸಹಬಾಳ್ವೆಗಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

  • ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗುತ್ತೋ? ಇಲ್ವೋ?: ಎಚ್‍ಡಿಕೆ ಹೇಳಿದ್ದು ಹೀಗೆ

    ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗುತ್ತೋ? ಇಲ್ವೋ?: ಎಚ್‍ಡಿಕೆ ಹೇಳಿದ್ದು ಹೀಗೆ

    ಶಿವಮೊಗ್ಗ: ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುವುದಿಲ್ಲ ಎಂದು ದೇವೇಗೌಡರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪ್ರಜ್ವಲ್‍ರನ್ನು ಚುನಾವಣೆಗೆ ನಿಲ್ಲಿಸಬಾರದು ಎಂದು ನಾನು ಹೇಳಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಎಚ್‍ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶ ಕುರಿತಂತೆ ಇಂದು ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದಲ್ಲಿಯೇ ಈ ವಿಚಾರದಲ್ಲಿ ಕಲಹವಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೇ ಈ ಕುರಿತ ತೀರ್ಮಾನವನ್ನು ಎಚ್‍ಡಿ ದೇವೇಗೌಡ ಅವರು ಅಂತಿಮಗೊಳಿಸುತ್ತಾರೆ. ಈ ಬಾರಿಯ ಚುನಾವಣೆಯ ಟಿಕೆಟ್ ನೀಡುವ ವಿಚಾರವಾದಲ್ಲಿ ಯಾವುದೇ ಟೀಕೆಗಳಿಗೂ ಅವಕಾಶ ನೀಡದೇ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

    ಪ್ರತಿ ಕ್ಷೇತ್ರದಲ್ಲಿಯು 4 ರಿಂದ 5 ಜನ ಟಿಕೆಟ್ ಅಕಾಂಕ್ಷಿಗಳು ಇರುವುದರಿಂದ ಒಬ್ಬರಿಗಷ್ಟೇ ಟಿಕೆಟ್ ನೀಡಲು ಸಾಧ್ಯ. ಈ ಕುರಿತು ನವೆಂಬರ್ 16 ರ ನಂತರ ಕೋರ್ ಕಮಿಟಿ ಸಭೆ ನಡೆಸಿ ಪಕ್ಷದ 150 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸುತ್ತೇವೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

    ಈ ಹಿಂದೆ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ತನ್ನ ಮಗ ಪ್ರಜ್ವಲ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುವುದು ಇನ್ನೂ ಖಚಿತವಾಗಿಲ್ಲ. ದೇವೇಗೌಡರಿಂದ ಗ್ರೀನ್ ಸಿಗ್ನಲ್ ಸಿಗಬೇಕಾಗಿದೆ ಎಂದು ಹೇಳಿದ್ದರು.

    ಭವಾನಿ ರೇವಣ್ಣ ಅವರ ಹೇಳಿಕೆ ಬೆನ್ನಲ್ಲೇ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡ ಅವರು ರೇವಣ್ಣನ ಪುತ್ರ ಪ್ರಜ್ವಲ್ ಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವತಿ ನೀಡಿಲ್ಲ. ನಮ್ಮ ಕುಟುಂಬದಿಂದ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದರು.

     

  • ಮೋದಿ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ, ನನಗೆ ಕೆಲ್ಸ ಮಾಡೋ ಒಂದು ಅವಕಾಶ ನೀಡಿ: ಎಚ್‍ಡಿಕೆ

    ಮೋದಿ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ, ನನಗೆ ಕೆಲ್ಸ ಮಾಡೋ ಒಂದು ಅವಕಾಶ ನೀಡಿ: ಎಚ್‍ಡಿಕೆ

    ಮೈಸೂರು: ಪ್ರಧಾನಿ ಮೋದಿಯವರ ಹಿಂದಿ ಭಾಷಣ ಕೇಳಿ ಯಾರು ಮರುಳಾಗಬೇಡಿ, ನನಗೆ ಕೆಲಸ ಮಾಡುವ ಒಂದು ಅವಕಾಶವನ್ನು ಕೊಡಿ ಎಂದು ವಿಕಾಸ ಯಾತ್ರೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

    ನಾಡಿನ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ. ಈ ಹಿಂದಿನ 20 ತಿಂಗಳ ಆಡಳಿತ ಕೇವಲ ಸಿನಿಮಾ ಟ್ರೇಲರ್ ಮಾತ್ರ. ಅಂದು ನಿಮ್ಮ ಪೂರ್ಣ ಅಶೀರ್ವಾದದಿಂದ ನಾನು ಸಿಎಂ ಆಗಿರಲಿಲ್ಲ. ಇಂದು ನಿಮ್ಮ ಆಶೀರ್ವಾದ ಬೇಕಿದೆ ಎಂದು ಹೇಳಿದರು.

    ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷವು ಮತದಾರರನ್ನು ಸೆಳೆಯಲು ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದೆ. ಸಮಾವೇಶಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಹಾಗೂ ಎಚ್.ಡಿ ಕುಮಾರಸ್ವಾಮಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಎಚ್‍ಡಿಡಿ ವಿಕಾಸ ಯಾತ್ರೆಗೆ ಚಾಲನೆ ನೀಡಿದರು. ವಿಕಾಸ ವಾಹಿನಿ ಬಸ್ ನಲ್ಲಿ ಯಾತ್ರೆ ಆರಂಭಿಸಿದ ಕುಮಾರಸ್ವಾಮಿ ಅವರು ನಂಜನಗೂಡು, ಎಚ್.ಡಿ.ಕೋಟೆ, ದಟ್ಟಗಳ್ಳಿ, ರಾಮಕೃಷ್ಣ ನಗರ ಬೋಗಾದಿ, ಹಿನಕಲ್ ವೃತ್ತಗಳ ಮೂಲಕ ಮೆರವಣಿಗೆ ನಡೆಸಿ ಸಮಾವೇಶ ಪ್ರದೇಶಕ್ಕೆ ತೆರಳಿದರು.

    ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಗೆ ಚುನಾವಣೆ ಗೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪೊಲೀಸ್ ಜೀಪ್‍ನಲ್ಲಿ ಹಣ ಸಾಗಿಸಿದ್ದಾರೆ. ಈಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದರೆ ನೂರು ಕೋಟಿ ಬೇಕಾದರು ಖರ್ಚು ಮಾಡುತ್ತಾರೆ. ಈಗ ಅವರಿಗೆ ದುಡ್ಡಿಗೆ ಕಡಿಮೆ ಇಲ್ಲ. ದೇವೆಗೌಡರ ಜೊತೆ ಇದ್ದ ಸಿದ್ದರಾಮಯ್ಯ ಬೇರೆ, ಪ್ರಸ್ತುತ ಸಿದ್ದರಾಮಯ್ಯ ಬೇರೆ ಎಂದು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಅವರೊಬ್ಬರು ಮಾತ್ರ ಕುರಿ ಕಾದಿಲ್ಲ. ನಾವು ಗೊಬ್ಬರ ಹೊತ್ತಿದ್ದೇವೆ. ರೈತರ ಕಷ್ಟದ ಅರಿವು ನನಗಿದೆ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಲು ಮಾತ್ರ ಒಪ್ಪುತ್ತಿಲ್ಲ. ನಾವು ಸುಳ್ಳು ಹೇಳುತ್ತೇವೆ ಅಂತಾ ಸಿಎಂ ಹೇಳುತ್ತಾರೆ. ಸಿಎಂ ಒಬ್ಬರೇ ನಾಡಿನಲ್ಲಿ ಸತ್ಯಹರಿಶ್ಚಂದ್ರ. ಸತ್ಯಹರಿಶ್ಚಂದ್ರ ಸಿಎಂ ನೀವು ಎಷ್ಟು ಸಾಲ ಮಾಡಿದ ಮಾಡಿದ್ದೀರಾ ಅಂತಾ ಜನರಿಗೆ ತಿಳಿಸಿ ಎಂದು ಕಿಡಿಕಾರಿದರು.

    ಸಿಎಂ ಸಿದ್ದರಾಮಯ್ಯ ಚಾಮಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಾರೆ ಅಂತಾ ಈ ಸಮಾವೇಶ ಮಾಡುತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ಜೆಡಿಎಸ್ ಹಾಳು ಮಾಡಿದವರು ಸಿದ್ದರಾಮಯ್ಯ. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ದೇವೇಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿದ ಪುಣ್ಯಾತ್ಮ. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಮಾಜಿ ಸಂಸದ ಎಚ್. ವಿಶ್ವನಾಥ್ ನನ್ನನ್ನು ಮತ್ತು ನನ್ನ ತಂದೆ ಅವರನ್ನು ಟೀಕಿಸಿದ್ದಾರೆ. ಅವರ ಟೀಕೆ ವೈಯಕ್ತಿಕವಾಗಿರಲಿಲ್ಲ. ಜನರ ಶಕ್ತಿ ಮುಂದೆ ಸಿದ್ದರಾಮಯ್ಯರ ದರ್ಪ, ಹಣ ಬಲ ನಡೆಯಲ್ಲ. ಚಾಮುಂಡೇಶ್ವರಿ ಕ್ಷೇತ್ರದ ವಿಚಾರದಲ್ಲಿ ಸಿದ್ದರಾಮಯ್ಯ ನಮಗೆ ನಗಣ್ಯ ಎಂದರು.

    ನನ್ನ ಆರೋಗ್ಯ ಸಮಸ್ಯೆಯಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗಿದ್ದು, ಮರುಜನ್ಮವನ್ನು ಪಡೆದಿದ್ದೇನೆ. ಇದನ್ನು ಜನರಿಗಾಗಿ ಮುಡಿಪಾಗಿಡುತ್ತೇನೆ. ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನಾನು ತಪ್ಪು ಮಾಡಿರಲಿಲ್ಲ. ಆದರೂ 10 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ವೀರಶೈವ ಸಮಾಜದ ಬಂಧುಗಳೇ ನಾನು ನಿಮ್ಮವನು. ಜಾತಿ ಹೆಸರಿನ ವ್ಯಾಮೋಹಕ್ಕೆ ನನ್ನ ದ್ವೇಷಿಸಬೇಡಿ. ಯಡಿಯೂರಪ್ಪ ಅವರಿಗೆ ಅಂದು ಅಧಿಕಾರ ಸಿಗದಿದ್ದಕ್ಕೆ ಬಿಜೆಪಿ ಅವರೇ ಕಾರಣ ಅದನ್ನು ವೀರಶೈವರು ಅರ್ಥ ಮಾಡಿಕೊಳ್ಳಬೇಕಿದೆ. ಇಪ್ಪತ್ತು ತಿಂಗಳು ನಮ್ಮ ತಂದೆಗೆ ನೋವು ಕೊಟ್ಟು ಸಿಎಂ ಆದೆ. ಅವರಿಗೆ ನೋವು ಉಂಟಾಗದಂತೆ ಈ ಬಾರಿ ಸಿಎಂ ಆಗಬೇಕು. ಅದಕ್ಕೆ ಜನರ ಆಶೀರ್ವಾದ ಬೇಕು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನ ಜಿ.ಟಿ ದೇವೇಗೌಡ. ಸಿದ್ದರಾಮಯ್ಯ ಅವರ ಮಗ ದಡ್ಡನೋ ಬುದ್ಧಿವಂತನೋ ಗೊತ್ತಿಲ್ಲ. ಅವರನ್ನು ಪದೇ ಪದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳಿಸಿ ಆಟ ನೋಡುತ್ತಿದ್ದಾರೆ. ಸೀತೆ ಮೇಲೆ ರಾವಣ ಕಣ್ಣು ಹಾಕಿದ್ದರಿಂದ ಲಂಕೆಗೆ ಬೆಂಕಿ ಬಿತ್ತು. ನೀವು ಈಗ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದೀರಾ ನಿಮಗೂ ಲಂಕೆಗೆ ಆದ ಕಥೆ ಬರುತ್ತೆ. ನನಗೆ ಕ್ಷೇತ್ರದಲ್ಲಿ ಬಹಳಷ್ಟು ನೋವು ಕೊಟ್ಟಿದ್ದೀರಿ. ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತೀರಾ ಜನರು ಇದನ್ನು ಜನ ನಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾಜಿ ಪ್ರಧಾನಿ ದೇವೇಗೌಡ ದಂಪತಿ ಚಾಮುಂಡಿ ಬೆಟ್ಟದಿಂದ ಮೈಸೂರಿನ ಉತ್ತನಹಳ್ಳಿ ಅಮ್ಮನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವೇಗೌಡ ಅವರಿಗೆ ಶಾಸಕ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮೇಯರ್ ರವಿಕುಮಾರ್ ಸಾಥ್ ನೀಡಿದರು.

  • ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಬಾಡೂಟ ಪಾಲಿಟಿಕ್ಸ್- ಶಾಸಕ ವರ್ತೂರ್ ಪ್ರಕಾಶ್‍ರಿಂದ ಭರ್ಜರಿ ಊಟ

    ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಬಾಡೂಟ ಪಾಲಿಟಿಕ್ಸ್- ಶಾಸಕ ವರ್ತೂರ್ ಪ್ರಕಾಶ್‍ರಿಂದ ಭರ್ಜರಿ ಊಟ

    ಕೋಲಾರ: 2018ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಳೆದ ಕೆಲವು ದಿನಗಳ ಹಿಂದೆ ಚಿಂತಾಮಣಿ ಶಾಸಕರಾದ ಜೆ.ಕೆ ಕೃಷ್ಣ ರೆಡ್ಡಿ ತಮ್ಮ ಮತದಾರರನ್ನು ಸೆಳೆಯಲು ಬಾಡೂಟ ಕಾರ್ಯಕ್ರಮ ಏರ್ಪಡಿಸಿದಂತೆ. ಇಂದು ಕೋಲಾರ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಹೆಸರಲ್ಲಿ ಬಾಡೂಟ ಏರ್ಪಡಿಸಿದ್ದಾರೆ.

    ಕೋಲಾರದ ಬೈರೇಗೌಡ ನಗರದ ಶಾಸಕರ ನಿವಾಸದ ಬಳಿ ಮುಸ್ಲಿಂ ಮುಖಂಡರಿಗೆ ಸಭೆಗೆ ಆಹ್ವಾನಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಮುಖಂಡರಿಗಾಗಿ ಮಧ್ಯಾಹ್ನದ ಊಟಕ್ಕೆ ಭರ್ಜರಿ ಬಾಡೂಟ ತಯಾರಿ ಮಾಡಿಸಿದ್ದು, ಸುಮಾರು 300 ಕೆ.ಜಿ ಚಿಕನ್ ಧಮ್ ಬಿರಿಯಾನಿ ಮಾಡಿಸಲಾಗಿದೆ.

    ಆದರೆ ಇಂದು 11 ಗಂಟೆಗೆ ನಿಗಧಿಯಾಗಿದ್ದ ಸಭೆಗೆ ಒಂದು ಗಂಟೆಯಾದರು ಯಾವ ಮುಖಂಡರೂ ಬಾರದ ಹಿನ್ನೆಲೆ ಶಾಸಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. 2013 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ವರ್ತೂರ್ ಪ್ರಕಾಶ್ ಅವರಿಗೆ ಮುಸ್ಲಿಂ ಸಮುದಾಯದ ಮತಗಳು ದೊರೆತಿರಲಿಲ್ಲ. ಅದ್ದರಿಂದಲೇ ಈ ಬಾರಿ ಮುಸ್ಲಿಂ ಮತಗಳನ್ನು ಸೆಳೆಯಲು ಭರ್ಜರಿ ತಯಾರಿ ನಡೆಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

  • ಏನಿದು ರೋರೋ ಸಮುದ್ರಯಾನ? ಎಷ್ಟು ಗಂಟೆ ಉಳಿತಾಯವಾಗುತ್ತೆ? ವಿಶೇಷತೆ ಏನು?

    ಏನಿದು ರೋರೋ ಸಮುದ್ರಯಾನ? ಎಷ್ಟು ಗಂಟೆ ಉಳಿತಾಯವಾಗುತ್ತೆ? ವಿಶೇಷತೆ ಏನು?

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‍ನಲ್ಲಿ ರೋರೋ ಸಮುದ್ರಯಾನಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗುಜರಾತ್ ರಾಜ್ಯ ಜನತೆಗೆ ದೀಪಾವಳಿಯ ಉಡುಗೊರೆಯಾಗಿದ್ದು, ದೇಶಕ್ಕೆ ಮಹತ್ವ ಯೋಜನೆಯಾಗಿದೆ ಎಂದು ಹೇಳಿದರು.

    ಗುಜರಾತ್‍ಗೆ ಅಕ್ಟೋಬರ್ ತಿಂಗಳಿನಲ್ಲಿ ಪ್ರಧಾನಿ ಮೋದಿಯವರ ಮೂರನೇ ಭೇಟಿ ಇದಾಗಿದ್ದು, 1,140 ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಇದರಲ್ಲಿ ಪ್ರಮುಖವಾಗಿ 600 ಕೋಟಿ ರೂ. ಮೌಲ್ಯದ ರೋರೋ ಸಮುದ್ರಯಾನ ದೋಣಿ ಸೇವೆಯನ್ನು ಘೋಗಾ ಮತ್ತು ದಹೇಜ್ ನಗರಗಳ ಉದ್ಘಾಟಿಸಿದರು.

    ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅಭಿವೃದ್ಧಿ ಯೋಜನೆಯಗಳನ್ನು ಕೈಗೊಳ್ಳಲು ತನಗೆ ಕೇಂದ್ರ ಸರ್ಕಾರದಿಂದ ಬೆಂಬಲ ದೊರೆತಿರಲಿಲ್ಲ ಆದರೆ ಕಳೆದ ಮೂರು ವರ್ಷಗಳಿಂದ ಗುಜರಾತ್ ಅಭಿವೃದ್ಧಿಗೆ ಬೇಕಾದ ಹಲವು ಯೋಜನೆಯಗಳನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

    ಭಾರತದ ಮೊದಲ ಯೋಜನೆ: ಭಾರತದಲ್ಲಿ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಆರಂಭಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಹಡಗನ್ನು ನಿರ್ಮಾಣ ಮಾಡಲಾಗಿದೆ. 1960ರಲ್ಲಿ ಈ ಯೋಜನೆಯ ಆರಂಭಕ್ಕೆ ಚಿಂತನೆಯನ್ನು ಕೈಗೊಳ್ಳಲಾಯಿತು ಆದರೆ 2012ರಲ್ಲಿ ಯೋಜನೆಯ ಆರಂಭಕ್ಕೆ ಮೋದಿ ಶಂಕುಸ್ಥಾಪನೆಯನ್ನು ಮಾಡಿದ್ದರು. ಈ ಯೋಜನೆಯು ಮೋದಿಯವರ ಕನಸಿನ ಯೋಜನೆಯಾಗಿದೆ.

    ಎಷ್ಟು ಸಮಯ ಉಳಿಯುತ್ತೆ? ರೋರೋ ಸಮುದ್ರಯಾನ ಯೋಜನೆ ಆರಂಭಕ್ಕೂ ಗುಜರಾತ್‍ನ ಭವನಗರ್ ಜಿಲ್ಲೆ ಘೋಗಾ ನಗರದಿಂದ ದಹೇಜ್ ನಗರಗಳ ಮಧ್ಯೆ ಸಂಪರ್ಕ ಸಾಧಸಿಲು 310 ಕಿ.ಮೀ ದೂರದ ರಸ್ತೆ ಮಾರ್ಗವನ್ನು ಕ್ರಮಿಸಬೇಕಿತ್ತು. ಆದರೆ ಪ್ರಸ್ತುತ ರೋರೋ ಹಡಗಿನ ಮೂಲಕ ಕೇವಲ 30 ಕಿ.ಮೀ ದೂರವನ್ನು ಹೊಂದಿದೆ. ಇದರಿಂದ ಪ್ರಯಾಣಿಕರು ಸುಮಾರು 8 ಗಂಟೆಯ ಅವಧಿಯ ಬದಲು ಒಂದೇ ಗಂಟೆಯಲ್ಲಿ ತಮ್ಮ ಪ್ರಯಾಣ ಮಾಡಿ ಮತ್ತೊಂದು

    ಎಷ್ಟು ಜನ ಪ್ರಯಾಣಿಸಬಹುದು?
    ಈ ರೋರೋ ಹಡಗಿನಲ್ಲಿ ಒಂದೇ ಬಾರಿಗೆ 250 ಪ್ರಯಾಣಿಕರು ಪ್ರಯಾಣಿಸಬಹುದು. ಅಷ್ಟೇ ಅಲ್ಲದೇ ಕಾರು, ಬಸ್, ಟ್ರಕ್ ಸೇರಿದಂತೆ ಒಟ್ಟು 100 ವಾಹನಗಳನ್ನು ಸಾಗಿಸಬಹುದಾಗಿದೆ. ಯೋಜನೆಯ ಆರಂಭಿಕ ಹಂತವಾಗಿ ಕೇವಲ ಪ್ರಯಾಣಿಕರನನ್ನು ಮಾತ್ರ ರೋರೋ ದೋಣಿಯಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ.

     

     

  • ಚುನಾವಣೆಗೆ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ ಬಸವಾನಂದ ಸ್ವಾಮೀಜಿ: ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ?

    ಚುನಾವಣೆಗೆ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ ಬಸವಾನಂದ ಸ್ವಾಮೀಜಿ: ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ?

    ಧಾರವಾಡ: ಜಿಲ್ಲೆಯ ಮನಗುಂಡಿ ಶ್ರೀ ಬಸವಾನಂದ ಸ್ವಾಮೀಜಿ ಯವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಅವರಿಗೂ ಪತ್ರವನ್ನು ಬರೆದಿದ್ದಾರೆ.

    ಧಾರವಾಡ ತಾಲೂಕಿನ ಮನಗುಂಡಿಯಲ್ಲಿ ಶ್ರೀ ಗುರು ಬಸವ ಮಹಾಮನೆ ಆಶ್ರಮ ಹೊಂದಿರುವ ಶ್ರೀ ಬಸವಾನಂದ ಸ್ವಾಮೀಜಿ, ತನಗೆ ದೃಷ್ಟಿ ಇಲ್ಲದೇ ಇದ್ದರೂ ಕಲಘಟಗಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ ಎಂದು ಅಮಿತ್ ಶಾಗೆ ಪತ್ರವನ್ನು ಬರೆದಿದ್ದಾರೆ.

    ಸ್ವಾಮೀಜಿಗಳು ಬರೆದಿರುವ ಮೂರು ಪುಟಗಳ ಸುದೀರ್ಘ ಪತ್ರದಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ರಾಜಕೀಯದಲ್ಲಾಗಿರುವ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ಕೆಲ ಸಲಹೆಗಳನ್ನು ನೀಡಿದ್ದಾರೆ.

    ಸಲಹೆ ಏನು?
    ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ಮುಂಚೆ ಆಕಾಂಕ್ಷಿಗಳಿಗೆ ಒಂದು ಪರೀಕ್ಷೆ ನಡೆಸಬೇಕು. ಆ ಪರೀಕ್ಷೆಗೆ ತಲಾ ಒಂದು ಲಕ್ಷ ರೂಪಾಯಿ ಶುಲ್ಕ ವಿಧಿಸಬೇಕು. ಅದಕ್ಕಾಗಿಯೇ ಒಂದು ಪರೀಕ್ಷಾ ಸಮಿತಿ ರಚಿಸಬೇಕು. ದೇಶಭಕ್ತಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ವಿದ್ಯಮಾನಗಳಿಗೆ ಸಂಬಂಧಿಸಿದ ಅರಿವು ಸೇರಿದಂತೆ ಬಿಜೆಪಿ ಪಕ್ಷವು ನಡೆದು ಬಂದ ದಾರಿ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಪ್ರಶ್ನೆಗಳಿರಬೇಕು.

    ಪರೀಕ್ಷೆ ನಡೆಸುವ ಕಾರಣ ಒಂದು ಪುಸ್ತಕ ಪ್ರಕಟಿಸುವುದು ಸೂಕ್ತ. ಈ ರೀತಿ ಮಾಡುವುದರಿಂದ 224 ಕ್ಷೇತ್ರಗಳಿಗೆ ಏನಿಲ್ಲವಾದರೂ ಸಾವಿರದ ಐನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು. ಇದರಿಂದ ಪಕ್ಷದ ಖಜಾನೆಗೂ 15 ರಿಂದ 20 ಕೋಟಿ ರೂ. ಸಂಗ್ರಹವಾಗುತ್ತದೆ. ಅಲ್ಲದೇ ಒಳ್ಳೆಯ ಅಭ್ಯರ್ಥಿಗಳು ಸಹ ಕಣದಲ್ಲಿರುತ್ತಾರೆ ಎಂದು ಸ್ವಾಮೀಜಿ ಅಮಿತ್ ಶಾ ಅವರಿಗೆ ಸಲಹೆ ನೀಡಿದ್ದಾರೆ.

     

  • 2018 ರ ವಿಧಾನಸಭೆ ಚುನಾವಣೆ ಸಿದ್ಧತೆ- ಪಕ್ಷಾಂತರಿಗಳ ಮೇಲೆ ಕಾಂಗ್ರೆಸ್ ಕಣ್ಣು

    2018 ರ ವಿಧಾನಸಭೆ ಚುನಾವಣೆ ಸಿದ್ಧತೆ- ಪಕ್ಷಾಂತರಿಗಳ ಮೇಲೆ ಕಾಂಗ್ರೆಸ್ ಕಣ್ಣು

    ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‍ನಲ್ಲಿ ತಯಾರಿ ಜೋರಗಿ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಹೈಕಮಾಂಡ್ ಪಕ್ಷಾಂತರಿಗಳ ಮೇಲೆ ಕಣ್ಣಿಟ್ಟಿದೆ.

    ಈ ಕುರಿತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿರುವ ರಾಜ್ಯ ಉಸ್ತುವಾರಿ ಕೆ.ಸಿ.ವೇಣಗೋಪಾಲ್ ಪಕ್ಷಾಂತರಕ್ಕೆ ಮನಸ್ಸು ಮಾಡಿರುವವರನ್ನು ಗುರುತಿಸಲು ಸೂಚಿಸಿದ್ದಾರೆ.

    2018ರ ಕರ್ನಾಟಕ ವಿಧಾನ ಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಮಹತ್ವ ಚುನಾವಣೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿಯು ಪಕ್ಷದ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.

    ಪಕ್ಷದ ಗೆಲುವಿನ ಹಾದಿಯಲ್ಲಿ ಯಾರೊಂದಿಗೂ ರಾಜೀ ಮಾಡಿಕೊಳ್ಳುವುದು ಬೇಡ ಎಂದು ತಿಳಿಸಿರುವ ಉಸ್ತುವಾರಿ ವೇಣುಗೋಪಾಲ್, ಶೀಘ್ರವೇ ವರದಿಯನ್ನು ನೀಡಲು ತಿಳಿಸಿದ್ದಾರೆ. ಈ ವರದಿಯು ಕಾಂಗ್ರೆಸ್ ಹೈಕಮಾಂಡ್‍ಗೆ ಗೌಪ್ಯವಾಗಿ ಸಲ್ಲಿಕೆಯಾಗಲಿದೆ.

    ಪಕ್ಷದಿಂದ ಹೊರಹೋಗಲು ಮಾನಸಿಕವಾಗಿ ಸಿದ್ಧರಾಗಿರುವ ಶಾಸಕರು ಯಾರು? ಗೊಂದಲದಲ್ಲಿರುವ ಶಾಸಕರು ಯಾರು ಎಂಬುದರ ಬಗ್ಗೆಯು ವರದಿಯಲ್ಲಿ ಮಾಹಿತಿ ನೀಡಲು ತಿಳಿಸಿದ್ದಾರೆ.

    ಈ ವರದಿಯ ಅಧಾರವಾಗಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದದಿಂದ ಹೊರ ಹೋಗುವವರ ಮನವೊಲಿಸಬೇಕಾ, ಇಲ್ಲಾ ಅಂತಹ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಬೇಕಾ ಎಂಬುದರ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಚುನಾವಣೆಗೂ ಒಂದು ತಿಂಗಳ ಮುಂಚೆಯೇ ಕಾಂಗ್ರೆಸ್ ಪಕ್ಷದ ಶಾಸಕರ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದ್ದು, ಗುಪ್ತ ವರದಿಯಲ್ಲಿ ಯಾವ ಶಾಸಕರು ಔಟ್ ಯಾವ ಶಾಸಕರು ಇನ್ ಎಂದುವುದು ಶೀಘ್ರವಾಗಿಯೇ ಹೈ ಕಮಾಂಡ್ ಕೈ ಸೇರಲಿದೆ.

  • ಪಕ್ಷ ಸಂಘಟನೆ ಮಾಡಿದವ್ರಿಗೆ ಮಾತ್ರ ಚುನಾವಣೆ ಟಿಕೆಟ್: ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಪಕ್ಷ ಸಂಘಟನೆ ಮಾಡಿದವ್ರಿಗೆ ಮಾತ್ರ ಚುನಾವಣೆ ಟಿಕೆಟ್: ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಿದವರಿಗಷ್ಟೆ ಟಿಕೆಟ್ ನೀಡಲಾಗುವುದು ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಲಿ ಶಾಸಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಅವರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ರಾಜ್ಯದಲ್ಲಿ ಪಕ್ಷ ಸಂಘಟನೆ ಕಾರ್ಯ ಕುಂಠಿತವಾಗಿದೆ. ಕಾಂಗ್ರೆಸ್ ಶಾಸಕರು ಇರುವ ಸ್ಥಳದಲ್ಲೇ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ಸದ್ಯ ಪಕ್ಷ ಸಂಘಟೆನಯಲ್ಲಿ ವಿಫಲರಾಗಿರುವ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಿರುವ ಶಾಸಕರಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಹೇಳಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮುಂದಿನ ಸಿಎಂ ಯಾರು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು ಈ ವೇಳೆ ಸಿಎಂ ಯಾರು ಅನ್ನೋ ವಿಚಾರ ವಿವಾದ ಮಾಡುವುದು ಬೇಡ. 2018ರ ಚುನಾವಣೆಯಲ್ಲಿ ತೀರ್ಮಾನವಾಗುತ್ತದೆ. ಈ ವಿಚಾರವಾಗಿ ಯಾರು ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

                                  

    ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ವಿಫಲ ಅನ್ನೋದೆಲ್ಲಾ ಸುಳ್ಳು. ಉತ್ತಮವಾಗಿ ನಡೆಯುತ್ತಿದೆ. ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಿಗೆ ಹಾಗೂ ಮುಖಂಡರಿಗೆ ಸೂಚನೆ ಕೊಟ್ಟ ವೇಣುಗೋಪಾಲ್ ಮುಂದಿನ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಬೇಕು ಅಂತಾ ಹೈಕಮಾಂಡ್ ಹೇಳಿದೆ. ಆದರೆ ಮುಂದಿನ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ಮುಂದೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

    ಸೋಷಿಯಲ್ ಮೀಡಿಯಾದಲ್ಲಿ ಭಾಗಿಯಾಗದೇ ಇರುವವರ ಬಗ್ಗೆ ಮಾತನಾಡಿದ ಅವರು, ಎಲ್ಲವನ್ನೂ ನೀವೇ ಮಾಡಲ್ಲ. ನಿಮಗೂ ಪಿಎ ಗಳಿದ್ದಾರೆ ಅಲ್ವಾ? ಅವರ ಕೈಲಿ ಮಾಡಿಸಿ. ಇಲ್ಲದೇ ಇದ್ದರೆ ಬೇರೆಯವರಿಗೆ ಕೊಟ್ಟು ಕೆಲಸ ಮಾಡಿಸಿ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಸಕ್ರೀಯರಾಗಿರಬೇಕು. ಜೊತೆಗೆ ಬೂತ್ ಕಮಿಟಿ ವರದಿಯನ್ನು ಆದಷ್ಟು ಬೇಗ ನೀಡುವಂತೆ ಕೆ.ಸಿ.ವೇಣುಗೋಪಾಲ್ ಮುಖಂಡರಿಗೆ ಹಾಗೂ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಈ ವೇಳೆ ಸಚಿವೆಯಾಗಿ ಉಮಾಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿಲ್ಲ ಎಂಬುದು ಕೇಳಿ ಬಂದಿದೆ. ಬಳಿಕ ಸೋಷಿಯಲ್ ಮೀಡಿಯಾದ ಮಹತ್ವದ ಬಗ್ಗೆ ಕೆಲ ಹೊತ್ತು ಸಚಿವೆ ಉಮಾಶ್ರೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಸಕ್ರಿಯಗೊಂಡಿದ್ದ 38 ಶಾಸಕರಿಗೆ ವೇಣುಗೋಪಾಲ್ ಅಭಿನಂದಿಸಿದರು ಎಂದು ಮೂಲಗಳು ತಿಳಿಸಿವೆ.