Tag: Lee Hsien Loong

  • ಕೊರೊನಾ ಆರ್ಭಟಕ್ಕೆ ಸಿಂಗಾಪುರ ತತ್ತರ – 1 ತಿಂಗಳು ಲಾಕ್‍ಡೌನ್ ಘೋಷಣೆ

    ಕೊರೊನಾ ಆರ್ಭಟಕ್ಕೆ ಸಿಂಗಾಪುರ ತತ್ತರ – 1 ತಿಂಗಳು ಲಾಕ್‍ಡೌನ್ ಘೋಷಣೆ

    ಸಿಂಗಾಪುರ: ವಿಶ್ವವ್ಯಾಪಿ ಹರಡುತ್ತಿರುವ ಕೊರನಾ ವೈರಸ್ ಅಟ್ಟಹಾಸಕ್ಕೆ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಸಿಂಗಾಪುರ ಕೂಡ ತುತ್ತಾಗಿದೆ. ಹೀಗಾಗಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರು ಮುಂದಿನ ಮಂಗಳವಾರ ಎಂದರೆ ಏಪ್ರಿಲ್ 7ರಿಂದ ಒಂದು ತಿಂಗಳು ಲಾಕ್‍ಡೌನ್ ಘೋಷಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಂಗಾಪುರದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಏಪ್ರಿಲ್ 7ರಿಂದ ಒಂದು ತಿಂಗಳ ಕಾಲ ಲಾಕ್‍ಡೌನ್ ಘೋಷಿಸಲಾಗಿದೆ. ಒಂದು ತಿಂಗಳು ದೇಶ ಸ್ತಬ್ಧವಾಗಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಅಗತ್ಯ ಸೇವೆಗಳು, ಪ್ರಮುಖ ಆರ್ಥಿಕಾ ವಲಯ, ಸೂಪರ್ ಮಾರ್ಕೆಟ್‍ಗಳು, ಆಸ್ಪತ್ರೆಗಳು, ಸಾರಿಗೆ, ಪ್ರಮುಖ ಬ್ಯಾಂಕಿಗ್ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆ, ವಲಯಗಳು ಸಂಪೂರ್ಣ ಸ್ಥಗಿತಗೊಳ್ಳಲಿದೆ. ಅಲ್ಲದೇ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಿದ್ಧವಿದೆ ಎಂದು ಪ್ರಧಾನಿ ಹೇಳಿದ್ದಾರೆ.

    ಈವರೆಗೆ ಸಿಂಗಾಪುರದಲ್ಲಿ ಒಟ್ಟು 1,049 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 266 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ವಿಶ್ವಾದ್ಯಂತ ರಣಕೇಕೆ ಹಾಕುತ್ತಿರುವ ಸೋಂಕಿಗೆ ಈವರೆಗೆ ಸುಮಾರು 10,16,330 ಮಂದಿ ತುತ್ತಾಗಿದ್ದಾರೆ. ಕೊರೊನಾ ವೈರಸ್‍ನಿಂದ 53,238 ಮಂದಿ ಸಾವನ್ನಪ್ಪಿದ್ದರೆ, 2,13,132 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.