Tag: left

  • ಹೌದು, ನಾವು ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತವೆ – ಟ್ವಿಟ್ಟರ್‌ ಉದ್ಯೋಗಿಯ ವೀಡಿಯೋ ವೈರಲ್‌

    ಹೌದು, ನಾವು ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತವೆ – ಟ್ವಿಟ್ಟರ್‌ ಉದ್ಯೋಗಿಯ ವೀಡಿಯೋ ವೈರಲ್‌

    ವಾಷಿಂಗ್ಟನ್‌: ಟ್ವಿಟ್ಟರ್‌ ಎಡಪಂಥೀಯ ಚಿಂತನೆಗಳನ್ನು ಬೆಂಬಲಿಸುತ್ತದೆ ಎಂದು ಕಂಪನಿಯ ಹಿರಿಯ ಎಂಜಿನಿಯರ್‌ ಹೇಳಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಅಮೆರಿಕದ ಬಲಪಂಥಿಯ ಸಂಘಟನೆ Project Veritas ಕುಟುಕು ಕಾರ್ಯಾಚರಣೆ ಮಾಡಿರುವ ವೀಡಿಯೋವನ್ನು ರಿಲೀಸ್‌ ಮಾಡಿದೆ. ಉದ್ಯೋಗಿ ಸಿರು ಮುರುಗೇಸನ್‌ ಕಂಪನಿ ಎಡಪಂಥೀಯ ಧೋರಣೆಯ ಬಗ್ಗೆ ಮಾತನಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

    https://twitter.com/Timcast/status/1526336405663776768

    ಟ್ವಿಟ್ಟರ್‌ ಬಲಪಂಥೀಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತದೆ. ಎಡಪಂಥೀಯರ ಪರ ಬಗ್ಗೆ ಹೆಚ್ಚಿನ ಒಲವು ಹೊಂದಿದೆ ಎಂಬ ಆರೋಪ ಮೊದಲಿನಿಂದಲೂ ಬರುತ್ತಿತ್ತು. ಈಗ ಈ ವೀಡಿಯೋ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ #TwitterExposed ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.  ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಕಂಪನಿ ಇಲ್ಲ – ಇಂಡೋನೇಷ್ಯಾದಲ್ಲಿ ಮಸ್ಕ್ ಫೀಲ್ಡ್ ವಿಸಿಟ್

    ವೀಡಿಯೋದಲ್ಲಿ ಏನಿದೆ?
    ಟ್ವಿಟ್ಟರ್‌ ಎಡಪಂಥದ ಪರ ಹೆಚ್ಚಿನ ಒಲವು ಹೊಂದಿದೆ. ಟ್ವಿಟ್ಟರ್‌ಗೆ ಸೇರಿದ ಬಳಿಕ ಉದ್ಯೋಗಿಗಳು ತಮ್ಮ ಚಿಂತನೆಯನ್ನು ಬದಲಾಯಿಸಿ ಹೊಂದಿಕೊಳ್ಳುತ್ತರೆ. ಬಲಪಂಥೀಯ ವ್ಯಕ್ತಿಗಳನ್ನು ನಾವು ಸೆನ್ಸಾರ್‌ ಮಾಡುತ್ತೇವೆ.

    ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಖರೀದಿಸದಂತೆ ಉದ್ಯೋಗಿಗಳು ತಡೆದಿದ್ದರು. ಮಸ್ಕ್‌ ಬಂಡವಾಳಶಾಹಿ ವ್ಯಕ್ತಿ. ನಾವು ನಿಜವಾಗಿಯೂ ಬಂಡವಾಳಶಾಹಿಗಳಂತೆ ಕೆಲಸ ಮಾಡುತ್ತಿಲ್ಲ. ನಾವು ಸಮಾಜವಾದಿಗಳು ಎಂದು ಸಿರು ಮುರುಗೇಸನ್‌ ಹೇಳಿದ್ದಾರೆ.

    ಈ ವೀಡಿಯೋ ರಿಲೀಸ್‌ ಆದ ಬಳಿಕ ಟ್ವಿಟ್ಟರ್‌ ಕಂಪನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  • ಸಮಾಜವಾದದ ತೊಟ್ಟಿಲಲ್ಲಿ ಈಗ ಎಡ ಬಲ ಪೈಪೋಟಿ ಬಲು ಜೋರು

    ಸಮಾಜವಾದದ ತೊಟ್ಟಿಲಲ್ಲಿ ಈಗ ಎಡ ಬಲ ಪೈಪೋಟಿ ಬಲು ಜೋರು

    ಸುಕೇಶ್ ಡಿ.ಎಚ್
    ದೊಂದು ಕಾಲವಿತ್ತು ರಾಜ್ಯ ರಾಜಕಾರಣದಲ್ಲಿ ಸಮಾಜವಾದಿಗಳ ಅಬ್ಬರ ಜೋರಿತ್ತು. ಕಾಕತಾಳೀಯ ಎಂಬಂತೆ ಘಟಾನುಘಟಿ ಸಮಾಜವಾದಿ ನಾಯಕರು ಮಲೆನಾಡಿನ ಮಡಿಲಿಂದ ಬಂದು ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದ್ದರು. ಕಡಿದಾಳು ಮಂಜಪ್ಪ, ಶಾಂತವೀರ ಗೋಪಾಲಗೌಡರು, ವೀರಪ್ಪಗೌಡರು, ಜೆ.ಹೆಚ್.ಪಟೇಲ್, ಹೆಚ್.ಜಿ.ಗೋವಿಂದೇಗೌಡರು, ಕಾಗೋಡು ತಿಮ್ಮಪ್ಪ, ಸಾರೆಕೊಪ್ಪ ಬಂಗಾರಪ್ಪ… ಹೀಗೆ ಸಾಲು ಸಾಲು ಸಮಾಜವಾದಿ ನಾಯಕರನ್ನು ಕೊಟ್ಟ ಮಲೆನಾಡು ಕಳೆದ ಎರಡು ದಶಕಗಳಲ್ಲಿ ಬೇರೆಯದೇ ದಿಕ್ಕಿಗೆ ತಿರುಗಿಕೊಂಡಂತಿದೆ.

    ಪಾಕಿಸ್ತಾನ್ ಜಿಂದಾಬಾದ್ ಅನ್ನೋ ಒಂದೇ ಒಂದು ಕೂಗು ಈಗ ಎಲ್ಲರ ಚಿತ್ತ ಮಲೆನಾಡಿನತ್ತ ಹರಿಯುವಂತೆ ಮಾಡಿದೆ. ಅಮೂಲ್ಯ ಲಿಯೋನಾ ಅನ್ನೋ ಎಳಸು ಹುಡುಗಿಯೊಬ್ಬಳ ದೇಶ ದ್ರೋಹದ ಕೆಲಸ ಅವಳ ಮೂಲ ಯಾವುದು ಅನ್ನೋ ಹುಡುಕಾಟದೊಂದಿಗೆ ಮತ್ತೆ ಮಲೆನಾಡಿನ ಹೆಬ್ಬಾಗಿಲಿಗೆ ಬಂದು ನಿಂತಿದೆ. ಹಾಗೆ ನೋಡಿದರೆ ಕಳೆದ ಎರಡು ದಶಕದಲ್ಲಿ ಎಡ ಪಂಥೀಯರು ಹಾಗೂ ಬಲ ಪಂಥೀಯರು ಇಬ್ಬರ ಪಾಲಿಗೂ ಮಲೆನಾಡು ಸ್ವರ್ಗವಾಗಿ ಕಂಡಿರುವುದು, ಸಮಾಜವಾದದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ ಕಾಣುತ್ತಿದೆ.

    ಮಲೆನಾಡ ಮಡಿಲಲ್ಲಿ ನಕ್ಸಲರ ಗುಂಡಿನ ಸದ್ದು ಬಲಪಂಥೀಯರ ದತ್ತ ಪೀಠದ ಕೂಗು ಹೆಚ್ಚು ಕಡಿಮೆ ಒಟ್ಟೊಟ್ಟಿಗೆ ಕೇಳಿಬಂದಿತ್ತು. ಇದೆಲ್ಲದಕ್ಕೆ ಕಳಶವಿಟ್ಟಂತೆ ಮಲೆನಾಡಿನ ದಟ್ಟ ಕಾನನ ಭಯೋತ್ಪಾದಕರ ಶಸ್ತ್ರಾಭ್ಯಾಸಕ್ಕೆ ವೇದಿಕೆಯಾಗಿದೆ ಅನ್ನೋ ಅನುಮಾನದ ನಡುವೆಯೇ ಕೆಲವೇ ವರ್ಷದ ಹಿಂದೆ ಕೊಪ್ಪ ಬಳಿಯ ಹಳ್ಳಿಯಲ್ಲಿ ಭಯೋತ್ಪಾದಕರ ಬಂಧನವು ಆಗಿ ಹೋಯ್ತು. ಬೆಚ್ಚನೆ ಪರಿಸರದ ಮಧ್ಯೆ ಸಮಾಜವಾದದ ಕನವರಿಕೆಯಲ್ಲಿದ್ದ ಮಲೆನಾಡಿಗರಿಗೆ ನಕ್ಸಲ್ ಚಳುವಳಿ ಎಂದರೇನು? ಭಗವಾಧ್ವಜ ಅಂದರೇನು ಅನ್ನೋ ಕಲ್ಪನೆಯೂ ಇರಲಿಲ್ಲ. ಆದರೆ 2000ದ ಸುಮಾರಿಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ನಾಲ್ಕು ಜಿಲ್ಲೆ ಗಡಿಭಾಗವಾದ ಆಗುಂಬೆ ಸುತ್ತಮುತ್ತಲಿನ ದಟ್ಟ ಕಾನನದ ನಡುವೆ ನಕ್ಸಲರ ಶಸ್ತ್ರಾಭ್ಯಾಸ ಶುರುವಾಗಿತ್ತು. ಅದೇ ನಾಲ್ಕು ಜಿಲ್ಲೆಗಳನ್ನ ಗುರಿಯಾಗಿಸಿಕೊಂಡು ಚಿಕ್ಕಮಗಳೂರಿನ ಬಾಬಾ ಬುಡಾನ್ ಗಿರಿಯಲ್ಲಿ ಬಲ ಪಂಥೀಯರ ದತ್ತ ಮಾಲಾ ಅಭಿಯಾನ ಅದೇ 2000 ಇಸವಿಯ ಆಜುಬಾಜಲ್ಲಿ ದೊಡ್ಡ ಪ್ರಮಾಣದಲ್ಲಿ ಚಾಲ್ತಿಗೆ ಬಂತು. ಪರಸ್ಪರ ವಿರುದ್ಧವಾದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಎಡ ಹಾಗೂ ಬಲ ಎರಡು ಪಂಥದವರು ತಮ್ಮದೇ ಆದ ರೀತಿಯಲ್ಲಿ ಮಲೆನಾಡನ್ನು ಆವರಿಸತೊಡಗಿದರು.

    ಪಶ್ಚಿಮ ಘಟ್ಟದ ಕಾಡಲ್ಲಿ ಸುಲಭವಾಗಿ ರಕ್ಷಣೆ ಪಡೆಯಬಹುದು ಅನ್ನೋ ಒಂದೇ ಒಂದು ಕಾರಣ ಹೊರತುಪಡಿಸಿದರೆ ನಕ್ಸಲರಿಗೆ ಮಲೆನಾಡಿನ ಕಾನನ ಪ್ರವೇಶಕ್ಕೆ ಬೇರೆ ಯಾವುದೇ ಕಾರಣ ಇರಲಿಲ್ಲ. ಯಾವುದೇ ರೀತಿಯ ನೆರವು ಮಲೆನಾಡಿಗರಿಂದ ನಿರೀಕ್ಷೆ ಮಾಡುವಂತಿರಲಿಲ್ಲ. ಜಮೀನ್ದಾರಿಕೆ, ಪಾಳೆಗಾರಿಕೆ ಯಾವುದೂ ಮಲೆನಾಡಿನ ಸಮಸ್ಯೆಯೇ ಆಗಿರಲಿಲ್ಲ. ಕಾಡಿನಷ್ಟೇ ತಣ್ಣಗೆ ಅಲ್ಲಿನ ರೈತಾಪಿ ಜನ ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಂಡವರು. ಕಾಡು ಬಿಟ್ಟರೆ ಬೇರೆ ಯಾವ ನೆರವು ಸಿಗಲ್ಲ ಅನ್ನೋದು ಖಚಿತವಾದರೂ ಅಲ್ಲಲ್ಲಿ ಗುಂಡಿನ ಸದ್ದು ಮಾಡಿದ ನಕ್ಸಲರು ಕೊನೆಗೆ ತಾವು ಗುಂಡೇಟು ತಿಂದು ಮಲಗಿದರು. ಮಲೆನಾಡಿನಲ್ಲಿ ಎಡಪಂಥೀಯ ರಕ್ತ ಕ್ರಾಂತಿಯ ಕನಸು ಬಹುತೇಕ ಮುಗಿದ ಅಧ್ಯಾಯ. ಅದರ ಪಳೆಯುಳಿಕೆಗಳು ಇದೇ ಅಮೂಲ್ಯ ಲಿಯೋನಳಂತಹ ಶನಿ ಸಂತಾನಗಳು ಕಂಡ ಕಂಡ ವೇದಿಕೆಯಲ್ಲಿ ಮೈಕು ಹಿಡಿದು ಮಾನಸಿಕ ಅಸ್ವಸ್ಥರಂತೆ ಕೂಗತೊಡಗಿದ್ದಾರೆ.

    ಹೆಚ್ಚು ಕಡಿಮೆ ಅದೇ ಸಂದರ್ಭದಲ್ಲಿ ಬಾವುಟ ಕಟ್ಟಲು ಹುಡುಗರಿಲ್ಲದ ಸ್ಥಿತಿಯಲ್ಲಿ ದತ್ತ ಪೀಠದ ಹುಚ್ಚು ಎಬ್ಬಿಸಿದ ಬಜರಂಗದಳ ಅನ್ನೋ ಬಲ ಪಂಥೀಯ ಸಂಘಟನೆ ಎಬ್ಬಿಸಿದ ಹವಾಗೆ 4 ಜಿಲ್ಲೆಗಳು ಕೇವಲ 5 ವರ್ಷದಲ್ಲೆ ಕೇಸರಿಮಯವಾಗಿದ್ದು ಸುಳ್ಳಲ್ಲ. ಅದರ ನೇರ ಲಾಭ ಸಿಕ್ಕಿದ್ದು ಬಿಜೆಪಿಗೆ. ಆ ಎಲ್ಲಾ ಘಟನೆಗಳು ಈಗ ಇತಿಹಾಸ. ಆದರೆ ಒಮ್ಮೆ ದತ್ತ ಪೀಠದ ವಿವಾದವನ್ನು ಇಟ್ಟುಕೊಂಡು ಹಾರಿಸಿದ ಕೇಸರಿ ಬಾವುಟ ದಿನ ಕಳೆದಂತೆ ಸಾಕಷ್ಟು ಎತ್ತರಕ್ಕೆ ಹಾರತೊಡಗಿತು. ಸಹಜವಾಗಿಯೇ ಮಲೆನಾಡು, ಕರಾವಳಿ ಭಾಗದಲ್ಲಿ ಬೀಸಿದ ಗಾಳಿ ರಾಜ್ಯದ ಉದ್ದಗಲಕ್ಕೂ ಪಸರಿಸಿ ಇಡೀ ರಾಜ್ಯ ಬಿಜೆಪಿ ಮಯವಾಯ್ತು.

    ಕೇಸರಿ ಪತಾಕೆ ಹಾರಿಸಿದ ಬಲಪಂಥೀಯರ ವಿರುದ್ಧ ಸಹಜವಾಗಿಯೇ ಎಡ ಪಂಥೀಯರು, ಪ್ರಗತಿಪರರು ಧ್ವನಿ ಎತ್ತಲು ಮಲೆನಾಡಿನತ್ತ ಬಂದು ಎಡ ಹಾಗೂ ಬಲ ಕದನಕ್ಕೆ ಮತ್ತಷ್ಟು ಖದರು ತಂದುಕೊಟ್ಟರು. ಬಲಪಂಥೀಯ ಧರ್ಮಾಧಾರಿತ ರಾಜಕೀಯ ನಡೆಯನ್ನು ಟೀಕಿಸುವ ಭರದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಎಡಪಂಥೀಯ ನಾಯಕರು ಬಿಜೆಪಿಯ ಬೇರನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ ಎಡಬಿಡಂಗಿ ಅಂದುಕೊಂಡಿದ್ದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿಯನ್ನು ವಿರೋಧ ಮಾಡಲೇಬೇಕಾದ ಸಂಕಷ್ಟಕ್ಕೆ ಸಿಲುಕಿ ಎಡಪಂಥೀಯರ ಜೊತೆ ಕೈ ಜೋಡಿಸಿ ಕೈ ಸುಟ್ಟುಕೊಂಡಿತು. ಅಲ್ಲಿಗೆ ಸಮಾಜವಾದದ ತೊಟ್ಟಿಲಾದ ಮಲೆನಾಡಲ್ಲಿ ಸಮಾಜವಾದವಿರಲಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಯಾವ ಕುರುಹು ಕಾಣದೇ ಎಡಬಲ ಕದನವೇ ಜೋರಾಯಿತು.

    ಬಿಜೆಪಿ ತನ್ನನ್ನು ವಿರೋಧಿಸುವ, ಟೀಕಿಸುವ ಎಲ್ಲರು ಎಡಪಂಥೀಯರು ಅನ್ನೋ ಅಘೋಷಿತ ಕಲ್ಪನೆಯನ್ನು ಮಲೆನಾಡಿಗರ ಮನಸಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಬೇಕಾದ ಕಾಂಗ್ರೆಸ್ಸಿಗರು ಎಡಪಂಥೀಯ ಪ್ರತಿನಿಧಿಗಳಂತೆ ಏನೇನೋ ಬಡಬಡಾಯಿಸಿ ಹೇಸಿಗೆ ಮಾಡಿಕೊಳ್ಳತೊಡಗಿದ್ದಾರೆ. ಅಮೂಲ್ಯ ಲಿಯೋನಾಳಂತಹ ನೂರಾರು ತಲೆ ತಿರುಕ ಸೈದ್ಧಾಂತಿಕ ರಾಯಭಾರಿಗಳು ಮಲೆನಾಡಿನ ತೊಟ್ಟಿಲಲ್ಲಿ ಯುದ್ಧ ತಾಯಾರಿ ನಡೆಸಿದರೆ. ಅತ್ತ ಬಲ ಪಂಥೀಯರ ಬತ್ತಳಿಕೆಯಲ್ಲೂ ಸಮಾಜದ ಸ್ವಾಸ್ಥ್ಯಕ್ಕೆ ಬಾಯಲ್ಲೇ ಬೆಂಕಿ ಹಚ್ಚಬಲ್ಲಂತಹ ಹುಚ್ಚು ಹುಡುಗರ ಗುಂಪೇ ಸಿದ್ಧವಾಗಿ ನಿಂತಿದೆ.

    ಹಾಗೇ ನೋಡಿದರೆ ಶಾಂತ ಸ್ವಭಾವದ ಮಲೆನಾಡಿಗರ ಮನಸ್ಸಿನ ಆಳದಲ್ಲಿ ಸಮಾಜವಾದದ ಬೇರು ಎಲ್ಲೋ ಟಿಸಿಲೊಡೆಯಲು ಕಾಯುತ್ತಿದೆ. ರಾಜಕೀಯ ಹೊರತಾಗಿ ಸಾಮಾಜಿಕ ಹಾಗೂ ಆರ್ಥಿಕವಾದ ಸಾಕಷ್ಟು ಸಮಸ್ಯೆಗಳು ಮಲೆನಾಡಿಗರ ನೆಮ್ಮದಿ ಕೆಡಿಸಿದೆ. ಸಾಂಪ್ರದಾಯಿಕ ಬೆಳೆ ಅಡಿಕೆಗೆ ಬಂದ ಹಳದಿ ಎಲೆ ಹಾಗೂ ಬೇರು ಹುಳದ ರೋಗ ಮಲೆನಾಡಿಗರ ಅಸ್ತಿತ್ವವನ್ನೆ ಅಲ್ಲಾಡಿಸತೊಡಗಿದೆ. ಒತ್ತುವರಿ ಸಮಸ್ಯೆ, ಹುಲಿಯೋಜನೆ, ಕಸ್ತೂರಿ ರಂಗನ್ ವರದಿ… ಹೀಗೆ ಸಾಲು ಸಾಲು ಸಮಸ್ಯೆಗಳು ಮಲೆನಾಡಿಗರ ಅಸ್ತಿತ್ವವನ್ನೆ ಅಲ್ಲಾಡಿಸುತ್ತಿದ್ದು, ಎಡ ಬಲ ಬಿಟ್ಟು ಭವಿಷ್ಯದ ಚಿಂತೆ ಮಾಡಬೇಕಿದ್ದ ಯುವ ಸಮುದಾಯದ ಕೈಯಲ್ಲಿ ಮೊಬೈಲಿದೆ, ಫ್ರೀ ಇಂಟರ್ ನೆಟ್ ಪ್ಯಾಕೇಜ್ ಇದೆ. ಖಾಲಿ ಕುಳಿತ ಹುಡುಗರ ತಲೆಗೆ ಸೈದ್ಧಾಂತಿಕ ವಿಷ ತುಂಬಲು ತಲೆ ಮಾಸಿದ ನಾಯಕರುಗಳಿದ್ದಾರೆ.

    ಕುಳಿತ ಮರ ಅಲ್ಲಾಡಿದರೂ ಪರವಾಗಿಲ್ಲ ಹಾರುವ ಮಂಗನಿಗೆ ಹೆಂಡ ಕುಡಿಸಿದರೆ ಎಂತ ಅಲ್ಲಾಡುವ ಮರವನ್ನಾದರೂ ಮಂಗ ಹಾರುತ್ತದೆ ಎಂಬಂತಾಗಿದೆ ಮಲೆನಾಡಿನ ಯುವಕರ ಸ್ಥಿತಿ. ಈ ಮಾನಸಿಕತೆ ಹಾಗೂ ಮಲೆನಾಡಿನಲ್ಲಿ ಕಳೆದ ಎರಡು ದಶಕದಲ್ಲಿ ತಲೆ ಎತ್ತಿದ ವಿಚಿತ್ರ ರಾಜಕೀಯ ಪ್ರಜ್ಞೆ ನಡುವೆಯೇ ಅಮೂಲ್ಯ ಲಿಯೋನಾಳಂತವರು ಹುಚ್ಚಾಟದ ಮಾತನಾಡಿ ದೇಶವೆ ಛೀ… ಥೂ… ಎನ್ನುವಂತೆ ಮಾಡಿದ್ದಾರೆ. ಇನ್ನು ಸಮಾಜವಾದದ ನೆಲದಿಂದ ಎಡ, ಬಲ ಬತ್ತಳಿಕೆಯಿಂದ ಯಾವ್ಯಾವ ಅಸ್ತ್ರಗಳು ಹೊರ ಬರುತ್ತೋ ಗೊತ್ತಿಲ್ಲ. ತಮ್ಮ ಅಸ್ತಿತ್ವವೇ ಅಲ್ಲಾಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಮಲೆನಾಡಿನ ಹುಡುಗ ಹುಡುಗಿಯರು ಸೈದ್ಧಾಂತಿಕ ಭ್ರಮೆಯಿಂದ ಹೊರ ಬರದಿದ್ದರೆ ಮುಂದೊಂದು ದಿನ ಸೈದ್ಧಾಂತಿಕ ನೆಲಗಟ್ಟಿನಲ್ಲೇ ನಿರಾಶ್ರಿತರ ಗಂಜಿ ಕೇಂದ್ರದ ಖಾಯಂ ಗಿರಿಕಿಗಳಾಗಬೇಕಾದ ಅನಿವಾರ್ಯತೆ ಸೃಷ್ಟಿಯಾದರೂ ಆಶ್ಚರ್ಯ ಪಡಬೇಕಿಲ್ಲ.

    [ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]

  • ಸಿಎಎ, ಎನ್​​ಆರ್​​ಸಿ ಹೋರಾಟ – ಕಾಂಗ್ರೆಸ್, ಎಡಪಕ್ಷಗಳಿಂದ  ಡರ್ಟಿ ಪಾಲಿಟಿಕ್ಸ್ : ಮಮತಾ

    ಸಿಎಎ, ಎನ್​​ಆರ್​​ಸಿ ಹೋರಾಟ – ಕಾಂಗ್ರೆಸ್, ಎಡಪಕ್ಷಗಳಿಂದ ಡರ್ಟಿ ಪಾಲಿಟಿಕ್ಸ್ : ಮಮತಾ

    ಕೋಲ್ಕತ್ತಾ: ಪೌರತ್ವ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಕರೆದಿರುವ ಸರ್ವ ಪಕ್ಷ ಸಭೆಗೆ ಟಿಎಂಸಿ ಭಾಗವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ದೆಹಲಿಯಲ್ಲಿ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದಂತೆ ಸರ್ವ ಪಕ್ಷ ಸಭೆ ಆಯೋಜಿಸಿದ್ದಾರೆ. ಈ ಸಭೆಯಿಂದ ದೂರ ಇರುವುದಾಗಿ ಮಮತಾ  ತಿಳಿಸಿದ್ದಾರೆ.

    ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ ಎಂದು ದೂರಿರುವ ಮಮತಾ ಬ್ಯಾನರ್ಜಿ ಈ ವಿಚಾರದಲ್ಲಿ ಟಿಎಂಸಿ ಏಕಾಂಗಿಯಾಗಿ ಹೋರಾಟ ಮಾಡುತ್ತದೆ ಎಂದಿದ್ದಾರೆ.

    ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ನಮ್ಮ ವಿರೋಧಿಯಾಗಿದೆ. ಹೀಗಾಗಿ ನಾವು ಕಾಂಗ್ರೆಸ್ ಆಯೋಜಿಸಿದ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಬಂಗಾಳದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ತಿಳಿಸಿದ್ದಾರೆ.

    ಸಿಎಎ ಮತ್ತು ಎನ್​​ಆರ್​​ಸಿ ವಿರುದ್ಧ ಮೊದಲು ಆಂದೋಲನ ಆರಂಭಿಸಿದ್ದು ನಾನು. ಆದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸಿಎಎ ಮತ್ತು ಎನ್​​ಆರ್​​ಸಿ ವಿಚಾರದಲ್ಲಿ ಆಂದೋಲನ ಮಾಡದೇ ವಿಧ್ವಂಸಕ ಕೃತ್ಯ ಎಸಗುತ್ತಿದೆ ಎಂದು ಆರೋಪಿಸಿದರು.

    ಬುಧವಾರ ನಡೆದ ಪ್ರಕರಣದ ಬಳಿಕ ಯಾವುದೇ ಕಾರಣಕ್ಕೂ ಈ ಸಭೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಹೇಳಿದರು.

    ನಿನ್ನೆ ನಡೆದ ಭಾರತ್ ಬಂದ್ ವೇಳೆ ಟಿಎಂಸಿ ಮತ್ತು ಎಡ ಪಕ್ಷಗಳ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದರು. ರಾಜಕೀಯದಲ್ಲಿ ನೆಲೆ ಇಲ್ಲದವರು ಮುಷ್ಕರಕ್ಕೆ ಕರೆ ನೀಡುತ್ತಾರೆ ಎಂದು ಹೇಳಿ ಮಮತಾ ಬ್ಯಾನರ್ಜಿ ಎಡಪಕ್ಷ ಮತ್ತು ಕಾಂಗ್ರೆಸ್ಸನ್ನು ಟೀಕಿಸಿದ್ದರು.

  • ಮುಂದಿನ ಟಾರ್ಗೆಟ್ ಕರ್ನಾಟಕ: ಮೋದಿ, ಶಾ ಕರ್ನಾಟಕದ ಬಗ್ಗೆ ಹೇಳಿದ್ದು ಏನು?

    ಮುಂದಿನ ಟಾರ್ಗೆಟ್ ಕರ್ನಾಟಕ: ಮೋದಿ, ಶಾ ಕರ್ನಾಟಕದ ಬಗ್ಗೆ ಹೇಳಿದ್ದು ಏನು?

    ನವದೆಹಲಿ: ನಿನ್ನೆಯ ಹೋಳಿ ಹಬ್ಬಕ್ಕೆ ಹಲವು ಬಣ್ಣಗಳಿತ್ತು. ಇವತ್ತು ಒಂದೇ ಬಣ್ಣ ಅದೇ ಕೇಸರಿ. ಮುಳುಗುವ ಸೂರ್ಯನೂ ಕೇಸರಿಯಾಗಿದ್ದಾನೆ ಎಂದು ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಗೆಲುವನ್ನು ಬಣ್ಣಿಸಿದ್ದಾರೆ.

    ಸಂಜೆ ದೆಹಲಿಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಮಾತನಾಡಿದ ಮೋದಿ, ಈ ವಿಜಯಯಾತ್ರೆಯ ಶಿಲ್ಪಿ ಅಮಿತ್‍ಶಾ ಎಂದು ಬಣ್ಣಿಸಿದರು. ಈ ಮಧ್ಯೆ ಆಜಾನ್ ಕೇಳಿ ಕೆಲ ನಿಮಿಷ ಮಾತು ನಿಲ್ಲಿಸಿದರು. ನಂತರ ಮಾತು ಆರಂಭಿಸಿ, ವಾಸ್ತು ಪ್ರಕಾರ ಈಶಾನ್ಯ ದಿಕ್ಕಿಗೆ ಮಹತ್ವ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಈಶಾನ್ಯ ರಾಜ್ಯಗಳ ಗೆಲುವು ರಾಜ್ಯಗಳು ಪ್ರಮುಖವಾದವು. ಈ ಗೆಲುವು ಹುಮ್ಮಸ್ಸು ತುಂಬಿದೆ. ಹಿಂಸಾಚಾರದಲ್ಲಿ ಮಡಿದ ಕಾರ್ಯಕರ್ತರಿಗೆ ಗೆಲುವನ್ನು ಅರ್ಪಿಸುತ್ತೇನೆ ಎಂದರು.

    ಕರ್ನಾಟಕದಲ್ಲಿ 6 ತಿಂಗಳಲ್ಲಿ 2 ಡಜನ್ ಕಾರ್ಯಕರ್ತರ ಕೊಲೆಯಾಗಿದೆ. ಕೇರಳ, ಪಶ್ಚಿಮ ಬಂಗಾಳದಲ್ಲಿ ನಮ್ಮ ಕಾರ್ಯಕರ್ತರ ಕಗ್ಗೊಲೆ ಆಗುತ್ತಿದೆ. ಆದರೆ ನಮ್ಮ ಕಾರ್ಯಕರ್ತರು ಗೆಲುವನ್ನು ಹರಡುತ್ತಲೇ ಇದ್ದಾರೆ. ಕಾಂಗ್ರೆಸ್‍ಗೆ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಛೇಡಿಸಿದರು.

    ಕರ್ನಾಟಕದಲ್ಲಿಯೂ ಗೆಲುವು ನಮ್ಮದೆ:
    ಈಶಾನ್ಯ ರಾಜ್ಯಗಳಲ್ಲಿ ಸಾಧಿಸಿರುವ ಗೆಲುವಿನ ಸಂತಸದಲ್ಲಿರುವ ಅಮಿತ್ ಶಾ ಕರ್ನಾಟಕ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಉತ್ಸಾಹದಿಂದ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತ್ರಿವಳಿ ರಾಜ್ಯಗಳಲ್ಲಿ ಸಿಕ್ಕ ಭರ್ಜರಿ ಫಲಿತಾಂಶದಿಂದ ಕರ್ನಾಟಕದ ಮೇಲೆ ನಮ್ಮ ವಿಶ್ವಾಸ ಹೆಚ್ಚಾಗಿದೆ. ಇದೇ ಉತ್ಸಾಹದಿಂದ ವಿಜಯ ಪತಾಕೆಯನ್ನ ಹಾರಿಸಲು ಕರ್ನಾಟಕದ ಕಡೆಗೆ ಸಾಗುತ್ತೇವೆ ಎಂದರು.

    ಕರ್ನಾಟಕ ಸೇರಿದಂತೆ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ನಮ್ಮ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲಿದ್ದು, ತ್ರಿಪುರಾದಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೂ ನಮ್ಮ ಇತರ ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲಿದ್ದೇವೆ. 25 ವರ್ಷಗಳ ನಂತರ ಸಿಪಿಎಂ ಕಮ್ಯೂನಿಸ್ಟ್ ಸರ್ಕಾರದ ಆಡಳಿತ ಈಗ ಅಂತ್ಯವಾಗಿದ್ದು, ಮೂರು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ತನ್ನ ಶಕ್ತಿಯನ್ನು ಇಡೀ ದೇಶಕ್ಕೆ ತೋರಿಸುತ್ತಿದೆ ಎಂದರು.

    ತ್ರಿಪುರಾದಲ್ಲಿ ನಡೆದ ರಾಜಕೀಯ ಹಿಂಸಾಚಾರದಲ್ಲಿ ಬಿಜೆಪಿಯ 9 ಕಾರ್ಯಕರ್ತರು ದುರ್ಮರಣ ಹೊಂದಿದ್ದರು. ಇದರ ವಿರುದ್ಧ ಸಿಡಿದ ಅಮಿತ್ ಶಾ, ಎಡಪಕ್ಷಗಳ ಆಳ್ವಿಕೆ ಭಾರತಕ್ಕೆ ಯಾವತ್ತು ಒಳ್ಳೆಯದಾಗಿಲ್ಲ. ಇಂತಹವರು ಯಾರಿಗೂ ಬೇಡ. ಕಾಂಗ್ರೆಸ್ ಪಕ್ಷವು ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಯಾವುದೇ ಸ್ಥಾನಗಳನ್ನ ಗೆದ್ದಿಲ್ಲ ಎಂದು ಹೇಳಿದರು.

    ಬಿಜೆಪಿಯು ಹಣ ಮತ್ತು ಕಾರ್ಯಕರ್ತರ ಶ್ರಮವನ್ನ ದುರುಪಯೋಗ ಪಡಿಸಿಕೊಂಡಿದೆ ಎನ್ನುವ ವಿರೋಧಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾ, ಇಲ್ಲಿಯವರೆಗೂ ಎಡಪಕ್ಷಗಳು ಆಳಿದ ರಾಜ್ಯಗಳು ಯಾವುದೇ ಅಭಿವೃದ್ಧಿಯನ್ನು ಹೊಂದದೆ ಬಡತನದಿಂದ ಬಳಲಿತ್ತು. ಈಗ ಮೋದಿಯವರು ಈ ಕೆಟ್ಟ ರಾಜಕೀಯಕ್ಕೆ ಬ್ರೇಕ್ ಹಾಕಿ ತಮ್ಮ ರಾಜಕೀಯ ಶಕ್ತಿಯನ್ನು ತೋರಿಸಲಿದ್ದಾರೆ. ಮುಂಬರುವ ಕೇರಳ, ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿ ಒಡಿಶಾವನ್ನು ಗೆದ್ದಾಗಲಷ್ಟೇ ನಮ್ಮ ಸುವರ್ಣಯುಗ ಆರಂಭವಾಗಲಿದೆ ಎಂದು ತಿಳಿಸಿದರು.

    ಬಿಜೆಪಿಯ ಮುಂದಿನ ಟಾರ್ಗೆಟ್ ಕರ್ನಾಟಕ!
    * ತ್ರಿಪುರಾ ಗೆಲುವಿನಿಂದ ಬಿಜೆಪಿಗೆ ಮತ್ತಷ್ಟು ಆನೆ ಬಲ
    * ಮೋದಿ ಅಲೆ ಒಪ್ಪಿಕೊಂಡಿದ್ದಾರೆ ಅನ್ನೋ ಆತ್ಮ ಬಲ
    * ಕಾಂಗ್ರೆಸ್ ಮುಕ್ತ ಭಾರತ ಹೋರಾಟಕ್ಕೆ ಮತ್ತಷ್ಟು ಶಕ್ತಿ
    * ತ್ರಿಪುರಾದಲ್ಲಿ ಅನುಸರಿಸಿದ ತಂತ್ರವೇ ಇಲ್ಲೂ ಅನುಕರಣೆ
    * 3 ಫಲಿತಾಂಶ ಮುಂದಿಟ್ಟುಕೊಂಡು ಮತಪ್ರಭುಗಳ ಒಲೈಕೆ
    * ಬಿಜೆಪಿ ತಂತ್ರಗಾರರನ್ನು ಮತ್ತಷ್ಟು ಯಶಸ್ವಿಯಾಗಿ ಬಳಕೆ
    * ರಾಜಕೀಯ ವಿರೋಧಿಗಳನ್ನು ಅಸ್ತ್ರವಾಗಿ ಬಳಕೆ

    ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಫಲಿತಾಂಶದಿಂದ ಆಶ್ಚರ್ಯವೇನಿಲ್ಲ, ಜನರು ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು ಅಂತ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲೂ ಇದೇ ಫಲಿತಾಂಶ ಬರುತ್ತದೆ ಎಂದು ಹೇಳಿದರು.

  • ಕಮ್ಯುನಿಸ್ಟ್ ಕೋಟೆಯಲ್ಲಿ ಅರಳಿತು ಕಮಲ- ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಮೈತ್ರಿ ಕಮಾಲ್ – ಮೇಘಾಲಯದಲ್ಲಿ `ಹಸ್ತ’ವ್ಯಸ್ತ

    ಕಮ್ಯುನಿಸ್ಟ್ ಕೋಟೆಯಲ್ಲಿ ಅರಳಿತು ಕಮಲ- ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಮೈತ್ರಿ ಕಮಾಲ್ – ಮೇಘಾಲಯದಲ್ಲಿ `ಹಸ್ತ’ವ್ಯಸ್ತ

    ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ದಂಡಯಾತ್ರೆ ಹೊರಟಿರೋ ಪ್ರಧಾನಿ ನರೇಂದ್ರ ಮೋದಿ, ಈಗ ಎಡಪಕ್ಷಗಳ ಬೆನ್ನುಮೂಳೆ ಕೂಡ ಮುರಿದಿದ್ದಾರೆ. ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟರ ಪಾರುಪತ್ಯ ಅಂತ್ಯಗೊಂಡಿದ್ದು, ಎಡಪಕ್ಷಗಳ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ.

    65 ವರ್ಷಗಳ ರಾಜಕೀಯ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಸಿಪಿಎಂ ಜೊತೆಗಿನ ನೇರ ಹಣಾಹಣಿಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 50 ಅಭ್ಯರ್ಥಿಗಳ ಪೈಕಿ, 49 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರೂ, ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ದೇಶದ ಅತ್ಯಂತ ಬಡ ಸಿಎಂ ಎಂದೇ ಪ್ರಖ್ಯಾತರಾಗಿರೋ ಮಾಣಿಕ್ ಸರ್ಕಾರ್ ಆಡಳಿತ ವಿರೋಧಿ ಅಸ್ತ್ರವನ್ನು ಬಳಸಿಕೊಂಡು ಮೋದಿ ಗೆದ್ದಿದ್ದಾರೆ. ಹೀಗಾಗಿ, ತ್ರಿಪುರದಲ್ಲಿ ಮಾಣಿಕ್ ಸರ್ಕಾರ್ ಹೋಗಿ ಮೋದಿ ಸರ್ಕಾರ್ ಬಂದಿದೆ.

    ಕೊನೆ ಕ್ಷಣದಲ್ಲಿ ಬಿಜೆಪಿ ತನ್ನ ರಣತಂತ್ರ ಬದಲಿಸಿದರೂ, ತತ್ವ-ಸಿದ್ಧಾಂತ ಹಾಗೂ ಮಡಿವಂತಿಕೆಯಿಂದಾಗಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಸೋತು ಸುಣ್ಣವಾಗಿದ್ದಾರೆ. 60 ಕ್ಷೇತ್ರಗಳ ಪೈಕಿ ಓರ್ವ ಅಭ್ಯರ್ಥಿ ಅಕಾಲಿಕ ನಿಧನವಾಗಿದ್ದ ಕಾರಣ 59 ಕ್ಷೇತ್ರಗಳಿಗೆ ಫೆಬ್ರವರಿ 18ಕ್ಕೆ ಎಲೆಕ್ಷನ್ ನಡೆದಿತ್ತು. ತ್ರಿಪುರ ಬಿಜೆಪಿ ಅಧ್ಯಕ್ಷ ಬಿಪ್ಲಬ್ ದೇಬ್ ಸಿಎಂ ಆಗೋ ಸಾಧ್ಯತೆ ಇದೆ. ಇದನ್ನೂ ಓದಿ: 2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?

    ನಾಗಾಲ್ಯಾಂಡ್ ನಲ್ಲೂ ಕಮಲ
    ನಾಗಾಲ್ಯಾಂಡ್‍ನ 60 ಸ್ಥಾನ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯ ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಪಾರ್ಟಿ(ಎನ್‍ಡಿಪಿಪಿ) 30 ಸ್ಥಾನ ಗಳಿಸಿದೆ. ಎನ್‍ಪಿಎಫ್ (ನಾಗಾಲ್ಯಾಂಡ್ ಪೀಪಲ್ ಫ್ರಂಟ್) 22 ಸ್ಥಾನಗಳನ್ನು ಗಳಿಸಿದ್ದರೆ, ಇತರರಿಗೆ 6 ಸ್ಥಾನಗಳು ಲಭಿಸಿವೆ. 59 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎನ್‍ಡಿಪಿಪಿಯಿಂದ ಮಾಜಿ ಮುಖ್ಯಮಂತ್ರಿ ನೆಪಿಯು ರಿಯೊ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನು, ಬಿಜೆಪಿ ಮೈತ್ರಿ ಕಡಿದು ಕೊಂಡಿದ್ದರೂ ಸರ್ಕಾರದ ಜೊತೆ ಕೈ ಜೋಡಿಸುವುದಾಗಿ ಎನ್‍ಸಿಎಫ್ ಮುಂದಾಗಿದೆ. ನಾಗಾಲ್ಯಾಂಡ್‍ಗೆ ಫೆಬ್ರವರಿ 27ರಂದು ಎಲೆಕ್ಷನ್ ನಡೆದಿತ್ತು.

    ಕಾಂಗ್ರೆಸ್ಸಿಗೆ ಆಘಾತ:
    ಮೇಘಾಲಯದಲ್ಲಿ ಕಾಂಗ್ರೆಸ್‍ಗೆ ಆಘಾತವಾಗಿದೆ. ಆಡಳಿತರೂಢ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ಸರ್ಕಾರ ರಚನೆ ಕಷ್ಟ ಕಷ್ಟ. ಸಿಎಂ ಮುಕುಲ್ ಸಂಗ್ಮಾ ಅವರು ಅಂಪತಿ ಮತ್ತು ಸೊಂಗ್‍ಸಾಕ್ ಎರಡೂ ಕ್ಷೇತ್ರಗಳಲ್ಲಿ ಜಯಿಸಿದ್ದು, ಪತ್ನಿ ಡಿಕ್ಕಂಚಿ ಡಿ ಶಿರಾ ಅವರು ಮಹೇಂದ್ರಗಂಜ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿರೋದೇ ಸಮಾಧಾನ. ಇನ್ನು, ಸರ್ಕಾರ ರಚನೆಗೆ ಎನ್‍ಪಿಪಿ ಹಾಗೂ ಇತರೆ 17 ಕ್ಷೇತ್ರ ಗೆದ್ದಿರುವ ಪಕ್ಷೇತರರಿಗೆ ಬಿಜೆಪಿಯವರು ಬೆಂಬಲ ನೀಡೋದು ಖಚಿತ. ಫೆಬ್ರವರಿ 27ಕ್ಕೆ ಎಲೆಕ್ಷನ್ ನಡೆದಿತ್ತು.

    ಬಿಜೆಪಿ ಆಡಳಿತ ಇರೋ 19 ರಾಜ್ಯಗಳು
    ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‍ಗಡ, ಆಂಧ್ರ ಪ್ರದೇಶ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ.

    ಕಾಂಗ್ರೆಸ್ ಆಡಳಿತ ಇರೋ 4 ರಾಜ್ಯಗಳು:
    ಕರ್ನಾಟಕ, ಪಂಜಾಬ್, ಮಿಝೋರಾಂ, ಪಾಂಡಿಚೆರಿ

    ಇತರೆ ಪಕ್ಷಗಳ ಆಡಳಿತ: ದೆಹಲಿ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು, ಕೇರಳ

  • 2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?

    2013ರಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ತ್ರಿಪುರಾ ಗೆದ್ದಿದ್ದು ಹೇಗೆ?

    ನವದೆಹಲಿ: ಗುಜರಾತ್ ಬಳಿಕ ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ತ್ರಿಪುರ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿ ಸರ್ಕಾರ ರಚನೆಯತ್ತ ದಾಪುಗಾಲು ಹಾಕಲು ಸಿದ್ದವಾಗಿದೆ. ಇದರ ಜೊತೆಗೆ ಮೇಘಾಲಯದಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿ ಯಾಗಿದ್ದು ಕೇಂದ್ರದಲ್ಲಿರುವ ಬಿಜೆಪಿ ತನ್ನ ವಿಜಯದ ಬುಟ್ಟಿಗೆ ಹಾಕಿಕೊಳ್ಳಲು ಪ್ಲಾನ್ ಸಿದ್ಧಪಡಿಸಿ ಈಗಾಗಲೇ ಅಖಾಡಕ್ಕೆ ಇಳಿದಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಸಾರಥ್ಯವಹಿಸಿದ ಮೇಲೆ ಬಿಜೆಪಿ ಇತ್ತಿಚಿನ ಗುಜರಾತ್ ಸೇರಿ ಬರೋಬ್ಬರಿ 19 ರಾಜ್ಯಗಳಲ್ಲಿ ಕಮಲ ಅರಳಿಸಿ ದಾಖಲೆ ಸೃಷ್ಟಿಸಿತ್ತು. ಈ ಹಿಂದೆ ಇಂದಿರಾಗಾಂಧಿ 18 ರಾಜ್ಯಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಸೃಷ್ಟಿಸಿದ್ದ ದಾಖಲೆ ಯನ್ನು ಒಡೆದು ರಾಜಕೀಯ ಇತಿಹಾಸ ಮತ್ತೊಂದು ಮೈಲುಗಲ್ಲುನ್ನು ಈ ಚಾಣಕ್ಯ ಜೋಡಿ ನಿರ್ಮಿಸಿತ್ತು. 19 ರಾಜ್ಯಗಳಲ್ಲಿ ಗೆದ್ದಿದ್ದ ಬಿಜೆಪಿಯ ಈ ಚಾಣಕ್ಯ ಜೋಡಿಗೆ ಇಲ್ಲಿ ನಿಜವಾದ ಅಸಲಿ ಸವಾಲು ಎದುರಾಗಿತ್ತು.

    ಈಶಾನ್ಯ ರಾಜ್ಯಗಳ ಪೈಕಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿಯ ಅಸ್ತಿತ್ವವೇ ಇರಲಿಲ್ಲ. ಕಾರಣ ಕಳೆದ 25 ವರ್ಷಗಳಿಂದ ತ್ರಿಪುರ ದಲ್ಲಿ ಆಡಳಿತ ನಡೆಸುತ್ತಿರುವ ಎಡಪಕ್ಷದ ನೇತಾರ ಮಾಣಿಕ್ ಸರ್ಕಾರ, ನಾಗಲ್ಯಾಂಡ್ ನಾಗಾ ಪಿಪಲ್ಸ್ ಫ್ರಂಟ್ ಹಾಗೂ ಮೇಘಾಲಯ ದಲ್ಲಿ ಕಾಂಗ್ರೆಸ್ ದಶಕಗಳಿಂದ ಆಡಳಿತ ನಡೆಸುತ್ತಿತ್ತು. ಖಾತೆಗೂ ತೆಗೆಯದೆ ಶೂನ್ಯ ಸಂಪಾದನೆ ಜೊತೆಗೆ ಬಿಜೆಪಿ ಠೇವಣಿ ಕಳೆದುಕೊಂಡ ಉದಾಹರಣೆಯೂ ಇಲ್ಲಿ ಸಾಕಷ್ಟಿದೆ.

    ಈ ಮೇಲಿನವು ಬಿಜೆಪಿ ಮುಂದಿದ್ದ ಸವಾಲುಗಳಾದರೆ, ಕಾಂಗ್ರೆಸ್ಸಿಗೆ ಇಲ್ಲಿ ಸ್ಥಾನ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು. `ಕಾಂಗ್ರೆಸ್ ಮುಕ್ತ ಭಾರತ’ ಮಾಡಲು ಹೊರಟಿರುವ ಬಿಜೆಪಿಯ ನಾಯಕರಿಗೆ ಸೂಕ್ತ ಠಕ್ಕರ್ ನೀಡುವ ಜೊತೆಗೆ ಕೈಯಲ್ಲಿರುವ ನಾಲ್ಕು ರಾಜ್ಯಗಳ ಪೈಕಿ ಮೇಘಾಲಯ ಉಳಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ ಕೈ ನಾಯಕರಿಗೆ ಇತ್ತು. ಈ ಮಧ್ಯೆ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಉಪಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ಒಂದಿಷ್ಟು ಉತ್ಸಾಹದಲ್ಲಿ ರಣಕಣ ಪ್ರವೇಶಿಸಿ ಹೋರಾಟ ನಡೆಸಿತ್ತು.

    ಈ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ತ್ರಿಪುರದ ಐಪಿಎಫ್‍ಟಿ, ನಾಗಾಲ್ಯಾಂಡ್ ನ ಎನ್‍ಪಿಎಫ್, ಮೇಘಾಲಯದ ಎನ್‍ಪಿಪಿಯಂತಹ ಬಲಿಷ್ಠ ಪ್ರಾದೇಶಿಕ ಹೋರಾಟಕ್ಕೆ ಇಳಿದಿದ್ದು ಗೆಲುವಿನ ಹಾದಿ ಯಾರಿಗೂ ಸುಗಮವಾಗಿರಲಿಲ್ಲ. ಈ ತೀವ್ರ ಪೈಪೋಟಿಯಲ್ಲಿ ಅಂತಿಮವಾಗಿ ಎರಡು ರಾಜ್ಯಗಳಲ್ಲಿ ಮೋದಿ, ಶಾ ಜೋಡಿ ತಮ್ಮ ದಂಡಯಾತ್ರೆಯ ಮೂಲಕ 19 ರಿಂದ 21ಕ್ಕೆ ತನ್ನ ರಾಜ್ಯವನ್ನು ವಿಸ್ತರಿಸಿಕೊಂಡಿದ್ದಾರೆ.

    ಬಾಕಿ ಉಳಿದಿರುವ ಮೇಘಾಲಯ ದಲ್ಲಿ ಸರ್ಕಾರ ರಚನೆಗೆ ಪ್ಲಾನ್ ರೂಪಿಸುತ್ತಿದ್ದು ಬಹುತೇಕ ಸರ್ಕಾರ ರಚಿಸುವ ಸಾಧ್ಯತೆ ಇದೆ. ಈ ಮೂರು ರಾಜ್ಯಗಳ ಪೈಕಿ ಅತ್ಯಂತ ಕಠಿಣ ಎಂದೇ ಭಾವಿಸಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ತ್ರಿಪುರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿದ್ದು ಹೇಗೆ ಎನ್ನುವುದು ರಾಜಕೀಯ ಆಸಕ್ತಿಗಳು ಕೇಳುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

    1. ಅಭಿವೃದ್ಧಿ ಮಂತ್ರ
    ತನ್ನ ಬುಟ್ಟಿಯಲ್ಲಿರುವ ಕೇಂದ್ರದ ಅಭಿವೃದ್ಧಿ ಮಂತ್ರವನ್ನು ಬಿಜೆಪಿ ಅತ್ಯಂತ ಯಶಸ್ವಿಯಾಗಿ ಇಲ್ಲಿ ಬಳಸಿಕೊಂಡಿದೆ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಘೋಸಿಸಲ್ಪಟ್ಟ ಯೋಜನೆಗಳು ಬಿಜೆಪಿ ಅವಧಿಯಲ್ಲಿ ಪೂರ್ಣಗೊಂಡಿದ್ದು ಅವುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಯಶಸ್ವಿಯಾಗಿ ಮಾಡಿತ್ತು.

    ದಶಕಗಳ ಬೇಡಿಕೆಯಾಗಿದ್ದ ತ್ರಿಪುರಾ ನವದೆಹಲಿ ರೈಲು ಸಂಪರ್ಕ 2016 ಮೇ ನಲ್ಲಿ ಪೂರ್ಣಗೊಂಡಿತ್ತು. ಹೀಗೇ ಕೇಂದ್ರ ಸರ್ಕಾರದ ಸಾಧನಗಳ ಜೊತೆ, ಚಲೋ ಪಾಲ್ಟಾಯ್ ಎಂಬ ಘೋಷಣೆಯೊಂದಿಗೆ ಇಪ್ಪತೈದು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಎಡಪಂಥಿಯ ಸರ್ಕಾರದ ವಿರುದ್ಧ ಚುನಾವಣಾ ಪ್ರಚಾರದ ಉದ್ದಕ್ಕೂ ಆಂದೋಲನ ನಡೆಸಿತು. ತನ್ನ ಪ್ರಣಾಳಿಕೆಯಲ್ಲಿ ಭರಪೂರ ಕೊಡುಗೆಗಳನ್ನು ಬಿಜೆಪಿ ಘೋಷಿಸಿತು. ವಿಶೇಷ ಏನೆಂದರೆ ಕೇಂದ್ರದ 52 ಮಂತ್ರಿಗಳನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿತ್ತು.

    ತ್ರಿಪುರಾದಲ್ಲಿ ಪುಟ್ಟ ರಾಜ್ಯದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮಂದಿಗೆ ನಿರುದ್ಯೋಗ ಸಮಸ್ಯೆಯಿತ್ತು. ಈ ಸಮಸ್ಯೆ ಪರಿಹರಿಸಲು ವಿಷನ್ ಡಾಕ್ಯುಮೆಂಟ್ – 2018 ಹೆಸರಿನಲ್ಲಿ ಯುವಕರಿಗೆ ಪ್ರತಿ ಮನೆಯಲ್ಲೂ ಉದ್ಯೋಗ ಭರವಸೆ ನೀಡಿತ್ತು. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕಲ್ಪಿಸುವ, ಮಹಿಳೆಯರಿಗೆ ಪದವಿ ತನಕ ಉಚಿತ ಶಿಕ್ಷಣ, ಏಳನೇ ವೇತನ ಆಯೋಗ ಜಾರಿಗೋಳಿಸುವುದು, ಪ್ರವಾಸೋದ್ಯಮ ಅಭಿವೃದ್ಧಿ, ಸಾರಿಗೆ ಉತ್ತೇಜನ, ಡಿಜಿಟಲ್ ತ್ರಿಪುರ ಮಾಡುವ ಕನಸನ್ನು ಜನರಲ್ಲಿ ಬಿತ್ತಿತ್ತು.

    2. ಆರ್ ಎಸ್‍ಎಸ್
    ಪ್ರತಿ ಚುನಾವಣೆಯಲ್ಲೂ ಬಿಜೆಪಿ ಬೆನ್ನೆಲುಬಾಗಿ ನಿಲ್ಲುವ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಇಲ್ಲೂ ಮಹತ್ವದ ಪಾತ್ರ ವಹಿಸಿದೆ. ತ್ರಿಪುರಾದಲ್ಲಿ ದನದ ಮಾಂಸ ತಿನ್ನುವವವರ ಸಂಖ್ಯೆ ಹೆಚ್ಚಿದೆ. ಆಹಾರ ಪದ್ದತಿ ವಿಚಾರದಲ್ಲಿ ಬಿಜೆಪಿ ತ್ರಿಪುರ ಜನರಿಗೆ ವಿರೋಧವಾಗಿದ್ದರೂ ಅದನ್ನು ಲೆಕ್ಕಿಸದೇ ಜನ ಬಿಜೆಪಿಗೆ ಮತ ಒತ್ತಲು ಕಾರಣವಾಗಿದ್ದು ತಳಮಟ್ಟದಲ್ಲಿ ಆರ್ ಎಸ್‍ಎಸ್ ಮಾಡಿದ ಸಂಘಟನಾ ಕಾರ್ಯ ಎಂದು ಈಗ ವಿಶ್ಲೇಷಿಸಲಾಗುತ್ತಿದೆ.

    ಆರ್ ಎಸ್‍ಎಸ್ ತ್ರಿಪುರಾದಲ್ಲಿ ಇದ್ದರೂ ಅದರ ಪ್ರಭಾವ ಅಷ್ಟೇನು ಇರಲಿಲ್ಲ. ಆದರೆ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಂಡಿದ್ದ ಸಂಘಪರಿವಾರದ ನಾಯಕರು ಕಳೆದ ಎರಡು ವರ್ಷಗಳಿಂದ ಆರ್ ಎಸ್‍ಎಸ್ ಸಂಘಟನೆಯನ್ನು ಬಲಪಡಿಸುತ್ತಿದ್ದರು. ಈ ಚುನಾವಣೆಯ ಬಳಿಕ ಬೂತ್ ಬೇಸ್, ಕೇಡರ್ ಬೇಸ್ ನಲ್ಲಿ ಸಂಘಟನೆ ರೂಪಿಸಿ ಯುವ ಜನರನ್ನು ಸೆಳೆಯುವಲ್ಲಿ ಆರ್‍ಎಸ್‍ಎಸ್ ಯಶಸ್ವಿಯಾಗಿತ್ತು.

    2014ರ ಲೋಕಸಭೆಯ ಎರಡೂ ಸ್ಥಾನಗಳನ್ನು ಸಿಪಿಎಂ ಗೆದ್ದಿತ್ತು. ಸಿಪಿಎಂ 64.8% ಮತ ಪಡೆದಿದ್ದರೆ, ಕಾಂಗ್ರೆಸ್ 15.4% ಮತಗಳನ್ನು ಪಡೆದಿತ್ತು. ಬಿಜೆಪಿ 5.8% ಮತಗಳನ್ನು ಪಡೆದಿತ್ತು. 2013 ರ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಎಲ್ಲ ಕ್ಷೇತ್ರಗಳಲ್ಲಿ ಸೋತಿದ್ದು ಮಾತ್ರವಲ್ಲದೇ 49ರಲ್ಲಿ ಠೇವಣಿಯನ್ನು ಕಳೆದುಕೊಂಡಿತ್ತು.

    2014 ಲೋಕಸಭೆಯಲ್ಲಿ ಪ್ರಚಾರ ಜನಬ್ದಾರಿ ನಿರ್ವಹಿಸಿದ್ದ ಆರ್  ಎಸ್‍ಎಸ್‍ನ ಬಿಪ್ಲಾಬ್ ಕುಮಾರ್ ದೇಬ್ ಅವರನ್ನ ತ್ರಿಪುರಾ ಉಸ್ತುವಾರಿಗಾಗಿ ಕಳುಹಿಸಲಾಗಿತ್ತು. ದೇಬ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನಿಂದ ಜಿಲ್ಲಾ ಮಟ್ಟದ ವರೆಗೂ ಆರ್‍ಎಸ್‍ಎಸ್ ಸಂಘಟನೆ ಮಾಡಿತ್ತು. ಯುವ ಮೋರ್ಚಾ, ಮಹಿಳಾ ಮೋರ್ಚಾ, ಎಸ್ಸಿ, ಎಸ್ಟಿ, ಓಬಿಸಿ ರೈತ ಮೊರ್ಚಾಗಳನ್ನು ಬಲಪಡಿಸುವ ಮೂಲಕ ಚಿಕ್ಕ ರಾಜ್ಯದಲ್ಲಿ ದೊಡ್ಡಮಟ್ಟದ ಪ್ರಚಾರ ಹಾಗೂ ಸಂಘಟನೆಗೆ ಸದ್ದಿಲ್ಲದೇ ಎರಡು ವರ್ಷ ಕಾರ್ಯ ಮಾಡುತಿತ್ತು. ಇದಿಷ್ಟೇ ಅಲ್ಲದೇ ಪ್ರತಿ 60 ಮತದಾರರಿಗೆ ಒಬ್ಬರಂತೆ ಉಸ್ತುವಾರಿಗಳ ನೇಮಕ ಮಾಡಲಾಗಿತ್ತು. ಪ್ರತಿ ಐದು ಬೂತ್‍ಗಳಿಗೆ ಒಬ್ಬ ವಿಸ್ತಾರಕರನ್ನು ನೇಮಿಸಲಾಗಿತ್ತು. ಪಕ್ಕದ ಅಸ್ಸಾಂ ನಿಂದ 400 ಜನರು ವಿಸ್ತಾರಕನ್ನು ಕರೆತಂದು ಸಾಮಾಜಿಕ ಮಾಧ್ಯಮ ಹಾಗೂ ರೈಲು, ಬಸ್ ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರವಿರುವ ಟೀ ಶರ್ಟ್ ಧರಿಸಿ ಕರ ಪತ್ರ ಹಂಚಿದ್ದರು.

    3. ಐಪಿಎಫ್‍ಟಿ ಯೊಂದಿಗೆ ಮೈತ್ರಿ
    ಇಪ್ಪತೈದು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಮಾಣಿಕ್ ಸರ್ಕಾರ, ಹಾಗೂ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ವಿರುದ್ಧ ಸೆಣಸಲು ಬಿಜೆಪಿ, ಐಪಿಎಫ್‍ಟಿ ಸಹಕಾರ ಪಡೆದುಕೊಂಡಿತ್ತು. ಈ ಮೂಲಕ ಸ್ಥಳೀಯ ಸಮುದಾಯಗಳನ್ನು ತನ್ನೊಳಗೇ ಸೇರಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಇದರ ಜೊತೆ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಕಳೆದ ಬಾರಿ ಹದಿನೆಂಟು ಸ್ಥಾನಗಳನ್ನು ಪಡೆದಿದ್ದ ಸಿಪಿಎಂ ಓಟ್ ಕತ್ತರಿಸುವ ಪ್ಲಾನ್ ಬಿಜೆಪಿದಾಗಿತ್ತು. ಬುಡಕಟ್ಟು ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಟ್ಟು ಇಪ್ಪತ್ತು ಸ್ಥಾನಗಳ ಪೈಕಿ ಕೇವಲ ಹನ್ನೊಂದು ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿ ಬಾಕಿ ಒಂಭತ್ತು ಸ್ಥಾನಗಳನ್ನ ಐಪಿಎಫ್‍ಟಿ ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು, ಬಿಜೆಪಿ ಈ ಪ್ಲಾನ್ ಭರ್ಜರಿಯಾಗೇ ವರ್ಕೌಟ್ ಆಗಿದ್ದು ಇಪ್ಪತ್ತು ಸ್ಥಾನಗಳಲ್ಲಿ ಬಿಜೆಪಿ ಉತ್ತಮ ಫಸಲು ಪಡೆದಿದೆ. ಬುಡಕಟ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠ ವಾಗಿರದೇ ಇದ್ದಿದ್ದು ಬಿಜೆಪಿಗೆ ಮತ್ತೊಂದು ವರದಾನವಾಗಿತ್ತು. ಆಡಳಿತ ವಿರೋಧಿ ಅಲೆಯೂ ಒಂದು ಕಾರಣವಾಗಿದ್ದ ಕಾರಣ ಬಿಜೆಪಿ ಇಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ.

  • ತ್ರಿಪುರಾ ಫಲಿತಾಂಶ: 2013ರಲ್ಲಿ ಶೂನ್ಯ ಸಾಧಿಸಿದ್ದ ಬಿಜೆಪಿಯಿಂದ 2018ರಲ್ಲಿ ಸರ್ಕಾರ ರಚನೆ!

    ತ್ರಿಪುರಾ ಫಲಿತಾಂಶ: 2013ರಲ್ಲಿ ಶೂನ್ಯ ಸಾಧಿಸಿದ್ದ ಬಿಜೆಪಿಯಿಂದ 2018ರಲ್ಲಿ ಸರ್ಕಾರ ರಚನೆ!

    ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಮೈತ್ರಿಕೂಟ ಈಗ ತ್ರಿಪುರಾದಲ್ಲಿ ಎಡಪಕ್ಷವನ್ನು ಸೋಲಿಸಿ ಸರ್ಕಾರದ ರಚಿಸುವ ಸಮೀಪ ಬಂದಿದೆ.

    2013ರ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದ ಬಿಜೆಪಿ 59 ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸಿಪಿಎಂ 20 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ ಯಾವೊಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ

    ವಿಶೇಷ ಏನೆಂದರೆ 2013ರ ಚುನಾವಣೆಯಲ್ಲಿ ಒಟ್ಟು 60 ಸ್ಥಾನಗಳಲ್ಲಿ ಸಿಪಿಎಂ 49, ಕಾಂಗ್ರೆಸ್ 10, ಸಿಪಿಐ 1 ಸ್ಥಾನವನ್ನು ಗೆದ್ದುಕೊಂಡಿತ್ತು.

    1977ರಿಂದ ಆರಂಭಗೊಂಡು 2013ರವರೆಗಿನ ಚುನಾವಣೆಯಲ್ಲಿ ಎಡಪಕ್ಷಗಳೇ ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಅತಿ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.