Tag: Legal

  • ಕರ್ನಾಟಕದಲ್ಲಿ ಟ್ರಾಫಿಕ್ ದಂಡದ ಮೊತ್ತ ಇಳಿಯುವುದು ಅನುಮಾನ

    ಕರ್ನಾಟಕದಲ್ಲಿ ಟ್ರಾಫಿಕ್ ದಂಡದ ಮೊತ್ತ ಇಳಿಯುವುದು ಅನುಮಾನ

    – ಕಾನೂನು ಸಚಿವಾಲಯದ ಮೊರೆ ಹೋದ ಕೇಂದ್ರ ಸಾರಿಗೆ ಇಲಾಖೆ
    – ಬಿಜೆಪಿ ರಾಜ್ಯಗಳಿಂದ ಭಾರೀ ವಿರೋಧ

    ನವದೆಹಲಿ: ಹೊಸ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಒಂದೊಂದು ರಾಜ್ಯಗಳು ಕಡಿಮೆ ಮಾಡುತ್ತಿರುವ ಬೆನ್ನಲ್ಲೇ ಕೇಂದ್ರ ಸಾರಿಗೆ ಸಚಿವಾಲಯ ಈಗ ಕಾನೂನು ಸಚಿವಾಲಯದ ಮೊರೆ ಹೋಗಿದೆ.

    ಹೌದು, ಆರಂಭದಲ್ಲಿ ಗುಜರಾತ್ ಸರ್ಕಾರ ಇಳಿಸಿದ ಬೆನ್ನಲ್ಲೇ ಉತ್ತರಾಖಂಡ್ ಸರ್ಕಾರ ಸಹ ಇಳಿಕೆ ಮಾಡಿತ್ತು. ಇದರ ಬೆನ್ನಲ್ಲೇ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ಬಿಜೆಪಿ ರಾಜ್ಯಗಳು ಸಹ ದರವನ್ನು ಇಳಿಕೆ ಮಾಡಲು ಚಿಂತಿಸಿವೆ. ಹೀಗಾಗಿ ಸಾರಿಗೆ ಸಚಿವಾಲಯ ತಿದ್ದುಪಡಿಯಾದ ಕಾಯ್ದೆಯಲ್ಲಿ ನಿಗದಿಯಾದ ದಂಡದ ಪ್ರಮಾಣಕ್ಕಿಂತಲೂ ಕಡಿಮೆ ಮೊತ್ತದ ದಂಡವನ್ನು ವಿಧಿಸುತ್ತಿರುವ ರಾಜ್ಯಗಳ ನಡೆಯ ಬಗ್ಗೆ ಕಾನೂನು ಸಚಿವಾಲಯದ ಜೊತೆ ಸಲಹೆ ಕೇಳಿದೆ.

    ಈ ಸಂಬಂಧ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ದಂಡ ಇಳಿಸುವ ಬಗ್ಗೆ ಕಾನೂನು ಸಚಿವಾಲಯದ ಜೊತೆ ಸಲಹೆ ಕೇಳಲಾಗಿದೆ. ಸಚಿವಾಲಯದ ಉತ್ತರ ಬಂದ ನಂತರ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ರಾಜ್ಯಗಳಿಗೆ ಇದೆ ಅಧಿಕಾರ:
    ಭಾರತದ ಸಂವಿಧಾನದ 7ನೇ ಶೆಡ್ಯೂಲ್ ಪ್ರಕಾರ ಮೂರು ಪ್ರತ್ಯೇಕ ಪಟ್ಟಿಯನ್ನು ರಚಿಸಿ ವಿಷಯಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ. ರಕ್ಷಣೆ, ವಿದೇಶಾಂಗ ಸೇರಿದಂತೆ 97 ವಿಷಯಗಳು ಕೇಂದ್ರ ಪಟ್ಟಿಯಲ್ಲಿ ಬಂದರೆ ಪೊಲೀಸ್, ರಾಜ್ಯ ಲೋಕಸಭಾ ಆಯೋಗ ಸೇರಿದಂತೆ 61 ವಿಷಯಗಳು ರಾಜ್ಯ ಪಟ್ಟಿಯಲ್ಲಿ ಹಂಚಿಕೆಯಾಗಿದೆ. ಆದರೆ ರಸ್ತೆ ಸಾರಿಗೆ, ಶಿಕ್ಷಣ, ಅರಣ್ಯದಂತಹ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

    ಸಮವರ್ತಿ ಪಟ್ಟಿಯಲ್ಲಿ ಸ್ಥಾನ ಪಡೆದ ವಿಷಯಗಳ ಮೇಲೆ ಅಧಿಕಾರ ಚಲಾಯಿಸುವ ಸಮಾನ ಹಕ್ಕು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಂವಿಧಾನ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರಗಳು ಈ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ವಿಧಿಸಿದ ದಂಡದ ದರಕ್ಕಿಂತ ಕಡಿಮೆ ದರವನ್ನು ವಿಧಿಸುತ್ತಿದೆ. ಇದನ್ನೂ ಓದಿ: ನಾಯಕರ ‘ದಂಡ’ಯಾತ್ರೆ – ಟ್ರಾಫಿಕ್ ನಿಯಮಕ್ಕೆ ಸಿಎಂ ಡೋಂಟ್‍ಕೇರ್

    ಕೆಂದ್ರಕ್ಕೆ ಸಿಟ್ಟು?
    ಬಿಜೆಪಿ ರಾಜ್ಯಗಳೇ ಈಗ ದಂಡದ ದರ ಇಳಿಸುತ್ತಿರುವ ವಿಚಾರ ಕೇಂದ್ರದ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಒಂದೊಂದು ರಾಜ್ಯ ಸರ್ಕಾರಗಳು ಒಂದೊಂದು ದರವನ್ನು ನಿಗದಿ ಪಡಿಸಿದರೆ ಕಾಯ್ದೆಯ ಮೂಲ ಸ್ವರೂಪವೇ ಬದಲಾಗುತ್ತದೆ. ಹೀಗಾಗಿ ಕಾನೂನು ಸಚಿವಾಲಯದ ಮೊರೆ ಹೋಗಿದೆ. ಆದರೆ ಅನಿವಾರ್ಯ ಸಂದರ್ಭದಲ್ಲಿ ರಾಜ್ಯಗಳ ಆದೇಶದ ವಿರುದ್ಧ ಕೇಂದ್ರದ್ದೇ ಮೇಲುಗೈ ಆಗಲಿದ್ದು ಅಂತಿಮವಾಗಿ ಕೇಂದ್ರ ಸರ್ಕಾರದ ಆದೇಶವನ್ನೇ ಪಾಲಿಸಬೇಕಾಗುತ್ತದೆ.

    ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ದಂಡದ ಮೊತ್ತ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದೆ.

    ಜೀವ ಮುಖ್ಯವಲ್ಲವೇ?
    ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಶೇ.65 ರಷ್ಟು 18-35 ವಯಸ್ಸಿನವರೇ ಇದ್ದಾರೆ. ಅಷ್ಟೇ ಅಲ್ಲದೆ ಪ್ರತಿ ವರ್ಷ 2 ಲಕ್ಷ ಜನರು ರಸ್ತೆ ಅಪಘಾತಗಳಿಂದ ಅಂಗವಿಕಲರಾಗುತ್ತಿದ್ದಾರೆ. ಹೀಗಾಗಿ ಕಠಿಣ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ಗಡ್ಕರಿ ಸಮರ್ಥಿಸಿಕೊಂಡಿದ್ದಾರೆ.

    ದಂಡದ ಮೊತ್ತ ದುಬಾರಿ ಆಗಿಲ್ಲವೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಜೀವಕ್ಕಿಂತ ಹಣ ಮುಖ್ಯವೇ ಎಂದು ಮರು ಪ್ರಶ್ನೆ ಹಾಕಿದ ಗಡ್ಕರಿ, ಯುವಕರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಲು ಹಾಗೂ ಅಪಘಾತದಿಂದ ಅಂಗವಿಕಲತೆಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹೊಸ ಟ್ರಾಫಿಕ್ ದಂಡವನ್ನು ಜಾರಿಗೆ ತರಲಾಗಿದೆ. ದಂಡವನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎನ್ನುವುದು ಆಯಾ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಸಂಗ್ರಹವಾದ ದಂಡದ ಮೊತ್ತವು ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಟ್ರಾಫಿಕ್ ದಂಡ ಏರಿಕೆ ಉದ್ದೇಶ ಜನರ ಜೀವ ರಕ್ಷಣೆಗಾಗಿಯೇ ಹೊರತು ಸರ್ಕಾರಕ್ಕೆ ಆದಾಯ ತರುವುದಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದ್ಯ ಸೇವಿಸಿ ಕಾರು ಓಡಿಸಿ ಆಟೋಗೆ ಡಿಕ್ಕಿ ಹೊಡೆದ ಆರ್‌ಟಿಓ ಇನ್ಸ್‌ಪೆಕ್ಟರ್

    ಸಂಚಾರ ನಿಯಮ ಉಲ್ಲಂಘಿಸುವ ಚಾಲಕರು, ಸವಾರರಿಗೆ 30 ವರ್ಷಗಳ ಹಿಂದೆ 100 ರೂ. ದಂಡ ವಿಧಿಸಲಾಗುತ್ತಿತ್ತು. ಆಗ 100 ರೂ.ಗೆ ಇದ್ದ ಮೌಲ್ಯವು ಈಗ ಎಷ್ಟಾಗಬಹುದು ನೀವೇ ಯೋಚನೆ ಮಾಡಿ. ಸಂಚಾರ ನಿಮಯವನ್ನು ಸರಿಯಾಗಿ ಜನರು ಪಾಲಿಸಿದರೆ ಯಾವುದೇ ದಂಡ ಪಾವತಿಸುವ ಅಗತ್ಯವಿರಲ್ಲ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸುತ್ತಿದ್ದ ದಂಡದ ಮೊತ್ತವು ಹೆಚ್ಚಾದ ಬಳಿಕ ಅನೇಕ ಬದಲಾವಣೆಗಳಾಗಿವೆ. ಅನೇಕರು ಲೈಸನ್ಸ್, ಹೆಲ್ಮೆಟ್ ಪಡೆಯುತ್ತಿದ್ದಾರೆ. ತಮ್ಮ ವಾಹನಗಳ ದಾಖಲೆಗಳನ್ನು ಸರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿದ್ದಾರೆ.

  • ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ರಾಜ್ಯ ರಾಜಕಾರಣದಲ್ಲಿ ಸದ್ಯ ಫೋನ್ ಕದ್ದಾಲಿಕೆ(ಫೋನ್ ಟ್ಯಾಪಿಂಗ್) ಕುರಿತ ಆರೋಪ ಪ್ರತ್ಯಾರೋಪ ಹೆಚ್ಚಾಗಿದ್ದು, ಮೈತ್ರಿ ಸರ್ಕಾರದ ಮೇಲೆ ಬಿಜೆಪಿ ಫೋನ್ ಕದ್ದಾಲಿಕೆ ಕುರಿತ ಗಂಭೀರ ಆರೋಪ ಮಾಡಿದೆ. ಫೋನ್ ಕದ್ದಾಲಿಕೆ ಆರೋಪ ಬರುವುದು ಇದೇ ಮೊದಲೆನಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧವೂ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಲ್ಲಿ ಫೋನ್ ಕದ್ದಾಲಿಕೆ ಎಂದರೇನು? ಯಾರು ಮಾಡಬಹುದು? ಹೇಗೆ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ವಿವರಿಸಲಾಗಿದೆ.

    ಕ್ರಿಮಿನಲ್ ಕೃತ್ಯ ಎಸಗಲಿರುವವರನ್ನು, ಎಸಗಿದವರನ್ನು ಎಲ್ಲೇ ಅಡಗಿದ್ದರೂ ಪತ್ತೆ ಹಚ್ಚಿ ಅವರನ್ನು ಪತ್ತೆ ಹಚ್ಚಲು ಫೋನ್ ಕದ್ದಾಲಿಕೆ ಮಾಡಲಾಗುತ್ತದೆ. ಕಾನೂನಿನ ಅನ್ವಯ ಸರ್ಕಾರದ ಕೆಲವೇ ಇಲಾಖೆಗಳಿಗೆ ಮಾತ್ರ ಫೋನ್ ಕದ್ದಾಲಿಕೆ ಮಾಡಲು ಅವಕಾಶವಿದ್ದು, ಈಗ ಕೆಲವು ಸಮಾಜ ಘಾತುಕ ಶಕ್ತಿಗಳು ಫೋನ್ ಟ್ಯಾಪಿಂಗ್ ಮಾಡಲು ಆರಂಭಿಸಿವೆ. ಇಂದು ರಾಜಕಾರಣಿಗಳು, ಗಣ್ಯ ವ್ಯಕ್ತಿಗಳ ಫೋನ್ ಟ್ಯಾಪಿಂಗ್ ಹೆಚ್ಚಾಗುತ್ತಿದ್ದು, ಅಡಳಿತ ಪಕ್ಷದ ವಿರುದ್ಧ ವಿರೋಧಿ ಪಕ್ಷಗಳು ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿದೆ.

     

    ಏನಿದು ಫೋನ್ ಪದ್ದಾಲಿಕೆ?
    ವಿಶೇಷ ಎಲೆಕ್ಟ್ರಾನಿಕ್ ಸಾಧನಗಳ ನೆರವಿನಿಂದ ಇಬ್ಬರು ಮಾತನಾಡುತ್ತಿರುವುದನ್ನು ಮೂರನೇಯವರು ಕದ್ದಾಲಿಸುವುದು ಫೋನ್ ಕದ್ದಾಲಿಕೆ. ಫೋನ್ ಕದ್ದಾಲಿಕೆಗೆ ಕಾನೂನಿನಡಿ ಅವಕಾಶವೂ ಇದೆ. ಆದರೆ ಇದಕ್ಕೆ ನಿರ್ದಿಷ್ಟ ರೀತಿ ನೀತಿಗಳಿವೆ. ಅದು ಹೊರತಾಗಿ ಕದ್ದಾಲಿಸಿದರೆ ಅದು ಕಾನೂನಿನ ಅಡಿ ಅಪರಾಧವಾಗುತ್ತದೆ.

    ಆಧುನಿಕ ತಂತ್ರಜ್ಞಾನ ಬೆಳೆದಂತೆ ಫೋನ್ ಕದ್ದಾಲಿಕೆ ಮಾಡಲೆಂದೇ ಹೊಸ ಸಾಧನಗಳು ತಯಾರಾಗಿವೆ. ಅಲ್ಲದೇ ದೇಶ ವಿದೇಶದಿಂದ ಫೋನ್ ಕದ್ದಾಲಿಕೆ ಮಾಡುವ ಸಾಧನಗಳು ಅಕ್ರಮವಾಗಿ ದೇಶದೊಳಗೆ ರವಾನಿಸುವ ಜಾಲವೂ ಹುಟ್ಟಿಕೊಂಡಿದೆ. ತಜ್ಞರ ಪ್ರಕಾರ ಈ ಸಾಧನಗಳು ಸುಮಾರು ಎರಡು ಕಿ.ಮೀ. ದೂರದ ವರೆಗಿನ ವ್ಯಕ್ತಿಗಳ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ.

    ಯಾರಿಗೆ ಅನುಮತಿ ಇದೆ?
    ಸಮಾಜ ಘಾತುಕ ಶಕ್ತಿಗಳ ಚಲನವಲನ, ಕ್ರಿಮಿನಲ್ ಸಂಚು, ದೇಶದ, ಗಣ್ಯರ ವಿರುದ್ಧ ದಾಳಿಯಂತಹ ಚಟುವಟಿಕೆಗಳನ್ನು ತಡೆಯಲು ಗುಪ್ತಚರ ಸಂಸ್ಥೆಗಳು ಫೋನ್ ಕದ್ದಾಲಿಕೆ ಮಾಡುತ್ತವೆ. ಸಿಬಿಐ, ಗುಪ್ತಚರ ಇಲಾಖೆ, ಕಂದಾಯ ಗುಪ್ತಚರ, ಮಾದಕವಸ್ತು ನಿಯಂತ್ರಣ ದಳ, ಆದಾಯ ತೆರಿಗೆ ಇಲಾಖೆ ಮತ್ತು ಪೋಲಿಸ್ ಇಲಾಖೆ ಕದ್ದಾಲಿಕೆಯನ್ನು ಕಾನೂನಿನ ಅಡಿ ಮಾಡಬಹುದು. ಫೋನ್ ಕದ್ದಾಲಿಸಲು ಉಪಗ್ರಹ ಆಧಾರಿತ ವ್ಯವಸ್ಥೆಗಳು, ಟೆಲಿಫೋನ್ ಎಕ್ಸ್ ಚೇಂಜ್‍ನ ನೆರವಿನೊಂದಿಗೆ ಪ್ರತ್ಯೇಕ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಮೂಲಕ ಕದ್ದಾಲಿಕೆ ಮಾಡಲಾಗುತ್ತದೆ.

    ನಿಯಮ ಏನು ಹೇಳುತ್ತೆ: 1885ರ ಇಂಡಿಯನ್ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 5 (2)ರಲ್ಲಿ 419ನೇ ಮತ್ತು 419ಎ ನಿಬಂಧನೆಗಳಲ್ಲಿ ಫೋನ್ ಕರೆಗಳ ಮಾಹಿತಿ ಪಡೆಯುವ, ಕೇಳುವ ಬಗ್ಗೆ ಹೇಳಲಾಗಿದೆ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ, ಭದ್ರತೆಗೆ ತೊಂದರೆಯಾಗುವ ವಿಚಾರಗಳಲ್ಲಿ ಫೋನ್ ಕದ್ದಾಲಿಕೆಗೆ ಅವಕಾಶವಿದ್ದು ಕ್ಯಾಬಿನೆಟ್ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ ಈ ಬಗ್ಗೆ ನಿರ್ಧಾರ ಕೈಗೊಂಡು, ಗೃಹ ಇಲಾಖೆಗೆ ಮಾಹಿತಿ ನೀಡಬೇಕು. ಈ ಬಗ್ಗೆ ಗೃಹ ಇಲಾಖೆ 2 ತಿಂಗಳೊಳಗೆ ಪರಿಶೀಲನೆ ನಡೆಸಿ ತೀರ್ಮಾನಿಸಬೇಕು. ಒಂದು ಬಾರಿ ಅನುಮತಿ ನೀಡಿದರೆ ಅದು 6 ತಿಂಗಳ ಅವಧಿಯದ್ದಾಗಿರುತ್ತದೆ. ಹೀಗೆ ಕದ್ದಾಲಿಕೆ ವೇಳೆ ಪಡೆದ ಮಾಹಿತಿಗಳನ್ನು ಬಳಸಿ 2 ತಿಂಗಳೊಳಗೆ ಅವುಗಳನ್ನು ನಾಶಪಡಿಸಬೇಕು. ಇದು ಹೊರತಾಗಿ ಕೋರ್ಟ್ ನಿರ್ದೇಶನದ ಮೇರೆಗೆ ಫೋನ್ ಕದ್ದಾಲಿಕೆಗೆ ಅವಕಾಶವಿದೆ.

    ಒಂದೊಮ್ಮೆ ಫೋನ್ ಕದ್ದಾಲಿಕೆಯಾದರೆ ವ್ಯಕ್ತಿಯ ಖಾಸಗಿ ತನಕ್ಕೆ ಧಕ್ಕೆ ತಂದದ್ದಕ್ಕಾಗಿ ಆತ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಬಹುದು. ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಬಹುದು. ಅಕ್ರಮ ಕದ್ದಾಲಿಕೆ ವಿಚಾರದ ಬಗ್ಗೆ ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆ26(ಬಿ) ಅಡಿಯಲ್ಲಿ ಕೋರ್ಟ್‍ಗೂ ದೂರು ನೀಡಬಹುದು. ಒಂದು ವೇಳೆ ಕದ್ದಾಲಿಸಿದ್ದು ಸಾಬೀತಾದರೆ ಅಪರಾಧಿಗೆ 3 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv