Tag: legislative assembly session

  • ಬೆಳಗಾವಿ| ವಿಧಾನಸಭೆ ಸಭಾಧ್ಯಕ್ಷರಿಗೆ ನೂತನ ಪೀಠ – ವಿಶೇಷತೆ ವಿವರಿಸಿದ ಯು.ಟಿ.ಖಾದರ್

    ಬೆಳಗಾವಿ| ವಿಧಾನಸಭೆ ಸಭಾಧ್ಯಕ್ಷರಿಗೆ ನೂತನ ಪೀಠ – ವಿಶೇಷತೆ ವಿವರಿಸಿದ ಯು.ಟಿ.ಖಾದರ್

    ಬೆಳಗಾವಿ: ಸಂವಿಧಾನದಲ್ಲಿ ಸದನಕ್ಕೆ ಬಹಳ ಉನ್ನತ ಸ್ಥಾನವನ್ನು ನೀಡಲಾಗಿದೆ. ಅಂತಹ ಸದನವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಸಭಾಧ್ಯಕ್ಷರ ಹುದ್ದೆ ಸಹ ಒಂದು ಸಂವಿಧಾನಾತ್ಮಕ ಹುದ್ದೆಯಾಗಿದೆ. ಅಂತಹ ಹುದ್ದೆ ಅಲಂಕರಿಸುವ ಸಭಾಧ್ಯಕ್ಷರು ಆಸೀನರಾಗುವ ಪೀಠ ಸಹ ಅಷ್ಟೇ ಪ್ರಾಮುಖ್ಯತೆ ಹೊಂದಿರಬೇಕು ಎಂಬ ಉದ್ದೇಶದಿಂದ ಬೆಂಗಳೂರಿನ ವಿಧಾನಸೌಧದ ಪೀಠದ ಮಾದರಿಯಲ್ಲಿಯೇ ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆಯ ಸಭಾಂಗಣದಲ್ಲಿರುವ ಸಭಾಧ್ಯಕ್ಷರ ಪೀಠವನ್ನು ತಯಾರಿಸಿ ಅಳವಡಿಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ (UT Khader) ಬಣ್ಣಿಸಿದರು.

    ಬೆಳಗಾವಿಯಲ್ಲಿ ವಿಧಾನಸಭೆ ಸಭಾಧ್ಯಕ್ಷರಿಗೆ ನಿರ್ಮಿಸಿದ ನೂತನ ಪೀಠದ (Chair) ವಿಶೇಷತೆಯನ್ನು ಯುಟಿ ಖಾದರ್ ವಿವರಿಸಿದರು. ಈ ವೇಳೆ ಮಾತನಾಡಿದ ಅವರು, ವಿಧಾನಸೌಧವನ್ನು ಕಟ್ಟಿಸಿದ ದಿ.ಕೆಂಗಲ್ ಹನುಮಂತಯ್ಯನವರು (Kengal Hanumanthaiah) ಸಭಾಧ್ಯಕ್ಷ ಪೀಠದ ಬಗ್ಗೆ ಒಂದು ಮಹೋನ್ನತ ಪರಿಕಲ್ಪನೆ ಹೊಂದಿದ್ದರು. ಈ ಪೀಠವನ್ನು ವಿಶಿಷ್ಟವಾಗಿ ರೂಪಿಸಬೇಕೆಂದು ಅವರು ಯೋಜಿಸಿದ್ದರು. ಅದರಂತೆ ಅವರು ನಮ್ಮ ಇತಿಹಾಸದಲ್ಲಿ ರಾಜ್ಯವನ್ನು ಬಹಳ ಕಾಲ ಉತ್ತಮವಾಗಿ ಆಡಳಿತ ನಡೆಸಿದ ರಾಷ್ಟ್ರಕೂಟರು ಹಾಗೂ ಹೊಯ್ಸಳರು ಹೊಂದಿದ್ದ ರಾಷ್ಟ್ರ ಲಾಂಛನಗಳನ್ನು ಅದರಲ್ಲಿ ಅಳವಡಿಸಿಕೊಳ್ಳಬೇಕೆಂಬ ಚಿಂತನೆ ನಡೆಸಿದ್ದರು. ಈ ಉದ್ದೇಶಕ್ಕಾಗಿಯೇ ಶಿವಮೊಗ್ಗದಲ್ಲಿ ಲಭ್ಯವಿದ್ದ ಉತ್ತಮ ಗುಣಮಟ್ಟದ ಬೀಟೆ ಮರ ಆಯ್ಕೆ ಮಾಡಿ, ಅಲ್ಲಿನ ಗುಡಿಗಾರರಿಗೆ ತಮ್ಮ ಕನಸಿನ ಚಿಂತನೆಗಳನ್ನು ವಿವರಿಸಿ ಅದೇ ರೀತಿಯಲ್ಲಿಯೇ ಪೀಠ ಮೂಡಿಬರುವಂತೆ ಮುತುವರ್ಜಿ ವಹಿಸಿದ್ದರು. ರಾಷ್ಟ್ರಕೂಟರು ಹೊಂದಿದ್ದ ಗಂಡಭೇರುಂಡ ಚಿಹ್ನೆಯನ್ನು ಪೀಠದಲ್ಲಿ ಅಳವಡಿಸಿದ್ದರು. ಗಂಡಭೇರುಂಡ ಚಿಹ್ನೆಯನ್ನು ರಾಷ್ಟ್ರಕೂಟರು ತಮ್ಮ ಅಧಿಕಾರ ಹಾಗೂ ಶಕ್ತಿ ಸಾಮರ್ಥ್ಯದ ಪ್ರತೀಕವಾಗಿ ಹಾಗೂ ದೈವಿಕ ರಕ್ಷಣೆ ಹೊಂದಿರುವ ಪ್ರತೀಕವಾಗಿ ಉಪಯೋಗಿಸಿದ್ದರು. ಅದೇ ಲಾಂಛನವನ್ನು ಈ ಪೀಠದಲ್ಲಿ ಅದರ ಪ್ರತಿರೂಪವಾಗಿ ಕೆತ್ತಲಾಗಿದೆ ಎಂದರು. ಇದನ್ನೂ ಓದಿ: ಮೊದಲ ದಿನವೇ ಬಿಜೆಪಿ ಶಾಸಕರಲ್ಲಿ ಸಮನ್ವಯದ ಕೊರತೆ

    ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿದ್ದ ಹಾಗೂ ಬಹುಕಾಲ ಉತ್ತಮವಾಗಿ ಆಳಿದ ಹೊಯ್ಸಳರು ಸಹ ಶರಭ ಅಂದರೆ ಸಿಂಹದ ಲಾಂಛನ ಹೊಂದಿದ್ದರು. ಸಿಂಹವು ಶೌರ್ಯದ ಪ್ರತೀಕವಾಗಿದ್ದು, ಅದನ್ನೂ ಸಹ ಪೀಠದ ಎರಡೂ ಬದಿಗಳಲ್ಲಿ ಕೆತ್ತಲಾಗಿದೆ. ಅದೇ ರೀತಿ ಪೀಠದ ಮೇಲ್ಭಾಗದಲ್ಲಿ ಸೂರ್ಯಕಾಂತಿ ಹೂವಿನ ಚಿತ್ತಾರವನ್ನು ಕೆತ್ತಲಾಗಿದ್ದು, ಇದು ಸಭಾಧ್ಯಕ್ಷರಿಗೆ ಒಂದು ರೀತಿಯ ಮೇಲ್ಛಾವಣಿಯಂತೆ ರೂಪಿಸಲಾಗಿದೆ. ಪೀಠದ ಮುಂಭಾಗದ ಮೇಲೆ ಸೂರ್ಯ ಮತ್ತು ಚಂದ್ರರ ಚಿಹ್ನೆಗಳನ್ನು ಕೆತ್ತಲಾಗಿದ್ದು, ಸೂರ್ಯ ಮತ್ತು ಚಂದ್ರರ ಚಿಹ್ನೆಯ ಅಮರತ್ವವನ್ನು ಪ್ರತಿರೂಪಿಸುವಂತಹ ಚಿಹ್ನೆಯನ್ನು ಕೆತ್ತಲಾಗಿದೆ. ಪೀಠದ ಮೇಲ್ಭಾಗದ ಎರಡೂ ಬದಿಗಳಲ್ಲಿ ಮಾವಿನ ಕಾಯಿ ರೂಪವನ್ನು ಕೆತ್ತಲಾಗಿದೆ. ನಮ್ಮ ದೇಶದಲ್ಲಿ ಮಾವಿನ ಕಾಯಿಗೆ ವೈಜ್ಞಾನಿಕ ಹಾಗೂ ಧಾರ್ಮಿಕವಾಗಿ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಮಾವಿನ ಕಾಯಿ ಬೆಳವಣಿಗೆಯ ದ್ಯೋತಕವಾಗಿದ್ದು, ಈ ಹಿನ್ನೆಲೆಯಲ್ಲಿ ಮಾವಿನ ಕಾಯಿ ಪ್ರತಿರೂಪವನ್ನು ಕೆತ್ತಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ – 45 ದಿನಗಳಲ್ಲಿ 13,000 ರೈಲುಗಳ ಸಂಚಾರ

    ಹೀಗೆ ನಮ್ಮ ದೇಶದ ಇತಿಹಾಸ ಹಾಗೂ ಧಾರ್ಮಿಕತೆಯ ಚಿಹ್ನೆಗಳ ಮಿಶ್ರಣ ರೂಪದಲ್ಲಿರುವ ಈ ಕೆತ್ತನೆಗಳನ್ನು ಬೀಟೆ ಮರದಲ್ಲಿ ಬೆಂಗಳೂರಿನ ವಿಧಾನಸೌಧದ ಪೀಠವನ್ನು ತಯಾರಿಸಿ ಅಳವಡಿಸಲಾಗಿದೆ. ಇದೇ ಉದ್ದೇಶದಿಂದ ಬೆಳಗಾವಿಯಲ್ಲಿಯ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದ ಸಭಾಧ್ಯಕ್ಷರ ಪೀಠವನ್ನು ತಯಾರಿಸಿ ನೂತನವಾಗಿ ಅಳವಡಿಸಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಕೊನೆಗೂ ಪಂಚಮಸಾಲಿ ಹೋರಾಟಕ್ಕೆ ಬೆಳಗಾವಿ ಜಿಲ್ಲಾಡಳಿತ ಅನುಮತಿ

  • ನಾಳೆಯಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ

    ನಾಳೆಯಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ

    ಬೆಂಗಳೂರು: ಮಳೆ ಸಮಸ್ಯೆಗಳ ನಡುವೆ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. 10 ದಿನ ನಡೆಯುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಎಲ್ಲಾ ಸಿದ್ಧತೆ ನಡೆಸಿವೆ.

    ಮಳೆ ಹೊತ್ತಲ್ಲಿ ಬೆಂಗಳೂರಿನ ನಿರ್ವಹಣೆ, ಪ್ರವಾಹ ಪರಿಹಾರ ವಿತರಣೆಯ ಲೋಪ, ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ, 40 ಪರ್ಸೆಂಟ್ ಕಮಿಷನ್, ಪಿಎಸ್‌ಐ ನೇಮಕಾತಿ ಹಗರಣ, ಹೆಚ್ಚುತ್ತಿರುವ ಕೋಮು ಸಂಘರ್ಷ, ಕಾನೂನು ಸುವ್ಯವಸ್ಥೆ ಕುಸಿತ, ಲಿಂಬಾವಳಿ ದರ್ಪ ಹೀಗೆ ಸಾಲು ಸಾಲು ವಿಚಾರಗಳ ಬಗ್ಗೆ ಪಟ್ಟಿ ಮಾಡಿಕೊಂಡಿರುವ ʻಕೈʼ ಪಡೆ, ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಸಿದ್ದರಾಮೋತ್ಸವ ಮೂಲಕ ಸಿಎಂ ಕುರ್ಚಿಗಾಗಿ ವ್ಯಕ್ತಿಪೂಜೆ – ಬಿಜೆಪಿ ಟೀಕೆ

    ಆರಂಭದಿಂದಲೇ ಕಲಾಪ ಕಾವೇರುವ ಸಾಧ್ಯತೆ ಇದ್ದು, ಸರ್ಕಾರದ ವಿರುದ್ಧ ಮಳೆ ಸಮಸ್ಯೆ ನಿರ್ವಹಣೆ, 40% ಭ್ರಷ್ಟಾಚಾರ ಆರೋಪದ ಶಸ್ತ್ರಗಳನ್ನು ಝಳಪಿಸಲು ವಿಪಕ್ಷ ಕಾಂಗ್ರೆಸ್ ಸಿದ್ಧವಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯ ಕೇಸ್‌ಗಳನ್ನ ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ.

    ರೀಡೂ ಹಗರಣ, ಶಿಕ್ಷಕರ ನೇಮಕಾತಿ ಹಗರಣ, ಹಾಸಿಗೆ-ದಿಂಬು ಹಗರಣ, ಸೋಲಾರ್ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ. ಮೊದಲ ದಿನವಾದ ನಾಳೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ಮಂಗಳವಾರದಿಂದ ಸದನ ರಂಗೇರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳು ಮಳೆ

    Live Tv
    [brid partner=56869869 player=32851 video=960834 autoplay=true]